ಜಾರ್ಜ್ ಅವರೇ, ಇದೇನು ಕಂಡಲ್ಲಿ ಗುಂಡಿ ಬೆಂಗಳೂರಲ್ಲಿ ಬದುಕು ಗಂಡಾಗುಂಡಿ!

Posted In : ಅಂಕಣಗಳು, ಇದೇ ಅಂತರಂಗ ಸುದ್ದಿ

ಮೊನ್ನೆ ಬೆಂಗಳೂರು ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್ ಎಂಬ ಶುದ್ಧ ಅವಿವೇಕಿ ಹಾಗೂ ಬೇಜವಾಬ್ದಾರಿ ಮನುಷ್ಯ ಹೇಳುವುದನ್ನು ಕೇಳುತ್ತಿದ್ದೆ. ‘ನಗರದಲ್ಲಿ ಒಂದು ವಾರದ ಅವಧಿಯಲ್ಲಿ ಸಂಭವಿಸಿದ ಬೈಕ್ ಸವಾರರ ಸಾವಿಗೆ ರಸ್ತೆ ಗುಂಡಿ ಕಾರಣವಲ್ಲ. ಎರಡೂ ಪ್ರಕರಣಗಳಲ್ಲಿ ಹಿಂದಿನಿಂದ ಬಂದ ಲಾರಿ ಹತ್ತಿ ಬೈಕ್ ಸವಾರರ ಸಾವು ಸಂಭವಿಸಿದೆ. ರಸ್ತೆ ಗುಂಡಿಯಿಂದ ಸಾವು ಸಂಭವಿಸಿಲ್ಲ’ ಎಂದು ಜಾರ್ಜ್ ಸಮರ್ಥನೆ ಮಾಡಿಕೊಳ್ಳುತ್ತಿದ್ದರು. ಈ ಮನುಷ್ಯನಿಗೆ ಏನಾಗಿದೆ? ಅಷ್ಟಕ್ಕೂ ಇವರನ್ನು ಮನುಷ್ಯರೆಂದು ಹೇಗೆ ಒಪ್ಪಿಕೊಳ್ಳುವುದು? ಇಡೀ ಬೆಂಗಳೂರು ನಗರದಲ್ಲಿ ರಸ್ತೆಯೇ ತೊಳೆದು ಹೋಗಿದೆ. ಕಿಲೋಮೀಟರ್‌ಗೆ ಹತ್ತು ಗುಂಡಿಗಳಂತೆ ನಾಲ್ಕು ಸಾವಿರ ಕಿಲೋ ಮೀಟರ್ ರಸ್ತೆಯಿರುವ ಬೆಂಗಳೂರು ನಗರದಲ್ಲಿ ಕನಿಷ್ಠ 40 ಸಾವಿರ ಗುಂಡಿಗಳು ಬಾಯಿ ತೆರೆದು ಕೊಂಡಿವೆ. ಕೆಲವೆಡೆ ರಸ್ತೆಯೇ ಇಲ್ಲವಾಗಿದೆ. ಬರೀ ಗುಂಡಿಗಳೇ!

ದ್ವಿಚಕ್ರ ವಾಹನ ಚಾಲಕರು ಸರ್ಕಸ್‌ನಲ್ಲಿ ಹಗ್ಗದ ಮೇಲೆ ಸೈಕಲ್ ಓಡಿಸುವಂತೆ ಓಡಿಸಬೇಕು. ಒಂದು ಗುಂಡಿಯನ್ನು ತಪ್ಪಿಸಲು ಹೆಣಗಿದರೆ, ಮತ್ತೊಂದು ಗುಂಡಿಯಲ್ಲಿ ಬೀಳಬೇಕಾಗುತ್ತದೆ. ಅದರಲ್ಲೂ ಹಿಂಬದಿಗೆ ಹೆಂಗಸರನ್ನು ಕುಳ್ಳಿರಿಸಿಕೊಳ್ಳುವ ದ್ವಿಚಕ್ರವಾಹನ ಚಾಲಕರಿಗೆ ಬ್ಯಾಲೆನ್ಸ್‌ ತಪ್ಪಿ, ಬೀಳುವ ಸಾಧ್ಯತೆ ಹೆಚ್ಚು. ಬೈಕ್‌ನಿಂದ ಬಿದ್ದರೆ ಹಿಂಬದಿಯಿಂದ ಬಸ್ಸೋ, ಲಾರಿಯೋ ಇದ್ದರೆ ಮುಗೀತು. ಮೊನ್ನೆಯ ಎರಡೂ ಘಟನೆಗಳಲ್ಲಿ ಹೀಗೇ ಆಗಿದ್ದು. ಕಳೆದ ಹದಿನೈದು ದಿನಗಳಲ್ಲಿ ಐದು ಸಾವಿರಕ್ಕೂ ಹೆಚ್ಚು ಸಣ್ಣಪುಟ್ಟ ಅಪಘಾತಗಳು ಬೆಂಗಳೂರಿನಲ್ಲೊಂದೇ ಸಂಭವಿಸಿದ್ದು, ಏಳೂವರೆ ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಈ ಪೈಕಿ ಹಲವರು ಬದುಕುಳಿದಿದ್ದೇ ಪವಾಡ. ಕೆಲವೆಡೆ ನೂರು-ಇನ್ನೂರು ಮೀಟರ್ ದೂರ ರಸ್ತೆಯೇ ಇಲ್ಲ. ಡಾಂಬರು ಹಾಕಿದ ಯಾವ ಕುರುಹೂ ಇಲ್ಲ. ಶಿಲಾಯುಗದ ಪಳೆಯುಳಿಕೆಗಳಂತೆ ಗೋಚರಿಸುತ್ತವೆ. ನಮ್ಮ ಸಾಧನೆ, ಸಂಸ್ಕೃತಿ, ಅಭಿವೃದ್ಧಿ, ಸ್ವಚ್ಛತೆ, ನಾಗರಿಕತೆಯ ಕನ್ನಡಿಯಾಗಬೇಕಿದ್ದ ರಸ್ತೆಗಳು ಭ್ರಷ್ಟಾಚಾರ, ದುರಾಡಳಿತ, ದುರವಸ್ಥೆ, ಬೇಜವಾಬ್ದಾರಿತನ, ಹೊಣೆಗೇಡಿತನ, ಅನಾಗರಿಕತೆಯ ಪ್ರತಿಫಲನದಂತೆ ಕಂಗೊಳಿಸುತ್ತಿವೆ. ಒಂದೊಂದು ರಸ್ತೆಯೂ ಚರ್ಮದ ಹೊಪ್ಪಳಿಕೆ ಕಿತ್ತು ಬಂದಂತೆ, ಚರ್ಮದ ಮೇಲೆ ಸಿಡುಬಿನ ಬೊಕ್ಕೆ ಎದ್ದಂತೆ ತೋರುತ್ತಿವೆ.

