ಯಾರನ್ನೇ ದ್ವೇಷಿಸಿದರೂ ಸಿಗುವುದು ಕೊಳೆತ ವಾಸನೆ !

Posted In : ಅಂಕಣಗಳು, ಗುರುಮನ

ಒಂದೂರಿನಲ್ಲಿ ಒಬ್ಬ ಸೋಮಾರಿಯಿದ್ದ. ಇತರರಿಗೆ ಸಹಾಯ ಮಾಡುವುದು ದೂರ, ತನ್ನ ಕೆಲಸಗಳನ್ನೇ ಮಾಡಿಕೊಳ್ಳುವುದು ಅವನಿಗೆ ಕಷ್ಟವಾಗಿತ್ತು. ಸುಲಭವಾಗಿ ಎಲ್ಲಿ ಏನು ತಿನ್ನಲು ಸಿಗುವುದೋ ಅಲ್ಲಿ ಈತ ತಪ್ಪದೇ ಹಾಜರಾಗುತ್ತಿದ್ದ. ಆ ದಿನ ಅವನಿಗೆ ಜೋರು ಹಸಿವು. ತಿನ್ನಲು ಏನೂ ಇಲ್ಲ. ಆಹಾರ ಹುಡುಕಾಡುತ್ತಾ, ನಾನಾ ಹಣ್ಣುಗಳಿಂದ ಸಮೃದ್ಧಿಯಾಗಿದ್ದ ತೋಟವೊಂದನ್ನು ನೋಡಿದ. ಯಾರಿಗೂ ಕಾಣದಂತೆ ತೋಟಕ್ಕೆ ನುಗ್ಗಿ ಸಿಕ್ಕ ಹಣ್ಣುಗಳನ್ನೆಲ್ಲಾ ತಿನ್ನುತ್ತಿದ್ದ.

ಅಷ್ಟರಲ್ಲಿ ಯಾವನೋ ಅವ್ನು ತೋಟಕ್ಕೆ ನುಗ್ಗಿರೋನು ಎಂಬ ಧ್ವನಿ ಕೇಳಿತು. ಯಾರು ಒದೆ ತಿನ್ನುತ್ತಾರೆ ಎಂದು ಹಿಂದು ಮುಂದೂ ನೋಡದೇ ಸುಮ್ಮನೆ ಓಡಿದ. ಓಡುತ್ತಾ ಓಡುತ್ತಾ ಅವನು ಕಾಡಿನೊಳಗೆ ಬಂದ ಎಂಬುದು ಗೊತ್ತೇ ಆಗಲಿಲ್ಲ. ಕಾಡಿನಲ್ಲಿ ನಡೆಯುತ್ತಾ ನರಿಯೊಂದು ಕಣ್ಣಿಗೆ ಬಿತ್ತು. ನರಿಗೆ ಎರಡೇ ಕಾಲಿತ್ತು. ಅದನ್ನು ನೋಡುತ್ತಾ ಇಂಥ ಸ್ಥಿತಿಯಲ್ಲಿರುವವರು ಬದುಕಿರಲೇಬಾರದು, ಆಹಾರಕ್ಕಾಗಿ, ತನ್ನ ರಕ್ಷಣೆಗಾಗಿ ಈ ನರಿ ಏನು ಮಾಡಿಕೊಳ್ಳುತ್ತದೆ ಎಂದು ಯೋಚಿಸಿದ. ಅಷ್ಟರಲ್ಲೇ ಸಿಂಹ ಘರ್ಜನೆ ಕೇಳಿತು. ವೇಗವಾಗಿ ಮರ ಏರಿ ಕುಳಿತ. ಸಿಂಹದ ಬಾಯಲ್ಲಿ ಮಾಂಸದ ತುಂಡೊಂದಿತ್ತು.

ಸಿಂಹ ಈಗಿನ್ನೂ ಭರ್ಜರಿ ಬೇಟೆಯಾಡಿದೆ ಎಂದುಕೊಂಡ. ಬದಿಯಲ್ಲಿದ್ದ ಎಲ್ಲ ಪ್ರಾಣಿಗಳೂ ಭಯದಿಂದ ಓಡಿ ಹೋದವು. ಆದರೆ ಈ ನರಿ ಮಾತ್ರ ಕೂತಲ್ಲೇ ಕೂತಿತ್ತು. ನರಿ ಸ್ಥಿತಿ ನೆನೆದು ಇವನಿಗೆ ಪಾಪ ಎನಿಸಿತು. ಆದರೆ ಅಲ್ಲಿ ಆಗಿದ್ದೇ ಬೇರೆ. ಸಿಂಹ ನರಿಯ ಹತ್ತಿಿರ ಬಂದು ತನ್ನ ಬಾಯಲ್ಲಿದ್ದ ಮಾಂಸದ ತುಂಡನ್ನು ನರಿಯ ಮುಂದೆ ಇಟ್ಟು ಹೊರಟು ಹೋಯಿತು. ಇದರಿಂದ ಆತ ಒಂದನ್ನು ಕಲಿತ. ದೇವರು ಭೂಮಿ ಮೇಲಿರುವ ಪ್ರತಿಯೊಬ್ಬರ ಜೀವನಕ್ಕೂ ಏನಾದರೂ ಒಂದು ಯೋಜನೆ ಹಾಕಿಯೇ ಇರುತ್ತಾನೆ. ನನ್ನ ವಿಷಯದಲ್ಲೂ ಹೀಗೆ ಆಗಲಿದೆ. ನಾನು ಆಹಾರಕ್ಕಾಗಿ ಕಾದರೆ ಸಾಕು. ಆಹಾರವೇ ನನ್ನನ್ನು ಹುಡುಕಿಕೊಂಡು ಬರಲಿದೆ ಎಂಬ ನಿರ್ಧಾರಕ್ಕೆ ಬಂದ.

