About Us Advertise with us Be a Reporter E-Paper

ಸಿನಿಮಾಸ್

ಹಿಸ್ಟರಿ ರಿಪೀಟ್ಸ್…. ಧೂಳೆಬ್ಬಿಸಿದ ಕೆಜಿಎಫ್

- ಸಚಿನ್ ಕೃಷ್ಣ

‘ಮನೆ ಕಟ್ಟೋದಕ್ಕೆ ಕೆಲ ತಿಂಗಳು ಬೇಕಾದ್ರೆ ಅರಮನೆ ಕಟ್ಟೋದಕ್ಕೆ ವರ್ಷಗಳಾಗಲ್ವ ಎಂದು ತಮ್ಮ ಕೆಜಿಎಫ್ ಚಿತ್ರ ತಡವಾಗಲು ಲಾಜಿಕ್ ಆಗಿ ಕೆಜಿಎಫ್ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ರಾಕಿಂಗ್ ಸ್ಟಾರ್ ಯಶ್ ಆಡಿದ ಮಾತುಗಳಿವು. ನವೆಂಬರ್ 9 ಕನ್ನಡಿಗರ ಪಾಲಿಗೆ ಸುದಿನ. ಒಂದು ಕಡೆ ಕನ್ನಡ ಚಿತ್ರರಂಗದ ಮಹಾನ್ ತಾರೆ ಕರಾಟೆ ಕಿಂಗ್ ಶಂಕರ್ ನಾಗ್ ಅವರ ಹುಟ್ಟುಹಬ್ಬವಾದರೆ, ಮತ್ತೊಂದು ಕನ್ನಡ ಸೇರಿ, ತಮಿಳು, ತೆಲುಗು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಏಕಕಾರಕ್ಕೆ ರಾಕಿಂಗ್ ಸ್ಟಾರ್ ಯಶ್ ಅವರ ಬಹುನಿರೀಕ್ಷಿತ ಕೆಜಿಎಫ್ ಟ್ರೇಲರ್ ಬಿಡುಗಡೆಯಾದದ್ದು.

ರೆಬಲ್ ಸ್ಟಾರ್ ಅಂಬರೀಶ್ ಕೆಜಿಎಫ್ ಕನ್ನಡ ಸರಣಿಯನ್ನು ಬಿಡುಗಡೆ ಮಾಡಿದರೆ, ವಿಶಾಲ್ ಫಿಲ್‌ಮ್ ಫ್ಯಾಕ್ಟರಿಯ ವಿತಕರು ಹಾಗೂ ನಟರಾದ ವಿಶಾಲ್ ತಮಿಳ್ ಸರಣಿಯ ಟ್ರೇಲರನ್ನು ಬಿಡುಗಡೆ ಮಾಡಿದರು. ಇನ್ನು ಹಿಂದಿ, ತೆಲುಗು ಮಲಯಾಳಂ ಸರಣಿಗಳನ್ನು ಕ್ರಮವಾಗಿ ಬಾಲಿವುಡ್ ನಿರ್ಮಾಪಕ ಅನಿಲ್ ತದಾನಿ, ‘ಈಗ’ ಖ್ಯಾತಿಯ ನಿರ್ಮಾಪಕ ಕೊರ್ರಾಪಟಿ, ಹಿರಿಯ ಪತ್ರಕರ್ತ ಬ್ರೈಸ್‌ಟ್ ರಾಬಿನ್‌ಸ್ ಬಿಡುಗಡೆ ಮಾಡಿದರು. ಚಿತ್ರದ ನಾಯಕಿ ಶ್ರೀನಿಧಿ ಶೆಟ್ಟಿ , ನಟಿ ರಾಧಿಕ ಪಂಡಿತ್, ವಸಿಷ್ಠ ಸಿಂಹ, ಸಂಗೀತ ನಿರ್ದೇಶಕ ರವಿ ಬಸ್ಸೂರು ಸೇರಿದಂತೆ ಹಲವು ಕಲಾವಿದರು ಕಾರ್ಯಕ್ರಮದಲ್ಲಿದ್ದರು.

