ವಿಶ್ವವಾಣಿ

ಕೋಟಿ ಎಣಿಸಲು ಕೋಟ್ಯಧಿಪತಿಗೆ ಎಷ್ಟು ಸಮಯ?

ಅಕಸ್ಮಾತ್ ನೀವೇ ಒಮ್ಮೆ ಕೋಟ್ಯಧಿಪತಿ ಆದಿರಿ ಅಂದ್ಕೊಳ್ಳಿ. ಬೇಕಿದ್ದರೆ ರಮೇಶ್ ಅರವಿಂದ್ ಅವರು ಸ್ಟಾರ್ ಸುವರ್ಣ ವಾಹಿನಿಯಲ್ಲಿ ನಡೆಸಿಕೊಡುವ ರಿಯಾಲಿಟಿ ಗೇಮ್ ಶೋದಲ್ಲಾದರೂ ಇರಬಹುದು, ಅಥವಾ,  ಲಾಟರಿಯಲ್ಲಿ ಅದೃಷ್ಟಲಕ್ಷ್ಮಿ ಒಲಿದು ಬಂದದ್ದಾದರೂ ಆಗಬಹುದು. ಅಂತೂ ನಿಮಗೆ ಒಂದು ಕೋಟಿ ರೂಪಾಯಿಗಳು ಬಹುಮಾನವಾಗಿ ಸಿಕ್ಕಿವೆ. ಅದೂ, ನಗದು ರೂಪದಲ್ಲಿ, ಒಂದು ರೂಪಾಯಿಯ ಗರಿಗರಿ ನೋಟುಗಳು ಒಂದು ಕೋಟಿ! ಈಗ ನೀವು ಅವುಗಳನ್ನು ಒಂದೊಂದಾಗಿಯೇ ಎಣಿಸಿಕೊಂಡು (ಪ್ರತಿಯೊಂದು ನೋಟನ್ನು ಎಣಿಸಿದಾಗ ಬಾಯಿಯಲ್ಲಿ ಆ ಸಂಖ್ಯೆಯನ್ನು ಹೇಳಿಕೊಂಡು) ಒಟ್ಟು ಒಂದು ಕೋಟಿ ನೋಟುಗಳಿರುವುದು ಹೌದು ಎಂದು ಕನ್ಫರ್ಮ್ ಮಾಡಬೇಕಾಗಿದೆ. ಅಂದಾಜು ಎಷ್ಟು ನಿಮಿಷಗಳು ಅಥವಾ ಗಂಟೆಗಳೊಳಗೆ ಎಣಿಕೆ ಮಾಡಿ ಮುಗಿಸಬಹುದು

ಒಂದು, ಎರಡು, ಮೂರು, ನಾಲ್ಕು… ಎಂದು ಎಣಿಸುವುದನ್ನು ನಾವೆಲ್ಲ ಚಿಕ್ಕಂದಿನಲ್ಲೇ- ಬಹುಶಃ ಅಕ್ಷರ ಕಲಿಕೆಗಿಂತಲೂ ಸ್ವಲ್ಪ ಮೊದಲೇ- ಕಲಿತಿದ್ದೇವೆ. ಕೈಬೆರಳುಗಳನ್ನು ಉಪಯೋಗಿಸಿ ಒಂದರಿಂದ 10ರವರೆಗೆ, ಕಾಲ್ಬೆರಳುಗಳನ್ನೂ ಸೇರಿಸಿ 20ರವರೆಗೆ ಎಣಿಸಿದ್ದೇವೆ. ನಾವೇ ಎಣಿಸದಿದ್ದರೂ ನಮ್ಮ ಹೆತ್ತವರು ಎಣಿಸಿ ತೋರಿಸಿದ್ದಾರೆ. ಶಾಲೆಗೆ ಸೇರಿದ ಮೇಲೆ ಒಂದರಿಂದ 100ರವರೆಗೆ ಎಣಿಕೆ ಸಲೀಸಾಯ್ತು. ನಿಮಗೆ ಹೇಗೋ ಗೊತ್ತಿಲ್ಲ, ನನಗಂತೂ ಪ್ರಾಥಮಿಕ ಶಾಲೆಯ ಒಂದನೆಯ ಮತ್ತು ಎರಡನೆಯ ತರಗತಿಗಳಲ್ಲಿ ಹೋಮ್‌ವರ್ಕ್ ಎಂದರೆ ಸ್ಲೇಟಿನ ಒಂದು  ಕಾಪಿ ಬರೆಯುವುದು, ಇನ್ನೊಂದು ಮಗ್ಗಲಲ್ಲಿ ಒಂದರಿಂದ 100ರವರೆಗೆ ಸಂಖ್ಯೆಗಳನ್ನು ಬರೆಯುವುದು. ಅದಷ್ಟನ್ನು ಏಳೆಂಟು ನಿಮಿಷಗಳೊಳಗೇ ಪೂರೈಸಿ ಆಮೇಲೆ ಆಟ ಆಡಲಿಕ್ಕೆ ಓಡುವುದು. ಕೋಟಿಯ ಕಲ್ಪನೆಯಾಗಲೀ, ಕೋಟ್ಯಧಿಪತಿಯ ಬಗ್ಗೆಯಾಗಲೀ ಆಗ ಏನೂ ಗೊತ್ತಿರಲಿಲ್ಲ. ಬಹುಶಃ ಈಗಲಾದರೂ ಅಷ್ಟೇ- ಕೋಟಿ ಎಣಿಸಲು ಎಷ್ಟು ಸಮಯ ಬೇಕು ಎಂದು ಅಂದಾಜಿಸುವುದಿರಲಿ, ಕೋಟಿಗೆ 1 ಬರೆದು ಮುಂದೆ ಎಷ್ಟು ಸೊನ್ನೆಗಳಿರಬೇಕು ಎಂದು ಕೇಳಿದರೆ ತತ್‌ಕ್ಷಣ ಉತ್ತರಿಸುವುದೂ ಕಷ್ಟವೇ. ಅಣ್ಣಾವ್ರು ಒಂದು ಮುತ್ತಿನ ಕತೆ ಸಿನಿಮಾದಲ್ಲಿ  ‘ಒಂದು ಎರಡು ಮೂರು ನಾಲ್ಕು ಆಮೇಲೆ ಏನು, ನಾಲ್ಕು ಮೂರು ಎರಡು ಒಂದು ಆಮೇಲಿನ್ನೇನು…’ ಎನ್ನುವುದೇ ವಾಸಿ. ದೊಡ್ಡದೊಡ್ಡ ಸಂಖ್ಯೆಗಳವರೆಗೆ ಎಣಿಕೆಯ ತಲೆಬಿಸಿ ಇಲ್ಲ. ಅಂದಹಾಗೆ, ‘ಒಂದು ಮುತ್ತಿನ ಕತೆ ನಾನು ಎಂಜಿನಿಯರಿಂಗ್ ವಿದ್ಯಾಭ್ಯಾಸದ ವೇಳೆ ದಾವಣಗೆರೆಯ ಶಾಂತಿ ಚಿತ್ರಮಂದಿರದಲ್ಲಿ ಫಸ್‌ಟ್ ಡೇ ಫಸ್‌ಟ್ (ಮಾರ್ನಿಂಗ್) ಶೋ ವೀಕ್ಷಿಸಿದ ಏಕೈಕ ಚಿತ್ರ.

