About Us Advertise with us Be a Reporter E-Paper

ಅಂಕಣಗಳು

ಘನತೆ ಇಲ್ಲದ ಬದುಕನ್ನು ಅಲೆಮಾರಿ ಜನಾಂಗ ಇನ್ನೆಷ್ಟು ಕಾಲ ಸವೆಸಬೇಕು?

ಕಳಕಳಿ: ಗಾಯತ್ರಿ ಜಮಖಂಡಿ, ಸಂಶೋಧಕರು

‘ಏಯ್ ಪಾರಾ, ನೀ ಯಾರಂವ?’ ಎಂದು ಮಾಸ್ತರರು ನನ್ನನ್ನು ಕಂಡು ಜೋರಾಗಿ ಕೂಗಿದರು. ಆ ಧ್ವನಿ ಕೇಳಿ ನಾನು ಅಂಜಿದೆ. ‘ನಾ…ನಾ…ದೋಸಗ್ಯಾ ಆದ್ಯಾನ್ರಿ…’ ಎಂದು ಹೇಗೋ ಉತ್ತರಿಸಿದೆ. ‘ಇಲ್ಯಾಕೇ ಬಂದದಿ?’ ಎಂದು ಮತ್ತೆ ಒದರಿದರು. ‘ಸಾಲಿ ಕಲ್ಯಾಕ ಬಂದ್ಯಾನ್ರಿ. ನಮ್ಮ ಅಣ್ಣ ನಂಗ ಸಾಲಿಗಿ ಹೋಗಾಕ ಹೇಳ್ಯಾನ್ರಿ…’ ಎಂದು ಅಳುವ ಧ್ವನಿಯಲ್ಲಿ ಉತ್ತರಿಸಿದೆ. ನೀ ಭಿಕಾರಿ ಪೈಕಿ ಪಾರಾ, ನಿನ್ನ ಹೆಸರ್‍ನ ಸಾಲ್ಯಾಗ ಹ್ಯಾಂಗ ಹಚ್ಚಬೇಕ? ಹೋಗ, ನಿಮ್ಮಪ್ಪಗ ಹೇಳ, ನಿನ್ನ ಹೆಸರ ಸಾಲ್ಯಾಗ ಹಚ್ಚಾಕ ಬರೋದಿಲ್ಲ. ಹೋಗ…ಓಡ…’ ಎಂದು ಮಾಸ್ತರರು ಶಾಂತರಾಗಿ ಹೇಳಿದರು. ನನಗೆ ತುಂಬಾ ನೋವಾಯಿತು. ನಾನು ಸಂತೋಷದಿಂದ ಶಾಲೆಗೆ ಬಂದಿದ್ದೆ. ನಾನು ಅಳಲು ಪ್ರಾರಂಭಿಸಿದೆ… ಮಾಸ್ತರರಿಗೆ ನನ್ನ ಮೇಲೆ ದಯೆ ಮೂಡಿರಬೇಕು. ‘ಇಲ್ನೋಡ ಇಂದ ಬಂದದಿ ಇರ್‍ಲಿ. ಆ ಅಂಗಳದಾಗ ಕುಂಡು. ನಿಂಗ ಕೇಳಬೇಕೆನಿಸಿದರ ಕೇಳ’ ಎಂದು ಅಂಗಳದಲ್ಲಿ ಕುಂದಿರಿಸಿದರು.

