About Us Advertise with us Be a Reporter E-Paper

ಅಂಕಣಗಳು
Trending

ಜಾಗತಿಕ ವೇದಿಕೆಗಳಲ್ಲಿ ಎದ್ದು ಕಾಣುವ ಭಾರತದ ಮುತ್ಸದ್ಧಿತನ

- ಹೇಮಂತ್ ಗೌಡ

ಭಯೋತ್ಪಾದನೆಯಂಥ ವಿಧ್ವಂಸಕ ಕೃತ್ಯಗಳನ್ನು ಕಡಿವಾಣ ಹಾಕಲು ಶಸ್ತ್ರಾಸ್ತ್ರ ಬಲಕ್ಕಿಂತ ಮೊದಲು ಅಗತ್ಯವಿರುವುದು ರಾಜಕೀಯ ಇಚ್ಛಾಶಕ್ತಿ ಎಂದು ಜಗತ್ತಿನ ಮುಂದೆ ಪುನರುಚ್ಚರಿಸುತ್ತಲೇ ಬಂದಿರುವ ಭಾರತ ಇಂದು ಈ ವಿಷಯದಲ್ಲಿ ಜಾಗತಿಕ ನಾಯಕತ್ವ ವಹಿಸಿದೆ ಎಂದರೆ ಯಾವುದೇ ಅತಿಶಯೋಕಿಯಲ್ಲ. ಸುಸ್ಥಿರ ಆರ್ಥಿಕ ಅಭಿವೃದ್ಧಿಯ ವಿಚಾರದಲ್ಲೂ ತನ್ನದೇ ಪಥ ನಿರ್ಮಿಸುತ್ತಿರುವ ಭಾರತ, ತಾನಿರುವ ಪ್ರತಿಯೊಂದು ಬಹುಪಕ್ಷೀಯ ವೇದಿಕೆಯನ್ನೂ ಸಮರ್ಪಕವಾಗಿ ಬಳಸಿಕೊಳ್ಳುತ್ತಿದೆ. ಇತ್ತೀಚೆಗೆ ಅರ್ಜೆಂಟೀನಾದಲ್ಲಿ ನಡೆದ 13ನೇ ಜಿ-20 ಶೃಂಗ ಇದರ ಮುಂದುವರಿದ ಭಾಗ.

ವಿಧ್ವಂಸಕ ಶಕ್ತಿಗಳ ಆರ್ಥಿಕ ಬೆನ್ನೆಲುಬನ್ನೇ ಮುರಿಯಲು ಶಪಥಗೈದಂತೆ ಕಾಣುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಈ ಬಾರಿಯ ಜಿ-20 ಶೃಂಗದಲ್ಲೂ ಭಾರತದ ಈ ಇರಾದೆಯನ್ನು ಮತ್ತೊಮ್ಮೆ ಪ್ರಚುರಪಡಿಸಿದ್ದಾರೆ.

ವಿಜಯ್ ಮಲ್ಯ, ನೀರವ್ ಮೋದಿಯಂಥ ಉದ್ದೇಶಿತ ಸುಸ್ತಿದಾರರಿಂದ ಹಿಡಿದು, ಹವಾಲಾ ಜಾಲದ ಮೂಲಕ ಭಯೋತ್ಪಾದನೆ ಜಾಲಗಳನ್ನು ನಿಯಂತ್ರಿಸುತ್ತಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂನ್ನು ಮಟ್ಟ ಹಾಕಲು ಬೇಕಾದ ಕ್ರಮಗಳು ಹಾಗೂ ಅವುಗಳ ತ್ವರಿತ ಅಗತ್ಯವನ್ನು ಒತ್ತಿ ಹೇಳಿದ ಪ್ರಧಾನಿ, ಆರ್ಥಿಕ ಅಪರಾಧಿಗಳನ್ನು ಮಟ್ಟ ಹಾಕಲು ಅಗತ್ಯವಿರುವ ಕಠಿಣ ಕಾನೂನುಗಳನ್ನು ರಚಿಸಿಕೊಳ್ಳಲು ಒಂಬತ್ತು ಅಂಶಗಳ ಸಮಗ್ರ ಒಕ್ಕಣೆಯನ್ನೇ ಜಾಗತಿಕ ಸಮುದಾಯದ ಮುಂದೆ ಇಟ್ಟಿದ್ದಾರೆ.

