About Us Advertise with us Be a Reporter E-Paper

ವಿ +

ಪರಿಶುದ್ಧ ಮನಸ್ಸಿದ್ದರೆ ನೀವೂ ಪ್ಲಸ್…

- ರೂಪಶ್ರೀ ಕುಮಾರ್, ಬೆಂಗಳೂರು

ಮಾತೃ ವಾತ್ಸಲ್ಯವನ್ನು ಹಂಚಲು ಹೆತ್ತಮ್ಮನೇ ಆಗಬೇಕಿಲ್ಲ. ತಾಯಿಯೊಡಲಿನ ಪ್ರೀತಿ ಹರಿಸಲು ಹೃದಯ ವಿಶಾಲವಾಗಿರಬೇಕು. ಮನಸ್ಸು ಪರಿಶುದ್ಧವಾಗಿರಬೇಕಷ್ಟೆ. ಸದಾ ಪ್ರೀತಿ ವಾತ್ಸಲ್ಯ ಜಿನುಗುತ್ತಿರುವ ಅಂತಃಕರಣವನ್ನು ನಾನು ಕಂಡಿದ್ದು ನನ್ನ ಅತ್ತೆಯವರಲ್ಲಿ. ಅತ್ತೆ ಎನ್ನುವುದಕ್ಕಿಂತ ಅಮ್ಮ ಎನ್ನುವುದೇ ಹೆಚ್ಚು ಸಮಂಜಸ. ನಾನಿಲ್ಲಿ ಹೇಳ ಹೊರಟಿರುವುದು ನನ್ನ ಯಜಮಾನರ ಅಮ್ಮನ ಬಗ್ಗೆ.

ಮೂಲತಃ ಉಡುಪಿ ಜಿಲ್ಲೆಯ ಕೋಟ ಗ್ರಾಮದವರು. ಮದುವೆಯಾಗಿದ್ದು ಆಗಿನ ಕಾಲಕ್ಕೆ ಅಂದರೆ ಸರಿಸುಮಾರು ಐವತ್ತರ ಮಧ್ಯಭಾಗದಲ್ಲಿ ಸಣ್ಣ ಆದಾಯ ಹೊಂದಿದ್ದ ತುಂಬು ಕುಟುಂಬದ ಹಿರಿಯ ಮಗನೊಡನೆ. ಮದುವೆಯ ನಂತರ ಸರ್ಕಾರಿ ಕೆಲಸ ನನ್ನ ಮಾವನವರಿಗೆ ಸಿಕ್ಕಿತಾದರೂ ಸಂಬಳ ಬರುತ್ತಿದ್ದದ್ದು ದೊಡ್ಡ ಸಂಸಾರಕ್ಕೆ ಅರೆಕಾಸಿನ ಮಜ್ಜಿಗೆ ಅನ್ನೋ ಹಾಗಿತ್ತು. ಆ ಸಂದರ್ಭದಲ್ಲಿ ನನ್ನ ಅತ್ತೆಯವರು ತಮ್ಮ ಎರಡು ಪುಟ್ಟಮಕ್ಕಳನ್ನು ಕಂಕುಳಲ್ಲಿಟ್ಟುಕೊಂಡು ಬೆಂಗಳೂರಿಗೆ ಬಂದರು.

ತಮ್ಮ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡು ಮೂರು ತಿಂಗಳ ಹೋಮಿಯೋಪತಿ ವೈದ್ಯ ಕಲಿಕೆಯ ತರಬೇತಿಯನ್ನು ಯಶಸ್ವಿಯಾಗಿ ಮುಗಿಸಿದರು. ನಂತರ ತಮ್ಮ ಕಾಯಕದ ಊರಾದ ತಲುಪಿ ‘ಗಣೇಶ್ ಕ್ಲಿನಿಕ್’ ಆರಂಭಿಸಿದವರು ಮತ್ತೆ ಹಿಂತಿರುಗಿ ನೋಡಲಿಲ್ಲ. ಮಕ್ಕಳ ಶಾಲೆ, ವಿದ್ಯಾಭ್ಯಾಸದ ಜತೆಗೆ ದೊಡ್ಡ ಸಂಸಾರದ ನೊಗವನ್ನೂ ಬೆನ್ನಿಗೇರಿಸಿಕೊಂಡು, ಸುಮಾರು ಮೂವತ್ತು ವರ್ಷಗಳ ಕಾಲ ಒಬ್ಬ ಅನುಭವಿ, ನುರಿತ ವೈದ್ಯೆಯಾಗಿ ಹಣ ಮತ್ತು ಕೀರ್ತಿ ಎರಡನ್ನೂ ಸಂಪಾದಿಸಿದರು. ಮಂಡ್ಯ ಮಾತ್ರವಲ್ಲದೆ ಸುತ್ತಲಿನ ಹತ್ತಾರು ಕಿ.ಮೀ. ವ್ಯಾಪ್ತಿಯಲ್ಲಿ ಡಾಕ್ಟರ್ ಸುಮತವ್ವ (ಸುಮತಿ ಬೈಕಾಡಿ) ಅಚ್ಚುಮೆಚ್ಚಿನ ವೈದ್ಯೆಯೆನಿಸಿದರು.

