ವಿಶ್ವವಾಣಿ

ಮಿಶೆಲ್ ಹೇಳಿಕೆಗೆ ಭಾರತ ಅಸಮಾಧಾನ

ದೆಹಲಿ: ತಮ್ಮ ಚೊಚ್ಚಲ ಭಾಷಣದಲ್ಲಿಯೇ ಕಾಶ್ಮೀರ ವಿಷಯ ಪ್ರಸ್ತಾಪಿಸಿದ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ನೂತನ ಹೈ ಕಮೀಷನರ್ ಮಿಶೆಲ್ ಬ್ಯಾಚೆಲೆಟ್ ವಿರುದ್ಧ ಭಾರತ ತನ್ನ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಮಾನವ ಹಕ್ಕುಗಳ ಮಂಡಳಿಯ ಇತ್ತೀಚೆಗಿನ ವರದಿಯನ್ನು ಭಾರತ ಅರ್ಥಪೂರ್ಣವಾಗಿ ಜಾರಿಗೊಳಿಸಿಲ್ಲ ಹಾಗೂ ಗಂಭೀರ ಸಮಸ್ಯೆಗಳನ್ನು ಇತ್ಯರ್ಥಪಡಿಸುವ ಮಾರ್ಗಗಳನ್ನು ಕುರಿತು ಚರ್ಚೆಯನ್ನೂ ನಡೆಸಿಲ್ಲ ಎಂದು ಮಿಶೆಲ್ ಹೇಳಿದ್ದರು.

ಮಿಶೆಲ್‌‌ ಅವರ ಮಾತಿಗೆ ವಿಶ್ವಸಂಸ್ಥೆಯ ಭಾರತದ ಶಾಶ್ವತ ಪ್ರತಿನಿಧಿ ಚಾಂದರ್ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ ಭಾರತ ತನ್ನ ಅಭಿಪ್ರಾಯವನ್ನು ಸ್ಪಷ್ಟವಾಗಿ ತಿಳಿಸಿದೆ ಎಂದಿದ್ದಾರೆ. ಜಿನೇವಾದಲ್ಲಿ ನಡೆದ 38ನೇ ಮಂಡಳಿಯ ಸಭೆಯಲ್ಲಿ ಮಾತನಾಡಿದ ಅವರು ‘ಜಮ್ಮು ಮತ್ತು ಕಾಶ್ಮೀರದಲ್ಲಿ ಮಾನವ ಹಕ್ಕು ಸಂಬಂಧಿ ವಿಷಯಗಳನ್ನು ರಚನಾತ್ಮಕವಾಗಿ ಮತ್ತು ಭಾರತದ ಸಾರ್ವಭೌಮತೆಗೆ ಅನುಗುಣವಾಗಿ ಆ ರಾಜ್ಯದ ಸಮಗ್ರ ಹಿತದೃಷ್ಟಿಯಿಂದ ವಿಶ್ವಾಸಾರ್ಹ ರೀತಿಯಲ್ಲಿ ನಿರ್ವಹಿಸಲಾಗಿದೆ’ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಭಯೋತ್ಪಾದನೆ ಭಾರತದ ಅತಿ ದೊಡ್ಡ ಶತ್ರು. ಇದು ಮಾನವ ಹಕ್ಕುಗಳ ಕಾರಣವಾಗಿದೆ. ಭವಿಷ್ಯದಲ್ಲಿ ಈ ಸಮಸ್ಯೆಯತ್ತ ನೀವು ಗಮನ ಹರಿಸುತ್ತೀರಿ ಎಂಬ ವಿಶ್ವಾಸವನ್ನು ಭಾರತ ಹೊಂದಿದೆ ಎಂದು ಹೇಳಿದ್ದಾರೆ.