ಇಲ್ಲಿ ಇನ್ನೂ ಒಂದು ನೆನಪು. ನನ್ನದಲ್ಲ, ನನ್ನ ಮಗ ಸೃಜನ್ ಸುಮಾರು ಐದಾರು ವರ್ಷದವನಾಗಿರುವಾಗಿನದು. ಆ  ಅವನು ಸಾಕಷ್ಟು ತುಂಟನೇ ಆಗಿದ್ದ. ಒಮ್ಮೆ ಇಲ್ಲಿ ವಾಷಿಂಗ್ಟನ್‌ನಲ್ಲಿ ಹಿರಿಯ ಕನ್ನಡಿಗ ಡಾ. ಮೈ. ಶ್ರೀ. ನಟರಾಜರ ಮನೆಗೆ ಹೋಗಿದ್ದಾಗ ಸೃಜನ್‌ನ ತುಂಟತನ ನಿಯಂತ್ರಣಕ್ಕೆಂದು ‘ಒಂದರಿಂದ ಐದುಸಾವಿರದವರೆಗೆ ಎಣಿಕೆ ನೀನು ನನ್ನೆದುರಿಗೆ ಹೇಳಬೇಕು’ ಎಂದು ನಟರಾಜ್ ಅವನಿಗೊಂದು ಟಾಸ್‌ಕ್ ಕೊಟ್ಟಿದ್ದರು. ‘ಇವತ್ತೇ ಮುಗಿಸಬೇಕಂತಿಲ್ಲ, ಮುಂದಿನ ಸರ್ತಿ ನಮ್ಮನೆಗೆ ಬಂದಾಗ ಮುಂದುವರೆಸಬಹುದು’ ಎಂದು ಸಹ ಹೇಳಿದ್ದರು. ಆಮೇಲೆ ಪ್ರತಿಸರ್ತಿ ಭೇಟಿಯಾದಾಗಲೂ ‘ಎಷ್ಟಾಯ್ತೋ ಫೈವ್ ಥೌಸಂಡ್‌ವರೆಗಿನ ಕೌಂಟ್?’ ಎಂದು ಕಿಚಾಯಿಸುತ್ತಿದ್ದರು. ಈಗ  ಅಂತ ಕೇಳಿದ್ರೆ ‘ಇದೆ, ಆದರೆ ನಾನು ಬಹುಶಃ ಫೈವ್ ಥೌಸಂಡ್‌ವರೆಗೆ ಅಲ್ಲ, ಹಂಡ್ರೆಡ್‌ವರೆಗೂ ಎಣಿಕೆ ಒಪ್ಪಿಸಿರಲಿಲ್ಲ!’ ಎನ್ನುತ್ತಾನೆ ಸೃಜನ್ ಮುಗುಳ್ನಗುತ್ತ.

