About Us Advertise with us Be a Reporter E-Paper

ವಿ +

ಇವರ ವಯಸ್ಸು ಬರೀ ಸಂಖ್ಯೆಗಷ್ಟೇ ಸೀಮಿತ..!

• ಭವದಿ

ವಯಸ್ಸು ಐವತ್ತು ದಾಟುತ್ತಿದ್ದಂತೆ, ಹೆಣ್ಣುಮಕ್ಕಳ ಮನಸ್ಸು ಹಾಗೂ ದೇಹವನ್ನು ಆವರಿಸಿಕೊಳ್ಳುವ ಮೆನೋಪಾಸ್, ಹಿಂಡಿ  ಮಾಡುವ ಸೊಂಟ ನೋವು, ಮಂಡಿನೋವಿನಂತಹ ಸಮಸ್ಯೆಗಳು. ಯೌವನದಲ್ಲಿ ಎಷ್ಟೇ ಚಟುವಟಿಕೆಯುಳ್ಳವರೂ ತಟ್ಟಂತ ಕುಸಿದುಬಿಡುತ್ತಾರೆ. ಸಮಸ್ಯೆಗೆ ಸರಿಯಾದ ಪರಿಹಾರ ದೊರಕದೆ  ಜೀವನವೇ ಸಾಕಪ್ಪ ಅಂತನ್ನಿಸಿಬಿಡುತ್ತದೆ. ತನಗೆ ವಯಸ್ಸಾಯಿತು ನನ್ನಿಂದ ಇನ್ನೇನು ಸಾಧ್ಯ ಅನ್ನುವ ಮನೋಭಾವ ಕೂಡ ಇರುವ ಅಲ್ಪಸ್ವಲ್ಪ ಆತ್ಮಸ್ಥೈರ್ಯವನ್ನೂ ಸಹ ಕುಗ್ಗಿಸಿಬಿಡುತ್ತದೆ. ಆದರೆ ವಯಸ್ಸು  ಮನಸ್ಸಿಗಲ್ಲ, ದೇಹಕ್ಕೆ. ಇದು ಸಂಖ್ಯೆಗಷ್ಟೇ ಸೀಮಿತ ಅನ್ನುವ  ಗಟ್ಟಿ ಮನಸ್ಸಿನ ದಿಟ್ಟೆಯರು ತಮ್ಮ ನಿವೃತ್ತಿಯ ನಂತರವೇ ಬದುಕಿನ ಎರಡನೇ ಇನ್ನಿಂಗ್‌ಸ್ನ್ನು ಆರಂಭಿಸುವ ಮೂಲಕ  ಸಾಹಸಕ್ಕೆ ಕೈ ಹಾಕಿದ್ದಾರೆ. 60-70ರ ಇಳಿವಯಸ್ಸಿನ ಅಂತಹ ಮಹಿಳೆಯರ ಪುಟ್ಟ ಪರಿಚಯ ಇಲ್ಲಿದೆ.

