About Us Advertise with us Be a Reporter E-Paper

ಅಂಕಣಗಳು

‘ಸ್ವಚ್ಛ ಭಾರತ’ ವಿಫಲವಾದರೆ ಪ್ರತಿಪಕ್ಷಗಳಿಗೆ ಖುಷಿಯೋ ಖುಷಿ!

ಇದು ಎಲ್ಲೂ ಸುದ್ದಿಯಾಗಲಿಲ್ಲ. ಅದೇನೆಂದರೆ,  ಎರಡು ದಿನ ಇದ್ದ ಪ್ರಧಾನಿ ನರೇಂದ್ರ ಮೋದಿಯವರು ಅಲ್ಲಿನ ಸ್ವಚ್ಛತೆ ನೋಡಿ ಅತೀವ ಸಂತಸ ವ್ಯಕ್ತಪಡಿಸಿದರಂತೆ. ಪ್ರಧಾನಿಯವರಿಗೆ ಹಿರಿಯ ರಾಜತಾಂತ್ರಿಕರೊಬ್ಬರು ಹೇಳಿದರಂತೆ- ‘ರಾಜಧಾನಿ ಕಿಗಾಲಿ ಮಾತ್ರ ಅಲ್ಲ, ಇಡೀ ದೇಶವೇ ಇಷ್ಟು ಸ್ವಚ್ಛವಾಗಿದೆ. ವಿದೇಶಿ ಗಣ್ಯರಿಗಾಗಿ ಈ ಸ್ವಚ್ಛತೆ ಅಲ್ಲ. ವರ್ಷದ ಯಾವುದೇ ದಿನ ಬಂದರೂ ಇದೇ ಸ್ವಚ್ಛತೆ ಕಾಣಬಹುದು.’

ಮೊದಲ ಬಾರಿಗೆ ರವಾಂಡಕ್ಕೆ ಹೋದ ಯಾರಿಗೇ ಆದರೂ ಅಲ್ಲಿನ ಸ್ವಚ್ಛತೆ ಕಂಡು ‘ಷಾಕ್’ ಆಗುತ್ತದೆ. ಇಡೀ ದೇಶದಲ್ಲಿ  ಒಂದು ಕಸ, ಕಡ್ಡಿ, ಬಾಟಲಿ, ಸಿಗರೇಟ್ ಪ್ಯಾಕ್, ಪ್ಲಾಸ್ಟಿಕ್… ಹೀಗೆ ಯಾವ ಕಸ-ಕಲ್ಮಶಗಳನ್ನು ನೋಡಲು ಸಾಧ್ಯವಿಲ್ಲ. ದಾರಿಯಲ್ಲಿ ಯಾರೂ ಉಗುಳುವುದಿಲ್ಲ, ಎಲೆ-ಅಡಕೆ ಪಿಚಕಾರಿ ಸಿಂಪಡಿಸುವುದಿಲ್ಲ. ಕಳ್ಳೇಕಾಯಿ ತಿಂದು ಸಿಪ್ಪೆಯನ್ನು ಬೀದಿಗೆಸೆಯುವುದಿಲ್ಲ. ಯಾರೂ ಸಹ ರಸ್ತೆ ಬದಿಗೆ ಮೂತ್ರ ವಿಸರ್ಜನೆಗೆ ನಿಲ್ಲುವುದಿಲ್ಲ. ತಂಬಿಗೆ ತೆಗೆದುಕೊಂಡು ಹೋಗುವುದಿಲ್ಲ.

ದೇಶಕ್ಕೆ ದೇಶವೇ ಶುದ್ಧ, ಸ್ವಚ್ಛ, ಬಡತನಕ್ಕೂ, ಕೊಳಕಿಗೂ ಅವಿನಾಭಾವ ಸಂಬಂಧ. ಮೊದಲನೆಯದಿದ್ದರೆ ಎರಡನೆಯದೂ ಇರಲೇಬೇಕು. ಎರಡನೆಯದಕ್ಕೆ ಮೊದಲನೆಯದೇ ಕಾರಣ. ಆದರೆ ರವಾಂಡದಲ್ಲಿ ಮಾತ್ರ  ಅಸ್ವಚ್ಛತೆಯನ್ನು ಓಡಿಸಲಾಗಿದೆ. ಇದು ಪ್ರಧಾನಿಯೋ, ರಾಷ್ಟ್ರಾಧ್ಯಕ್ಷನೋ ಕರೆ ಕೊಡುವುದರಿಂದ ಆಗುವಂಥದ್ದಲ್ಲ. ಪ್ರತಿಯೊಬ್ಬ ದೇಶವಾಸಿಗೂ ಅನಿಸಬೇಕು. ತನ್ನ ದೇಶ, ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ಬಗ್ಗೆ ಅತೀವ ಕಾಳಜಿ ಇರಬೇಕು. ನೂರರಲ್ಲಿ ಒಬ್ಬ ಸ್ವಚ್ಛತೆ ಉಲ್ಲಂಘಿಸಿದರೆ, ಅಷ್ಟರಮಟ್ಟಿಗೆ ಹೊಲಸಾಗಿರುತ್ತದೆ. ನಂಬಿಕೆಯೆಂದರೆ ನೂರಕ್ಕೆ ನೂರು ಹೇಗೋ, ಸ್ವಚ್ಛತೆಯೆಂದರೂ ನೂರಕ್ಕೆ ನೂರೇ.

