About Us Advertise with us Be a Reporter E-Paper

Uncategorized

ಹೆಣ್ಣು ಸಂತಾನವನ್ನು ಉಳಿಸಬೇಕು ಎಂಬುದು ಕೇವಲ ಘೋಷಣೆಯೆ….?

* ಗೌರೀಶ್

ಹೆಣ್ಣುಮಗು ದೇವರ ವರದಾನ, ದೇಶದ ಶಕ್ತಿ ಮತ್ತು ಅವಳನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ ಎಂಬ ಹೇಳಿಕೆಗಳನ್ನು ಸಾಕಷ್ಟು ಕೇಳಿದ್ದೇವೆ. ಆದರೆ ರಾಮಾಯಣ ಮಹಾಭಾರತ ಕಾಲದಿಂದಲೂ ಹೆಣ್ಣಿನ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ. ಆಸ್ಪತ್ರೆಯ ಬೆಡ್‌ಗಳಲ್ಲಿ ಇರಬೇಕಿರುವ ಹಸುಗೂಸು ಮಗುವನ್ನ ಇಂದು ಕಸದ ಬುಟ್ಪಿಗಳಲ್ಲಿ ಎಸೆದಿರುವ ಘಟನೆಗಳು ಅಲ್ಲಲ್ಲಿ ಮರುಕಳಿಸುತ್ತಿರುವುದು ನಮ್ಮ ಸಮಾಜ ಹಾದಿ ತಪ್ಪುತ್ತಿರುವ ದ್ಯೋತಕ. ಸನಾತನ ಸಂಸ್ಕೃತಿ, ಹೆಣ್ಣಿಗೆ ಅತಿ ಹೆಚ್ಚಿನ ಸ್ಥಾನ ಮಾನ ನೀಡುತ್ತಿರುವ ನಮ್ಮದು ಎಂದು ಹೊಗಳಿಸಿಕೊಂಡ ದೇಶ ನಮ್ಮದು. ಆದರೂ ಇಂತಹ ಸ್ಥಿತಿ ಇಲ್ಲಿ ಇಂದಿಗೂ ಇದೆ. ನಮ್ಮ ಪುರಾಣ, ಇತಿಹಾಸಗಳಲ್ಲಿ ಹಲವು ಕಡೆ ಹೆಣ್ಣಿಗೆ ಅತಿ ಹೆಚ್ಚಿನ ಗೌರವವನ್ನು ನೀಡಿದ ನೂರಾರು ಉದಾಹರಣೆಗಳು ಸಿಗುತ್ತವೆ. ದೇವಿಯನ್ನು, ಅಮ್ಮನವರನ್ನು ಪೂಜಿಸುತ್ತಿರುವ ದೇಶ ನಮ್ಮದು. ಆದರೂ ಹೆಣ್ಣು ಭ್ರೂಣ ಹತ್ಯೆ ಎಂಬ ನಾಚಿಗೆ ಹುಟ್ಟಿಸುವ ವಿದ್ಯಮಾನಕ್ಕೆ ಇಂದಿಗೂ ತಡೆ ಇಲ್ಲ. ವಿಚಿತ್ರ ಎನಿಸುವ ವಿಚಾರವೆಂದರೆ, ವಿಜ್ಞಾನ ಮತ್ತು ತಂತ್ರಜ್ಞಾನ ಮುಂದುವರಿದಂತೆಲ್ಲಾ, ಇಂತಹ ಹೇಯ ಮರುಕಳಿಕೆ ಹೆಚ್ಚಳಗೊಂಡಂತೆ ಅನಿಸುತ್ತಿದೆ.

