About Us Advertise with us Be a Reporter E-Paper

ಅಂಕಣಗಳು

ನಾನು ರಾಜಕಾರಣಿಯಾಗಲಾರೆ ….!

ಸಮಕಾಲೀನ ರಾಜಕಾರಣದ ಬಗ್ಗೆ ಮಕ್ಕಳ ದಿನಾಚರಣೆ ಅಂಗವಾಗಿ ವಿಶ್ವವಾಣಿ ಮಕ್ಕಳ ಅಭಿಪ್ರಾಯ ಕೇಳಿತ್ತು. ಅದಕ್ಕೆ ಕೆಲವು ಚಿಣ್ಣರು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಅವು ನಮ್ಮ ಓದುಗರಿಗಾಗಿ.

ಇಂದಿನ ಬಹುತೇಕ ರಾಜಕಾರಣಿಗಳು ವಂಚನೆ, ಭ್ರಷ್ಟಾಚಾರ, ಅನೈತಿಕತೆಯಲ್ಲಿ ಮುಳುಗಿದ್ದಾರೆ. ಗೋಸುಂಬೆ ಮಾತುಗಳು ಕೆಟ್ಟ ನಡೆಗಳಿಂದ ಹೀನಾಯ ಸ್ಥಿತಿಯಲ್ಲಿದ್ದಾರೆ.

ನನ್ನ ಅನಿಸಿಕೆಯ ಪ್ರಕಾರ ನಮ್ಮ ರಾಜಕಾರಣಿಗಳು ಪ್ರಾಮಾಣಿಕತೆ, ಉತ್ತಮ ನಡತೆ, ಬಡ ಜನರಿಗಾಗಿ ಮಿಡಿಯುವ ಹೃದಯ ಉಳ್ಳವರಾಗಿಬೇಕೆನಿಸುತ್ತದೆ. ಇವರನ್ನೆಲ್ಲ ಕಂಡಾಗ ನಾನಂತೂ ಮುಂದೆ ಖಂಡಿತಾ ರಾಜಕಾರಣಿಯಾಗಲಾರೆ! ಹಾಗಾಗಿ ರಾಜಕಾರಣಿಗಳು ಎಂದಾಕ್ಷಣ ನನ್ನ ಮನದಲ್ಲಿ ಅಸಹ್ಯ ಭಾವನೆ ಮೂಡುತ್ತದೆ.

ಎಂ.ಅದ್ವಿತರಾವ್
ಫ್ರಿಡಂ ಇಂಟರ್‌ನ್ಯಾಷನಲ್ ಸ್ಕೂಲ್
ಬೆಂಗಳೂರು.

ಜಾತಿ ರಾಜಕೀಯ ಬಿಟ್ಟುಬಿಡಿ

ಕರ್ನಾಟಕದ ರಾಜಕಾರಣ ಗಮನಿಸಿದಾಗ ಅದರಲ್ಲಿ ಜಾತಿವಾದ, ಒಂದು ಮತದ ಜನರನ್ನು ಮಾತ್ರ ಗಣನೆಗೆ ತೆಗೆದುಕೊಳ್ಳುವುದು, ಆ ಜನ ಸಮುದಾಯವನ್ನು ಮತಬ್ಯಾಂಕ್ ಅಗಿ ಪರಿವರ್ತಿಸುವುದನ್ನು ಕಾಣಬಹುದು.
ಈಗಿನ ರಾಜಕೀಯ ಪರಿಸ್ಥಿತಿಯನ್ನು ನೋಡಿದರೆ ಒಬ್ಬರು ಪ್ರಾದೇಶಿಕ ಪಕ್ಷ ಎಂದರೆ, ಇನ್ನೊಬ್ಬರು ಹಿಂದುತ್ವ ಎಂದೂ, ಮತ್ತೂ ಕೆಲವರು ಪ್ರತ್ಯೇಕ ಧರ್ಮ, ಜಯಂತಿಗಳ ಹೆಸರಲ್ಲಿ ರಾಜಕೀಯ ಮಾಡುತ್ತಾ ಬಂದಿದ್ದಾರೆ.