ಕೆಲವು ಕಡೆ ರಸ್ತೆಗೆ ಡಾಂಬರು ಹೊದಿಸಿ ಮೂರು ತಿಂಗಳೂ ಆಗಿಲ್ಲ. ಆಗಲೇ ಐದು ದಿನದ ಮಳೆಯ ಹೊಡೆತಕ್ಕೆ ಕಾವಲಿ ಮೇಲಿನ ದೋಸೆಯಂತೆ ನಿವಾಳಿಸಿಕೊಂಡು ಹೋಗಿದೆ. ನಗರದ ಕೆಲವೆಡೆ ಒಂದು ವರ್ಷದ ಅವಧಿಯಲ್ಲಿ ಮೂರು ಸಲ ರಸ್ತೆ ದುರಸ್ಥಿ, ಡಾಂಬರಿಕರಣ ಮಾಡಲಾಗಿದೆ.ಆದರೆ ಈಗ ಆ ರಸ್ತೆ ‘ವೈಕುಂಠಕ್ಕೆ ಹೋಗುವ ದಾರಿಗಳಂತೆ ಕಾಣುತ್ತದೆ’ ಈ ರಸ್ತೆಗಳಲ್ಲಿ ಓಡಾಡುವ ಲಕ್ಷಾಂತರ ಮಂದಿ ಮನೆಯಿಂದ ಹೊರಟು ಸುರಕ್ಷಿತವಾಗಿ ಮನೆ ಸೇರುವುದೇ ಪವಾಡ ಹಾಗೂ ಅವರ ಪೂರ್ವಜನ್ಮದ ಸುಕೃತ ಫಲ. ಅಲ್ಲಿ ಯಾವ ಅಪಘಾತ ಸಂಭವಿಸಿದರೂ, ಜಾರ್ಜ್ ಪ್ರಕಾರ, ಅದು ಗುಂಡಿಗಳಿಂದಲ್ಲ. ಈ ಅವಿವೇಕಿಗೆ ಬುದ್ಧಿ ನೆಟ್ಟಗಿದೆಯಾ? ಒಂದು ವಾರದ ಮಳೆ ಜಾರ್ಜ್‌ನ ಯೋಗ್ಯತೆಯೇನು ಎಂಬುದನ್ನು ಜಗಜ್ಜಾಹೀರುಗೊಳಿಸಿದೆ.

ಒಂದು ತಿಂಗಳ ಹಿಂದೆ ಬಿದ್ದ ಮಳೆಗೆ ಬೆಂಗಳೂರಿನ ಮರ್ಯಾದೆ ಮೂರಾಬಟ್ಟೆಯಾದಾಗ ತನ್ನ ಹೊಣೆಗೇಡಿತನಕ್ಕೆ ಮರುಗುವುದನ್ನು ಬಿಟ್ಟು, ಈ ಜಾರ್ಜ್ ‘ನ್ಯೂಯಾರ್ಕಿನಲ್ಲಿ ಪ್ರವಾಹ ಎದುರಾದರೆ ಸಮಸ್ಯೆಯಾದೀತು. ಆದರೆ ನಾವು ನ್ಯೂಯಾರ್ಕ್‌ಗಿಂತ ಸಕಲ ರೀತಿಯಲ್ಲೂ ಸನ್ನದ್ಧರಾಗಿದ್ದೇವೆ’ ಎಂದು ಹೇಳಿ ನಗೆಪಾಟಲಿಗೀಡಾದರು. ಅದಾಗಿ ಎರಡು ವಾರಗಳ ನಂತರ ಬಿತ್ತು ನೋಡಿ ಮಳೆ, ಜಾರ್ಜ್ ಎರಡು ದಿನ ಮನೆಯಿಂದ ಹೊರಗೇ ಬೀಳಲಿಲ್ಲ. ಟಿವಿ ಚಾನೆಲ್‌ಗಳೆಲ್ಲ ಎರಡು ದಿನ, ‘ ಎಲ್ಲಿದ್ದಾರ್ರೀ ಜಾರ್ಜ್?’ ಎಂದು ಅರಚಿಕೊಂಡರೂ, ಆಸಾಮಿ ಹನ್ನೆರಡನೇ ಅಂತಸ್ತಿನಲ್ಲಿರುವ ತನ್ನ ಮನೆಯಿಂದ ಕೆಳಗೆ ಪವಡಿಸಲೇ ಇಲ್ಲ.

