ಸಂವಿಧಾನ ಮತ್ತು ದಲಿತರ ಕೆಣಕುವ ತಾಕತ್ತು ಯಾರಿಗೂ ಇಲ್ಲ

Posted In : ಸಂಗಮ, ಸಂಪುಟ

ಡಿ.ಎಸ್.ವೀರಯ್ಯ, ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ

ಸಂದರ್ಶನ: ವೆಂಕಟೇಶ ಆರ್.ದಾಸ್

ದಲಿತ ಸಮುದಾಯ ರಾಜ್ಯ ರಾಜಕೀಯದಲ್ಲಿ ಎನಿಸಿಕೊಂಡಿದೆ. ಕಾಂಗ್ರೆಸ್‌ನ ವೋಟ್ ಬ್ಯಾಂಕ್ ಎನಿಸಿದ್ದ ದಲಿತರನ್ನು ಸೆಳೆಯಲು ಬಿಜೆಪಿ ಇತ್ತೀಚೆಗೆ ಸರ್ವಪ್ರಯತ್ನ ನಡೆಸುತ್ತಿದೆ. ಸ್ಲಂ, ಹಾಸ್ಟೆಲ್ ವರದಿ ಬಿಡುಗಡೆ ಮಾಡುವ ಮೂಲಕ ಮತ್ತು ‘ಸ್ಲಂ ವಾಸ್ತವ್ಯ’ ದ ಮೂಲಕ ದಲಿತ ಮತ ಸೆಳೆಯುವ ಯತ್ನ ನಡೆಸಿದೆ. ಇದರ ನಡುವೆ ಅನಂತ ಕುಮಾರ್ ಹೆಗಡೆ ಸೇರಿ ಕೆಲವರ ದಲಿತ ವಿರೋಧಿ ಹೇಳಿಕೆ ಪಕ್ಷಕ್ಕೆ ಹಿನ್ನಡೆಯೂ ಆಗಿದೆ. ಈ ಬೆಳವಣಿಗೆಗಳ ಕುರಿತು ಬಿಜೆಪಿ ಎಸ್‌ಸಿ ಮೋರ್ಚಾದ ರಾಜ್ಯಾಧ್ಯಕ್ಷ ಡಿ.ಎಸ್. ವೀರಯ್ಯ ಜತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಸ್ಲಂ ವಾಸ್ತವ್ಯ, ಸ್ಲಂ ಮತ್ತು ಹಾಸ್ಟೆಲ್ ವರದಿ ಬಿಜೆಪಿಗೆ ಹೇಗೆ ಉಪಯುಕ್ತ?

ಕಳೆದ ನಾಲ್ಕೂವರೆ ವರ್ಷದಲ್ಲಿ ನಾವು ದಲಿತರ ಉದ್ಧಾರಕ್ಕಾಗಿ 80 ಸಾವಿರ ಕೋಟಿ ರು. ಖರ್ಚು ಮಾಡಿದ್ದೇವೆ ಎಂದು ಸುಳ್ಳುಹೇಳುವ ಸರಕಾರ ಹಾಸ್ಟೆಲ್‌ಗಳ ಉನ್ನತೀಕರಣ ಏಕೆ ಮಾಡಲಿಲ್ಲ. ದಲಿತರ ಉದ್ಧಾರಕ್ಕೆ ಮೂಲಭೂತವಾಗಿ ಬೇಕಿರುವುದು ವಿದ್ಯೆ. ಇಂತಹ ವಿದ್ಯೆ ಸಿಗುವ ಸ್ಥಳಗಳನ್ನು ಏಕೆ ನಿರ್ಲಕ್ಷ್ಯಿಸಿದ್ದಾರೆ. ಹಾಸ್ಟೆಲ್ ವರದಿಯನ್ನು ನಾನು ಖುದ್ದಾಗಿ ಭೇಟಿ ನೀಡಿ ಅಲ್ಲಿನ ವಾಸ್ತವ ಅರಿವಾಗಿದೆ. ಒಂದು ಕೋಣೆಯಲ್ಲಿ ಹತ್ತು ವಿದ್ಯಾರ್ಥಿಗಳು ಮಲಗುತ್ತಿದ್ದಾರೆ. ಅವರಿಗೆ ಮೂರು ಟೇಬಲ್, ಎರಡು ಮಂಚ, ಕಲಬೆರೆಕೆ ಕಾಳು, ಬೇಳೆ, ಆಹಾರ ನೀಡಲಾಗುತ್ತಿದೆ. ಅದೇ ರೀತಿ ಸ್ಲಂಗಳ ಸ್ಥಿತಿಯೂ ಇದೆ. ಹೀಗಾಗಿ, ನಾವು ಸರಕಾರದ ಕಣ್ಣು ತೆರೆಸುವ ಪ್ರಯತ್ನ ಮಾಡುತ್ತಿದ್ದೇವೆ.