  ಶಾಲೆ ಕಲಿಯಲು ಹೋದ ಒಬ್ಬ ಅಲೆಮಾರಿ ಹುಡುಗನ ಮೊದಲ ದಿನದ ಶಾಲಾ ಅನುಭವ ಮೇಲಿನಂತಿದೆ. ಬಟ್ಟ ಬಯಲಿನಲ್ಲಿ, ಉರಿಬಿಸಿಲು-ಬಿರುಮಳೆಯಲ್ಲಿ, ಕಗ್ಗತ್ತಲಿನಲ್ಲಿ, ಕಲ್ಲು-ಮುಳ್ಳುಗಳಲ್ಲಿ, ಸ್ಮಶಾನ-ಶೌಚ ಸ್ಥಳದಲ್ಲಿ, ಉಪವಾಸ-ವನವಾಸ ಅನುಭವಿಸುತ್ತ, ರಸ್ತೆಗಳಲ್ಲೇ ಹುಟ್ಟುತ್ತ-ಸಾಯುತ್ತ, ನಾಯಿಗಳಿಂದ ಕಡಿಸಿಕೊಳ್ಳುತ್ತಾ ಜೀವನ ಸಾಗಿಸುತ್ತಿದ್ದ ಬುಡುಬುಡಿಕೆ ಅಲೆಮಾರಿ ಹುಡುಗ, ಮಹಾರಾಷ್ಟ್ರದ ದಾದಾ ಸಾಹೇಬ ಮಲ್ಹಾರಿ ಮೋರೆ ಶಾಲೆ ಕಲಿಯಲು ತುಳಿದ ಯಾತನಾಮಯ ಹಾದಿಯನ್ನು ಅವರ ಆತ್ಮಕಥೆ ‘ಗಬಾಳ’ದಲ್ಲಿ ಓದಿದರೆ ಎಂಥವರಿಗೂ ಕೂಡಾ ತೀವ್ರ ವೇದನೆಯಾಗುತ್ತದೆ. ಹಾಲಕ್ಕಿ ಹೆಸರಿನಲ್ಲಿ ಊರೂರು ತಿರುಪೆ ಬೇಡುತ್ತಾ, ಸಾಕಷ್ಟು ಅವಮಾನಗಳನ್ನು ಸಹಿಸುತ್ತಾ ೧೯೭೦ರ ವರ್ಷಗಳಲ್ಲಿ ಓದಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿ, ಹಲವು ಕೃತಿಗಳನ್ನು ರಚಿಸಿ, ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡು, ತಮ್ಮ ಸಹೋದರರ ಬಾಳಿಗೂ ಬೆಳಕಾದ ಅವರ ಜೀವನ ಸಾಧನೆ ಎಂತಹವರನ್ನು ನಿಬ್ಬೆರಗಾಗಿಸುತ್ತದೆ. ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ಆದರೆ ಸಾಽಸುವ ಛಲ ಮನುಷ್ಯನಿಗೆ ಬೇಕು. ತಾನು ಹಿಡಿದ ಕಾರ್ಯದಲ್ಲಿ ಸತತ ಪ್ರಯತ್ನದಿಂದ ಮನುಷ್ಯ ತನ್ನ ಗುರಿ ಮುಟ್ಟಬಹುದು ಎಂಬುದಕ್ಕೆ ಅಲೆಮಾರಿ ಜನಾಂಗದಲ್ಲಿ ಜನಿಸಿ, ಊಟ, ವಸತಿ, ಸ್ನಾನ, ಬಟ್ಟೆ, ತನ್ನ ಅಸ್ತಿತ್ವಕ್ಕೆ ಯಾವುದೇ ರೀತಿಯ ಒಂದು ಗುರುತಿನ ಕಾರ್ಡ್ ಇಲ್ಲದೆಯೇ ಅತ್ಯುನ್ನತ ಸಾಧನೆಯನ್ನು ಮಾಡಿದ ದಾದಾಸಾಹೇಬ ಮೋರೆ ಅಲೆಮಾರಿ ಜನಾಂಗಕ್ಕೆ ಆದರ್ಶಪ್ರಾಯರಾಗಿ ನಿಲ್ಲುತ್ತಾರೆ.