ಅಂತೆಯೇ ಊಟಕ್ಕಾಗಿ ಊರ ಅರಳಿಕಟ್ಟೆಯ ಮುಂದೆ ಕಾಯುತ್ತಾ ಕೂತ. ಎರಡು ದಿನಗಳಾದರೂ ಯಾರೂ ಅವನನ್ನು ಯಾಕಿಲ್ಲಿ ಕುಳಿತಿದ್ದೀಯ ಎಂದೂ ಕೇಳಲಿಲ್ಲ. ಹಸಿವು ತಡೆಯಲಾರದೇ ಎದ್ದು ಹೊರಟ. ಮಧ್ಯದಲ್ಲಿ ಸನ್ಯಾಸಿಯೊಬ್ಬರು ಸಿಕ್ಕರು. ಅವರಲ್ಲಿ ದೇವರು ತನಗೆ ಮೋಸ ಮಾಡಿದ್ದಾಾರೆ. ಸುಮ್ಮನೆ ಕೂತರೂ ಊಟ ಸಿಗುತ್ತದೆ ಎನ್ನುವಂತೆ ನರಿಯ ಮೂಲಕ ನನಗೆ ಉತ್ತರಿಸಿ ಈಗ ಹೀಗೆ ಮಾಡುತ್ತಿದ್ದಾನೆ ಎಂದು ಬೇಸರಿಸಿಕೊಂಡ. ಆಗ ಸ್ವಾಮೀಜಿ ಹೇಳಿದ ದೇವರು ಯಾರಿಗೂ ಮೋಸ ಮಾಡಿಲ್ಲ. ನೀನು ಕಲಿಯಬೇಕಾಗಿದ್ದು ನರಿಯನ್ನು ನೋಡಿಯಲ್ಲ ಸಿಂಹವನ್ನು ನೋಡಿ ಎಂದರು. ಅಂಗವಿಕಲನಾಗಿ ಅಶಕ್ತನಾದ ನರಿಗೆ ಸಿಂಹ ಸಹಾಯ ಮಾಡಿತು. ಆದರೆ ನಿನಗೇನಾಗಿದೆ. ದುಡಿದು ತಿಂದು, ಇನ್ನೊಬ್ಬರಿಗೂ ಊಟ ನೀಡುವ ಸಾಮರ್ಥ್ಯ ನಿನ್ನಲ್ಲಿದೆ ಎಂದರು.

ಅಸಲಿಗೆ ದೇವರು ಹೀಗೆ ನಮಗೆ ಯಾವ್ಯಾವುದೋ ರೀತಿಯಲ್ಲಿ ಸೂಚನೆಗಳನ್ನು ನೀಡುತ್ತಾನೆ. ಆದರೆ ಅದನ್ನು ಅಪಾರ್ಥ ಮಾಡಿ ಕೊಳ್ಳುವವರು ನಾವೇ.ಎಲ್ಲರೂ ಅವರವರ ಸ್ಥಾನದಲ್ಲಿ ನಿಂತು ತಮ್ಮ ಕೈಲಾದ್ದನ್ನು ಮಾಡಲೇಬೇಕು. ದೇವರು ಎಲ್ಲರಿಗೂ ಒಂದೇ ಸಾಮರ್ಥ್ಯ ನೀಡಿರುವುದಿಲ್ಲ. ಆದರೆ ಒಬ್ಬರ ಸಾಮರ್ಥ್ಯವನ್ನು ಒಬ್ಬರು ಅರಿತು ಸಹಕಾರದಿಂದ ಬಾಳಬೇಕು ಎಂಬುದು ಅವನ ಆಶಯವಾಗಿರಬಹುದಲ್ಲವೆ?
***

ಎಂದಿನಂತೆ ತರಗತಿ ಗಿಜಿಗಿಜಿ ಎನ್ನುತ್ತಿತ್ತು. ವಿದ್ಯಾರ್ಥಿಗಳಿಬ್ಬರು ಹೊಡೆದಾಡುತ್ತಿದ್ದರು. ನನ್ನ ಪೆನ್ ಇದು ಎಂದು ಕೂಗುತ್ತಿದ್ದರು. ಶಿಕ್ಷಕಿ ಬಂದು, ಏನಾಯ್ತು ಎಂದರು. ಇಬ್ಬರೂ ಒಂದೇ ಸಮನೇ ಇದು ನನ್ನ ಪೆನ್ನು, ಇವಳು ಕದ್ದಿದ್ದಾಳೆ, ಆವತ್ತು ನನ್ನ ರಬ್ಬರ್ ಕದ್ದಿದ್ಲು. ನಂಗೆ ಇವಳು ಇಷ್ಟಾನೆ ಇಲ್ಲ ಎಂದು ಕೂಗಿದರು. ಈ ಮಕ್ಕಳಿಗೆ ಇಷ್ಟ, ಪ್ರೀತಿ, ಸಿಟ್ಟು, ದ್ವೇಷ ಎಂಬ ಪದಗಳನ್ನು ಅರ್ಥೈಸುವುದು ಕಷ್ಟವಾಗಿತ್ತು. ಸ್ವಲ್ಪ ಯೋಚಿಸಿ ಶಿಕ್ಷಕಿ ನಾಳೆ ಎಲ್ಲರೂ ಆಲೂಗಡ್ಡೆಗಳನ್ನು ತನ್ನಿ, ನಿಮಗೆ ಎಷ್ಟು ಜನ ಇಷ್ಟ ವಿಲ್ಲ, ಯಾರ್ಯಾರನ್ನು ದ್ವೇಷಿಸುತ್ತೀರಿ ಎಂದು ಲೆಕ್ಕ ಹಾಕಿ ಎಂದರು.

