About Us Advertise with us Be a Reporter E-Paper

ಅಂಕಣಗಳು

ಉದ್ಯೋಗ ಕ್ಷೇತ್ರದಲ್ಲಿ ಭಾರತದ ದಾಪುಗಾಲು

- ಎಲ್.ಪಿ. ಕುಲಕರ್ಣಿ,

ಆಘಾದ ಜನಸಂಖ್ಯೆ ಹೊಂದಿರುವ ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಸಾಮಾನ್ಯವೆಂದು ಹೇಳಬಹುದು. ಅದು ಜನಸಂಖ್ಯೆಯ ದೃಷ್ಟಿಯಿಂದ ಜಗತ್ತಿನಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತಕ್ಕೂ ಅನ್ವಯಿಸುತ್ತದೆ. ದೇಶದ ಪ್ರತಿಯೊಬ್ಬ ಯುವಕ/ತಿ ಬಯಸುವುದು. ಸಮಾಜದಲ್ಲಿ ಗೌರವಯುತವಾಗಿ ಜೀವನ ನಡೆಸಲು ಉದ್ಯೋಗ ಒಂದಿದ್ದರೆ ಸಾಕು. ನಮ್ಮ ದೇಶದಲ್ಲಿ ಇದು ಎಷ್ಟರಮಟ್ಟಿಗೆ ಇದೆ?ಎಷ್ಟೆಲ್ಲಾ ಯುವಕ/ತಿಯರು ಉದ್ಯೋಗ ಗಿಟ್ಟಿಸಿಕೊಂಡು ಆರ್ಥಿಕವಾಗಿ ಸಬಲರಾಗಿ ಜೀವನ ನಡೆಸುತ್ತಿದ್ದಾರೆ ? ಎಂದು ತಿಳಿಯುವುದು. ಅಷ್ಟು ಸುಲಭದ ಮಾತಲ್ಲ. ಅಂಶಗಳನ್ನು ಸರ್ವೇ ಮಾಡಲು ಹಲವು ಸರಕಾರಿ ಹಾಗೂ ಸರಕಾರೇತರ ಸಂಸ್ಥೆಗಳು ನಮ್ಮ ದೇಶದಲ್ಲಿ ಸ್ಥಾಪಿಸಲ್ಪಟ್ಟಿವೆ. ಅಂತವುಗಳಲ್ಲಿ ‘ನ್ಯಾಷನಲ್ ಸ್ಯಾಂಪಲ್ ಸರ್ವೇ ಆಫೀಸ್’ ( ಎನ್‌ಎಸ್‌ಎಸ್‌ಒ) ಕೂಡಾ ಒಂದು ವಿಶ್ವಾಸಾರ್ಹ ಸಂಸ್ಥೆ. ಇದು ಈ ಹಿಂದೆ ಯುಪಿಎ ಸರಕಾರ ಆಡಳಿತದಲ್ಲಿದ್ದಾಗ ಹಲವು ಚರಿತ್ರಾರ್ಹ ಸಮೀಕ್ಷೆಗಳನ್ನು ಮಾಡಿ, ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರ ಆಡಳಿತಾವಧಿಯ ನ್ಯೂನತೆಗಳನ್ನು ಬಹಿರಂಗಪಡಿಸಿತ್ತು.