ದೇಶದ ಬ್ಯಾಂಕಿಂಗ್ ವ್ಯವಸ್ಥೆಗೆ ಅಂಟಿಕೊಂಡಿರುವ ಅನುತ್ಪಾದಕ ಆಸ್ತಿ ಎಂಬ ಕ್ಯಾನ್ಸರ್‌ಅನ್ನು ತೊಡೆದು ಹಾಕಲು ದೊಡ್ಡ ಹೋರಾಟಕ್ಕೇ ಮುಂದಾಗಿರುವ ಮೋದಿ, ವಿತ್ತೀಯ ಸ್ಥಿರತೆ ಹಾಗೂ ಆರ್ಥಿಕ ನೀತಿಗಳ ವಿಚಾರ ವೇದಿಕೆಯಾದ ಜಿ-20 ಶೃಂಗವನ್ನು ಈ ನಿಟ್ಟಿನಲ್ಲಿ ಸಮರ್ಪಕವಾಗಿ ಬಳಸಿಕೊಂಡಿದ್ದಾರೆ.

ದೊಡ್ಡ ಮಟ್ಟದ ಆರ್ಥಿಕ ಪ್ರಗತಿ ಸಾಧಿಸಲು ಅಗತ್ಯವಿರುವ ಮೂಲಸೌಕರ್ಯ, ಮಾನವ ಸಂಪನ್ಮೂಲ ವೃದ್ಧಿ, ಜಿಎಸ್‌ಟಿಯಂಥ ಕ್ರಮಗಳ ಮೂಲಕ ಆಂತರಿಕ ಮಾರುಕಟ್ಟೆ ಸುಧಾರಣೆ, ಉದ್ಯಮ ಸ್ನೇಹಿ ವಾತಾವರಣ ನಿರ್ಮಾಣ ಸೇರಿದಂತೆ ಮಹತ್ವದ ಕ್ರಮಗಳನ್ನು ನಾಗಾಲೋಟದಲ್ಲಿ ಅನುಷ್ಠಾನಕ್ಕೆ ತರುತ್ತಿರುವ ಭಾರತ ಇದೀಗ ಮತ್ತೊಂದು ಮಹತ್ವಬ ಕ್ಷೇತ್ರವಾದ ಬ್ಯಾಂಕಿಂಗ್ ವ್ಯವಸ್ಥೆಯ ಸುಧಾರಣೆಯ ವಿಚಾರದಲ್ಲಿ ನಿರ್ಣಾಯಕ ಇಡಲು ಮುಂದಾಗಿ ಅಂತಾರಾಷ್ಟ್ರೀಯ ಸಮುದಾಯದ ಗಮನ ಸೆಳೆದಿದೆ.

ಆರ್ಥಿಕ ಅಪರಾಧಿಗಳನ್ನು ಮಟ್ಟ ಹಾಕಲು ಅಗತ್ಯವಿರುವ ಸಹಕಾರ ವೃದ್ಧಿಗೆ ಕರೆ ನೀಡಿದ ಭಾರತ, ಜಾಗತಿಕ ಮಟ್ಟದಲ್ಲಿ ಸಹಕಾರ ಹಾಗೂ ಸಮನ್ವಯತೆ ತಂದು ವಿತ್ತೀಯ ಟಾಸ್ಕ್ ಫೋರ್ಸ್(FATF)ನಂಥ ಸಂಸ್ಥೆಗಳಿಗೆ ಇನ್ನಷ್ಟು ಬಲ ನೀಡುವ ಮೂಲಕ ವಿದೇಶಗಳಲ್ಲಿ ತಲೆ ಮರೆಸಿಕೊಂಡ ಆರ್ಥಿಕ ಅಪರಾಧಿಗಳ ಪತ್ತೆ, ಗಡೀಪಾರು ಹಾಗೂ ಅವರ ವಿರುದ್ಧ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುವ ವಿಚಾರದಲ್ಲಿ ಸಾಮಾನ್ಯ ಮಾಧ್ಯಮವೊಂದರ ಸ್ಥಾಪನೆಗೆ ಬಲವಾಗಿ ಆಗ್ರಹಿಸಿದೆ. ಭಯೋತ್ಪಾದಕ ಸಂಘಟನೆಗಳ ಆರ್ಥಿಕ ಮೂಲಗಳ ಬೆನ್ನತ್ತಿರುವ FATF ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನದ ವಿರುದ್ಧ ಕಠಿಣ ನಿಲುವು ತಳೆದಿರುವುದನ್ನು ಇಲ್ಲಿ ಸ್ಮರಿಸಬೇಕು.

