‘ನಾನು ಫೋನಿನಿಂದ ಫೇಸ್ಬುಕ್, ಟ್ವಿಟರ್, ವಾಟ್ಸಪ್, ಟಂಬ್ಲರ್, ಸ್ನ್ಯಾಪ್ಚಾಟ್, ಇನ್ಸ್ಟಾಗ್ರಾಮ್, ಪಿಂಟರೆಸ್ಟ್, ಟೆಲಿಗ್ರಾಮ್, ವೈನ್, ಕ್ಯಾಂಡಿಕ್ರಷ್, ಮೆಸೆಂಜರ್, ಫ್ಲಿಪ್ಬೋರ್ಡ್… ಆ್ಯಪ್ಗಳನ್ನು ಡಿಲೀಟ್ ಮಾಡಿದ್ದೇನೆ. ಜೀವನ ನಿಧಾನವಾದರೂ ಸಮಾಧಾನ ಎಂದು ಅನಿಸಿದೆ. ರಾತ್ರಿ ಐದು ನಿಮಿಷ ಟಿವಿಯಲ್ಲಿ ಹೆಡ್ಲೈನ್ಸ್ ನೋಡುತ್ತೇನೆ. ಬೆಳಗ್ಗೆ ಒಂದು ಗಂಟೆ ಪತ್ರಿಕೆ ಓದುತ್ತೇನೆ. ಕಳೆದುಹೋದ ನನ್ನ ಸಮಯ, ನೆಮ್ಮದಿ, ಸಂತಸ, ಬಿಡುವು ಹೀಗೆ ಎಲ್ಲವೂ ಮರಳಿ ಬಂದಿದೆಯೆಂದು ನನಗೆ ಮನವರಿಕೆಯಾಗಿದೆ. ಇವುಗಳನ್ನು ಡಿಲೀಟ್ ಮಾಡಿದ್ದರಿಂದ ನಾನು ಏನೋ ಎಂದು ನನಗೆ ಅನಿಸುತ್ತಿಲ್ಲ. ಈ ಕೆಲಸ ಎಂದೋ ಮಾಡಬೇಕಿತ್ತು. ಹಾಗೆ ಮಾಡದೇ ನನ್ನ ಬದುಕಿನ ಎಷ್ಟೋ ಅಮೂಲ್ಯ ಸಮಯ, ಆನಂದ, ಏಕಾಂತ, ಮೌನವನ್ನೆಲ್ಲ ಕಳೆದುಕೊಂಡು ಬರಿದಾದೆ, ಬರಡಾದೆ. ಈ ಆ್ಯಪ್ಗಳಿಗೆಲ್ಲ ನನ್ನ ಧಿಕ್ಕಾರವಿರಲಿ.’
ಹೀಗೆಂದು ಯೋಗಿ ನಿಶ್ಚಿಂತಜೀ ಬಹಳ ದಿನಗಳ ನಂತರ ಪತ್ರ ಬರೆದಿದ್ದರು. ಕಳೆದ ಎರಡು ವರ್ಷಗಳಿಂದ ಅವರು ವಿಪರೀತ ಮೊಬೈಲ್ದಾಸರಾಗಿದ್ದರೆಂಬುದು ಗೊತ್ತಿತ್ತು. ಅವರ ವಾಟ್ಸಪ್ ಸ್ಟೇಟಸ್ ಸದಾ ‘ಆನ್ಲೈನ್’ ಎಂದು ತೋರಿಸುತ್ತಿತ್ತು. ಅವರಿಗೆ ಯಾವುದೇ ಮೆಸೇಜ್ ಇಮೇಲ್ ಬರೆದರೆ, ಕ್ಷಣಾರ್ಧದಲ್ಲಿ ಉತ್ತರ ಬರುತ್ತಿತ್ತು. ಅಲ್ಲದೇ ಅವರು ಫೇಸ್ಬುಕ್ ಪೋಸ್ಟಿಂಗ್ಗಳಿಗೆಲ್ಲ ಉತ್ತರ ಬರೆಯುತ್ತಿದ್ದರು. ಲೈಕ್ಸ್ ಒತ್ತುತ್ತಿದ್ದರು. ವಾಟ್ಸಪ್ ಮೂಲಕ ದಿನಕ್ಕೆ 25-30 ಫಾರ್ವರ್ಡ್ ಮೆಸೇಜ್ಗಳನ್ನು ಎರಚುತ್ತಿದ್ದರು. ರಾತ್ರಿ ಹನ್ನೆರಡು, ಒಂದು ಗಂಟೆಗೆ ಅವರು ಜಗತ್ತಿನ ವಿದ್ಯಮಾನಗಳ ಬಗ್ಗೆ ಟ್ವಿಟರ್ನಲ್ಲಿ ತಮ್ಮ ಅಭಿಪ್ರಾಯ ಬರೆಯುತ್ತಿದ್ದರು. ಎಲ್ಲವುಗಳಿಗೂ ಪ್ರತಿಕ್ರಿಯಿಸುತ್ತಿದ್ದರು. ಅವರಲ್ಲಾದ ಈ ಬದಲಾವಣೆ ನನ್ನಲ್ಲಿ ಅಚ್ಚರಿ ಮೂಡಿಸಿತ್ತು.