ನಮ್ಮ ದೇಶದ ಯಾವುದೇ ರಾಜ್ಯದ ಉದಾಹರಣೆ ತೆಗೆದುಕೊಂಡರೂ, ಅಲ್ಲಿನ ನಗರ, ಪಟ್ಟಣ ಮತ್ತು ಹಳ್ಳಿಗಳಲ್ಲಿ ಹೆಣ್ಣು ಭ್ರೂಣ ಹತ್ಯೆಯು ಅಲ್ಲಲ್ಲಿ ಸದ್ದಿಲ್ಲದೆ ನಡೆಯುತ್ತಿದೆ. ಅಲ್ಟ್ರಾ ಸೌಂಡ್ ಡಯಗ್ನೊಸ್ಟಿಕ್ ವಿಧಾನಗಳಂಥ ನವೀನ ಹಾಗೂ ಆಧುನಿಕ ತಾಂತ್ರಿಕತೆಯ ಬೆಳವಣಿಗೆಯಿಂದಾಗಿ ತಾಯಿಯ ಗರ್ಭದಲ್ಲಿ ಭ್ರೂಣಾವಸ್ಥೆಯಲ್ಲಿರುವಾಗಲೆ ಅದರ ಲಿಂಗ ಪತ್ತೆ ಹಚ್ಚುವ ಸಾಧ್ಯತೆಗಳು ಅಧಿಕಗೊಂಡಿರುವುದರ ಪರಿಣಾಮವಾಗಿ ಹೆಣ್ಣು ಭ್ರೂಣ ಹತ್ಯೆಗೆ ದಾರಿ ಮಾಡಿಕೊಟ್ಟಂತಾಗಿದೆ. ಅಂತಹ ವೈದ್ಯಕೀಯ ಕೇಂದ್ರವನ್ನು ನಡೆಸುತ್ತಿರುವ ವೈದ್ಯರು ಸಿಬ್ಬಂದಿ ಇಂತಹದ್ದೊಂದು ಕೆಲಸ ಕಾನೂನು ಬಾಹಿರ ಎಂಬ ಅರಿವಿದ್ದರೂ, ಹಣದ ಆಸೆಗಾಗಿ ಅದನ್ನು ಮುಂದುವರಿಸಿರುವುದು ಎಲ್ಲೆಡೆಯಿಂದ ವರದಿಯಾಗಿದೆ. ದೇಶದ ಎಲ್ಲಾ ಕಡೆಗಳಿಂದಲೂ ಹೆಣ್ಣು ಭ್ರೂಣ ಹತ್ಯೆಯ ಕುರಿತು ತನಿಖಾವರದಿಗಳು ಹೊರಬೀಳುತ್ತಲೇ ಇದ್ದರೂ, ಇದನ್ನು ತಡೆಯಲು ಕಾನೂನು ಪಾಲಕರಿಗೆ ಸಾಧ್ಯವಾಗಿಲ್ಲ. ವೈದ್ಯಕೀಯ ಕ್ಷೇತ್ರದ ಕ್ಷಿಪ್ರ ಬೆಳವಣಿಗೆ, ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಸಹಿತ ಇತರೆ ಆಧುನಿಕ ಪರೀಕ್ಷಾ ವಿಧಾನಗಳಿಂದ ಭ್ರೂಣಲಿಂಗ ಪತ್ತೆ ಚಟುವಟಿಕೆ ಸದ್ದಿಲ್ಲದೆ ನಡೆಯುತ್ತಿದೆ.