ಚಿತ್ರಲೇಖಾ ದಾಸ್-ಸುಜಾತ್ರ

ಈಕೆಗೆ 60ರ ಹರೆಯ. ಇಬ್ಬರು ಮೊಮ್ಮಕ್ಕಳ ಪ್ರೀತಿಯ ಅಜ್ಜಿ. ತನ್ನ 55ನೇಯ ವಯಸ್ಸಿನಲ್ಲಿ ಚಿತ್ರಲೇಖಾ ದಾಸ್, ಸುಜಾತ್ರ ಸಂಸ್ಥೆಯನ್ನು ಆರಂಭಿಸಿದರು. ಸೀರೆಗಳಿಗೆ ಡಿಸೈನ್ ಮಾಡುವ ತನ್ನ ಹವ್ಯಾಸವನ್ನೇ ಉದ್ಯಮವನ್ನಾಗಿ ಪರಿವರ್ತಿಸಿಕೊಂಡ ಈಕೆ, ಸುಜಾತ್ರ ಅನ್ನುವ ಬ್ರಾಂಡ್ ಮೂಲಕ ಮಾರಾಟವನ್ನೂ ಮಾಡುತ್ತಾರೆ. ಚಂದೇರಿ, ಸಿಲ್‌ಕ್, ಕಾಟನ್, ಶಿಫಾನ್, ಜಾರ್ಜೆಟ್ ಸೀರೆಗಳಿಗೆ ಹೊಸ ಸ್ಫರ್ಶದ  ಆಧುನಿಕ ಲುಕ್‌ನ್ನು ನೀಡುತ್ತಾರೆ. ಸಿಲ್‌ಕ್, ಖಾದಿಗಳ ಮೇಲೆಯೂ ತಮ್ಮ ಕೈ ಚಳಕ ತೋರಿಸುತ್ತಾರೆ. ಇದೀಗ ಸುಜಾತ್ರ ಸಂಸ್ಥೆ  ನಗರಪ್ರದೇಶವಷ್ಟೇ ಅಲ್ಲದೆ ಗ್ರಾಮೀಣ ಮಹಿಳೆಯರು ಸೇರಿದಂತೆ, 25ರಿಂದ 65 ವರ್ಷದವರೆಗಿನ ಗ್ರಾಹಕರನ್ನು ಹೊಂದಿದೆ.

ಆರತಿ ಪೋದ್ಧಾರ್-ಮಲ್ಬೆರ್ರಿ ಲೈಫ್‌ಸ್ಟೈಲ್

ಆರತಿ ಪೋದ್ಧಾರ್‌ರವರ ಸಾಧನೆಗೆ, 72ರ ಹರೆಯದಲ್ಲಿ ಉದ್ಯಮ ಆರಂಭಿಸಿದ ಇವರ ತಂದೆಯೇ ಸ್ಫೂರ್ತಿ. ತನ್ನ 60 ನೇ ವಯಸ್ಸಿನಲ್ಲಿ ಆರತಿಯವರು ರಾಂಚಿ ಮೂಲದ ಮಲ್ಬೆರ್ರಿ ಲೈಫ್‌ಸ್ಟೈಲ್ ಸಂಸ್ಥೆಯನ್ನು ಸ್ಥಾಪಿಸಿದರು. ಇದು ನೆಹ್ರೂ  ತಯಾರಿಸಿ ಮಾರಾಟ ಮಾಡುತ್ತದೆ. ಡೆಲ್ಲಿಯಿಂದ ಲೆನಿನ್ ಮತ್ತು ಹತ್ತಿಯನ್ನು, ಬಗ್ಲಾಪುರದಿಂದ ಹತ್ತಿಯನ್ನು ಆಮದು ಮಾಡಿಕೊಂಡು ಬಟ್ಟೆ ತಯಾರಿಸುತ್ತಾರೆ. ಮಲ್ಬೆರ್ರಿ ಲೈಫ್‌ಸ್ಟೈಲ್ ಬಹಳಷ್ಟು ಕುಶಲಕರ್ಮಿಗಳನ್ನು ಹೊಂದಿದ್ದು, ತಯಾರಾದ ಉತ್ಪನ್ನವನ್ನು ಆನ್‌ಲೈನ್‌ನಲ್ಲೂ ಮಾರಾಟ ಮಾಡುತ್ತದೆ. ಬಿಹಾರದ ಮುಖ್ಯಮಂತ್ರಿಗೆ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ನೆಹ್ರೂ ಜಾಕೆಟ್ ತಯಾರಿಸಿಕೊಟ್ಟಿದ್ದು ಈಕೆಯ ಬಹುದೊಡ್ಡ ಸಾಧನೆ. ವರ್ಷದ ಅತ್ಯುತ್ತಮ ಮಹಿಳಾ ಉದ್ಯಮಿ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ. ಇನ್ನಷ್ಟು ವ್ಯಾಪಾರ ಮಳಿಗೆಯನ್ನು ತೆರೆಯಬೇಕೆಂಬ ಕನಸು ಆರತಿಯವರದ್ದು.