ಇನ್ನು, ಹನ್ನೆರಡು ಜನ ಬುದ್ಧಿವಂತರು ತಮ್ಮನ್ನು ತಾವು ಎಣಿಸಿಕೊಂಡ ಕಥೆ ಎಲ್ಲರಿಗೂ ಗೊತ್ತಿದ್ದದ್ದೇ. ಮತ್ತೊಂದು ಶಿಶುಗೀತೆಯನ್ನೂ ಉಲ್ಲೇಖಿಸುವುದಾದರೆ- ‘ಒಂದು ಕಾಡಿನ ಮಧ್ಯದೊಳಗೆ ಎರಡು ಗುಹೆಗಳ ನಡುವೆ ಮಲಗಿ ಮೂರು ಕರಡಿಗಳಾಡುತ್ತಿದ್ದುವು ನಾಲ್ಕು ಮರಿಗಳ ಸೇರಿಸಿ ಐದು ಜನರಾ ಬೇಟೆಗಾರರು ಆರು ಬಲೆಗಳನೆಳೆದು ತಂದು ಏಳು ಕರಡಿಗಳ್ಹಿಡಿದು ನೋಡದೆ  ಹಿಡಿದೆವು ಎಂದರು ಒಂಬತ್ತೆಂದನು ಅವರಲೊಬ್ಬ ಹತ್ತು ಎಂದನು ಬೇರೆಯವನು ಎಣಿಸಿ ನೋಡಿದರೇಳೇ ಏಳು ಇಲ್ಲಿಗೀ ಕಥೆ ಮುಗಿಯಿತು

ಯಾಕೆ ಇಷ್ಟನ್ನೆಲ್ಲ ನೆನಪಿಸಿಕೊಂಡೆನೆಂದರೆ, ಕೋಟಿವರೆಗಿನ ಎಣಿಕೆ ನೀವು ಅಂದುಕೊಂಡಷ್ಟು ಸುಲಭದ ವಿಚಾರ ಅಲ್ಲ. ಕೋಟಿ ಬೇಡ, ಕೋಟಿಯ ಹತ್ತನೇ ಒಂದು ಭಾಗವನ್ನಷ್ಟೇ ಪರಿಗಣಿಸುವಾ. ಹತ್ತು ಲಕ್ಷ ಅಂದರೆ ಒಂದು ಮಿಲಿಯನ್. 1 ಬರೆದು ಅದರ ಮುಂದೆ ಆರು ಸೊನ್ನೆಗಳು. ಅಷ್ಟು ಎಣಿಕೆಗೆ ಸರಾಸರಿ ಒಬ್ಬ ಮನುಷ್ಯನಿಗೆ, ದಿನವಿಡೀ ಎಣಿಕೆ ಮಾಡುತ್ತಲೇ  23 ದಿನಗಳು ಬೇಕು! ಎಲ್ಲಿಂದ ಬಂತು ಆ ಸಂಖ್ಯೆ? ಡೇವಿಡ್ ಶುವಾರ್ಟ್‌ಜ್ ಎಂಬಾತ ಮಕ್ಕಳಿಗಾಗಿ ಬರೆದ ‘ಹೌ ಮಚ್ ಈಸ್ ಎ ಮಿಲಿಯನ್’ ಎಂಬ ಸಚಿತ್ರ ಪುಸ್ತಕದಲ್ಲಿ ಒಂದು ಮಿಲಿಯನ್ ಎಂದರೆ ಎಷ್ಟು ಎಂದು ಮಕ್ಕಳಿಗೂ ಅರ್ಥವಾಗುವಂತೆ ವಿವರಿಸುವಾಗ ‘ಎಣಿಕೆ ಮಾಡಿದರೆ ಆ ಸಂಖ್ಯೆಯಷ್ಟನ್ನು ಎಣಿಸಲಿಕ್ಕೆ 23 ದಿನಗಳು ಬೇಕು’ ಎಂದಿದ್ದಾನೆ. ಒಂದು ಮಿಲಿಯನ್ ಸಂಖ್ಯೆಯಷ್ಟು ಮಕ್ಕಳು ಲಗೋರಿ ಬಿಲ್ಲೆಗಳ ಹಾಗೆ ಒಬ್ಬರ ಹೆಗಲ ಮೇಲೆ ಇನ್ನೊಬ್ಬರಂತೆ ನಿಂತುಕೊಂಡರೆ  ಸ್ತಂಭವು ಅತಿ ದೊಡ್ಡ ಕಟ್ಟಡಗಳಿಗಿಂತ, ಅತಿ ಎತ್ತರದ ಪರ್ವತಗಳಿಗಿಂತ, ವಿಮಾನ ಹಾರುವ ಎತ್ತರಕ್ಕಿಂತಲೂ ಹೆಚ್ಚು ಎತ್ತರ ಇರುತ್ತದೆ ಎಂದು ಚಿತ್ರಗಳಲ್ಲಿ ತೋರಿಸುತ್ತಾನೆ. ಡೇವಿಡ್ ಶುವಾರ್ಟ್‌ಜ್ನ ಪುಸ್ತಕದಲ್ಲಿ ಚಿಕ್ಕ ಮಕ್ಕಳಿಗೆ ಅಷ್ಟು ಮನದಟ್ಟಾಗುವಂತೆ ಹೇಳಿರುವುದರಿಂದ ಅಮೆರಿಕದಲ್ಲಿ ಬೇರೆ ಕೆಲವು ಪಠ್ಯಪುಸ್ತಕಗಳಲ್ಲೂ, ಮಕ್ಕಳ ಪುಸ್ತಕಗಳಲ್ಲೂ ಒಂದರಿಂದ ಮಿಲಿಯನ್‌ವರೆಗೆ ಎಣಿಕೆಗೆ ಸುಮಾರು 23 ದಿನಗಳು ಬೇಕಾಗುತ್ತವೆ ಎಂದೇ ಬರೆದಿದ್ದಾರೆ. ಹೌದೋ ಅಲ್ಲವೋ ಎಂದು ದೃಢಪಡಿಸುವ ಗೋಜಿಗೆ ಯಾರೂ ಹೋಗಲಿಲ್ಲ.