ಹೆಣ್ಣು ಮಗುವಿನ ಸುರಕ್ಷತೆ ಮತ್ತು ಶಿಕ್ಷಣದ ಪ್ರತಿಯೊಬ್ಬರೂ ಯೋಚಿಸಬೇಕು. ಹೆಣ್ಣು ಭ್ರೂಣಹತ್ಯೆ, ವರದಕ್ಷಿಣೆ, ಬಾಲ್ಯವಿವಾಹ, ಅತ್ಯಾಚಾರ, ಅದರಲ್ಲೂ ಅಪ್ರಾಪ್ತ ಬಾಲಕಿಯರ ಮೇಲಿನ ಅತ್ಯಾಚಾರ, ಬಡತನ, ಅನಕ್ಷರತೆ, ಲಿಂಗತಾರತಮ್ಯ, ಅಪೌಷ್ಟಿಕತೆ ಮುಂತಾದ ಸಮಸ್ಯೆಗಳಿಂದ ಬಳಲುತ್ತಿರುವ ಹೆಣ್ಣಿಗೆ, ರಕ್ಷಣೆ ನೀಡಬೇಕಾಗಿರುವುದು ಈ ಆಧುನಿಕ ಯುಗದಲ್ಲೂ ಅನಿವಾರ್ಯ. ಭ್ರೂಣಲಿಂಗ ಪತ್ತೆ ಮಾಡುವ ತಂತ್ರ (ದುರ್ಬಳಕೆ ಮತ್ತು ತಡೆ) ಕಾಯ್ದೆ ಜಾರಿಯಲ್ಲಿದ್ದರೂ ಕಟ್ಟುನಿಟ್ಟಾಗಿ ಅನುಷ್ಠಾನಗೊಂಡಿಲ್ಲ. ಈ ಅಪರಾಧ ಎಸಗಿದವರು ಶಿಕ್ಷೆಗೆ ಒಳಗಾಗಿರುವ ನಿದರ್ಶನಗಳು ಅಪರೂಪವಾಗಿವೆ. ಇದರ ಪರಿಣಾಮ ಹೆಣ್ಣು ಶಿಶುಗಳು ಗರ್ಭದಲ್ಲೇ ಇದರಿಂದಾಗಿ ಪುರುಷ ಮತ್ತು ಮಹಿಳೆಯರ ಅನುಪಾತದಲ್ಲಿ ಮಹಿಳೆಯರ ಪ್ರಮಾಣ ಗಣನೀಯವಾಗಿ ಇಳಿಮುಖಗೊಳ್ಳುತ್ತಿದೆ. ಈಗ ನಮ್ಮ ದೇಶದಲ್ಲಿ ಒಂದು ಸಾವಿರ ಗಂಡಸರಿಗೆ ಎಂಟೂನೂರ ಐವತ್ತು ಹೆಂಗಸರಿದ್ದಾರೆ. ಲಿಂಗ ಆಯ್ಕೆ ನಿಷೇಧ ಕಾನೂನು ಉಲ್ಲಂಘನೆ ಮಾಡುವವರ ವಿರುದ್ಧ ಕೇಂದ್ರ-ರಾಜ್ಯ ಸರ್ಕಾರಗಳ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಠಿಣ ಕ್ರಮ ಜರುಗಿಸಬೇಕಲ್ಲವೇ?

