ವಿಶ್ವವಾಣಿ

ಪುರುಷರನ್ನು ಮಂಗಳ ಗ್ರಹಕ್ಕೆ ಕಳಿಸುವ ಸಮಯ ಬಂದಿದೆಯೆ?

ಗಂಡಸರೆಲ್ಲ ಕಾಮುಕರು, ಅವರನ್ನು ಮಂಗಳ ಗ್ರಹಕ್ಕೆ ಪಾರ್ಸೆಲ್ ಮಾಡುವ ಸಮಯ ಬಂದಿದೆ ಎಂಬ ಸಾಲುಗಳನ್ನು ಆನ್‌ಲೈನ್‌ನಲ್ಲಿ ಓದಿದೆ. ಯಾಕೋ ಈ ಲೈನ್  ಮನಸ್ಸಿಗೆ ಕಿರಿಕಿರಿ ಉಂಟು ಮಾಡಿತು. ಹರ್ಯಾಣಾದಲ್ಲಿ ಎಂಟು ಜನ ಸೇರಿ ಗರ್ಭಿಣಿ ಮೇಕೆಯ ಮೇಲೆ ಅತ್ಯಾಚಾರ ಮಾಡಿ ಅದರ ಸಾವಿಗೆ ಕಾರಣರಾದ ವಿಷಯ ಸಂಬಂಧ ಇಂಥದೊಂದು  ಅಭಿಪ್ರಾಯ ವ್ಯಕ್ತವಾಗಿದೆ. ತೀರಾ ಮೇಕೆಯ ಮೇಲೆ ರೇಪ್ ಮಾಡುವುದೆ? ವಿಕೃತಿಗೂ ಒಂದು ಮಿತಿ ಬೇಡವೆ? ಬಹುಶಃ ಸಭ್ಯತೆಯ ಮಿತಿಯನ್ನು ಮೀರಿದ್ದು ವಿಕೃತಿ ಇರಬಹುದು. ಹೀಗಾಗಿ ವಿಕೃತಿಯಲ್ಲಿ ಮಿತಿಯನ್ನು ನಿರೀಕ್ಷಿಸುವುದು ತಪ್ಪೇ. ದೇಶದಲ್ಲಿ ರೇಪ್ ಎಂಬ ಪದ ಊಟ ಉಣಿಸಿನಷ್ಟೇ ಸಾಮಾನ್ಯವಾಗಿಬಿಟ್ಟಿದೆ. ಪತ್ರಿಕೆ, ಎಲೆಕ್ಟ್ರಾನಿಕ್ ಮಾಧ್ಯಮ, ಸೋಷಿಯಲ್ ಮೀಡಿಯಾ ಎಲ್ಲೇ ಹೋದರೂ ಒಂದಿಲ್ಲೊಂದು ಅತ್ಯಾಚಾರ ಸಂಬಂಧಿ ವಿಚಾರ ಇದ್ದೇ ಇರುತ್ತದೆ. ಮಹಿಳೆಯರ ಶೋಷಣೆ, ದೈಹಿಕ ಹಿಂಸೆ, ಅತ್ಯಾಚಾರ ಮಾಡಿ ಕೊಲೆ  ಸುಪ್ರಭಾತವೇನೋ ಎಂಬಂತೆ ಕೇಳುತ್ತಿದೆ. ಮಠದ ಸ್ವಾಮಿಗಳ ಮೇಲೆ ರೇಪ್ ಕೇಸ್‌ಗಳು, ಬಾಲಕಿಯರ ವಸತಿ ಗೃಹದಲ್ಲಿ ರೇಪ್ ಕೇಸ್‌ಗಳು ಕೊನೆಗೆ ಕುರಿ ಹಟ್ಟಿಯಲ್ಲೂ ರೇಪ್ ಕೇಸ್!