ಈಗ ಅವರು ಇವೆಲ್ಲವುಗಳಿಂದ ಮುಕ್ತರಾಗಿ ಅಕ್ಷರಶಃ, ನಿಜವಾದ ಅರ್ಥದಲ್ಲಿ ‘ನಿಶ್ಚಿಂತಜೀ’ ಆಗಿದ್ದಾರೆ. ಅವರು ಕಳೆದುಕೊಂಡಿದ್ದೇನು? ಗಳಿಸಿಕೊಂಡಿದ್ದೇನು? ಅವರೇ ಹೇಳುವಂತೆ ಕಳೆದುಕೊಂಡಿದ್ದು ಏನೂ ಇಲ್ಲ. ಗಳಿಸಿದ್ದು ಸಮಯ, ಸಮಾಧಾನ, ನೆಮ್ಮದಿ, ಮೌನ, ಏಕಾಂತ ಹಾಗೂ ಇನ್ನೂ ಅನೇಕ. ಅವರಿಗೆ ಎಲ್ಲಾ ಸುದ್ದಿ, ಮಾಹಿತಿ ಬಂದೇ ಬರುತ್ತದೆ. ಸ್ವಲ್ಪ ತಡವಾಗಬಹುದು. ಪರವಾಗಿಲ್ಲ. ಎಲ್ಲರಿಗಿಂತ ಮೊದಲೇ ತಿಳಿದುಕೊಂಡು ಆಗಬೇಕಾದುದೇನೂ ಇಲ್ಲ. ತಡವಾಗಿ ಗೊತ್ತಾಗುವುದರಿಂದ ನಷ್ಟವೂ ಇಲ್ಲ. ಅವರಿಗೆ ಸಂಬಂಧಿಸಿದ ವಿಚಾರಗಳು ಅವರಿಗೆ ಯಾವಾಗ ಗೊತ್ತಾಗಬೇಕೋ ಆಗ ಗೊತ್ತಾಗುತ್ತದೆ. ಇನ್ನೇಕೆ ತಲೆಕೆಡಿಸಿಕೊಳ್ಳಬೇಕು ? ಇಡೀ ದೇಶಕ್ಕೆ ದೇಶ, ವಿಶ್ವ ಈ ಆ್ಯಪ್ಗಳಲ್ಲಿ, ಮೊಬೈಲ್ಗಳಲ್ಲಿ ಮುಳುಗಿಹೋದರೆ ಏನಾದೀತು ? ಒಮ್ಮೆ ಯೋಚಿಸಿ.ಯೋಗಿ ನಿಶ್ಚಿಂತಜೀ ಹೇಳಿದ್ದು ಎಷ್ಟು ನಿಜ ಅಲ್ಲವಾ ?
ಲಂಡನ್ನ ‘ವೀರಸ್ವಾಮಿ’!
ಲಂಡನ್ನ ಮಧ್ಯಭಾಗದಲ್ಲಿ ರೀಜಂಟ್ ಸ್ಟ್ರೀಟ್ ಎಂಬ ರಸ್ತೆಯಿದೆ. ಈ ರಸ್ತೆಗೆ ಅತ್ಯಂತ ಜನನಿಬಿಡ ಪಿಕಡಿಲ್ಲಿ ಸರ್ಕಲ್ ಹಾಗೂ ಆಕ್ಸಫರ್ಡ್ ಸ್ಟ್ರೀಟ್ಗಳು ಹೊಂದಿಕೊಂಡಿವೆ. ರೀಜಂಟ್ ಸ್ಟ್ರೀಟ್ನಲ್ಲಿರುವ ಬಹುತೇಕ ಕಟ್ಟಡಗಳು ನೂರು ವರ್ಷಗಳಿಗಿಂತ ಹಿಂದಿನವು. ಅಲ್ಲಿ ಜಗತ್ತಿನ ಎಲ್ಲ ಪ್ರಮುಖ ಬ್ರ್ಯಾಂಡ್ಗಳ ಮಳಿಗೆಗಳಿವೆ. ಸಾಮಾನ್ಯವಾಗಿ ಲಂಡನ್ಗೆ ನೀಡಿದವರೆಲ್ಲ, ಅದರಲ್ಲೂ ಶಾಪಿಂಗ್ ಖಯಾಲಿ ಇದ್ದವರೆಲ್ಲ ಈ ಸ್ಟ್ರೀಟ್ನಲ್ಲಿ ಒಂದು ಸುತ್ತು ಹಾಕದೇ ಬರುವುದಿಲ್ಲ.
ಶಾಪಿಂಗ್ಗೆ ಹೆಸರಾದ ಆಕ್ಸಫರ್ಡ್ ಸ್ಟ್ರೀಟ್ಗೂ ಒಂದು ಬದಿಯಿಂದ ಈ ರಸ್ತೆಯನ್ನೇ ಬಳಸಿ ಹೋಗಬೇಕಾದುದರಿಂದ, ರೀಜಂಟ್ಸ್ಟ್ರೀಟ್ ಸದಾ ಗಿಜಿಗುಡುತ್ತದೆ. ರಾತ್ರಿ ಎರಡು ಗಂಟೆಯ ಹೊತ್ತಿಗೂ ಈ ಬೀದಿ ಮಲಗುವುದಿಲ್ಲ. ಈ ರೀಜಂಟ್ ಸ್ಟ್ರೀಟ್ನಲ್ಲಿ ನಡೆಯುವಾಗ, ಭಾರತೀಯರು ಅದರಲ್ಲೂ ದಕ್ಷಿಣ ಭಾರತೀಯರು ಸಾಮಾನ್ಯವಾಗಿ ಒಂದು ದೃಶ್ಯ ತಪ್ಪಿಸಿಕೊಳ್ಳುವುದಿಲ್ಲ. ಅದು ‘ವೀರಸ್ವಾಮಿ ರೆಸ್ಟೊರೆಂಟ್’. ಇದು ಲಂಡನ್ ಒಂದೇ ಯುರೋಪಿನಲ್ಲೇ ಅತ್ಯಂತ ಹಳೆಯ ಭಾರತೀಯ ರೆಸ್ಟೊರೆಂಟ್. ಇದು ಆರಂಭವಾಗಿ 92 ವರ್ಷಗಳಾದವು. ದಕ್ಷಿಣ ಭಾರತದ ತಿಂಡಿ-ತಿನಿಸುಗಳಲ್ಲದೇ ಪಂಜಾಬಿ, ಲಖನೌ, ಕಾಶ್ಮೀರಿ ಹಾಗೂ ಗೋವಾದ ವಿಶೇಷ ಆಹಾರ ಪದಾರ್ಥಗಳು ಇಲ್ಲಿ ಸಿಗುತ್ತವೆ.
