About Us Advertise with us Be a Reporter E-Paper

ವಿರಾಮ

ಹುಲಿಕಡ್ಜುಳನ ಗೂಡು ಜೀವಸಂಕುಲದ ಘಾತಕ ಕೀಟ

ಶಶಿಧರ ಹಾಲಾಡಿ

ಹ್ವಾಯ್ ಅಯ್ಯಾ, ನಿಮ್ಮ ಮನೆ ಎದುರಿಗೆ, ಅಡಕೆ ಮರದಲ್ಲಿ ಒಂದು ಗೂಡು ಬೆಳಿತಾ ಉಂಟು,ಕಂಡಿದ್ರ್ಯಾ’ ಎಂದು ಹೊನ್ನಪ್ಪ ಕೇಳಿದಾಗ ‘ಇಲ್ಲ’ ಎಂದು ತಲೆ ಆಡಿಸಿದೆ.

ನೀವು ಮರದ ಹೋಗಿ ಜೋರಾಗಿ ಕೈ ಎತ್ತಿದ್ರೆ ನೀಕತ್, ಅದು ಹುಲಿ ಕಡ್ಜುಳನ ಗೂಡು ಕಾಣಿ. ಈಗ ತೆಂಗಿನ ಕಾಯಿ ಅಷ್ಟು ದೊಡ್ಡದಾಗಿತ್, ಇದನ್ನ ಹೀಂಗೇ ಬಿಟ್ರೆ ಇನ್ನು ಒಂದು ತಿಂಗಳಲ್ಲಿ ಅಕ್ಕಿ ಮುಡಿಯಷ್ಟು ದೊಡ್ಡ ಆತ್. ಕೂಡ್ಲೆ ತೆಗ್ಸುದ್ ಒಳ್ಳೆದ್’ ಎಂದ ಹೊನ್ನಪ್ಪ.

ಹುಲಿ ಕಡ್ಜುಳ ಸುಮಾರು ಒಂದು ಇಂಚು ಉದ್ದದ ಕೀಟ. ಮಾಮೂಲಿ ಕಡ್ಜುಳಕ್ಕಿಂತ ಇದು ಬೇರೆ ಎಂದು ಗುರುತಿಸಲು ‘ಹುಲಿ ಕಡ್ಜುಳ’ ಎಂದು ಹೆಸರಿಟ್ಟಿದ್ದರು ನಮ್ಮ ಹಳ್ಳಿ ಇದಕ್ಕಿಂತ ತುಸು ಚಿಕ್ಕದಾದ, ಎಲೆ ಕಡ್ಜುಳ ಎಂಬ ಹಸಿರು ಬಣ್ಣದ ಇನ್ನೊಂದು ಕೀಟವೂ ಇದೆ. ಹುಲಿ ಕಡ್ಜುಳದ ಮೈಮೇಲೆ ಹಳದಿ ಬಣ್ಣದ ಪಟ್ಟಿ ಇರುವುದರಿಂದ, ಹುಲಿಯ ಮೈವಿನ್ಯಾಸವನ್ನು ಹೋಲುತ್ತದೆ! ಇದನ್ನೇ ಹೋಲುವ ಕುಂಬಾರ ಹುಳ ಎಂಬ, ಸಾಕಷ್ಟು ನಿರುಪದ್ರವಿ ಕೀಟವೂ ನಮ್ಮ ಮನೆ ಸುತ್ತ ಮುತ್ತ ಹಾರಾಡುತ್ತಿರುತ್ತದೆ. ಮನೆಯೊಳಗೆ, ಜಂತಿ ತೊಲೆಗಳಿಗೆ ಅಂಟಿಸಿದಂತೆ, ಮಣ್ಣಿನಿಂದ ಗೂಡು ಕಟ್ಟಿ ಮರಿ ಮಾಡುವ ಕುಂಬಾರ ಹುಳ, ಒಮ್ಮೊಮ್ಮೆ ಕಚ್ಚುವುದೂ ಉಂಟು. ನಾನು ಅದರಿಂದ ಕಚ್ಚಿಸಕೊಂಡು, ಉರಿ ಮತ್ತು ತಾಪವನ್ನು ಅನುಭವಿಸಿದ್ದೆ. ಆದರೆ, ಕುಂಬಾರ ಹುಳಕ್ಕಿಂತ ದೊಡ್ಡ ಗಾತ್ರದ ಹುಲಿ ಕಡ್ಜುಳನ ಕಡಿತ ಸಾಕಷ್ಟು ಅಪಾಯಕಾರಿ ಎಂದು ಕೇಳಿ ಗೊತ್ತಿತ್ತು.

