About Us Advertise with us Be a Reporter E-Paper

ಗುರು

ವಜ್ರಯಾನದ ಅಧಿದೇವತೆ ತಾರಾ ಶ್ಯಾಮ ತಾರಾ ಜ್ಞಾನದ ಪರಿಭಾಷಿಣಿ

* ವಿವೇಕಾದಿತ್ಯ ಕಾಸರಗೋಡು

ಶತಮಾನಗಳ ಹಿಂದೆ ಶೈವ ಆಚರಣೆ ಮತ್ತು ಬೋಧಿಸತ್ವ ಪರಂಪರೆಯಲ್ಲಿ ಹುಟ್ಟಿದ ಅಧಿದೇವತೆ ತಾರಾ. ಹಿಂದೂಗಳಲ್ಲಿ ತಾರಾಳು ಪೌರಾಣಿಕ ದೇವತೆಯಾದರೆ, ಬೌದ್ಧರಲ್ಲಿ ಈಕೆಯು ಕರುಣಾಮಯಿ ಗುಣ ಹೊಂದಿರುವ ಧ್ಯಾನ ದೇವಿ. ವಜ್ರಾಸನದಲ್ಲಿ ಕುಳಿತುಕೊಂಡಿರುವ ತಾರಾ ದೇವಿಯು ತನ್ನ ಬಲಗೈಯಲ್ಲಿ ಮುದ್ರೆ ಹಾಗೂ ಎಡಗೈಯಲ್ಲಿ ಉತ್ಪಲ ಎಂಬ ಕಮಲದ ಹೂವನ್ನು ಹಿಡಿದುಕೊಂಡಿದ್ದಾಳೆ. ಮೂರು ಎಲೆಗಳಿರುವ ಕಮಲವು ಬುದ್ಧ ಕಾಶ್ಯಪನನ್ನು, ಎರಡನೇಯದ್ದು ಬುದ್ಧನನ್ನು, ಮೂರನೇಯದು ಭವಿಷ್ಯತ್ತಿನಲ್ಲಿ ಜನಿಸಿ ಬರಲಿರುವ ಬುದ್ಧ ಮೈತ್ರೇಯನನ್ನು ಬಿಂಬಿಸುತ್ತದೆ. ಬೌದ್ಧ ಧರ್ಮದ ಪ್ರಕಾರ ತಾರಾ ಎಲ್ಲ ಬುದ್ಧರ ಮಹಾತಾಯಿ, ಮಾತೃ ಗುಣ ಸಂಭೂತಳಾಗಿರುವ ಈಕೆ ಕರುಣೆ ಮತ್ತು ವಾತ್ಸಲ್ಯವನ್ನು ಪ್ರತಿಬಿಂಬಿಸುತ್ತಾಳೆ. ಬೌದ್ಧರ ತಾರಾ-ದೇವಿಗೆ ಹಲವು ಅವತಾರಗಳಿದ್ದು-ಶ್ಯಾಮತಾರಾ ಪ್ರಮುಖವಾದುದು. ಸಿತಾರಾ, ಭ್ರುಕುತಿ, ಕುರುಕುಲ್ಲಾ, ಕದಿರವನಿ ತಾರಾ, ಚಿಂತಾಮಣಿ ತಾರಾ ಈಕೆಯ ಇತರೆ ಹೆಸರುಗಳಾಗಿವೆ.

ಹಿಂದೂ ಧರ್ಮದಲ್ಲೂ ತಾರಾಳನ್ನು ಸ್ತುತಿಸಲಾಗುತ್ತದೆ. ಶಿವ ಪುರಾಣದ ಪ್ರಕಾರ ತಾರಾ ಈಶ್ವರನ ಅರ್ಧಾಂಗಿಯಾಗಿದ್ದಾಳೆ. ರಾಮಾಯಣ ಬರುವ ಕಪಿಶ್ರೇಷ್ಠರಲ್ಲಿ ಓರ್ವನಾದ ವಾಲಿಯ ಮಡದಿಯ ಹೆಸರು ಕೂಡಾ ತಾರಾ ಎಂಬುದಾಗಿದೆ. ’ಅಹಲ್ಯಾ ದ್ರೌಪದಿ ಸೀತಾ ತಾರಾ ಮಂಡೋದರಿ ತಥಾ, ಪಂಚಗನ್ಯಾ ಸ್ಮರೇನಿತ್ಯಂ ಮಹಾಪಾತಕ ನಾಶನಂ’ ಎಂಬ ಶ್ಲೋಕದಲ್ಲಿ ತಾರಾ ದೇವಿಯ ಹೆಸರು ಉಲ್ಲೇಖಿಸಲ್ಪಟ್ಟಿದ್ದು, ತಾರಾ ಓರ್ವ ಸಾಧಕಿ, ಐವರು ಸಾಧಕಿ ಮಹಿಳೆಯರ ಸಾಲಿನಲ್ಲಿ ತಾರಾಳ ಹೆಸರಿದ್ದು. ಐವರ ಸ್ಮರಣೆಯಿಂದ ಎಲ್ಲ ಪಾಪಗಳು ನಾಶವಾಗುತ್ತವೆ ಎಂಬುದಾಗಿ ಉಲ್ಲೇಖಿಸಲ್ಪಟ್ಟಿದೆ.

