ವಿಶ್ವವಾಣಿ

ಐಫೋನ್‌ ಗಿಫ್ಟ್ ಮಾಡಿದ್ದು ನಾನೇ: ಡಿ ಕೆ ಶಿವಕುಮಾರ್‌

ಬೆಂಗಳೂರು: ಕರ್ನಾಟಕ ಸಂಸದರಿಗೆ ಭಾರೀ ಮೌಲ್ಯದ ಐಫೋನ್‌ಗಳನ್ನು ಸರಕಾರ ಉಡುಗೊರೆಯಾಗಿ ನೀಡಿದೆ ಎಂಬ ಸುದ್ದಿ ಎಲ್ಲೆಡೆ ಹಬ್ಬಿದ ಕೂಡಲೇ ಡ್ಯಾಮೇಜ್‌ ಕಂಟ್ರೋಲ್‌ ಮೋಡ್‌ಗೆ ಬಂದಿರುವ ರಾಜ್ಯ ಸರಕಾರದ ಸಚಿವೆ ಡಿ ಕೆ ಶಿವಕುಮಾರ್‌, ಆ ಫೋನ್‌ಗಳನ್ನು ತವೇ ನೀಡಿದ್ದಾಗಿ ಹೇಳಿಕೊಂಡಿದ್ದಾರೆ.

“ಸಂಸತ್ತಿನಲ್ಲಿ ಕರ್ನಾಟಕದ ವಿಚಾರಗಳನ್ನು ಎತ್ತಿತ್ತಿರುವ ನಮ್ಮ ಸಂಸದರಿಗೆ ಆನ್‌ಲೈನ್‌ನಲ್ಲಿ ಅಗತ್ಯವಿರುವ ಮಾಹಿತಿಯನ್ನು ಹೆಕ್ಕಲು ಅನುವಾಗಲಿ ಎಂದು ನೀಡಿದ್ದೇನೆ” ಎಂದು ಶಿವಕುಮಾರ್‌ ಹೇಳಿದ್ದಾರೆ.

“ಅನೇಕ ಸಂಸದರು ಇದಕ್ಕಾಗಿ ನನಗೆ ಧನ್ಯವಾದ ತಿಳಿಸಿದ್ದಾರೆ, ಆವರ ಹೆಸರಗಳನ್ನು ಹೇಳಲು ಇಚ್ಛಿಸುವುದಿಲ್ಲ. ಇದು ಲಂಚವಲ್” ಎಂದು ಸಚಿವರು ಸ್ಪಷ್ಟನೆ ನೀಡಿದ್ದಾರೆ.

ತಮ್ಮ ಮಾತು ಮುಂದುವರೆಸಿದ ಡಿಕೆಶಿ, “ನಾನು ಇಂಧನ ಸಚಿವನಾಗಿದ್ದ ಸಂದರ್ಭ ಸಂಸದರಿಗೆ ಐಪ್ಯಾಡ್‌ಗಳನ್ನು ನೀಡಿದ್ದೆ. ನಾನು ತಪ್ಪು ಮಾಡಿದ್ದರೆ ಗಲ್ಲಿಗೇರಿಸಿ. ನಾವು ಮತ್ತೊಬ್ಬರಿಂದ ಕದ್ದು ಇವನ್ನು ಅವರಿಗೆ ಉಡುಗೊರೆ ನೀಡುತ್ತಿಲ್ಲ” ಎಂದು ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, “ನನ್ನ ಸರಕಾರದ ಸಚಿವರು ತಮ್ಮ ಸ್ವಂತ ಖರ್ಚಿನಲ್ಲಿ ಐಫೋನ್‌ ನೀಡಿದ್ದಾಗಿ ನನಗೆ ಸ್ಪಷ್ಟಪಡಿಸಿದ್ದಾರೆ. ಸಂಸದರಿಗೆ ಐಫೋನ್‌ ವಿತರಣೆ ಬಗ್ಗೆ ನನಗೆ ತಿಳಿದಿಲ್ಲ. ಗೊತ್ತಿದ್ದರೆ, ಅವರಿಗೆ ಈ ರೀತಿ ಮಾಡದಿರಲು ಸೂಚಿಸುತ್ತಿದ್ದೆ” ಎಂದು ಹೇಳಿದ್ದಾರೆ.