ಮನೆ ಎದುರೇ ಅಡಿಕೆ ಮರ್ನಾಗೆ ಗೂಡು ಕಟ್ಟಿತ್ ಮಾರಾಯ್ರೆ. ಅಡಕೆ ಹೆಡೆ ಬಿದ್ರೆ, ಮಂಗ ಬಂದು ಏನಾದ್ರೂ ಕೀಟಲೆ ಮಾಡಿದರೆ, ಎಲ್ಲಾ ಹುಲಿ ಕಡ್ಜುಳ ಗಳು ಒಟ್ಟಿಗೇ ಬಂದು ಯಾರಿಗಾದರೂ ಕಚ್ಚುವ ಅಪಾಯ ಉಂಟು ಮಾರಾಯ್ರೆ. ಅವು ಕಚ್ಚಿದ್ರೆ, ಕೂಡಲೆ ಆಸ್ಪತ್ರೆಗೆ ಜಾಸ್ತಿ ಹುಳ ಕಚ್ಚಿದರೆ ವಿಷ ಏರಿ, ಜೀವಕ್ಕೇ ಅಪಾಯ’ ಎಂದು ಹೊನ್ನಪ್ಪ ಎಚ್ಚರಿಸಿ, ಕಡ್ಜುಳನ ಗೂಡನ್ನು ಬೇಗನೆ ತೆಗೆಸುವಂತೆ ಸಲಹೆ ನೀಡಿದ. ಅವನ ಮನೆಯೂ ನಮ್ಮ ಮನೆಯ ಹತ್ತಿರದಲ್ಲೇ ಇದ್ದುದರಿಂದ, ಆ ಹುಳಗಳು ಅಕಸ್ಮಾತ್ ಗುಂಪಾಗಿ ಬಂದು ಕಚ್ಚಿದರೆ ಎಂಬ ದಿಗಿಲು ಅವನಿಗೆ.

ಹಗಲು ಹೊತ್ತಿನಲ್ಲಿ ಆ ಗೂಡು ತೆಗೆಯುವುದು ಕಷ್ಟ, ಅವು ಎಲ್ಲಾ ಒಟ್ಟಿಗೇ ಹೊರಗೆ ಬಂದು ಕಚ್ಚುತ್ತವೆ. ಹತ್ತಿರ ಇದ್ದ ಎಲ್ಲರಿಗೂ ಅಪಾಯ. ಕತ್ತಲಾದ ಮೇಲೆ, ಎಣ್ಣೆ ಹಾಕಿ, ಬೆಂಕಿ ಹಾಕಿ ಅವುಗಳನ್ನು ಓಡಿಸಬೇಕು’ ಎಂದ.