ರೆಬಲ್ ಸ್ಟಾರ್ ರೆಬಲ್ ಮಾತು
ಕನ್ನಡ ಸರಣಿಯ ಟ್ರೇಲರನ್ನು ಬಿಡುಗಡೆ ಮಾಡಿ ಮಾತನಾಡಿದ ಅಂಬರೀಶ್ ಕೆಜಿಎಫ್ ಟೀಂಗೆ ಅಭಿನಂದಿಸಿದರು. ಕನ್ನಡ ಚಿತ್ರದ ಯಾವುದೇ ಟ್ರೇಲರ್ ಬಿಡುಗಡೆಯಾದ್ರೆ ಕೆಲವೇ ಮಂದಿ ಬರೋದು, ಆದರೆ ಕೆಜಿಎಫ್ ಕರ್ನಾಟಕದ ಹೊರತಾಗಿ ಭಾರತದಾದ್ಯಂತ ಕ್ರೇಜ್ ಕ್ರಿಯೇಟ್ ಮಾಡಿದೆ ಅನ್ನೋದು ನಮ್ಮ ಹೆಮ್ಮೆ. ಇದು ಪ್ರಪಂಚದಾದ್ಯಂತ ಹುಟ್ಟಲಿ ಅನ್ನೋದು ನನ್ನ ಆಸೆ. ಈ ತಂಡದ ಶ್ರಮವೇನು ಅನ್ನೋದು ಟ್ರೇಲರ್‌ನಲ್ಲೇ ಕಾಣ್ತಾ ಇದೆ.

ಹಿಂದೆ ಕನ್ನಡ ಚಿತ್ರಕ್ಕೆ ಒಂದು ಬೌಂಡರಿ ಇತ್ತು. ಕನ್ನಡ ಸಿನಿಮಾಗಳು ಸೀಮಿತ ಪ್ರದೇಶಗಳಲ್ಲೆ ತೆರೆಗೆ ಬರ್ತಾ ಇದ್ವು. ಕನ್ನಡ ಚಿತ್ರವನ್ನ ಆಳಿದ ಡಾ. ರಾಜ್ ಕುಮಾರ್ ಸಿನಿಮಾದ ಪೋಸ್ಟರ್‌ಗಳು ಎಂ.ಜಿ. ರೋಡ್‌ನಲ್ಲಿ ಕಾಣಿಸ್ತಾ ಇರಲಿಲ್ಲ. ಹತ್ತು ಹದಿನೈದು ದಾಟಿದ್ರೆ ತೆಲುಗು, ತಮಿಳು, ಇತರೆ ಭಾಷೆಗಳು ಕನ್ನಡವನ್ನ ಹಿಂದಿಕ್ಕಿದ್ದವು. ಕೆಜಿಎಫ್ ಆ ಎಲ್ಲ ಬೌಂಡರಿಗಳನ್ನು ಬ್ರೇಕ್ ಮಾಡಿರೋದು ದೊಡ್ಡ ವಿಚಾರ.

ವಿಡಿಯೋ ಲೈವ್‌ಗೆ ಬಂದ ಶಿವಣ್ಣ
ಕನ್ನಡ ರಾಜ್ಯೋತ್ಸವದ ಆಚರಣೆಗಾಗಿ ಆಸ್ಟ್ರೇಲಿಯಾಗೆ ತೆರಳಿರುವ ಶಿವರಾಜ್ ಕುಮಾರ್, ಆಸ್ಟ್ರೇಲಿಯಾದಿಂದ ಲೈವ್‌ಗೆ ಬಂದು ಮಾತನಾಡಿದರು. ಕೆಜಿಎಫ್ ಚಿತ್ರವು ಭಾರತದಲ್ಲಿ ಉತ್ತಮ ಮಾರುಕಟ್ಟೆಯನ್ನು ಪಡೆಯಲಿದೆ ಎನ್ನುತ್ತಲೇ ಮಾತು ಆರಂಭಿಸಿದ ಶಿವಣ್ಣ ಯಶ್ ರವರಿಗೆ ಶುಭಹಾರೈಸಿದರು. ಅಲ್ಲದೇ ರಾಜಮೌಳಿ, ಶಂಕರ್, ಮುರುಗದಾಸ್ ಅವರ ಸಾಲಿಗೆ ನೀಲ್ ಕೂಡ ಸೇರಲಿ ಎಂದರು.