ರವಾಂಡದಲ್ಲಿ ಇದನ್ನು ಅಕ್ಷರಶಃ ಪಾಲಿಸಲಾಗುತ್ತಿದೆ. ನನ್ನ ಜತೆಗಿದ್ದ ಕನ್ನಡಿಗರೊಬ್ಬರು ‘ನಾನೂ ನೋಡ್ತಾನೇ ಇದ್ದೇನೆ, ರವಾಂಡದಲ್ಲಿ ಒಂದೇ ಒಂದು ಕಸವನ್ನಾದರೂ ಹುಡುಕಲೇಬೇಕೆಂದು,  ಎಂದು ಉದ್ಗಾರ ತೆಗೆದರು. ಇಡೀ ದೇಶಕ್ಕೆ ದೇಶವೇ ಯಾವುದೇ ಘೋಷಣೆಗಳಿಲ್ಲದೇ, ಅದೊಂದು ಜೀವನಕ್ರಮದಂತೆ, ತೀರಾ ಸಹಜವೆಂಬಂತೆ ಸ್ವಚ್ಛತೆಯನ್ನು ಆಚರಿಸಿಕೊಂಡು ಬರುತ್ತಿದೆ.

ಬೆಂಗಳೂರಿಗೆ ವಿದೇಶಿ ಗಣ್ಯರು ಬಂದಾಗ ವಿಮಾನ ನಿಲ್ದಾಣದಿಂದ ರಾಜಭವನ ಹಾಗೂ ಅವರು ಓಡಾಡುವ ಪ್ರಮುಖ ದಾರಿಗಳಿಗೆ ಮಾತ್ರ ಅಲಂಕಾರ ಮಾಡುತ್ತಿದ್ದುದು ಸಂಪ್ರದಾಯ. ಅವರು ಹೋಗುತ್ತಿದ್ದಂತೆ ಆ ಅಲಂಕಾರಕ್ಕೆ ತಿಲಾಂಜಲಿ. ಬೆಂಗಳೂರಿನಲ್ಲಿ ಸಾರ್ಕ್ ಸಮಾವೇಶವಾದಾಗ, ಇಡೀ ನಗರವನ್ನು ಸುಣ್ಣ ಬಣ್ಣ ಬಳಿದು ಸಿಂಗರಿಸಿದ್ದರು. ರಸ್ತೆಗಳಿಗೆಲ್ಲ ಡಾಂಬರು ಹಾಕಿ ಬಿಳಿ  ಬಳಿದು ಅಲಂಕರಿಸಿದ್ದರು. ಆನಂತರ ಒಂದೆರಡು ಸಂದರ್ಭಗಳಲ್ಲಿ ಹೀಗೆ ಮಾಡಿದ್ದುಂಟು. ಕಾರ್ಯಕ್ರಮ ಮುಗಿದ ನಂತರ ಈ ಅಲಂಕಾರ, ಸ್ವಚ್ಛತೆಗಳೆಲ್ಲ ಮಾಯ!

ಸಾರ್ವಜನಿಕವಾಗಿ ಸ್ವಚ್ಛತೆ ಕಾಪಾಡುವುದು ನಮಗೆ ಒಂದು ಸಾಂಘಿಕ ಗುಣವಾಗಿ ಬೆಳೆದು ಬಂದಿಲ್ಲ. ತಮ್ಮ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಂಡವರೂ, ಸಾರ್ವಜನಿಕ ಸ್ಥಳಗಳಲ್ಲಿ ಕಂಡಲ್ಲಿ ಕಸಗಳನ್ನು ಎಸೆಯುತ್ತಾರೆ. ಸ್ವತಃ ಪ್ರಧಾನಿಯವರೇ ಪೊರಕೆ ಹಿಡಿದರೂ, ಸ್ವಚ್ಛ ಭಾರತ ಎಂದು ಬೊಬ್ಬೆ ಹೊಡೆದುಕೊಂಡರೂ ನಮ್ಮ ಜನರಲ್ಲಿ ಇನ್ನೂಜಾಗೃತಿ ಮೂಡಿಲ್ಲ. ಸ್ವಚ್ಛ ಭಾರತ ಪ್ರಚಾರಕ್ಕೆಂದು, ಅರಿವು  ಸಾವಿರಾರು ಕೋಟಿ ರುಪಾಯಿ ಖರ್ಚು ಮಾಡಲಾಗಿದೆ. ನಿತ್ಯವೂ ಬಳಸುವ ನೋಟಿನ ಮೇಲೆ ಸ್ವಚ್ಛ ಭಾರತ ಲಾಂಛನವಿಟ್ಟು ಜಾಗೃತಿ ಮೂಡಿಸಲಾಗುತ್ತಿದ್ದರೂ ಸಮಾಧಾನವಾಗುವಂಥ ಪರಿವರ್ತನೆಯಾಗಿಲ್ಲ. ಮೋದಿಯವರಿಗೆ  ಕೀರ್ತಿ ಬಂದು ಬಿಡಬಹುದೆಂದು ಭಾರತ ಸ್ವಚ್ಛವಾಗುವುದು ಪ್ರತಿಪಕ್ಷಗಳಿಗೂ ಬೇಕಿಲ್ಲ. ಇಂಥ ಮನಸ್ಥಿತಿಯಿದ್ದರೆ ಯಾವ ದೇಶ ಉದ್ಧಾರವಾದೀತು? ಪ್ರತಿಪಕ್ಷಗಳಂತೂ ಶತಾಯಗತಾಯ ಭಾರತ ಸ್ವಚ್ಛವಾಗಲೇಬಾರದು ಎಂದು ನಿರ್ಧರಿಸಿದಂತಿದೆ. ಕರ್ಮಕರ್ಮ!

