About Us Advertise with us Be a Reporter E-Paper

ವಿರಾಮ

ಚಿತ್ರಸಂತೆಯಲ್ಲಿ ಕಂಡ ಎರಡು ಮುಖಗಳು

* ಶಶಿಧರ ಹಾಲಾಡಿ

ಕಳೆದವಾರ ಬೆಂಗಳೂರಿನಲ್ಲಿ ನಡೆದ ಚಿತ್ರಸಂತೆಯಲ್ಲಿ ಪ್ರದರ್ಶನಕ್ಕೆ ಇಡಲಾಗಿದ್ದ ಕಲಾಕೃತಿಗಳನ್ನು ಸುಮಾರು ನಾಲ್ಕು ಲಕ್ಷ ಜನ ವೀಕ್ಷಿಸಿದರು. ಕೆಲವು ಅಪರೂಪದ ಕಲಾಕೃತಿಗಳು ಮೂರು ಲಕ್ಷ ರೂಪಾಯಿಗಳಿಗೆ ಮಾರಾಟಗೊಂಡವು. ದೂರದ ಹಳ್ಳಿಗಳಿಂದ ಬಂದ ಕೆಲವು ಸಹ ತಮ್ಮ ಗ್ರಾಮೀಣ ಚಿತ್ರಗಳನ್ನು, ಕಲಾಕೃತಿಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲು ಅವಕಾಶ ಸಿಕ್ಕಿದ್ದು ವಿಶೇಷ.

ಮುಖ 1: ಪ್ರಕೃತಿಯೇ ಸ್ಫೂರ್ತಿ
ಆ ಆದಿವಾಸಿ ಕಲಾವಿದ ಮೋಹನ್ ಸಿಂಗ್ ಬೆಂಗಳೂರಿನ ಚಿತ್ರಸಂತೆಗೆ ಬರುವಾಗಲೇ ಸಮಯವಾಗಿತ್ತು. ಮಧ್ಯಪ್ರದೇಶದ ಭೋಪಾಲ್‌ನಿಂದ 800 ಕಿಮೀ ದೂರದ ಹಳ್ಳಿಯಿಂದ ರೈಲಿನ ಮೂಲಕ ತನ್ನ ಕಲಾಕೃತಿಗಳ ಜತೆ ಬೆಂಗಳೂರಿಗೆ ಬರುವುದೆಂದರೆ, ಒಂದು ಹಗಲು, ಎರಡು ರಾತ್ರಿಯ ಪ್ರಯಾಣ. ಚಿತ್ರ ಸಂತೆಯ ಹತ್ತಿರ ಬಂದು ನೋಡಿದರೆ, ಮುಖ್ಯ ಪ್ರಮುಖ ಎನಿಸುವ ಎಲ್ಲಾ ಜಾಗಗಳೂ ಭರ್ತಿಯಾಗಿ ಬಿಟ್ಟಿದ್ದು , ಅಲ್ಲಿ ವಿದ್ಯಾವಂತ ಮತ್ತು ಆಧುನಿಕ ಎನಿಸುವ ಕಲಾವಿದರ ಚಿತ್ರಗಳು ತುಂಬಿ ಹೋಗಿದ್ದವು. ಕೊನೆಗೆ ಫುಡ್ ಕೋರ್ಟ್ ಹತ್ತಿರದ ಒಂದು ಮೂಲೆಯಲ್ಲಿ ಪಾನಿಪುರಿಯಂತಹ ತಿನಿಸು ಮಾರುವ ಅಂಗಡಿಯಪಕ್ಕದಲ್ಲಿ ಮೋಹನ್ ಸಿಂಗ್‌ಗೆ ಪುಟ್ಟ ಜಾಗ ಸಿಕ್ಕಿತು. ನೈಸರ್ಗಿಕ ಬಣ್ಣಗಳನ್ನು ಬಳಸಿ, ಕ್ಯಾನ್‌ವಾಸ್ ಮೇಲೆ ರಚಿಸಿದ ವಿವಿಧ ಗಾತ್ರದ ಅಪರೂಪದ ಚಿತ್ರಗಳು ಆ ಕಲಾವಿದನ ಬಳಿ ಇದ್ದವು.

