About Us Advertise with us Be a Reporter E-Paper

ಗುರು

ವಿದೇಶದಲ್ಲಿ ಯೋಗ ಶಿಕ್ಷಣ ನೀಡಿದ ಮೊದಲ ಮಹಿಳೆ ಇಂದ್ರಾ ದೇವಿ

- ಶಶಿಧರ ಹಾಲಾಡಿ

ವಿದೇಶೀ ಮಹಿಳೆಯೊಬ್ಬರು ಯೋಗಾಭ್ಯಾಸ ಕಲಿಯಬೇಕು ಎಂದು ಮುಂದೆ ಬಂದಾಗ, ಕಲಿಸಲು ಯಾರೂ ದೊರಕಲಿಲ್ಲ. ಆಗ ಮೊರೆ ಹೋದದ್ದು ಮೈಸೂರು ಮಹಾರಾಜರನ್ನು. ಮಹಾರಾಜರ ಸಲಹೆಯ ಮೇರೆಗೆ, ಮೈಸೂರಿನಲ್ಲಿದ್ದ ಯೋಗ ಗುರು ತಿರುಮಲೆ ಕೃಷ್ಣಮಾಚಾರ್ಯರಲ್ಲಿ ಯೋಗಾಭ್ಯಾಸ ಕಲಿತು, ಅಂತಾರಾಷ್ಟ್ರೀಯ ಖ್ಯಾತಿಯ ಯೋಗ ಗುರುವಾಗಿ ಹೊರಹೊಮ್ಮಿದ ರಷ್ಯನ್ ಮಹಿಳೆಯೇ ಇಂದ್ರಾ ದೇವಿ.

1917ರಲ್ಲಿ ರಷ್ಯಾದಲ್ಲಿ ಕ್ರಾಂತಿಯಾದ ಸಂದರ್ಭದಲ್ಲಿ ಸಾಮ್ರಾಜ್ಯಶಾಹಿ ಆಡಳಿತಗಾರರನ್ನು ನಾಶ ಮಾಡಿದ್ದು ಇತಿಹಾಸದಲ್ಲಿ ದಾಖಲಾಗಿದೆಯಷ್ಟೆ; ಆ ಸಂದರ್ಭದಲ್ಲಿ, ಗೊತ್ತಿದ್ದೊ ಗೊತ್ತಿಲ್ಲದೆಯೋ, ಆಧುನಿಕ ಯೋಗಾಭ್ಯಾಸ ಪದ್ಧತಿಗೆ ಒಂದು ಲಾಭವಾಯಿತು. ಕಲೆ, ಸಂಸ್ಕೃತಿ ಮತ್ತು ಅಧ್ಯಾತ್ಮದಲ್ಲಿ ಆಸಕ್ತಿ ಹೊಂದಿದ್ದ ಮಹಿಳೆಯೋರ್ವಳು, ಅಂತಾರಾಷ್ಟ್ರೀಯ ಖ್ಯಾತಿಯ ಯೋಗ ಪಟುವಾಗಿ ಹೊರಹೊಮ್ಮಲು ರಷ್ಯಾದ ಆ ತಲ್ಲಣಭರಿತ ದಿನಗಳೂ ಕಾರಣ!

ಇವರ ಮೂಲ ಹೆಸರು ಯೂಜಿನಿ ವಿ. ಪೀಟರ್‌ಸನ್. ರಷ್ಯಾದ ರೀಗಾ ಪಟ್ಟಣದಲ್ಲಿ 1899ರಲ್ಲಿ ಜನಿಸಿದ ಯೂಜಿನಿಗೆ ಆರಂಭದಿಂದಲೇ ಭಾರತೀಯ ಸಂಸ್ಕೃತಿಯ ಕುರಿತು ಆಸಕ್ತಿ. ಅಂದಿನ ದಿನಗಳಲ್ಲಿ ರವೀಂದ್ರನಾಥ ಟಾಗೋರರ ಪುಸ್ತಕಗಳು ಆಕೆಯ ಆಸಕ್ತಿಯನ್ನು ಕೆರಳಿಸಿದ್ದವು. ಆಕೆಯ ತಂದೆ ಬ್ಯಾಂಕೊಂದರ ನಿರ್ದೇಶಕರಾಗಿದ್ದು, ಅವರದ್ದು ಶ್ರೀಮಂತ ಕುಟುಂಬ; ಬಾಲ್ಯದಲ್ಲೇ ಯೂಜಿನಿ ನೃತ್ಯ ಕಲಿತಿದ್ದರು, ಜತೆಗೆ ಆಕೆಗೆ ಆಸಕ್ತಿ.