ಇದು ಭಾರತದಲ್ಲಿ ಸಾಧ್ಯವಾ?

ಮೂರು ವರ್ಷಗಳ ಹಿಂದೆ ರವಾಂಡಕ್ಕೆ ಸ್ವಿಟ್ಜರ್‌ಲ್ಯಾಂಡಿನ ಅಧ್ಯಕ್ಷರು ಭೇಟಿ ಕೊಟ್ಟಿದ್ದರಂತೆ. ಆ ಸಂದರ್ಭದಲ್ಲಿ  ‘ಅತಿಗಣ್ಯರ ಅಭಿಪ್ರಾಯ ಪುಸ್ತಕ’ದಲ್ಲಿ ್ಕRwanda has become one of the cleanest countries in the world as clean as Switzerland ಎಂದು ಬರೆದಿದ್ದಾರಂತೆ. ಸ್ವತಃ ಸ್ವಿಟ್ಜರ್‌ಲ್ಯಾಂಡ್ ಅಧ್ಯಕ್ಷರಿಗೇ ಹೀಗೆ ಅನಿಸಿದೆಯೆಂದರೆ, ರವಾಂಡ ಅದೆಷ್ಟು ಸ್ವಚ್ಛವಾಗಿರಬಹುದು ಎಂಬುದನ್ನು ಊಹಿಸಬಹುದು.

ರವಾಂಡದ ಬೀದಿಯಲ್ಲಿ ಕಸ, ಕಡ್ಡಿ ಬಿದ್ದಿದ್ದನ್ನು ಕಂಡರೆ, ಯಾರೂ ಅದನ್ನು ನೋಡಿ ಸುಮ್ಮನೆ ಹೋಗುವುದಿಲ್ಲ. ಅದನ್ನು ಎತ್ತಿ ಸಮೀಪದ ಕಸದ ಬುಟ್ಟಿಗೆ ಹಾಕಿ ಹೋಗುತ್ತಾರೆ.

2007ರಲ್ಲಿ  ಸರಕಾರ ಶ್ರಮದಾನ(ಉಮುಗಂಡ) ಯೋಜನೆಯನ್ನು ಜಾರಿಗೆ ತಂದಿತು. ಈ ಯೋಜನೆಯನ್ವಯ ತಿಂಗಳ ಕೊನೆಯ ಶನಿವಾರ, ರಾಷ್ಟ್ರಾಧ್ಯಕ್ಷರಿಂದ  ಕಟ್ಟಕಡೆಯ ವ್ಯಕ್ತಿಯವರೆಗೆ ಪ್ರತಿಯೊಬ್ಬರೂ ಶ್ರಮದಾನದಲ್ಲಿ ಪಾಲ್ಗೊಳ್ಳಲೇಬೇಕು. ದೇಶದ ಅಧ್ಯಕ್ಷ ಪಾಲ್ ಕಗಾಮೆ ಈ ‘ಉಮುಗಂಡ’ದಲ್ಲಿ ತಪ್ಪದೇ ಭಾಗವಹಿಸುತ್ತಾರೆ. ರವಾಂಡದ ಶಾಲೆ, ಕಾಲೇಜು, ಸಮುದಾಯ ಭವನ ಮುಂತಾದವುಗಳ ನಿರ್ಮಾಣಕ್ಕೆ ಈ ಯೋಜನೆ ಸಹಾಯಕವಾಗಿದೆ.

ಅಷ್ಟೇ ಅಲ್ಲ, ದೇಶದ ರಸ್ತೆಗಳು ಉಬ್ಬು-ತಗ್ಗು, ಗುಂಡಿಗಳಿಂದ ಮುಕ್ತವಾಗಿರಲು ಇದು ಪ್ರಯೋಜನವಾಗಿದೆ. ಹದಿನೆಂಟರಿಂದ ಅರವತ್ತೈದು ವರ್ಷ ವಯಸ್ಸಿನವರೆಲ್ಲರೂ ಈ ಮಾಸಿಕ  ಖುಷಿಯಿಂದ ಭಾಗವಹಿಸುತ್ತಾರೆ. ದೇಶದ ಶೇ.85ರಷ್ಟು ಜನ ಸ್ವಯಂಪ್ರೇರಿತರಾಗಿ ಪಾಲ್ಗೊಳ್ಳುತ್ತಿರುವುದು ಗಮನಾರ್ಹ. ಈ ತಿಂಗಳು ‘ಉಮುಗಂಡ’ದಲ್ಲಿ ಭಾಗವಹಿಸಲು ಆಗದಿದ್ದರೆ ಮುಂದಿನ ತಿಂಗಳಲ್ಲಿ ಎರಡು ಸಲ ಈ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಇಡೀ ದೇಶವಾಸಿಗಳೆಲ್ಲ ಏಕಕಾಲದಲ್ಲಿ ಒಂದೇ ಕಾಯಕದಲ್ಲಿ ನಿರತರಾಗುವುದು ಸಾಮೂಹಿಕ ಪ್ರಜ್ಞೆ ಮೂಡಿಸುವಲ್ಲಿ ಪರಿಣಾಮಕಾರಿ ಕ್ರಮವಾಗಿದೆ.