ವರದಿ ಮತ್ತು ಸ್ಲಂ ವಾಸ್ತವ್ಯದಿಂದ ದಲಿತರ ಸಮಸ್ಯೆ ಬಗೆಹರಿಯುತ್ತಾ?

ನಾವು ಬರೀ ವರದಿ ನೀಡುತ್ತಿಲ್ಲ. ನಮ್ಮ ಸರಕಾರದ ಅವಧಿಯಲ್ಲಿ ಅನೇಕ ಮೊರಾರ್ಜಿ ಶಾಲೆಗಳನ್ನು ತೆರೆದಿದ್ದೇವೆ. ಹಾಸ್ಟೆಲ್‌ಗಳ ಸುಧಾರಣೆಗೆ ಅಗತ್ಯವಾದ ರೂಪುರೇಷೆಯನ್ನು ಈಗಲೇ ರೂಪಿಸುತ್ತೇವೆ. ನಮ್ಮ ಸರಕಾರ ಅಧಿಕಾರಕ್ಕೆ ಬಂದ ತಕ್ಷಣವೇ ಜಾರಿಗೆ ತರುತ್ತೇವೆ. ಕಾಂಗ್ರೆಸ್ ಸರಕಾರ ಪ.ಜಾತಿ ಮತ್ತು ಪಂಗಡಗಳಿಗೆ ಮೀಸಲಿಟ್ಟ ಶೇ.40 ರಷ್ಟು ಹಣವನ್ನು ಖರ್ಚು ಮಾಡಿಲ್ಲ. ಸುಮ್ಮನೆ ದಲಿತರ ಪರ ಎಂದರೆ ಏನು ಪ್ರಯೋಜನವಿಲ್ಲ. ದಲಿತರಿಗೆ ನೇರವಾಗಿ ತಲುಪುವ ಕೆಲಸ ಆಗಬೇಕು. ಅದನ್ನು ಬಿಟ್ಟು ಅಂಬೇಡ್ಕರ್ ಹೆಸರಿನ ಅಂತರಾಷ್ಟ್ರೀಯ ಸೆಮಿನಾರ್ ನಡೆಸಿ ಅದಕ್ಕೆ ಈ ಅನುದಾನ ಖರ್ಚು ಮಾಡುವುದು, ಸಮಾವೇಶದ ಹೆಸರಿನಲ್ಲಿ ತಮ್ಮನ್ನು ವೈಭವೀಕರಿಸಿಕೊಳ್ಳುವುದನ್ನು ಈ ಸರಕಾರದ ಅವಧಿಯಲ್ಲಿ ಹೆಚ್ಚಾಗಿ ಮಾಡುತ್ತಿದ್ದಾರೆ.

ಬಿಜೆಪಿ ಸರಕಾರ ದಲಿತರ ಉದ್ಧಾರಕ್ಕಾಗಿ ಮಾಡಿದ್ದೇನು?

ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ನಾವು ದಲಿತರ ಏಳಿಗೆಗಾಗಿ ಅನೇಕ ಕಾರ್ಯಕ್ರಮ ನೀಡಿದ್ದೇವೆ. ದಲಿತರನ್ನು ಆರ್ಥಿಕ ಸ್ವಾವಲಂಭಿಗಳನ್ನಾಗಿಸಲು ಕೈಗಾರಿಕೆ ಸ್ಥಾಪನೆಗೆ ಸಹಾಯಧನ ನೀಡುವುದು, ಕೈಗಾರಿಕೆ ಸ್ಥಾಪನೆ ಜಮೀನು ನೀಡುವುದು ಸೇರಿದಂತೆ ಅನೇಕ ಕಾರ್ಯ ಮಾಡಿದ್ದೇವೆ. ಜತೆಗೆ, ಆಯಾ ವರ್ಷದ ಅನುದಾನವನ್ನು ಆಯಾ ವರ್ಷವೇ ಖರ್ಚು ಮಾಡಿದ್ದೇವೆ. ಎಸ್‌ಸಿಟಿಪಿ ನಾವು ಆರಂಭ ಮಾಡಿದ್ದೇವೆ. ಇವರು ಮುಂದುವರಿಸಿಕೊಂಡು ಹೋಗಬೇಕು ತಾನೆ? ಆದರೆ, ಅವರು ಮಾಡುತ್ತಿರುವುದೇನು?