ಪ್ರತಿಯೊಂದು ಮಹತ್ವದ ವೇದಿಕೆಗಳು ಘಟಿಸಿದಾಗೆಲ್ಲಾ ‘ಗ್ಲೋಬಲ್ ಪವರ್’ ಆಗುವ ತನ್ನ ಆಶಾದಾಯಕ ಹೆಜ್ಜೆಗಳನ್ನು ವಿಶ್ವಾಸದಿಂದ ಇಡುತ್ತಿರುವ ಭಾರತ; ಜಾಗತಿಕ, ಪ್ರಾದೇಶಿಕ ಹಾಗೂ ದ್ವಿಪಕ್ಷೀಯ ಮಟ್ಟಗಳ ಸ್ತರದಲ್ಲಿ ತನ್ನ ವ್ಯೂಹವನ್ನು ಮತ್ತಷ್ಟು ಪ್ರಬಲವಾಗಿ ಹೆಣೆಯುತ್ತಲೇ ಬಂದಿದೆ. ಹಿಂದೂ ಮಹಾಸಾಗರ ಹಾಗೂ ಪೆಸಿಫಿಕ್ ಪ್ರದೇಶಗಳಲ್ಲಿ ಚೀನಾದ ಆಕ್ರಮಣಶೀಲ ನೀತಿಗಳಿಗೆ ಪ್ರತಿಯಾಗಿ ಪ್ರಭಾವವೊಂದನ್ನು ಸೃಷ್ಟಿಸಲು ಸಮಾನ ಮನಸ್ಕತೆ ತೋರುತ್ತಿರುವ ಮತ್ತೆರಡು ಪ್ರಜಾಪ್ರಭುತ್ವ ಶಕ್ತಿಗಳಾದ ಅಮೆರಿಕ ಹಾಗೂ ಜಪಾನ್‌ನೊಂದಿಗೆ ಜಿ-20ಯ ನೇಪಥ್ಯದಲ್ಲಿ ಇದೇ ಮೊದಲ ಬಾರಿಗೆ ತ್ರಿಕೋನ ಸಭೆಯೊಂದರಲ್ಲಿ ಭಾರತ ಭಾಗಿಯಾಗಿದೆ. ತಮ್ಮ ನಡುವಿನ ವಿದೇಶಾಂಗ ಹಾಗೂ ರಕ್ಷಣಾ ನೀತಿಗಳನ್ನು ಸಮೀಕರಣಗೊಳಿಸಲು ರಕ್ಷಣಾ ಹಾಗೂ ವಿದೇಶಾಂಗ ಸಚಿವರ ಮಟ್ಟದ ‘2 + 2’ ಭೇಟಿಗಳಿಂದ ಹಿಡಿದು, ಜಂಟಿ ಸಮರಾಭ್ಯಾಸಗಳವರೆಗೂ ಈ ಮೂರೂ ದೇಶಗಳ ನಡುವಿನ ಸಾಮಾನ್ಯ ಕಾರ್ಯಕ್ರಮಗಳು ರೂಪುಗೊಳ್ಳುತ್ತಿವೆ. ಈ ಮೂರು ದೇಶಗಳ ಜತೆಗೆ ಆಸ್ಟ್ರೇಲಿಯಾ ಸಹ ಸೇರಿ ‘ಕ್ವಾಡ್’ ಎನ್ನುವ ಚತುಷ್ಕೋನ ಮಿಲಿಟರಿ ಬಣದ ಸ್ಥಾಪನೆ ಮೂಲಕ, ಇಂಡೋ ಪೆಸಿಫಿಕ್ ಪ್ರದೇಶದಲ್ಲಿ ನ್ಯಾಟೋ ತತ್ಸಮಾನ ಮಿಲಿಟರಿ ಸಮೂಹವೊಂದನ್ನು ಸೃಷ್ಟಿಸುವ ಮೂಲಕ ಪ್ರದೇಶದ ಭೌಗೋಳಿಕ ರಾಜಕೀಯಕ್ಕೆ ವಿನೂತನ ಆಯಾಮವನ್ನೇ ಸೃಷ್ಟಿಸಲು ಕಳೆದ ತಿಂಗಳ ಆಸಿಯಾನ್ ಹಾಗೂ ಪೂರ್ವ ಏಷ್ಯಾ ದೇಶಗಳ ಸಭೆ ಸಂದರ್ಭ ಮಹತ್ವದ ಹೆಜ್ಜೆಗಳನ್ನು ಇಡಲಾಗಿದೆ.

