ವಿಶ್ವವಾಣಿ

ಸೆಪ್ಟೆಂಬರ್‌ನಲ್ಲಿ ಅಮೆರಿಕ-ಭಾರತದ ನಡುವೆ 2+2 ಭೇಟಿ

ದೆಹಲಿ: ಎರಡು ಬಾರಿ ರದ್ದಾಗಿರುವ ಭಾರತ-ಅಮೆರಿಕ ನಡುವಿನ 2+2 ಮಾತುಕತೆಯು ಮುಂಬರುವ ಸೆಪ್ಟೆಂಬರ್‌ 6ರಂದು ದೆಹಲಿಯಲ್ಲಿ ಜರುಗಲಿದೆ ಎಂದು ಶ್ವೇತಭವನದ ಮೂಲಗಳು ಸ್ಪಷ್ಟಪಡಿಸಿವೆ.

“ಅಮೆರಿಕ-ಭಾರತ ನಡುವಿನ ಉದ್ಘಾಟನಾ 2+2 ಸಭೆ ದೆಹಲಿಯಲ್ಲಿ ಜರುಗಲಿದೆ ಎಂದು ಘೋಷಿಸಲು ಅಮೆರಿಕ ಹರ್ಷಿಸುತ್ತದೆ” ಎಂದು ಅಮೆರಿಕ ಸರಕಾರದ ವಕ್ತಾರೆ ಹೀಥರ್‌ ನೌರ್ಟ್ ತಿಳಿಸಿದ್ದಾರೆ.

ಉಭಯ ದೇಶಗಳ ನಡುವಿನ ವ್ಯೂಹಾತ್ಮಕ ರಕ್ಷಣಾ ಪಾಲುದಾರಿಕೆಗೆ ಇನ್ನಷ್ಟು ಬಲ ತುಂಬಲು ಈ ಸಭೆ ನಡೆಯಲಿದ್ದು, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಹಾಗು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಭಾರತದ ಪ್ರತಿನಿಧಿಗಳಾದರೆ, ಅಮೆರಿಕದ ಅವರ ಸಹವರ್ತಿಗಳಾದ ಮೈಕ್‌ ಪಾಂಪೆಯ್‌ ಹಾಗು ಜಿಮ್‌ ಮ್ಯಾಟಿಸ್‌ ಕೂಡಾ ಇರಲಿದ್ದಾರೆ.

ಇದೇ ಸಭೆ ಈ ತಿಂಗಳ ಆರಂಭದಲ್ಲಿ ಜರುಗಬೇಕಿತ್ತು. ಆದರೆ ಕಾರಣಾಂತರಗಳಿಂದ ಸಭೆಯನ್ನು ಅಮೆರಿಕ ರದ್ದುಪಡಿಸಿತ್ತು. ಉತ್ತರ ಕೊರಿಯಾದಲ್ಲಿ ಪಾಂಪೆಯೋಗೆ ಮಹತ್ವದ ಕೆಲಸವಿದ್ದ ಕಾರಣ ಭೇಟಿಯನ್ನು ರದ್ದು ಮಾಡಲಾಗಿತ್ತು ಎಂದು ಕಾರಣ ನೀಡಲಾಗಿತ್ತು.

ರಷ್ಯಾದಿಂದ ಎಸ್‌-400 ಕ್ಷಿಪಣಿ ರಕ್ಷಾ ಕವಚ ವ್ಯವಸ್ಥೆ ಖರೀದಿ ಮಾಡಲು ಭಾರತ ಮುಂದಾದ ಕಾರಣ ಅಮೆರಿಕ ಮುನಿಸಿಕೊಂಡು ಭೇಟಿಯನ್ನು ರದ್ದು ಮಾಡಿದೆ ಎಂದು ಹೇಳಲಾಗುತ್ತಿತ್ತು.