ಯಶ್ ನನ್ನ ತಮ್ಮನಂತೆ
ಕಾಲಿವುಡ್‌ನ ಖ್ಯಾತ ನಟ ವಿಶಾಲ್ ಚಿತ್ರದ ತಮಿಳು ವರ್ಷನ್ ವಿತರಣೆ ಮಾಡುತ್ತಿದ್ದಾರೆ. ಹಾಗಾಗಿ ಟ್ರೇಲರ್‌ನ ಬಿಡುಗಡೆಗೆ ಆಗಮಿಸಿದ್ದ ವಿಶಾಲ್, ಎಲ್ಲರಿಗೂ ನಮಸ್ಕಾರ ಎಂದು ಕನ್ನಡದಲ್ಲಿಯೇ ಮಾತು ಶುರುವಿಟ್ಟರು. ಚಿತ್ರ ಮೂಡಿ ಬಂದ ಬಗೆಯನ್ನು ಹಾಗೂ ನಿರ್ದೇಶಕರ ಕೆಲಸದ ವೈಖರಿಯನ್ನು ಹೊಗಳಿದರು. ಯಶ್ ನನ್ನ ಸಹೋದರನಿದ್ದಂತೆ. ಆತನ ಕೆಜಿಎಫ್ ಸಿನಿಮಾಕ್ಕೆ ದೊಡ್ಡ ಮಟ್ಟದ ಯಶಸ್ಸು ಸಿಗಲಿ. ಈ ಚಿತ್ರಕ್ಕಾಗಿ ಎರಡು ಮೀಸಲಿಟ್ಟ ಯಶ್‌ಗೆ ಅಭಿನಂದಿಸಿದರು. ಅಲ್ಲದೇ ಅಂಬರೀಶ್ ಅವರ ಮಾತನ್ನು ರಿಪೀಟ್ ಮಾಡಿದ ವಿಶಾಲ್, ಹಿಂದೆ ಕನ್ನಡಕ್ಕೆ ಬೌಂಡರಿ ಇದ್ದಿರಬಹುದು ಆದರೆ ಆ ಬೌಂಡರಿಯನ್ನು ಕೆಜಿಎಫ್ ಚಿತ್ರವು ಮುರಿದಿದೆ ಎಂದರು.

ಡಬ್ಬಿಂಗ್‌ಗೆ ಪರೋಕ್ಷವಾಗಿ ಜೈ ಎಂದ ರಾಕಿಂಗ್ ಸ್ಟಾರ್
ಕನ್ನಡ ಚಿತ್ರವೊಂದು ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಯಲ್ಲಿ ಡಬ್ ಆಗಿ ಏಕಕಾಲದಲ್ಲಿ ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು ವಿಶಾಲ್, ಫರಾನ್ ಅಖ್ತರ್, ರಾಮ್ ಚರಣ್ ತೇಜ್ ಅಂತಹ ಸ್ಟಾರ್ ನಟರು ಮಾಡಿ ಪ್ರಚಾರ ಮಾಡುತ್ತಿದ್ದಾರೆ. ಇದು ಕನ್ನಡ ಚಿತ್ರರಂಗಕ್ಕೆ ಅತ್ಯಂತ ಖುಷಿಯ ವಿಚಾರ. ಬಟ್, ಈ ಬೆಳವಣಿಗೆಯಿಂದ ಡಬ್ಬಿಂಗ್ ಹೋರಾಟಕ್ಕೆ ಜೀವ ಸಿಕ್ಕಂತಾಗಿದೆ. ಕನ್ನಡ ಚಿತ್ರವನ್ನ ಅವರು ಹೇಗೆ ಪ್ರಮೋಟ್ ಮಾಡ್ತಿದ್ದಾರೋ, ಅದೇ ರೀತಿ ಅವರ ಸಿನಿಮಾಗಳು ಕನ್ನಡದಲ್ಲಿ ಡಬ್ ಆಗಿ ಬಂದ್ರೆ, ಅಥವಾ ನೀವೇ ವಾಯ್ಸ್ ಕೊಟ್ರೆ ಆ ಚಿತ್ರಗಳನ್ನ ಇಲ್ಲಿ ನೀವು ಪ್ರಮೋಟ್ ಮಾಡ್ತೀರಾ.? ಎಂಬ ಪ್ರಶ್ನೆ ಯಶ್‌ಗೆ ಎದುರಾಯಿತು.