ಅವರ ಮಾತುಗಳನ್ನು ಕೆಲವರು ನಾನು ಅಹಿಂದ ಎಂದು ಹೇಳಿ ನಂತರ ಚುನಾವಣೆಯ ಸಂದರ್ಭದಲ್ಲಿ ನಾನು ಹಿಂದು ನನ್ನ ಹೆಸರಲ್ಲಿಯೂ ರಾಮನಿದ್ದಾನೆ ಎನ್ನುತ್ತಾರೆ. ಕೆಲವರು ಈ ರೀತಿ ಜನರ ಭಾವನೆಗಳ ಜತೆ ಆಟವಾಡುತ್ತಾ ಅಧಿಕಾರಕ್ಕೆ ಬಂದರೆ, ಅನ್ನದಾತನ ಸಾಲ ಮನ್ನಾ ಮಾಡುತ್ತೇವೆಂಬ ಭರವಸೆಗಳನ್ನು ನೀಡುತ್ತಾ, ಯಾವ ಪಕ್ಷದ ಜತೆಗೂ ಸೇರುವುದಿಲ್ಲ ಎಂದು ಹೇಳುತ್ತಾರೆ. ಅಧಿಕಾರದಾಸೆಗಾಗಿ ಬಲಿಯಾಗಿ ಅವರೇ ವಿರೋಧ ಪಕ್ಷದೊಂದಿಗೆ ಒಂದಾಗುತ್ತಾರೆ. ಕೆಲರಂತೂ ಟಿಪ್ಪುವನ್ನು ಹೊಗಳಿ, ಅವನ ಖಡ್ಗ ಹಿಡಿದು, ಅಲ್ಲಾಹುವಿನ ಮೇಲೆ ಪ್ರಮಾಣಗಳನ್ನು ಮಾಡಿ ಯಾವ ಪಕ್ಷ ಸೇರುವುದಿಲ್ಲ ಎನ್ನುತ್ತಾರೋ, ಮುಂದೆ ಅದೇ ಪಕ್ಷದ ಜತೆಯಾಗುತ್ತಾರೆ. ಇದನ್ನೆಲ್ಲಾ ನೋಡಿದರೆ ಯಾರಿಗೆ ಮತ ನೀಡಲಿ ಎಂಬ ಸಂದೇಹ ಮೂಡುತ್ತದೆ.

ಇತ್ತೀಚೆಗಿನ ದಿನಗಳಲ್ಲಿ ಸಮಾಜದಲ್ಲಿ ಆಗುತ್ತಿರುವ ರಾಜಕೀಯ ಕಚ್ಚಾಟಗಳನ್ನು ನೋಡುವಾಗ ರಾಜಕರಣ ಎಂದರೆ ಇಷ್ಟೇ ಏನೋ ಎನಿಸುತ್ತದೆ. ಇನ್ನು ಕಾನೂನುಗಳೂ ಇಂಥವರದ್ದೇ ಪರವಾಗಿದೆ. ಆದ್ದರಿಂದ ಅವರನ್ನು ಏನೂ ಮಾಡಲೂ ಆಗುವುದಿಲ್ಲ. ನಾನು ದೊಡ್ಡವನಾದ ಮೇಲೆ ರಾಜಕಾರಣಿಯಾಗುವ ಆಸೆ ಇದೆ. ಹೀಗೆ ನಾನು ಮುಂದೊಮ್ಮೆ ರಾಜಕಾರಣಿಯಾಗುವೆನೊ ಅದು ಬಲವೊ ಅಥವಾ ಎಡವೊ ಅಥವಾ ಮಧ್ಯಮವೊ ಗೊತ್ತಿಲ್ಲ. ನಾನು ಮೇಲೆ ಬರೆದಿರುವುದು ಕರ್ನಾಟಕದ ರಾಜಕಾರಣಿಗಳ ಬಗ್ಗೆ, ಇನ್ನು ಭಾರತದ ಎಲ್ಲಾ ರಾಜಕಾರಣಿಗಳ ಬಗ್ಗೆ ಬರೆದರೆ ಒಂದು ಗ್ರಂಥವೇ ಅಗುತ್ತದೆಯೋ ಏನೋ.

ವಸುಶ್ರುತ ಶರ್ಮ, ಬೆಂಗಳೂರು

ಜೇಬು ತುಂಬಿಸಿಕೊಳ್ಳುವವರು!