ಬೆಂಗಳೂರು ಅಕ್ಷರಶಃ ಮುಳುಗಿ, ತೇಲಿತು. ಹಾಗಂತ ಬಿದ್ದಿದ್ದು ಕೇವಲ 70 ಮಿಮಿ ಮಳೆ. ಇದಕ್ಕೂ ಹಿಂದಿನ ವರ್ಷಗಳಲ್ಲಿ 110-125 ಮಿಮಿ ಮಳೆಯಾಗಿತ್ತು. ಆದರೆ ಈ ರೀತಿಯ ಪ್ರವಾಹ ಬಂದಿರಲಿಲ್ಲ. ಆದರೆ ಈ ಸಲದ ಮಳೆ ಬೆಂಗಳೂರಿನ ಬಂಡವಾಳವನ್ನು ಬಟಾ ಬಯಲು ಮಾಡಿತು. ಅರ್ಧದಿನ ಮಳೆ ಸುರಿದರೆ, ಗೋವಿಂದ! ಮಳೆ, ಗಾಳಿ, ಚಂಡಮಾರುತದ ಮುಂದೆ ಮನುಷ್ಯರು ಯಾವ ಲೆಕ್ಕ? ಅದರಲ್ಲೂ ಜಾರ್ಜ್ ಯಾವ ಮರದ ತೊಪ್ಪಲು? ಆದರೆ ಅದನ್ನು ನಿಭಾಯಿಸುವಲ್ಲಿ ನಮ್ಮ ಸಿದ್ಧತೆಗಳೇನು? ಅದನ್ನೂ ಸಹಿಸಿಕೊಳ್ಳುವ ತಾಕತ್ತು ನಮ್ಮ ಮೂಲ ಸೌಲಭ್ಯ ವ್ಯವಸ್ಥೆಯಾಗಿದೆಯಾ? ನಮಗಿನ್ನೂ ಹೊಪ್ಪಳಿಕೆಯೆದ್ದು ಹೋಗದಂಥ, ಕನಿಷ್ಠ ಎರಡು ವರ್ಷ ಬಾಳಿಕೆ ಬರುವಂಥ ಕನಿಷ್ಠ ರಸ್ತೆಯನ್ನು ನಿರ್ಮಿಸಲು ಸಾಧ್ಯವಾಗಿಲ್ಲ. ಗುಂಡಿಗಳಿಲ್ಲದ ರಸ್ತೆಯನ್ನು ನಿರ್ಮಿಸಲು ಸಾಧ್ಯವಾಗಿಲ್ಲ. ಇವು ತೀರಾ ತೀರಾ ಚಿಜ್ಚಿ ಸೌಲಭ್ಯ. ಅದನ್ನೇ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಆಗಿಲ್ಲ. ವರ್ಷವರ್ಷ, ಮೂರ್ನಾಲ್ಕು ಸಲ ರಸ್ತೆ ರಿಪೇರಿ ಮಾಡುತ್ತೇವೆ. ರಸ್ತೆೆಯನ್ನೇ ನಿರ್ಮಿಸಲಾಗದವರು, ನ್ಯೂಯಾರ್ಕ್ ಬಗ್ಗೆ ಮಾತಾಡುತ್ತಾರಲ್ಲ, ಇವರಿಗೆ ನೈತಿಕತೆ ಇದೆಯಾ ? ಜಗತ್ತು ಇಷ್ಟು ಮುಂದುವರಿದಿದ್ದರೂ, ನಮಗೆ ಇನ್ನೂ ಗುಂಡಿಗಳಿಲ್ಲದ, ಉತ್ತಮ ರಸ್ತೆಗಳನ್ನು ನಿರ್ಮಿಸಲು ಸಾಧ್ಯವಾಗಿಲ್ಲ.

ನ್ಯೂಯಾರ್ಕ್‌ನಂಥ ನಗರದಲ್ಲೂ ಈ ರೀತಿ ಆಗುವುದಿಲ್ಲ. ಅಲ್ಲಿ ಪ್ರಕೃತಿ ವಿಕೋಪ ಸಂಭವಿಸಿಯೋ, ಭಯೋತ್ಪಾದಕ ಚಟುವಟಿಕೆಯಿಂದಾಗಿಯೋ ಅಥವಾ ಇನ್ನಿತರ ಕಾರಣಗಳಿಂದಲೋ ದುರಂತ, ಅಪಘಾತ ಸಂಭವಿಸಿದರೆ, ವಾಹನ ಸಂಚಾರ ಸಂಪೂರ್ಣ ಸ್ಥಗಿತವಾಗುವುದಿಲ್ಲ. ವಿಪರೀತ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಹೇಗೆ ಎದುರಿಸುವುದು ಎಂಬ ಬಗ್ಗೆ ನ್ಯೂಯಾರ್ಕ್ ಆಡಳಿತ ಪೂರ್ವಭಾವಿ ಕ್ರಮ ಕೈಗೊಳ್ಳುತ್ತದೆ. ಅಲ್ಲದೇ ನೂರಾರು ಅಣಕು ದುರಂತ ಪ್ರದರ್ಶನಗಳ ಮೂಲಕ ಜನರನ್ನು ಜಾಗೃತಗೊಳಿಸಿದೆ. ಚಳಿಗಾಲದಲ್ಲಿ ಹಿಮಪಾತವಾಗಿ ಇಡೀ ನಗರ ಸ್ಥಗಿತಗೊಳ್ಳುವಂಥ ಪರಿಸ್ಥಿತಿ ನಿರ್ಮಾಣವಾದರೂ, ಒಂದೆರಡು ಗಂಟೆಗಳಲ್ಲಿ ವಾತಾವರಣವನ್ನು ತಿಳಿಗೊಳಿಸುವಷ್ಟು ಅಲ್ಲಿನ ವ್ಯವಸ್ಥೆ ಪರಿಪಕ್ವವಾಗಿದೆ.