ನಮ್ಮ ಮನೆ ಅಂಗಳದಿಂದ ಸುಮಾರು 30 ಅಡಿ ದೂರದಲ್ಲಿದ್ದ ಅಡಿಕೆ ಮರದ ಮೇಲೆ ಬೆಳೆದಿದ್ದ ಕಾಳುಮೆಣಸಿನ ಬಳ್ಳಿಯನ್ನು ಆಧರಿಸಿ ಆ ಹುಳಗಳು ಗೂಡು ಕಟ್ಟಿದ್ದವು. ನಾಲ್ಕಾರು ಹುಳಗಳು ಸುತ್ತಮುತ್ತ ಹಾರಾಡುತ್ತಾ, ಗೂಡಿನೊಳಗೆ ಹೋಗಿಬಂದು ಮಾಡುತ್ತಿದ್ದವು. ತೆಂಗಿನ ಕಾಯಿಯಷ್ಟು ದೊಡ್ಡದಾದ ಬೂದು ಬಣ್ಣದ ಆ ಗೂಡು ಸುಮಾರು ಹತ್ತು ಅಡಿ ಎತ್ತರದಲ್ಲಿತ್ತು. ಹಾಗೇ ಬಿಟ್ಟರೆ, ಗೂಡು ಅಕ್ಕಿ ಮುಡಿಯಷ್ಟು ದೊಡ್ಡದಾಗಬಹುದೆ?

ದಾರಿಯಲ್ಲಿ ಕಡ್ಜುಳದ ಅಟ್ಯಾಕ್

ನಮ್ಮ ಮನೆ ಸುತ್ತ ಮುತ್ತ ಕೆಲಸಗಳಲ್ಲಿ ಸಹಾಯ ಮಾಡುತ್ತಿದ್ದ ಚಿನ್ನಪ್ಪ ಎಂಬುವವನಿಗೆ ಇದನ್ನೆಲ್ಲಾ ವಿವರಿಸಿದೆ. ಕಾಡಿನ ಭಾಗ ಎನಿಸುವ ಆ ಕೀಟಗಳು, ಅವುಗಳ ಗೂಡು ಇವನ್ನು ಬೆಂಕಿ ಹಾಕಿ ಸುಡಲು ಮನಸ್ಸು ಒಪ್ಪುತ್ತಿಲ್ಲ, ಆದರೆ ಆ ಗೂಡಿಗೆ ಬೆಂಕಿ ಹಾಕಿ ಸುಡಬೇಕು ಅಂತ ಹೊನ್ನಪ್ಪ ಹೇಳಿದ್ದನ್ನು ವಿವರಿಸಿದೆ.

ನಿಮಗೆ ಜೀವದ ಮೇಲೆ ಆಸೆ ಇದ್ದರೆ, ಆ ಗೂಡನ್ನು ಬೇಗ ತೆಗೆಸುವುದು ಒಳ್ಳೆಯದು’ ಎಂದ ಮುಗುಂ ಆಗಿ. ‘ಹುಲಿ ಕಡ್ಜುಳ ಕಚ್ಚಿದರೆ ಜೀವಕ್ಕೆ ಅಪಾಯ. ಒಂದೋ, ಎರಡೋ ಕಚ್ಚಿದರೆ ಮುಖ ಇಷ್‌ಟ್ ದಪ್ಪ ಆತ್. ಹತ್ತೋ ಇಪ್ಪತ್ತೋ ಕಚ್ಚಿದರೆ ಜೀವ ಹೋದ ಹಾಂಗೇ’

ಅವು ಸುಮ್‌ಸುಮ್ನೆ ಮನುಷ್ಯರಿಗೆ ಕಚ್ಚುತ್ತವಾ? ಸುಮ್ನೆ ಯಾಕೆ ಕಚ್ಚುತ್ತವೆ?’ ಎಂದು ಕೇಳಿದೆ.