ಮಕ್ಕಳು ಉತ್ಸಾಹದಿಂದ ‘ನನಗೆ ಮೂರು ಜನ ಇಷ್ಟ ಇಲ್ಲ, ನಂಗೇ ಐದು ಎಂದರು. ನಂತರ ಯಾರ್ಯಾರು ಎಷ್ಟು ಜನರನ್ನು ದ್ವೇಷಿಸುತ್ತಾರೋ ಅಷ್ಟು ಆಲೂಗಡ್ಡೆಗಳನ್ನು ಒಂದು ಚೀಲಕ್ಕೆ ಹಾಕಿ ತರುವಂತೆ ಹೇಳಿದರು. ಮರುದಿನ ಒಬ್ಬರು ಐದು ಆಲೂ ಗಡ್ಡೆ, ಒಬ್ಬರು ಏಳು, ಹೀಗೆ ಚೀಲದಲ್ಲಿ ಆಲೂಗಡ್ಡೆಗಳಿದ್ದವು. ಅವನ್ನು ಯಾವುದೇ ಕಾರಣಕ್ಕೂ ಎಲ್ಲಿಯೂ ಬಿಟ್ಟು ಹೋಗು ವಂತಿಲ್ಲ. ನೀವು ಒಂದು ವಾರ ಎಲ್ಲಿಗೆ ಹೋದರೂ ಅದನ್ನು ನಿಮ್ಮ ಜತೆ ತೆಗೆದುಕೊಂಡೇ ಹೋಗಬೇಕು ಎಂದರು. ಮಕ್ಕಳು ಇದಕ್ಕೆ ಒಪ್ಪಿದರು. ಎರಡು ದಿನಕ್ಕೆ ಸುಸ್ತಾದರು. ಆದರೂ ಶಿಕ್ಷಕಿ ಬಿಡಲಿಲ್ಲ. ಒಂದು ವಾರ ಇದು ಹೀಗೆ ಇರಬೇಕು ಎಂದರು. ಆಲೂ ಗಡ್ಡೆ ಕೊಳೆಯುತ್ತಾ ಬಂತು. ಅದರ ವಾಸನೆಯಿಂದ ಹಿಂಸೆ ಎನಿಸಿತು. ಆದರೂ ಜತೆಗಿಟ್ಟುಕೊಂಡು ಓಡಾಡಬೇಕಿತ್ತು. ಅಂತೂ ಇಂತು ಒಂದು ವಾರ ಮುಗಿಯಿತು.ಮಕ್ಕಳೆಲ್ಲ ಆಲೂಗಡ್ಡೆ ಚೀಲ ಎಸೆದು ಖುಷಿಯಿಂದ ಶಾಲೆಗೆ ಬಂದರು. ಶಿಕ್ಷಕಿ ಏಕೆ ಹೀಗೆ ಮಾಡಿದ್ದು ಎನ್ನುವ ಕುತೂಹಲ ಮಕ್ಕಳಿಗಿತ್ತು.

ಹೇಗಿತ್ತು ಈ ಒಂದು ವಾರ ಎಂದು ಕೇಳಿದರು. ಒಬ್ಬೊಬ್ಬರೇ ಮಿಸ್ ಸಾಕಾಗಿ ಹೋಯ್ತು ಭಾರ ಅಂದ್ರೆ ಭಾರ, ವಾಸನೇ ಬೇರೆ ಎಂದಂದರು. ನಿಮ್ಮ ಬಳಿ ಇದ್ದ ಆಲೂಗಡ್ಡೆ ಮೊದಲಿಗೆ ಭಾರ, ಆಮೇಲೆ ಸಹಿಸಲಸಾಧ್ಯ ಎನಿಸಿದೆ. ಅಷ್ಟೇ ಅಲ್ಲದೆ ನಿಮ್ಮ ಬಳಿ ಇದ್ದ ಕೊಳೆತ ಆಲೂಗಡ್ಡೆ ಇಡೀ ತರಗತಿಗೇ ಕೆಟ್ಟ ವಾಸನೆ ಹರಡಿದೆ. ಅಸಲಿಗೆ ಇದು ಆಲೂಗಡ್ಡೆಯಲ್ಲ. ನಿಮ್ಮ ಬಳಿ ಇದ್ದ ದ್ವೇಷದ ಕಣ. ನೀವು ಅವರು ನನಗೆ ಇಷ್ಟ ಇಲ್ಲ, ನಾನು ಹೇಟ್ ಮಾಡ್ತಿನಿ ಎಂದೆಲ್ಲಾ ಮಾತನಾಡುತ್ತೀರ. ಆದರೆ ಯಾರನ್ನೇ ಆಗಲಿ ದ್ವೇಷಿಸಿದರೆ ಸಿಗುವುದು ಕೊಳೆತ ವಾಸನೆಯಷ್ಟೆ. ದ್ವೇಷ ಮೆಲ್ಲಗೆ ನಿಮ್ಮೊಳ ಹೊಕ್ಕು, ನಿಮ್ಮ ಮನಸ್ಸಿನ ಸ್ವಾಸ್ಥ್ಯವನ್ನೇ ಹಾಳು ಮಾಡುತ್ತದೆ. ಕೊಳೆತ ಆಲೂಗಡ್ಡೆಯನ್ನು ನಮ್ಮ ಜತೆ ಇಟ್ಟುಕೊಂಡು ಓಡಾಡಿದರೆ ಕೊಳೆತ ವಾಸನೆಯೇ ಬರುತ್ತದೆ ಹೊರತು ಇನ್ನೇನಲ್ಲ. ಆ ಭಾರವನ್ನು ಒಮ್ಮೆ ಮನಸ್ಸಿನಿಂದ ಇಳಿಸಿ ನೋಡಿ. ಎಲ್ಲರನ್ನೂ ಪ್ರೀತಿಸಿ, ಕ್ಷಮಿಸಿ, ನಕಾರಾತ್ಮಕ ಆಲೋಚನೆ ಗಳನ್ನು ದೂರ ತಳ್ಳಿ ನೋಡಿ, ಜೀವನ ಚೆಂದ ಎಂದನಿಸದೇ ಇರದು.
***