ಯಾರೂ ಏನೂ ಮಾಡದ ಅಬ್ಬೇಪಾರಿ ಸ್ಥಿತಿ, ಅರಾಜಕತೆ ಉದ್ಭವಿಸುವುದಿಲ್ಲ. ವರ್ಲ್ಡ್‌ ಟ್ರೇಡ್ ಸೆಂಟರ್‌ನ ಟ್ವಿನ್‌ಟವರ್ ನೆಲಸಮವಾದಾಗಲೂ ನ್ಯೂಯಾರ್ಕ್ ನಗರ ಧೃತಿಗೆಡಲಿಲ್ಲ. ಅಲ್ಲಿನ ಅಂತರ್ಗತ ವ್ಯವಸ್ಥೆ ಕುಸಿದು ಹೋಗಿಲ್ಲ. ಬೇರೆ ಗ್ರಹಗಳಿಂದ ಏಲಿಯನ್‌ಗಳು ದಾಳಿ ಮಾಡಿದರೆ, ಏನು ಮಾಡಬೇಕು, ಯಾವ ರೀತಿ ಪ್ರತಿರೋಧ ಒಡ್ಡಬೇಕು ಎಂಬ ಬಗ್ಗೆ ಸಹ ನ್ಯೂಯಾರ್ಕ್ ಆಡಳಿತ ವ್ಯವಸ್ಥೆಯಲ್ಲಿ ಅಸ್ತ್ರಗಳಿವೆ. ಪರಿಹಾರಗಳಿಲ್ಲದ ಪರಿಸ್ಥಿತಿ ಎಂದೂ ನಿರ್ಮಾಣವಾಗುವುದಿಲ್ಲ. ನ್ಯೂಯಾರ್ಕ್ ನಗರದ ಮೇಲೆ ಅಣ್ವಸ್ತ್ರ ದಾಳಿಯಾದರೆ, ಭೂಕಂಪವಾದರೆ, ನೀರು ನಗರದೊಳಗೆ ನುಗ್ಗಿದರೆ, ಆಕಾಶಕಾಯಗಳು ಅಪ್ಪಳಿಸಿದರೆ ಏನು ಮಾಡಬೇಕೆಂಬುದು ‘ಬ್ಲೂಬುಕ್’ನಲ್ಲಿದೆ. ಅಲ್ಲಿನ ಆಡಳಿತ ಸಮರ ಸನ್ನದ್ಧ ಸ್ಥಿತಿಯಲ್ಲಿರುತ್ತದೆ.

ಜಾರ್ಜ್ ಹೇಳಬೇಕು, ಅಂಥ ಯಾವ ವ್ಯವಸ್ಥೆ ನಮ್ಮಲ್ಲಿದೆ ? ಮೂರು ತಾಸು ಮಳೆಗೆ ಇಡೀ ನಗರ ಅಧೋ ಅಧೋ ಅಂದುಬಿಟ್ಟಿತು. ಯಾವ ಸಂದರ್ಭದಲ್ಲಾದರೂ ಸಾಂಕ್ರಾಮಿಕ ರೋಗಗಳು ಹರಡಬಹುದು. ಎರಡೂವರೆ ಲಕ್ಷ ಬೀಡಾಡಿ ನಾಯಿಗಳು ಯಾವ ಕ್ಷಣದಲ್ಲಿ ಬೇಕಾದರೂ ಅಮಾಯಕರ ಮೇಲೆ ಎಗರಬಹುದು.ದುರಂತ ಸಂಭವಿಸಿದ ನಂತರವೇ ಕಾರ್ಯಪ್ರವೃತ್ತವಾಗುವ ಜಾಯಮಾನಕ್ಕೆ ಒಗ್ಗಿರುವುದರಿಂದ, ಅದಕ್ಕಿಂತ ಮೊದಲು preparedness ಸ್ಥಿತಿಯಲ್ಲಿ ಇರುವುದು ನಮಗೆ ಗೊತ್ತೇ ಇಲ್ಲ. ಹೀಗಿರುವಾಗ ಜಾರ್ಜ್ ಬಾಯಲ್ಲಿ ನ್ಯೂಯಾರ್ಕ್ ಮಾತು ಬಂದರೆ ಅದಕ್ಕಿಂತ ದೊಡ್ಡ ಜೋಕ್ ಇನ್ನೊಂದು ಇರಲಾರದು.