ಆದರೆ 23 ದಿನಗಳು  ಇಲ್ಲ! ಏಕೆಂದರೆ ಡೇವಿಡ್ ಶುವಾರ್ಟ್‌ಜ್ ಎರಡು ಮುಖ್ಯ ಊಹೆಗಳನ್ನಿಟ್ಟುಕೊಂಡು ಆ ಸಂಖ್ಯೆಗೆ ಬಂದಿದ್ದಾನೆ. ಒಂದನೆಯ ಊಹೆಯೆಂದರೆ ಎಣಿಕೆ ಮಾಡುವ ವ್ಯಕ್ತಿ ದಿನದ 24 ಗಂಟೆ ಕಾಲವೂ ಎಣಿಕೆ ಮಾಡುತ್ತಲೇ ಇರಬೇಕಾಗುತ್ತದೆ. ಎರಡನೆಯ ಊಹೆಯೆಂದರೆ ಪ್ರತಿಯೊಂದು ಸಂಖ್ಯೆಯನ್ನು ಹೇಳಲಿಕ್ಕೂ ಸುಮಾರು 2 ಸೆಕೆಂಡುಗಳಷ್ಟು ಸಮಯ ಬೇಕಾಗುತ್ತದೆ.

ಪ್ರಾಯೋಗಿಕವಾಗಿ ಈ ಎರಡೂ ಊಹೆಗಳು ಕಾರ್ಯಸಾಧುವಲ್ಲ. ಐನೂರು ಅಥವಾ ಸಾವಿರದ ಒಳಗಿನ ಸಂಖ್ಯೆಗಳಿಗೆ ತಲಾ 2 ಸೆಕೆಂಡುಗಳು ಸಾಕೇನೋ, ಆದರೆ ‘ಅರವತ್ತೊಂಬತ್ತು ಸಾವಿರದ  ನಲವತ್ತೆರಡು’ ಅಂತೆಲ್ಲ ಉಚ್ಚರಿಸಲಿಕ್ಕೆ 2 ಸೆಕೆಂಡು ಸಾಲದು. ಟಿವಿ/ರೇಡಿಯೊ ಜಾಹಿರಾತುಗಳ ಕೊನೆಯಲ್ಲಿ ಷರತ್ತುಗಳು ಅನ್ವಯ ಎಂಬಂಥ ವಾಕ್ಯಗಳನ್ನು ಭೇದಿ ಬಂದವರಂತೆ ದಬದಬ ಮಾತನಾಡುತ್ತ ‘ಸ್ಪೀಡ್ ಸ್ಪೀಕಿಂಗ್’ ಮಾಡಿದರೆ ಸರಾಸರಿ ಒಂದೊಂದು ಸಂಖ್ಯೆಗೆ ತಲಾ 2 ಸೆಕೆಂಡು ಸಾಕಾಗಬಹುದು. ಆದರೂ ದಿನಗಟ್ಟಲೆ ನಿರಂತರವಾಗಿ ಎಣಿಸುತ್ತಲೇ ಇರುವುದೆಂದರೆ ತಮಾಷೆನಾ? ದವಡೆಗಳಿಗೆ, ನಾಲಗೆಗೆ, ಮುಖ್ಯವಾಗಿ ಮೆದುಳಿಗೆ ಅಷ್ಟಿಷ್ಟಾದರೂ ವಿರಾಮ ಬೇಡವೇ?