‘ನೀವು ರಚಿಸಿದ ಈ ಕಲಾಕೃತಿಗಳು ಪ್ರಕಾರಕ್ಕೆ ಸೇರುತ್ತವೆ?’ ಎಂದು ಹಿಂದಿಯಲ್ಲಿ ಮೋಹನ್ ಸಿಂಗ್‌ನ್ನು ಕೇಳಿದೆ. ‘ಸರ್, ನಮ್ಮದು ಗೊಂಡ್ ಕಲಾಕೃತಿಗಳು. ನಾವು ಗೊಂಡ ಜನಾಂಗದವರು, ಮಧ್ಯಪ್ರದೇಶದ ಹಳ್ಳಿಯಿಂದ ಇಲ್ಲಿಗೆ ಬಂದಿದ್ದೇವೆ’ ಎಂದ ಮೋಹನ್ ಸಿಂಗ್. ಅತಿ ಅಪರೂಪ ಎನಿಸುವ ವರ್ಣರಂಜಿತ ಚಿತ್ರಗಳನ್ನು ನೆಲದ ಮೇಲೆ ಮತ್ತು ಗೋಡೆಯ ಮೇಲೆ ಜೋಡಿಸತೊಡಗಿದ. ಆ ಚಿತ್ರಗಳಲ್ಲಿ ಬಣ್ಣವಿತ್ತು, ಕಸುವಿತ್ತು, ಕೃಷಿಯಿತ್ತು, ಅವುಗಳಲ್ಲಿ ಪ್ರಕೃತಿಯೊಡನೆ ಕರುಳುಬಳ್ಳಿಯ ಸಂಬಂಧವಿತ್ತು. ಗೊಂಡ ಜನರು ಚಿತ್ರಿಸುವ ಕಲಾಕೃತಿಗಳಿಗೆ ಪ್ರಕೃತಿಯೇ ಸ್ಫೂರ್ತಿ.

ತಾವೇ ಕೈಯಾರೆ ಚಿತ್ರಗಳನ್ನು ಮೋಹನ್ ಸಿಂಗ್ ಮತ್ತು ಅವನ ಹೆಂಡತಿ ಈ ಚಿತ್ರಕಲಾ ಪ್ರದರ್ಶನದಲ್ಲಿ ಪ್ರದರ್ಶನ ಮತ್ತು ಮಾರಾಟಕ್ಕೆ ಇಟ್ಟಿದ್ದರು. ಯಾವುದೇ ಮಧ್ಯವರ್ತಿಗಳ ಸಹಕಾರ ಇಲ್ಲದೆ, ಸರಕಾರದ ಇಲಾಖೆಯ ಸಹಾಯ ಇಲ್ಲದೆ ನೇರವಾಗಿ ಚಿತ್ರಕಲಾ ಪ್ರದರ್ಶನಕ್ಕೆ ಬಂದಿದ್ದ ಅವರಿಬ್ಬರನ್ನು ಕಂಡ ಕೂಡಲೇ ಹೇಳಬಹುದಿತ್ತು, ಯಾವುದೋ ದೂರದ ಹಳ್ಳಿಯಿಂದ ಬಂದ ಬುಡಕಟ್ಟು ಜನ ಇವರು ಎಂದು. ಅವರು ಊರಿಂದ ಬರುವಾಗ ತಂದಿದ್ದ ಬ್ಯಾಗ್, ನೀರಿನ ಬಾಟಲುಗಳು ಸಹ ಕಲಾಕೃತಿಗಳ ಮಧ್ಯೆ ಹರಡಿದ್ದವು!

‘ಹೊಲ, ಕೆಲಸವೇ ನಮ್ಮ ಮುಖ್ಯ ಉದ್ಯೋಗ. ಬಿಡುವಿನ ಸಮಯದಲ್ಲಿ ಈ ರೀತಿಯ ಚಿತ್ರಗಳನ್ನು ಬರೆಯುತ್ತೇವೆ.’
‘ಈ ರೀತಿಯ ಒಂದು ದೊಡ್ಡ ಚಿತ್ರ ಬರೆಯಲು ಎಷ್ಟು ಸಮಯ ಬೇಕು?’ ಎಂದು ಕ್ಯಾನ್‌ವಾಸ್ ಮೇಲೆ ಬರೆದಿದ್ದ ಒಂದು ವರ್ಣಮಯ ಚಿತ್ರವನ್ನು ತೋರಿಸಿ ಕೇಳಿದೆ.

ನರ್ಮದಾ ಮಾ
‘ನೋಡಿ ಸಾರ್, ಇಲ್ಲಿರುವ ಈ ನರ್ಮದಾ ನದಿಯ ಅಥವಾ ನರ್ಮದಾ ಮಾ ಚಿತ್ರ ಬರೆಯಲು ಸುಮಾರು ಒಂದು ತಿಂಗಳು ಸಮಯ ಬೇಕಾಯಿತು.’ ಎನ್ನುತ್ತಾ ನೆಲದ ಮೇಲೆ ಒಂದು ಸುಂದರ ಕಲಾಕೃತಿಯನ್ನು ಆತ ತೋರಿಸಿದ. ಹಿಂದೆಲ್ಲಾ ಮಣ್ಣಿನ ಗೋಡೆಯ ಮೇಲೆ ಈ ಚಿತ್ರಗಳನ್ನು ಬರೆಯುತ್ತಿದ್ದರಂತೆ. ಈಗ ಕ್ಯಾನ್‌ವಾಸ್ ಮೇಲೆ ಬ್ರಶ್ ಬಳಸಿ ಚಿತ್ರ ಬರೆಯಲು ರೂಢಿ ಮಾಡಿಕೊಂಡಿದ್ದಾರೆ.