ಇಂಥ ಯೋಜನೆ ಯಶಸ್ವಿಯಾಗಬೇಕೆಂದರೆ ಎಲ್ಲರ ಸಹಕಾರ ಬೇಕು. ಒಂದು ವೇಳೆ ಮೋದಿಯವರು ಈ ಯೋಜನೆಯನ್ನು ಭಾರತದಲ್ಲಿ ಜಾರಿಗೆ ತಂದರೆ ಏನಾಗಬಹುದು? ನಿಮ್ಮ ಊಹೆ ಸರಿ  ಪ್ರತಿಪಕ್ಷಗಳು ಇದರಲ್ಲೂ ಕೊಂಕು ತೆಗೆದು ಮೋದಿ ಅವರನ್ನು ಟೀಕಿಸದೇ ಬಿಡುವುದಿಲ್ಲ. ಈ ಯೋಜನೆ ನೆಲಕಚ್ಚುವ ತನಕ ವಿರಮಿಸುವುದಿಲ್ಲ.

ಗ್ರೀನ್ ಟೀ: ಲಾಭದಾಯಕ ಅಂಶಗಳು

ಕೆಲವು ವರ್ಷಗಳ ಹಿಂದೆ ಕಾರ್ಯನಿಮಿತ್ತ ಚೀನಾಕ್ಕೆ ಹೋದಾಗ, ಒಂದು ದಿನದಲ್ಲಿ ಹನ್ನೊಂದು ಸಲ ಗ್ರೀನ್ ಟೀ ಕುಡಿದಿದ್ದೆ. ಯಾರನ್ನೇ ಭೇಟಿಯಾಗಲು ಹೋದರೂ, ‘ಗ್ರೀನ್ ಟೀ ಕುಡಿಯುತ್ತೀರಾ?’ ಎಂದೇ ಕೇಳುತ್ತಿದ್ದರು. ನಾನೂ ‘ಹೂಂ’ ಅನ್ನುತ್ತಿದ್ದೆ. ಕೆಲವು ಕಡೆ ಒಂದೇ ಬೈಠಕ್‌ನಲ್ಲಿ ಎರಡು-ಮೂರು ಕಪ್ ಗ್ರೀನ್ ಟೀ  ಎಷ್ಟು ಕಪ್ ಬೇಕಾದರೂ ಕುಡಿದು, ಏನೂ ಕುಡಿದಿಲ್ಲವೇನೋ ಎಂಬಂತೆ ಇರಲು ಸಾಧ್ಯವಾಗುವುದು ಗ್ರೀನ್ ಟೀಯಿಂದ ಮಾತ್ರ. ಇದರಿಂದ ಯಾವುದೇ ಸೈಡ್ ಇಫೆಕ್‌ಟ್ ಇಲ್ಲ. ಅದರಲ್ಲೂ ಸಕ್ಕರೆ ರಹಿತ ಗ್ರೀನ್ ಟೀ ಬಹಳ ಒಳ್ಳೆಯದು.

ಈ ಟೀ ವೈಶಿಷ್ಟ್ಯವೆಂದರೆ, ಪದೇಪದೆ ಇದನ್ನು ಕುಡಿಯಬೇಕೆಂದು ಅನಿಸುವುದಿಲ್ಲ. ಅಂದರೆ ಇದರಿಂದ ಅಡಿಕ್‌ಟ್ ಆಗುವುದಿಲ್ಲ. ಕಾಫಿ ಹಾಗೂ ಚಹವನ್ನು ನಿರಾಕರಿಸಲು, ಅದಕ್ಕೆ ಪರ್ಯಾಯವಾಗಿ ಇದನ್ನು ಕುಡಿಯಬಹುದು. ಬಿಸಿನೀರಿಗೆ ಟೀ ಬ್ಯಾಗ್ ಮುಳುಗಿಸಿ, ಅದನ್ನು ಕುಡಿದ  ಪುನಃ ಬಿಸಿನೀರು ಸುರಿದುಕೊಂಡು ಎಷ್ಟು ಸಲ ಬೇಕಾದರೂ  ಹೀರುತ್ತಿರಬಹುದು. ಚೀನಾದಲ್ಲಂತೂ ರೆಸ್ಟೋರೆಂಟ್‌ಗೆ ಹೋದರೆ, ಕೊಡಪಾನಗಟ್ಟಲೆ ಗ್ರೀನ್ ಟೀ ಕುಡಿಯಲು ಕೊಡುತ್ತಾರೆ.