ವಿಶ್ವದ ಅಗ್ರ ಪ್ರಜಾಪ್ರಭುತ್ವ ವ್ಯವಸ್ಥೆಗಳಾದ ಜಪಾನ್,ಅಮೆರಿಕ,ಭಾರತಗಳ ನಡುವೆ ಬಾಂಧವ್ಯ ವೃದ್ಧಿಸುತ್ತಿರುವ ಪರಿಯನ್ನು ತಮ್ಮದೇ ಶೈಲಿಯಲ್ಲಿ ವಿಶ್ಲೇಷಿಸಿದ ಪ್ರಧಾನಿ ಮೋದಿ, ಈ ತ್ರಿಕೂಟವನ್ನು, ಸಂಸ್ಕೃತದಲ್ಲಿ ವಿಜಯದ ಅರ್ಥದ JAI ಎಂದು ಕರೆದಿದ್ದಾರೆ.

ನೌಕಾಯಾನ ಸ್ವಾತಂತ್ರ್ಯ ಮಾತ್ರವಲ್ಲದೇ, ಸಂಪರ್ಕ, ಸುಸ್ಥಿರ ಆರ್ಥಿಕ ಅಭಿವೃದ್ಧಿ, ಸಾಗರಗಳ ರಕ್ಷಣೆ, ವಿಪತ್ತು ನಿರ್ವಹಣೆಗಳಂಥ ವಿಚಾರಗಳಲ್ಲಿ ಈ ತ್ರಿಕೋನ ಬಣವು ಇಂಡೋ-ಪೆಸಿಫಿಕ್ ಪ್ರದೇಶದ ದೇಶಗಳೊಂದಿಗೆ ಭಾಗಿಯಾಗಲು ಸಮರ್ಪಕ ಕ್ರಮಗಳನ್ನು ತರಲು ಯತ್ನಿಸುತ್ತಿದ್ದು, ಚೀನಾದೊಂದಿಗೆ ಭಿನ್ನಮತ ಇರುವ ಸಿಂಗಪುರ, ಫಿಲಿಪ್ಪೀನ್ಸ್, ಇಂಡೋನೇಷ್ಯಾ, ವಿಯೆಟ್ನಾಂಗಳಂಥ ದೇಶಗಳಿಗೆ ಸಮಾನಮನಸ್ಕ ವೇದಿಕೆಯಾಗಿ ನಿಲ್ಲಲು ಈ ಬಣ ಚಿಂತನೆ ನಡೆಸಿದೆ.

ಇದೇ ಸಂದರ್ಭ, ಮತ್ತೊಂದು ತ್ರಿಪಕ್ಷೀಯ ಮಾತುಕತೆಗೆ ಮುಂದಾದ ಪ್ರಧಾನಿ ಮೋದಿ; ಚೀನಾ ಅಧ್ಯಕ್ಷ ಕ್ಸೀ ಝಿನ್‌ಪಿಂಗ್ ಹಾಗೂ ರಷ್ಯಾ ಅಧ್ಯಕ್ಷ ವ್ಲಾದಿಮೀರ್ ಪುಟಿನ್ ಜತೆಗೆ ನಡೆಸಿ, ಭಯೋತ್ಪಾದನೆ ವಿರುದ್ಧದ ಸಮರದಲ್ಲಿ ತಮ್ಮ ರಾಜಕೀಯ ಅಸ್ತ್ರವನ್ನು ಮತ್ತೊಮ್ಮೆ ಝಳಪಿಸಿದ್ದಾರೆ. ಯಾವ ವೇದಿಕೆ ಮೇಲೆ ಅಮೆರಿಕ-ಚೀನಾಗಳ ನಡುವಿನ ವ್ಯಾಪಾರ ಸಮರದ ಛಾಯೆ ಮಾರ್ದನಿಸುತ್ತಿತ್ತೋ,ಅದೇ ವೇದಿಕೆಯಲ್ಲೇ ಭಾರತವು ಎರಡೂ ದೇಶಗಳೊಂದಿಗೆ ರಚನಾತ್ಮಕ ಕ್ರಮಗಳಿಗೆ ಮುಂದಾಗಿ ರಾಜತಾಂತ್ರಿಕ ಪ್ರೌಢಿಮೆ ಎಂದರೇನೆಂದು ತೋರಿದೆ.