ನಮ್ಮ ದೇಶದ ಅಂಕಿ ಅಂಶಗಳನ್ನು ಗಮನಿಸಿದರೆ ನಿಜಕ್ಕೂ ಗಾಬರಿ ಹುಟ್ಟುತ್ತದೆ. ಈ ಅಂಕಿ ಸಂಕಿಗಳು ರಹಸ್ಯವಾಗಿ ಉಳಿದಿಲ್ಲ. ಸರಕಾರದ ಇಲಾಖೆಗಳ ಜಾಲತಾಣಗಳಲ್ಲಿ ಮತ್ತು ಪ್ರಕಟಣೆಗಳಲ್ಲಿ ಇವು ಎಲ್ಲರಿಗೂ ಲಭುಯ. ಈ ಮೂಲಗಳ ಪ್ರಕಾರ ಹುಟ್ಟಿದ ಕ್ಷಣದಿಂದ ಆರು ವರ್ಷದ ಮಕ್ಕಳಲ್ಲಿ ಲಿಂಗ ಅನುಪಾತ (ಸಾವಿರ ಪುರುಷರಿಗೆ ಮಹಿಳೆಯರ ಸಂಖ್ಯೆ) 1991ರಲ್ಲಿ 960 ಇತ್ತು. 2001ರಲ್ಲಿ ಇದು 946ಕ್ಕೆ ಕುಸಿಯಿತು. 2011ರಲ್ಲಿ ಇನ್ನಷ್ಟು ಕುಸಿದು 943 ಆಗಿದೆ. ದೇಶದಲ್ಲಿ ಈ ಅನುಪಾತ 1991ರಲ್ಲಿ 945 ಇದ್ದದ್ದು 2001ರಲ್ಲಿ 927ಕ್ಕೆ ಇಳಿದು, 2011ರಲ್ಲಿ 914 ಕ್ಕೆ ಕುಸಿದಿದೆ. ಹೊಸ ತಂತ್ರಜ್ಞಾನ ಮತ್ತು ಲೆಕ್ಕ ಹಾಕಿದಾಗ, ಈಗಿನ ಸ್ಥಿತಿಯೇ ಮುಂದುವರಿದರೆ, ಈ ಅನುಪಾತವು 2021ರಷ್ಟರಲ್ಲಿ 850ಕ್ಕೆ ಕುಸಿಯಲಿದೆ ಎಂದು ಪ್ರಕಟಿಸಲಾಗಿದೆ. ಹೆಣ್ಣುಮಕ್ಕಳು ಬೇಡವೆಂದು ಹೆತ್ತ ನಂತರ ಕಸದ ಬುಟ್ಟಿಗಳಲ್ಲಿ ಎಸೆದಿರುವ ಅದೆಷ್ಟೊ ಘಟನೆಗಳು ನಮ್ಮ ಕಣ್ಣ ಮುಂದಿವೆ. ಈ ಕುರಿತು ಇರುವ ಪತ್ರಿಕಾ ವರದಿಗಳನ್ನು ಓದಿದರೆ ಗಾಬರಿ ಎನಿಸುತ್ತದೆ. ಬಾತ್‌ರೂಂಗಳಲ್ಲಿ ಹುಟ್ಟಿದ ಮಗುವನ್ನು ಕಿಟಿಕಿಯಿಂದ ಹೊರಗೆ ಎಸೆಯುವುದು, ಹುಟ್ಟಿದ ಹೆಣ್ಣುಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟುಹೋಗುವುದು, ಬೀದಿಯ ಮೂಲೆಯಲ್ಲಿ ಎಸೆಯುವುದು, ಅಂತಹ ಹೆಣ್ಣನ್ನು ನಾಯಿಗಳು ಕಚ್ಚುವುದು, ಹೆಣ್ಣುಮಗುವು ತೊಟ್ಟಿಯಲ್ಲೇ ಮರಣ ಹೊಂದಿ, ನಾಲ್ಕಾರು ದಿನಗಳ ನಂತರ ಜನರ ಗಮನಕ್ಕೆ ಬರುವುದು ಇಂತಹ ಪತ್ರಿಕಾ ವರದಿಗಳನ್ನು ಓದಿದಾಗ, ನಮ್ಮ ದೇಶದ ಇಂತಹದ್ದೊಂದು ಹೇಯ ಮನಸ್ಥಿತಿಯ ಬಗ್ಗೆ ಅಸಹ್ಯ ಎನ್ನಬೇಕೋ ಅಥವಾ ಅದನ್ನು ನಡೆಸಿದವರ ವಿರುದ್ಧ ಆಕ್ರೋಶವನ್ನು ಹೊರ ಹಾಕಬೇಕೋ ತಿಳಿಯದಂತಾಗಿದೆ. ಹೊಟ್ಟೆಯಲ್ಲಿರುವಾಗಲೇ ಯಾವ ಮಗುವೆಂದು ತಿಳಿದು ಅದು ಗಂಡಾದರೆ ಇರಲಿ, ಆದರೆ ಹೆಣ್ಣಾದರೇ ಗರ್ಭದಲ್ಲೇ ಹೊಸಕಿ ಹಾಕುತ್ತಾರೆಂದರೆೆ ಇದು ಎಷ್ಟು ಸರಿ?