ಹಾಗಾದರೆ, ಪ್ರಾಕ್ಟಿಕಲ್ ಆಗಿ ಒಂದು ಮಿಲಿಯನ್ ಎಣಿಕೆಗೆ ಎಷ್ಟು ಸಮಯ ಬೇಕು?  ಹಾರ್ಪರ್ ಎಂಬುವನೊಬ್ಬ ಸಾಫ್‌ಟ್ವೇರ್ ಎಂಜಿನಿಯರ್ ಮಾಡಿ ತೋರಿಸಿದ ಸಾಹಸದ ಪ್ರಕಾರ, ಸುಮಾರು 89 ದಿನಗಳು ಬೇಕು! 2007ನೆಯ ಇಸವಿಯಲ್ಲಿ ಜೂನ್ 18ರಿಂದ ಸೆಪ್ಟೆಂಬರ್ 14ರವರೆಗೆ ಜೆರೆಮಿ ಹಾರ್ಪರ್ ಪ್ರತಿದಿನವೂ ‘ಊ.ಮ.ಹೇ’ ಮೂರರ ಹೊರತಾಗಿ ಮಾಡುತ್ತಿದ್ದ ಏಕೈಕ ಚಟುವಟಿಕೆಯೆಂದರೆ ಎಣಿಕೆ. ದಿನಕ್ಕೆ ಸುಮಾರು 16 ಗಂಟೆಗಳ ಕಾಲ ಎಣಿಕೆ. ಆ ಮೂರು ತಿಂಗಳಲ್ಲಿ ಆತ ಕ್ಷೌರ ಮಾಡಿಸಲಿಲ್ಲ ಗಡ್ಡ ಬೋಳಿಸಿಕೊಳ್ಳಲಿಲ್ಲ. ಬಾಸ್‌ನಿಂದ ವಿಶೇಷ ರಜೆ ಬೇರೆ ಗ್ರಾಂಟ್ ಆಗಿತ್ತಾದ್ದರಿಂದ ಆಫೀಸಿಗೂ  ಹಗಲೂರಾತ್ರಿಯೂ ತನ್ನ ಎಪಾರ್ಟ್‌ಮೆಂಟ್‌ನಲ್ಲೇ ಇದ್ದು ಎಣಿಕೆ ಉಚ್ಚರಿಸುತ್ತಿದ್ದ ಜೆರೆಮಿ ಹಾರ್ಪರ್, ಅದನ್ನು ಲೈವ್‌ಸ್ಟ್ರೀಮ್ ಮೂಲಕ ಪ್ರಪಂಚಕ್ಕೆ ಬಿತ್ತರಿಸುತ್ತಿದ್ದ. ಏಕತಾನತೆಯಿಂದ ಬಳಲಿಕೆ ಅನಿಸಿದಾಗೆಲ್ಲ ಸ್ವಲ್ಪ ಹೊತ್ತು ಬ್ರೇಕ್‌ಔಟ್ ಡ್ಯಾನ್‌ಸ್ ಮಾಡುತ್ತಿದ್ದ. 89 ದಿನಗಳಾದಾಗ ಎಣಿಕೆಯು ಒಂದು ಮಿಲಿಯನ್‌ಅನ್ನು ತಲುಪಿತು. ಅಂದರೆ ಡೇವಿಡ್ ಶುವಾರ್ಟ್‌ಜ್ನ ಅಂದಾಜಿಗಿಂತ ನಾಲ್ಕುಪಟ್ಟು ಸಮಯ ಬೇಕಾಯ್ತು. ಜೆರೆಮಿ ಹಾರ್ಪರ್‌ಗೆ ಅಂಥದೊಂದು ಸಾಹಸ ಮಾಡಲಿಕ್ಕೆ ಪ್ರೇರಣೆ ಏನು? ದೈಹಿಕ ನ್ಯೂನತೆ ಉಳ್ಳವರನ್ನು ಸಲಹುವ ‘ದಿ ಎಬಿಲಿಟಿ ಎಕ್‌ಸ್ಪೀರಿಯೆನ್‌ಸ್’ ಎಂಬ  ದತ್ತಿನಿಧಿ ಸಂಗ್ರಹಕ್ಕಾಗಿ ಜೆರೆಮಿ ಆ ಸಾಹಸಕ್ಕೆ ಕೈಹಾಕಿದ್ದಾಗಿತ್ತು. ಸುಮಾರು 12000 ಡಾಲರ್‌ಗಳಷ್ಟು ದತ್ತಿನಿಧಿ ಸಂಗ್ರಹಣೆಯೂ ಆಯ್ತು. ‘ಪ್ರಪಂಚದಲ್ಲೇ ಇದುವರೆಗೆ ಗರಿಷ್ಠ ಸಂಖ್ಯೆಯವರೆಗೆ ಎಣಿಕೆ ಮಾಡಿದ ವ್ಯಕ್ತಿ’ ಎಂಬ ಗಿನ್ನೆಸ್ ದಾಖಲೆ ಸಹ ಜೆರೆಮಿಯ ಹೆಸರಿಗೆ ತಳಕುಹಾಕ್ಕೊಂಡಿತು.