ಎಷ್ಟೋ ಬಾರಿ ದೂರದ ಹಳ್ಳಿಯಿಂದ ಬರುತ್ತಿದ್ದ ರೋಗಿಗಳನ್ನು ಮನೆಯಲ್ಲೇ ವಾರಗಟ್ಟಲೆ ಉಳಿಸಿಕೊಂಡು ಗುಣಮುಖರಾದ ನಂತರ ವಾಪಸ್ಸು ಕಳಿಸುತ್ತಿದ್ದದ್ದೂ ಇತ್ತು. ಇಷ್ಟೆಲ್ಲಾ ಪರಿಶ್ರಮದ ನಡುವೆ ತಮ್ಮ ಇಬ್ಬರು ಗಂಡು ಮಕ್ಕಳಲ್ಲಿ ಒಬ್ಬರನ್ನು ಎಂಬಿಬಿಎಸ್ ಮತ್ತೊಬ್ಬರನ್ನು ಬಿಇ ಓದಿಸಿದರು. ಮಕ್ಕಳ ಮದುವೆಯ ನಂತರ ತಮ್ಮ ವೈದ್ಯ ವೃತ್ತಿಗೆ ತಾವೇ ನಿವೃತ್ತಿ ಘೋಷಿಸಿಕೊಂಡು ವಿಶ್ರಾಂತ ಜೀವನ ನಡೆಸ ತೊಡಗಿದರು.

ಹೆಚ್ಚಿನ ಸಮಯವನ್ನು ಪುಸ್ತಕಗಳು ಮತ್ತು ವೃತ್ತಪತ್ರಿಕೆಗಳ ಓದಿಗೆ ಮೀಸಲಿಟ್ಟು ತಮ್ಮ ವಯಸ್ಸಿನ ಇತರರಿಗೂ ಓದುವ ಆಸಕ್ತಿ ಬೆಳೆಸುವಲ್ಲಿ ಕಾರ್ಯೋನ್ಮುಖರೂ ಆದರು. ಅವರ ಓರಗೆಯ ಗೆಳತಿಯರಿಗೆಲ್ಲ ಪುಸ್ತಕ ಹುಟ್ಟಸಿದ್ದೂ ಅಲ್ಲದೆ ಮನೆಗೆ ಬಂದವರು ಹೊರಟು ನಿಂತಾಗ ತಾವು ಓದಿ ಮುಗಿಸಿದ ಸುಧ, ತರಂಗ, ಕರ್ಮವೀರ, ಪ್ರಿಯಾಂಕ ಹೀಗೆ ಯಾವುದಾದರೂ ಪತ್ರಿಕೆ ಅವರ ಕೈಗಿಟ್ಟು ಅದರಲ್ಲಿ ಇವರಿಗೆ ಹಿಡಿಸಿದ ಸ್ವಾರಸ್ಯಕರ ವಿಷಯ ಹೇಳಿ, ಓದಿ ನಂತರ ಕೊಡಿ ಎಂದು ಕಳಿಸುವವರು.