ಮೂರು ಅಡಿ ಅಗಲ, ಎರಡು ಅಡಿ ಉದ್ದದ ಕ್ಯಾನ್ವಾಸ್ ಮೇಲೆ ಬರೆದ ‘ನರ್ಮದಾ ಮಾ’ ಚಿತ್ರದ ಬೆಲೆ ರು. 7000. ಸರಳ ಬಣ್ಣದ ಆ ನದಿಯ ಚಿತ್ರದಲ್ಲಿ ನೂರಾರು ಮೀನುಗಳು! ಅದೇ ರೀತಿ ಭೂಮಿಯ ಉಗಮ, ಶಂಕರ-ಪಾರ್ವತಿ ಮೊದಲಾದ ಅಲ್ಲಿ ಪ್ರರ್ಶನಕ್ಕೆ ಇದ್ದವು. ಪಾರ್ವತಿಯ ಚಿತ್ರವು ಆದಿವಾಸಿ ಮಹಿಳೆಯ ಪ್ರತಿರೂಪದಂತೆ ಇತ್ತು! ಆಕೆಯ ಗಂಡನಾದ ಶಂಕರನಿಗಿಂತ ಪಾರ್ವತಿಯ ಆಕಾರವೇ ಹೆಚ್ಚು ದಪ್ಪ ಹೆಚ್ಚು ಎತ್ತರ!

‘ಇದನ್ನು ನೋಡಿ ಸರ್, ಬಾಂಸ್, ಅಂದರೆ ಕೊಳಲು ತಯಾರಿಸುವ ಬೊಂಬಿನ ಗಿಡದ ಚಿತ್ರ. ನಮ್ಮ ಸಂಸ್ಕೃತಿಯಲ್ಲಿ ಬೊಂಬು ಎಂದರೆ ಒಂದು ದೈವೀ ಸ್ವರೂಪ ಹೊಂದಿರುವ ಹೆಂಗಸು. ಈ ಬೊಂಬಿನ ಗಿಡದ ಆಶ್ರಯದಲ್ಲಿ ಹರಿಣ ಒಂದು ಬಂದು ನಿಂತಿದೆ, ನೋಡಿ’ ಎಂದು ತನ್ನ ಚಿತ್ರಗಳನ್ನು ಮೋಹನ್ ಸಿಂಗ್.

‘ಇಲ್ಲಿ ವ್ಯಾಪಾರ ಹೇಗಿದೆ?’ ಎಂದು ಕೇಳಿದೆ
‘ಬರುವಾಗಲೇ ತಡ ಆಯ್ತು. ಈಗ ನೋಡಿದರೆ ಈ ಮೂಲೆಯಲ್ಲಿ ಜಾಗ ಕೊಟ್ಟಿದ್ದಾರೆ. ವ್ಯಾಪಾರ ಇನ್ನೂ ಆರಂಭವಾಗಿಲ್ಲ’ ಎಂದ ವಿನೀತನಾಗಿ. ಆತನ ಚಿತ್ರಗಳಲ್ಲಿ, ಪ್ರದರ್ಶನಕ್ಕಿಟ್ಟ ರೀತಿಯಲ್ಲಿ, ಯಾವುದೇ ಥಳಕು ಬಳಕು ಇರಲಿಲ್ಲ, ಮಾರುಕಟ್ಟೆ ತಂತ್ರಗಾರಿಕೆ ಇರಲಿಲ್ಲ. ಅದಾಗಲೇ ಮಧ್ಯಾಹ್ನದ ಎರಡು ಗಂಟೆ. ಸಂಜೆಯಾಗುವುದರೊಳಗೆ ಆತನ ಒಂದೆರಡಾದರೂ ಕೃತಿಗಳು ಮಾರಾಟವಾದಾವೇ? ಆ ಆದಿವಾಸಿ ಕುಟುಂಬ ರಚಿಸಿರುವ ಪುಟ್ಟ ಗಾತ್ರದ ಚಿತ್ರವೊಂದನ್ನು ಖರೀದಿಸಿ, ಶುಭ ಹಾರೈಸಿ ಮುನ್ನಡೆದೆ.

