About Us Advertise with us Be a Reporter E-Paper

Breaking Newsಪ್ರಚಲಿತವಿದೇಶ
Trending

ಮನುಕುಲದ ಅಸ್ತಿತ್ವದ ಪ್ರಶ್ನೆ ಎದ್ದು ಇಂದಿಗೆ 73 ವರ್ಷ

ಪ್ರಿಯಾಂಕ ಗೌಡ

ಘಟನೆಯ ಕ್ರೂರತೆಯ ಪರಿಚಯ ಮಾಡಿಕೊಡುವ ಈ ದಿನವನ್ನು ಪ್ರತಿವರ್ಷ ಜಪಾನ್ ಶಾಂತಿ ದಿನವಾಗಿ ಆಚರಿಸುತ್ತದೆ. ಇದರೊಂದಿಗೆ ಮನುಕುಲ ಅಸ್ತಿತ್ವಕ್ಕೆ ಮಾರಕವಾಗಿರುವ ಅಣ್ವಸ್ತ್ರಗಳನ್ನು ತ್ಯಜಿಸಲು ಉತ್ತರ ಕೊರಿಯಾಗೆ ಜಪಾನ್ ಮನವಿ ಮಾಡಿಕೊಂಡಿದೆ.

 

ಅದು ಎರಡನೇ ವಿಶ್ವ ಮಹಾಯುದ್ಧದ ಸಂದರ್ಭ….

ಅಣ್ವಸ್ತ್ರಗಳ ಮಾರಕ ಶಕ್ತಿಯನ್ನು ಮನುಕುಲಕ್ಕೆ ಪರಿಚಯಿಸಿದ 20ನೇ ಶತಮಾನದ ಘನಘೋರ ದುರಂತಗಳಲ್ಲಿ ಒಂದಾದ ಹಿರೋಶಿಮಾ ಬಾಂಬಿಂಗ್ ಘಟನೆ ನಡೆದು ಇಂದಿಗೆ 73 ವರ್ಷ ಕಳೆದಿವೆ.

ಬೆಳ್ಳಂಬೆಳಗ್ಗೆ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ನಿರತರಾಗಿದ್ದ ಹಿರೋಶಿಮಾ ಜನತೆಯ ಮೇಲೆ ಆಕಾಶವೇ ಕಳಚಿ ಬಿದ್ದಂತೆ ಎರಗಿದ ಅಮೆರಿಕ ಲಿಟ್ಟಲ್ ಬಾಯ್ ಅಣುಬಾಂಬ್, ಇಡೀ ನಗರದ ಅಸ್ತಿತ್ವವನ್ನೇ ಅಕ್ಷರಶಃ ಅಳಿಸಿ ಹಾಕಿತ್ತು. ನೋಡ ನೋಡುತ್ತಿದ್ದಂತೆ ಒಂದು ಲಕ್ಷದ ನಲವತ್ತು ಸಾವಿರ ಮಂದಿ ಕರ್ಪೂರದಂತೆ ಅಕ್ಷರಶಃ ಉರಿದು ಆವಿಯಾಗಿದ್ದರು..!

ಈ ಕ್ರೂರತೆ ಸಾಲದೆಂಬಂತೆ, ಮೂರು ದಿನಗಳ ಬಳಿಕ, ಆಗಸ್ಟ್ 9 ರಂದು ಜಪಾನ್ ನ ಮತ್ತೊಂದು ಪ್ರಮುಖ ನಗರ ನಾಗಸಾಕಿ ಮೇಲೂ ಅಮೆರಿಕ ಅಣುಬಾಂಬ್ ಹಾಕಿತ್ತು. ಈ ಬಾರಿ 70 ಸಾವಿರಕ್ಕೂ ಅಧಿಕ ಮಂದಿ ಬರ್ಬರವಾಗಿ ಮೃತಪಟ್ಟಿದ್ದರು. ಇಡೀ ಮನುಕುಲವೇ ಬೆಚ್ಚಿಬಿದ್ದಿದ್ದ ಈ ಪೈಶಾಚಿಕ ಕೃತ್ಯದ ಹಿನ್ನೆಲೆಯಲ್ಲಿ ಯಾವುದೇ ಶರತ್ತಿಲ್ಲದೆ ಶರಣಾದ ಜಪಾನ್ ಎರಡನೇ ಜಾಗತಿಕ ಮಹಾಯುದ್ಧದಿಂದ ಹಿಂದೆ ಸರಿದಿತ್ತು.