ಬಿಜೆಪಿ ನಾಯಕರ ಸ್ಲಂ ವಾಸ್ತವ್ಯದಿಂದ ಪ್ರಯೋಜನವೇನು?

ಸ್ಲಂಗಳಲ್ಲಿ ನಾವು ಸುಮ್ಮನೇ ವಾಸ್ತವ್ಯ ಮಾಡುತ್ತಿಲ್ಲ. ಅಲ್ಲಿನ ಅಮಾಯಕ ಜನರಿಗೆ ಸಾಂತ್ವನ ಮತ್ತು ಧೈರ್ಯ ತುಂಬುವ ಕಾರ್ಯ ಮಾಡುತ್ತಿದ್ದೇವೆ. ನಿಮ್ಮ ಪರ ನಾವಿದ್ದೇವೆ ಎಂಬ ಸಂದೇಶ ರವಾನೆ ಮಾಡುತ್ತಿದ್ದೇವೆ. ಅಲ್ಲಿನ ಜನರ ಸಮಸ್ಯೆ ಆಲಿಸುತ್ತಿದ್ದೇವೆ. ಬಿಜೆಪಿ ನಮ್ಮ ಸಂಕಷ್ಟಕ್ಕೆ ಸ್ಪಂದಿಸುತ್ತದೆ ಎಂಬ ಭಾವನೆ ಜನರಲ್ಲಿ ಮೂಡುತ್ತಿದೆ. ಹೀಗಾಗಿ, ಇದೊಂದು ಒಳ್ಳೆಯ ಕಾರ್ಯಕ್ರಮ. ದಲಿತರ ಮನೆಗೆ ಹೋಗಿ ಬರೀ ಊಟ ಮಾಡಿ ಎದ್ದು ಬರುತ್ತಿಲ್ಲ. ಅಲ್ಲೊಂದು ಸಭೆ ಮಾಡಿ ಜನರ ಮನವಿ ಸ್ವೀಕಾರ ಮಾಡಿದ್ದೇವೆ. ನಾವು ಜನರ ಬಳಿಗೆ ಅಧಿಕಾರ ಇದ್ದಾಗಲೂ ಹೋಗಬೇಕು. ಇಲ್ಲದಿದ್ದಾಗಲೂ ಹೋಗಬೇಕು ಎಂಬ ಸಿದ್ಧಾಂತ ನಮ್ಮದು. ಕಾಂಗ್ರೆಸ್ ಸರಕಾರಕ್ಕೆ ಈವರೆಗೆ ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ ನೀಡಲು ಸಾಧ್ಯವಾಗಿಲ್ಲ. ನಮ್ಮ ಅವಧಿಯಲ್ಲಿ ಮಲ್ಟಿ ಸ್ಟೋರೇಜ್ ಬಿಲ್ಡಿಂಗ್ ನಿರ್ಮಾಣ ಮಾಡಿದ್ದೆವು. ಈ ಎಲ್ಲ ಯೋಜನೆ ನಮ್ಮ ಸರಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಮತ್ತೇ ಬರಲಿವೆ.

ಅನಂತಕುಮಾರ್ ಹೆಗಡೆ ದಲಿತ ವಿರೋಧಿ ಹೇಳಿಕೆ ಪಕ್ಷಕ್ಕೆ ಹಿನ್ನಡೆಯಲ್ಲವೇ?

ಅನಂತ ಕುಮಾರ್ ಹೆಗಡೆ ದಲಿತ ವಿರೋಧಿಯಲ್ಲ. ಅವರು ಸಂವಿಧಾನ ಬದಲಾವಣೆ ಮಾಡಬೇಕು ಎಂಬರ್ಥದ ಹೇಳಿಕೆ ನೀಡಿಯೇ ಇಲ್ಲ. ಆದರೆ, ಪತ್ರಕರ್ತರು ಯಾವ ಪ್ರಶ್ನೆ ಕೇಳಿದರೂ, ಅವರ ಉತ್ತರ ಏನು ಎಂಬುದು ಗೊತ್ತಿಲ್ಲ. ಅವರು ಸಂವಿಧಾನಕ್ಕೆ ಕೆಲ ತಿದ್ದುಪಡಿ ತರಬಹುದು ಎಂದು ಹೇಳಿರಬಹುದು. ಸಂವಿಧಾನಕ್ಕೆ ಈಗಾಗಲೇ 85ಕ್ಕೂ ಅಧಿಕ ತಿದ್ದುಪಡಿ ಆಗಿದೆ. ಕಾಲಕಾಲಕ್ಕೆ ಸಂವಿಧಾನ ತನ್ನ ಮೂಲಸ್ವರೂಪದಲ್ಲಿಯೇ ತಿದ್ದುಪಡಿ ಎಂದು ಸ್ವತಃ ಅಂಬೇಡ್ಕರ್ ಅವರೇ ಹೇಳಿದ್ದಾರೆ. ಆದರೆ, ಈ ವಿಚಾರದಲ್ಲಿ ಕಾಂಗ್ರೆಸ್ ಇಲ್ಲದ ಗುಲ್ಲೆಬ್ಬಿಸುತ್ತಿದೆ. ಹೀಗಾಗಿ, ಜನರು ಅಪಾರ್ಥ ಮಾಡಿಕೊಂಡಿದ್ದಾರೆ.

