About Us Advertise with us Be a Reporter E-Paper

ವಿರಾಮ

ಭಾರತೀಯ ಕಾವ್ಯ ಮೀಮಾಂಸೆ ಕ್ಷೇತ್ರದ ಅನನ್ಯ ಕೃತಿ ಮೊದಲ ಮಹಿಳಾ ಲೇಖಕಿಯ ಚಾರಿತ್ರಿಕ ಸಾಧನೆ ‘ಕಾವ್ಯ, ತತ್ವಾನುಸಂಧಾನ’

* ಡಾ. ಕಬ್ಬಿನಾಲೆ ವಸಂತ ಭಾರದ್ವಾಜ

ಸಾಹಿತ್ಯ, ಸಂಗೀತ ಮತ್ತು ಸಂಸ್ಕೃತಿ ಕ್ಷೇತ್ರದ ಹುಲುಸಾದ ನೆಲ, ಧಾರವಾಡದಲ್ಲಿ ‘ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ’ ಕಳೆದ ಮೂರು ದಿನಗಳಿಂದ ನಡೆಯುತ್ತಿದೆ. ಈ ಅಕ್ಷರ ಜಾತ್ರೆಯ ಮೊದಲ ದಿನ (ಶುಕ್ರವಾರ) ಕೆಲವು ಮಹತ್ವದ ಕೃತಿಗಳು ಲೋಕಾರ್ಪಣೆಗೊಂಡಿವೆ. ಅವುಗಳಲ್ಲಿ ಕವಿತಾ ರೈ ಅವರು ತಮ್ಮ ಅಗಾಧ ಓದು, ಗ್ರಹಿಕೆ ಮತ್ತು ಆಳ ಅಧ್ಯಯನದಿಂದ ರಚಿಸಿದ ‘ಕಾವ್ಯ ತತ್ವಾನುಸಂಧಾನ’ ಎಂಬ ವಿಶಿಷ್ಟ ಕೃತಿ ಸಾಹಿತ್ಯ ಕ್ಷೇತ್ರದ ಗಂಭೀರ ಓದುಗರ ವಿಶೇಷ ಗಮನ ಸೆಳೆದಿದೆ. ಭಾರತೀಯ ಕಾವ್ಯ ಮೀಮಾಂಸೆ ಕ್ಷೇತ್ರದಲ್ಲಿ ವಿಸ್ತ್ರತವೂ, ಆಳವೂ ಆದ ಅಧ್ಯಯನಶೀಲತೆಯಿಂದ ಮಹಿಳೆಯೊಬ್ಬರು ಬರೆದ ಪ್ರಥಮ ಕೃತಿ ಎಂಬ ಹೆಗ್ಗಳಿಕೆಯೂ ‘ಕಾವ್ಯ ತತ್ವಾನುಸಂಧಾನ’ ಹೊತ್ತಗೆಯದ್ದು. ಆ ಕಾರಣಕ್ಕೆ ಈ ಮಹತ್ವದ ಚಾರಿತ್ರಿಕ ಕೃತಿಯ ಒಂದು ಪ್ರವೇಶಿಕೆ ಇಲ್ಲಿದೆ. ಭಾರತೀಯ ಮತ್ತು ಪಾಶ್ಚಿಮಾತ್ಯ ಮೀಮಾಂಸೆಗಳ ಸಮಗ್ರ ಟಿಪ್ಪಣಿಗಳ ಸ್ವರೂಪವೂ ಹೌದು.