ಭಾರತ ಸ್ವಾತಂತ್ರ್ಯಗೊಂಡು ಇಷ್ಟು ವರ್ಷಗಳಾದರೂ ಇವರುಗಳ ಜೀವನದಲ್ಲಿ ಮಹತ್ತರವಾದ ಬದಲಾವಣೆಗಳಾಗಿಲ್ಲ. ಇಂದಿಗೂ ಕೂಡಾ ಸಾಕಷ್ಟು ಅಲೆಮಾರಿಗಳು ಸೂರಿಲ್ಲದೇ, ಊರಿಲ್ಲದೆ, ನೆಲೆಯಿಲ್ಲದೇ ಭಿಕ್ಷೆ ಬೇಡಿ ಬದುಕುತ್ತಿದ್ದಾರೆ. ತಮ್ಮ ಅಸ್ತಿತ್ವ ಪ್ರಮಾಣೀಕರಿಸುವ ಯಾವುದೇ ರೀತಿಯ ಗುರುತಿನ ಕಾರ್ಡ್ ಇಲ್ಲದೇ ವಸತಿ ಯೋಜನೆ, ಅನ್ನ ಯೋಜನೆ, ಆರೋಗ್ಯ ಯೋಜನೆಗಳಿಂದ ವಂಚಿತರಾಗುತ್ತಿದ್ದಾರೆ. ಅದು ಹೇಗೋ ವಿದ್ಯಾಭ್ಯಾಸ ಪಡೆದುಕೊಂಡರೂ ಅದೆಷ್ಟೋ ಅಲೆಮಾರಿಗಳು ಜಾತಿ ಪ್ರಮಾಣ ಪತ್ರವಿಲ್ಲದೇ ಉದ್ಯೋಗ ಅವಕಾಶದಿಂದ ವಂಚಿತರಾಗಿದ್ದಾರೆ.

ಜಾಗತೀಕರಣ, ಉದಾರೀಕರಣ, ವೈಜ್ಞಾನೀಕರಣ, ಆಧುನೀಕರಣ, ಪಾಶ್ಚಾತೀಕರಣದ ಪ್ರಭಾವದಿಂದಾಗಿ  ಆದಿವಾಸಿಗಳ ಮೂಲ ಕಸುಬುಗಳಾದ ಪ್ರದರ್ಶನ ಕಲೆ, ಕರಕುಶಲ ವಸ್ತುಗಳ ತಯಾರಿ, ಪಾರಂಪರಿಕ ವೈದ್ಯಪದ್ಧತಿ, ಸಣ್ಣಪುಟ್ಟ ವಸ್ತುಗಳ ಮಾರಾಟ, ವನಸ್ಪತಿ ಸಂಗ್ರಹಿಸಿ ಮಾರಾಟ ಮಾಡುವುದು, ಬೇಟೆ, ಪಶುಪಾಲನೆ, ಆಹಾರ ಸಂಗ್ರಹಣೆಯಂತಹ ಮೂಲ ಕಸುಬುಗಳು, ಧಾರ್ಮಿಕ  ವೃತ್ತಿಗಳಾದ ಕಾವ್ಯ ಹಾಗೂ ತತ್ವಪದಗಳನ್ನು ಹಾಡುತ್ತಾ ಊರೂರು ಅಲೆಯುವುದು ಹಾಗೂ ಪಾರಂಪರಿಕ ಮೂಲವೃತ್ತಿಗಳಿಂದ ವಂಚಿತರಾಗಿದ್ದಾರೆ. ಜಾಗತಿಕ ವಿದ್ಯಮಾನಗಳಿಂದಾಗಿ ಅವರ ಪಾರಂಪರಿಕ ಜ್ಞಾನಕ್ಕೆ ಬೆಲೆ ಇಲ್ಲದಂತಾಗಿದೆ. ಆಧುನಿಕವಾದ, ವೈಜ್ಞಾನಿಕವಾದ ಕೌಶಲಗಳು ಅವರ ಹತ್ತಿರ ಇಲ್ಲವಾಗಿದೆ.    ಅರಣ್ಯ ಪ್ರದೇಶದಲ್ಲಿ ವಾಸ ಮಾಡುತ್ತಿದ್ದ ಬುಡಕಟ್ಟು ಸಮುದಾಂiiಗಳು ಅಭಿವೃದ್ಧಿ ಹೆಸರಲ್ಲಿ ಕೈಗೊಂಡಂತಹ ಬೃಹತ್ ಯೋಜನೆಗಳಿಂದಾಗಿ ಸ್ಥಳಾಂತರಕ್ಕೆ ಒಳಗಾಗಿ ಮೂಲ ನೆಲೆಯಿಂದ ಕಿತ್ತೊಗೆಯಲ್ಪಟ್ಟಿರುವುದೂ ಅಲೆಮಾರಿಗಳ ದೊಡ್ಡ ಸಮಸ್ಯೆ. ಹೀಗಾದ ಮೇಲೆ ಯೋಗ್ಯ ಪುನರ್ವಸತಿ ದೊರೆಯದೇ ಜೀವಾನಾಧಾರ ಕಳೆದುಕೊಳ್ಳುತ್ತಾರೆ. ಅಲ್ಲದೆ ಬುಡಕಟ್ಟು ಸಮುದಾಯಗಳು ಕಾಡಿನ ಜೊತೆಗೆ ಭಾವನಾತ್ಮಕ ನಂಟನ್ನು ಹೊಂದಿದ್ದು ಅರಣ್ಯವನ್ನು ತಮ್ಮ ಆಸ್ತಿಯೆಂದು, ತಾಯಿ ಎಂದು ತಿಳಿದುಕೊಂಡು ತಮ್ಮ ಆಸ್ತಿ ಬಗೆಗೆ ಯಾವುದೇ ರೀತಿಯ ದಾಖಲಾತಿ ಪತ್ರವನ್ನು ಹೊಂದಿರದ ಕಾರಣ ಅದೆಷ್ಟೋ ಬುಡಕಟ್ಟುಗಳಿಗೆ ಯಾವುದೇ ರೀತಿಯ ಪರಿಹಾರ ಸಿಗುವುದಿಲ್ಲ. ಯೋಜನೆಯ ಸಲುವಾಗಿ ಅದೆಷ್ಟೋ ಬುಡಕಟ್ಟುಗಳನ್ನು ಯಾವುದೇ ಮುನ್ಸೂಚನೆ ನೀಡದೇ ವಾಸಸ್ಥಾನದಿಂದ ಕಿತ್ತೊಗೆಯಲಾಗಿದೆ. ಎಲ್ಲಿಗೆ ಹೋಗಬೇಕು, ಏನು ಮಾಡಬೇಕು ಎಂದು ತೋಚದೇ ಅವರು ದಿಕ್ಕಾಪಾಲಾಗಿದ್ದಾರೆ.