 • ಇತ್ತೀಚೆಗೆ ಸರ್ವೇಶ್ವರಿ ಭಟ್ ಎಂಬುವವರು ಅತಿಥಿಗಳಿಗೆ ಗ್ರೀನ್ ಟೀ ನೀಡುವ ಲಾಭದಾಯಕ ಸಂಗತಿಗಳನ್ನು ಪಟ್ಟಿ ಮಾಡಿದ್ದರು.
 • ಗ್ರೀನ್ ಟೀ ಕೊಡುವುದರಿಂದ ಜನ ನಿಮ್ಮನ್ನು ಶ್ರೀಮಂತ ಹಾಗೂ ವಿಶೇಷ ಎಂದು ಭಾವಿಸುತ್ತಾರೆ. ಕಾರಣ ಉಳಿದವರು ಕಾಫಿ ಅಥವಾ ಟೀ ಕೊಡುತ್ತಾರೆ.
 • ಬಂದವರಿಗೆಲ್ಲ ಗ್ರೀನ್ ಟೀ ಕೊಡುವುದರಿಂದ  ಉಳಿತಾಯವಾಗುತ್ತದೆ.
 • ಅತಿಥಿಗಳಿಗೆ ಗ್ರೀನ್ ಟೀ ಕೊಟ್ಟರೆ, ಒಂದು ಕಪ್‌ಗೆ ಸಾಕು ಸಾಕು ಅಂತಾರೆ. ಮತ್ತಷ್ಟು ಬೇಕು ಎಂದು ಹೇಳುವುದಿಲ್ಲ.
 •  ಮುಂದಿನ ಸಲ ನಿಮ್ಮ ಮನೆಗೆ ಬರುವ ಬಗ್ಗೆ  ಯೋಚಿಸುತ್ತಾರೆ.
 •  ಒಂದು ವೇಳೆ ಬಂದರೆನ್ನಿ, ನೀವು ಗ್ರೀನ್ ಟೀ ಕೊಡಬಹುದೆಂದು ‘ನನಗೆ ಕಾಫಿ, ಟೀ, ಗ್ರೀನ್ ಟೀ ಕುಡಿಯುವ ಅಭ್ಯಾಸವೇ  ಇಲ್ಲವೆಂದು ನುಣುಚಿಕೊಳ್ಳುತ್ತಾರೆ.
 • ಗ್ರೀನ್ ಟೀ ಕುಡಿಯುವುದರಿಂದ ಆರೋಗ್ಯಕ್ಕೆಷ್ಟು ಒಳ್ಳೆಯದು ಎಂಬ ಉಪನ್ಯಾಸವನ್ನು ಉಚಿತವಾಗಿ
 • ಅತಿಥಿಗಳು ಕೇಳಿದ್ದಕ್ಕಿಂತ ಹೆಚ್ಚು ಗ್ರೀನ್ ಟೀ ಸುರಿದು ಧಾರಾಳಿ ಎಂದು ಅನಿಸಿಕೊಳ್ಳಬಹುದು.
 •  ಒಂದು ವೇಳೆ ಚೆಲ್ಲಿ ಹೋದರೂ ಬೇಸರವಾಗುವುದಿಲ್ಲ.
 •  ಅಲ್ಲದೇ ಅಂಗಿ, ಪ್ಯಾಂಟ್ ಕಲೆಯಾಗುವುದಿಲ್ಲ.
 • ಕಾಫಿ, ಟೀ ಚೆನ್ನಾಗಿಲ್ಲದಿದ್ದರೆ ಕಮೆಂಟ್ ಮಾಡುತ್ತಾರೆ.
 • ಗ್ರೀನ್ ಟೀ ಚೆನ್ನಾಗಿಲ್ಲ ಎಂದು ಹೇಳುವ ಪ್ರಮೇಯವೇ ಉದ್ಭವಿಸುವುದಿಲ್ಲ.

ಬದುಕನ್ನು ಬದಲಿಸಿಕೊಳ್ಳೋದು ಹೇಗೆ?

ರಿಚರ್ಡ್ ಬ್ರಾನ್‌ಸನ್ ಅದ್ಯಾವ ಮೂಡಿನಲ್ಲಿದ್ದರೋ ಏನೋ? ಕಳೆದ ವಾರ ಅವರಿಗೊಂದು ಟ್ವಿಟರಿನಲ್ಲಿ (ಟ್ವೀಟ್ ಅಲ್ಲ)  ಮೆಸೇಜ್  ನಿಮಿಷಗಳಲ್ಲಿ ವಾಪಸ್ ಮೆಸೇಜ್ ಮಾಡಿದರು ನನಗೆ ಅಚ್ಚರಿಯಾಯಿತು.