ಭಾರತೀಯ ಸೇನೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಎಡ್ವರ್ಡ್ ಪಾಲ್ಮರ್ ಈ ರೆಸ್ಟೊರೆಂಟ್ನ್ನು ಸ್ಥಾಪಿಸಿದರು. ಇವರು ಬ್ರಿಟಿಷ್ ಸೇನೆಯಲ್ಲಿ ಜನರಲ್ ಆಗಿದ್ದವರ ಮೊಮ್ಮಗನೂ ಹೌದು. ಎಡ್ವರ್ಡ್ ಪಾಲ್ಮರ್ ತಮ್ಮ ಅಜ್ಜಿಯ ಕುಟುಂಬದ ಹೆಸರಾದ ‘ವೀರಸ್ವಾಮಿ’ಯನ್ನೇ ರೆಸ್ಟೊರೆಂಟ್ಗೆ ಇಟ್ಟರು. ಕಾಲಕಾಲಕ್ಕೆ ರೆಸ್ಟೊರೆಂಟ್ನ ಒಡೆತನ ಬದಲಾಗುತ್ತಿದ್ದರೂ, ತಿಂಡಿ-ತಿನಿಸುಗಳ ರುಚಿ, ಸ್ವಾದ ಮಾತ್ರ ಹಾಗೆಯೇ ಇದೆ. ಲಂಡನ್ನಲ್ಲಿ ಯಾರಿಗಾದರೂ ಅಥೆಂಟಿಕ್ ಭಾರತೀಯ ಆಹಾರ-ಪದಾರ್ಥಗಳ ರುಚಿ ಸವಿಯಬೇಕೆನಿಸಿದರೆ, ಥಟ್ಟನೆ ನೆನಪಾಗುವುದು ವೀರಸ್ವಾಮಿ !
ಹಾಗೆಂದು ಲಂಡನ್ನಲ್ಲಿ ಅನೇಕ ಭಾರತೀಯ ರೆಸ್ಟೊರೆಂಟ್ಗಳಿವೆ. ವೀರಸ್ವಾಮಿಯನ್ನು ಮೀರಿಸುವಂಥ ಫುಡ್ಜಾಯಿಂಟ್ಗಳು ಬಂದಿವೆ. ಅಮಯ, ಬನಾರಸ್, ಚಟ್ನಿಮೇರಿ, ಗಾಯ್ಲಾರ್ಡ್, ಮಸಾಲ ರೆನ್, ಮಿಂಟ್ ಲೀಫ್, ಟ್ಯಾಮರಿಂಡ್… ಮುಂತಾದ ಪ್ರಸಿದ್ಧ ಭಾರತೀಯ ರೆಸ್ಟೊರೆಂಟ್ಗಳಿವೆ. ಆದರೆ ವೀರಸ್ವಾಮಿಯ ಖದರೇ ಬೇರೆ. ಇದೊಂದು ರೀತಿಯಲ್ಲಿ ನಮ್ಮ ಹಾಗೂ ಮಯ್ಯಾಸ್ ಇದ್ದಂತೆ.
‘ವೀರಸ್ವಾಮಿ’ಯನ್ನು ಈಗ ಚಟ್ನಿಮೇರಿ ರೆಸ್ಟೊರೆಂಟ್ನ್ನು ನಡೆಸುತ್ತಿರುವ ಕಂಪನಿಯೇ ಖರೀದಿಸಿದೆ. ಆದರೆ ಅದಕ್ಕೂ, ಅಲ್ಲಿನ ತಿಂಡಿಗಳ ರುಚಿಗೂ ಏನೂ ಸಂಬಂಧವಿಲ್ಲ. ‘ವೀರಸ್ವಾಮಿ’ ಚಾರಿತ್ರಿಕ ಮಹತ್ವವಿರುವ ರೆಸ್ಟೊರೆಂಟ್. ಇಲ್ಲಿಗೆ ವಿನ್ಸ್ಟನ್ ಚರ್ಚಿಲ್, ಸ್ವೀಡನ್ನ ಆರನೆಯ ಕಿಂಗ್ ಗುಸ್ತಾವ್, ಜವಾಹರಲಾಲ ನೆಹರು, ಇಂದಿರಾಗಾಂಧಿ, ಚಾರ್ಲಿ ಚಾಪ್ಲಿನ್, ಇಯಾನ್ ಸಿಂಕ್ಲೇರ್ ಮುಂತಾದ ಖ್ಯಾತನಾಮರು ಭೇಟಿ ಕೊಟ್ಟು ಭಾರತೀಯ ತಿಂಡಿ-ತಿನಿಸುಗಳನ್ನು ಸವಿದಿದ್ದಾರೆ. ಚರ್ಚಿಲ್ ಪ್ರಧಾನಿಯಾಗಿದ್ದಾಗ ಹಾಗೂ ಆನಂತರ, ಮಸಾಲೆ ದೋಸೆ, ಇಡ್ಲಿ-ವಡೆ ‘ವೀರಸ್ವಾಮಿ’ಗೆ ಆಗಾಗ ಬರುತ್ತಿದ್ದರು.