ಇಂದಿನ ರಾಜಕೀಯ ಸಾಮಾನ್ಯ ಜನರ ಕಣ್ಣೀರು ಒರೆಸುವ ಬದಲು ತಮ್ಮ ಜೇಬು ತುಂಬಿಸಿಕೊಳ್ಳುವ ವ್ಯವಸ್ಥೆಯಾಗಿದೆ. ನಿಜವಾದ ಕಾಳಜಿ ಇರುವವರು ತಾವು ನೀಡಿದ ಭರವಸೆಗಳನ್ನು ಈಡೇರಿಸುತ್ತಿದ್ದರು. ಆದರೆ ಇಂದಿನ ಇದಕ್ಕೆ ತದ್ವಿರುದ್ಧವಾಗಿದ್ದಾರೆ. ಅಧಿಕಾರ ಇಲ್ಲದಿರುವಾಗ ಒಂದು ರೀತಿ ಇದ್ದರೆ, ಅಧಿಕಾರ ಸಿಕ್ಕಿದ ಮೇಲೆ ಮತ್ತೊಂದು ರೀತಿ ವರ್ತಿಸುತ್ತಾರೆ. ಅವರಿಗೆ ಜನರಿಗೆ ಉತ್ತಮ ಆಡಳಿತ ನೀಡುವ ಮುಂಚೆ ಸ್ವಹಿತಾಸಕ್ತಿಯೇ ಕಾಣಸಿಗುತ್ತದೆ. ಹೀಗಿರುವಾಗ ಇಂಥವರಿಂದ ಸಮಾಜದ ಉದ್ದಾರ ಬಯಸುವುದಾದರೂ ಹೇಗೆ?

ದೀಕ್ಷಿತ್ ಎಸ್. ಕುಪ್ಪಾಳ್ ಆನಂದಪುರ

ರಾಜಕೀಯವೆಂದರೆ ಸಮಾಜ ಸೇವೆ

ರಾಜಕೀಯ ಒಂದು ಸೇವಾ ಕ್ಷೇತ್ರ ಎಂಬ ಭಾವನೆ ಬಹುತೇಕ ರಾಜಕಾರಣಿಗಳಲ್ಲಿ (ಪ್ರಾಮಾಣಿಕರನ್ನು ಹೊರತುಪಡಿಸಿ) ಕಂಡುಬರುತ್ತಿಲ್ಲ. ಇದು ಅವರ ಪಾಲಿಗೆ ರೀತಿಯ ದೊಡ್ಡಮಟ್ಟದ ಉದ್ದಿಮೆಯಂತಾಗಿದೆ. ನಿವೃತ್ತಿಯೇ ಇಲ್ಲದ ಸೇವೆಯ ಹೆಸರಿನಲ್ಲಿ ನಡೆಸಬಹುದಾದ ಲಾಭಾನ್ವಿತ ದುಡಿಮೆಯಾಗಿದೆ. ಸಾಮಾಜಿಕ ಕಾಳಜಿಯುಳ್ಳವರು ಮಾತ್ರ ರಾಜಕೀಯಕ್ಕೆ ಬರಬೇಕೇ ಹೊರತು ಪ್ರತಿಷ್ಠೆ, ಅಧಿಕಾರದ ಆಸೆ, ಹಣ ಸಂಪಾದಿಸುವುದಕ್ಕಾಗಿ ಅಲ್ಲ. ಇದು ದೇಶವನ್ನು ಮುನ್ನೆಡೆಸುವ ಮಹತ್ವದ ಜವಾಬ್ದಾರಿ. ಶಾಸ್ತ್ರೀ, ಕಲಾಮ್, ವಾಜಪೇಯಿ, ನರೇಂದ್ರಮೋದಿಯವರಂತಹ ತ್ಯಾಗಮಯಿ, ನಿಸ್ವಾರ್ಥ ಸ್ವಭಾವದವರಿಂದ ಪ್ರೇರಣೆ ಪಡೆದು, ಇವರಂತಹ ನಾಯಕತ್ವದ ಗುಣವನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು.