ಚೆಂದದ ಜೋಡಿಯೊಂದಿತ್ತು. ಹುಡುಗಿಗೆ ಕೋಪ, ಪ್ರೀತಿ ಎರಡೂ ಜಾಸ್ತಿ. ಹುಡುಗನಿಗೆ ತಾಳ್ಮೆ, ಪ್ರೀತಿಯೇ ಆಸ್ತಿ. ಕಣ್ಣುಕುಕ್ಕುವಂಥ ಜೋಡಿ. ಆಕೆಗೆ ಮನೆಯವರ ಮೇಲೆ ಕೋಪ ಬಂದರೆ ಅವರೆದುರಿಗೆ ಒಂದು ಮಾತೂ ಹೇಳದೇ ಸೀದ ಇವನ ಬಳಿ ಬಂದು ನೀನು ಅವತ್ತು ಹಾಗೆ ಮಾಡಿದೆ, ಹೀಗೆ ಮಾಡಿದೆ ಎಂದು ಜೋರು ಮಾಡಿ ತನ್ನ ಕೋಪ ಕಮ್ಮಿ ಮಾಡಿಕೊಳ್ಳುತ್ತಿದ್ದಳು. ಇದನ್ನು ನೋಡಿದವರೆಲ್ಲ ಪಾಪ ಆ ಹುಡುಗನ ಮೇಲೆ ಇಷ್ಟು ಕೋಪ ಮಾಡುತ್ತಾಳಲ್ಲ ಎಂದಂದುಕೊಳ್ಳುತ್ತಿದ್ದರು. ಆದರೆ ಅವಳು ಕೋಪದಲ್ಲಿ ಆಡಿದ ಮಾತುಗಳ್ಯಾವೂ ಸತ್ಯವಲ್ಲ ಎಂದು ಅವ ಅರ್ಥ ಮಾಡಿಕೊಂಡಿದ್ದ. ನಗುತ್ತಾ ಅವಳು ಹೇಳಿದ ಎಲ್ಲವನ್ನು ಕೇಳುತ್ತಿದ್ದ. ಅಂತೆಯೇ ಒಂದು ದಿನ ಅವನಿಗೆ ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡುವ ಅವಕಾಶ ಒದಗಿ ಬಂತು. ಅದಕ್ಕು ಮುನ್ನಾಾ ದಿನ ಅವಳ ಬಳಿ ಬಂದು ನನ್ನ ಮದುವೆಯಾಗುತ್ತೀಯಾ? ಎಂದು ಕೇಳಿದ.

ಆಕೆಯೂ ಒಪ್ಪಿದಳು. ನಂತರ ಮನೆಯಲ್ಲಿ ಮಾತನಾಡಿ ಒಂದು ವರ್ಷದ ನಂತರ ವಿವಾಹಕ್ಕೆ ದಿನ ಗೊತ್ತು ಮಾಡಿಯಾಗಿತ್ತು. ಆತ ವಿದೇಶಕ್ಕೆ ತೆರಳಿದ. ಪತ್ರ, ಪೋನ್‌ಗಳ ಮೂಲಕ ಮಾತುಕತೆ ನಡೆಯುತ್ತಿತ್ತು. ಇದು ವರ್ಷಾನುಗಟ್ಟಲೆ ನಡೆಯುತ್ತಿತ್ತು. ಆದರೆ ಒಂದು ದಿನ ಹುಡುಗಿ ರಸ್ತೆ ದಾಟುವಾಗ ಕಣ್ಣು ಮಂಜಾಯಿತು, ಆಕೆಗೆ ಪ್ರಜ್ಞೆ ಬಂದಾಗ ಆಸ್ಪತ್ರೆಯಲ್ಲಿದ್ದಳು. ಅಪ್ಪ ಅಮ್ಮ ಕಣ್ಣೀರಿಡುತ್ತಿದ್ದರು. ಇವಳಿಗೂ ಕಣ್ಣೀರು. ಅಳಬೇಡಿ ಎಂದು ಹೇಳಬೇಕೆನಿಸಿದರೂ ಮಾತು ಹೊರಡುತ್ತಿಲ್ಲ. ಎಷ್ಟೇ ಪ್ರಯತ್ನಿಸಿ ದರೂ ಆಗುತ್ತಿಲ್ಲ. ಆಗಲೇ ತಿಳಿದದ್ದು ಆಕೆಗೆ ಅಪಘಾತವಾಗಿದ್ದು, ಮೆದುಳಿಗೆ ಪೆಟ್ಟು ಬಿದ್ದ ಕಾರಣ ಆಕೆ ಇನ್ನೆಂದೂ ಮಾತನಾಡ ಲಾರಳು ಎಂದು. ಎಷ್ಟೇ ಕಣ್ಣೀರಿಟ್ಟರೂ ಏನೂ ಆಗುವಂತಿರಲಿಲ್ಲ.