ಶತಮಾನಗಳ ಇತಿಹಾಸ
ಬೋಧಿಸತ್ವ ತಾರಾಳ ಆರಾಧನೆ ಸಹಿತ ಸಂಬಂಧಿತ ಧಾರ್ಮಿಕ ಶತಮಾನಗಳ ಇತಿಹಾಸವಿದೆ. ಮಧ್ಯಯುಗದಲ್ಲಿ ತಾರಾಳಿಗೆ ವಿಶೇಷ ಸ್ಥಾನವನ್ನಿತ್ತು, ಪೂಜನೀಯವಾಗಿ ಕಂಡ ಚಿಂತನೆ ಬೌದ್ಧರಿಗೆ ಸಲ್ಲುತ್ತದೆ. 5-6 ನೇ ಶತಮಾನದ ಬೌದ್ಧ ಗ್ರಂಥ ಮಂಜುಶ್ರೀ ಮೂಲಕಲ್ಪದಲ್ಲಿ ದೇವಿ ತಾರಾಳನ್ನು ನಾನಾ ಹೆಸರುಗಳಿಂದ ಕರೆಯಲಾಗಿದೆ. ಭ್ರಕುತಿ, ಮಮಾಕಿ, ಲೋಚನ, ಶ್ವೇತಾ, ಪಂಡರವಾಸಿನಿ, ಸುತಾರಾ ಎಂಬ ಹೆಸರುಗಳು ಪ್ರಮುಖವು. ತಾರಾ ಸಹಸ್ರನಾಮ ಸೇರಿದಂತೆ, ಕಾಶ್ಮೀರಿ ಬೌದ್ಧ ಬಿಕ್ಷು ಸರ್ವಜ್ಞಮಿತ್ರ ವಿರಚಿತ ಶ್ರಗ್ಧರ ಸ್ತ್ರೋತ್ರ ಪ್ರಮುಖ ಕೃತಿ. 7 ನೇ ಶತಮಾನದ ಈ ಕೃತಿಯಲ್ಲಿ ಬಲಹೀನರಿಗೆ ಬಲವನ್ನು, ಮಾನಸಿಕವಾಗಿ ನೊಂದವರಿಗೆ ಧೈರ್ಯವನ್ನು, ಆಶಕ್ತರಿಗೆ ಶಕ್ತಿಯನ್ನೂ ನೀಡಿ ಸಲಹುತ್ತಾಳೆ ಎಂಬ ತಿಳಿವಿದೆ. ವಿದ್ಯಾವರ್ಧಿನಿ ಎಂಬಂತೆ ತಾರಾಳನ್ನು ಸ್ತುತಿಸಲಾಗಿದ್ದು, ನೇಪಾಳ, ಭೂತಾನ, ಉತ್ತರ ಭಾರತ ಸಹಿತ ಟಿಬೆಟ್ಟಿನಲ್ಲಿ ತಂತ್ರಾಧಿದೇವತೆಯಾಗಿಯೂ ಈಕೆ ಪೂಜಿಸಲ್ಪಡುತ್ತಾಳೆ. ತಾರಾ ಷಟ್ಪದಿ, ತಾರಾ ಪಂಚಂಗಂ, ತಾರಾ-ತಂತ್ರಂ, ಕರುಣಾ-ತಾರಾ-ಸಾಧನಂ, ತಾರಾ-ಪೂಜಾ-ರಸಾಯನಂ ಮೊದಲಾದ ಸಂಸ್ಕೃತ ಕೃತಿಗಳು ತಾರಾಳ ಧಾರ್ಮಿಕ ಮಹತ್ವವನ್ನು ಪ್ರಚುರಪಡಿಸುತ್ತವೆ. ಬೋಧೀಸತ್ವ ಅವಲೋಕಿತೇಶ್ವರನ ಕಣ್ಣೀರಧಾರೆಯಲ್ಲಿ ಹುಟ್ಟಿದವಳು ತಾರಾ ಎಂಬ ನಂಬಿಕೆಯು ಇದ್ದು, ಶ್ವೇತಾ ಮತ್ತು ಕದಿರವನಿ ಈಕೆಯ ಸ್ವರೂಪಗಳೆನ್ನಲಾಗುತ್ತದೆ. ಮಹಾಪ್ರತ್ಯಾಂಗಿರ ಧರಣಿ ಗ್ರಂಥವು ಈಕೆಯನ್ನು ಮಹಾದೇವತೆಯೆಂದು ಉಲ್ಲೇಖಿಸಿದೆ. ಶ್ವೇತ ವಸ್ತ್ರಧಾರಿಣಿಯಾಗಿರುವ ಈಕೆ ವಜ್ರವನ್ನು ಹಾರಗಳನ್ನಾಗಿಸಿ, ಒಂದು ಕೈಯಲ್ಲಿ ವಜ್ರಾಯುಧವನ್ನು ಹಿಡಿದಿದ್ದಾಳೆ. ವೈರೋಚನನನ್ನು ತನ್ನ ಕಿರೀಟದಲ್ಲಿ ಧರಿಸಿದ್ದಾಳೆ. ಮೈತ್ರಿ ಮತ್ತು ಕರುಣೆಯ ಸಾಗರವಾಗಿರುವ ತಾರಾಳು ತಾಂತ್ರಿಕ ಬೌದ್ಧ ಧರ್ಮದಲ್ಲಿ ಬುದ್ಧನ ಶಕ್ತಿಯಾಗಿದ್ದಾಳೆ. ಉತ್ತರ ಮತ್ತು ಪೂರ್ವ ಭಾರತದಲ್ಲಿ ಈಕೆಯ ಶ್ಯಾಮತಾರಾ ಮತ್ತು ಕದಿರವನಿ ತಾರಾ ಅವತಾರಗಳನ್ನು ಪೂಜನೀಯವಾಗಿ ಕಾಣಲಾಗುತ್ತದೆ. ಧ್ಯಾನಿಬುದ್ಧ ಅಮೋಘಸಿದ್ಧನ ಅವತಾರವೇ ಶ್ಯಾಮತಾರಾ ಎಂದೂ ನಂಬಲಾಗುತ್ತದೆ.