ನಾವೆಲ್ಲ ಸುಲಭವಾಗಿ ಊಹಿಸಬಹುದಾದಂತೆ, ಮೂರು ತಿಂಗಳ ಕಾಲ ಪ್ರತಿದಿನವೂ, ಎಚ್ಚರವಿದ್ದ ಸಮಯವನ್ನಷ್ಟೂ ಬರೀ ಎಣಿಕೆಗೆ ವ್ಯಯಿಸುವುದೆಂದರೆ ಒಂಥರದ ಹುಚ್ಚು ಅಲ್ಲದೆ ಬೇರೇನಲ್ಲ. ಮಾನಸಿಕವಾಗಿ ಅದು ತುಂಬಾ ಶ್ರಮ ಅನಿಸಿತು ಎಂದು ಜೆರೆಮಿ  ‘ಆನ್‌ಲೈನ್‌ನಲ್ಲಿ ಲೈವ್‌ಸ್ಟ್ರೀಮ್ ಮಾಡುತ್ತಿದ್ದದ್ದು, ಪ್ರಪಂಚವೆಲ್ಲ ತನ್ನನ್ನು ನೋಡುತ್ತಿದೆ ಎಂಬ ಸಮಾಧಾನ ಇದ್ದದ್ದು, ಆ ಕ್ಯಾಮೆರಾಗಳು ತನಗೆ ಹುರುಪು ತುಂಬಿಸುತ್ತಿದ್ದದ್ದು ಇದನ್ನು ಸಾಧ್ಯವಾಗಿಸಿತು. ಹಾಗಲ್ಲದೆ ಬರೀ ಒಂದು ಕೋಣೆಯಲ್ಲಿ ತಾನೊಬ್ಬನೇ ಇದ್ದು ಎಣಿಕೆ ಮಾಡಿರುತ್ತಿದ್ದಿದ್ದರೆ, ಯಾರೂ ತನ್ನನ್ನು ನೋಡುವವರಿಲ್ಲ ಕೇಳುವವರಿಲ್ಲ ಎಂಬ ಏಕಾಂಗಿತನ ಕಾಡಿದ್ದಿದ್ದರೆ ಒಂದೆರಡು ದಿನಗಳೊಳಗೇ ಹುಚ್ಚು ಹಿಡಿದುಹೋಗುತ್ತಿತ್ತೋ ಏನೋ!’ ಎನ್ನುತ್ತಾನೆ ಜೆರೆಮಿ. 89ನೆಯ ದಿನದಂದು ಕೊನೆಗೂ ಒಂದು ಮಿಲಿಯನ್ ಸಂಖ್ಯೆಯನ್ನು ತಲುಪಿದಾಗ ಬಹುಶಃ ಅವನಿಗೆ, ಮೌಂಟ್ ಎವರೆಸ್ಟನ್ನು  ಎಡ್ಮಂಡ್ ಹಿಲರಿ ಮತ್ತು ತೇನ್‌ಜಿಂಗ್ ನೋರ್ಕೆಗೆ ಹೇಗನಿಸಿತ್ತೋ, ಚಂದ್ರನ ಮೇಲೆ ಪದಾರ್ಪಣ ಮಾಡಿದಾಗ ನೀಲ್ ಆರ್ಮ್‌ಸ್ಟ್ರಾಂಗ್‌ಗೆ ಹೇಗನಿಸಿತ್ತೋ, ಹಾಗೆಯೇ ಅನಿಸಿತ್ತಿರಬಹುದು. ಜೆರೆಮಿಯ ಸಾಹಸವನ್ನು ಇನ್ನೊಂದಿಷ್ಟು ಅಂಕಿಅಂಶಗಳ ಮೂಲಕ ಬಣ್ಣಿಸುವುದಾದರೆ- ಎಣಿಕೆಗೆ ಬೇಕಾದದ್ದು ಒಟ್ಟು 1424 ಗಂಟೆಗಳು. ಅಂದರೆ ಸರಿಸುಮಾರು 5.13 ಮಿಲಿಯನ್ ಸೆಕೆಂಡುಗಳು. ಅದರರ್ಥ ಸಂಖ್ಯೆಯೊಂದಕ್ಕೆ ತಲಾ 5.13 ಸೆಕೆಂಡುಗಳು ಬೇಕಾದವು. ಇದು, ಡೇವಿಡ್ ಶುವಾರ್ಟ್‌ಜ್ನ ಊಹೆಗಿಂತ ದುಪ್ಪಟ್ಟು. ಪ್ರಾಯೋಗಿಕ ಎಂದಿದ್ದು ಅದೇ ಕಾರಣಕ್ಕೆ. ಜೆರೆಮಿಯ ಎಣಿಕೆ ಧಾವಂತದ  ಓಟವಲ್ಲ, ಸಾವಧಾನದ ಮ್ಯಾರಥಾನ್. ನಾಲಗೆಗೆ ಮತ್ತು ದವಡೆಗಳಿಗೆ ನಡುನಡುವೆ ಅಷ್ಟಿಷ್ಟು ವಿರಾಮ ಆವಶ್ಯಕವಿರುತ್ತಿತ್ತು ಮತ್ತು ಅದು ಸಿಗುತ್ತಿತ್ತು.

ಒಂದು ಮಿಲಿಯನ್ ಎಣಿಕೆಗೆ ಅಷ್ಟು ಸಮಯ ಬೇಕಾಯಿತಾದರೆ ಒಂದು ಬಿಲಿಯನ್ ಎಣಿಕೆಗೆ ಎಷ್ಟು ಬೇಕಾಗಬಹುದು? ಒಂದು ಬಿಲಿಯನ್ ಎಂದರೆ ನೂರು ಕೋಟಿ. 1ರ ಮುಂದೆ ಒಂಬತ್ತು ಸೊನ್ನೆಗಳು. ಅಷ್ಟು ಎಣಿಕೆ ಒಬ್ಬ ವ್ಯಕ್ತಿಯಿಂದ ಆಗುವಂಥದ್ದೇ ಅಲ್ಲ. ಒಂದು ಲಕ್ಷದವರೆಗೆ ನಿರಂತರ ಎಣಿಸಬಲ್ಲ ಸುಮಾರು ಹತ್ತುಸಾವಿರ ಜನರು ಸಿಕ್ಕಿದರೆ ಅವರೆಲ್ಲರ ಎಣಿಕೆ  ಮೊತ್ತವನ್ನು ಸೇರಿಸಿದರೆ ಒಂದು ಅಂದಾಜು ಸಿಕ್ಕೀತು. ಹತ್ತುಸಾವಿರ ಹುಚ್ಚರನ್ನು ಎಲ್ಲಿಂದ ಕಲೆಹಾಕೋದು? ಆಗದ ಮಾತು. ಆದರೂ, ಕಾಲ್ಪನಿಕವಾಗಿ ಲೆಕ್ಕ ಹಾಕಬೇಕೆಂದಿದ್ದರೆ, ಜೆರೆಮಿಯಂಥ ಕ್ರೇಜಿಗಳು ಎಣಿಕೆ ಮಾಡಲೊಪ್ಪಿದರೆ, ಒಟ್ಟು ಸುಮಾರು ಹದಿನಾಲ್ಕು ಲಕ್ಷದ ಇಪ್ಪತ್ತನಾಲ್ಕು ಸಾವಿರ ಗಂಟೆಗಳು ಎಣಿಕೆಗೇ ಬೇಕು. ಮತ್ತೆ ನಿದ್ದೆಯ ಎಂಟು ಗಂಟೆಗಳನ್ನೂ ಸೇರಿಸಿದರೆ 89,000 ದಿನಗಳು ಬೇಕು. ಇದು ಸುಮಾರು 244 ವರ್ಷಗಳಿಗೆ ಸಮ! ಜೆರೆಮಿಯ ಮಾಡೆಲ್‌ನಂತಲ್ಲದೆ ಡೇವಿಡ್ ಶುವಾರ್ಟ್‌ಜ್ನ ಮಾದರಿ (ದಿನದ ಇಪ್ಪತ್ತನಾಲ್ಕು ಗಂಟೆಯೂ  ಊ.ಮ.ಹೇ ಬ್ರೇಕ್ ಸಹ ಇಲ್ಲ) ಅಂತಾದರೆ 59,333 ದಿನಗಳು, ಅಂದರೆ ಸುಮಾರು 163 ವರ್ಷಗಳು.

