About Us Advertise with us Be a Reporter E-Paper

ಗುರು

ಅರೆಕಿಲ್ಲೆ ದೇಗುಲದ ಐತಿಹಾಸಿಕ ಕುರುಹುಗಳು

* ಶ್ರೀರಂಗ ಪುರಾಣಿಕ, ವಿಜಯಪುರ

ವಿಜಯಪುರ ಎಂದರೆ ಸೂಫಿಗಳ ನಾಡು ಈಗ ಕರೆಯಲಾಗುತ್ತೆ. ಆದರೆ ಪೂರ್ವದಲ್ಲಿ ವಿಜಯಪುರ ನಗರ ಹಿಂದು ಮತ್ತು ಜೈನರ ಧಾರ್ಮಿಕ ಕೇಂದ್ರವಾಗಿತ್ತು ಎನ್ನುವುದಕ್ಕೆ ಅನೇಕ ಪುರಾವೆಗಳು ಸಿಗುತ್ತವೆ. ಹಿರಿಯ ಸಂಶೋಧಕರಾದ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ ಅವರು ಈ ಕುರಿತು ತಮ್ಮ ಪುಸ್ತಕಗಳಲ್ಲಿ ದಾಖಲಿಸಿದ್ದಾರೆ.

ಹನ್ನೆರಡು, ಹದಿಮೂರನೇ ಶತಮಾನದ ನಂತರ ದೆಹಲಿ ಸುಲ್ತಾನರು ದಕ್ಷಿಣದ ಮೇಲೆ ದಾಳಿಮಾಡುತ್ತಾರೆ. ಅಲ್ಲಾವುದ್ದೀನ್ ಖಿಲ್ಜಿಯ ದಂಡನಾಯಕ ಮಲ್ಲಿಕ್ ಕಾಫೂರ್ ದಕ್ಷಿಣ ಮೇಲೆ ದಂಡಯಾತ್ರೆ ದಂಡಯಾತ್ರೆ ಸಮಯದಲ್ಲಿ ಯುದ್ಧವನ್ನಷ್ಟೇ ಮಾಡುವುದಿಲ್ಲ, ರಾಜರ ಸಂಪತ್ತು , ದೇವಾಲಯಗಳ ಸಂಪತ್ತು ಲೂಟಿಮಾಡುತ್ತಾರೆ. ದೇವಾಲಯಗಳ ಮೂರ್ತಿಗಳನ್ನು ಭಗ್ನಗೊಳಿಸುವದನ್ನು ಮಾಡುತ್ತಾರೆ. ಅದೇ ಸಮಯದಲ್ಲಿ ವಿಜಯಪುರ ನಗರದ ಮೇಲೂ ದಾಳಿಯಾಗುತ್ತದೆ. ಕೆಲವು ದೇವಾಲಯಗಳು ಅವರ ಕಣ್ಣು ತಪ್ಪಿಸಿ ಉಳಿದುಕೊಂಡರೆ , ಇನ್ನು ಕೆಲವು ದೇವಾಲಯಗಳ ವಿಗ್ರಹಗಳನ್ನು ದಾಳಿಯ ಮೊದಲೆ ಸ್ಥಳಾಂತರ ಮಾಡಲಾಗಿರುತ್ತದೆ. ಇಂತಹ ದಾಳಿಯಲ್ಲಿ ಕಣ್ಮರೆಯಾದ ದೇವಾಲಯವೇ ವಿಜಯಪುರಿನ ಅರಕಿಲ್ಲೆಯ ಭವ್ಯವಾದ ನರಸಿಂಹ ದೇವಾಲಯ.