ಆಧುನಿಕ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ತೀ.ನಂ.ಶ್ರೀ. ಅವರ ‘ಭಾರತೀಯ ಕಾವ್ಯಮೀಮಾಂಸೆ’ ಒಂದು ಆಚಾರ್ಯ ಕೃತಿ. ಅದಾದ ಮೇಲೆ ಕಾವ್ಯ ಮೀಮಾಂಸೆಯ ಪರಿಕಲ್ಪನೆಗಳನ್ನು ಪಾಶ್ಚಾತ್ಯ – ಪೌರಾತ್ಯ ನೆಲೆಯಲ್ಲಿ ತೌಲನಿಕ ಅಧ್ಯಯನಕ್ಕೆ ಒಳಗು ಮಾಡಿದಂತೆ ಕನ್ನಡದಲ್ಲಿ ಹಲವು ಕೃತಿಗಳು ಬಂದಿವೆ. ಆದರೆ ಮಹಿಳೆಯೊಬ್ಬರು ಈ ಕ್ಷೇತ್ರದಲ್ಲಿ ಗಂಭೀರವಾಗಿ ತೊಡಗಿಸಿಕೊಂಡು ಆಳವೂ ವಿಸ್ತಾರವೂ ಆದ ಬಗೆಯಲ್ಲಿ ಅಧ್ಯಯನ ನಡೆಸಿದ್ದು ಇದೇ ಡಾ. ಕವಿತಾ ರೈ, ಸಾಹಿತ್ಯ ಮೀಮಾಂಸೆಯ ಪರಿಕಲ್ಪನೆಗಳನ್ನು ತಮ್ಮದೇ ಆದ ಓದಿನ ಗ್ರಹಿಕೆಯ ನೆಲೆಯಲ್ಲಿ ವಿಶ್ಲೇಷಿಸುತ್ತಾರೆ.ಸಂಸ್ಕೃತ ಕಾವ್ಯಮೀಮಾಂಸೆ ಹಾಗೂ ಪಾಶ್ಚಾತ್ಯ ಕಾವ್ಯ ಮೀಮಾಂಸೆಗಳ ಸಮಾನ ಗುಣ ಲಕ್ಷಣಗಳ ಜೊತೆಗೆ ಸಾಂಸ್ಕೃತಿಕ ಭಿನ್ನತೆಗಳ ಕಾರಣದಲ್ಲಿ ಇರುವ ಅನನ್ಯತೆಗಳನ್ನು ಸೂಕ್ತವಾಗಿ ಗುರುತಿಸುತ್ತಾರೆ. ಪರಿಕಲ್ಪನೆಗಳ ಗ್ರಹಿಕೆಗೆ ಅವರು ಕೊಡುವ ಉದಾಹರಣೆಗಳ ಅವರ ಓದಿನ ಬಹುಶೃತತ್ವಕ್ಕೆ ಸಾಕ್ಷಿಯಾಗಿವೆ.

ಜಾಡಿಗೆ ಬಿದ್ದಿರುವ ಮೀಮಾಂಸೆಯ ನಿರೂಪಣೆಯ ಮಾದರಿಗಳನ್ನು ಬದಿಗಿಟ್ಟು, ಸಹೃದಯ ಸ್ಪಂದನೆಯ ಗುಣ ವಿವೇಕದಲ್ಲಿ ನಿರೂಪಿತವಾಗಿರುವ ಬರಹ ಆತ್ಮೀಯವಾಗಿ ಓದಿಸಿಕೊಂಡು ಹೋಗುತ್ತದೆ. ಪಾಶ್ಚಾತ್ಯ ವಿಮರ್ಶೆಯ ಸೈದ್ಧಾಂತಿಕ ತಿಳಿವಳಿಕೆಯ ಸ್ಪಷ್ಟತೆ, ಸೃಜನಶೀಲ ಕೃತುಗುಣಗಳ ಸಂಲಗ್ನಭಾವದ ಈ ಬರಹ ಶಾಸ್ತ್ರ ಮತ್ತು ವಿಮರ್ಶೆಯ ವಿಚಾರಗಳನ್ನು ಸಾಮಾನ್ಯ ಓದುಗರಿಗೆ ಮುಟ್ಟಿಸುವಲ್ಲಿ ಸಫಲಗೊಳ್ಳುತ್ತದೆ. ವಿಶೇಷವೆಂದರೆ, ವಸಾಹತೋತ್ತರ, ಆಧುನಿಕೋತ್ತರ ಸಾಹಿತ್ಯ ಸಿದ್ಧಾಂತಗಳನ್ನು ಇವರು ಚರ್ಚೆಗೆ ಒಳಗು ಮಾಡಿಕೊಂಡಿರುವುದು ಹಾಗೂ ವಿಮರ್ಶಾ ಪರಿಕಲ್ಪನೆಗಳನ್ನು ಸಮಗ್ರೀಕರಣ ಭಾವದಲ್ಲಿ ವಿಶ್ಲೇಷಣೆಗೆ ಒಡ್ಡಿರುವುದು. ಇದು ಕಾವ್ಯತತ್ವಾನುಸಂಧಾನ ಕೃತಿಯ ಬರಹದ ಉನ್ನತಿಕೆ.

Tags

Related Articles

Leave a Reply

Your email address will not be published. Required fields are marked *

Language
Close