ಇದೆಲ್ಲದರ ಒಟ್ಟು ಪರಿಣಾಮವೇ ಪುರುಷರೆಲ್ಲ ಕಾಮುಕರು, ಅವರನ್ನು ಮಂಗಳಗ್ರಹಕ್ಕೆ ಪಾರ್ಸೆಲ್ ಮಾಡಬೇಕು ಎಂಬ ಅಭಿಪ್ರಾಯ ಮೂಡಿದ್ದು. ನಿಜಕ್ಕೂ ಸಮಾಜದಲ್ಲಿ ಪುರುಷರ ಬಗೆಗೆ ಎಂಥ ಮನಸ್ಥಿತಿ ಬೆಳೆಯುತ್ತಿದೆ ಎಂದರೆ, ಹೆಣ್ಣುಮಕ್ಕಳ ತಾಯಂದಿರು ತಮ್ಮ ನೆಂಟರ ಹುಡುಗನನ್ನೇ ನಂಬುತ್ತಿಲ್ಲ.  ಆ ಅಣ್ಣನ್ ಜೊತೆ ಹುಷಾರಮ್ಮ, ಮೈಕೈ  ಕೊಡ್ಬೇಡ, ಪಪ್ಪಿ ಅಂತೂ ಕೊಡ್ಲೇಬೇಡ ಎಂದು ಹೇಳಿ ಕಳಿಸುತ್ತಾರೆ. ಅಮ್ಮಂದಿರಿಗೆ ಹೀಗನ್ನಿಸುವುದು ಸಹಜವೇ. ಹೈಸ್ಕೂಲಿಗೆ ಹೋಗುವ ಹುಡುಗಿಯರಾದರೆ, ಯಾವ್ ಅಂಕಲ್‌ನೂ ನಂಬಬೇಡ. ನಿನ್ನ ಅಪ್ಪ ಮಾತ್ರ ನಿನ್ನ ಸೇಫ್ ಆಗಿ ನೋಡ್ಕೊಳೋದು ಎನ್ನುತ್ತಾರೆ. ಇದನ್ನೂ ಅಲ್ಲಗಳೆಯಲಾಗದು. ಟ್ಯೂಷನ್ ಮೇಸ್ಟ್ರು, ವ್ಯಾನ್ ಅಂಕಲ್, ಶಾಲೆಯಲ್ಲಿ ಸರ್‌ಗಳು, ಲೈಬ್ರರಿಯನ್ ಯಾರನ್ನು ನಂಬುವುದು? ಭಾರತೀಯ ಅಮ್ಮಂದಿರಿಗೆ ಎಲ್ಲರೊಳಗೂ ಒಬ್ಬ ಕೀಚಕನೇ ಕಾಣಿಸತೊಡಗಿದ್ದಾನೆ. ಅಪನಂಬಿಕೆ ಅವರನ್ನು ಹಿಂಡುತ್ತಿದೆ. ತಮ್ಮ ಮಕ್ಕಳ ಬಗ್ಗೆ ಅಭದ್ರತೆ ಹುಟ್ಟಿಕೊಂಡಿದೆ.  ರೇಪ್ ಮಾಡಿದವರು ಹೆಣ್ಣುಮಕ್ಕಳನ್ನು ಬಿಟ್ಟಾರೆಯೇ ಎಂಬ ಆತಂಕದ ರೇಖೆಗಳು ತಲೆಯಲ್ಲಿ ಗಿರಕಿ ಹೊಡೆಯಲಾರಂಭಿಸಿದೆ.

ಅಚ್ಚರಿಯ ವಿಚಾರವೆಂದರೆ ತನ್ನ ಮಗ ಯಾರನ್ನಾದರೂ ರೇಪ್ ಮಾಡಿಬಿಟ್ಟರೆ ಎಂಬ ಭಯ ಯಾವ ಅಮ್ಮನಿಗೂ ಕಾಡುವುದಿಲ್ಲ! ಅವನ್ ಗಂಡ್ ಹುಡುಗ ಅಲ್ವಾ? ನಡಿಯತ್ತೆ ಎಂಬ ಹುಂಬತನ ಗಂಡು ಹೆತ್ತ ಅಮ್ಮಂದಿರಿಗಿದೆ. ಇದರ ನೇರ ಪರಿಣಾಮವೇ ಹೆಣ್ಣು ಹೆತ್ತ ಅಮ್ಮಂದಿರ ಮೇಲೆ ಆಗುತ್ತಿರುವುದು. ನಿರ್ಭಯಾ ಪ್ರಕರಣದಿಂದ ಹುಟ್ಟಿಕೊಂಡ ರೇಪ್‌ನ ಭಯ ಮೇಕೆಯ ಮೇಲಿನ ರೇಪ್‌ವರೆಗೂ ಮುಂದುವರಿದಿದೆ.  ನೋಡಿದಲ್ಲಿ ಫೂಲನ್‌ದೇವಿ ಚಂಬಲ್‌ರಾಣಿ ಎನಿಸಿಕೊಂಡಿದ್ದು ಕಾಮುಕರ ಅಟ್ಟಹಾಸದಿಂದಲೇ. ಆಕೆಯ ಮೇಲೆ ನಡೆದಿದ್ದೂ ಸಾಮೂಹಿಕ ಅತ್ಯಾಚಾರವೇ. ಅಲ್ಲೆಲ್ಲೂ ಪುರುಷರ ವಿರುದ್ಧ ಹುಟ್ಟಿಕೊಳ್ಳದ ಅಸಹ್ಯ ಹಾಗೂ ಭಯ ಇತ್ತೀಚಿನ ದಿನಗಳಲ್ಲಿ ಭಯಂಕರವಾಗಿ ಬೆಳೆದಿದೆ. ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬರುತ್ತಿರುವುದೂ ಕಾರಣವಿರಬಹುದು. ಆದರೆ ಹಾಗೆ ಬೆಳಕಿಗೆ ಬಂದು ಜನರು ಅದರ ಬಗ್ಗೆ ಆಡಿಕೊಳ್ಳುತ್ತಿರುವುದು ಇನ್ನಷ್ಟು ಜನರನ್ನು ಅಂಥ ಕೃತ್ಯ ಮಾಡಲು ಪ್ರೇರೇಪಿಸುತ್ತಿದೆ.