ಚಟ್ಟೀ ಜಾನಕಿ-  ಕಿ ಅಲ್ಮಾರಿ

ಅದ್ಭುತ ಜೀವನೋತ್ಸಾಹವುಳ್ಳ 73 ವರ್ಷ ವಯಸ್ಸಿನ ವೃದ್ಧೆ ಚಟ್ಟೀ ಜಾನಕಿಯವರು. ಈ ಇಳಿವಯಸ್ಸಿನಲ್ಲಿ ಇವರು ತನ್ನದೇ ಆದ ಇ-ಕಾಮರ್ಸ್ ವೆಬ್‌ಸೈಟ್‌ನ್ನು ಹೊಂದಿದ್ದಾರೆ. ತಮ್ಮ ‘ಅಮ್ಮಾ ಕಿ ಅಲ್ಮಾರಿ’ ಸಂಸ್ಥೆಯ ಮೂಲಕ ಇತರ ಅಮ್ಮಂದಿರ ಬಾಳಿಗೊಂದು ದಾರಿಯನ್ನು ಕಲ್ಪಿಸುತ್ತಿದ್ದಾರೆ. ಜಾನಕಿಯವರು ಕೈಕುಶಲ ವಸ್ತುಗಳ ಮೂಲಕ ಅಮ್ಮಾ ಕಿ ಅಲ್ಮಾರಿಯನ್ನು ಜನರಿಗೆ ಪರಿಚಯಿಸಿದರು. ಇದೀಗ ಈ ಸಂಸ್ಥೆ ಚಟ್ಟಿ ಜಾನಕಿಯವರಂತಹ 50 ಮಹಿಳೆಯರಿಗೆ ಕೆಲಸ ನೀಡಿದೆ. ಮನೆಬಳಕೆಯ ವಸ್ತುಗಳು,  ಕಲ್ಲುಗಳು, ಬಟ್ಟೆ ಬರೆ, ಕುಷನ್ ಕವರ್, ಹಬ್ಬಕ್ಕೆ ನೀಡುವ ಉಡುಗೊರೆ, ಟೇಬಲ್ ಬಟ್ಟೆ, ಮರದ ಮೇಲಿನ ಕಲಾಕೃತಿ, ಕರಕುಶಲ ಒಡವೆ, ಆಫೀಸಿಗೆ ಬೇಕಾದ ವಸ್ತುಗಳು ಹಾಗೂ ಇನ್ನಿತರ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಲಾಗುತ್ತದೆ.  ಪ್ರತಿಭೆ ಯನ್ನು ಬದುಕಿನ ಉಸಿರಾಗಿಸಿದವರಿಗೆ ವೇದಿಕೆಯನ್ನು ಕಲ್ಪಿಸುತ್ತಿರುವ, ಅಮ್ಮಾ ಕಿ ಅಲ್ಮಾರಿಗೆ ಇನ್ನೂ ಬಹಳಷ್ಟು ಮಹಿಳೆಯರನ್ನು ತನ್ನ ಬಳಗಕ್ಕೆ ಸೇರಿಸಿಕೊಳ್ಳುವ ಯೋಜನೆ ಇದೆ.

ಲಕ್ಷ್ಮಿ ಪೂಜಾರ್ತಿ-ಬಾವಿ ತೋಡಿದ ದಿಟ್ಟೆ

ಕುಂದಾಪುರ ತಾಲ್ಲೂಕಿನ ಉಡುಪಿಯ ಲಕ್ಷ್ಮೀ  ತನ್ನ ಸಾಧನೆಯನ್ನು ಇಡೀ ಜಗತ್ತಿಗೆ ಪರಿಚಯಿಸಿದ್ದು 60ನೇ ವಯಸ್ಸಿನಲ್ಲಿ. ತನ್ನೆಲ್ಲಾ ಜೀವಿತಾವಧಿಯ ಉಳಿತಾಯವನ್ನು ಬಾವಿ ತೋಡಲು ಬಳಸಿ, ಹತ್ತಕ್ಕೂ ಹೆಚ್ಚು ಕುಟುಂಬದ ದಾಹವನ್ನು ನೀಗಿಸಿದ್ದರು. ಬರಡು ಭೂಮಿಯಾಗಿದ್ದ ಆ ಊರಿನಲ್ಲಿ ನೀರಿಗಾಗಿ ಜನ ಪರದಾಡುತ್ತಿದ್ದರು. ಒಂದು ಬಿಂದಿಗೆ ನೀರಿಗಾಗಿ 2-3 ಕಿ.ಮೀ ದೂರಕ್ಕೆ ಸಾಗುತ್ತಿದ್ದದ್ದೂ ಉಂಟು.