ಹಲವಾರು ಸ್ವಾಯತ್ತ ಸಂಸ್ಥೆಗಳು ತಮಗಿದ್ದ ಘನತೆಯನ್ನು ಬಹುಪಾಲು ಹಾಳು ಮಾಡಿಕೊಂಡಿರುವ ಈ ಸಹ ಎನ್‌ಎಸ್‌ಎಸ್‌ಒ ತನ್ನ ಪ್ರೌಢಿಮೆಯನ್ನು ಕಾಯ್ದುಕೊಂಡಿದೆ. 8ನೇ ನವೆಂಬರ್ 2016ರ ರಾತ್ರಿ ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ನೋಟು ಅಮಾನ್ಯೀಕರಣ ಸಂದರ್ಭದಲ್ಲಿ ಎನ್‌ಎಸ್‌ಎಸ್‌ಒ ಸಂಸ್ಥೆ ದೇಶದಲ್ಲಿನ ಬಹು ಚರ್ಚಿತ ಇನ್ನೊಂದು ಬಹು ಮಹತ್ವದ ಸಮಸ್ಯೆಯಾದ ನಿರುದ್ಯೋಗದ ಬೆನ್ನಹಿಂದೆ ಬಿದ್ದಿತ್ತು. ಅದು ತನ್ನ ವರದಿಯಲ್ಲಿ ಈ ರೀತಿ ಹೇಳುತ್ತಿದೆ. ಕಳೆದ 45 ವರ್ಷಗಳಲ್ಲಿಯೇ ಪ್ರಪ್ರಥಮ ಬಾರಿಗೆ 2017-18ನೇ ಸಾಲಿನಲ್ಲಿ ನಿರುದ್ಯೋಗದ ಪ್ರಮಾಣ ಶೇ.6.1ಕ್ಕೆ ಏರಿದೆ. ಈ ಹಿಂದೆ 2011-12ರಲ್ಲಿ ಶೇ.2.2 ನಿರುದ್ಯೋಗ ಪ್ರಮಾಣ 6 ವರ್ಷಗಳಲ್ಲಿ ಶೇ.6.1ರಷ್ಟು ಏರಿಕೆ ಕಂಡಿರುವುದು ಒಂದು ಸವಾಲಾಗಿ ಪರಿಣಮಿಸಿದೆ. ಈ ಕಾಲಘಟ್ಟದಲ್ಲಿ ನಮ್ಮ ಯುವಜನತೆ ಹೆಚ್ಚು ಪೆಟ್ಟು ತಿಂದಿದ್ದಾರೆ. ಸದ್ಯ ದೇಶದಲ್ಲಿ ಕೃಷಿ ಮತ್ತು ಕೃಷಿಯೇತರ ಕ್ಷೇತ್ರಗಳಲ್ಲಿ ಉದ್ಯೋಗಗಳ ಕುಸಿತ ಕಂಡು ಬರ ತ್ತಿದೆ. ಜಾಗತಿಕ ಮಟ್ಟದಲ್ಲಿ ಗಮನಹರಿಸಿದಾಗ ಈ ನಿರುದ್ಯೋಗವು ಸ್ವಲ್ಪ ಮಟ್ಟಿಗೆ ಚೇತರಿಕೆ ಕಂಡಿದ್ದರೂ ಕೂಡಾ ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರದಲ್ಲಿ ಸ್ವಲ್ಪ ಕುಸಿದಿದೆ ಅಂತಾನೆ ಹೇಳಬಹುದು.

