About Us Advertise with us Be a Reporter E-Paper

ವಿರಾಮ

ಸ್ಕೂಲ್ ಬ್ಯಾಗೇ ನೀ ಏಕಿಷ್ಟು ಭಾರ?

ಸದಾಶಿವ್ ಸೊರಟೂರು, ದೊಡ್ಡಬೊಮ್ಮನಹಳ್ಳಿ, 

ನನ್ನ ಶಾಲೆಯ ಬ್ಯಾಗೇ, ಕ್ಷಮಿಸು ಬಿಡು. ನಿನ್ನನ್ನು ದೂರಿ ಪತ್ರ ಬರೆಯುವ ಈ ನನ್ನ ಪ್ರಯತ್ನಕ್ಕೆ! ತಡೆಯಲಾಗದೆ ನನ್ನೊಳಗಿನ ತಾಳ್ಮೆಯ ಕಟ್ಟೆ ಹೊಡೆದು ಹೊಯಿತು. ಮೊನ್ನೆ ತಾತ ನಮ್ಮನೆಗೆ ಬಂದಿದ್ದಾಗ ಮೂಟೆಯಂತಿದ್ದ ನಿನ್ನನ್ನು  ಮಾಡಿಕೊಂಡಂತೆ ಕಷ್ಟಪಟ್ಟು ಹೊತ್ತುಕೊಂಡು ಹೋಗುವಾಗ, ಅವರು ನನಗೆ ಮತ್ತು ನಿನಗೆ ಮುದ್ದಾಗಿಯೇ ಛೇಡಿಸಿದರು ಸಾವಿರ ಅರ್ಥಗಳು ಬರುವಂತೆ. ‘ಕಂದ, ಒಂದು ಕತ್ತೆ ಸಾಕಿಕೊಂಡು ಬಿಡು, ನಿನ್ನ ಚೀಲವನ್ನು ಮಕ್ಕಳು ಮಾತ್ರದವರು ಹೊರಲಾರರು. ನಮ್ಮ ಕಾಲದಲ್ಲಿ ಕತ್ತೆಗಳ ಮೇಲೆ ಹೀಗೆ ಭಾರ ಹೊರಿಸಿ ಸಾಗಿಸುತ್ತಿದ್ದೆವು’ ಅಂದು ಬಿಟ್ಟರು!

ಅದು ನಿನಗೆ ಅಂದಿದ್ದ? ನನಗೆ ಅಂದಿದ್ದ? ನಮ್ಮ ಮೇಲೆ ಬ್ಯಾಗ್ ಹೇರಿದವರಿಗೆ ಅಂದಿದ್ದ? ನಂಗೆ ಅಷ್ಟೆಲ್ಲಾ ಗೊತ್ತಾಗಲ್ಲ ಕಣೋ! ಆದರೆ ನನಗೆ  ಯಾಕಿಷ್ಟು ಭಾರವಾಗಿ ಹೋದೆ? ದಿನಾ ಬೆಳಗ್ಗೆ, ಸಂಜೆ ನಿನ್ನ ಹೊತ್ತುಕೊಂಡು ಅಲೆದು ಬರುವಾಗ ನನಗೆ ಪ್ರಾಣ ಹೋದಂತಾಗುತ್ತದೆ. ಅದರಲ್ಲಿ ನಾನೇ ಕುಡಿಯಲು ಕನಿಷ್ಠ ಒಂದು ನೀರಿನ ಬಾಟಲು ಇಟ್ಟುಕೊಳ್ಳದಷ್ಟು ಬರೀ ಪುಸ್ತಕಗಳನ್ನೇ ತುಂಬಿಸಿಕೊಂಡು ಬಿಡುತ್ತೀಯ. ನೀನು ತಾನೇ ಅದೆಷ್ಟು ಭಾರ ತಡೆದುಕೊಳ್ಳಲು ಸಾಧ್ಯ? ಉಸಿರು ಬಿಗಿ ಹಿಡಿದು ಹಿಡಿದು ಸೋತು ಎರಡು ಮೂರು ಕಡೆ ಗಾಳಿಗಾಗಿ ಹರಕುಗಳು ಕಾಣಿಸಿಕೊಂಡಿವೆ ನೋಡು.