‘ನಮ್ಮ ಬದುಕನ್ನು ಒಂದು ವರ್ಷದಲ್ಲಿ ಬದಲಿಸಿಕೊಳ್ಳಬಹುದೇ? ಹೇಗೆ?’ ಎಂದು ಕೇಳಿದ್ದೆ. ಅದಕ್ಕೆ ಬ್ರಾನ್‌ಸನ್ ಅವರು ಜಗತ್ತಿನ ಅತಿ ಶ್ರೀಮಂತ ವಾರೆನ್ ಬಫೆಟ್ ಹೇಳಿದ್ದನ್ನು ಪ್ರಸ್ತಾಪಿಸಿ ಬರೆದಿದ್ದರು.

 •  ಏನೇ ಮಾಡಿ ತಕ್ಷಣ ಫಲಿತಾಂಶ ಬರುವುದಿಲ್ಲ. ಎಲ್ಲದಕ್ಕೂ ಟೈಮು ಹಿಡಿಯುತ್ತದೆ.
 • ನಿಮ್ಮ ಸಂತಸ, ನೆಮ್ಮದಿಗೆ ಬೇರೆಯವರನ್ನು ಅವಲಂಬಿಸುವುದನ್ನು ನಿಲ್ಲಿಸಬೇಕು.
 • ಕಂಪ್ಲೇನ್ ಮಾಡೋದನ್ನು ನಿಲ್ಲಿಸಿ, ನನ್ನಂಥ ಅದೃಷ್ಟವಂತ ಯಾರೂ ಇಲ್ಲ  ಭಾವಿಸಿ.
 •  ಏನು ಅಂದುಕೊಂಡಿದ್ದೀರೋ ಅದನ್ನು ಮಾಡಿ, ಎಂದಿಗೂ ಕೈಚೆಲ್ಲಬೇಡಿ.
 • ನೀವು ಮಾಡುವ ತಪ್ಪುಗಳಿಂದ ನಿಮ್ಮನ್ನು ಅಳೆಯುವುದನ್ನು ನಿಲ್ಲಿಸಿ.
 •  ಸಕಾರಾತ್ಮಕ ಯೋಚನೆಗಳಿರುವವರನ್ನು ಹತ್ತಿರಕ್ಕೆ ಇಟ್ಟುಕೊಳ್ಳಿ.
 •  ನಿಮ್ಮನ್ನು ಟೀಕಿಸುವವರನ್ನು ನಿರ್ಲಕ್ಷಿಸಿ.

ಇಷ್ಟು ಮಾಡಿ, ಒಂದು ವರ್ಷದಲ್ಲಿ ನೀವು ಹೊಸ ವ್ಯಕ್ತಿಯಾಗಿರುತ್ತೀರಿ. ಅಂದ ಹಾಗೆ ಈ ಏಳೂ ಸಂಗತಿಗಳನ್ನು ನಾನಂತೂ ಅಕ್ಷರಶಃ ಪಾಲಿಸುತ್ತಿದ್ದೇನೆ. ಹೀಗಾಗಿ ಪ್ರತಿದಿನವನ್ನೂ ಹೊಸದಾಗಿ, ಖುಷಿಯಾಗಿ ಕಳೆಯುತ್ತೇನೆ. ನೀವೂ ಪ್ರಯತ್ನಿಸಿ.

ಸಿಟ್ಟು ಬಂದಾಗ..!

‘ಸಿಟ್ಟನ್ನು  ಹೇಗೆ?’ ಎಂಬ ವಿಷಯದ ಬಗ್ಗೆ ವಾಟ್ಸಪ್ ಗುಂಪಿನಲ್ಲಿ ಒಂದು ಚರ್ಚೆ ನಡೆಯುತ್ತಿತ್ತು.

‘ಸಿಟ್ಟು ಬಂದಾಗ ಮಾತಾಡಬಾರದು’ ಎಂದರು ಒಬ್ಬರು. ‘ನೀವು ಸಿಟ್ಟು ಮಾಡಿಕೊಳ್ಳುವ ವ್ಯಕ್ತಿ ನಿಮಗಿಂತ ಚಿಕ್ಕವನಾಗಿದ್ದರೆ ಒಂದರಿಂದ ಹತ್ತರವರೆಗೆ ಎಣಿಸಿ, ನಂತರ ಮಾತಾಡಿ’ ಎಂದರು ಮತ್ತೊಬ್ಬರು.

‘ಎದುರಿಗಿನ ವ್ಯಕ್ತಿ ಸಮ ವಯಸ್ಕನಾಗಿದ್ದರೆ, ಒಂದರಿಂದ ಮೂವತ್ತರವರೆಗೆ ಎಣಿಸಬೇಕು ಹಾಗೂ ನಂತರ ಮಾತಾಡಬೇಕು’ ಎಂದು ಇನ್ನೊಬ್ಬರು ಸಲಹೆ ಮಾಡಿದರು. ‘ನಿಮಗಿಂತ ಹಿರಿಯರಾಗಿದ್ದರೆ?’ ಎಂದು ಕೇಳಿದಾಗ, ‘ಒಂದರಿಂದ ಐವತ್ತರ ತನಕ’ ಎಂಬ  ಬಂತು.

