About Us Advertise with us Be a Reporter E-Paper

ವಿವಾಹ್

ಮದುವೆ ಬಳಿಕ ಆತ್ಮೀಯತೆ ಹುಟ್ಟದಿದ್ದರೆ?

- ಕೆ.ಎ.ಸೌಮ್ಯ, ಮೈಸೂರು

ಮದುವೆ ನಿಶ್ಚಯಿಸಲ್ಪಡುತ್ತವೆ. ಆದರೆ ದಂಪತಿಗಳು ಬಾಳ್ವೆ ಮಾಡಬೇಕಾಗಿರುವುದು ಮಾತ್ರ ಭೂಮಿಯ ಮೇಲೆ. ಸ್ವರ್ಗದ ನಿಯಮಗಳು ಏನಿವೆಯೋ ನಮಗೆ ಗೊತ್ತಿಲ್ಲ. ಆದರೆ ಭೂಮಿಯ ಮೇಲೆ ಗಂಡು-ಹೆಣ್ಣು ಇಬ್ಬರಿಗೂ ತಮ್ಮ ಸ್ವಂತ ಅಭಿಪ್ರಾಯ ಎಂಬುದಿದೆ. ಪ್ರತ್ಯೇಕವಾದ ಮನಸ್ಸುಗಳಿವೆ. ಬೇರೆ ಬೇರೆ ಯೋಚನಾ ಲಹರಿಗಳಿವೆ, ಅಹಂ ಇದೆ, ಹಠವಿದೆ, ಸ್ವಾಭಿಮಾನವಿದೆ.. ಇಷ್ಟೆಲ್ಲ ವೈರುಧ್ಯಗಳಿದ್ದೂ, ದಂಪತಿ ಒಂದೇ ಸೂರಿನಡಿ ವಾಸ ಮಾಡಬೇಕಿದೆ.

ಒಂದು ದಿನ ದಿಢೀರ್ ಅಂತ ಆಕೆ ನಿಮ್ಮ ಮನೆಗೆ ಕಾಲಿಡುತ್ತಾಳೆ. ಜತೆಯಲ್ಲಿಯೇ ನಿಮ್ಮ ಒಂದು ಜೀವ ನಮಗಾಗಿ ಮಿಡಿಯುತ್ತದೆ, ಕಾಯುತ್ತದೆ, ಮರುಗುತ್ತದೆ ಎಂದರೆ ಯಾರು ತಾನೇ ಬೇಡ ಎನ್ನುತ್ತಾರೆ? ಆದರೆ ಇಬ್ಬರಿಗೂ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕು. ಅದಕ್ಕೂ ಮೊದಲು ವೈಯುಕ್ತಿಕ ಹಿನ್ನೆಲೆ ತಿಳಿಯಬೇಕು. ಜಾತಕದಲ್ಲಿ ಅವರ ಗುಣ, ಸ್ವಭಾವವನ್ನು ಅರಿತಿದ್ದರೂ ಪ್ರತಿಯೊಬ್ಬರೂ ಆಸೆ ಪಡುವುದು ತಾವು ಹೇಳಿದ ಹಾಗೆ ಕೇಳುವ ಸಂಗಾತಿಯನ್ನು. ಉದಾಹರಣೆಗೆ ಸಿಂಹರಾಶಿಯವರು ಸ್ವತಂತ್ರ ಆಲೋಚನೆ ಹೊಂದಿರುತ್ತಾರೆ ಎಂದು ಗೊತ್ತಿದ್ದರೂ ಸಹ, ಆ ರಾಶಿಯ ಸಂಗಾತಿ ನಮ್ಮ ಮಾತು ಕೇಳಲಿ ಬಯಸುತ್ತೇವೆ. ಮಾತು ಕೇಳಿದರೆ ಮಾತ್ರ ಒಳ್ಳೆಯವರು, ಕೇಳದಿದ್ದರೆ ಕೆಟ್ಟವರು ಅಂತ ನಿರ್ಧಾರಿಸಿಬಿಡುತ್ತೇವೆ.