ಈ ಒಂದು ಕೃತ್ಯದಲ್ಲಿ ನೈತಿಕತೆಯ ಕಾಡುತ್ತದೆ. ನವಮಾಸ ತುಂಬಿ ಹುಟ್ಟಿದ ಮಗು ಗಂಡೋ ಅಥವಾ ಹೆಣ್ಣೋ ಎಂದು ನಿರ್ಧರಿಸುವುದು ಆ ಮಗುವಿನಿಂದ ಅಸಾಧ್ಯ, ಅಂದರೆ ಅದು ಹುಟ್ಟಿದ್ದು ಅಪರಾಧ ಖಂಡಿತಾ ಅಲ್ಲ. ಆದರೆ, ಹೆಣ್ಣು ಮಗು ಎಂದು ಅರಿತ ಅದನ್ನು ಹೆತ್ತವರು, ಕಣ್ಣೆವೆ ಮುಚ್ಚದೇ ಕಸದ ತೊಟ್ಟಿಗೆ ಹಾಕುತ್ತಾರೆಂದರೆ, ಮಾನವೀಯತೆ ಎಲ್ಲಿ ಹೋಗಿದೆ ಅನಿಸದೇ ಇರದೇ? ಜೀವವೊಂದನ್ನು ನಾಶ ಮಾಡುವಾಗ ಅಂತಃಸಾಕ್ಷಿ ಕಾಡುವುದಿಲ್ಲವೇ? ಗರ್ಭದಲ್ಲಿ ಕಚ್ಚಿಕುಳಿತ ಭ್ರೂಣವನ್ನೋ, ಆಗ ತಾನೆ ಜನಿಸಿದ ಮಗುವನ್ನೋ, ಅದು ಎಂದು ಗೊತ್ತಾದ ತಕ್ಷಣ ನಾಶ ಮಾಡುವ ಮನೋಸ್ಥಿತಿಯೇ ಕ್ರೂರ. ನೈತಿಕತೆಯ ವಿಚಾರದಲ್ಲಿ ಸಾಕಷ್ಟು ದೊಡ್ಡ ದೊಡ್ಡ ಭಾಷಣ ನಡೆಸುವ ನಮ್ಮ ದೇಶದಲ್ಲಿ, ಹೆಣ್ಣು ಭ್ರೂಣ ಹತ್ಯೆಯು ಇನ್ನಷ್ಟು ಪಾಪದ ಕಾರ್ಯ ಎನಿಸುತ್ತದೆ.