ವೇದಿಕೆಯ ಮತ್ತೊಂದು ನೇಪಥ್ಯದಲ್ಲಿ ತನ್ನ ‘BRICS’ ಮಿತ್ರರನ್ನೂ ವಿಶ್ವಾಸಕ್ಕೆ ತೆಗೆದುಕೊಂಡ ಭಾರತ; ಸುಸ್ಥಿರ ಅಭಿವೃದ್ಧಿ, ಭದ್ರತಾ ಸಮತಿಯ ಸುಧಾರಣೆ ಹಾಗೂ ಭಯೋತ್ಪಾದಕರ ಆರ್ಥಿಕ ಮೂಲಗಳನ್ನು ಮಟ್ಟಹಾಕುವ ಸಂಬಂಧ ಮಾತುಕತೆ ನಡೆಸಿದೆ. G-7 ಹಾಗೂ G-8ನಂಥ ಶೃಂಗಗಳಲ್ಲಿ ಕೇವಲ ಪಾಶ್ಚಾತ್ಯ ಶಕ್ತಿಗಳದ್ದೇ ಕಾರುಬಾರು ಎನ್ನುವ ಕಾಲವಿತ್ತು. ಆದರೆ, ಪಾಶ್ಚಾತ್ಯ ಜಗತ್ತಿನಲ್ಲಿ ಕಳೆದ ದಶಕದಲ್ಲಿ ಉಂಟಾದ ಆರ್ಥಿಕ ಮುಗ್ಗಟ್ಟಿನಿಂದ ಜಗತ್ತನ್ನು ಚೇತರಿಕೆಯ ಹಾದಿಯಲ್ಲಿ ತೆಗೆದುಕೊಂಡು ಹೋಗಲು ಭಾರತ ಹಾಗೂ ಚೀನಾದಂಥ ಪ್ರವರ್ಧಮಾನಕ್ಕೆ ಬರುತ್ತಿರುವ ಶಕ್ತಿಗಳ ಪಾತ್ರ ಬಹಳ ದೊಡ್ಡದು. ಈ ನಿಟ್ಟಿನಲ್ಲಿ G-7/G-8ಗಳ ವಿಸ್ತರಿತ ವೇದಿಕೆಯಾದ G-20ಯಂಥ ಜಾಗತಿಕ ಆರ್ಥಿಕ ವೇದಿಕೆಗಳ ಮೂಲಕ ಮುಂದಿನ ದಿನಗಳ ಭೂ ಆರ್ಥಿಕತೆಯ ವ್ಯವಹಾರಗಳಲ್ಲಿ ನಿರ್ಣಾಯಕ ಪಾತ್ರಗಳನ್ನು ದೆಹಲಿ ಹಾಗೂ ಬೀಜಿಂಗ್‌ನಂಥ ದೇಶಗಳು ನಿರ್ವಹಿಸಲು ಅದಾಗಲೇ ಆರಂಭಿಸಿವೆ ಎಂದರೆ ಅತಿಶಯೋಕ್ತಿಯಲ್ಲ.