ನಗರದ ಮಧ್ಯಭಾಗದಲ್ಲಿ ಈಗಿನ ಜಿಲ್ಲಾಧಿಕಾರಿ ಕಚೇರಿ, ಪಂಚಾಯಿತಿ, ಡಿಡಿಪಿಐ ಕಚೇರಿ ಮುಂತಾದ ಸರ್ಕಾರಿ ಕಚೇರಿಗಳನ್ನು ಸುತ್ತುವರೆದ ಕೋಟೆಯ ಪ್ರದೇಶ ಅರಕಿಲ್ಲಾ ಎಂದೇ ಕರೆಯಲ್ಪಡುತ್ತದೆ. ಈ ಅರಕಿಲ್ಲೆಯ ವ್ಯಾಪ್ತಿಯಲ್ಲಿ ಆದಿಲ್ ಶಾಹಿ ಸುಲ್ತಾನರ ಮಹಲ್‌ಗಳು, ದರ್ಬಾರ್ ಹಾಲ್‌ಗಳು ಕಟ್ಟಡಗಳು ಇವೆ. ಬ್ರಿಟಿಷರ ಆಡಳಿತ ಕಾಲದಲ್ಲಿ ಅವೆಲ್ಲವೂ ಸರ್ಕಾರಿ ಕಚೇರಿಗಳಾಗಿ ಪರಿವರ್ತನೆಗೊಂಡಿವೆ. ಈ ಅರಕಿಲ್ಲಾ ಕೋಟೆಗೆ ದಕ್ಷಿಣ ದಿಕ್ಕಿನಲ್ಲಿ ಬೃಹತ್ತಾದ ಹೆಬ್ಬಾಗಿಲಿದ್ದು (ಅಗಸಿ), ಈ ದ್ವಾರವನ್ನು ದಾಟಿ ಒಳಬಂದರೆ ಎಡಭಾಗದಲ್ಲಿ ದೇವಾಲಯದ ಮಂಟಪದ ಸಾಲೊಂದು ಕಾಣಿಸುತ್ತದೆ.

ಕುತೂಹಲ ಮೂಡಿಸುವ ಮಂಟಪದಲ್ಲಿ ಆಕರ್ಷಕ ಕೆತ್ತನೆಗಳಿಂದ ಕೂಡಿದ ಕಂಬಗಳಿದ್ದು, ಕೆಲವು ಕಂಬಗಳಲ್ಲಿ ಶಾಸನಗಳಿವೆ. ಈ ಅರಕಿಲ್ಲಾ ವ್ಯಾಪ್ತಿಯಲ್ಲಿರುವ ವಿವಿಧ ಮಸೀದಿ ಹಾಗೂ ಕೋಟೆಯ ಗೋಡೆಗಳಲ್ಲಿನ ಪ್ರಾಚೀನ ದೇವಾಲಯಗಳ ಕಂಬಗಳ ಮೇಲಿರುವ ಎಲ್ಲಾ ಶಾಸನಗಳು South Indian Inscriptions Volume XVIIIರಲ್ಲಿ ಪ್ರಕಟವಾಗಿವೆ. ಬಹುತೇಕ ಶಾಸನಗಳು ಜಲಮಂಟಪ ನರಸಿಂಹ , ಶ್ರೀನರಸಿಂಹದೇವರ್ಗೇ ಎಂದೇ ಉಲ್ಲೇಖಿಸಿದ್ದು, ಆದಿಲ್ ಶಾಹಿಗಳ ಆಳ್ವಿಕೆಯ ಪೂರ್ವದಲ್ಲಿ ಈ ಸ್ಥಳದಲ್ಲೊಂದು ಭವ್ಯವಾದ ಶ್ರೀ ನರಸಿಂಹನ ದೇವಾಲಯ ಇದ್ದಿರುವ ಬಗ್ಗೆ ಶಾಸನಗಳು ಒದಗಿಸುತ್ತವೆ. ಸಾ.ಶ. 1033ರ ಕಲ್ಯಾಣ ಚಾಲುಕ್ಯ ಚಕ್ರವರ್ತಿ ಇಮ್ಮಡಿ ಜಗದೇಕಮಲ್ಲನ ಕಾಲಾವಧಿಯ ಶಾಸನದಲ್ಲಿ, ‘ಶ್ರೀ ಮನ್ ಮಹಾಪ್ರಧಾನಂ ಸೇನಾಧಿಪತಿ ಶ್ರೀ ಆನಂದ ಪಾಲ ದಣ್ಣಾಯಕರು ಶ್ರೀಮನ್ ಜಗದೇಕಮಲ್ಲರ ನಿರುಪದಿಂ ತರ್ದವಾಡಿಯ ದುಷ್ಟ ನಿಗ್ರಹ ಶಿಷ್ಟ ಪ್ರತಿಪಾಲನದಿಂದಾಳುತ್ತಮಿರೆ ರಾಯ ರಾಜಧಾನಿ ವಿಜಯಪುರದ ಜಲಮಂಟಪದ ನರಸಿಂಹದೇವರ್ಗ್ಗೆ ನಂದಪಾಲ ದಣ್ಣಾಯಕರು ಜಿರ್ಣೋದ್ಧಾರ ಮಾಡಿಸಿದ ರಂಗಮಂಟಪ’ ಎಂಬ ಸಾಲುಗಳಲ್ಲಿ, ವಿಜಯಪುರವನ್ನೂ ಒಳಗೊಂಡಿದ್ದ ತರ್ದವಾಡಿ ವಿಭಾಗವನ್ನು (ಇಂಡಿ ತಾಲ್ಲೂಕಿನ ತದ್ದೆವಾಡಿ) ಆಳುತ್ತಿದ್ದ ಆನಂದ ಪಾಲನು ವಿಜಯಪುರದ ನರಸಿಂಹ ದೇವಾಲಯದ ರಂಗಮಂಟಪ ಜೀರ್ಣೋದ್ಧಾರ ಮಾಡಿದ ಬಗ್ಗೆ ಹಾಗೂ ದಂತಿಹಳ್ಳಿಯ ಮಹಾಪ್ರಭು ಕೇಶಿರಾಜಯ್ಯನಿಂದ ಭೂಮಿಯನ್ನು ಕೊಂಡು ಈ ದೇವಾಲಯಕ್ಕೆ ದಾನ ನೀಡಿದನ್ನು ಅರ್ಥೈಸುತ್ತದೆ.