ಪ್ರೀತಿಯ ಬ್ಯಾಗೇ, ಇಲ್ಲಿ ಬರೀ ಮರುಕುವಿದೆ, ನಿನ್ನ  ನನ್ನ ಬಗ್ಗೆ ಅಷ್ಟೇ. ಬರೀ ಮರುಕ. ಆದರೆ ಬದಲಾವಣೆ ಇಲ್ಲ. ನಿನ್ನೊಳಗೆ ತುಂಬಿದ ಪುಸ್ತಕ ಹೊತ್ತು ನಡೆಯುವುದು, ಪುಸ್ತಕದಲ್ಲಿರುವುದರಲ್ಲಿ ಬೇಕಾದದ್ದೂ, ಬೇಡವಾದದ್ದೂ ಎಲ್ಲವನ್ನೂ ನಾನು ತಲೆಯಲ್ಲಿ ತುಂಬಿಕೊಂಡು ನಡೆಯಬೇಕು ಸೇಮ್ ನಿನ್ನಂತೆ. ನಾವು ಇರುವುದು ಬರೀ ಇದಕ್ಕೇನಾ? ನೀನು ತುಂಬಿಕೊಂಡಿರುವ ತಲೆದಿಂಬಿನಂತಹ ಗಣಿತ ಪುಸ್ತಕದಲ್ಲಿರುವ ಸೂತ್ರಗಳು ನನಗೆ ಯಾವತ್ತೂ ನಿಜ ಬದುಕಿನಲ್ಲಿ ಸಹಾಯಕ್ಕೆ ಬರಲೇ ಇಲ್ಲ. ಅಷ್ಟೂ ಪ್ರಮೇಯಗಳಲ್ಲಿ ಯಾವೊಂದೂ ಬದುಕಿನಲ್ಲಿ ಉಪಯೋಗಕ್ಕೆ ಬರಲೇ ಇಲ್ಲ. ಯಾಕೆ ಕಲಿಯಬೇಕಾಗಿತ್ತು  ಈಗಲೂ ತಿಳಿಯುತ್ತಿಲ್ಲ. ಹೀಗೆ ಉಪಯೋಗವಾಗದ ರಾಶಿ ರಾಶಿ ಕಸ ತುಂಬಿಕೊಂಡಿದೆ ಅದರಲ್ಲಿ. ಆದರೆ ಹೊತ್ತುಕೊಂಡು ನಡೆಯಲೇ ಬೇಕು ನಿನ್ನ. ಅದು ನನ್ನ ಕರ್ಮ.

ನಿತ್ಯ ಮಲಗುವಾಗ ನನ್ನ ಬೆನ್ನಿನ ಸೆಳೆತ ಕೇಳುವರ್ಯಾರು? ನಿನ್ನ ಹೊತ್ತು ಹೊತ್ತು ಬಾಗಿ ನಡೆಯುವುದೇ ಅಭ್ಯಾಸವಾಗಿಬಿಟ್ಟಿದೆ. ನಾಳೆಯ ದೇಶವನ್ನು ಹೆಗಲಿನಲ್ಲಿ ಎತ್ತಿ ಹಿಡಿಯುವವರು ನಾವಂತೆ. ಆದರೆ ನನ್ನ ಹೆಗಲು, ಬೆನ್ನುಗಳು ಬಾಗಿ ಹೋಗುತ್ತಿವೆಯಲ್ಲಾ ಏನು ಮಾಡಲಿ?

ನಮ್ಮಣ್ಣ ತನ್ನ ಚಿಕ್ಕ ಮೊಬೈಲ್ನಲ್ಲಿ ನೂರಾರು ಪುಸ್ತಕಗಳಿವೆ  ಆದರೂ ಈ ಶಾಲೆಗಳ್ಯಾಕೆ ಇನ್ನೂ ರಾಶಿ ರಾಶಿ ಪುಸ್ತಕಗಳನ್ನು ಬೆನ್ನ ಮೇಲೆ ಹೊರೆಸುತ್ತಿವೆ. ಚೀಲದ ಭಾರ ಕಡಿಮೆ ಮಾಡ್ತೀವಿ ಅಂದಾಗ ನಾ ಖುಷಿಯಾಗ್ತೀನಿ, ನೀನು ಕೂಡ ಖುಷಿಯಾಗುತ್ತಿ. ಆದರೆ ಭಾರ ಕಡಿಮೆಯಾಗಿದ್ದು ಇದುವರೆಗೂ ಇಲ್ಲ. ಜೇಬಿನಲ್ಲಿಟ್ಟುಕೊಂಡು ಹೋಗುವ ಪುಟ್ಟ ಯಂತ್ರದಲ್ಲಿ ನೂರು ಪುಸ್ತಕಗಳು ಹಿಡಿಸುವುದಾದರೆ, ಹತ್ತಾರು ಪುಸ್ತಕಗಳನ್ನು ಯಾಕೆ ಇವರು ನಮ್ಮ ಬೆನ್ನ ಮೇಲೆ ಹೊರೆಸುತ್ತಾರೆ. ನನಗಂತೂ ಒಂದೂ ತಿಳಿಯದು!

ಏನಾದರೂ ಆಗಲಿ, ಇನ್ನಾದರೂ ನಿನ್ನ ತೂಕ ಕಡಿಮೆಯಾಗಲಿ  ನನ್ನಿಂದ ಇನ್ನೂ ಎಷ್ಟು ಅಂತ ಆ ಮಣಭಾರವನ್ನು ಹೊತ್ತುಕೊಂಡು ತಿರುಗಿಸುವೆ ಹೇಳು? ಹೊತ್ತುಕೊಂಡು ನಡೆಯುವುದು ಮಾತ್ರ ಕಲಿಕೆಯಾ? ನನಗೆ ತಿಳಿಯದು. ಏನಾದರೂ ಆಗು, ನೀ ಮೊದಲು ಭಾರ ಕಡಿಮೆಯಾಗು.

   ಇಂತಿ ನಿನ್ನ,

ಸೋತ ಹೆಗಲಿನ ಹುಡುಗ.

Tags

Related Articles

Leave a Reply

Your email address will not be published. Required fields are marked *

Language
Close