About Us Advertise with us Be a Reporter E-Paper

Breaking NewsUncategorizedದೇಶಪ್ರಚಲಿತ

ಭಾರತ, ಪಾಕಿಸ್ತಾನದ ಮಾತುಕತೆ ರದ್ದು

ದೆಹಲಿ: ಮುಂದಿನ ವಾರ ನ್ಯೂಯಾರ್ಕ್‌ನಲ್ಲಿ ನಡೆಯಲಿದ್ದ ವಿಶ್ವಸಂಸ್ಥೆ ವಾರ್ಷಿಕ ಮಹಾಸಭೆ (ಯುಎನ್‌ಜಿಸಿ)ಯಲ್ಲಿ ಭಾರತ ಹಾಗೂ ಪಾಕಿಸ್ತಾನ ವಿದೇಶಾಂಗ ಸಚಿವರ ಭೇಟಿಯನ್ನು ಭಾರತ ರದ್ದುಗೊಳಿಸಿದೆ.

ಕೆಲ ದಿನಗಳ ಹಿಂದೆಯಷ್ಟೇ ಉಭಯ ದೇಶಗಳ ನಡುವಣ ಶಾಂತಿಯುತ ಮಾತುಕತೆ ಆರಂಭಿಸಲು ಮನವಿ ಮಾಡಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಭಾರತ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದರು. ಈ ಪತ್ರಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದ ಭಾರತ ಸರಕಾರ ಸೆ.27ರಂದು ನ್ಯೂಯಾರ್ಕ್ ನಲ್ಲಿ ಸಾರ್ಕ್ ರಾಷ್ಟ್ರಗಳ ವಿದೇಶಾಂಗ ಸಚಿವರ ಔತಣ ಕೂಟದ ವೇಳೆ ಭೇಟಿಗೆ ವೇದಿಕೆ ಕಲ್ಪಿಸಲು ಒಪ್ಪಿತ್ತು. ಆದರೆ ಈಗ ಗಡಿಯಲ್ಲಿನ ಅಶಾಂತಿ ವಾತಾವರಣದಿಂದಾಗಿ ಭಾರತ ಮತ್ತೆ ಮಾತುಕತೆಯನ್ನು ರದ್ದು ಮಾಡಿ ಕಠಿಣ ನಿಲುವು ತೆಗೆದುಕೊಂಡಿದೆ.

ಯೋಧರ ಹತ್ಯೆ ಸಭೆ ರದ್ದು ಮಾಡಲು ಕಾರಣ

ಜಮ್ಮು ಕಾಶ್ಮೀರದ ಗಡಿ ಭಾಗದಲ್ಲಿ ಪಾಕಿಸ್ತಾನ ಸೇನೆ ಯೋಧರನ್ನು ಅಮಾನುಷವಾಗಿ ಹತ್ಯೆ ಮಾಡುತ್ತಿದ್ದು, ಇದರಿಂದ ಕೋಪಗೊಂಡಿರುವ ಭಾರತ ಸರಕಾರ ಮಾತುಕತೆ ರದ್ದುಗೊಳಿಸುವ ಮೂಲಕ ಪಾಕಿಸ್ತಾನಕ್ಕೆ ಚುರುಕು ಮುಟ್ಟಿಸಿದೆ.

ಎರಡು ದಿನಗಳ ಹಿಂದೆ ಬಿಎಸ್‌ಎಫ್ ಯೋಧನನ್ನು ಅಪಹರಿಸಿದ್ದ ಪಾಕ್ ಸೇನೆ ಕುತ್ತಿಗೆ ಸೀಳಿ, ಕಣ್ಣು ಗುಡ್ಡೆ ಕಿತ್ತು ಹತ್ಯೆ ಮಾಡಿ ಪೈಶಾಚಿಕ ಕೃತ್ಯ ಎಸಗಿದ್ದರು. ಇದರ ಬೆನ್ನಲ್ಲೇ ಶುಕ್ರವಾರ ಜಮ್ಮು ಮತ್ತು ಕಾಶ್ಮೀರದ ಮೂವರು ಪೊಲೀಸ್ ಅಧಿಕಾರಿಗಳನ್ನು ಪಾಕ್ ಪ್ರಾಯೋಜಿತ ಉಗ್ರರು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶಗಳ ನಡುವಣ ಮಾತುಕತೆಯನ್ನು ಭಾರತ ರದ್ದುಗದೊಳಿಸಿದೆ.

ಈ ನಿರ್ಧಾರದ ಕುರಿತು ಮಾಹಿತಿ ನೀಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್, ‘ಪ್ರಸ್ತುತ ಪರಿಸ್ಥಿತಿ ಹಾಗೂ ವಿದ್ಯಮಾನಗಳನ್ನು ಗಮನಿಸಿದರೆ, ಪಾಕಿಸ್ತಾನದ ಜತೆ ಮಾತುಕತೆ ನಡೆಸುವುದು ಅರ್ಥಹೀನ. ನಿನ್ನೆ ನಾವು ಭಾರತ ಮತ್ತು ಪಾಕಿಸ್ತಾನ ವಿದೇಶಾಂಗ ಸಚಿವರ ಭೇಟಿಯನ್ನು ಘೋಷಿಸಿದ್ದೆವು. ಆದರೆ ಕಳೆದ ಎರಡು ದಿನಗಳಲ್ಲಿನ ಪಾಕಿಸ್ತಾನದಲ್ಲಿ ಆಶ್ರಯ ಪಡೆದಿರುವ ಭಯೋತ್ಪಾದಕ ಸಂಘಟನೆಗಳ ಕೃತ್ಯ ನಿಜಕ್ಕೂ ಬೇಸರ ಮೂಡಿಸಿದೆ’ ಎಂದಿದ್ದಾರೆ. ಹೊಸ ಆರಂಭಕ್ಕೆ ಮನವಿ ಮಾಡಿ, ಮತ್ತೊಂದೆಡೆ ಪೈಶಾಚಿಕ ಕೃತ್ಯಕ್ಕೆ ಬೆಂಬಲ ನೀಡುತ್ತಿರುವುದು ಪಾಕಿಸ್ತಾನ ಪ್ರಧಾನಿಯ ನಿಜ ಮುಖವಾಡವನ್ನು ಬಯಲಿಗೆಳೆದಿದೆ ಎಂದು ಕಿಡಿಕಾರಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close