ಇನ್ನೊಂದು ಸಾ.ಶ.1084ರ ಶಾಸನವು ತ್ರಿಭುವನಮಲ್ಲನ ಕಾಲಾವಧಿಯಲ್ಲಿ ಈ ನರಸಿಂಹ ದೇವಾಲಯಕ್ಕೆ ಬಿಟ್ಟ ಭೂದಾನದ ಬಗ್ಗೆ ಉಲ್ಲೇಖಿಸುತ್ತವೆ. ಹೀಗಾಗಿ ಕಲ್ಯಾಣ ಚಾಲುಕ್ಯರು, ಕಲಚೂರಿಗಳು, ಸೇವುಣರ ಕಾಲದಲ್ಲಿ ಪ್ರಾಚೀನ ವಿಜಯಪುರ ನಗರವು ಈಗೀನ ಅರಕಿಲ್ಲಾ ವ್ಯಾಪ್ತಿಯಲ್ಲೇ ಇದ್ದು, ವೈಷ್ಣವರಿಗೆ ಶ್ರೀ ನರಸಿಂಹ ದೇವಾಲಯ ಇರುವಂತೆ, ಶೈವರಿಗೆ ಶಿವಾಲಯ ಜೈನರಿಗೆ ಮಲ್ಲಿನಾಥ ಬಸದಿ ಸಹ ಇತ್ತೆಂದು ಬಹುತೇಕ ಇತಿಹಾಸ ತಜ್ಞರು ಸಂಶೋಧನೆ ಮೂಲಕ ತಿಳಿಸಿಕೊಟ್ಟಿದ್ದಾರೆ.

ಶಾಸನಗಳ ಉಲ್ಲೇಖದಿಂದ ಅರೆಕಿಲ್ಲೆಯಲ್ಲಿ ನರಸಿಂಹ ದೇವಾಲಯವಿತ್ತು ಎನ್ನುವದು ಸ್ಪಷ್ಟವಾಗುತ್ತದೆ. ಆದರೆ, ನರಸಿಂಹ ಮೂರ್ತಿ ಏನಾಯ್ತು ಎನ್ನುವುದು ಯಕ್ಷಪ್ರಶ್ನೆ. ದಾಳಿಕೋರರು ಮೂರ್ತಿಯನ್ನು ಭಗ್ನಮಾಡಿದರೋ ಅಥವಾ ಮೂರ್ತಿಯನ್ನು ಸ್ಥಳಾಂತರ ಮಾಡಲಾಗಿದೆಯೋ ಎಂಬ ವಿವರಗಳನ್ನು ಇತಿಹಾಸವೂ ನಿಗೂಢವಾಗಿ ತನ್ನಲ್ಲೆ ಉಳಿಸಿಕೊಂಡಿದೆ. ಹಂಪಿಯ ವಿಜಯ ವಿಠ್ಠಲ ಮಂದಿರದ ಮೂರ್ತಿಯೇ ಪಂಢರಪುರದ ವಿಠ್ಠಲ ಎಂದು ಹೇಳುತ್ತಾರೆ.