ನಿಶ್ಚಲ್ ಸಿ. ಆನಂದಪುರ

ತಮ್ಮಲ್ಲೇ ಜಗಳವಾಡಿಕೊಳ್ಳುತ್ತಾರೆ

ನನ್ನ ಅಭಿಪ್ರಾಯವೇನೆಂದರೆ ರಾಜಕಾರಣಿಗಳು ತಮ್ಮಲ್ಲೇ ಜಗಳ ಆಡಿಕೊಳ್ಳುತ್ತಾರೆ. ಇವರು ಜನರಿಗೆ, ವಯೋವೃದ್ಧರಿಗೆ ಮತ್ತು ಮಕ್ಕಳಿಗೆ ಸಹಾಯ ಮಾಡುವುದಿಲ್ಲ. ಬದಲಾಗಿ ಜನರ ಸೇವೆಗಾಗಿ ಒದಗಿಸಲಾಗುವ ಹಣವನ್ನು ಅವರವರೇ ಹಂಚಿಕೊಳ್ಳುವುದು ಇವರ ಅಭ್ಯಾಸ. ಚುನಾವಣೆ ಸಮಯದಲ್ಲಿ ಜನರಿಗೆ ತಮ್ಮಲ್ಲಿರುವ ಹಣದಲ್ಲಿ ಅಲ್ಪ ಪ್ರಮಾಣದ ಹಂಚುತ್ತಾರೆ. ಹೀಗೆ ಜನರಿಗೆ ನೀಡುವ ಬದಲು ಅದೇ ಹಣವನ್ನು ರಸ್ತೆ ಮಾಡಲು, ಬಡವರಿಗೆ ಊಟ ಹಾಕಲು, ಹಳ್ಳಿಯ ಸಮಸ್ಯೆಗಳನ್ನು ಬಗೆ ಹರಿಸಲು ಉಪಯೋಗಿಸಬೇಕು.

ನಾನು ರಾಜಕಾರಣಿ ಆದರೆ ರೈತರ ಸಮಸ್ಯೆಗಳನ್ನು ಪ್ರಯತ್ನ ಮಾಡುತ್ತೇನೆ. ರಾಜ್ಯದಲ್ಲಿರುವ ನೀರಿನ ಸಮಸ್ಯೆಗಳನ್ನು ಬಗೆಹರಿಸಿ, ನನ ಕ್ಷೇತ್ರದಲ್ಲಿ ಸ್ವಚ್ಚತಾ ಅಭಿಯಾನ ಆರಂಬಿಸುತ್ತೇನೆ. ಬಡವರಿಗೆ ಉಚಿತವಾಗಿ ಮನೆಕಟ್ಟಿಕೊಡುತ್ತೇನೆ. ಬಡ ಮಕ್ಕಳಿಗೆ ಉಚಿತ ಶಿಕ್ಷಣ ವ್ಯವಸ್ಥೆ ಕಲ್ಪಿಸಿ, ಇಡೀ ಸಮಾಜವನ್ನು ಸುಶಿಕ್ಷಿತಗೊಳಿಸುವಲ್ಲಿ ಶ್ರಮಿಸುತ್ತೇನೆ. ಎಲ್ಲರಿಗೂ ಊಟ ಸಿಗುವಂತೆ ಮಾಡುವೆನು. ನಮ್ಮ ದೇಶ ಪ್ರಪಂಚದಲ್ಲಿ ಮೊದಲ ಸ್ಥಾನ ಕ್ಕೆ ಬರುವಂತೆ ಮಾಡಲು ನನ್ನ ಸರ್ವಸ್ವವನ್ನೇ ಸಮರ್ಪಿಸಿಕೊಳ್ಳುತ್ತೇನೆ.

ವಿ. ವರ್ಷಿತ
ಐದನೆಯ ತರಗತಿ
ಬಿ.ಜಿ.ಎಸ್ ಪಬ್ಲಿಕ್ ಶಾಲೆ
ಗೌರಿಬಿದನೂರು.

ದೊಡ್ಡ ರಾಜಕಾರಣಿ ಆಗುತ್ತೇನೆ

ದೊಡ್ಡವನಾದ ಮೇಲೆ ರಾಜಕಾರಣಿಯಾಗಬೇಕೆಂಬ ಆಸೆನನಗಿದೆ. ಏಕೆಂದರೆ ರಾಜಕಾರಣದಲ್ಲಿ ಸಾಕಷ್ಟು ಪ್ರಖ್ಯಾತಿ ಹೊಂದಬಹುದು. ಆ ಮೂಲಕ ನನಗೆ ದೊರಕುವ ಅಧಿಕಾರವನ್ನು ಬಳಸಿ ಏನು ಬೇಕಾದರೂ ಮಾಡಬಹುದು.
ಆದರೆ ಇತ್ತೀಚಿನ ರಾಜಕೀಯ ಸ್ವಲ್ಪ ಬೇಸರ ಮೂಡಿಸುತ್ತಿದೆ. ಏಕೆಂದರೆ, ರಾಜಕಾರಣಿ ಆಡುವ ಮಾತು, ಅಕ್ರಮ ಅನಾಚಾರ ಭ್ರಷ್ಟಾಚಾರ, ಹಗರಣಗಳ ಮೂಲಕ ಅಪಖ್ಯಾತೊಗೊಳಗಾಗುತ್ತಿದ್ದಾರೆ. ಇದೆಲ್ಲವನ್ನು ಟಿವಿ, ಪತ್ರಿಕೆಗಳಲ್ಲೆಲ್ಲಾ ನೋಡುವಾಗಭಯವಾಗುತ್ತದೆ.