ಮೊನ್ನೆ ಬೆಂಗಳೂರಿನಲ್ಲಿ ಕುಂಭದ್ರೋಣ ಮಳೆ ಸುರಿಯುತ್ತಿದ್ದರೆ, ಇಸ್ರೇಲಿನಿಂದ ಇಬ್ಬರು ಜಲತಜ್ಞರು ಬೆಂಗಳೂರಿಗೆ ಆಗಮಿಸಿದ್ದರು. ಸರಕಾರದ ಮಂತ್ರಿಗಳನ್ನು,ಅಧಿಕಾರಿಗಳನ್ನು ಭೇಟಿ ಮಾಡಲು ಅವರು ಹರಸಾಹಸ ಮಾಡಿ, ಕೊನೆಗೆ ವಿಫಲರಾಗಿ ವಾಪಸ್ ಹೋಗುವ ಮುನ್ನ ನಮ್ಮ ಕಾರ್ಯಾಲಯಕ್ಕೆ ಆಗಮಿಸಿದ್ದರು. ಎಂ.ಜಿ.ರಸ್ತೆಯಿಂದ ನಮ್ಮ ಕಾರ್ಯಾಲಯ ಎಂಟು ಕಿ.ಮೀ ದೂರವಿದ್ದಿರಬಹುದು. ಸಾಮಾನ್ಯ ದಿನಗಳಲ್ಲಿ ಅಷ್ಟು ದೂರ ಕ್ರಮಿಸಲು ಹೆಚ್ಚೆಂದರೆ ಒಂದು ಗಂಟೆ ಸಾಕು. ಇವರಿಗೆ ಅಂದು ಸುಮಾರು ಮೂರು ಮುಕ್ಕಾಲು ಗಂಟೆ ಹಿಡಿದಿತ್ತು. ಸುಮಾರು ಒಂದು ಗಂಟೆ ಕಾಲ ವಾಹನಗಳು ಚಲಿಸುತ್ತಲೇ ಇರಲಿಲ್ಲ. ಎಲ್ಲವೂ ನಿಂತಲ್ಲೇ ನಿಂತಿದ್ದವು. ಕೆಳಗೆ ಇಳಿಯುವಂತಿರಲಿಲ್ಲ. ಮೊಣಕಾಲು ಅದ್ದುವಷ್ಟು ನೀರಿನಲ್ಲಿ ಕಾರು ನಿಂತಿತ್ತು.

ತುರ್ತಾಗಿ ಮೂತ್ರ ವಿಸರ್ಜನೆಗೆ ಹೋಗುವಂತೆಯೂ ಇರಲಿಲ್ಲ. ರಸ್ತೆಯಲ್ಲಿ ಬಾಯ್ತೆರೆದ ಗುಂಡಿಗಳಲ್ಲಿ ನೀರು ನಿಂತಿದ್ದರಿಂದ ಗುಂಡಿಗಳು ಕಾಣಿಸದೇ ಅವುಗಳಲ್ಲಿ ಬಿದ್ದು ವಾಹನಗಳ ಮುಂಭಾಗ ಕೆಳಗಡೆ ಜೋರಾಗಿ ಬಡಿಯುತ್ತಿತ್ತು. ಈ ಇಬ್ಬರು ಜಲತಜ್ಞರು ಕೈಯಲ್ಲಿ ಜೀವ ಹಿಡಿದು ಗುಬ್ಬಚ್ಚಿಯಂತೆ ಕಾರಿನಲ್ಲಿ ಕುಳಿತಿದ್ದರು. ಕಾರಿನ ಡ್ರೈವರ್ ಊಟವಿಲ್ಲದೇ ಕುಳಿತಿದ್ದ. ಇದ್ದ ಒಂದು ಬಾಟಲಿ ನೀರು ಖಾಲಿಯಾಗಿ ಹೋಗಿತ್ತು. ಇನ್ನು ಅರ್ಧಗಂಟೆಯಾಗಿದ್ದರೆ, ಚಾಲಕ ಮೂರ್ಛೆ ತಪ್ಪಿ ಬೀಳುವುದೊಂದು ಬಾಕಿ.

“Bangaluru is a dangerous city’ ಅವರಲ್ಲೊಬ್ಬರು ಉದ್ಗಾರ ತೆಗೆದರು. ‘ಹಾಗೇಕೆ ಹೇಳ್ತೀರಾ ? ಅಂಥ ಡೇಂಜರಸ್ ಏನಿದೆ ?’ ಎಂದು ಕೇಳಿದೆ. ಬೆಂಗಳೂರಿನಲ್ಲಿ civil system ಎಂಬುದೇ ಇಲ್ಲ. ಮೂಲಭೂತ ವ್ಯವಸ್ಥೆಗಳಾದ ರಸ್ತೆ, ಫುಟ್‌ಬಾತ್, ಕಾಲುವೆ ಒಳಚರಂಡಿ, ನೈರ್ಮಲ್ಯ ಇಲ್ಲವೇ ಇಲ್ಲ. ಚಿಜ್ಚಿ ಸಂಗತಿಗಳಿಗೆ ಮಹತ್ವವನ್ನೇ ಕೊಟ್ಟಿಲ್ಲ. ಅರ್ಧಗಂಟೆ ಮಳೆಯಾದರೆ ಇಡೀ ನಗರದಲ್ಲಿ ಪ್ರವಾಹವುಂಟಾಗುತ್ತದೆ. ರಸ್ತೆಯ ಮೇಲೆ ನೀರು ಬಿದ್ದರೆ ಹರಿದು ಹೋಗಲು ಕಾಲುವೆಯೇ ಇಲ್ಲ. ಅದಕ್ಕಿಂತ ಹೆಚ್ಚಾಗಿ ರಸ್ತೆಯ ಮೇಲೆ ನೀರು ಬಿದ್ದರೆ, ರಸ್ತೆಯೇ ಕೊಚ್ಚಿಕೊಂಡು ಹೋಗುತ್ತದೆ. ಏಕಾಏಕಿ ಗುಂಡಿಗಳು ಬಾಯಿ ತೆರೆದುಕೊಳ್ಳುತ್ತವೆ. ರಸ್ತೆಗಳ ಮೇಲೆ ನೀರು ಹರಿಯುವುದು ಅಪಾಯದ ಸಂಕೇತ ನಿಮ್ಮಲ್ಲಿ ಒಂದು ವೈಜ್ಞಾನಿಕ ವ್ಯವಸ್ಥೆ ಎಂಬುದೇ ಇಲ್ಲ’ ಎಂದು ಆ ಜಲತಜ್ಞರು ಹೇಳಿದರು.