ಫೋನ್ ರಿಂಗ್ ಕೇಳಿದ ಕೂಡಲೇ ಬೆಚ್ಚಿ ಬೀಳುತ್ತಿದ್ದಳು, ಕಣ್ಣೀರಾಗುತ್ತಿದ್ದಳು. ಹುಡುಗನ ಬಳಿ ಮಾತನಾಡಲು ಸಾಕಷ್ಟಿದ್ದರೂ ಮಾತಿಲ್ಲದೇ ಸುಮ್ಮನಾದಳು. ತಾನೇ ದೂರವಾಗಬೇಕೆಂದು ನಿರ್ಧರಿಸಿ, ಊರು ಬಿಟ್ಟಳು. ಕಷ್ಟಪಟ್ಟು ಜೀವನ ರೂಪಿಸಿಕೊಂಡಳು. ಸನ್ನೆಯ ಮೂಲಕ ಮಾತನಾಡುವುದನ್ನು ಕಲಿತಳು. ಕೆಲಸ ಗಿಟ್ಟಿಸಿಕೊಂಡಳು. ತಿಂಗಳುಗಳು ಕಳೆದವು. ಹಳೇ ಸ್ನೇಹಿತೆಯೊಬ್ಬಳು ಸಿಕ್ಕು ಅವನು ಮದುವೆಯಾಗುತ್ತಿದ್ದಾನೆ ಎಂದಳು. ಇವಳ ಬಳಿ ಉತ್ತರವಿಲ್ಲ. ತಗೊ ಕಾರ್ಡ್ ನೋಡು ಎಂದಳು. ಆಶ್ಚರ್ಯ! ಕಾರ್ಡ್‌ನಲ್ಲಿ ಅವಳದ್ದೇ ಹೆಸರಿತ್ತು. ಆಗ ನೆನಪಾದದ್ದು ಎಲ್ಲಾ ಸರಿಯಾಗಿದ್ದಿದ್ದರೆ ಇಂದು ಅವರಿಬ್ಬರು ಮದುವೆಯಾಗಬೇಕಿತ್ತು ಎಂದು. ಇಷ್ಟು ದಿನ ಅವಳನ್ನು ನೋಡುವ, ಮಾತನಾಡುವ ಪ್ರಯತ್ನವೇ ಮಾಡದವನು ಕಾರ್ಡ್‌ನಲ್ಲಿ ತನ್ನ ಹೆಸರು ಹಾಕಿಸಿದ್ದು ಏಕೆ ಎಂಬ ಪ್ರಶ್ನೆ ಅವಳಿಗೆ ಬಂತು. ಅವನು ಇಷ್ಟು ದಿನ ಆಕೆಗೆ ಕಾಣಿಸಿಕೊಳ್ಳದೇ ಇದ್ದದ್ದಕ್ಕೆ ಕಾರಣ, ಆತ ಸನ್ನೆಯಲ್ಲಿ ಮಾತ ನಾಡುವುದನ್ನು ಕಲಿಯುತ್ತಿದ್ದ. ಅವಳಿಗೆ ನಿನ್ನನ್ನು ಪ್ರೀತಿಸುತ್ತಿದ್ದೇನೆ, ಜೀವನ ಪರ್ಯಂತ ನಿನ್ನ ಜತೆಯೇ ಇರಬೇಕು ಎಂದು ಹೇಳಬೇಕಿತ್ತು. ಆದರೆ ಅವಳಿಗೆ ಅದನ್ನು ಅರ್ಥ ಮಾಡಿಸುವ ಸಲುವಾಗಿ ಸನ್ನೆಯಲ್ಲಿ ಮಾತನಾಡುವುದನ್ನು ಕಲಿಯುವುದು ಮುಖ್ಯವಾಗಿತ್ತು.

ಮನುಷ್ಯನಿಗೆ ತಾಳ್ಮೆ, ಪ್ರೀತಿ ಜೀವನದಲ್ಲಿ ತುಂಬಾ ಮುಖ್ಯವಾದ್ದು. ಪರಿಸ್ಥಿತಿಗಳಿಂದ ದೂರ ಓಡುವುದು ಹೇಡಿತನವಾಗುವು ದಿಲ್ಲವೆ? ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಇದ್ದೇ ಇರುತ್ತದೆ. ಪರಿಸ್ಥಿತಿಗಳ ಹೊಡೆತಕ್ಕೆ ಸಿಕ್ಕು ಮನಸ್ಸು ನೋಯಿಸಬೇಕು ಎಂದೇ ನಿಲ್ಲ. ಏಕೆಂದರೆ ಇನ್ಯಾರೋ ನಿಮ್ಮ ಮನಸ್ಸನ್ನು ಹೀಗೆಯೇ ನೋಯಿಸಬಹು ದಲ್ಲವೆ?
***

ಆ ದಿನ ನಡೆದು ಹೋಗುತ್ತಿದ್ದಾಗ ಬೆಕ್ಕೊಂದು ಪೈಪ್‌ನ ಒಳ ಸಿಕ್ಕು, ಹೊರ ಬರಲಾರದೇ ಒದ್ದಾಡುತ್ತಿತ್ತು. ಅದೇ ದಾರಿಯಲ್ಲಿ ನಡೆದು ಹೋಗುತ್ತಿದ್ದ ಒಬ್ಬ ಅದನ್ನು ನೋಡಿದ. ಬೆಕ್ಕು ಒದ್ದಾಡುತ್ತಿರುವುದನ್ನು ಕಂಡು ಅದಕ್ಕೆ ಸಹಾಯ ಮಾಡಲು ಮುಂದಾದ. ಆದರೆ ಬೆಕ್ಕು ಸಹಜವಾಗಿಯೇ ಅವನ ಕೈ ಪರಚಿತು. ಆತ ಜೋರಾಗಿ ಕೂಗಿಕೊಂಡು ಕೈ ಹಿಂದೆ ತೆಗೆದ. ಮತ್ತೆ ಸ್ವಲ್ಪ ಸಮಯದ ನಂತರ ಬೆಕ್ಕನ್ನು ಹೊರತೆಗೆಯಲು ಪ್ರಯತ್ನಿಸಿದ. ಮತ್ತೆ ಪರಚಿತು. ಇದನ್ನು ದೂರದಿಂದಲೇ ನಿಂತು ನೋಡುತ್ತಿದ್ದ ವ್ಯಕ್ತಿ ಬಂದು ಆ ಬೆಕ್ಕಿನ ಹಣೆಬರಹವೇ ಅಷ್ಟು. ಒಳ್ಳೆಯದು ಮಾಡಲು ಹೋದರೆ ಅದಕ್ಕೆ ಆಗುವುದಿಲ್ಲ. ಸಾಯಲಿ ಬಿಡಿ ಎಂದ.
ಈ ವ್ಯಕ್ತಿಯ ಮಾತುಗಳು ಕೇಳಿದರೂ ಆತ ವಿಚಲಿತನಾಗಲಿಲ್ಲ.

ತನ್ನ ಪ್ರಯತ್ನ ಕೈ ಬಿಡಲಿಲ್ಲ. ಕಷ್ಟ ಪಟ್ಟು ಬೆಕ್ಕಿಗೂ ನೋವಾಗದಂತೆ ಅದನ್ನು ಹೊರತೆಗೆದ. ಹೆದರಿದ ಬೆಕ್ಕು ಓಡಿ ಹೋಯ್ತ. ಆನಂತರ ಈ ವ್ಯಕ್ತಿಯ ಬಳಿ ಬಂದು, ಅದು ಪ್ರಾಣಿ ಅದಕ್ಕೇನೂ ತಿಳಿಯುವುದಿಲ್ಲ. ನಾವು ಮನುಷ್ಯರಲ್ಲವೆ? ಪರಚುವುದು, ಕಚ್ಚುವುದು ಅದರ ಗುಣವಾದರೆ, ಪ್ರೀತಿಸುವುದು, ಸಹಾಯ ಮಾಡುವುದು ನಮ್ಮ ಗುಣವಲ್ಲವೆ? ಎಂದ. ನಮ್ಮನ್ನು ಬೇರೆಯವರು ಪ್ರೀತಿಯಿಂದ ಮಾತನಾಡಿಸಬೇಕು, ಕಾಳಜಿಯಿಂದ ನೋಡಿಕೊಳ್ಳಬೇಕು ಎಂದು ನಿರೀಕ್ಷಿಸುತ್ತೇವಾದರೆ, ನಾವು ಎಲ್ಲರನ್ನೂ ಅದೇ ಪ್ರೀತಿಯಿಂದ ಕಾಣಬೇಕಲ್ಲವೆ?
***

