ಅಂಕಣಗಳು
ಗಂಡನೇ ಹೀರೋ! ಹೆಂಡತಿಯೇ ಹೀರೋಯಿನ್!
ಇಲ್ಲಿರುವ ಘಟನೆ ವಿಚಿತ್ರ ದಂಪತಿಗಳನ್ನು ಕುರಿತಾಗಿ ಇಲ್ಲಿ ಗಂಡನೇ ಹೀರೋ! ಹೆಂಡತಿಯೇ ಹೀರೋಯಿನ್! ಇಲ್ಲಿ ಹೀರೋಯಿನ್ ಬಗ್ಗೆ ಬರೆದಿರುವುದು ಸರಿಯಿಲ್ಲ ಎಂದು ನಿಮಗೆ ಅನಿಸಿದರೆ, ಗಂಡ–ಹೆಂಡತಿಯರ ಪಾತ್ರಗಳನ್ನು ಅದಲು–ಬದಲು ಮಾಡಿಕೊಂಡು ಓದಿಕೊಳ್ಳಬಹುದು!
ಒಮ್ಮೆ ವೈದ್ಯರೊಬ್ಬರ ಬಳಿ ವ್ಯಕ್ತಿಯೊಬ್ಬರು ಬಂದರು. ವ್ಯಕ್ತಿ ಕುಂಟುತ್ತಿದ್ದರು. ಅವರ ಮೊಣಕಾಲು ಊದಿಕೊಂಡಿತ್ತು. ತುಂಬ ನೋವಿನಿಂದ ನರಳುತ್ತಿದ್ದರು. ಆ ಮೊಣಕಾಲನ್ನು ನೋಡಿದ ತಕ್ಷಣ ವೈದ್ಯರೇ ಗಾಬರಿಯಾದರು. ನಿಮ್ಮ ಮೊಣಕಾಲು ಮುರಿದಿರುವಂತಿದೆ. ಅದಕ್ಕೇ ಅದು ಊದಿಕೊಂಡಿದೆ. ನಿಮಗೆ ತುಂಬ ನೋವು ಆಗುತ್ತಿರಬೇಕು. ಹೀಗಾಗಿ ಬಹಳ ಹೀಗಾದದ್ದು ಯಾವಾಗ? ಎಂದು ಕೇಳಿದರು. ಆತ ನೋವಿನಿಂದ ನರಳುತ್ತಲೇ ಇದಾಗಿ ಮೂರು ತಿಂಗಳಾಯಿತು ಎಂದರು. ವೈದ್ಯರು ಕಣ್ಣರಳಿಸಿ ನೋಡುತ್ತ ಮೂರು ತಿಂಗಳ ಹಿಂದೆಯೇ ಹೀಗಾಗಿದ್ದರೂ, ಇಷ್ಟು ದಿನ ಏಕೆ ವೈದ್ಯರ ಬಳಿ ಬರಲಿಲ್ಲ?
ಎಂದು ಕೇಳಿದರು. ಆತ ಓ ಡಾಕ್ಟರೇ! ನನ್ನ ಪರಿಸ್ಥಿತಿಯನ್ನು ಹೇಗೆ ವಿವರಿಸಲಿ? ಮೂರು ತಿಂಗಳ ಹಿಂದೆ ಒಂದು ದಿನ ನಾನು ರಸ್ತೆಯಲ್ಲಿ ನಡೆದುಹೋಗುತ್ತಿದ್ದೆ. ನನ್ನ ಹೆಂಡತಿಯೂ ನನ್ನ ಸಂಗಡ ಇದ್ದಳು. ನಾನು ಇದ್ದಕ್ಕಿದ್ದಂತೆ ರಸ್ತೆಯಲ್ಲಿ ನನ್ನ ಮೊಣಕಾಲು ತುಂಬ ನೋಯತೊಡಗಿತು. ನಾನು ವೈದ್ಯರ ಬಳಿ ಹೋಗಬೇಕು ಎಂದಾಗ, ನನ್ನ ಹೆಂಡತಿ’ ರಸ್ತೆಯಲ್ಲಿ ಎಲ್ಲೆಲ್ಲೋ ನೋಡಿಕೊಂಡು ನಡೆದರೆ ಹೀಗೆಯೇ ಆಗುತ್ತದೆ. ನಿಮ್ಮೂರಿನವರೇ ಹೀಗೆ! ಸಣ್ಣ–ಪುಟ್ಟದ್ದಕ್ಕೆಲ್ಲ ವೈದ್ಯರ ಬಳಿ ಹೋಗಬೇಕೆನ್ನುತ್ತೀರಿ. ನಿಮಗೇನೂ ಆಗಿಲ್ಲ ಸುಮ್ಮನಿರಿ’ ಎಂದುಬಿಟ್ಟಳು.