‘ನಾವು ಇಂದು ತುರ್ತುಪರಿಸ್ಥಿತಿಯಂಥ ಸಂದರ್ಭವನ್ನು ಎದುರಿಸಿದೆವು. ನಮಗೆ ವಾಪಸ್ ಹೋಗಲು ಸಹ ಆಗುತ್ತಿರಲಿಲ್ಲ. ನಾವು ಒಂಥರ trap ಆದೆವು. ಮಳೆಯೇನಾದರು ಇನ್ನೂ ಒಂದೆರಡು ತಾಸು ಮುಂದುವರಿದಿದ್ದರೆ, ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿತ್ತು. ಇಂಥ ಅಧ್ವಾನದ ಸನ್ನಿವೇಶವನ್ನು ನಾವು ಎದುರಿಸಿಯೇ ಇರಲಿಲ್ಲ.’ ಎಂದು ನಿಟ್ಟುಸಿರು ಬಿಟ್ಟರು. ‘ಬೆಂಗಳೂರಿನಿಂದ ಸುರಕ್ಷಿತವಾಗಿ ವಾಪಸ್ ತಾಯ್ನಾಡಿಗೆ ಹೋಗುತ್ತೇವೆಂಬ ಭಾವನೆ ಇರಲಿಲ್ಲ. ನಾವು ನಿಮ್ಮ ಕಾರ್ಯಾಲಯಕ್ಕೆ ಬಂದಿದ್ದು ಅಚ್ಚರಿ ಹಾಗೂ ಪವಾಡ’ ಎಂದು ತಮ್ಮ ಗೋಳನ್ನು ಬಣ್ಣಿಸುತ್ತಿದ್ದರೆ, ನಾನು ಮನಸ್ಸಿನಲ್ಲಿ ‘ನೀವು ನಿಮ್ಮ ಜೀವಮಾನದಲ್ಲಿ ಒಂದು ಸಲ ಇಂಥ ಸನ್ನಿವೇಶವನ್ನು ಎದುರಿಸಿರಬಹುದು. ಆದರೆ ನಾವು ಇಲ್ಲಿ ಪ್ರತಿದಿನ, ಕ್ಷಣ ಕ್ಷಣವೂ ಎದುರಿಸುತ್ತೇವೆ.’ ಎಂದು ಅಂದುಕೊಂಡೆ.

ನನಗೆ ಈ ಯಾವ ಸಂಗತಿಗಳೂ ಮನಸಿಗೆ ಅಷ್ಟು ತಾಕಲಿಲ್ಲ. ಅವರು ಮಳೆನೀರಿನ ನಿರರ್ಥಕತೆ ಬಗ್ಗೆ ಹೇಳಿದ್ದು ಕೇಳಿ ಬಹಳ ಬೇಸರವಾಯಿತು. ‘ಮೂರು ತಿಂಗಳ ಹಿಂದೆ,ಎಲ್ಲ ಪತ್ರಿಕೆಗಳು ವರದಿ ಮಾಡಿದ್ದವು. ಏನೆಂದರೆ, ಕರ್ನಾಟಕದಲ್ಲಿ ಈ ಸಲ ಬರಗಾಲ ನಿಶ್ಚಿತವೆಂದು. ಕಾರಣ ಮುಂಗಾರು ಮಳೆ ಕೈಕೊಟ್ಟಿತ್ತು.ರಾಜ್ಯ ಸರ್ಕಾರ ಕಂಗಾಲಾಗಿ ಮೋಡ ಬಿತ್ತನೆಗೆ ಯೋಚಿಸಿತ್ತು. ಅಂಥ ಶೋಚನೀಯ ಸ್ಥಿತಿ ತಲೆದೋರಿತ್ತು. ಜಲಾಶಯಗಳ್ಯಾವವೂ ನಿರೀಕ್ಷಿತ ಮಟ್ಟದಲ್ಲಿ ತುಂಬಿರಲಿಲ್ಲ. ಈ ರೀತಿ ಮಳೆ ಬೀಳಬಹುದೆಂದು ಯಾರೂ ನಿರೀಕ್ಷಿಸಿರಲಿಲ್ಲ. ಬೆಂಗಳೂರಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದರೆ ನೀರು ಮೋರಿಗಳಲ್ಲೋ. ಚರಂಡಿಗಳಲ್ಲೋ ಹರಿದು ಹೋಗುತ್ತಿತ್ತು. ಈ ನೀರನ್ನು ಹಿಡಿದಿಟ್ಟುಕೊಳ್ಳುವ ಯಾವ ಯೋಚನೆಗಳಾಗಲಿ, ಯೋಜನೆಗಳಾಗಲಿ ಇದ್ದಂತಿಲ್ಲ. ಇಡೀ ನಗರದಲ್ಲಿ ಬಿದ್ದ ನೀರಿನ ಶೇ. ಹತ್ತರಷ್ಟು ನೀರು ಮಾತ್ರ ಭೂಮಿಯ ಒಡಲನ್ನು ಸೇರಬಹುದು. ಉಳಿದ ನೀರು ಒಳ ಸೇರಲು ಅವಕಾಶವೇ ಇಲ್ಲ. ಇಡೀ ನಗರ ಕಟ್ಟಡ, ಡಾಂಬರು ರಸ್ತೆಗಳಿಂದ ಆವರಿಸಿಕೊಂಡು ಬಿಟ್ಟಿದೆ. ಮಳೆಗಾಲವಿಡೀ ಮಳೆಯಾದರೂ ಭೂಮಿಯೊಳಗೆ ನೀರಿನ ಪಸೆಯಾಗಲಿ, ಒರತೆಯಾಗಲಿ ಜಿನುಗುವುದಿಲ್ಲ. “It’s bad way of handling rain ಎಂದರು.