ನಾನು ಎರಡನೆ ಕ್ಲಾಸಿನಲ್ಲಿದ್ದೆ. ಶಾಲೆಯಿಂದ ಮನೆಗೆ ಒಟ್ಟಿಗೇ ಬತ್ತೊದ್ದೊ. ಹಾಡಿ ಹಕ್ಲು ದಾರಿ. ನಮ್ಮ ಜೊತೆ ಒಂದನೆ ಕ್ಲಾಸಿನ ರಾಜಪ್ಪನೂ ಇದ್ದ. ದಾರಿ ಮಧ್ಯೆ, ಅದೆಂತಕೋ ಏನೊ, ಕಡ್ಜುಳಗಳ ಹಿಂಡು ನಮ್ಮನ್ನು ಕಚ್ಚುಕೆ ಶುರು ಮಾಡಿದೊ. ನಾವೆಲ್ಲಾ ಕೂಗಿಕೊಂಡು ಮನೆಗೆ ಓಡಿ ಬಂದೆವು. ರಾಜಪ್ಪ ಮಾತ್ರ ಜಾರಿ ಬಿದ್ನಾ ಕಾಣತ್, ಹುಲಿ ಕಡ್ಜುಳಗಳು ಅವನಿಗೆ ಸಮಾ ಕಚ್ಚಿದೊ…’ ಚಿನ್ನಪ್ಪ ಮುಖ ಸಪ್ಪಗೆ ಮಾಡಿದ.

ಆಮೇಲೆ ಎಂತ ಆಯ್‌ತ್, ಡಾಕ್ಟರ ಹತ್ತಿರ ಹೋದಿರಾ, ಅವನಿಗೆ ತುಂಬಾ ನೋವಾಯ್ತಾ?’

ಬರೇ ನೋವಾ? ಮುಖ, ಮೈ ಎಲ್ಲಾ ಇಷ್ಟು ದಪ್ಪ ಆಯ್ತು. ಕೂಡಲೆ ಅವನನ್ನು ಆಚಾರ್ ಡಾಕ್ಟರ ಹತ್ತಿರ ಕರ್ಕೊಂಡು ಹೋದರು. ಡ್ರಿಪ್ ಹಾಕಿದರು. ಆದರೆ ರಾಜಪ್ಪ ಉಳಿಯಲಿಲ್ಲ’ ಎಂದ ಚಿನ್ನಪ್ಪ, ಮ್ಲಾನವದನದಿಂದ.

ಹುಲಿ ಕಡ್ಜುಳ ಕಚ್ಚಿದರೆ ನಿಜಕ್ಕೂ ಅಪಾಯಕಾರಿನಾ? ನನ್ನ ಪರಿಚಿತ ವೈದ್ಯರಿಗೆ ಫೋನ್ ಮಾಡಿ ಕೇಳಿದೆ. ಈ ರೀತಿಯ ಕೀಟಗಳು (ಹಾರ್ನೆಟ್ ಅಥವಾ ವ್ಯಾಸ್‌ಪ್) ಕಚ್ಚಿದರೆ, ಕೆಲವರಿಗೆ ವಿಪರೀತ ಅಲರ್ಜಿ ಆಗಬಹುದು; ಹತ್ತಾರು ಕೀಟಗಳು ಕಚ್ಚಿದರೆ ಜೀವಕ್ಕೆ ಅಪಾಯವಾಗುವ ಸಾಧ್ಯತೆ. ಮಂಡಲದ ಹಾವಿನಲ್ಲಿರುವಂತಹ ವಿಷ ಈ ಕೀಟಗಳಲ್ಲಿದೆ. ಜೇನುಹುಳಗಳಿಗಿಂತ ಎರಡ ರಷ್ಟು ಅಪಾಯಕಾರಿ ಎಂದರು. ಅವು ಕಚ್ಚಿದಾಗ, ಕೊಂಡಿಯು ಉಳಿದು, ಅದರಿಂದಲೂ ಅಲರ್ಜಿ, ನೋವು, ಊತ ಉಂಟಾಗುತ್ತದೆ ಎಂದರು.