ಇಂದು ದೇಶದಲ್ಲಿ ನಿರುದ್ಯೋಗ ಸಮಸ್ಯೆಯು ಬೃಹತ್ತಾಗಿ ಬೆಳೆದು ನಿಂತಿದೆ ಎಂದರೆ, ಇತ್ತೀಚೆಗೆ ಉತ್ತರ ಪ್ರದೇಶ ರಾಜ್ಯ ವಿಧಾನಸಭಾ ಕಾರ್ಯಾಲಯದಲ್ಲಿ ಬಾಕಿ ಇರುವ ಕೇವಲ 368 ಜವಾನ ಹುದ್ದೆಗಳಿಗೆ ಇಪ್ಪತ್ಮೂರು ಲಕ್ಷಕ್ಕೂ ಹೆಚ್ಚು ಅರ್ಜಿ ಬಂದಿರುವುದು. ಬಂದ ಅರ್ಜಿಗಳಲ್ಲಿ 2.5 ಲಕ್ಷ ಅಭ್ಯರ್ಥಿಗಳು ಬಿ.ಇ, ಬಿ.ಟೆಕ್, ಬಿಎಸ್ಸಿ, ಎಂ.ಎಸ್ಸಿ, ಎಂ.ಕಾಂ. ಮುಂತಾದ ಉನ್ನತ ಪದವಿ ಪಡೆದಿರುವುದು ಕಂಡುಬಂದಿದೆ ಅಲ್ಲದೇ 255 ಜನ ಪಿಎಚ್.ಡಿ ಸಹ ಮಾಡಿದವರಾಗಿದ್ದರು. ಇದಲ್ಲದೆ ಕಳೆದ ಸಾಲಿನಲ್ಲಿ ನಮ್ಮ ರಾಜ್ಯ ಸರಕಾರದ ಕೆಪಿ ನಡೆಸಿದ ಪ್ರಥಮ ದರ್ಜೆ ಸಹಾಯಕ ಹಾಗೂ ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳಿಗೂ ಸಹ ಸಾಕಷ್ಟು ಉನ್ನತ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಹಾಕಿದ್ದರು. ಇತ್ತೀಚೆಗೆ ನಡೆದ ರೇಲ್ವೆ ನೇಮಕಾತಿಯ ಗ್ರುಪ್ ಡಿ ಹುದ್ದೆಗಳಿಗೂ ಸಹ ಉನ್ನತ ಪದವಿ ಪಡೆದ ಯುವಕರು ಅರ್ಜಿ ಹಾಕುತ್ತಿರುವುದನ್ನು ನಾವಿಲ್ಲಿ ಸ್ಮರಿಸಬಹುದು. ಅಂದರೆ ಕನಿಷ್ಠ ಶೈಕ್ಷಣಿಕ ಅರ್ಹತೆಯಿರುವ ಜವಾನ ಹುದ್ದೆಗೂ ಸಹ ಇಂತಹ ಪದವೀಧರರು ಅರ್ಜಿ ಹಾಕುತ್ತಿರುವುದು ದೇಶದ ಪ್ರಗತಿಗೆ ಮಾರಕವಲ್ಲದೇ ಮತ್ತಿನ್ನೇನು? ಶ್ರೀಮಂತ ರಾಜಕೀಯ ಧುರೀಣರ ಮಕ್ಕಳಿಗೆ ಇದ್ಯಾವ ಚಿಂತೆಯೂ ಇಲ್ಲ. ಆದರೆ ಬಡವರ್ಗ ಸಾಮಾನ್ಯ ಮಧ್ಯಮ ವರ್ಗದ ಜನರಿಗೆ ಈ ಉದ್ಯೋಗವೇ ಒಂದು ಸ್ವಾವಲಂಬಿಯಾಗಿ ಬದುಕಲು ಇರುವ ಏಕಮಾತ್ರ ಮಾರ್ಗ. ಆದರೆ ಇಂದು ಈ ಉದ್ಯೋಗವೂ ಕೂಡ ನಿಲುಕದ ನಕ್ಷತ್ರ ವಾಗುತ್ತಿರುವುದು ಬಹಳ ಖೇದಕರ ಸಂಗತಿ.

ನಿರೀಕ್ಷಿತ ಮಟ್ಟದಲ್ಲಿ ಉದ್ಯೋಗಾವಕಾಶ ಸೃಷ್ಟಿಯಲ್ಲಿ ಭಾರತ ಹಿಂದುಳಿದಿದೆ. ಕಳೆದ ವರ್ಷ 17.7 ದಶಲಕ್ಷದಷ್ಟಿದ್ದ ನಿರುದ್ಯೋಗ ಪ್ರಮಾಣ, ಈ ವರ್ಷದಲ್ಲಿ 17.8 ದಶಲಕ್ಷಕ್ಕೆ ಏರಲಿದೆ. ಇನ್ನು 3.4ರಷ್ಟು ಪ್ರಮಾಣದಲ್ಲಿ ನಿರುದ್ಯೋಗದ ಸಮಸ್ಯೆ ದೇಶವನ್ನು ಕಾಡಲಿದೆ ಎಂದು ಒಂದು ಸಮೀಕ್ಷಾ ವರದಿ ತಿಳಿಸುತ್ತದೆ.