ಬೇಸಿಗೆಯಲ್ಲಿ ಟ್ಯಾಂಕರ್ ನೀರೇ ಗತಿಯಾಗಿತ್ತು. ಈ ಸಂಕಷ್ಟವನ್ನು ನೀಗಿಸಲು ಮುಂದಾದ ಲಕ್ಷ್ಮೀ ಪೂಜಾರ್ತಿ ನಾಲ್ಕು ಜನ ಮಹಿಳೆಯರೊಡಗೂಡಿ, 52 ಅಡಿಯ ಬಾವಿಯನ್ನು  ಈ ಮೂಲಕ ಬತ್ತದ ಜೀವನೋತ್ಸಾಹಕ್ಕೆ ಮಾದರಿಯಾದರು.

ದೇವಕಿ ನಿಲಂಗೊಡೆ-ಲೇಖಕಿ

ಕೇರಳದ ದೇವಕಿ ನಿಲಂಗೊಡೆ ಬರೆಯಲು ಆರಂಭಿಸಿದ್ದು ತನ್ನ 75ರ ವಯಸ್ಸಿನಲ್ಲಿ. ಇದೀಗ 91ರ ವಯಸ್ಸಿನಲ್ಲಿ ನಾಲ್ಕು ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದಾರೆ. ಯಾವುದೇ ಶಿಕ್ಷಣವಿಲ್ಲದ ದೇವಕಿಯವರು ತಮ್ಮ ಜೀವನಾನುಭವವನ್ನೇ ಲೇಖನದ ವಸ್ತುವಾಗಿಸಿಕೊಂಡೇ ಬರೆದಿದ್ದಾದೆ. ಇನ್ನೂ ಬರೆಯುತ್ತಿದ್ದಾರೆ. ವಿಶೇಷವೆಂದರೆ ತಮ್ಮ ಮನೆಯಿಂದ ಇವರು ಯಾವತ್ತೂ ಹೊರಗೆ ಕಾಲಿಟ್ಟವರಲ್ಲ. ಈಕೆಯ ಮೊದಲ ಪುಸ್ತಕ-‘ನಾಶ್ತಬೋಧಂಗಲಿಲ್ಲಥೆ’ 2003ಲ್ಲಿ ಪ್ರಕಟಗೊಂಡಿತ್ತು. ಈ ಪುಸ್ತಕದಲ್ಲಿ ಬದುಕಿನ ಜಂಜಾಟದಲ್ಲಿ ತಾನು  ನೋವು, ಸಂಕಟ, ತಲ್ಲಣಗಳನ್ನು ಹಂಚಿಕೊಂಡಿದ್ದಾರೆ.

ಮಕ್ಕಳು, ಸೊಸೆಯಂದಿರಿಗೆ ಎಲ್ಲಾ ಜವಬ್ಧಾರಿಯನ್ನು ವಹಿಸಿಕೊಟ್ಟು, ಹಾಯಾಗಿ ಟಿವಿ ನೋಡುತ್ತಾ, ದೇವರ ನಾಮ ಭಜನೆಯೆಂದು ಕಾಲ ಕಳೆಯುವ ವಯಸ್ಸಿನಲ್ಲಿ ಹೊಸ ಸಾಹಸಕ್ಕೆ ಕೈ ಹಾಕಿದ ಈ ಮಹಿಳೆಯವರು ಇಂದಿನ ಯುವಜನತೆಗೂ ಸ್ಫೂರ್ತಿಯಾಗುವುದರಲ್ಲಿ ಎರಡು ಮಾತಿಲ್ಲ.

Tags

Related Articles

Leave a Reply

Your email address will not be published. Required fields are marked *

Language
Close