ಇಂದಿಗೂ ಹಳೆಯ ವೈಭವ, ಒಳಾಂಗಣ ಅಲಂಕಾರಗಳನ್ನು ಹೊಂದಿರುವ ರೆಸ್ಟೊರೆಂಟ್ಗೆ ನಾನು ಇಪ್ಪತ್ತೊಂದು ವರ್ಷಗಳ ನಂತರ, ಇತ್ತೀಚೆಗೆ ಭೇಟಿ ನೀಡಿದ್ದೆ. ಅದೇ ಐಟೆಮ್ಗಳು, ಅದೇ ಸ್ವಚ್ಛತೆ, ಅಚ್ಚುಕಟ್ಟುತನ, ಅದೇ ರುಚಿ, ಬೆಲೆ ಮಾತ್ರ ತುಸು ದುಬಾರಿ. ಮಸಾಲೆ ದೋಸೆಗೆ ಸುಮಾರು ಒಂದು ಸಾವಿರ ರುಪಾಯಿ (ಒಂಬತ್ತು ಪೌಂಡ್) ! ಅಲ್ಲಿನ ಕಾಫಿ ಸ್ವಾದ ಮಾತ್ರ ಈಗಲೂ ನಾಲಗೆ ಮೇಲಿದೆ. ಒಂದು ಹೋಟೆಲ್, ರೆಸ್ಟೊರೆಂಟ್ ಹೇಗೆ ಸಂಸ್ಕೃತಿ, ಸಂಪ್ರದಾಯದ ಒಂದು ಭಾಗವಾಗಿ ನಮ್ಮೊಳಗೆ ಶಾಶ್ವತವಾಗಿ ನೆಲೆ ನಿಲ್ಲುತ್ತದೆ ಎಂಬುದಕ್ಕೆ ‘ವೀರಸ್ವಾಮಿ’ಯೂ ನಿದರ್ಶನ.
ಐಐಎಂನಲ್ಲಿ ಕಲಿಸದಿರುವುದೇನು?
ಪ್ರಸಿದ್ಧ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಅಹಮದಾಬಾದ್(ಐಐಎಂ-ಎ)ನಲ್ಲಿ ಯಾವ ಅಂಶ ಕಲಿಸುವುದಿಲ್ಲ ? ‘ಕೋರಾ’ ವೆಬ್ಸೈಟ್ನಲ್ಲಿ ಕೇಳಿದ ಈ ಪ್ರಶ್ನೆಗೆ ತೂರಿ ಬಂದ ಉತ್ತರ: ‘ಐಐಎಂ-ಎ’ನಲ್ಲಿ ಎಲ್ಲವನ್ನೂ ಕಲಿಸುತ್ತಾರೆ. ಆದರೆ ಆಫೀಸ್ ಪಾಲಿಟಿಕ್ಸ್ ಬಗ್ಗೆ ಕಲಿಸುವುದೇ ಇಲ್ಲ. ಕಾರ್ಪೊರೇಟ್ ಜಗತ್ತಿನಲ್ಲಿ ಉಳಿಯಬೇಕು, ನೌಕರಿ ಉಳಿಸಿಕೊಳ್ಳಬೇಕು ಅಂದರೆ ಆಫೀಸ್ ಪಾಲಿಟಿಕ್ಸ್ ನಲ್ಲಿ ಚತುರರಾಗಿರಬೇಕು. ನಿಮ್ಮಲ್ಲಿ ಇದ್ದೂ, ಆಫೀಸ್ ಪಾಲಿಟಿಕ್ಸ್ ಗಂಧ-ಗಾಳಿ ಗೊತ್ತಿಲ್ಲದಿದ್ದರೆ, ಚೆನ್ನಾಗಿ ಅದನ್ನೂ ಕರಗತ ಮಾಡಿಕೊಳ್ಳದಿದ್ದರೆ ಯಾವುದೇ ಆಫೀಸಿನಲ್ಲಿ ಕೆಲಸ ಉಳಿಸಿಕೊಳ್ಳುವುದು ಕಷ್ಟ. ಬಾಸ್ನನ್ನು ಚೆನ್ನಾಗಿ ಇಟ್ಟುಕೊಳ್ಳುವುದು ಹೇಗೆ ಎಂಬುದು ಅತ್ಯಂತ ದೊಡ್ಡ ಕಲೆ. ನೀವೆಷ್ಟೇ ದಡ್ಡರಾಗಿರಿ, ಆಲಸಿಗಳಾಗಿರಿ, ಓತ್ಲಾ ಹೊಡೆಯಿರಿ, ಬಾಸ್ನನ್ನು ಚೆನ್ನಾಗಿ ಇಟ್ಟುಕೊಂಡರೆ, ಇವೆಲ್ಲವೂ ಮಾಫು. ಅಷ್ಟೇ ಅಲ್ಲ, ಕಾಲಕಾಲಕ್ಕೆ ಬಡ್ತಿಯೂ ಲಭ್ಯ. ಇದ್ಯಾವುದನ್ನೂ ಮ್ಯಾನೇಜ್ಮೆಂಟ್ ಸ್ಕೂಲ್ನಲ್ಲಿ ಕಲಿಸುವುದಿಲ್ಲ.
ಉದಾಹರಣೆಗೆ, ಆಫೀಸ್ ಅವಧಿಯಲ್ಲಿ ಇಮೇಲ್ ಬರೆಯಬೇಕು, ಆದರೆ ತಕ್ಷಣ ಕಳಿಸಬಾರದು. ಹನ್ನೊಂದರ ನಂತರ ನಿಮ್ಮ ಟೀಮ್ ಲೀಡರ್ಗೆ ಹಾಗೂ ಬಾಸ್ಗೆ ಕಳಿಸಿದರೆ, ಮನೆಯಲ್ಲೂ ಆಫೀಸಿನ ಕೆಲಸ ಮಾಡ್ತಾನೆ ಎಂದು ಅಭಿಮಾನಪಡುತ್ತಾರೆ ಹಾಗೂ ಆಫೀಸಿನಲ್ಲಿ ಎಲ್ಲರ ಮುಂದೆ ಪ್ರಶಂಸಿಸುತ್ತಾರೆ. ಯಾವುದೇ ಕೆಲಸವನ್ನಾಗಲೀ, ತಾಪ್ಡ್ತೋಪ್ಡ್ ಮಾಡಿ ಮುಗಿಸಬಾರದು. ಆ ಕೆಲಸ ಮಾಡಿ ಮುಗಿಸುವ ಬಗ್ಗೆ ಹತ್ತಾರು ಮೀಟಿಂಗ್ ಮಾಡಬೇಕು, ನಂತರ ರಿಪೋರ್ಟ್ ಸಿದ್ಧಪಡಿಸಬೇಕು. ಬಳಿಕ ರಿಪೋರ್ಟಿನ ರಿವ್ಯೂ ಮಾಡಬೇಕು. ಅದನ್ನು ತಜ್ಞರಿಗೆ ಒಪ್ಪಿಸಿ ಅವರಿಂದ ಸಲಹೆ ಪಡೆಯಬೇಕು.