ಆಗ್ನೇಯ ರಾಷ್ಟ್ರಗಳು ಸೇರಿದಂತೆ ಚೀನಾ, ಮಂಗೋಲಿಯಾಗಳಲ್ಲಿ ತಾರಾಳನ್ನು ಆರಾಧಿಸಲಾಗುತ್ತದೆ. ಮಹಾರಾಷ್ಟ್ರದ ಎಲ್ಲೋರಾ ಗುಹಾಲಯದಲ್ಲಿ 7 ನೇ ಶತಮಾನದಲ್ಲಿ ರಚಿಸಲಾದ ತಾರಾಳ ಚಿತ್ರಣವಿದೆ. 8 ನೇ ಶತಮಾದ ಕಾಲಘಟ್ಟದಲ್ಲಿ ಬಂಗಾಳದ ಪಾಲಾ ರಾಜವಂಶಜರು ಈಕೆಯನ್ನು ಆರಾಧಿಸುತ್ತಿದ್ದರು ಎಂದು ಇತಿಹಾಸ ತಿಳಿಸುತ್ತದೆ. ವಜ್ರಯಾನದ ಮೂಲಕ ಈಕೆಯ ಆರಾಧನಾ ಕ್ರಮಗಳಿಗೆ ಪುಷ್ಠಿ ಸಿಗುತ್ತದೆ. ಬೌದ್ಧ ಗುರು ಪದ್ಮಸಂಭವ ಈಕೆಯ ಆರಾಧನೆಗಳನ್ನು ಟಿಬೆಟ್ಟಿನಲ್ಲಿ ಪ್ರಚುರಪಡಿಸಿದ ಎನ್ನಲಾಗುತ್ತದೆ. ಜಮ್ಮು ಕಾಶ್ಮೀರದ ಲೇಹ್ ಪ್ರದೇಶದ ಬೌದ್ಧ ಸ್ಥೂಪ ಆಲ್ಚಿ ಎಂಬ ವಿಹಾರದಲ್ಲಿ 12ನೇ ಶತಮಾನದಷ್ಟು ಹಳೆಯ ಕಾಶ್ಮೀರಿ ಶೈಲಿಯ ತಾರಾದೇವಿಯ ರೇಖಾಚಿತ್ರವಿದೆ.