 ಮೂಲ ನೆಲೆ ಕಳೆದುಕೊಂಡು ಕೆಲ ಅಸಹಾಯಕ ಬುಡಕಟ್ಟು ಸಮುದಾಯಗಳು ಅಲೆಮಾರಿಗಳಾಗಿ, ಸಣ್ಣಪುಟ್ಟ ವ್ಯಾಪಾರ, ಮನೆ ಚಾಕರಿ, ಕೂಲಿ ಮಾಡಿಕೊಂಡು ತುಂಬಾ ಅನಾಥ, ಯಾತನಾಮಯ, ಶೋಚನೀಯ, ಅತಂತ್ರ, ಯಾವುದೇ ರೀತಿಯ ಮಾನ-ಸಮ್ಮಾನಗಳಿಲ್ಲದ ಬದುಕು ಸಾಗಿಸುತ್ತಿದ್ದಾರೆ. ಕಾಡಿನಲ್ಲಿ ಸ್ವಚ್ಛಂದವಾಗಿ ಬದುಕುತ್ತಿದ್ದ ಇವರು ನಾಡಿಗೆ ಬಂದು ಇಲ್ಲಿ ಏನು ಮಾಡಬೇಕೆಂದು ತೋಚದೇ ದಿಕ್ಕುತಪ್ಪಿದಂತಾಗಿದ್ದಾರೆ. ಕಾಡಿನಲ್ಲಿ ತಮ್ಮದೇ ಬಂಧು ಬಾಂಧವರೊಂದಿಗೆ ಬದುಕುತ್ತಿದ್ದ ಇವರ ಬಂಧುತ್ವ ಈಗ ಕತ್ತರಿಸಿ ಹೋಗಿದೆ.

Tags

Related Articles

Leave a Reply

Your email address will not be published. Required fields are marked *

Language
Close