ಈ ಕುರಿತಂತೆ ರಾಜ್ಯಸಭಾ ಸಂಸದ ರಾಜೀವ್‌ ಚಂದ್ರಶೇಖರ್‌ ಟ್ವೀಟ್‌ ಮಾಡಿದ ಬಳಿಕ ಸುದ್ದಿಗೆ ಬಂದಿದೆ. “ದುಂದು ವೆಚ್ಚದ ಮೇಲೆ ಕಡಿವಾಣ ಹಾಕುತ್ತೇವೆ ಎಂದಿರುವ ನಮ್ಮ ಸರಕಾರವೇಕೆ ಐಫೋನ್‌ಗಳ ಮೇಲೆ ಏಕೆ ಅಷ್ಟೊಂದು ಖರ್ಚು ಮಾಡುತ್ತಿದೆ?ಪೌರಕಾರ್ಮಿಕರಿಗೆ ಸಂಬಳ ನೀಡಿಲ್ಲ, ಆದರೆ ಸಾರ್ವಜನಿಕ ಹಣವನ್ನು ದುಬಾರಿ ಉಡುಗಿರೆ ನೀಡಲು ಬಳಲಾಗುತ್ತಿದೆ.ನಾನು ಇವನ್ನು ನಿಮಗೆ ಹಿಂದಿರುಗಿಸುತ್ತಿದ್ದೇನೆ” ಎಂದು ಚಂದ್ರಶೇಖರ್‌ ಹೇಳಿದ್ದರು.

ಈ ಫೋನ್‌ಗಳ ಬೆಲೆ ಒಂದು ಲಕ್ಷದಷ್ಟಿದ್ದು, ಸಾರ್ವಜನಿಕ ಬೊಕ್ಕಸಕ್ಕೆ ಇಷ್ಟೆಲ್ಲಾ ಹೊರೆ ಬೀಳಿಸುವ ಅಗತ್ಯವೇನಿತ್ತು ಎಂದಿರುವ ರಾಜ್ಯಸಭಾ ಸದಸ್ಯ ರಜೀವ್‌ ಚಂದ್ರಶೇಖರ್‌ ಮಾತಿಗೆ ಪ್ರತಿಕಕ್ರಿಯೆ ನೀಡಿದ ಡಿಕೆಶಿ, ಈ ಪೋನ್‌ಗಳ ಬೆಲೆ 50,000 ರು ಎಂದಿದ್ದಾರೆ. ಮಾರುಕಟ್ಟೆಯಲ್ಲಿ ಇದೇ ಐಫೋನ್‌ ಎಕ್ಸ್‌ನ 256ಜಿಬಿ ಅವತರಣಿಕೆಗೆ 99,000 ರುನಷ್ಟು ಬೆಲೆ ಇದ್ದರೆ, 64ಜಿಬಿ ಫೋನ್‌ಗೆ 90,000 ರುನಷ್ಟಿದೆ.

ಸಂಸದರನ್ನು ಮೊದಲ ಬಾರಿಗೆ ಭೇಟಿಯಾಗುವ ಸಂದರ್ಭ ಅವರಿಗೆ ಐಫೋನ್‌ಗಳನ್ನು ಉಡುಗೊರೆ ನೀಡುವುದು ಒಂದು ಅಭ್ಯಾಸ ಎಂದು ಮೂಲಗಳು ತಿಳಿಸಿವೆ.

ಕರ್ನಾಟಕದಿಂದ ಆಯ್ಕಯಾದ 26 ಲೋಕಸಭಾ ಸದಸ್ಯರು ಹಾಗು 12 ರಾಜ್ಯಸಭಾ ಸದಸ್ಯರಿಗೆ ಐಫೋನ್‌ ನೀಡಲಾಗಿತ್ತು. ಇದರ ಜತೆಗೆ 5000 ರು ಮೌಲ್ಯದ ಚರ್ಮದ ಬ್ಯಾಗ್‌ಅನ್ನೂ ಕಳುಹಿಸಲಾಗಿತ್ತು.