ಇವೆಲ್ಲ ಲೆಕ್ಕಾಚಾರಗಳು ಇಂಗ್ಲಿಷ್‌ನಲ್ಲಿ ಸಂಖ್ಯೆಗಳನ್ನು ಉಚ್ಚರಿಸುವಾಗಿನವು. ಆದರೆ ಕನ್ನಡದಲ್ಲಿ ಮಾಡಿದರೂ ಅಂಥ ವ್ಯತ್ಯಾಸವೇನೂ ಇಲ್ಲ. ಆಗಲೇ ಹೇಳಿದಂತೆ, ಸಾವಿರದೊಳಗಿನ ಸಂಖ್ಯೆಗಳಾದರೆ ಕ್ಷಿಪ್ರವಾಗಿ ಉಚ್ಚರಿಸಬಹುದು. ‘ತೊಂಬತ್ತೊಂಬತ್ತು ಕೋಟಿ ತೊಂಬತ್ತೊಂಬತ್ತು ಲಕ್ಷದ ತೊಂಬತ್ತೊಂಬತ್ತು ಸಾವಿರದ ಒಂಬೈನೂರ ತೊಂಬತ್ತೊಂಬತ್ತು’ ಎಂದು ಹೇಳಿ ಮುಗಿಸಿದಾಗ ರಾತ್ರಿಯಿದ್ದದ್ದು ಬೆಳಗಾಗಬಹುದು! ಇಲ್ಲ, ಆಂಧ್ರಪ್ರದೇಶದವರ ಹೆಸರುಗಳನ್ನು ಇನಿಶಿಯಲ್ಸನ್ನೂ ಎಕ್‌ಸ್ ಪಾಂಡ್ ಮಾಡಿ ಹೇಳಿದಾಗಿನ  ಭಾಸವಾಗಬಹುದು. ಮಿಲಿಯನ್ ಎಣಿಕೆಯಲ್ಲಿನ ಸರಾಸರಿ 5.13 ಸೆಕೆಂಡುಗಳು ಬಿಲಿಯನ್ ಎಣಿಕೆಯಲ್ಲಿ ಸಾಲವು. ಇಲ್ಲಿನ ಸರಾಸರಿ ಸುಮಾರು 6.5 ಸೆಕೆಂಡುಗಳಾಗಬಹುದು. ಅದೂ ಹೇಗೆಂದರೆ ಜೆರೆಮಿ ಹಾರ್ಪರ್ ಮಾಡಿದ್ದಂತೆ ಒಂದು ಸ್ಕ್ರೀನ್ ಮೇಲೆ ಸಂಖ್ಯೆಗಳು ಏರಿಕೆ ಕ್ರಮದಲ್ಲಿ ಡಿಸ್ಪ್ಲೇ ಆಗುತ್ತಾ ಹೋಗುವವು, ಅವುಗಳನ್ನು ಒಂದೊಂದಾಗಿ ಓದಿದರಾಯ್ತು. ಅಂತಹ ಸ್ಕ್ರೀನ್ ಡಿಸ್ಪ್ಲೆ ಇಲ್ಲದಿದ್ದರಂತೂ ಎಣಿಕೆ ಬಹಳ ಕಷ್ಟಕರ. ಒಂದನೆಯದಾಗಿ ಏಕಾಗ್ರತೆ ಬೇಕು. ಈಗ ಉಚ್ಚರಿಸಿದ ಸಂಖ್ಯೆ ಯಾವುದು ಮತ್ತು ಮುಂದೆ ಉಚ್ಚರಿಸಲಿರುವ ಸಂಖ್ಯೆ  ಎಂದು ಗಮನ ಕೇಂದ್ರೀಕೃತ ಆಗಿರಬೇಕು. ಮಾನಸಿಕ ಮತ್ತು ದೈಹಿಕ ಶ್ರಮ, ಸವೆತಗಳ ನಿಭಾವಣೆ ಆಗಬೇಕು. ಬಾಹುಬಲಿಯು ತಪಸ್ಸಿಗೆ ನಿಂತಾಗ ಅವನ ಸುತ್ತಲೂ ಬಳ್ಳಿಗಳೂ ಹುತ್ತಗಳೂ ಬೆಳೆದಂತೆ ಬೆಳೆದರೆ ಎಣಿಕೆ ಹೊರಜಗತ್ತಿಗೆ ಕೇಳಿಸುವುದಾದರೂ ಹೇಗೆ? ಊಹಿಸಲಸದಳ ವಿಚಾರ!