ಈ ಬಗ್ಗೆ ಮಾತನಾಡಿದ ರಾಕಿಂಗ್ ಸ್ಟಾರ್ ಪರೋಕ್ಷವಾಗಿ ಡಬ್ಬಿಂಗ್‌ಗೆ ಬೆಂಬಲ ವ್ಯಕ್ತಪಡಿಸಿದರು. ’’ಇದು ಎಲ್ಲರೂ ಒಟ್ಟಾಗಿ ಕೂತು ನಿರ್ಧರಿಸಬೇಕು. ನಾನು ವೈಯಕ್ತಿಕವಾಗಿ ಹೇಳುವುದಾದರೇ, ಕಾಲ ಕಾಲಕ್ಕೆ ಸನ್ನಿವೇಶಗಳು ಬದಲಾಗುತ್ತೆ. ಸದ್ಯಕ್ಕೆ ಪ್ರಾದೇಶಿಕ ಗಡಿಯಿಲ್ಲ. ಗ್ಲೋಬಲ್ ಅನ್ನೋತರ ಆಗ್ತಿದೆ. ಭಾರತೀಯ ಚಿತ್ರಗಳು ಚೀನಾದಲ್ಲಿ ಬಿಡುಗಡೆಯಾಗ್ತಿದೆ ಅಂದಾಗ, ಪ್ರಪಂಚದ ಜೊತೆ ನಾವು ಓಡಬೇಕು ಅನಿಸುತ್ತೆ. ಕನ್ನಡ ಪರ-ವಿರೋಧದ ನಡುವೆ ಭಾಷೆಯ ಬೆಳವಣಿಗೆಗೆ ಸಹಾಯವಾಗುತ್ತೆ ಅಂದ್ರೆ ಖಂಡಿತ ಮಾಡಲಿ ಒಳ್ಳೆಯದೇ. ಅದೇ ಸಮಯದಲ್ಲಿ ಇಲ್ಲಿರುವಂತಹ ಕೆಲವರಿಗೆ ಪರಿಣಾಮ ಬೀರುತ್ತೆ ಅಂದ್ರೆ, ಹೊಟ್ಟೆಪಾಡನ್ನ ಕೂಡ ನೋಡಬೇಕು. ಭಾಷೆಗೆ ಯಾವುದೇ ರೀತಿ ಧಕ್ಕೆ ಆಗದೇ ನೋಡ್ಕೊಂಡ್ರೆ ನಮ್ಮ ಬೆಂಬಲ ಇರುತ್ತೆ’’ ಎಂದು ಡಬ್ಬಿಂಗ್ ಪರವಾಗಿರುವುದಾಗಿ ಸ್ಪಷ್ಟನೆ ನೀಡಿದರು.