ಈ ಸಲಹೆಯನ್ನು ಕಾರ್ಯರೂಪಕ್ಕೆ ತರುವುದು ಎಂಬ ಬಗ್ಗೆ ಮೀಟಿಂಗ್ ಮಾಡಬೇಕು. ಈ ಎಲ್ಲ ಪೂರ್ವಸಿದ್ಧತೆಗಳು ಆದ ತರುವಾಯ ಕಾರ್ಯರೂಪಕ್ಕೆ ತರಬೇಕು. ಇಷ್ಟು ಕೆಲಸಕ್ಕೆ ಕನಿಷ್ಠ ಒಂದು ತಿಂಗಳಾದರೂ ಹಿಡಿಯುತ್ತದೆ. ಇದಕ್ಕಾಗಿ ಏನಿಲ್ಲವೆಂದರೂ ನೂರಾರು ಇಮೇಲ್ ಬರೆಯಬೇಕು. ಹಾಗೆಂದು ಈ ಕೆಲಸವನ್ನು ಒಂದೆರಡು ದಿನಗಳಲ್ಲಿ ಜಾರಿಗೆ ತರಬಹುದು. ಆದರೆ ಹಾಗೆ ಮಾಡಿದರೆ, ನಿಮ್ಮ ಕೆಲಸದ ಮಹತ್ವ ಗೊತ್ತಾಗುವುದಿಲ್ಲ. ಅಲ್ಲದೇ ನಿಮಗೆ ಮಾಡಲು ಕೆಲಸವಿಲ್ಲದೇ ನಿಮ್ಮ ನೌಕರಿಗೇ ಸಂಚಕಾರ ಬರಬಹುದು.
ಯಾವತ್ತೂ ಸಹ ಫೆಬ್ರವರಿ ಹಾಗೂ ಮಾರ್ಚ್ ಚೆನ್ನಾಗಿ ಕೆಲಸ ಮಾಡಬೇಕು. ಉಳಿದ ತಿಂಗಳಲ್ಲಿ ಅಷ್ಟೇನು ಕೆಲಸ ಮಾಡದಿದ್ದರೂ ನಡೆಯುತ್ತದೆ. ನಿಮ್ಮ ಮೇಲೆ ಯಾವುದೇ ಕ್ಷಣದಲ್ಲಿ ‘ಸರಿಯಾಗಿ ಕೆಲಸ ಮಾಡುತ್ತಿಲ್ಲ’ ಎಂಬ ಆಪಾದನೆ ಬರಬಹುದು. ಅದನ್ನು ಬೇರೆಯವರ ಮೇಲೆ ಹೊರಿಸಲು ಕಾರಣಗಳನ್ನು ರೆಡಿಯಾಗಿ ಇಟ್ಟುಕೊಳ್ಳಬೇಕು. ಅದಕ್ಕೂ ಮುಂಚೆ ನೀವೇ ಬೇರೆಯವರ ಮೇಲೆ ಆಪಾದನೆ ಹೊರಿಸಬೇಕು.
ಆಫೀಸಿನಲ್ಲಿ ಕೆಲವು ಸಮಸ್ಯೆಗಳನ್ನು ನೀವೇ ಸೃಷ್ಟಿಸಬೇಕು. ನಿಮ್ಮ ಮಧ್ಯಪ್ರವೇಶದಿಂದ ಆ ಸಮಸ್ಯೆ ಬಗೆಹರಿಯುತ್ತದೆ ಎಂಬುದನ್ನು ಮೇಲಿನವರಿಗೆ ಮನದಟ್ಟು ಮಾಡಿಕೊಡಬೇಕು. ಈ ಎಲ್ಲ ಪಾಠ ಹಾಗೂ ಸರ್ವೈವಲ್ ತಂತ್ರಗಳನ್ನು ಯಾವ ಬಿಸಿನೆಸ್ ಸ್ಕೂಲ್ಗಳಲ್ಲೂ ಹೇಳಿಕೊಡುವುದಿಲ್ಲ.
ಬಾಲಿವುಡ್ ಬಾಕ್ಸ್ ಆಫೀಸಿನಲ್ಲಿ ಪುಸ್ತಕ!