ಈ ಮಧ್ಯೆ, ಯಾರೋ ಕೇಳಿದರು- ‘ಎದುರಿಗಿರುವ ವ್ಯಕ್ತಿ ನಿಮ್ಮ ಹೆಂಡತಿಯಾಗಿದ್ದರೆ?’ ಅದಕ್ಕೆ ನಾನು ಹೇಳಿದೆ- ಒಂದೂ ಮಾತಾಡದೇ, ಬರೀ ಎಣಿಸುತ್ತಲೇ ಇರಬೇಕು.’

‘ಅವಿ’, ‘ಪೂವಿ’ ಇಲ್ಲದೆ ವಾಕ್ಯ ರಚನೆ ಹೇಗೆ ಸಾಧ್ಯ?

ಮುಂಬೈನಿಂದ ಪ್ರಕಟವಾಗುತ್ತಿದ್ದ ‘ಫ್ರೀ ಪ್ರೆಸ್ ಜರ್ನಲ್’ ಎಂಬ ಆಂಗ್ಲ ದಿನಪತ್ರಿಕೆಯಲ್ಲಿ ಸ್ಟಾಲಿನ್ ಶ್ರೀನಿವಾಸನ್ ಎಂಬ ಸುದ್ದಿ ಸಂಪಾದಕರಿದ್ದರು. ಅಲ್ಪವಿರಾಮ ಹಾಗೂ ಪೂರ್ಣವಿರಾಮದ ಬಗ್ಗೆ ಹದ್ದಿನ ಕಣ್ಣು. ಸ್ಪೆಲ್ಲಿಂಗ್ ದೋಷದಂತೆ ಕಾಮ, ಫುಲ್‌ಸ್ಟಾಪ್ ದೋಷವನ್ನು ಸಹ  ಅಲ್ಪವಿರಾಮ ಹಾಕಬೇಕಾದಲ್ಲಿ ಹಾಕದಿದ್ದರೆ ಕಾಪಿಯನ್ನು ವರದಿಗಾರರ ಮುಖಕ್ಕೆ ಬಿಸಾಕುತ್ತಿದ್ದರು. ‘ಅಲ್ಪವಿರಾಮ(ಅವಿ) ಹಾಗೂ ಪೂರ್ಣವಿರಾಮ(ಪೂವಿ) ಇಲ್ಲದೇ ವಾಕ್ಯರಚನೆ ಹೇಗೆ ಸಾಧ್ಯ? ನಿನಗೆ ಭಾಷೆ ಕಲಿಸಿದ ಮುಠ್ಠಾಳ ಯಾರು’ ಎಂದು ಇಡೀ ಸುದ್ದಿಮನೆ ಕಕ್ಕಾಬಿಕ್ಕಿಯಾಗುವಂತೆ ಗದರುತ್ತಿದ್ದರು.

ಸ್ಟಾಲಿನ್ ಶ್ರೀನಿವಾಸನ್ ತಮ್ಮ ಟೇಬಲ್ ಮೇಲೆ ಹಾಕಿದ ಗ್ಲಾಸಿನ ಅಡಿಯಲ್ಲಿ ಖ್ಯಾತ ಅಮೆರಿಕ ಬರಹಗಾರ ಡೇನಿಯಲ್ ಕೇಯ್‌ಸ್ ಅಲ್ಪವಿರಾಮದ ಬಗ್ಗೆ ಬರೆದ ಪ್ರಸಿದ್ಧ ಸಾಲನ್ನು ಬರೆದಿಟ್ಟುಕೊಂಡಿದ್ದರು ಹಾಗೂ ಈ ಸಾಲನ್ನು ಓದುವಂತೆ ಎಲ್ಲ ವರದಿಗಾರರಿಗೆ  ಉಪಸಂಪಾದಕರಿಗೆ ಹೇಳುತ್ತಿದ್ದರು. ಆ ಸಾಲು ಹೀಗಿತ್ತು “Today, I learned, the comma, this is, a, comma(,) a period, with, a tail, Miss Kin-nian, says its, important, because, it makes writing, better, she said, somebody, could lose, a lot of money, if a comma, isn’t in, the right, place, I got, some money, that I, saved from, my job, and what, the foundation, pays me, but not, much and, I dont, see how a comma, keeps, you from, losing, it, but she says, everybody, uses commas, so I will use them too,,,

ಯಾರು ಭ್ರಷ್ಟರು?

ಮೊನ್ನೆ ಉಗಾಂಡಕ್ಕೆ ಹೋಗಿದ್ದಾಗ, ಅಲ್ಲಿನ ಎಂಟೆಬ್ಬೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಪುಸ್ತಕದ  ಕೆಲಕಾಲ ಕುಳಿತಿದ್ದೆ. ಉಗಾಂಡದ ಲೋಕಲ್ ಜೋಕ್ ಪುಸ್ತಕದಲ್ಲಿ ಕಂಡ ಒಂದು ಪ್ರಸಂಗ ಓದಿ, ಪುಟಗಳನ್ನು ಜೀಕುತ್ತಿದ್ದರೆ, ಅಲ್ಲಿನ ಪ್ರಸಂಗಗಳಿಗೂ ನಮಗೂ ಸಾಮ್ಯತೆ ಇದೆಯೆಂದು ಎನಿಸಿತು.