G-20ಯ ವಿತ್ತೀಯ ನೀತಿ ನಿರ್ಧರಿಸುವ ವಿಶ್ವ ಬ್ಯಾಂಕ್ ಹಾಗೂ IMFಗಳು ಪಾಶ್ಚಾತ್ಯ ಶಕ್ತಿಗಳ ಕೈಗೊಂಬೆಗಳಾಗಿದ್ದು, ಈ ಪಾರುಪತ್ಯಕ್ಕೆ ಪ್ರತಿಯಾಗಿ, ಮಹತ್ವಾಕಾಂಕ್ಷೆಯ ಶಕ್ತಿಗಳ ಬಣಗಳ ಮಟ್ಟದಲ್ಲಿ ಸಹಕಾರ ಬ್ಯಾಂಕ್‌ಗಳನ್ನು ತೆರೆಯುವ ಮೂಲಕ ವಿತ್ತೀಯ ಸಮರದಲ್ಲಿ ಪರ್ಯಾಯ ಬಣವಾಗುತ್ತಿರುವ BRICS ತನ್ನದೇ ಛಾಪನ್ನು ಸೃಷ್ಟಿಸಿಕೊಳ್ಳುತ್ತಿದೆ. ಅರ್ಜೆಂಟೀನಾದಂಥ ದೇಶಗಳೂ ಸಹ ಬ್ರಿಕ್ಸ್ ಭಾಗವಾಗಲು ಇಚ್ಛಿಸುತ್ತಿವೆ. ಅಲ್ಲದೇ ಅಮೆರಿಕ-ಯುರೋಪ್‌ಗಳ ಪ್ರಾಬಲ್ಯಕ್ಕೆ ಪ್ರತಿಯಾಗಿ ಏಷ್ಯಾ, ಆಫ್ರಿಕಾ ಹಾಗೂ ಲ್ಯಾಟಿನ್ ಅಮೆರಿಕಗಳ ದನಿಯನ್ನು ಒಗ್ಗೂಡಿಸಿ ಜಾಗತಿಕ ‘ಪವರ್ ಪಾಲಿಟಿಕ್ಸ್’ನಲ್ಲಿ ಸಮತೋಲನ ಸೃಷ್ಟಿಸುವಲ್ಲಿ BRICS ಮುಂದಡಿ ಇಟ್ಟಿದೆ. 3.1 ಶತಕೋಟಿ ಜನಸಂಖ್ಯೆ(ಜಗತ್ತಿನ 41%ನಷ್ಟು), ಒಟ್ಟಾರೆ 40.55 ಲಕ್ಷಕೋಟಿ ಡಾಲರ್‌ಗಳಷ್ಟು ಜಿಡಿಪಿ(ಜಗತ್ತಿನ 32%ನಷ್ಟು) ಹೊಂದಿರುವ BRICS ಸಮೂಹವೇ ಮುಂದಿನ ದಿನಗಳಲ್ಲಿ G-20ಯಂಥ ವೇದಿಕೆಗಳಲ್ಲಿ ತನ್ನದೇ ನಿರ್ಣಾಯಕ ಪಾತ್ರ ವಹಿಸಲಿದೆ.

 

2021ರಲ್ಲಿ ತಾನು ಆಯೊಜಿಸಬೇಕಿದ್ದ ಜಿ-20 ಶೃಂಗವನ್ನು 2022ಕ್ಕೆ ಮುಂದೂಡುವ ಮೂಲಕ, 75ನೇ ಸ್ವಾತಂತ್ರೊತ್ಸವದ ವರ್ಷದಲ್ಲಿ ಭಾರತವು ಸಾಮಾಜಿಕ-ಆರ್ಥಿಕ ಕ್ಷೇತ್ರಗಳಲ್ಲಿ ಸಾಧಿಸಿದ ಅಭೂತಪೂರ್ವ ಯಶಸ್ಸನ್ನು ಜಗತ್ತಿನ ಮುಂದೆ ಇಡಲು ಪ್ರಧಾನಿ ನರೇಂದ್ರ ಮೋದಿ ಬಯಸಿದ್ದಾರೆ. 2003ರಲ್ಲಿ ವಾಜಪೇಯಿ ಸರಕಾರ ಇದ್ದಾಗ 2010ರ ಕಾಮನ್‌ ವೆಲ್ತ್