ಇಂತಹ ಹೇಯ ಕೃತ್ಯವನ್ನು ತಡೆಯಲು ನಮ್ಮ ದೇಶದಲ್ಲಿ ಸಾಕಷ್ಟು ಕಾನೂನುಗಳು, ಯೋಜನೆಗಳು ಜಾರಿಯಲ್ಲಿವೆ. ಹೆಣ್ಣು ಮಕ್ಕಳಿಗೆ ರಕ್ಷಣೆ ಮತ್ತು ಅವಕಾಶಗಳನ್ನು ನೀಡುವುದರ ಜೊತೆಗೆ ಹೆಣ್ಣು ಮಕ್ಕಳು ಸಮಾಜದಲ್ಲಿ ಅನುಭವಿಸುವ ತೊಂದರೆಗಳ ಬಗ್ಗೆ ಅರಿವು ಮೂಡಿಸುವ ಉದ್ದೆಶದಿಂದ ಹೆಣ್ಣು ಮಕ್ಕಳದಿನವನ್ನು ಸಹ ಆಚರಿಸಲಾಗುತ್ತದೆ. ಪ್ರಸ್ತುತ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು, ‘ಬೇಟಿ ಬಚಾವೋ ಬೇಟಿ ಪಡಾವೋ’ ಎಂಬ ಸ್ಲೊಗನ್ ಮೂಲಕ ಹೆಣ್ಣುಮಕ್ಕಳ ಸಬಲೀಕರಣದ ಅಗತ್ಯವನ್ನು ಒತ್ತ್ತಿ ಒತ್ತಿ ಹೇಳಿದ್ದಾರೆ. ‘ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ’ ಎಂಬ ನಮ್ಮ ಪಾರಂಪರಿಕ ಜ್ಞಾನ ಈ ಮಾತಿನಲ್ಲಿದೆ. ಈ ಮಾತನ್ನುನ ಅನುಷ್ಠಾನಕ್ಕೆ ತರುವ ಅನಿವಾರ್ಯತೆ ನಮ್ಮ ದೇಶದಲ್ಲಿ ಹೆಚ್ಚಿದೆ.
ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕುಸಿಯಲು ಹಲವು ಬಾಲ್ಯವಿವಾಹದಿಂದಾಗಿ ಚಿಕ್ಕ ವಯಸ್ಸಿನಲ್ಲಿ ಗರ್ಭಿಣಿರಾದವರು ಹೆರಿಗೆ ಸಂದರ್ಭದಲ್ಲಿ ಸಾಯುತ್ತಿರುವುದು, ಹೆಣ್ಣು ಮಕ್ಕಳಿಗೆ ಕಡಿಮೆ ಸ್ಥಾನಮಾನ, ವರದಕ್ಷಿಣೆ ಪದ್ಧತಿ, ವಿವಾಹ ವೆಚ್ಚ, ಗಂಡು ಮಗುವೇ ಬೇಕೆನ್ನುವ ಹಂಬಲ, ಮೂಢನಂಬಿಕೆಗಳು, ಹೆಣ್ಣು ಶಿಶುಗಳ ಹತ್ಯೆ, ನಕಲಿ ವೈದ್ಯರು, ಅಸುರಕ್ಷಿತ ಗರ್ಭಪಾತದಿಂದ ಸಾವು, ಇವೆಲ್ಲವೂ ಸೇರಿ ಅದೊಂದು ಕ್ರೂರ ಸಂಕೀರ್ಣ ಪರಿಸ್ಥಿತಿಯನ್ನು ಉತ್ಪನ್ನಮಾಡಿದೆ. ಹೆಣ್ಣು ಮಗು ಗಂಡು ಮಗುವಿಗಿಂತ ಕಡಿಮೆ ಅಲ್ಲ ಎಂದು ಜನರಲ್ಲಿ ತಿಳಿವಳಿಕೆ ಮೂಡಿಸುವ ಪ್ರಯತ್ನವಾಗಿ ‘ಹೆಣ್ಣು ಮಗು ಉಳಿಸಿ’ ಕಾರ್ಯಕ್ರಮ ಜಾರಿಯಲ್ಲಿದ್ದರೂ ಇದು ಅಷ್ಟರ ಮಟ್ಟಿಗೆ ಪರಿಣಾಮ ಬೀರಿಲ್ಲ.