1917ರಲ್ಲಿ ರಷ್ಯಾದಲ್ಲಿ ಕ್ರಾಂತಿಯಾಯಿತು; ಕಮ್ಯುನಿಸ್ಟರು ತಮ್ಮ ಅಧಿಕಾರವನ್ನು ಸ್ಥಾಪಿಸುವ ಸಂದರ್ಭದಲ್ಲಿ ಎಲ್ಲೆಡೆ ಅಸ್ಥಿರತೆ, ಹಿಂಸೆ, ಗಲಾಟೆ, ಸ್ಥಿತಿವಂತ ಕುಟುಂಬಗಳ ಲೂಟಿ ನಡೆಯುತ್ತಿದ್ದವು; ಅಲ್ಲಿನ ಹಿಂಸೆ, ಗಲಾಟೆಗೆ ಬೆದರಿ, ಯೂಜಿನಿ ಮತ್ತು ಅವರ ತಾಯಿ ಜರ್ಮನಿಗೆ ಪಲಾಯನ ಮಾಡಿದರು. ಬರ್ಲಿನ್‌ನಲ್ಲಿ ಆಕೆ ನಟಿ ಮತ್ತ ನೃತ್ಯಗಾತಿಯಾಗಿ ಜೀವನ ನಡೆಸುತ್ತಿರುವಾಗಲೇ, ಭಾರತದ ಅಂದಿನ ಸಿನಿಮಾರಂಗ ಕೈಬೀಸಿ ಕರೆಯಿತು. ಮುಂಬಯಿಯ ಬಣ್ಣದ ಲೋಕದಲ್ಲಿ ವಿಹರಿಸುವಾಗ ಆಕೆ ತನ್ನ ಹೆಸರನ್ನು ಇಂದ್ರಾ ದೇವಿ ಬದಲಾಯಿಸಿಕೊಂಡರು.

ಮೊದಲ ವಿದೇಶೀ ಮಹಿಳೆ
ಭಾರತದ ಅಧ್ಯಾತ್ಮ ಪರಂಪರೆ ಮತ್ತು ಯೋಗಾಭ್ಯಾಸ ಇಂದ್ರಾ ದೇವಿಯವರನ್ನು ಅತಿಯಾಗಿ ಆಕರ್ಷಿಸಿತು; ಅವರು ಯೋಗಾಭ್ಯಾಸದ ಮೋಡಿಗೆ ಒಳಗಾದರು. ಆದರೆ, ನಮ್ಮ ದೇಶದಲ್ಲಿ ಅಂದು ಇದ್ದ ಕೆಲವು ಮೂಢನಂಬಿಕೆಗಳ ಫಲವಾಗಿ, ಯಾರೂ ಈ ವಿದೇಶೀ ಮಹಿಳೆಗೆ ಯೋಗಾಭ್ಯಾಸದ ತರಬೇತಿ ನೀಡಲು ಮುಂದೆ ಬರಲಿಲ್ಲ. ವಿದೇಶೀಯರಿಗೆ ತಾವು ಯೋಗ ಕಲಿಸುವುದಿಲ್ಲ ಎಂಬುದೇ ಅಂದಿನ ಹೆಚ್ಚಿನ ಪ್ರಖ್ಯಾತ ಯೋಗಾ ಶಿಕ್ಷಕರ ನಿಲುವಾಗಿತ್ತು.