ಕ್ರೀಡಾಕೂಟದ ಆತಿಥ್ಯವನ್ನು ಭಾರತಕ್ಕೆ ತರಲು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸಾಕಷ್ಟು ರಾಜತಾಂತ್ರಿಕ ಮುತ್ಸದ್ಧಿತನ ತೋರಿದ್ದರು. ನಂತರ ಬಂದ ಯುಪಿಎ ಸರಕಾರದ ಆಡಳಿತಾವಧಿಯಲ್ಲಿ ಜರುಗಿದ ಕ್ರೀಡಾಕೂಟದಲ್ಲಿ ಏನೆಲ್ಲಾ ಮಟ್ಟದ ಹಗರಣಗಳಾದವು ಎಂಬುದು ಜಗತ್ತಿಗೇ ತಿಳಿದಿದೆ. 21ನೇ ಶತಮಾನದ ಜಾಗತಿಕ ಮಟ್ಟದ ವೇದಿಕೆಗಳನ್ನು ನಿಭಾಯಿಸಿ ತನ್ನ ಸಾಮರ್ಥ್ಯವನ್ನು ಪ್ರಚುರಪಡಿಸಲು ಸಿಕ್ಕಿದ್ದ ಸುವರ್ಣಾವಕಾಶವನ್ನು ಹೇಗೆ ಹಾಳು ಮಾಡಿದೆವು ಎಂಬುದು ಇತಿಹಾಸ.

ಕಾಮನ್‌ವೆಲ್ತ್ ಕ್ರೀಡಾಕೂಟದಂತೆ, ಈ ಶೃಂಗವೂ ಸಹ ದೂರದರ್ಶಿತ್ವ ಇಲ್ಲದ ನಾಯಕತ್ವಗಳ ಕೈಕೆಳಗಿನ ಆತಿಥ್ಯದಲ್ಲಿ ಸಿಲುಕಿ, ಇನ್ನಷ್ಟು ಬ್ರಹ್ಮಾಂಡ ಭ್ರಷ್ಟಾಚಾರಗಳಿಗೆ ವೇದಿಕೆಯಾಗದಿರಲಿ.

ಕಳೆದ ಮೂರು ದಶಕಗಳಲ್ಲಿ ತಾನು ಸಾಧಿಸಿದ ಆಮೂಲಾಗ್ರ ಪ್ರಗತಿ ಹಾಗೂ ಭವಿಷ್ಯದ ನೀಲನಕ್ಷೆಯ ಸ್ಪಷ್ಟ ಅಂದಾಜನ್ನು ಜಾಗತಿಕ ಸಮುದಾಯದ ಮುಂದೆ ಇಡುವ ಮೂಲಕ, 2032ರ ಒಲಿಂಪಿಕ್ಸ್ ಕೂಟ ಆಯೋಜನೆ ಮಾಡಲು ಆಸಕ್ತಿ ತೋರುತ್ತಿರುವ ಭಾರತಕ್ಕೆ 2022ರ G-20 ಶೃಂಗದ ಆಯೋಜನೆ ಒಂದು ದೊಡ್ಡ ಸಾಧ್ಯತೆಯಾಗಲಿದೆ. ಏಕೆಂದರೆ, ಅದಾದ ಮೂರು ವರ್ಷಗಳ ಬಳಿಕ, ಅಂದರೆ 2032ರ ಒಲಿಂಪಿಕ್ಸ್ ಆತಿಥ್ಯ ಯಾರ ಪಾಲಾಗಲಿದೆ ಎಂದು ನಿರ್ಧಾರವಾಗಲಿದೆ. ವಿಶ್ವ ಸಂಸ್ಥೆಯ ಭದ್ರತಾ ಸಮಿತಿಯ ಸುಧಾರಣೆಗಳಿಗೆ ಆಗ್ರಹಿಸಲು ಸಮಾನ ಮನಸ್ಕ ದೇಶಗಳ ವೇದಿಕೆ ನಿರ್ಮಾಣ ಮಾಡಿಕೊಂಡು ದಾಪುಗಾಲುಗಳನ್ನೇ ಇಡುತ್ತಿರುವ ಭಾರತದ ಪ್ರಸಕ್ತ ರಾಜತಾಂತ್ರಿಕ ನಾಗಾಲೋಟವನ್ನು ನೋಡಿ ಹೇಳುವುದಾದರೆ– 2032ರ ಒಲಿಂಪಿಕ್ಸ್ ಆತಿಥ್ಯದ ಸ್ಫರ್ಧೆಯಲ್ಲಿ ಜಯಿಸಿದರೆ ಏನೂ ಅಚ್ಚರಿಯಿಲ್ಲ.

Tags

Related Articles

Leave a Reply

Your email address will not be published. Required fields are marked *

Language
Close