ಅಂದಹಾಗೆ, ನಾನು ಟಿವಿಯಲ್ಲಿ ಹೆಚ್ಚು ನೋಡುವುದೇ ರಾಜಕಾರಣ ಸುದ್ದಿಗಳನ್ನು. ಅದಕ್ಕೆ ಕಾರಣವೇನೆಂದರೆ, ಮೊದಲಿನಿಂದ ಕ್ಷೇತ್ರದ ಮೇಲೆ ಅತಿಯಾದ ಪ್ರೀತಿ, ಅಭಿಮಾನ. ಒಂದು ವೇಳೆ ನಾನು ಮುಂದೆ ರಾಜಕೀಯಕ್ಕೆ ಹೋದರೆ ಎಲ್ಲವೂ ಬದಲಾಯವಣೆ ಮಾಡಿ, ಅದರಲ್ಲಿ ಸಕಾರಾತ್ಮಕತೆ ತುಂಬುವ ಗುರಿಯನ್ನು ಹೊಂದಿದ್ದೇನೆ.
ಸೂರಜ್ ಪತಂಗೆ, ಕಲಬುರಗಿ

ನಾನೊಬ್ಬ ರಾಜಕಾರಣಿ ಆದರೆ…

ಈಗಿನ ರಾಜಕಾರಣಿಗಳು ಹಗಲಲ್ಲೇ ನಕ್ಷತ್ರ ತೋರಿಸುವವರು. ಬರೀ ಇನ್ನೊಬ್ಬರ ಕಾಲು ಎಳೆಯುದರಲ್ಲೆ ತಮ್ಮ ಕಾಲಾವಧಿ ಮುಗಿಸಿಬಿಡುತ್ತಾರೆ. ಒಬ್ಬ ರಾಜಕೀಯ ನಾಯಕನಾಗಿ ಅವನು ಮಾಡಬೇಕಾದ ಕೆಲಸ ಬಿಟ್ಟು ಬೇರೆಲ್ಲಾ ಕಾಯಕ ಮಾಡುತ್ತಾನೆ. ರಾಜಕರಣಿಯಾದವನು ಮಾಡುವ ಕೆಲಸದ ಮೂಲಕ ಜನರ ವಿಶ್ವಾಸ ಗಳಿಸಬೇಕು. ಎಲ್ಲಕ್ಕಿಂತಲೂ ಮೊದಲು, ಆತ ತಾನು ಮಾಡುವ ಕೆಲಸದ ಮೇಲೆ ಗೌರವ ಹೊಂದಿರಬೇಕು. ನಾಯಕನೆಂದರೆ ಇನ್ನೊಬ್ಬರಿಗೆ ಮಾದರಿ ಆಗಿರಬೇಕು. ದೇಶ ಕಟ್ಟುವ ಯೋಜನೆಗಳನ್ನು ಹೊಂದಿರಬೇಕು. ಅವರು ರಾಜಕಾರಣಿ ಆಗಿ ತನ್ನ ಜೇಬು ತುಂಬಿಕೊಳ್ಳುವುದನ್ನು ಮೊದಲು ಬಿಡಬೇಕು. ಅಂತಹ ನಾಯಕರು ಈ ಸಮಾಜಕ್ಕೆ ಬೇಕು ಎಂಬ ವಿಚಾರ ನನ್ನ ಮನಸ್ಸಲ್ಲಿ ನೆಲೆಯೂರಿದ ಕೂಡಲೇ, ನಾನೇ ಯಾಕೇ ಆ ಒಳ್ಳೆಯ ರಾಜಕಾರಣಿ ಆಗಬಾರದು ಅನ್ನುವ ಬಂತು.
ರಜನೀಶ ಕಿರಣ, ಬಾಳಗೋಳ, ಬೀಳಗಿ