ಚಿನ್ನಪ್ಪನಿಗಂತೂ, ಆ ಗೂಡು ನಮ್ಮ ಮನೆಯ ಹತ್ತಿರ ಇದ್ದರೆ ಮನೆಗೆ ಬರುವ ಎಲ್ಲರಿಗೂ ಅಪಾಯ ಎಂಬ ಅತಿ ಕಾಳಜಿ. ಒಂದು ಸಂಜೆ, ಸೂರ್ಯಾಸ್ತದ ನಂತರ, ಆ ಗೂಡಿಗೆ ಬೆಂಕಿ ಹಚ್ಚಿ ತೆಗೆಯುತ್ತೇನೆ ಎಂದ. ಆದರೂ ನನ್ನ ಮನಸ್ಸಿಗೆ ಕಸಿವಿಸಿ. ಇಕಾಲಜಿಯ ಸರಪಣಿಯಲ್ಲಿ ಹುಲಿ ಕಡ್ಜುಳವೂ ಸೇರಿದಂತೆ, ಎಲ್ಲಾ ಜೀವಿಗಳದ್ದೂ ಪ್ರಮುಖ ಪಾತ್ರ. ಪರಿಸರ ಪ್ರಪಂಚದ ಸಮತೋಲನದಲ್ಲಿ ನಾವು ಹಸ್ತಕ್ಷೇಪ ಎಷ್ಟು ಸರಿ ಎಂಬ ಯೋಚನೆ. ನಮ್ಮ ತಾಲೂಕಿನ ಹಲವು ಸಮಾನಾಸಕ್ತರ ಒಂದು ಫೇಸ್‌ಬುಕ್ ಗ್ರೂಪ್ ಇದೆ. ಅದರಲ್ಲಿ ನನ್ನ ಈ ತಳಮಳ ತೋಡಿಕೊಂಡೆ.

ಕೂಡಲೆ ತೆಗೆಸಿ, ಜಾಗ್ರತೆ ವಹಿಸಿ, ಹತ್ತಿರ ಹೋಗಬೇಡಿ, ಅವು ಕಚ್ಚಿದರೆ ಪಾರ್ಟಿ ಪಡ್ಚ, ರಿಸ್‌ಕ್ ಬೇಡ, ರಾತ್ರಿಯಾದ ನಂತರ ಅವನ್ನು ಓಡಿಸಿ… ’ಈ ರೀತಿಯ ಅಭಿಪ್ರಾಯಗಳು ತೇಲಿಬಂದವು. ಓರ್ವ ಹಿರಿಯರು ತಮ್ಮ ಅನುಭವವನ್ನು ವಿವರವಾಗಿ ಹಂಚಿಕೊಂಡಿದ್ದರು. ‘1978ರಲ್ಲಿ ನನಗೆ 87 ಹುಲಿ ಕಡ್ಜುಳ ಕಚ್ಚಿದ್ದವು. ಗೂಡಿಗೆ ಯಾರೊ ಕಲ್ಲು ಹೊಡೆ ದಿದ್ದರಂತೆ. ನನಗೆ ಗೊತ್ತಿಲ್ಲದೆ ಆ ದಾರಿಯಲ್ಲಿ ಬಂದೆ. ಮಳೆ ಗಾಲದ ಆರಂಭದ ದಿನ. ಗದ್ದೆ ಯಲ್ಲಿ ಹೂಟಿ ಮಾಡುತ್ತಿದ್ದ ಓರ್ವ ಪುಣ್ಯಾತ್ಮ ನನ್ನತ್ತ ಕಂಬಳಿ ಎಸೆದು ಸ್ವಲ್ಪ ಬಚಾವು ಮಾಡಿದ. 4 – 5 ಹುಳ ಕಚ್ಚುವ ತನಕ, ದೇಹಕ್ಕೆ ಮೊಳೆ ಹೊಡೆದಂತಹ ನೋವು. ಆನಂತರ ಇಡೀ ದೇಹಕ್ಕೆ ಭಾರೀ ಶಾಕ್ ಹೊಡೆದಂತಹ ಅನುಭವ. ನನಗೆ ವಾಂತಿ ಬೇಧಿ ಶುರು ಆಯಿತು. ಡಾಕ್ಟರು ಕೊಂಡಿಗಳನ್ನು ದೇಹದಿಂದ ಕಿತ್ತು ತೆಗೆದರು. ಸಾವು ಬದುಕಿನ ನಡುವೆ ಹೋರಾಟ ಮಾಡಿ, ಗೆದ್ದು ಬಂದೆ…’ ಫೇಸ್‌ಬುಕ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದ ಹೆಚ್ಚಿನವರು ಆ ಗೂಡನ್ನು ಕೂಡಲೆ ತೆಗೆಸುವುದು ಒಳ್ಳೆಯದು, ಇಲ್ಲವಾದರೆ ಜೀವಕ್ಕೆ ಅಪಾಯವಿದೆ ಎಂದೇ ಬರೆದಿದ್ದರು.