ಮುಖ 2: ಮೇಕೆಯ ಚರ್ಮವೇ ಕ್ಯಾನ್‌ವಾಸ್
ಫುಡ್ ಕೋರ್ಟಿನ ಇನ್ನೊಂದು ಭಾಗದಲ್ಲಿ ಹನುಮಂತಪ್ಪ ಎಂಬ ಕಟ್ಟುಮಸ್ತಾದ ಯುವಕ ಚರ್ಮದ ಮೇಲೆ ಬರೆದ ತೊಗಲುಗೊಂಬೆಗಳನ್ನು ಮಾರುತ್ತಿದ್ದ. ಮೇಲ್ನೋಟಕ್ಕೆ ಈತ ಮೋಹನ್ ಸಿಂಗ್‌ಗಿಂತ ವ್ಯಾಪಾರದಲ್ಲಿ ಹೆಚ್ಚು ಅನುಭವಸ್ಥನಂತಿತ್ತು. ಆಂಧ್ರಪ್ರದೇಶದ ಗಡಿನಾಡಾದ ಧರ್ಮವರಂ ಹತ್ತಿರದ ಹಳ್ಳಿಯಿಂದ ಬಂದಿದ್ದ ಈತನ ಕಲಾಕೃತಿಗೆಲ್ಲವೂ ಮೇಕೆಯ ಚರ್ಮದ ಮೇಲೆ ರಚನೆಗೊಂಡವುಗಳು. ಚರ್ಮವನ್ನು ದಪ್ಪನೆಯ ಕಾಗದದ ರೀತಿ ರೂಪಿಸಿ, ಅದನ್ನೇ ಕ್ಯಾನ್‌ವಾಸ್ ರೀತಿ ಬಳಸಿ, ಬಣ್ಣದ ಚಿತ್ರಗಳನ್ನು ಬರೆಯುವ ಕಲೆ.

ತೊಗಲುಗೊಂಬೆ ಎನಿಸುವ ಇವುಗಳಲ್ಲಿ ಹತ್ತು ತಲೆಯ ರಾವಣ, ರಾಮಾಯಣದ ಪಾತ್ರಗಳು, ದೇವ-ದೇವತೆಗಳ ಚಿತ್ರಗಳು, ಯಕ್ಷಗಾನದ ವೇಷಧಾರಿಗಳ ಚಿತ್ರಗಳು ಇದ್ದವು. ಆಳೆತ್ತರದ ಹತ್ತು ತಲೆಯ ರಾವಣ, ಹನುಮಂತ, ಸೀತೆಯರನ್ನು ಒಂದು ತಂತಿಗೆ ನೇತುಹಾಕಲಾಗಿತ್ತು. ಆಧುನಿಕರ ಅಭಿರುಚಿಗೆ ತಕ್ಕಂತೆ, ವಯರ್ ಸಹಾಯದಿಂದ ಒಳಗಿನಿಂದ ಬಲ್ಬನ್ನು ಬೆಳಗಿಸಬಲ್ಲ ದೊಡ್ಡ ಕೊಳವೆಯಾಕಾರದ ಕಲಾಕೃತಿಗಳು ಹೆಚ್ಚು ಜನರನ್ನು ಆಕರ್ಷಿಸುತ್ತಿದ್ದವು. ತೊಗಲುಗೊಂಬೆಯಾಟದ ಕಲೆಯು ಬಹುಮಟ್ಟಿಗೆ ನಶಿಸಿ ಹೋಗಿರುವ ಇಂದಿನ ಸಂದರ್ಭದಲ್ಲಿ, ಈ ಮೇಕೆ ಚರ್ಮದ ಮೇಲೆ ಚಿತ್ರ ರಚಿಸಿ ದಟ್ಟವೆನಿಸುವ ಬಣ್ಣ ಹಚ್ಚಿ, ಅವುಗಳನ್ನು ಅಲಂಕಾರದ ಕೃತಿಗಳಂತೆ ಮಾರಾಟ ಮಾಡುವುದೇ ಇವರ ಮುಖ್ಯ ಉದ್ಯೋಗವಾಗಿ ಉಳಿದುಕೊಂಡಿದೆ.

ದೂರ ದೂರದ ಹಳ್ಳಿಗಳಿಂದ ಬಂದ ಗ್ರಾಮೀಣ ಕಲಾವಿದರು ರಚಿಸಿದ ಕಲಾಕೃತಿಗಳಿಗೆ ಚಿತ್ರಸಂತೆ ಕಲ್ಪಿಸಿದ ಮಾರುಕಟ್ಟೆಯ ಪರಿ ವಿಸ್ಮಯ ತಂದಿತು.

Tags

Related Articles

Leave a Reply

Your email address will not be published. Required fields are marked *

Language
Close