ಕಳೆದ ಒಂದು ವರ್ಷದ ಅವಧಿಯಲ್ಲಿ ಬಾಲಿವುಡ್ಗೆ ಸಂಬಂಧಿಸಿದಂತೆ ಹಲವು ಪುಸ್ತಕಗಳು ಬಿಡುಗಡೆಯಾಗಿವೆ. ರಿಷಿ ಕಪೂರ್, ಕರಣ್ ಜೋಹರ್ ಸವುಡು ಮಾಡಿಕೊಂಡು ಆತ್ಮಕತೆಗಳನ್ನು ಬರೆದಿದ್ದಾರೆ. ರಾಜ್ಕಪೂರ್, ಸ್ಮಿತಾ ಪಾಟೀಲ್, ಹೇಮಮಾಲಿನಿ, ರೇಖಾ, ಮನ್ನಾಡೇ, ದೇವಾನಂದ ಕುರಿತು ಬೇರೆಯವರು ಬರೆದ ಕೃತಿಗಳು ಹೊರಬಂದಿವೆ. ನಟ ಅಕ್ಷಯ ಕುಮಾರ್ ಪತ್ನಿ ಹಾಗೂ ಡಿಂಪಲ್ ಕಪಾಡಿಯಾ ಪುತ್ರಿ ಖನ್ನಾ “Mrs Funny Bones”‘ಎಂಬ ಸೊಗಸಾದ ಪುಸ್ತಕ ಬರೆದಿದ್ದಾರೆ. ಕಳೆದ ಎರಡು ವರ್ಷಗಳಿಂದ ಟ್ವಿಂಕಲ್ ಖನ್ನಾ ಇಂಗ್ಲಿಷ್ ಪತ್ರಿಕೆಗಳಲ್ಲಿ ಬರೆಯುತ್ತಿದ್ದ ಅಂಕಣ ನೋಡಿ, ಅವರ ಸರಳ, ಸುಲಲಿತ ಹಾಗೂ ಹಾಸ್ಯಭರಿತ ಬರಹಗಳಿಗೆ ಆಕರ್ಷಿತನಾಗಿದ್ದೆ.
ನಟ-ನಟಿಯರ ಮಕ್ಕಳ ಬಗ್ಗೆ ಪೂರ್ವಗ್ರಹವನ್ನು ಹೊಂದಿದ್ದ ನನಗೆ, ಈ ಕೃತಿ ಹಾಗೂ ಅವರ ಬರಹ ಅದನ್ನು ಸಂಪೂರ್ಣ ಹೊಡೆದು ಹಾಕಿತು. ಅವರ ಕೆಲವು ಹಾಸ್ಯ ಬರಹಗಳಂತೂ ಅಚ್ಚರಿ ಹುಟ್ಟಿಸುವಷ್ಟು ತಾಜಾ ಹಾಗೂ ವಿಡಂಬನೆಗಳಿಂದ ಕೂಡಿವೆ. ಕೆಲವು ಜೋಕುಗಳನ್ನು ಸೃಷ್ಟಿಸಿರುವುದಾಗಿಯೂ ಹೇಳಿಕೊಂಡಿದ್ದಾರೆ. ಸಿಲೆಬ್ರಿಟಿ ನಟನ ಪತ್ನಿಯಾಗಿ, ರಾಜೇಶ ಖನ್ನಾ-ಡಿಂಪಲ್ ಮಗಳಾಗಿ, ಟ್ವಿಂಕಲ್ ರೂಢಿಸಿಕೊಂಡಿರುವ ಬರಹ ಕಲೆ ಅಭಿಮಾನ ಮೂಡಿಸುತ್ತದೆ. ‘ಹಿಂದೂ ಹುಡುಗರೇಕೆ ತಮ್ಮ ತಾಯಿಯನ್ನೇ ಪೂಜಿಸುತ್ತಾರೆ ?’ ಎಂಬ ಪ್ರಶ್ನೆಗೆ ‘ಹಿಂದೂ ಧರ್ಮವು ಗೋವುಗಳನ್ನು ಪೂಜಿಸು ಎಂದು ಹೇಳಿರುವುದರಿಂದ ಈ ಹುಡುಗರೂ ಹಾಗೇ ಮಾಡುತ್ತಾರೆ’ ಎಂದು ಟ್ವಿಂಕಲ್ ಖನ್ನಾ ಬರೆಯುತ್ತಾರೆ. ಅವರ ಪ್ರಕಾರ, “Nothing in life is sacred except laughter.
‘ಭಾರತದಲ್ಲಿ ನಡೆಯುವ ನೀವು ತಪ್ಪದೇ ನೋಡುವ ಐದು ರೀತಿಯ ಜನರು’ ಎಂಬ ಪುಟ್ಟ ಬರಹದಲ್ಲಿ ಟ್ವಿಂಕಲ್ ಖನ್ನಾ ಬರೆಯುತ್ತಾರೆ-1. ಸತ್ತವನ ಚಿಕ್ಕಪ್ಪನ ಅತ್ತಿಗೆಯ ಮೈದುನನ ಪತ್ನಿಯ ಅಣ್ಣ ಎಲ್ಲರಿಗಿಂತ ಜೋರಾಗಿ ಅಳುತ್ತಿರುತ್ತಾನೆ. ಈತನೇಕೆ ಅಷ್ಟೊಂದು ಜೋರಾಗಿ ರೋದಿಸುತ್ತಾನೆ ಎಂದು ಎಲ್ಲರಿಗೂ ಆಶ್ಚರ್ಯವಾಗುತ್ತದೆ. ಸತ್ತವರನ್ನು ನೋಡಲು ಒಬ್ಬೊಬ್ಬರೂ ಬರುತ್ತಿರುವಂತೆ ಇವನ ರೋದನೆಯೂ ಜಾಸ್ತಿಯಾಗುತ್ತದೆ. 2. ಕೆಲವರಿಗೆ ಇಂಥ ಮೂರ್ನಾಲ್ಕು ಮಂದಿಯನ್ನು ಸಮಾಧಾನಪಡಿಸುವುದೇ ಕೆಲಸ. ಈ ಸಮಾಧಾನಪಡಿಸುವವರ ಅಸಲಿಯತ್ತೇನೆಂದರೆ ಅವರಿಗೆ ಅಳು ಬಂದಿರುವುದಿಲ್ಲ. ಹೀಗಾಗಿ ಸಮಾಧಾನಪಡಿಸುವ ಕೆಲಸ ವಹಿಸಿಕೊಂಡು ಗಮನ ಸೆಳೆಯುತ್ತಾರೆ.