ಅಣ್ವಸ್ತ್ರಗಳು ಸೃಷ್ಟಿಸುವ ಪ್ರಳಯವನ್ನು ಕಂಡು ನಡುಗಿದ್ದ ಜಾಗತಿಕ ಸಮುದಾಯ ನಂತರದ ದಿನಗಳಲ್ಲಿ ಯುದ್ಧಗಳಿಗೆ ಕಡಿವಾಣ ಹಾಕಲು, ಮನುಕುಲದ ಸಾಮಾಜಿಕ ಸಮಸ್ಯೆಗಳಾದ ಬಡತನ, ನಿರುದ್ಯೋಗ, ಅನಕ್ಷರತೆಯಂತಹ ಪಿಡುಗುಗಳನ್ನು ಹೋಗಲಾಡಿಸಲು ದೇಶ-ದೇಶಗಳ ನಡುವೆ ವೈಷಮ್ಯದ ಕಹಿಯನ್ನು ಅಳಿಸಿ ಸ್ನೇಹ ಸಂಬಂಧವನ್ನು ವೃದ್ಧಿಸಲು ವಿಶ್ವ,ಸಂಸ್ಥೆಯಂತಹ ಜಾಗತಿಕ ವೇದಿಕೆಗಳು ಹುಟ್ಟಿಕೊಂಡವು.

ಇದರ ಬೆನ್ನಲ್ಲೆ 50ರ ದಶಕದಿಂದ ಆಚೆಗೆ ಅಣ್ವಸ್ತ್ರ ಪ್ರಸರಣಕ್ಕೆ ಕಡಿವಾಣ ಹಾಕಿ ಈ ಮಾರಕ ಅಸ್ತ್ರಗಳು ಘಾತುಕ ಶಕ್ತಿಗಳಿಗೆ ಸಿಗುವ ಘನಘೋರ ಅಪಾಯದ ಮುನ್ಸೂಚನೆ ಇದ್ದ ಕಾರಣ ಅಣ್ವಸ್ತ್ರ ಪ್ರಸರಣ ತಡೆ ಕಾರ್ಯಕ್ರಮಗಳಿಗೆ ಮುನ್ನುಡಿ ಬರೆಯಲು ಜಾಗತಿಕ ಸಮುದಾಯ ಮುಂದಾಯಿತು.

ಇಷ್ಟೆಲ್ಲಾ ಪ್ರಯತ್ನಗಳ ನಡುವೆಯೂ ಅಣ್ವಸ್ತ್ರಗಳ ಸಂಗ್ರಹ ಇಟ್ಟುಕೊಳ್ಳುವ ಶೀತಲ ಸಮರವು ಎಗ್ಗಿಲ್ಲದೆ ನಡೆಯುತ್ತಿದೆ. ಕಳೆದ ಆರು ದಶಕಗಳಿಂದ ಈಚೆಗೆ ರಷ್ಯಾ, ಚೀನಾ, ಭಾರತ, ಬ್ರಿಟನ್, ಫ್ರಾನ್ಸ್, ಪಾಕಿಸ್ತಾನ, ಇರಾನ್, ಇಸ್ರೇಲ್, ಉ.ಕೊರಿಯಾಗಳು ಅಧಿಕೃತವಾಗಿ ಅಣ್ವಸ್ತ್ರ ಸಜ್ಜಿತ ರಾಷ್ಟ್ರಗಳ ಗುಂಪಿಗೆ ಸೇರಿಕೊಂಡಿವೆ.

ಘಟನೆಯ ಕ್ರೂರತೆಯ ಪರಿಚಯ ಮಾಡಿಕೊಡುವ ಈ ದಿನವನ್ನು ಪ್ರತಿವರ್ಷ ಜಪಾನ್ ಶಾಂತಿ ದಿನವಾಗಿ ಆಚರಿಸುತ್ತದೆ. ಇದರೊಂದಿಗೆ ಮನುಕುಲ ಅಸ್ತಿತ್ವಕ್ಕೆ ಮಾರಕವಾಗಿರುವ ಅಣ್ವಸ್ತ್ರಗಳನ್ನು ತ್ಯಜಿಸಲು ಉತ್ತರ ಕೊರಿಯಾಗೆ ಜಪಾನ್ ಮನವಿ ಮಾಡಿಕೊಂಡಿದೆ. ಇದೇ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗು ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಅನ್ ಮಾತುಕತೆ ಮಹತ್ವದ ಪಡೆದುಕೊಂಡಿದೆ.

 

Tags

Related Articles

Leave a Reply

Your email address will not be published. Required fields are marked *

Language
Close