ಇಷ್ಟೆಲ್ಲಾ ಅವರ ಬಗ್ಗೆ ಬರೆದು ಅವರು ಮಾಡುತ್ತಿರುವ ಮತ್ತೊಂದು ವಿಶೇಷ ಕೆಲಸದ ಕುರಿತು ಹೇಳದಿದ್ದರೆ ಬರಹ ಅಪೂರ್ಣವಾಗುವುದು ಖಂಡಿತ. ನಮ್ಮ ಮನೆ ಕೆಲಸಕ್ಕೆ ಬರುವುದು ಸುಮಾರು 16 ಹುಡುಗಿ. ಮೂರನೇ ತರಗತಿಗೇ ವಿದ್ಯಾಭ್ಯಾಸ ತಲೆಗೆ ಹತ್ತದ ಕಬ್ಬಿಣದ ಕಡಲೆ ಎಂದು ತೀರ್ಮಾನಿಸಿ ಓದಿಗೆ ತಿಲಾಂಜಲಿ ಇಟ್ಟವಳು. ಅವಳು ಸುಮ್ಮನಾದರೂ ನನ್ನತ್ತೆ ಸುಮ್ಮನಿರುವುದುಂಟೆ? ಒಂದನೇ ತರಗತಿಯ ಪುಸ್ತಕ ತರಿಸಿ ‘ಅ ಆ ಇ ಈ..’ ಅಕ್ಷರಾಭ್ಯಾಸ ಶುರು ಮಾಡಿಯೇ ಬಿಟ್ಟರು.

ಈಗ ಮೂರು ವರ್ಷಗಳು ಉರುಳಿವೆ. ಕಲಿಕೆಯೂ ನಾಲ್ಕನೇ ತರಗತಿಯ ಪುಸ್ತಕಗಳವರೆಗೂ ಬಂದಿದೆ. ಎಲ್ಲಕ್ಕಿಂತ ಮುಖ್ಯವಾಗಿ ಆ ಹುಡುಗಿಯಲ್ಲಿ ಕಲಿಯುವ ಶ್ರದ್ಧೆ, ಆಸಕ್ತಿ ಹೆಚ್ಚಾಗುತ್ತಿದೆ. ಆತ್ಮವಿಶ್ವಾಸ ತುಂಬಿ ತುಳುಕುತ್ತಿದೆ. ಸಂಖ್ಯೆಗಳ ವ್ಯಾವಹಾರಿಕ ಜ್ಞಾನ ಕೂಡ ಜಾಸ್ತಿಯಾಗುತ್ತಿದೆ. ನಮ್ಮ ಮನೆಯೂ ಸೇರಿ ಮೂರು ಮನೆಗಳ ಕೆಲಸ ಮುಗಿಸಿ ಪುನಃ ನಮ್ಮ ಮನೆಗೆ ಬಂದು ಪುಸ್ತಕ ಹಿಡಿದರೆ, ದಿನಕ್ಕೆ ಎರಡು ಗಂಟೆಗಳ ಅವಧಿಯಲ್ಲಿ ಕಲಿಕೆ ಸಾಗುತ್ತದೆ. ನಂತರ ಆ ದಿನದ ದಿನಪತ್ರಿಕೆಯ ಮುಖ್ಯಾಂಶಗಳನ್ನು ಅವಳು ಓದಿ ಹೇಳಿದರೆ ಅಲ್ಲಿಗೆ ಆ ದಿನದ ಅಭ್ಯಾಸ ಮುಗಿದಂತೆ. ನಂತರ ಅಷ್ಟಿಷ್ಟು ಹೋಂ ವರ್ಕ್, ಮನೆ ಅಭ್ಯಾಸಕ್ಕೆ.

79 ವಸಂತಗಳನ್ನು ಕಂಡಿರುವ ನನ್ನ ಅತ್ತೆಯವರ ಜೀವನ ಉತ್ಸಾಹ, ಆಸಕ್ತಿ, ಯಾವುದೇ ಕೆಲಸದಲ್ಲಿ ತೋರುವ ಅಚ್ಚುಕಟ್ಟುತನ ಎಲ್ಲವೂ ಶ್ಲಾಘನೀಯ ಮತ್ತು ಅನುಕರಣೀಯ. ಆ ಮಾತೃ ಹೃದಯ ಕಲುಷಿತವೇ ಆಗಿರದ ಶುದ್ಧ ಗಂಗೆಯಂತೆ.

Tags

Related Articles

Leave a Reply

Your email address will not be published. Required fields are marked *

Language
Close