3. ಕೆಲವರು ಅಂತ್ಯಸಂಸ್ಕಾರಕ್ಕೆ ಬರುವಾಗ ಬಾಟಾ ಸ್ಲಿಪ್ಪರ್ ಧರಿಸಿ ಬರುತ್ತಾರೆ. ಹೋಗುವಾಗ ಅದನ್ನು ಮರೆತು, ಬೇರೆಯವರು ಕಳಚಿಟ್ಟ ದುಬಾರಿ ಚಪ್ಪಲಿ ಅಥವಾ ಬೂಟು ಧರಿಸಿ ಹೋಗುತ್ತಾರೆ. ಚಪ್ಪಲಿ ಕಳೆದುಕೊಂಡವರದು ನಿಜವಾದ ಶೋಕ ಅಥವಾ ರೋದನೆ. ಅವರಿಗೆ ಆ ಕ್ಷಣದ ಮಟ್ಟಿಗೆ ತುಂಬಲಾರದ ನಷ್ಟ. 4. ಮನೆಯ ಹಿರಿಯ ಅಥವಾ ಗಂಡನ ತಂದೆ-ತಾಯಿ ತೀರಿ ಹೋದರೆ, ದುಃಖ ಬರದಿದ್ದರೂ ಎಲ್ಲರಿಗಿಂತ ಕ್ರಿಯಾಶೀಲಳಾಗಿರುವವಳು ಸೊಸೆ. ‘ಆನಂದ’ವನ್ನು ಯಾರಿಗೂ ಕಾಣದಂತೆ ಅಡಗಿಸಿಟ್ಟುಕೊಂಡು, ಬೇಸರವಾದಂತೆ ನಟಿಸಬೇಕಾದ ಗುರುತರ ಜವಾಬ್ದಾರಿ ಅವಳ ಮೇಲೆ. ತನ್ನ ಅತ್ತೆ-ಮಾವ ತನ್ನನ್ನು ಎಷ್ಟು ಪ್ರೀತಿಸುತ್ತಿದ್ದರು ಎಂಬುದರ ಮೂಲಕ ಅವರ ಗುಣಗಾನ.
5. ಈ ಶೋಕ ಸಂದರ್ಭದಲ್ಲೂ ಸೊಸೆಯನ್ನು ನೋಡಿ, ‘ಅದೆಲ್ಲ ಆಯ್ತು, ನೀನು ಗಂಡು ಮಗುವನ್ನು ಹೆತ್ತು ನಮ್ಮ ಕೈಗಿಡುವುದು ಯಾವಾಗ ?’ ಎಂದು ಪ್ರಶ್ನಿಸುವ ಎಲ್ಲ ಉಸಾಬರಿಗಳನ್ನೂ ವಿಚಾರಿಸುವವರು. ನಟಿ ಶರ್ಮಿಳಾ ಟಾಗೋರ್ ಹಾಗೂ ಕ್ರಿಕೆಟಿಗ ಪಟೌಡಿ ಮಗಳು, ಸೈಫ್ ಅಲಿ ಸಹೋದರಿ, ನಟಿ ಕರೀನಾ ಕಪೂರ್ ಖಾನ್ ನಾದಿನಿ ಸೋಹಾ ಅಲಿ ಖಾನ್ ಇತ್ತೀಚೆಗೆ”The Perils of Being Moderately Famous”ಎಂಬ ಪುಸ್ತಕ ಬರೆದಿದ್ದಾರೆ. ಈ ಕೃತಿಯೂ ಸೊಗಸಾಗಿದೆ. ಅಂದರೆ ರೀಡಬಲ್ ಎಂದರ್ಥ. ಅಂದಹಾಗೆ ಬಾಲಿವುಡ್ ನಟ, ನಟಿಯರ ಬಗ್ಗೆ ಪುಸ್ತಕ ಪ್ರಕಟವಾಗುತ್ತಿರುವುದು, ಅವರೂ ಪುಸ್ತಕ ಬರೆಯುತ್ತಿರುವುದು ಖುಷಿ ವಿಚಾರ. ನಮ್ಮ ಕನ್ನಡ ನಟ-ನಟಿಯರಿಗೆ ಇದ್ಯಾವುದಕ್ಕೂ ಪುರುಸೊತ್ತಿಲ್ಲ.
ನಾನು ನಾನಾಗಿರುವುದು ಇಲ್ಲೇ
ಹುಚ್ಚಾಸ್ಪತ್ರೆಯಲ್ಲೊಬ್ಬ ತತ್ತ್ವಶಾಸ್ತ್ರ ಪುಸ್ತಕ ಓದುತ್ತಿದ್ದ. ಅದನ್ನು ಅಲ್ಲಿಗೆ ಆಗಮಿಸಿದವನಿಗೆ ಅಚ್ಚರಿ. ಅದಕ್ಕೆ ಕಾರಣ ಕೇಳಿದ. ಆತ ಹೇಳಿದ- ‘ನನ್ನ ತಂದೆ ವಕೀಲ. ಯಾವತ್ತೂ ವಕೀಲನಾಗು ಅಂತ ಪೀಡಿಸುತ್ತಾನೆ. ತಾಯಿ ವೈದ್ಯೆ. ವೈದ್ಯನಾಗು ಅಂತ ಪೀಡಿಸುತ್ತಾಳೆ. ನನ್ನ ಭಾವ ಮೇಷ್ಟ್ರು. ನಾನೂ ಮೇಷ್ಟ್ರೇ ಆಗಬೇಕಂತೆ. ನನ್ನ ಸಂಗೀತ ಗುರು ಸದಾ ಪಿಯಾನೋ ಕಲಿ ಅಂತ ಒತ್ತಾಯಿಸುತ್ತಾರೆ. ಎಲ್ಲರೂ ತಮ್ಮ ಉದ್ಯೋಗ, ಹವ್ಯಾಸವನ್ನೇ ಹೇರುತ್ತಾರೆ. ಬೇರೆ ದಾರಿ ಕಾಣದೇ ಇಲ್ಲಿಗೆ ಬಂದೆ. ಇಲ್ಲಿ ನನಗನಿಸಿದಂತೆ ಇದ್ದೇನೆ.’