ತಾರಾ ಭಗವತಿ ಸ್ತುತಿ
ಶ್ರಗ್ಧರ ಸ್ತ್ರೋತ್ರದಲ್ಲಿ ತಾರಾ ಭಗವತಿಯನ್ನು ಸ್ತುತಿಸಲಾಗಿದ್ದು, ಕಾಶ್ಮೀರಿ ಬೌದ್ಧ ಪಂಡಿತ ಸರ್ವಜ್ಞ ಮಿತ್ರನಿಂದ ರಚಿತವಾಗಿದೆ. ಸರ್ವಜ್ಞ ಮಿತ್ರ ಬೌದ್ಧ ಬಿಕ್ಷುವಾಗಿದ್ದ ಮಾತ್ರವಲ್ಲದೆ ತನ್ನಲ್ಲಿದ್ದ ಎಲ್ಲ ಆಸ್ತಿ ಅಂತಸ್ತುಗಳನ್ನು ದಾನ ನೀಡಿ ಸನ್ಯಾಸಿಯಾಗಿದ್ದ. ಒಂದು ದಿನ ಲೋಕ ಪಯಣದಲ್ಲಿ ವಜ್ರಮುಕುಟ ಎಂಬ ರಾಜ್ಯಕ್ಕೆ ಆತ ಆಗಮಿಸುತ್ತಾನೆ. ಆ ಸಂದರ್ಭ ಮಿತ್ರನಿಗೆ ಓರ್ವ ಮುದಿ ಬ್ರಾಹ್ಮಣ ದಾರಿ ಮಧ್ಯೆ ಸಿಗುತ್ತಾನೆ. ಸರ್ವಜ್ಞಮಿತ್ರನನ್ನು ಕಂಡ ಬ್ರಾಹ್ಮಣ ‘ತನಗೆ ಓರ್ವ ಮಗಳಿದ್ದು ಮದುವೆ ಮಾಡಿಸಬೇಕಿದೆ, ತನಗೆ ಹಣದ ಸಹಾಯ ನೀಡಬೇಕು’ ಎಂದು ಸರ್ವಜ್ಞ ಮಿತ್ರನಲ್ಲಿ ಅಂಗಾಲಾಚುತ್ತಾನೆ. ಆದರೆ ಸರ್ವಜ್ಞ ಮಿತ್ರನೂ ಎಲ್ಲವನ್ನು ತ್ಯಾಗ ಮಾಡಿದ್ದು ಕೇವಲ ಬಿಕ್ಷಾಪತ್ರೆ ಮತ್ತು ತಾನು ಧರಿಸಿದ ವಸ್ತ್ರವನ್ನು ಮಾತ್ರ ಹೊಂದಿರುತ್ತಾನೆ. ಬಡ ಬ್ರಾಹ್ಮಣನ ಕಷ್ಟ ಕಂಡ ಸರ್ವಜ್ಞಮಿತ್ರ ಮರುಗುತ್ತಾನೆ. ಇದೇ ಸಂದರ್ಭ ವಜ್ರಮುಕುಟ ಸಂಸ್ಥಾನದ ರಾಜನಿಗೆ ಓರ್ವ ತಾಂತ್ರಿಕ ಭೈರವ ರಾಜನಲ್ಲಿ ತಾವು ಒಟ್ಟು ನೂರು ಮಂದಿಯ ತಲೆ ಕಡಿದು ದೇವರಿಗೆ ಅರ್ಪಿಸಿದರೆ ನಿಮ್ಮ ಎಲ್ಲ ಬಯಕೆಗಳು ಪರಿಪೂರ್ಣವಾಗುತ್ತವೆ ಎಂದು ನುಡಿದಿರುತ್ತಾನೆ. ರಾಜಭಟರು ಒಟ್ಟು ತೊಂಬತ್ತೊಂಬತ್ತು ಮಂದಿಯನ್ನು ಹುಡುಕಿ ತರುತ್ತಾರೆ. ಆದರೆ ನೂರನೇ ವ್ಯಕ್ತಿಯ ಹುಡುಕಾಟದ ಮಧ್ಯೆ ಸರ್ವಜ್ಞ ಮಿತ್ರ ಕಾಣ ಸಿಗುತ್ತಾನೆ. ಸರ್ವಜ್ಞ ಮಿತ್ರನ ತೂಕದಷ್ಟೇ ಚಿನ್ನವನ್ನು ಬಡ ಬ್ರಾಹ್ಮಣನಿಗೆ ಹಸ್ತಾಂತರಿಸುವ ಯೋಜನೆ ರೂಪಿಸಲಾಗುತ್ತದೆ. ಅದರಂತೆ ಸರ್ವಜ್ಞ ಮಿತ್ರ ಸಹಿತ ಉಳಿದ ತೊಂಬತ್ತೊಂಬತ್ತು ಮಂದಿಯನ್ನು ರಾಜ ಸೈನಿಕರು ಬಲಿ ಬಲಿಕಲ್ಲಿನ ಬಳಿ ಎಳೆದು ತರುತ್ತಾರೆ. ಬಿಡುಗಡೆಯ ದಾರಿ ಕಾಣದ ಸರ್ವಜ್ಞ ಮಿತ್ರ ಆರ್ಯ, ತಾರಾಳ ಸ್ತುತಿಯನ್ನು ಸಂಸ್ಕೃತ ಶ್ರಗ್ಧರ ಛಂಧಸ್ಸಿನ ಮೂಲಕ ರಚಿಸಿ ಸ್ತುತಿಸುತ್ತಾನೆ. ಈ ಸಂದರ್ಭ ಎಲ್ಲರೂ ತಮಗರಿವಿಲ್ಲದೆ ರೀತಿಯಲ್ಲಿ ಪ್ರಾಣ ಬಲಿಯಿಂದ ತಪ್ಪಿಸಿಕೊಂಡು ಮನೆ ಸೇರುತ್ತಾರೆ. ಹೀಗೆ ಪವಾಡ ಸದೃಶರಾಗಿ ಮನೆ ಸೇರಿದ ಎಲ್ಲರನ್ನು ಕಂಡು ಗ್ರಾಮಸ್ಥರು ಸಹಿತ ರಾಜನಿಗೆ ಆಶ್ಚರ್ಯವಾಗುತ್ತದೆ. ಇಂದಿಗೂ ಶ್ರಗ್ಧರ ಸ್ತ್ರೋತ್ರವನ್ನು ಬೌದ್ಧರು ಸಹಿತ ತಾರಾ ಆರಾಧಕರು ಭಜಿಸುತ್ತಾರೆ. ಸಂಸ್ಕೃತ ಐತಿಹಾಸಿಕ ರಾಜತರಂಗಿಣಿಯ ಆಧಾರದಲ್ಲಿ ಸರ್ವಜ್ಞಮಿತ್ರನು 8 ನೇ ಶತಮಾನದವನೆಂದು ಅಂದಾಜಿಸಲಾಗುತ್ತದೆ.

ಹೀಗೆ ತಾರಾ ದೇವಿಯ ಸ್ತುತಿ ಮಾತ್ರದಿಂದ ಹಲವು ಪವಾಡಗಳು ನಡೆದ ಬಗ್ಗೆ ಉಲ್ಲೇಖಿಸಲ್ಪಡುತ್ತದೆ. ಬೆಂಗಾಲ್ ಏಷ್ಯಾಟಿಕ್ ಸೊಸೈಟಿ ಮೂಲಕ ತಾರಾ ಆರಾಧನೆ ಸಹಿತ ತಾರಾ ಭಗವತಿಯ ಪ್ರಾಚೀನ ಸಾಹಿತ್ಯಿಕ ಗ್ರಂಥ ಕೃತಿಗಳನ್ನು ಸಂರಕ್ಷಿಸಲಾಗಿದ್ದು ಪ್ರಕಟಿಸಲಾಗಿದೆ.

Tags

Related Articles

Leave a Reply

Your email address will not be published. Required fields are marked *

Language
Close