ಬಿಲಿಯನ್ ಆದ ಬಳಿಕ ಮುಂದಿನ ದೊಡ್ಡ ಸಂಖ್ಯೆ ಟ್ರಿಲಿಯನ್. ಒಂದು ಲಕ್ಷ ಕೋಟಿ. 1ರ ಮುಂದೆ ಹನ್ನೆರಡು ಸೊನ್ನೆಗಳು. ಮೊನ್ನೆ ತಾನೆ ಸುದ್ದಿ ಬಂದಿರುವಂತೆ ಈಗ ಆಪಲ್ ಕಂಪನಿಯು ಒಂದು ಟ್ರಿಲಿಯನ್  ವ್ಯವಹಾರವುಳ್ಳ ಏಕೈಕ ಅಮೆರಿಕನ್ ಕಂಪನಿ ಎಂಬ ಅಗ್ಗಳಿಕೆಗೆ ಪಾತ್ರ. ಒಂದು ಟ್ರಿಲಿಯನ್ ಡಾಲರ್‌ಗಳನ್ನು ಒಂದೊಂದಾಗಿ ಎಣಿಸುತ್ತ ಹೋದರೆ, ಸಂಖ್ಯೆಗೆ ತಲಾ ಒಂದೇಒಂದು ಸೆಕೆಂಡು ಅಂದುಕೊಂಡರೂ 31,709 ವರ್ಷಗಳು ಬೇಕು! ನಿಮಿಷವೊಂದಕ್ಕೆ ಸುಮಾರು 600 ಪದಗಳನ್ನು ಉಚ್ಚರಿಸಬಲ್ಲ ಸಿಯಾನ್ ಶ್ಯಾನನ್ ಮತ್ತು ಸ್ಟೀವನ್ ವುಡ್‌ಮೋರ್‌ನಂಥವರು ಎಣಿಸಲಿಕ್ಕೆ ಹೊರಟರೆ ಒಂದಿಷ್ಟು ವರ್ಷಗಳು ಕಡಿಮೆ ಸಾಕಾಗಬಹುದು. ಆದರೂ ಒಂದು ಜನ್ಮದಲ್ಲಿ ಆಗುವಹೋಗುವ ಸಂಗತಿಯಲ್ಲ. ಏಳು ಜನ್ಮಗಳೂ ಸಾಕಾಗಲಿಕ್ಕಿಲ್ಲ. ಒಂದೊಂದು ಜನ್ಮದಲ್ಲೂ ಶತಾಯುಷಿಯಾಗಿ ಆ  ವರ್ಷ ಕಾಲವೂ ಎಣಿಕೆ ಮಾಡುತ್ತಲೇ ಇದ್ದರೆ, ಅಂತಹ ಇಪ್ಪತ್ತೈದು-ಮೂವತ್ತು ಜನ್ಮಗಳು ಬೇಕಾದಾವು ಟ್ರಿಲಿಯನ್ ಸಂಖ್ಯೆಯ ಎಣಿಕೆಗೆ.

ಮಿಲಿಯನ್, ಬಿಲಿಯನ್, ಟ್ರಿಲಿಯನ್‌ಗಳು ಭಾರತೀಯರಾದ ನಮಗೆ ಅಂದಾಜು ಹಿಡಿಯಲಿಕ್ಕೆ ಕಷ್ಟ. ನಮಗೆ ಸಾವಿರ-ಲಕ್ಷ-ಕೋಟಿಗಳೇ ಒಳ್ಳೆಯ ಎಣಿಕೆ ವ್ಯವಸ್ಥೆ. ಕೋಟಿ ಎಂದರೆ ನೂರು ಲಕ್ಷ, ಅರ್ಥಾತ್ ಹತ್ತು ಮಿಲಿಯನ್. ನಮಗೆ ಗೊತ್ತಿರುವಂತೆ ಒಂದು ಮಿಲಿಯನ್ ಎಣಿಕೆಗೆ ಸರಿಸುಮಾರು 89 ದಿನಗಳು ಬೇಕು. ಹಾಗಾದರೆ ಅದರ ಹತ್ತು ಪಟ್ಟು ಎಣಿಕೆಗೆ 890 ದಿನಗಳಾದರೂ ಬೇಕು.  ಎರಡೂವರೆ ವರ್ಷ!

ಈಗ ಗೊತ್ತಾಯ್ತಾ, ಒಂದುವೇಳೆ ನೀವು ಕೋಟ್ಯಧಿಪತಿಯಾದರೆ, ಒಂದು ರೂಪಾಯಿಯ ಗರಿಗರಿ ನೋಟುಗಳನ್ನು ಒಂದು ಕೋಟಿ ಸಂಖ್ಯೆಯಷ್ಟು ನಿಮ್ಮೆದುರು ಕಟ್ಟ್ಟುಗಳಾಗಿ ಪೇರಿಸಿಟ್ಟರೆ, ಅದರಲ್ಲಿ ಒಂದು ಕೋಟಿ ಇರುವುದು ಹೌದು ಎಂದು ಕನ್ಫರ್ಮ್ ಮಾಡಲಿಕ್ಕೆ ನಿಮಗೆ ಎರಡೂವರೆ ವರ್ಷಗಳು ಬೇಕು. ಅಷ್ಟೊತ್ತಿಗೆ ಕೋಟ್ಯಧಿಪತಿಯ ಎರಡು ಸೀಸನ್‌ಗಳು ಮುಗಿದು ಹೋಗಿರುತ್ತವೆ. ಕೋಟ್ಯಧಿಪತಿ ಸರಿಯೋ ಕೋಟ್ಯಾಧಿಪತಿ ಸರಿಯೋ ಎಂಬ ಚರ್ಚೆ ಮಾತ್ರ ಇನ್ನೂ ಮುಗಿದಿರಲಿಕ್ಕಿಲ್ಲ!