ಪತ್ರಕರ್ತರು ಅಲ್ಲಿಗೆ ಹೋಗಲಿಲ್ಲ ಏಕೆ ?
ಕೆಲವು ತಿಂಗಳುಗಳ ಹಿಂದೆ, ಬಂಗಾಳಕೊಲ್ಲಿಯಲ್ಲಿರುವ ನಾರ್ಥ್ ಸೆಂಟಿನೆಲ್ ಐಲ್ಯಾಂಡ್ಗೆ ಕರೆದುಕೊಂಡು ಹೋಗುವುದಾಗಿ ಕಂಪನಿಯೊಂದು ಹೇಳಿತ್ತು. ಇಪ್ಪತ್ತು ಪತ್ರಕರ್ತರಿಗೆ ಆಮಂತ್ರಣ ನೀಡಲಾಗಿತ್ತು. ಒಬ್ಬರ ಹೊರತಾಗಿ ಉಳಿದವರೆಲ್ಲರೂ ಆಮಂತ್ರಣವನ್ನು ಸ್ವೀಕರಿಸಿ, ಬರುವುದಾಗಿ ಒಪ್ಪಿಗೆ ಸೂಚಿಸಿದರು. ಆಮಂತ್ರಣವನ್ನು ತಿರಸ್ಕರಿಸಿದ್ದಕ್ಕೆ ಕಾರಣ ಕೇಳಿದಾಗ, ಅನಾರೋಗ್ಯದ ನೆಪ ಬಂತು. ಆದರೆ ಅಸಲಿ ವಿಷಯವೇ ಬೇರೆ.
ಈ ಭೂಮಿಯ ಮೇಲೆ ಯಾವುದಾದರೂ ಪ್ರದೇಶಕ್ಕೆ ಯಾರೂ ಹೋಗಲು ಬಯಸದಿದ್ದರೆ ಅದು ನಾರ್ಥ್ ಸೆಂಟಿನಲ್ ಐಲ್ಯಾಂಡ್. ಆ ಜನಸಂಖ್ಯೆ ಹೆಚ್ಚೆಂದರೆ ನಾನೂರು ಇದ್ದಿರಬಹುದು. ಸೆಂಟಿನಲೀಸ್ ಎಂಬ ಬುಡಕಟ್ಟು ಜನಾಂಗದವರು ಅಲ್ಲಿ ವಾಸಿಸುತ್ತಿದ್ದಾರೆ. ಆ ದ್ವೀಪಕ್ಕೆ ಯಾರಾದರೂ ಅಚಾನಕ್ ಆಗಿ ಹೋದರೂ ಸಾಕು, ಬಯಸಿ ಹೋದರೂ ಸಾಕು, ಆ ಬುಡಕಟ್ಟು ಜನಾಂಗದವರು ದಯೆ-ದಾಕ್ಷಿಣ್ಯವಿಲ್ಲದೇ ಸಾಯಿಸಿಬಿಡುತ್ತಾರೆ. 2006ರಲ್ಲಿ ಇಬ್ಬರು ಭಾರತೀಯ ಮೀನುಗಾರರು ದಿಕ್ಕುತಪ್ಪಿ ಆ ದ್ವೀಪಕ್ಕೆ ಹೋದವರು ವಾಪಸ್ ಬರಲೇ ಇಲ್ಲ.
ಈ ಮೀನುಗಾರರ ಶವಗಳನ್ನು ಹುಡುಕಿಕೊಂಡು ನೌಕಾಪಡೆಯ ಹೆಲಿಕಾಪ್ಟರ್ ಆ ದ್ವೀಪದ ಮೇಲೆ ಹಾರುತ್ತಿದ್ದಾಗ ಬುಡಕಟ್ಟು ಜನರು ಬಾಣ ಓಡಿಸಿದ್ದರು. ಅಪ್ಪಿ ತಪ್ಪಿ ಅಲ್ಲಿಗೆ ಹೋದ ಪ್ರವಾಸಿಗರಾರೂ ಹಿಂತಿರುಗಿ ಬಂದಿಲ್ಲ. ಹೀಗಾಗಿ ಈ ದ್ವೀಪದ ಬಗ್ಗೆ ಯಾರಿಗೂ ಗೊತ್ತಿಲ್ಲ. ಈ ದ್ವೀಪದ ಸುತ್ತಲಿನ ಮೂರು ಮೈಲಿ ದೂರ ಯಾರೂ ಹೋಗದಂತೆ ಭಾರತ ಸರಕಾರ ನಿರ್ಬಂಧ ಹೇರಿದೆ. ಗೊತ್ತಿಲ್ಲದೇ ಆ ದ್ವೀಪದ ಮೇಲೆ ಕಾಲಿಟ್ಟು ಜೀವ ಕಳೆದುಕೊಳ್ಳದಿರಲಿ ಎಂಬುದು ಈ ನಿರ್ಬಂಧಕ್ಕೆ ಕಾರಣ. ಪ್ರಾಯಶಃ ಈ ಸಂಗತಿ ಪತ್ರಕರ್ತನೊಬ್ಬನಿಗೆ ಗೊತ್ತಾಗಿ, ಆತ ಉಳಿದವರಿಗೂ ಹೇಳಿರಬೇಕು. ಆನಂತರ ಎಲ್ಲರೂ ತಾವು ಬರುವುದಿಲ್ಲವೆಂದು ದಿಲ್ಲಿ ಪತ್ರಕರ್ತರನ್ನು ಕಂಡು ಮೂಲ ಬುಡಕಟ್ಟು ಜನಾಂಗವೇ ದ್ವೀಪ ಖಾಲಿ ಮಾಡುತ್ತಿದ್ದರಾ ? ಗೊತ್ತಿಲ್ಲ. ಅಂತೂ ಯಾರೂ ಅಲ್ಲಿಗೆ ಹೋಗಲಿಲ್ಲ.