ನಾನೂ ಸುಮ್ಮನಾದೆ. ಆದರೆ ಒಂದು ತಿಂಗಳಾದರೂ ನೋವು ಹಾಗೇ ಇತ್ತು. ಕಡಿಮೆಯಾಗುವುದರ ಬದಲು ದಿನೇದಿನೇ ಹೆಚ್ಚಾಗುತ್ತಿತ್ತು. ನೋವನ್ನು ತಡೆಯಲಾರದೆ ವಿಸ್ಕಿ ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡೆ. ಅದರ ಅಮಲಿನಲ್ಲಿದ್ದಾಗಲೆಲ್ಲ ನನಗೆ ನೋವು ಅನಿಸುತ್ತಿತ್ತು. ಅಮಲು ಇಳಿದ ನಂತರ ಮತ್ತೆ ನೋವು ಇನ್ನೂ ಹೆಚ್ಚಾಗುತ್ತಿತ್ತು. ಆಗ ನಾನು ವೈದ್ಯರ ಬಳಿ ಹೋಗಬೇಕು ಎಂದಾಗಲೂ ನನ್ನ ಮಡದಿ ’ಅಷ್ಟೊಂದು ವಿಸ್ಕಿ ಕುಡಿದರೆ ಇನ್ನೇನಾದೀತು? ಕುಡಿಯುವುದು ಕಡಿಮೆ ಮಾಡಿದರೆ ಎಲ್ಲ ಸರಿಹೋಗುತ್ತದೆ’ ಎಂದುಬಿಟ್ಟಳು.
ನಾನು ವಿಸ್ಕಿ ಕುಡಿಯುವುದನ್ನು ಕಡಿಮೆ ಮಾಡಿದೆ. ಆದರೆ ನೋವು ಹಾಗೆಯೇ ಇತ್ತು. ಅದನ್ನು ತಡೆದುಕೊಳ್ಳಲು ಸಿಗರೇಟ್ ಸೇದಲಾರಂಭಿಸಿದೆ. ಆಗಲೂ ನೋವು ಕಡಿಮೆಯಾಗಲಿಲ್ಲ. ಮತ್ತೆ ನನಗೆ ತುಂಬ ನೋವಾಗುತ್ತಿದೆ ಎಂದಾಗ, ನನ್ನ ಹೆಂಡತಿ ಸಿಗರೇಟ್ ಸೇದಿದರೆ ಇನ್ನೇನಾಗುತ್ತದೆ? ಮೊದಲು ಸಿಗರೇಟ್ ಸೇದುವುದನ್ನು ಬಿಡಿ. ಎಲ್ಲ ಸರಿಹೋಗುತ್ತದೆ’ ಎಂದಳು. ಸಿಗರೇಟ್ ಸೇದುವುದನ್ನೂ ಬಿಟ್ಟೆ. ಆದರೂ ನೋವು ಕಡಿಮೆಯಾಗುತ್ತಿಲ್ಲ. ನೋವು ತಡೆದುಕೊಳ್ಳಲೂ ಆಗುತ್ತಿಲ್ಲ. ಅವಳು ಏನು ಬೇಕಾದರೂ ಅಂದುಕೊಳ್ಳಲಿ ಎಂದು ತೀರ್ಮಾನಿಸಿಕೊಂಡು, ಇಂದು ನಿಮ್ಮ ಬಳಿ ಬಂದಿದ್ದೇನೆ. ದಯವಿಟ್ಟು ನನ್ನನ್ನು ಈ ನೋವಿನಿಂದ ಬಿಡುಗಡೆ ಮಾಡಿ ಎಂದು ಕೇಳಿಕೊಂಡರು. ಅದಾದ ನಂತರ ವೈದ್ಯರು ನೀಡಿದ ಸೂಕ್ತ ಚಿಕಿತ್ಸೆಯಿಂದಾಗಿ ಅವರ ನೋವು ಕಡಿಮೆಯಾಯಿತಂತೆ.
ಅವರು ಗುಣಮುಖರಾದರಂತೆ: ತಾವು ಶಾಸ್ತ್ರವನ್ನು ಅಧ್ಯಯನ ಮಾಡದಿದ್ದರೂ, ಎಲ್ಲ ಕಾಯಿಲೆಗಳಿಗೆ ಕಾರಣಗಳನ್ನು ಕಂಡುಹಿಡಿಯುವ, ಚಿಕಿತ್ಸೆಯನ್ನು ಸೂಚಿಸುವ ಜನರು ಆ ವಿಚಿತ್ರ ದಂಪತಿಗಳಲ್ಲೇ ಅಲ್ಲ, ನಮ್ಮ ಸುತ್ತಮುತ್ತಣ ಸಮಾಜದಲ್ಲೂ ಕಂಡು ಬರುತ್ತಾರಲ್ಲವೇ? ಅಂತಹ ಮಾತುಗಳನ್ನಾಡಬೇಕೆಂಬ ಚಪಲ ನಮಗಿಲ್ಲವೇ ಎಂಬುದನ್ನು ನಮಗೆ ನಾವೇ ಕೇಳಿಕೊಳ್ಳಬಹುದು. ಮತ್ತೊಂದು ಮಾತು! ಮೇಲಿನ ಘಟನೆ ಕಾಲ್ಪನಿಕ! ಆದುದರಿಂದ ಆ ಗಂಡ–ಹೆಂಡತಿಯರನ್ನು ದೂಷಿಸಬಾರದಲ್ಲವೇ? ಅವರಂತೆ ಆಗಲೂ ಬಾರದಲ್ಲವೇ?