‘ಇಸ್ರೇಲಿನಲ್ಲಿ ವರ್ಷಕ್ಕೆ 50ಮಿಮಿ ಮಳೆಯಾದರೆ ಹೆಚ್ಚು. ಮೊನ್ನೆ ಬೆಂಗಳೂರಿನಲ್ಲಿ ಮೂರು ತಾಸು ಮಳೆಯಾದಷ್ಟು ಇಸ್ರೇಲಿನಲ್ಲಿ ಒಂದು ವರ್ಷಕ್ಕೆ ಆಗುತ್ತದೆ. ಬಿದ್ದ ಪ್ರತಿ ಹನಿಯನ್ನೂ ನಾವು ಬಳಸಿಕೊಳ್ಳುತ್ತೇವೆ. ಯಾವ ಕಾರಣಕ್ಕೂ ನೀರು ವ್ಯರ್ಥವಾಗಿ ಹರಿದು ಹೋಗಲು ಬಿಡುವುದಿಲ್ಲ. ನಮಗೆ ಆಶ್ಚರ್ಯವಾಗುವ ಹಾಗೂ ಸಂಕಟವಾಗುವ ಅಂಶವೇನೆಂದರೆ, ಈ ರಾಜ್ಯದಲ್ಲಿ ಇಷ್ಟೊಂದು ಮಳೆಯಾಗುತ್ತಿದೆ. ಆದರೆ ನೀರು ವಿಪರೀತ ಪೋಲಾಗುತ್ತಿದೆ. ಪೈಪು ಒಡೆದು ದಿನಗಟ್ಟಲೆ ನೀರು ಪೋಲಾದರೂ ಯಾರೂ ಚಕಾರವೆತ್ತುವುದಿಲ್ಲ. ತಮಗೂ ಅದಕ್ಕೂ ಸಂಬಂಧವೇ ಇಲ್ಲ ಎಂಬಂತಿರುತ್ತಾರೆ ಜನ. ಇಲ್ಲಿನ ಜನರ ಬಹುದೊಡ್ಡ ಸಮಸ್ಯೆ ಹಾಗೂ ದೌರ್ಭಾಗ್ಯದ ಸಂಗತಿಯೇನೆಂದರೆ, ನೀರಿನ ಮಹತ್ವ ತಿಳಿಯದಿರುವುದು. ನೀರು ಪೆಟ್ರೋಲ್‌ಗಿಂತ ಉಪಯುಕ್ತವಾದುದು.

ನೀರಿನಿಂದ ವಾಹನ ಓಡಿಸಬಹುದು ಎಂದಾದರೆ, ನಾಳೆಯಿಂದ ಜನರ ಪ್ರತಿಕ್ರಿಯೆ ಹೇಗಿದ್ದೀತು? ಆಕಾಶದಿಂದ ಸುರಿವ ಮಳೆ ನೀರನ್ನು ಜನ ಮುಗಿಬಿದ್ದು ಹಿಡಿದಿಟ್ಟುಕೊಂಡು ಶೇಖರಣೆ ಮಾಡಿ ಇಟ್ಟುಕೊಳ್ಳುವುದಿಲ್ಲವಾ? ಒಂದು ಬಿಂದು ಪೋಲಾಗಲು ಬಿಡುತ್ತಾರಾ? ಆ ನೀರನ್ನು ಮಳೆಯೇ ಆಗದ ದೇಶಗಳಿಗೆ ಮಾರಾಟ ಮಾಡಿ ಹಣ ಗಳಿಸುತ್ತಿರಲಿಲ್ಲವಾ ? ದುರಂತವೇನೆಂದರೆ, ನೀರಿನಿಂದ ವಾಹನ ಚಲಾಯಿಸದಿದ್ದರೂ, ಪೆಟ್ರೋಲ್‌ಗಿಂತ ನೀರು ದುಬಾರಿ ಎಂಬುದು ಜನರಿಗೆ ತಿಳಿದಿಲ್ಲ. ಸತ್ತೇ ಹೋಗುವ ಪ್ರಸಂಗ ಬಂದರೆ ಯಾರೂ ಪೆಟ್ರೋಲ್ ಕುಡಿದು ಬದುಕುಳಿಯಲು ಆಗುವುದಿಲ್ಲ. ನೀರು ಬೇಕೇ ಬೇಕು. ನೀರು ಸಂಜೀವಿನಿ. ಯಾಕೆ ನಿಮ್ಮವರಿಗೆ ಈ ಸಂಗತಿ ತಿಳಿಯುತ್ತಿಲ್ಲ?’ ಎಂದು ಆ ಜಲತಜ್ಞರು ಹೇಳುತ್ತಿದ್ದರೆ ನಾನು ಮಾತು ಮರೆತವನಂತೆ ಸುಮ್ಮನೆ ಕೇಳುತ್ತಿದ್ದೆ.