ಆಗ ಇಂದ್ರಾದೇವಿ ಮೊರೆ ಹೋಗಿದ್ದು ಮಹಾರಾಜರನ್ನು. ಇತಿಹಾಸವನ್ನು ನೋಡುತ್ತಾ ಹೋದಂತೆ, ಮೈಸೂರು ಮಹಾರಾಜರು ಅದೆಷ್ಟು ವಿಧದ ಕ್ರಾಂತಿಕಾರಿ, ಒಳ್ಳೆಯ ಕ್ರಮಗಳನ್ನು ಕೈಗೊಂಡಿದ್ದಾರೆ, ಇದು ಅಚ್ಚರಿ ಎನಿಸುತ್ತದೆ. ಈ ರಷ್ಯನ್ ಮಹಿಳೆಗೆ ಯೋಗಾಭ್ಯಾಸ ಕಲಿಸಿಕೊಡುವಂತೆ ಮೈಸೂರಿನ ಯೋಗ ಗುರು ತಿರುಮಲೆ ಕೃಷ್ಣಮಾಚಾರ್ಯ ಅವರನ್ನು ಮಹಾರಾಜರು ವಿನಂತಿಸಿಕೊಂಡರು. ಮಹಾರಾಜರ ಆಶ್ರಯದಲ್ಲೇ ಅಂದು ಮೈಸೂರಿನಲ್ಲಿ ಯೋಗ ಪಾಠಶಾಲೆ ನಡೆಯುತ್ತಿತ್ತು. ಇಂದ್ರಾ ದೇವಿಯು ಮೊತ್ತ ಮೊದಲ ವಿದೇಶಿ ಮಹಿಳೆಯಾಗಿ ಅಲ್ಲಿ ಯೋಗಾಭ್ಯಾಸ ಕಲಿತರು. ತಿರುಮಲೆ ಕೃಷ್ಣಮಾಚಾರ್ಯರ ವಿಶಿಷ್ಟ ಶಿಷ್ಯೆಯರಲ್ಲಿ ಇಂದ್ರಾ ಒಬ್ಬರು. ಈಕೆಯ ನಿಷ್ಟೆ, ಕಠಿಣ ಆಸನಗಳನ್ನು ಕರಗತ ಮಾಡಿಕೊಳ್ಳುವಲ್ಲಿ ತೋರಿದ ಶ್ರಮ ಇವುಗಳನ್ನು ಗಮನಿಸಿ, ತಿರುಮಲೆ ಕೃಷ್ಣಮಾಚಾರ್ಯರು ಇಂದ್ರಾ ದೇವಿಯನ್ನು ಯೋಗ ಶಿಕ್ಷಕಿಯನ್ನಾಗಿ ತರಬೇತಿಗೊಳಿಸಿದರು. ಇದು ನಡೆದದ್ದು 1938ರಲ್ಲಿ.

ಈ ಮಧ್ಯೆ, ಜೆಕೋಸ್ಲೋವಿಯಾದ ದೂತಾವಾಸದ ಉದ್ಯೋಗಿಯಾಗಿದ್ದ ಇಂದ್ರಾ ದೇವಿಯ ಪತಿಯವರಿಗೆ ಚೀನಾಕ್ಕೆ ವರ್ಗಾವಣೆ ಆಯಿತು. 1939ರಲ್ಲಿ ಚೀನಾಕ್ಕೆ ಹೋದ ಇಂದ್ರಾ ದೇವಿ, ಅಲ್ಲಿಯೂ ಯೋಗಾಭ್ಯಾಸದ ತರಗತಿಗಳನ್ನು ನಡೆಸಿದ್ದು ನಿಜಕ್ಕೂ ವಿಶೇಷ. ಷಾಂಗೈನಲ್ಲಿ ಯೋಗಾಭ್ಯಾಸದ ತರಗತಿಗಳನ್ನು ನಡೆಸಿ, ಚೀನಾದಲ್ಲಿದ್ದ ವಿದೇಶೀಯರಿಗೆ ಪರಿಚಯ ಮಾಡಿಸಿದರು. ಚೀನಾದಲ್ಲಿದ್ದ ಅನಾಥಾಲಯಗಳಲ್ಲೂ ಇಂದ್ರಾದೇವಿ ಯೋಗಾಭ್ಯಾಸ ತರಗತಿಗಳನ್ನು ನಡೆಸಿದರು.