ಈ ಕೀಟಗಳ ಕುರಿತು ಇಂಟರ್‌ನೆಟ್‌ನಲ್ಲಿ ಹುಡುಕಿದೆ. ಜಪಾನ್‌ನಲ್ಲಿ ವರ್ಷಕ್ಕೆ ಸರಾಸರಿ 30 ಮಂದಿ ಇವುಗಳ ಕಡಿತದಿಂತ ಸಾಯುತ್ತಾರಂತೆ! ಚೀನಾದಲ್ಲೂ ವಾರ್ಷಿಕ ಸರಾಸರಿ 50 ಜನ ಇವು ಗಳಿಂದ ಸಾಯುತ್ತಾರೆ. ಒಂದು ಗೂಡಿನಲ್ಲಿ 500ರಿಂದ ಕೀಟಗಳಿರುತ್ತವೆ. ಅವುಗಳ ಗೂಡಿಗೆ ತೊಂದರೆ ಯಾದರೆ, ಸಿಕ್ಕ ಸಿಕ್ಕವರಿಗೆ ಕಚ್ಚುವುದು ಅವುಗಳ ಗುಣ.

ಮನೆ ಎದುರಿನ ಅಡಿಕೆ ಮರದಲ್ಲಿ ಹಬ್ಬಿದ್ದ ಕಾಳುಮೆಣಸಿನ ಬಳ್ಳಿಗೆ ತಮ್ಮ ಗೂಡನ್ನು ಅಂಟಿಸಿದ್ದ ಆ ಹುಲಿಕಡ್ಜುಳಗಳ ಹಾರಾಟವನ್ನು ಗಮನಿಸತೊಡಗಿದೆ. ಮರದ ತೊಗಟೆಯ ಮಿಶ್ರಣವನ್ನು ತಮ್ಮ ಎಂಜಲಿನಿಂದ ಅಂಟಿಸುತ್ತಾ, ಗೂಡಿನ ಗಾತ್ರವನ್ನು ನಿಧಾನವಾಗಿ ವೃದ್ಧಿ ಮಾಡುವುದರಲ್ಲಿ ಮಗ್ನವಾಗಿದ್ದವು. ಹತ್ತಿರ ನಿಂತು ನೋಡುವುದರಲ್ಲಿ ಯಾವ ಅಪಾಯವೂ ಇಲ್ಲ. ಅವಷ್ಟಕ್ಕೆ ಅವು ಹಾರಾಡಿಕೊಂಡು, ಸುತ್ತಲಿನ ಪರಿಸರದಲ್ಲಿ ಒಂದಾಗಿ, ತಮ್ಮ ಚಕ್ರವನ್ನು ಮುಂದುವರಿಸಿಕೊಂಡು ಬರುತ್ತಿರುವ ಪುಟಾಣಿ ಕೀಟಗಳು. ಅಕಸ್ಮಾತ್ ರೊಚ್ಚಿಗೆದ್ದು, ಹತ್ತಿರ ಸುಳಿದ ಮನುಷ್ಯ ಅಥವಾ ಪ್ರಾಣಿಗಳಿಗೆ ಕಚ್ಚಿದರೆ ಮಾತ್ರ ಅಪಾಯ ಸಂಭಾವ್ಯತೆ. ಈ ಮಧ್ಯೆ ಚಿನ್ನಪ್ಪ ಫೋನ್ ಮಾಡಿದ್ದ. ನಾಲ್ಕಾರು ದಿನ ಅಕೇಶಿಯಾ ತೋಪು ಕಡಿಯುವ ಕೆಲಸಕ್ಕೆ ಹೋಗ್ತಿದೀನಿ, ಪುರಸೊತ್ತು ಮಾಡಿಕೊಂಡು, ಮನೆ ಹತ್ತಿರ ಬರ್ತೀನಿ, ಕತ್ತಲಾದ ಮೇಲೆಯೇ ಹುಲಿ ಕಡ್ಜುಳದ ಗೂಡು ತೆಗೆಯಲು ಸಾಧ್ಯ ಅಂದ. ಅಕೇಶಿಯಾ ಮರ ಕಡಿಯುವುದು ನಮ್ಮ ಕಡೆ ಈಗ ಒಂದು ಪ್ರಮುಖ ಮೂಲವಾಗಿಬಿಟ್ಟಿದೆ.