ನಿಮಗೆ ಗೊತ್ತಿರಬಹುದು, ಇಸ್ರೇಲಿನಲ್ಲಿ ನೀರಿನ ಆಡಿಟ್ ಪದ್ಧತಿ ಜಾರಿಯಲ್ಲಿದೆ. ಅಂದರೆ ಬಿದ್ದ ಮಳೆ ನೀರೆಷ್ಟು, ಅದನ್ನು ಹೇಗೆ ಉಪಯೋಗಿಸಿಕೊಳ್ಳಲಾಯಿತು, ಯಾವ ಪ್ರದೇಶದಲ್ಲಿ ಎಷ್ಟು ಮಳೆಯಾಯಿತು ಎಂಬ ವಿವರಗಳನ್ನೆಲ್ಲ ಸರಕಾರ ಜನರಿಗೆ ಒಪ್ಪಿಸುತ್ತದೆ. ಅಲ್ಲದೇ ಸಮುದ್ರ ನೀರಿನಿಂದ ಕುಡಿಯುವ ನೀರನ್ನು ಪರಿವರ್ತಿಸಿದಾಗಲೂ ಪ್ರತಿ ಹನಿಗೂ ಸರಕಾರ ಲೆಕ್ಕವಿಡುತ್ತದೆ. ಸರಕಾರ ಹಣಕಾಸಿನ ಆಯವ್ಯಯವನ್ನು ಲೆಕ್ಕ ಹಾಕಿದಂತೆ, ನೀರಿನ ಜಮಾ ಖರ್ಚಿಗೂ ಲೆಕ್ಕವಿಡುತ್ತದೆ.

ಆದರೆ ನಮ್ಮ ದೇಶದಲ್ಲಿ ಇಂಥ ವ್ಯವಸ್ಥೆ ಜಾರಿಗೆ ಬರುವುದಿರಲಿ, ನಮ್ಮಲ್ಲಿ ಈ ಬಗ್ಗೆ ತಿಳಿವಳಿಕೆಯಾಗಲಿ, ಆಲೋಚನೆಯಾಗಲಿ ಇಲ್ಲ. ಕಾರಣ ನೀರಿನ ಮಹತ್ವವೇನೆಂಬುದು ನಮಗೆ ಗೊತ್ತಿಲ್ಲ. ಅದೆಲ್ಲ ಸರಿ, ಮೊನ್ನೆ ಬೆಂಗಳೂರಿನಲ್ಲಿ ಸುರಿದ ಮಳೆ ನೀರೆಲ್ಲ ಎಲ್ಲಿಗೆ ಹೋಯಿತು? ಮರುದಿನ ಬೆಂಗಳೂರನ್ನು ತೇಲಿಸಿದ ಆ ಪ್ರವಾಹದ ನೀರು ಎಲ್ಲಿ ಮಾಯವಾಯಿತು? ಗೊತ್ತಿಲ್ಲ. ನಾವು ಇನ್ನೂ ಗುಂಡಿಗಳ ಬಗ್ಗೆಯೇ ತಲೆಕೆಡಿಸಿಕೊಳ್ಳುತ್ತಿದ್ದೇವೆ. ಗುಂಡಿ ಮುಚ್ಚುವುದೇ ಈಗ ಸರಕಾರದ ಆದ್ಯ ಕರ್ತವ್ಯ ಹಾಗೂ ಆದ್ಯತೆ. ಇನ್ನು ಎರಡು ತಿಂಗಳು ಸಹ ಈ ಗುಂಡಿಗಳು ಬಾಳಿಕೆ ಬರುವುದು ಸಂದೇಹ. ಒಟ್ಟಿನಲ್ಲಿ ಬದುಕು ಮಾತ್ರ ಗಂಡಾಗುಂಡಿ !

Leave a Reply

Your email address will not be published. Required fields are marked *

9 + eighteen =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Tuesday, 20.03.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ಚೈತ್ರಮಾಸ, ಶುಕ್ಲಪಕ್ಷ, ತೃತಿಯಾ,ಮಂಗಳವಾರ, ನಿತ್ಯ ನಕ್ಷತ್ರ -ಅಶ್ವಿನಿ , ಯೋಗ-ಐಂದ್ರ, ಕರಣ-ಗರಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
3.00-4.30 12.00-1.30 9.00-10.30

Read More

 

Tuesday, 20.03.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ಚೈತ್ರಮಾಸ, ಶುಕ್ಲಪಕ್ಷ, ತೃತಿಯಾ,ಮಂಗಳವಾರ, ನಿತ್ಯ ನಕ್ಷತ್ರ -ಅಶ್ವಿನಿ , ಯೋಗ-ಐಂದ್ರ, ಕರಣ-ಗರಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
3.00-4.30 12.00-1.30 9.00-10.30

Read More

Back To Top