ದಲಿತ ಹೋರಾಟಗಾರರನ್ನು ಬೀದಿನಾಯಿಗಳೀಗೆ ಹೋಲಿಸಿದ್ದು ಪಕ್ಷಕ್ಕೆ ಹಿನ್ನಡೆಯಲ್ಲವೇ?

ಸಂವಿಧಾನ ಬದಲಾವಣೆ ಮತ್ತು ದಲಿತ ಬಗ್ಗೆ ಮಾತನಾಡಲು ಯಾರಿಗೂ ತಾಕತ್ತಿಲ್ಲ. ಹೋರಾಟಗಾರರನ್ನು ಬೀದಿ ನಾಯಿಗಳಿಗೆ ಹೋಲಿಕೆ ಮಾಡಿದ್ದಾರೆ ಎಂಬುದು ಸುಳ್ಳು. ಯಾರಿಗೆ ಈ ರೀತಿ ಹೇಳಿದ್ದಾರೆ ಎಂಬುದು ಗೊತ್ತಿಲ್ಲ. ಆದರೆ, ಆ ತಪ್ಪಿಗೆ ಅವರು ಸಂಸತ್ತಿನಲ್ಲಿ ಕ್ಷಮೆ ಕೇಳಿದ್ದಾರೆ. ಸಂದರ್ಭದಲ್ಲಿ ಮೋದಿ ಕೂಡ ಅವರ ಬೆಂಬಲಕ್ಕೆ ನಿಲ್ಲಲಿಲ್ಲ ಎಂಬುದು ಸ್ಪಷ್ಟ. ಹೀಗಾಗಿ, ಇದು ಪಕ್ಷಕ್ಕೆ ಹಿನ್ನಡೆಯಲ್ಲ. ಕಾಂಗ್ರೆಸ್ 70 ವರ್ಷದಲ್ಲಿ ದಲಿತರ ಉದ್ಧಾರಕ್ಕೆ ಮಾಡದ ಕಾರ್ಯಕ್ರಮಗಳನ್ನು ನಾವು ಮಾಡುತ್ತೇವೆ. ಈ ನಿಟ್ಟಿನಲ್ಲಿ ಈಗಾಗಲೇ ಕೇಂದ್ರ ಸರಕಾರ ಅನೇಕ ಕಾರ್ಯಕ್ರಮ ರೂಪಿಸಿದೆ. ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ದಲಿತರ ಉದ್ಧಾರಕ್ಕೆ ಅಗತ್ಯ ಯೋಜನೆ ರೂಪಿಸುತ್ತೇವೆ.

ಬಿಜೆಪಿ ಅಧಿಕಾರಕ್ಕೆ ಬಂದರೆ ದಲಿತರಿಗೆ ಸಿಗುವ ಸ್ಥಾನಮಾನಗಳೇನು?

ಖಂಡಿತ ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ. ಆಗ ದಲಿತರಿಗೆ ಅತ್ಯುತ್ತಮ ಸ್ಥಾನಮಾನಗಳು ಸಿಗಲಿವೆ. ಕೇಂದ್ರ ಸರಕಾರ ದಲಿತರನ್ನು ರಾಷ್ಟ್ರಪತಿ ಮಾಡಿದೆ. ಹೀಗಾಗಿ, ದಲಿತರಿಗೆ ಬಿಜೆಪಿ ಅಧಿಕಾರದಲ್ಲಿ ಸೂಕ್ತ ಸ್ಥಾನಮಾನ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ನಾನು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಯಾವುದೇ ಆಲೋಚನೆ ಮಾಡಿಲ್ಲ. ಲೋಕಸಭೆ ಪ್ರವೇಶ ಮಾಡಬೇಕು ಎಂಬ ಕನಸಿದೆ. ಅದು ಸಾಕಾರಗೊಳ್ಳಲಿದೆ ಎಂಬ ಆಶಯ ಹೊಂದಿದ್ದೇನೆ.

Leave a Reply

Your email address will not be published. Required fields are marked *

four × four =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top