ಕೆಜಿಎಫ್ ಬಜೆಟ್ ಎಷ್ಟೆಂಬುದೇ ಯಕ್ಷ ಪ್ರಶ್ನೆ
ಕೆಜಿಎಫ್ ಸಿನಿಮಾ ರೆಡಿಯಾಗಲು ಅಂದಾಜು ಸಾವಿರ ದಿನಗಳನ್ನು ತೆಗೆದುಕೊಂಡದ್ದೆ ಎಲ್ಲರ ಹುಬ್ಬೇರುವಂತೆ ಮಾಡಿದೆ. ಇನ್ನೂ ಮುಖ್ಯವಾಗಿ ಕೆಜಿಎಫ್ ಚಿತ್ರಕ್ಕೆ ತಗುಲಿರುವ ಬಜೆಟ್ ಎಷ್ಟು ಎಂಬ ಕುತೂಹಲವು ಎಲ್ಲರಲ್ಲಿ ಮೂಡಿರುವುದು ಸಾಮಾನ್ಯ. ಈ ಕುರಿತು ಉತ್ತರಿಸಿದ ನಿರ್ಮಾಪಕ ವಿಜಯ್ ‘ಕೆಜಿಎಫ್ ಚಿತ್ರದ ಸಲುವಾಗಿ ಕೆಲಸ ಮಾಡಿದ ತಂತ್ರಜ್ಞರ ಶ್ರಮಕ್ಕೆ ಬೆಲೆ ಕಟ್ಟೋಕಾಗಲ್ಲ. ನಾನು ಬಜೆಟ್ ಬಗ್ಗೆ ಎಂದಿಗೂ ತಲೆಕೆಡಿಸಿಕೊಂಡವನಲ್ಲ. ಮೇಲಾಗಿ ನನ್ನ ತಮ್ಮಂದಿರಾದ ಯಶ್, ಪ್ರಶಾಂತ್ ಮೇಲೆ ಎಷ್ಟು ಹೂಡಿಕೆ ಮಾಡಿದ್ರೂ ಅದೇನು ದೊಡ್ಡ ವಿಷ್ಯ ಅಲ್ಲ. ಇಲ್ಲಿಯವರೆಗೂ ನನ್ನ ಯಾವ ಚಿತ್ರದ ಬಜೆಟ್‌ನ್ನು ಘೋಷಿಸಿಲ್ಲ. ಈ ಚಿತ್ರದ ಬಜೆಟ್‌ನ್ನು ನೀವು ಕೇಳದಿದ್ರೆ ಒಳ್ಳೆಯದು’ ಎಂದರು.

ಯಶ್ ಏನಂದ್ರು…
ಎಲ್ಲ ಮಾಧ್ಯಮದವರನ್ನು ಒಂದೇ ರೂಫ್‌ನ ಕೆಳಗೆ ತರಬೇಕು ಅನ್ನೋದು ದೊಡ್ಡ ಕನಸು. ಅದು ಕೆಜಿಎಫ್ ಚಿತ್ರದ ಮೂಲಕ ನೆರವೇರಿದೆ ಎಂದು ಮಾತು ಆರಂಭಿಸಿದ ಯಶ್, ತೆರೆಯ ಮೇಲೆ ನಾನು ನಾಯಕನಿರಬಹುದು. ಆದರೆ ಕೆಜಿಎಫ್ ಚಿತ್ರದ ನಿರ್ಮಾಪಕರಾದ ವಿಜಯ್ ಕಿರಂಗದೂರ್ ಅವರೇ ನಿಜವಾದ ನಾಯಕ. ಮೊದಲು ಕನ್ನಡ ಭಾಷೆಯಲ್ಲಿ ಸಿನಿಮಾ ರಿಲೀಸ್ ಮಾಡಲು ನಿರ್ಧರಿಸಲಾಗಿತ್ತು. ಅಂತಿಮವಾಗಿ ಐದು ಭಾಷೆಗಳಲ್ಲಿ ಚಿತ್ರವನ್ನು ಏಕಕಾಲಕ್ಕೆ ರಿಲೀಸ್ ಮಾಡಲು ನಿರ್ಧರಿಸಿದೆವು ಎಂದರು. ಜತೆಗೆ ನಿರ್ದೇಶಕ ಪ್ರಶಾಂತ್ ನೀಲ್ ಹಾಲಿವುಡ್ ಮಟ್ಟಕ್ಕೆ ಬೆಳೀಬೇಕು. ಅವರು ಕೆಜಿಎಫ್ ಮುಖೇನ ಎಕ್‌ಸ್ ಪ್ಲೋರ್ ಆಗ್ತಾ ಇದ್ದಾರೆ ಎಂದರು.