ಲಿಂಗ ಪತ್ತೆಗಾಗಿ ಅಥವಾ ಲಿಂಗ ಆಯ್ಕೆಗಾಗಿ ವೈಜ್ಞಾನಿಕ ತಂತ್ರಗಳನ್ನು ಬಳಸುತ್ತಿರುವುದು ಇಂದಿನ ದಿನಗಳಲ್ಲಿ ನಾವು ನೋಡಬಹುದಾಗಿದೆ. ಭ್ರೂಣಲಿಂಗ ಪತ್ತೆ ಮಾಡುವ ಸೌಲಭ್ಯ ಹೊಂದಿರುವ ಎಲ್ಲ ಸಂಸ್ಥೆಗಳು ಆಸ್ಪತ್ರೆಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ನೋಂದಾಯಿಸಿಕೊಳ್ಳಬೇಕು. ಭ್ರೂಣ ಲಿಂಗ ಪತ್ತೆ ಮತ್ತು ಆಯ್ಕೆ ಪರೀಕ್ಷೆಗೆ ಗರ್ಭಿಣಿಯರ ಮೇಲೆ ಮಾನಸಿಕ ಒತ್ತಡ ಹೇರುವುದು ಮತ್ತು ಗರ್ಭಿಣಿ ಕೂಡಾ ಲಿಂಗ ಒತ್ತಾಯಿಸುವುದು ಅಪರಾಧವಾಗುತ್ತದೆ. ಆದರೆ ಈ ಪ್ರಕ್ರಿಯೆ ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸದ್ದಿಲ್ಲದೆ ನಡೆಯುತ್ತಿರುವುದು ಆತಂಕದ ವಿಷಯ. ಗರ್ಭಿಣಿ, ಆಕೆಯ ಪತಿ, ಅವರ ಸಂಬಂಧಿಕರು ಭ್ರೂಣಲಿಂಗ ಪತ್ತೆಗೆ ವೈದ್ಯರನ್ನು ಒತ್ತಾಯಿಸಿದರೆ 3 ವರ್ಷ ಜೈಲು ಶಿಕ್ಷೆ, ರೂ 50 ಸಾವಿರ ದಂಡ 5 ವರ್ಷ ಜೈಲು ಶಿಕ್ಷೆ ಒಂದು ಲಕ್ಷ ರೂಪಾಯಿ ದಂಡ ವಿಧಿಸಲಾಗುವುದು ಎಂದು ಕಾನೂನು ಹೇಳುತ್ತದೆ. ಇದರಲ್ಲಿ ವೈದ್ಯರು ಹಾಗೂ ತಂದೆ ತಾಯಿಯು ಸಹ ಒಳಪಡುವರು. ಆದರೆ ಇತ್ತೀಚಿನ ದಿನಗಳಲ್ಲಿ ಕಾನೂನು ಕಟ್ಟುನಿಟ್ಟಾಗಿ ಅನುಷ್ಟಾನಗೊಳ್ಳದೇ ಇದ್ದುದರಿಂದ ಇಂತಹ ಪ್ರಕರಣಗಳು ಅಲ್ಲಲ್ಲಿ ಮರುಕಳಿಸುತ್ತಿವೆ. ಹೆಣ್ಣುಮಕ್ಕಳ ರಕ್ಷಣೆಗೆ ಹಲವಾರು ಕಾನೂನು ಕಟ್ಟಳೆಗಳಿವೆ ಆದರೆ ಅವು ಎಷ್ಟರ ಮಟ್ಟಿಗೆ ಕಾರ್ಯನಿರ್ವಹಿಸುತ್ತಿವೆ ಎಂಬ ಪ್ರಶ್ನೆ ಪ್ರಾಜ್ಞರನ್ನು ಕಾಡುತ್ತಿದೆ. ಇಂದು ಸರಕಾರಗಳಿಂದ ಸಾಕಷ್ಟು ಯೋಜನೆಗಳು ಹೆಣ್ಣು ಮಕ್ಕಳಿಗೆ ಸಿಗುತ್ತವೆ, ಆದರೂ ಯಾಕೆ ಹೆಣ್ಣು ಕೂಸು ಬೇಡವೆಂದು ಹೇಳುತ್ತಾರೆಂಬುದು ವಿಪರ್ಯಾಸವಲ್ಲವೇ. ಇನ್ನಾದರೂ ಹೆಣ್ಣು ಮಕ್ಕಳನ್ನು ರಕ್ಷಿಸುವಲ್ಲಿ ಹಾಗೂ ಗೌರವಿಸುವಲ್ಲಿ ದೇಶದ ಅಧಿಕಾರಶಾಹಿ, ವೈದ್ಯಕೀಯ ನಿರ್ವಾಹಕರು, ಜನಸಾಮಾನ್ಯರು ಹೆಚ್ಚಿನ ಗಮನ ವಹಿಸುವಲ್ಲಿ ಕಾಳಜಿ ತೋರಬೇಕು.

Tags

Related Articles

Leave a Reply

Your email address will not be published. Required fields are marked *

Language
Close