ನಿಂದನೆಗಳ ರಾಜಕಾರಣ

ಇತ್ತೀಚಿನ ದಿನಗಳಲ್ಲಿ ನಮ್ಮ ರಾಜಕಾರಣವು ತೀರಾ ಕೆಳಮಟ್ಟಕ್ಕೆ ಇಳಿದಿದ್ದು, ಮನುಷ್ಯತ್ವ ಮತ್ತು ಮಾನವೀಯತೆಯನ್ನು ಮರೆತಿದೆ. ಸಧ್ಯದ ರಾಜಕೀಯವು ವೈಯಕ್ತಿಕ ಟೀಕೆ ನಿಂದನೆಗಳ ಮಟ್ಟಕ್ಕೆ ಇಳಿಯುತ್ತಿರುವ ಪರಿ ನೋಡಿದರೆ, ಮುಂದೊಂದು ದಿನ ಪ್ರಜಾಪ್ರಭುತ್ವಕ್ಕೆ ಸವಾಲಾಗುವ ಸನ್ನಿವೇಶಗಳು ಹತ್ತಿರ ಇವೆ ಎಂಬ ಆತಂಕ ಕಾಡುತ್ತಿದೆ. ಮಾನವೀಯತೆ ಮತ್ತು ನೈತಿಕತೆಯನ್ನು ಉಸಿರಾಗಿಸಿಕೊಂಡಿದ್ದ ಸ್ವಾತಂತ್ರ್ಯ ಹೋರಾಟಗಾರರು, ಸ್ವತಂತ್ರ್ಯಾನಂತರದ ಕೆಲವು ರಾಜಕಾರಣಿಗಳ ಗುಣಗಳನ್ನು ಈಗೀನವರಲ್ಲಿ ಸಾದ್ಯವೇ? ಹಣವುಳ್ಳವರು ಕೇವಲ ತಮ್ಮ ಅಂತಸ್ತಿನ ದರ್ಪದಿಂದ ಅಧಿಕಾರವನ್ನುಅನುಭವಿಸುತ್ತಿರುವುದು ಯಾವ ಪುರುಷಾರ್ಥಕ್ಕಾಗಿ ಎಂಬ ಭಾವನೆ ಮೂಡುತ್ತದೆ. ಹಣ ಹೂಡಿ ಹಣ ಮಾಡಿಕೊಳ್ಳುವ ರಿಯಲ್ ಎಸ್ಟೇಟ್ ದಂದೆಯಂತೆ ರಾಜಕೀಯ ಕ್ಷೇತ್ರ ಮಾರ್ಪಟ್ಟಿದೆ.

ಇದರಿಂದಾಗಿಯೇ ರಾಜಕಾರಣಿಗಳನ್ನು ಕೇವಲ ಸಂಶಯ, ಅಪನಂಬಿಕೆಯಿಂದ ನೋಡುವಂತಹ ಕಾಲಘಟ್ಟವನ್ನು ತಲುಪಿದ್ದೇವೆ. ಪ್ರಭುತ್ವದ ಪ್ರತಿನಿಧಿಗಳಿಗೆ ಲೋಕದ ಅರಿವಿನ ಜತೆಗೆ ಕನಿಷ್ಟ ವಿದ್ಯಾರ್ಹಹತೆಯನ್ನು ನಿಗಧಿಪಡಿಸಬೇಕು. ಇತ್ತೀಚೆಗೆ ಸ್ವಾರ್ಥ ಸಾಧನೆಗಾಗಿ, ತಮ್ಮ ಕುಟುಂಬದ ‘ಶ್ರೇಯೋಭಿವೃದ್ಧಿ’ಗಾಗಿ ಉಪಚುನಾವಣೆಗಳನ್ನು ಹೇರುವಂತಹ ಸನ್ನಿವೇಶಗಳು ನಡೆಯುತ್ತಿದ್ದು, ಆ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವಂತಹ ಘಟನೆಗಳು ಜರುಗುತ್ತಿದೆ. ಈ ಕಾರಣಕ್ಕಾಗಿ ಸಕಾರಣವಿಲ್ಲದೇ ಉಪಚುನಾವಣೆಗೆ ಮುಂದಾಗುವರನ್ನು ಅನರ್ಹಗೊಳಿಸುವ ಕಾನೂನು ಕಟ್ಜುನಿಟ್ಟಾಗಿ ಜಾರಿಯಾಗಬೇಕು.