ಕೇವಲ ಕಪ್ಪು ಹಣ ನಿಯಂತ್ರಣ ಮಾಡುವುದಕ್ಕೆ ಹೆಚ್ಚು ಒತ್ತುಕೊಟ್ಟಿದ್ದರಿಂದ ನಿರುದ್ಯೋಗ ಸಮಸ್ಯೆ ಬಹುವಾಗಿ ತಲೆದೂರಿದೆ ಎಂಬ ಗುಮಾನಿಯೂ ಸಹ ಕೇಳಿಬರುತ್ತಿದೆ. ಹೆಚ್ಚು ಪಾಲು ನಗದು ಬಳಕೆಯಿರುವ ಭಾರತದಲ್ಲಿ ಶೇ.80ರಷ್ಟು ಆರ್ಥಕ ವಹಿವಾಟನ್ನು ನಿಯಂತ್ರಿಸುವ ಗುಡಿಗಾರಿಕೆ, ಚರ್ಮಗಾರಿಕೆ, ನೇಕಾರಿಕೆ, ಕಟ್ಟಡ ಕಾಮಗಾರಿಯಂತಹ ಅಸಂಘಟಿತ ಕಾರ್ಮಿಕ ಸೇವಾವಲಯ ನೆಲ ಕಚ್ಚಿಬಿಟ್ಟಿದೆ.

ಇನ್ನು ಸರಕಾರಿ ಹುದ್ದೆಗಳ ಬಗ್ಗೆ ಬೇಡ! ನಮ್ಮ ದೇಶದಲ್ಲಿ ಇಷ್ಟೆಲ್ಲಾ ತಂತ್ರಜ್ಞಾನ ಮುಂದುವರಿದಿದ್ದರೂ ಕೂಡ ಈ ವರ್ಷ ಅರ್ಜಿ ಸಲ್ಲಿಸಿ ಬಹು ಬೇಗವೆಂದರೆ ಐದಾರು ತಿಂಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆದು, ಅದರ ಫಲಿತಾಂಶ ಬಂದು ತಾತ್ಕಾಲಿಕ ಆಯ್ಕೆಪಟ್ಟಿ, ಅಂತಿಮ ಆಯ್ಕೆಪಟ್ಟಿ, ಇವೆಲ್ಲ ಹೊರ ಬೀಳುವುದರೊಳಗೆ ಈ ರೆಕ್ರೂಟ್ಮೆಂಟ್ ಕನಿಷ್ಟವೆಂದರು ಎರಡು ವರ್ಷ ತೆಗೆದುಕೊಂಡಿರುತ್ತದೆ. ಅಲ್ಲಿವರೆಗೂ ಖಾಲಿ ಇರುವ ಆ ಸರಕಾರಿ ಹುದ್ದೆ ನಿಭಾಯಿಸುವುದು ಕಷ್ಟಸಾಧ್ಯ. ಇದರಿಂದ ಜನಸಾಮಾನ್ಯರ ಅಗತ್ಯ ಕೆಲಸ ಕಾರ್ಯಗಳು ವಿಳಂಬವಾಗಿ ಹೋಗಿರುತ್ತವೆ.

ಕಾರ್ಮಿಕ ವರ್ಗದಲ್ಲಿ ಈ ಖಾಲಿ ಹುದ್ದೆ ತುಂಬದಿರುವದರಿಂದಾಗು ಪರಿಣಾಮಗಳೇನು? ಆರೋಗ್ಯ ಇಲಾಖೆ, ಗೃಹ, ಶಿಕ್ಷಣ, ಅರಣ್ಯ, ಕಂದಾಯ, ನೀರಾವರಿ ಇಲಾಖೆ ಸೇರಿದಂತೆ ಹಲವು ಇಲಾಖೆಗಳಲ್ಲಿ ಸಿಬ್ಬಂದಿಯ ಕೊರತೆ ಕಾಣುತ್ತಿದೆ. ಇದರ ಪರಿಣಾಮವಾಗಿ ಸದ್ಯ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಕೆಲಸದದ ಹೊರೆ ಹೆಚ್ಚಾಗಿ ಕಾರ್ಯದ ದಕ್ಷತೆ ಕಡಿಮೆಯಾಗುತ್ತಾ, ಲಂಚ, ಬೃಷ್ಠತೆ ಮುಂತಾದ ಪ್ರಕರಣಗಳು ತಲೆ ಎತ್ತಿವೆ, ಅಲ್ಲದೇ ದೈನಂದಿನ ಸರಕಾರಿ ಕೆಲಸಗಳು ವಿಳಂಬವಾಗುತ್ತಿವೆ. ಇದು ರಾಜ್ಯದ ಪ್ರಗತಿಗೆ ಮಾರಕವಾಗಿ ಪರಿಣಮಿಸುತ್ತಿದೆ.