ತಂತ್ರಜ್ಞರೇ ನನಗೆ ಬ್ಯಾಕ್ ಬೋನ್…
ಇಡೀ ಚಿತ್ರವು ಈ ಮಟ್ಟವನ್ನು ತಲುಪಲು ನಮ್ಮ ತಾಂತ್ರಿಕ ತಂಡದ ಸಹಕಾರ ತುಂಬಾ ದೊಡ್ಡದಿದೆ. ಸಂಗೀತ, ಕ್ಯಾಮೆರಾ, ಎಡಿಟಿಂಗ್, ಕಲಾ ವಿಭಾಗ ಪ್ರತಿಯೊಂದನ್ನು ಹಾಲಿವುಡ್ ಮಾದರಿಯಲ್ಲಿ ರೂಪಿಸುವ ಪ್ರಯತ್ನವನ್ನು ಮಾಡಿದ್ದೇವೆ. ಈ ತಂಡದ ಹೆಚ್ಚಿನ ಪ್ರೋತ್ಸಾಹ ನನ್ನ ಕೆಲಸವನ್ನು ಸುಲಭ ಮಾಡಿದೆ. ನನ್ನ ತಂಡಕ್ಕೆ ನಾನು ಋಣಿಯಾಗಿದ್ದೇನೆ. ಇದು ನನ್ನ ಎರಡನೇ ಸಿನಿಮಾ. ಹೊಂಬಾಳೆ ಸಿನಿಮಾ ಮಾಡೋದಕ್ಕೆ ಹೆಮ್ಮೆಪಡ್ತೀನಿ ಎಂದರು ನಿರ್ದೇಶಕ ಪ್ರಶಾಂತ್ ನೀಲ್.

ನೀವು ಯಶ್ ಅವರನ್ನು ನಿಮ್ಮ ಸಿನಿಮಾಕ್ಕೆ ಯಾಕೆ ಸೆಲೆಕ್‌ಟ್ ಮಾಡಿದ್ರಿ ಅನ್ನೋ ಪ್ರಶ್ನೆಗೆ ಉತ್ತರಿಸಿದ ಪ್ರಶಾಂತ್, ‘ನಾನು ಸಿನಿಮಾ ನೋಡೋದು ಕಡಿಮೆ. ಅದರಲ್ಲಿ ನಾನು ನೋಡಿದ್ದು ಯಶ್ ಅಭಿನಯದ ಗೂಗ್ಲಿ ಸಿನಿಮಾ. ಆನಂತರ ನನ್ನ ಈ ಕಥೆಗೆ ಅವರೇ ಸೂಕ್ತ ಅಂತ ಅನ್ನಿಸಿ ಅವರನ್ನ ಆಯ್ಕೆ ಮಾಡ್ದೆ. ಮುಖ್ಯವಾಗಿ ನಾನು ಅವರನ್ನ ಆಯ್ಕೆ ಮಾಡೋದಕ್ಕಿಂತ ಅವರು ನನ್ನನ್ನು ಆಯ್ಕೆ ಎಂದರು.