ಗುರುವೊಬ್ಬ ತನ್ನ ಶಿಷ್ಯರೊಂದಿಗೆ ಗಂಗಾನದಿಗೆ ಮೀಯಲು ಹೋಗಿದ್ದ. ಅಲ್ಲಿ ಒಂದು ಕುಟುಂಬದವರು ಒಬ್ಬರಿಗೊಬ್ಬರು ಜೋರಾಗಿ ಬೈದಾಡಿಕೊಂಡು ಜಗಳವಾಡುತ್ತಿದ್ದುದನ್ನು ನೋಡಿದರು. ಗುರು ತನ್ನ ಶಿಷ್ಯರಿಗೆ, ಅವರ್ಯಾಕೆ ಕೂಗಾಡುತಿದ್ದಾರೆ ಹೇಳಬಲ್ಲಿರಾ? ಎಂದು ಕೇಳಿದ. ಶಿಷ್ಯರಲ್ಲೊಬ್ಬ , ಗುರುಗಳೇ.. ಅವರು ಒಬ್ಬರಿಗೊಬ್ಬರು ಸಿಟ್ಟಾಗಿದ್ದಾರೆ ಹಾಗಾಗಿ ಕೂಗಾಡು ತ್ತಿದ್ದಾರೆ ಎಂದು ಉತ್ತರಿಸಿದ. ತಮಗಾಗಿರುವ ಸಿಟ್ಟನ್ನು ಮೆಲ್ಲ ಮಾತುಗಳಲ್ಲಿ ಮುಂದಿನವರಿಗೆ ಹೇಳಿ ಬಗೆಹರಿಸಿಕೊಳ್ಳುವುದಿಲ್ಲ. ಅದು ಬಿಟ್ಟು ಯಾಕೆ ಹಾಗೆ ಕೂಗಾಡಬೇಕು? ಎಂದು ಗುರು ಮರುಪ್ರಶ್ನೆ ಹಾಕಿದ.

ಶಿಷ್ಯರಿಗೆ ಏನೊಂದೂ ಉತ್ತರ ಹೊಳೆಯಲಿಲ್ಲ. ಸುಮ್ಮನೆ ನಿಂತಿದ್ದರು. ಆಗ ಗುರು, ನೋಡಿ ಸಿಟ್ಟಾದ ಮನುಷ್ಯರ ಹೃದಯಗಳು ದೂರಾಗಿರುತ್ತವೆ. ಎಷ್ಟು ದೂರವಾಗಿರುತ್ತವೆ ಎಂದರೆ ಹೇಳಬೇಕಾದುದನ್ನು ಹೇಳಲು ಕೂಗಲೇಬೇಕಾಗುತ್ತದೆ. ಹಾಗಾಗಿ ಅವರು ಕೂಗಾಡುತ್ತಿದ್ದಾರೆ ಎಂದು ಹೇಳಿದ. ಶಿಷ್ಯರು ಹೌದೆಂಬಂತೆ ತಲೆಯಾಡಿಸಿದರು. ಗುರು ಮುಂದುವರಿಸಿದ, ಆದರೆ ಪ್ರೀತಿಯ ವಿಷಯದಲ್ಲಿ ಹಾಗಾಗುವುದಿಲ್ಲ. ಪ್ರೀತಿಯಲ್ಲಿದ್ದಾಗ ಜನರ ಹೃದಯಗಳು ಎಷ್ಟೆಂದರೆ ಅಷ್ಟು ಹತ್ತಿರವಿರುತ್ತವೆ. ಅವುಗಳ ನಡುವೆ ಚೂರೂ ಅಂತರವಿರುವುದಿಲ್ಲ. ಹಾಗಾಗಿ ಪ್ರೀತಿ ಅಭಿವ್ಯಕ್ತಪಡಿಸಲು ಕೂಗಬೇಕಾಗಿಲ್ಲ. ಪಿಸುಮಾತುಗಳಾಡಿದರೆ ಸಾಕು. ಕೆಲವೊ ಮ್ಮೆ ಪಿಸುಮಾತುಗಳೂ ಬೇಕಾಗುವುದಿಲ್ಲ. ಪದಗಳ ಹಂಗಿಲ್ಲದೆ ಅಭಿವ್ಯಕ್ತವಾಗುವ ಶಕ್ತಿ ಪ್ರೀತಿಗಿದೆ ಎಂದರು.

ಹೌದು ಪಕ್ಕದಲ್ಲೇ ಇರುವವನಿಗೆ ಕೇಳಬೇಕಾದ್ದನ್ನು ಎಲ್ಲರಿಗೂ ಕೇಳುವಂತೆ ಕೂಗಿ ನಾವು ಸಿಟ್ಟಿನಲ್ಲಿದ್ದೇವೆ ಎಂದು ತೋರಿಸಿ ಕೊಳ್ಳುವುದರಲ್ಲಿ ಏನಾದರೂ ಅರ್ಥ ವಿದೆಯೆ? ಮೆದು ಮಾತಿನಲ್ಲಿ ಹೇಳಿದರೆ ಎಂಥವರೂ ಕೇಳುತ್ತಾರೆ. ಹೇಳುವ, ಕೇಳುವ ತಾಳ್ಮೆ ಇರಬೇಕು ಅಷ್ಟೆ.
***