ಯಾವುದೇ ಸರಕಾರಿ ಕಚೇರಿಗೆ ಹೋದರು ಅಲ್ಲಿ ಹೆಚ್ಚಾಗಿ ಕಂಡು ಬರುವುದು ಡೇಟಾ ಎಂಟ್ರಿ ಆಪರೇಟರ್, ಕಚೇರಿ ಸಹಾಯಕರು, ಚಾಲಕರು, ಭದ್ರತಾ ಸಿಬ್ಬಂದಿಗಳನ್ನೇ ಮೊದಲು ಮಾಡಿಕೊಂಡು ಗ್ರುಪ್ ಡಿ ದರ್ಜೆಯ ಎಲ್ಲ ನೌಕರರು ಕನಿಷ್ಠ ವೇತನಕ್ಕೆ ದುಡಿಯುವ ಈ ಗುತ್ತಿಗೆ ನೌಕರರೇ ಹೆಚ್ಚು. ಒಂದು ಅಂದಾಜು ಅಂಕಿ ಅಂಶಗಳ ಪ್ರಕಾರ ಈ ಗುತ್ತಿಗೆ ನೌಕರರು ಇಪ್ಪತ್ತಾರು ಸಾವಿರಕ್ಕೂ ಹೆಚ್ಚಿದ್ದಾರೆ. ಕಡಿಮೆ ಪಗಾರಕ್ಕೆ ಅವರೆಲ್ಲಾ ಅಷ್ಟೊಂದು ಶ್ರಮವಹಿಸಿ ದುಡಿಯದಿರುವುದು ಸರಕಾರದ ಇನ್ನೊಂದು ಕಾಯಂ ನೌಕರರು ಮಾಡುವಷ್ಟೇ ಕೆಲಸ ಮಾಡುವ ದಿನಗೂಲಿ, ಗುತ್ತಿಗೆ ಇಲ್ಲವೇ ಹಂಗಾಮಿ ನೌಕರರಿಗೆ ವೇತನದಲ್ಲಿ ತಾರತಮ್ಯ ಮಾಡುವುದು ಘೋರ ಅನ್ಯಾಯ. ಇದೊಂದು ಗುಲಾಮಗಿರಿ ಪದ್ಧತಿ, ದಬ್ಬಾಳಿಕೆ ಎಂದು ಸುಪ್ರೀಂ ಕೋರ್ಟ್ ಹೇಳಿದ್ದರೂ ಅದೇ ಗುತ್ತಿಗೆ ನೇಮಕಾತಿಯನ್ನು ಮುಂದುವರೆಸಿಕೊಂಡು ಬರುತ್ತಿರುವುದು ಸರಕಾರದ ಲೋಪದೋಷಗಳಲ್ಲೊಂದು.

ಒಂದು ಕಡೆ ಇದೇ ಸರಕಾರ ಹೆಚ್ಚು ಹೆಚ್ಚು ಪದವಿ ಕಾಲೇಜುಗಳಿಗೆ ಅನುಮತಿ ಕೊಟ್ಟು ಪ್ರತೀ ವರ್ಷ ಲಕ್ಷಗಟ್ಟಲೇ ಪದವೀಧರರನ್ನು ಶೃಷ್ಟಿಸುತ್ತಿದೆ ಆದರೆ ಅವರಿಗೆ ಸೂಕ್ತ ಆರ್ಥಿಕ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ಯೋಚಿಸುತ್ತಿಲ್ಲ.