ಮೇಘನ ಮಲ್ಲಪ್ಪ ಕರೇಣ್ಣನವರ
ಯುಕೆಜಿ. ಬಿ ಆರ್ ಇ ಸಂಸ್ಥೆ
ಮೋಟೆಬೆನ್ನೂರು

ಗಾಂಧಿ ನಮಗೆ ಆದರ್ಶವಾಗಲಿ

ಗಾಂಧಿ ಕುರಿತ ಪಾಠ ನಮ್ಮ ನಾಯಕರೂ ಹೀಗೇ ಇರಬೇಕೆಂದು ಅನಿಸುತ್ತದೆ. ಸತ್ಯ ಮತ್ತು ತ್ಯಾಗದ ಪ್ರತೀಕದಂತಿರುವ ಗಾಂಧಿ ನಮ್ಮ ನಾಯಕರಿಗೆ ಆದರ್ಶವಾದರೆ ಮಾತ್ರ ನಾವು ಉತ್ತಮ ರಾಜಕಾರಣಿಗಳನ್ನು ಕಾಣಬಹುದು.
ಗಾಂಧಿ ಹುಟ್ಟಿದ ದೇಶದಲ್ಲಿ ನಮ್ಮ ನಾಯಕರ ನಡೆ ತೃಪ್ತಿದಾಯಕವಾಗಿಲ್ಲ. ಕೆಲವರು ಭ್ರಷ್ಟರು, ಮತ್ತೆ ಕೆಲವರು ಜಾತಿವಾದಿಗಳು, ಕೆಲವರು ಸೋಮಾರಿಗಳು, ಹಲವರು ಯಾವುದಕ್ಕೂ ಬಾರದವರು. ಇಂಥ ನಾಯಕರಿಂದ ನಾವು ಹೆಚ್ಚಿನದೇನನ್ನೂ ನಿರೀಕ್ಷೆ ಮಾಡಲಾಗುತ್ತಿಲ್ಲ. ನಾವು ರಾಜಕಾರಣವನ್ನು ಶುದ್ಧ ಮಾಡಬೇಕೆಂದರೆ ಮೊದಲು ಅಲ್ಲಿನ ಮನಸುಗಳ್ನು ಶುದ್ಧ ಆರಂಭದಲ್ಲಿ ಪ್ರಮಾಣ ಮಾಡಿದಂತೆ ಸತ್ಯ ನಿಷ್ಟೆಯಿಂದ ಆಡಳಿತ ನಡೆಸುವ ನಾಯಕರನ್ನು ಆಯ್ಕೆ ಮಾಡಬೇಕಿದೆ. ರಾಜಕಾರಣಿಗಳು ಹಾಳಾಗಿದ್ದಾರೆ ಎಂದರೆ ಅದರಲ್ಲಿ ಮತದಾದರರ ಪಾಲೂ ಇರುತ್ತದೆ. ಚುನಾವಣೆ ಪೂರ್ವದಲ್ಲಿ ಆಮಿಷಗಳಿಗೆ, ವಸ್ತುಗಳಿಗೆ ಮತದಾನ ಮಾಡುವುದು ನಿಂತರೆ ಮಾತ್ರ ಉತ್ತಮ ನಾಯಕರನ್ನು ಕಾಣಬಹುದು.
ಗಾಂಧಿ, ಶಾಸ್ತ್ರಿ, ಕಲಾಂ ಅವರಂಥ ನಾಯಕರು ಎಲ್ಲರಿಗೂ ಆದರ್ಶವಾಗಲಿ. ಭಾರತದ ಕನಸುಗಳು ಮತ್ತಷ್ಟು ಉಜ್ವಲವಾಗಲಿ ಎನ್ನುವುದು ನನ್ನ ಆಶಯ.

ಆಶಿತ್ ಸುಜಯ್ ವೀರಾ
ಎನ್‌ಇಟಿ ಪಬ್ಲಿಕ್ ಶಾಲೆ, ಸುಂಕೇನಹಳ್ಳಿ
ಬೆಂಗಳೂರು

Tags

Related Articles

Leave a Reply

Your email address will not be published. Required fields are marked *

Language
Close