ವರದಿಗಾರನೊಬ್ಬಾತ ಅಜ್ಜಯ್ಯರೊಬ್ಬರನ್ನು ಮಾತನಾಡಿಸಿ ಮಾನವಾಸಕ್ತಿಯ ವರದಿಯೊಂದನ್ನು ಬರೆಯಲು ಯೋಜನೆ ಹಾಕಿದ. ಅದರಂತೆ ಅಜ್ಜಯ್ಯನನ್ನು ಮಾತನಾಡಿಸಿದ. ಅಜ್ಜ ಈಗೇನಾದರು ನಿಮ್ಮ ಒಂದು ಪತ್ರ ಬಂದು ಅದರಲ್ಲಿ ನಿಮ್ಮ ದೂರದ ಸಂಬಂಧಿಯೊಬ್ಬರು ತಮ್ಮ ಹತ್ತುಕೋಟಿ ಆಸ್ತಿಯನ್ನು ನಿಮ್ಮ ಹೆಸರಿಗೆ ಬರೆದಿಟ್ಟಿದ್ದಾರೆ ಎಂದು ಬರೆದಿದ್ದರೆ? ಎಂದು ಪ್ರಶ್ನೆ ಹಾಕಿದ. ಅಜ್ಜಯ್ಯ, ಮಗೂ ಆಗಲೂ ನನ್ನ ವಯಸ್ಸು ತೊಂಬತ್ತೆಂಟೇ ಇರುತ್ತದೆ. ಅದೇನು ಬದಲಾಗುವುದಿಲ್ಲ ವಲ್ಲಪ್ಪ ಎಂದ. ಹಣ, ಆಸ್ತಿ ಎಂದಾದರೂ ಬದಲಾಗಬಹುದು ಆದರೆ ವಯಸ್ಸು? ಎಷ್ಟೇ ಹಣವಿದ್ದರೂ ಸಮಯ ಖರೀದಿಸಲಾಗದು. ನಾಳೆ ಏನಾಗುತ್ತದೆ ಎಂದು ಯಾರೂ ತಿಳಿಯರು. ಈ ಕ್ಷಣವೇ ಜೀವಂತ ಅಲ್ಲವೆ?
***

ಒಬ್ಬ ಮನುಷ್ಯ ನದಿಯೊಂದನ್ನು ದಾಟಲಾಗದೆ ದಡದಲ್ಲೇ ನಿಂತಿದ್ದ. ಆಗ ಆತನಿಗೆ ವಿಭೀಷಣ ಭೇಟಿಯಾದ. ಆ ಮನುಷ್ಯ ವಿಭೀಷಣನಿಗೆ ನದಿ ದಾಟಲು ಉಪಾಯ ಹೇಳಲು ಕೇಳಿಕೊಳ್ಳುತ್ತಾನೆ. ವಿಭೀಷಣನು ಒಂದು ಎಲೆಯ ಮೇಲೆ ಏನನ್ನೋ ಬರೆದು ಆ ಮನುಷ್ಯನ ಬೆನ್ನಿಗೆ ಅಂಟಿಸಿ, ನೋಡು, ನೀನು ಯಾವುದೇ ಕಾರಣಕ್ಕೂ ದೇವರನ್ನು ಸಂಶಯಿಸದೆ ನೀರ ಮೇಲೆ ನಡೆಯುತ್ತ ಹೋಗು. ಯಾವುದೇ ತೊಂದರೆಯಾಗದೆ ದಡ ತಲುಪುತ್ತಿ. ಆದರೆ ನೀನು ದೇವರನ್ನು ಸಂಶಯಿಸಿದ ಮರುಕ್ಷಣವೇ ಮುಳುಗುತ್ತಿ ಎಂದು ಎಚ್ಚರಿಸಿ ಬೀಳ್ಕೊಟ್ಟ. ವಿಭೀಷಣನ ಮಾತಿನಂತೆ ಆ ಮನುಷ್ಯ ನಡೆಯತೊಡಗಿದ.

ನೀರಮೇಲೆ ನಡೆಯುತ್ತಿದ್ದರೂ ಮುಳುಗದೆ ಸಾಗುತ್ತಿದ್ದ. ನಡುವೆ ಅವನಿಗೆ ಬೆನ್ನಿಗೆ ಅಂಟಿಸಿರುವ ಹಾಳೆಯಲ್ಲಿ ಏನನ್ನು ಬರೆಯ ಲಾಗಿದೆ ಎಂಬುದನ್ನು ಓದಬೇಕೆಂಬ ಚಪಲವಾಯಿತು. ಎಷ್ಟೇ ತಡೆದುಕೊಂಡರೂ ಸುಮ್ಮನಿರಲು ಆಗಲಿಲ್ಲ. ಕಡೆಗೆ ಅದನ್ನು ಕಿತ್ತುಕೊಂಡು ಓದತೊಡಗಿದ. ಹೇ ರಾಮ್.. ಈ ಮನುಷ್ಯನ ನೀನೇ ರಕ್ಷಿಸು ಎಂದು ಬರೆಯಲಾಗಿತ್ತು ಅಲ್ಲಿ. ಈ ರಾಮ್ ಯಾರು ಎಂದು ಅವನು ಪ್ರಶ್ನೆ ಹಾಕಿಕೊಂಡ. ಮರುಕ್ಷಣ ಅವನು ಮುಳುಗಿಬಿಟ್ಟ.

Leave a Reply

Your email address will not be published. Required fields are marked *

12 − three =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Tuesday, 20.03.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ಚೈತ್ರಮಾಸ, ಶುಕ್ಲಪಕ್ಷ, ತೃತಿಯಾ,ಮಂಗಳವಾರ, ನಿತ್ಯ ನಕ್ಷತ್ರ -ಅಶ್ವಿನಿ , ಯೋಗ-ಐಂದ್ರ, ಕರಣ-ಗರಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
3.00-4.30 12.00-1.30 9.00-10.30

Read More

 

Tuesday, 20.03.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ಚೈತ್ರಮಾಸ, ಶುಕ್ಲಪಕ್ಷ, ತೃತಿಯಾ,ಮಂಗಳವಾರ, ನಿತ್ಯ ನಕ್ಷತ್ರ -ಅಶ್ವಿನಿ , ಯೋಗ-ಐಂದ್ರ, ಕರಣ-ಗರಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
3.00-4.30 12.00-1.30 9.00-10.30

Read More

Back To Top