ಇಬ್ಬರು ಮತದಾರರು ಮತ ಚಲಾಯಿಸಿ ಮನೆಗೆ ಮರಳುತ್ತಿದ್ದರು. ‘ಇಂಥ ಭ್ರಷ್ಟ ಚುನಾವಣೆಯನ್ನು ನಾನಂತೂ ನನ್ನ ಐವತ್ತು ವರ್ಷದ ಅನುಭವದಲ್ಲಿ ಕಂಡಿಲ್ಲ’ ಎಂದ ಒಬ್ಬ. ಅದಕ್ಕೆ ಮತ್ತೊಬ್ಬ, ‘ಹೌದಾ? ನೀನು ಹಾಗೆ ಹೇಳಲು ಕಾರಣವೇನು?’ ಎಂದು ಕೇಳಿದ.

‘ಒಬ್ಬ ಅಭ್ಯರ್ಥಿ ನನಗೆ ನೂರು ಡಾಲರ್  ಮತ್ತೊಬ್ಬ ಅಭ್ಯರ್ಥಿ 50 ಡಾಲರ್ ಕೊಟ್ಟ’ ಎಂದ ಮೊದಲನೆಯವ. ‘ನೀನು ಯಾರಿಗೆ ಮತ ಹಾಕಿದೆ?’ ಎಂದು ಎರಡನೆಯವ ಕೇಳಿದ.

ಮೊದಲನೆಯವ ಹೇಳಿದ-‘ನಾನು 50ಡಾಲರ್ ಕೊಟ್ಟವನಿಗೆ ಮತ ಹಾಕಿದೆ. ಕಾರಣ ಆತ ಮೊದಲನೆಯವನಿಗಿಂತ ಅರ್ಧ ಭ್ರಷ್ಟ. ಈ ದರಿದ್ರ ರಾಜಕಾರಣಿಗಳು ಯಾವಾಗ ಈ ಹಣ ಹಂಚುವುದನ್ನು ಬಿಡ್ತಾರೋ ಆವಾಗ ನಮ್ಮ ದೇಶ ಉದ್ಧಾರವಾಗುತ್ತದೆ.’

Tags

ವಿಶ್ವೇಶ್ವರ್ ಭಟ್

ಇವರ ಊರು ಉತ್ತರ ಕನ್ನಡದ ಕುಮಟಾದ ಮೂರೂರು. ಓದಿದ್ದು ಎಂ.ಎಸ್ಸಿ ಹಾಗೂ ಎಮ್.ಎ. ನಾಲ್ಕು ಚಿನ್ನದ ಪದಕ ವಿಜೇತ. ಇಂಗ್ಲೆಂಡಿನಲ್ಲಿ ಪತ್ರಿಕೋದ್ಯಮದಲ್ಲಿ ಉನ್ನತ ವ್ಯಾಸಂಗ. ವೃತ್ತಿಯ ಆರಂಭದಲ್ಲಿ ಸಂಯುಕ್ತ ಕರ್ನಾಟಕ, ಕನ್ನಡಪ್ರಭದಲ್ಲಿ ಉಪಸಂಪಾದಕ. ಆನಂತರ ಏಷ್ಯನ್ ಕಾಲೇಜ್ ಆಫ್ ಜರ್ನಲಿಸಮ್‌ನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್. ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಖಾತೆ ಸಚಿವರಿಗೆ ವಿಶೇಷ ಕರ್ತವ್ಯ ಅಧಿಕಾರಿ. ಕನ್ನಡದ ಜನಪ್ರಿಯ ದೈನಿಕ ‘ವಿಜಯ ಕರ್ನಾಟಕ’ ದ ಮಾಜಿ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇಲ್ಲಿ ತನಕ ಬರೆದಿದ್ದು 65 ಪುಸ್ತಕಗಳು. ವಿಜಯ ಕರ್ನಾಟಕದಲ್ಲಿದ್ದಾಗ ಬರೆದಿದ್ದು ‘ನೂರೆಂಟು ಮಾತು, ಜನಗಳ ಮನ ಹಾಗೂ ಸುದ್ದಿಮನೆ ಕತೆ’ ಜನಪ್ರಿಯ ಅಂಕಣಗಳು. ಐವತ್ತಕ್ಕೂ ಹೆಚ್ಚು ದೇಶ ಸುತ್ತಿದ ಅನುಭವ. 2005 ಸುವರ್ಣ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳಿಗೆ ಪಾತ್ರ. ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಜತೆ ಹದಿನೈದು ದಿನ ನಾಲ್ಕು ದೇಶಗಳಲ್ಲಿ ಪಯಣ. ಪ್ರಸ್ತುತ ವಿಶ್ವವಾಣಿಯ ಪ್ರಧಾನ ಸಂಪಾದಕ. ಇವರ ಅಂಕಣಗಳು ‘ನೂರೆಂಟು ವಿಶ್ವ’ ಮತ್ತು ’ಇದೇ ಅಂತರಂಗ ಸುದ್ದಿ’ ಗುರುವಾರ ಮತ್ತು ಭಾನುವಾರ ಓದಬಹುದು.

Related Articles

Leave a Reply

Your email address will not be published. Required fields are marked *

Language
Close