ಸಾಮಾನ್ಯವಾಗಿ ಹುಡುಗಿಯರು ಮದುವೆಗೂ ಮುಂಚೆ ಬಹಳ ಸ್ವತಂತ್ರ ಆಲೋಚನೆ ಹೊಂದಿರುತ್ತಾರೆ. ಬೆರಳಿಗೆ ಹಚ್ಚುವ ನೈಲ್ ಪಾಲಿಶ್ ಕಲರ್ ಯಾವುದು ಎನ್ನುವುದರಿಂದ ಹಿಡಿದು, ಇಂದು ಏನು ಅಡುಗೆ ಎನ್ನುವುದರವರೆಗೂ ಅವರೇ ನಿರ್ಧರಿಸುತ್ತಾರೆ. ಆದರೆ, ಮದುವೆಯ ನಂತರ ಅಮ್ಮನ ಮನೆಗೆ ಫೋನ್ ಮಾಡಲೂ ಪರ್ಮಿಷನ್ ಕೇಳಬೇಕು ಎಂದರೆ ಉಸಿರು ಕಟ್ಟಿದ ಅನುಭವವಾಗುತ್ತದೆ. ಹುಟ್ಟಿದಾಗಿನಿಂದ ಹುಡುಗರು ಅಪ್ಪ ಅಮ್ಮನ ಜತೆಯೇ ಆದ್ದರಿಂದ ಅವರಿಗೆ ಹೆಣ್ಣಿನ ಮನಸ್ಸು ಅರ್ಥವಾಗೋಲ್ಲ.

ದಂಪತಿ ‘ಅ’ಪರಿಚಿತರಾ..?
ಹೆಣ್ಣಾಗಲಿ ಗಂಡಾಗಲೀ ಒಬ್ಬರಿಗೊಬ್ಬರು ಹೊಂದಿಕೊಳ್ಳಲು ಸಮಯ ಬೇಕು. ಅದಕ್ಕಾಗಿ ಅವರನ್ನು ಅವರ ಪಾಡಿಗೆ ಬಿಡಬೇಕು. ಪರಸ್ಪರ ಅವಲಂಬನೆ ಹುಟ್ಟಿದಾಗಲೇ, ಒಬ್ಬರು ಸನಿಹದಲ್ಲಿಲ್ಲದಿದ್ದಾಗ ಮತ್ತೊಬ್ಬರು ಕನವರಿಸುವುದು. ಒಟ್ಟಿಗೆ ಹುಟ್ಟಿರದ, ಬೆಳೆದಿರದ, ಅಲ್ಲಿಯವರೆಗೂ ಪರಿಚಯವೂ ಇರದ ಗಂಡು-ಹೆಣ್ಣು ಮದುವೆಯಾದ ಕೂಡಲೇ ಆತ್ಮೀಯರಂತೆ ವರ್ತಿಸುವುದು ಸಿನಿಮಾ, ಟಿವಿಗಳಲ್ಲಿ ಮಾತ್ರ. ನಿಜ ಜೀವನದಲ್ಲಿ ಮದುವೆಯಾಗಿ ವರ್ಷಗಳು ಉರುಳಿದರೂ ಪತಿ-ಪತ್ನಿಯರು ಅಪರಿಚಿತರಾಗಿಯೇ ಇರುತ್ತಾರೆ. ಮಕ್ಕಳು ಎದೆಯ ಬೆಳೆದರೂ ಗಂಡನಿಗೆ ತನ್ನ ಹೆಂಡತಿಗೆ ಏನಿಷ್ಟ ಎಂಬುದೇ ಗೊತ್ತಿರುವುದಿಲ್ಲ. ಅದು ತಿಳಿದಿದ್ದರೆ, ಅಪರೂಪಕ್ಕೆ ಅವಳಿಗೊಂದು ಸರ್‌ಪ್ರೈಸ್ ಗ್ಟ್‌ ಕೊಟ್ಟು ತಮ್ಮ ಬಂಧವನ್ನು ಮತ್ತಷ್ಟು ಗಟ್ಟಿಯಾಗಿಸಿಕೊಳ್ಳಬಹುದು. ಅಲ್ಲವೇ?

ಮದುವೆ, ಮಕ್ಕಳು, ನಂತರ ಅವರನ್ನು ಸಾಕಲು ಹೆಣಗುವುದು ಇಷ್ಟೇ ಜೀವನ ಎಂದುಕೊಂಡಿರುತ್ತಾರೆ ಜನ. ಮಕ್ಕಳ ವಿದ್ಯಾಭ್ಯಾಸ ಮುಗಿದು, ಮದುವೆಯಾಗಿ ಹೋದ ನಂತರವೇ ಸಂಗಾತಿಯ ನಿಜವಾದ ಬೆಲೆ ಅರಿವಿಗೆ ಬರುವುದು. ಅದಕ್ಕೆಂದೇ ಮದುವೆಯಾದಾಗ ಕಚ್ಚಾಡುತ್ತಿದ್ದ ದಂಪತಿಗಳು ತಮ್ಮ ಕೊನೆಗಾಲದಲ್ಲಿ ಬಹಳ ಅನ್ಯೋನ್ಯವಾಗಿರುವುದು. ಇಳಿ ಅವರಿಗೆ ತಮ್ಮ ಸಂಗಾತಿಯ ಜತೆಗೆ ಮುಕ್ತವಾಗಿ ಮಾತನಾಡಲು ಯಾವ ತಕರಾರೂ ಇರುವುದಿಲ್ಲ.