ವಿಜಯಪುರದಿಂದ ಆರು ಕಿ.ಮೀ ನರಸಿಂಹ ದೇವಾಲಯವಿದ್ದು ಈಗ ಪೂಜೆಗೆ ಒಳಪಡುತ್ತಿರುವ ಮೂರ್ತಿಯೂ ಹದಿನಾರು ಹದಿನೇಳನೆ ಶತಮಾನದ ಆಸುಪಾಸಿನಲ್ಲಿ ಚಿಮ್ಮಲಗಿಯಲ್ಲಿ ಸಿಕ್ಕಿರುವಂತಹದ್ದು. ಇದೇ ಅರೆಕಿಲ್ಲಯ ನರಸಿಂಹ ದೇವರ ಮೂರ್ತಿ ಇರಬಹುದು. ಆದರೆ ದೇವಾಲಯದ ಅರ್ಚಕರ ಮಾಹಿತಿಯ ಪ್ರಕಾರ ಇದಕ್ಕು ಮೊದಲು ವಿಜಯಪುರಿನಲ್ಲಿ ಆದಿಲ್ ಶಾಹಿ ಸುಲ್ತಾನರ ಆಡಳಿತದ ಪೂರ್ವದಲ್ಲಿ ತೋರವಿಯಲ್ಲಿ ಪೂಜಿಸುತ್ತಿದ್ದು ಒಕ್ಕಳಮಟ್ಟಿ ನರಸಿಂಹ ದೇವರವನ್ನ. ಕಾಲಾನಂತರದಲ್ಲಿ ದೇವಾಲಯ ಸಮೀಪ ವಿರುವ ಗುಪ್ತಗಂಗಾ ಬಾವಿಯಲ್ಲಿ ಆ ಮೂರ್ತಿಯನ್ನು ವಿಸರ್ಜನೆ ಮಾಡತಾಯಿತು. ತದನಂತರ ಸ್ವಪ್ನಾದೇಶದಂತೆ ಚಿಮ್ಮಲಗಿಯಲ್ಲಿ ಪೂಜಿಸುವ ನರಸಿಂಹ ದೇವರ ಮೂರ್ತಿ ಸಿಕ್ಕದೆ ಎಂದು ಹೇಳುತ್ತಾರೆ. ಒಕ್ಕಳಮಟ್ಟಿ ನರಸಿಂಹ ಸ್ವಾಮಿಯೇ, ಜಲ ಮಂಟಪ ನರಸಿಂಹ ಸ್ವಾಮಿ ಆಗಿರಬಹುದು ಎಂಬ ಅನುಮಾನಗಳು ಮೂಡುವುದು ಸಹಜ.ಅದು ಇತಿಹಾಸ ವಿಷಯವಾದರೂ ಸತ್ಯವನ್ನು ತಿಳಿದುಕೊಳ್ಳಬೇಕು.

ವಿಜಯಪುರ ನಗರದ ಅರೆಕಿಲ್ಲೆ ಪ್ರದೇಶದಲ್ಲಿ ಜಲಮಂಟಪ ನರಸಿಂಹ ದೇವಾಲಯ ಇತ್ತು ಎಂಬುದು ಹೆಚ್ಚಿನ ಯಾರಿಗೂ ಗೊತ್ತಿಲ್ಲ. ಅಲ್ಲಿ ದೊರೆತ ಶಾಸನಗಳು , ದೇವಾಲಯದ ಒಂದೆರಡು ಕಂಬಗಳನ್ನು ವಿಜಯಪುರದ ಮ್ಯೂಜಿಯಂನಲ್ಲಿ ಇಡಲಾಗಿದೆ. ವಿಜಯಪುರದ ಸಹಸ್ರಫಣಿ ಜೈನ ಮಂದಿರದ ಕೂಡ ಆರನೇ ಶತಮಾನಕ್ಕೆ ಸೇರಿದ್ದು.

Tags

Related Articles

Leave a Reply

Your email address will not be published. Required fields are marked *

Language
Close