ಕನಸುಗಾರನ ಅಟೆಂಪ್‌ಟ್ ರಿಪೀಟ್ ಮಾಡಿದ ಕೆಜಿಎಫ್
ಭಾರತೀಯ ಮಾಧ್ಯಮಗಳನ್ನು ಒಂದೇ ಸೂರಿನೆಡೆಗೆ ತಂದು ಸುದ್ದಿಗೋಷ್ಠಿ ನಡೆಸುವ ಪ್ರಯತ್ನ ಇದೇ ಮೊದಲೇನಲ್ಲ. ಈ ಕೆಲಸವನ್ನು ಕ್ರೇಜಿ ಸ್ಟಾರ್ ರವಿಚಂದ್ರನ್ ಶಾಂತಿ ಕ್ರಾಂತಿ ಸಿನಿಮಾದ ಸಮಯದಲ್ಲಿಯೇ ಮಾಡಿರುವುದು ವಿಶೇಷ. ಕನ್ನಡ ಮಾಧ್ಯಮಗಳ ಜೊತೆ ಬೇರೆ ಭಾಷೆಯ ಮಾಧ್ಯಮದವರನ್ನು ಆಹ್ವಾನಿಸಿ 1991ರಲ್ಲೇ ಸುದ್ದಿಗೋಷ್ಠಿ ಮಾಡಿದ್ದರು. ಅಂದ ಹಾಗೆ ಶಾಂತಿ ಕ್ರಾಂತಿ ರವಿಚಂದ್ರನ್ ನಿರ್ದೇಶನ ಮಾಡಿ ನಟಿಸಿದ್ದ ಸಿನಿಮಾ. ಈ ಚಿತ್ರ ಕನ್ನಡ, ತಮಿಳು, ಹಿಂದಿ ಭಾಷೆಯಲ್ಲಿ ಏಕಕಾಲದಲ್ಲಿ ತಯಾರಾಗಿತ್ತು. ಕನ್ನಡದಲ್ಲಿ ರವಿಚಂದ್ರನ್ ಮಾಡಿದ್ದ ಪಾತ್ರವನ್ನು ತೆಲುಗಿನಲ್ಲಿ ನಾಗಾರ್ಜುನ, ತಮಿಳು ಹಾಗೂ ಹಿಂದಿಯಲ್ಲಿ ರಜನಿಕಾಂತ್ ಅಭಿನಯಿಸಿದ್ದರು. ಮೂಲಗಳ ಪ್ರಕಾರ ಆಗಲೇ ಬಹುಭಾಷಾ ಮಾಧ್ಯಮದವರು ಸುದ್ದಿಗೋಷ್ಠಿ ಮಾಡಲಾಗಿತ್ತಂತೆ. ಅದೇ ಪ್ರಯತ್ನವನ್ನು ಕೆಜಿಎಫ್ ಚಿತ್ರದ ಮೂಲಕ ಮತ್ತಷ್ಟು ವೈಭವಪೂರಿತವಾಗಿ ಹೊಂಬಾಳೆ ಸಂಸ್ಥೆ ಮಾಡಿರುವುದು ವಿಶೇಷ.

ಕನ್ನಡ ಚಿತ್ರರಂಗದ ಘನತೆ ಹೆಚ್ಚಿಸಿದ ಯಶ್
ರವಿಚಂದ್ರನ್ ಅವರ ನಂತರ ಕನ್ನಡ ಚಿತ್ರವನ್ನು ಭಾರತದ ಉದ್ದಗಲ್ಲಕ್ಕೂ ತಲುಪಿಸಿದ ಕೀರ್ತಿ ಹೊಂಬಾಳೆ ಹಾಗೂ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಸಲ್ಲಬೇಕಿದೆ. ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಕಡಿಮೆ ಅವಧಿಯಲ್ಲಿ ಈ ಮಟ್ಟಿನ ಯಶಸ್ಸನ್ನು ಯಶ್ ಗಳಿಸಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಇಂತಹುದೇ ಪ್ರಯತ್ನವನ್ನು ಕನ್ನಡ ಚಿತ್ರಗಳು ಮತ್ತಷ್ಟು ಮಾಡಿ ಸ್ಯಾಂಡಲ್ ವುಡ್ಡಿನ ತಾಕತ್ತನ್ನು ಭಾರತದುದ್ದಕ್ಕೂ ಪಸರಿಸಬೇಕಿದೆ. ಅದಕ್ಕೆ ಕನ್ನಡದ ಎಲ್ಲ ನಟರು, ನಿರ್ಮಾಪಕರು ಹೆಚ್ಚಿನ ಮಟ್ಟದ ಶ್ರಮ ವಹಿಸಬೇಕಿರುವುದು ಅಗತ್ಯ.

Tags

Related Articles

Leave a Reply

Your email address will not be published. Required fields are marked *

Language
Close