ಆತ್ಮೀಯತೆ ಸಿಗದಿದ್ದರೆ..!
ಹೆಣ್ಣುಮಕ್ಕಳಿಗೆ ಬುದ್ಧಿ ಬಂದಾಗಿನಿಂದ ಗಂಡನ ಮನೆಯಲ್ಲಿ ಹೀಗ್‌ಹೀಗೇ ಇರಬೇಕೆಂದು ಟ್ರೈನಿಂಗ್ ಕೊಡಲಾಗುತ್ತದೆ. ಹೀಗಾಗಿ ಬಹಳಷ್ಟು ಹೆಣ್ಣುಮಕ್ಕಳು ಗಂಡನ ಮನೆಯಲ್ಲಿ ಏನು ತೊಂದರೆಗಳಾದರೂ ದೂಸರಾ ಮಾತನಾಡದೇ ಸಹಿಸಿಕೊಂಡು ಸಂಸಾರ ಸಾಗಿಸುತ್ತಾರೆ. ಆದರೆ ಈಗಿನ ಹೆಣ್ಣುಮಕ್ಕಳು ತಮ್ಮ ಕಾಲಿನ ಮೇಲೆ ನಿಲ್ಲುವಷ್ಟು ಶಕ್ತರು. ಗಂಡನ ಮನೆಯಲ್ಲಿ ಸೂಕ್ತ ಗೌರವ ಸಿಗದಿದ್ದರೆ ಸಂಬಂಧವನ್ನೇ ಧಿಕ್ಕರಿಸಿ ಬರುತ್ತಾರೆ.

ಮೊದಲೇ ಹಾಗೆ ಯಾವ ಸಂಬಂಧವೂ ಇಲ್ಲದ ಗಂಡನೊಂದಿಗೆ ಬಾಳಲು ಆತ್ಮೀಯತೆ ಬೇಕು. ಅದೇ ಸಿಗದಿದ್ದಾಗ ಯಾವ ಕಾರಣಕ್ಕಾಗಿ ಆ ಮನೆಯಲ್ಲಿರುತ್ತಾರೆ ಅವರು? ಒಟ್ಟಿಗೆ ಬಾಳಿದಾಗ ಮಾತ್ರವೇ ಬೇರ್ಪಡಲು ಕಷ್ಟವಾಗುತ್ತದೆ. ಆದರೆ ಒಟ್ಟಿಗಿರಲು ಬಿಡದಿದ್ದಾಗ ಅವರಿಗೆ ಬಂಧ ಮುರಿಯಲು ಕಷ್ಟವಾಗೋಲ್ಲ. ಆ ಹೆಣ್ಣುಜೀವವೂ ನಮ್ಮಂತೆಯೇ ಅಂತ ಯೋಚಿಸಿದಾಗ ಮಾತ್ರ ಪರಿಹಾರ ಸಿಗುತ್ತದೆ. ಅಲ್ಲದೆ, ಆಕೆಗೆ ತನ್ನ ಪಾತ್ರ ಏನೆಂದು ಮನೆಯ ಹಿರಿಯರು ತಿಳಿಸಿ, ಸಹಕರಿಸಬೇಕು. ಆಕೆ ಅವರಿಗೆ ಸೊಸೆಯಷ್ಟೇ ಅಲ್ಲ, ತನ್ನ ಹೆಂಡತಿ ಕೂಡ. ಅವಳ ಪಾತ್ರಗಳನ್ನು ನಿರ್ವಹಿಸಲು ಮುಕ್ತವಾಗಿ ಬಿಟ್ಟಾಗ ಆಕೆಯೂ ಎಲ್ಲರೊಂದಿಗೆ ಹೊಂದಿಕೊಂಡು ಒಂದಾಗಿ ಬಾಳಬಲ್ಲಳು. ಇಲ್ಲದಿದ್ದರೆ ಗಂಡು ಹೆಣ್ಣಿನ ಮದುವೆಯ ನಂತರದ ಬದುಕು ಬಿಸಿಲ್ಗುದುರೆಯನೇರಿದಂತಾಗುತ್ತದೆ.

Tags

Related Articles

Leave a Reply

Your email address will not be published. Required fields are marked *

Language
Close