ಹಾಲಿವುಡ್ ತಾರೆಯರ ಗುರು
ಮೈಸೂರಿನ ತಿರುಮಲೆ ಕೃಷ್ಣಮಾಚಾರ್ಯರಿಂದ ಯೋಗದಲ್ಲಿ ತರಬೇತಿ ಪಡೆದ ಇಂದ್ರಾ ದೇವಿಯರ ಉನ್ನತ ಸಾಧನೆ ಎಂದರೆ, ಅಮೆರಿಕಾದ ಹಾಲಿಉಡ್‌ನ ಕಲಾವಿದರಿಗೆ ಯೋಗಾಭ್ಯಾಸವನ್ನು ಕಲಿಸಿದ್ದು. ತನ್ನ ಪತಿಯ ಮರಣಾನಂತರ, 1947ರಲ್ಲಿ ಇಂದ್ರಾ ದೇವಿಯು ಅಮೆರಿಕಾಕ್ಕೆ ವಲಸೆ ಹೋಗಿ, ಹಾಲಿವುಡ್‌ನಲ್ಲಿ ಯೋಗ ಶಿಕ್ಷಣ ಕೇಂದ್ರವನ್ನು ಸ್ಥಾಪಿಸಿದರು. ಯೋಗಾಭ್ಯಾಸವು ಒಂದು ಫ್ಯಾಷನ್ ಆಗಿ ಅಮೆರಿಕಾದಲ್ಲಿ ಜನಪ್ರಿಯತೆಯನ್ನು ಪಡೆಯುತ್ತಿದ್ದ ಕಾಲ ಜತೆಗೆ ಯೋಗಾಭ್ಯಾಸ, ಪ್ರಾಣಾಯಾಮ ಮತ್ತು ಉಸಿರಾಟದ ಅಭ್ಯಾಸಗಳಿಂದ ಹಲವು ರೋಗಗಳನ್ನು ದೂರವಿಡಬಹುದು ಮತ್ತು ಅಂಗಸೌಷ್ಟವವನ್ನು ಕಾಪಾಡಿಕೊಳ್ಳಬಹುದು ಎಂಬ ಪ್ರಚಾರವೂ ಸೇರಿಕೊಂಡು, ಹಾಲಿವುಡ್‌ನಲ್ಲಿದ್ದ ಇವರ ಯೋಗ ಸ್ಟುಡಿಯೋ ಅಪಾರ ಜನಪ್ರಿಯತೆ ಪಡೆಯಿತು. ಅಂದಿನ ಖ್ಯಾತ ನಟಿಯರು ಮತ್ತು ಕಲಾವಿದರಾದ ಗ್ರೆಟಾ ಗಾರ್ಬೊ, ಜೆನ್ನಿಫರ್‌ಜೋನ್‌ಸ್, ಇವಾ ಗೇಬರ್, ಗ್ಲೋರಿಯಾ ಸ್ವಾನ್‌ಸನ್, ಯಹೂದಿ ಮೆನುಹಿನ್ ಮೊದಲಾದವರಿಗೆ ಯೋಗಾಭ್ಯಾಸ ಕಲಿಸಿದ ಖ್ಯಾತಿ ಇಂದ್ರಾ ದೇವಿಯವರದ್ದು. ಪ್ರಾಣಾಯಾಮ, ಯೋಗಾಸನ, ಉಸಿರಾಟದ ವ್ಯಾಯಾಮ ಮೊದಲಾದವುಗಳ ಮೂಲಕ ಈ ಪದ್ಧತಿಯನ್ನು ಇಂದ್ರಾ ದೇವಿ ಕಲಿಸುತ್ತಿದ್ದರು.

1970ರ ದಶಕದಲ್ಲಿ ಪುಟ್ಟಪರ್ತಿಯ ಸತ್ಯ ಸಾಯಿ ಬಾಬಾರ ಅನುಯಾಯಿಯಾಗಿದ್ದ ಇಂದ್ರಾ ದೇವಿ, ಆ ದಿನಗಳಲ್ಲಿ ಹಲವು ಬಾರಿ ಬೆಂಗಳೂರು ಮತ್ತು ಪುಟ್ಟಪರ್ತಿಗೆ ಬರುತ್ತಿದ್ದುದುಂಟು. 1984ರ ತನಕ ಇವರು ಬೆಂಗಳೂರಿನಲ್ಲೇ ವಾಸಿಸುತ್ತಿದ್ದರು. 1985ರಲ್ಲಿ ಅರ್ಜೆಂಟೀನಾಕ್ಕ ಹೋಗಿ, ಅಲ್ಲೂ ಯೋಗಾ ತರಗತಿಗಳನ್ನು ನಡೆಸುತ್ತಾ ಖ್ಯಾತರಾದರು. ಅಂತಾರಾಷ್ಟ್ರೀಯ ಯೋಗ ಫೆಡರೇಷನ್‌ನ ಗೌರವ ಕಾರ್ಯದರ್ಶಿಯೂ ಆಗಿ ಖ್ಯಾತರಾದ ಇಂದ್ರಾ ದೇವಿ, 2002ರಲ್ಲಿ ಅರ್ಜೆಂಟೀನಾದಲ್ಲಿ ನಿಧನರಾಗುತ್ತಾರೆ. ಪಾಶ್ಚಿಮಾತ್ಯ ಜತ್ತಿನಲ್ಲಿ ಯೋಗಾಭ್ಯಾಸವು ಪಡೆಯಲು ಇಂದ್ರಾ ದೇವಿಯ ಕೊಡುಗೆ ಅಪಾರ.

Tags

Related Articles

Leave a Reply

Your email address will not be published. Required fields are marked *

Language
Close