ಒಂದೆರಡು ದಿನಗಳಲ್ಲಿ, ನಾನು ತುರ್ತಾಗಿ ಬೆಂಗಳೂರಿಗೆ ಹೊರಡಬೇಕಾಯ್ತು. ರಿಸರ್ವೇಷನ್ ದೊರೆಯದೇ, ಕೆಂಪು ಬಸ್ಸಿನಲ್ಲಿ ಕೂತು ಬೆಂಗಳೂರು ತಲುಪಬೇಕಾದ ಅನಿವಾರ್ಯತೆ. ಈ ಮಹಾನಗರದಲ್ಲಿ ಕೆಲಸದ ಮಧ್ಯೆ ಹುಲಿ ಕಡ್ಜುಳಗಳ ಗೂಡಿನ ವಿಚಾರ ಮರೆತೇ ಹೋಗಿತ್ತು. ಒಂದು ಸಂಜೆ ಎಂಟು ಗಂಟೆಯ ಸಮಯ. ಮೊಬೈಲ್ ಗಂಟೆ ಬಾರಿಸಿತು. ಚಿನ್ನಪ್ಪ ಫೋನ್ ಮಾಡಿದ್ದ. ‘ಹ್ವಾಯ್, ಅಯ್ಯ, ಇವತ್ ನಿಮ್ಮ ಮನೆ ಹತ್ರ ಬಂದಿದ್ದೆ. ಕತ್ತಲಾಗಿತ್ತು. ನೀವು ಇರಲಿಲ್ಲ. ನೀವು ಹೇಳಿದ್ರಲ್ಲ, ಆ ಕಡ್ಜುಳನ ಗೂಡಿನ ವಿಚಾರ. ಅರ್ಧ ಲೀಟರ್ ಡೀಸಲ್ ತಂದು, ಬಟ್ಟೆಯನ್ನು ಅದ್ದಿ, ಒಂದು ಕೋಲಿನ ತುದಿಗೆ ಆ ಬಟ್ಟೆ ಕಟ್ಟಿ, ಗೂಡಿಗೆ ಬೆಂಕಿ ತಾಗಿಸಿದೆ. ಬರ್ ಅಂತ ಉರಿದು ಹೋಯ್ತು. ಇನ್ ಅದರ ಹೆದರಿಕೆ ಇಲ್ಲ….’ ಏನೆಂದು ಉತ್ತರಿಸುವುದು ಎಂದು ತಕ್ಷಣ ಹೊಳೆಯದೇ, ಅವನ ಮಾತುಗಳನ್ನು ಪೂರ್ತಿ ಕೇಳಿಸಿಕೊಂಡು, ಫೋನ್ ಕಟ್ ಮಾಡಿದೆ.

Tags

Related Articles

Leave a Reply

Your email address will not be published. Required fields are marked *

Language
Close