ಕಂಪ್ಯೂಟರ್ ತಂತ್ರಜ್ಞಾನ ಬಳಕೆಯಿಂದ ಕೆಲವು ಸರಕಾರಿ ಹುದ್ದೆಗಳು ಅನಗತ್ಯವೆಂದೆನಿಸಬಹುದು, ಅಂದಮಾತ್ರಕ್ಕೆ ಸಿಬ್ಬಂದಿಯನ್ನು ಹೊಸದಾಗಿ ನೇಮಕಾತಿ ಮಾಡಿಕೊಳ್ಳದಿದ್ದರೆ ಹೇಗೆ? ಕೆಲವೊಂದಿಷ್ಟು ಇಲಾಖೆಗಳಲ್ಲಿ ಹೆಚ್ಚು ಸಿಬ್ಬಂದಿ ಕೆಲವು ಕಡೆ ಕಡಿಮೆ ಸಿಬ್ಬಂದಿ ಇರಬಹುದು ಇಂತಹ ಸಮಸ್ಯೆಗಳನ್ನು ಕೆಲವು ಆಡಳಿತಾತ್ಮಕ ಬದಲಾವಣೆಗಳನ್ನು ತಂದು ಸರಿಪಡಿಸುವುದು ಸರಕಾರದ ಕರ್ತವ್ಯ. ಓಟ್ ಬ್ಯಾಂಕಿಗಾಗಿ ನಾನಾ ಸಮುದಾಯಗಳನ್ನು ಓಲೈಸುವ ಅನವಶ್ಯಕ ಭಾಗ್ಯ ಯೋಜನೆಗಳನ್ನು ತಂದು ಅವುಗಳ ಕಾರ್ಯಾನುಷ್ಠಾನಕ್ಕೆ ಅತೀಯಾಗಿ ರಾಜ್ಯ ಬೊಕ್ಕಸದ ಸುರಿಯುವದನ್ನು ಬಿಟ್ಟು ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯದಂತಹ ಗುರುತರ ಯೋಜನೆಗಳನ್ನು ತರುವ ನಿಟ್ಟಿನಲ್ಲಿ ಸರಕಾರಗಳು ಕಾರ್ಯ ನಿರ್ವಹಿಸಬೇಕು.

ಕೇವಲ ಈ ಹುದ್ದೆಗಳ ಭರ್ತಿಗಾಗಿ ಬಹುಕೋಟಿ ಆರ್ಥಿಕ ಹೊರೆ ರಾಜ್ಯ ಬೊಕ್ಕಸಕ್ಕಾಗುತ್ತದೆ ಎಂದು ಹೇಳುವ ಸರಕಾರ ಈ ಹಣವನ್ನು ಪುನಃ ಸಂಗ್ರಹಿಸುವಂತಹ ಯೋಜನೆಗಳನ್ನು ಹೊಂದರುವುದು ಅತ್ಯಗತ್ಯ. ನಿರುದ್ಯೋಗಿಗೆ ಒಂದು ಉದ್ಯೋಗ ಕೊಡಲು ಆರ್ಥಿಕ ಹೊರೆಯಾಗುತ್ತದೆಂದರೆ ಪುಢಾರಿಗಳು ಬಹುಕೋಟಿ ಹಗರಣಗಳನ್ನು ಮಾಡಲು ಎಲ್ಲಿಂದ ಹಣ ಬರುತ್ತದೆ? ಅದು ರಾಜ್ಯ ಬೊಕ್ಕಸಕ್ಕೆ ಆರ್ಥಿಕ ಹೊರೆಯಾಗುವುದಿಲ್ಲವೇ! ಘನ ಸರಕಾರ ಇದರ ಬಗ್ಗೆ ಗಂಭೀರವಾಗಿ ಯೋಚಿಸಿ. ಕೇವಲ ಆರ್ಥಿಕ ಪರಿಣಾಮದ ನೆಪ ಒಡ್ಡದೇ, ಉದ್ಯೋಗ ಕಡಿತ ಮಾಡದೇ, ನಿರುದ್ಯೋಗಿಗೊಂದು ಉದ್ಯೋಗ ಕೊಡಿಸಿ ಪುಣ್ಯ ಕಟ್ಟಿಕೊಳ್ಳುತ್ತಾರೋ ಕಾದು ನೊಡೋಣ.

Tags

Related Articles

Leave a Reply

Your email address will not be published. Required fields are marked *

Language
Close