ಇದೆಲ್ಲದರ ಒಟ್ಟೂ ಪರಿಣಾಮದಿಂದ ಭಾರತಕ್ಕೆ ಅತ್ಯಾಚಾರಿಗಳ ದೇಶ ಎಂಬ ಹಣೆಪಟ್ಟಿ  ಅದೆಷ್ಟೋ ವಿದೇಶಿ ಪ್ರವಾಸಿ ಮಹಿಳೆಯರನ್ನು ರೇಪ್ ಮಾಡಿ ಕೊಲ್ಲಲಾಗಿದೆ, ಇಂಡಿಯಾ ಸೇಫ್ ಅಲ್ಲ ಎಂಬ ಭಾವನೆ ಅವರಲ್ಲಿ ಈಗಾಗಲೇ ಬಂದು ಬಿಟ್ಟಿದೆ. ಇದೊಳ್ಳೆ ಹೇಗಿದೆಯೆಂದರೆ ಸರ್ವ ಬಣ್ಣ ಮಸಿ ನುಂಗಿತ್ತು ಎನ್ನುವಂತಿದೆ. ಒಂದೆಡೆ ಆರ್ಥಿಕವಾಗಿ ಬಲಹೊಂದುತ್ತಾ, ವಿಶ್ವದ ಪ್ರಮುಖ ಆರ್ಥಿಕ ಶಕ್ತಿಗಳಲ್ಲಿ ಒಂದು ಎನಿಸಿಕೊಳ್ಳುತ್ತಿದ್ದರೆ ಇನ್ನೊಂದೆಡೆ ಸಾಮಾಜಿಕವಾಗಿ, ನೈತಿಕವಾಗಿ ಕುಸಿಯುತ್ತಿದೆ. ಪುರುಷರೆಂದರೆ ಅತ್ಯಾಚಾರಿಗಳು, ಸ್ತ್ರೀುರೆಲ್ಲ ಅತ್ಯಾಚಾರ ಮಾಡಿಸಿಕೊಳ್ಳಲೆಂದೇ ಹುಟ್ಟಿದವರು ಎಂಬ ಭಾವನೆ ಮಡುಗಟ್ಟುತ್ತಿದೆ. ಅತ್ಯಾಚಾರಿಗಳೆಲ್ಲ ರಾಕ್ಷಸರು ಎಂಬ ಭಾವ  ಪುರುಷರೆಲ್ಲ ರಾಕ್ಷಸರು ಎಂಬ ಭಯ ಕಾಣಿಸಿಕೊಳ್ಳುತ್ತಿದೆ. ಆದರೆ ಸತ್ಯ ಅದಲ್ಲ. ಪುರುಷರಲ್ಲಿ ಒಳ್ಳೆಯ ಅಪ್ಪನಿದ್ದಾನೆ, ರಕ್ಷಣೆ ಕೊಡುವ ಅಣ್ಣನಿದ್ದಾನೆ, ಆತ್ಮೀಯವಾಗಿ ಹರಟುವ ಬಾವನಿದ್ದಾನೆ, ಕೊನೆತನಕ ಆಸರೆಯಾಗುವ ಪತಿಯಿದ್ದಾನೆ, ಭರವಸೆಯಿಂದ ಜೊತೆಗೆ ಹೆಜ್ಜೆ ಹಾಕುವ ಸ್ನೇಹಿತನಿದ್ದಾನೆ. ಇವರನ್ನೆಲ್ಲ ಅದೇ ರಾಕ್ಷಸರ ಕೆಟಗರಿಗೆ ಸೇರಿಸಲಾದೀತೆ?

ಮಧುಮಿತಾ ಪಾಂಡೆ ಎಂಬ ಲಂಡನ್‌ನಲ್ಲಿ ವೈದ್ಯಕೀಯ ಓದುತ್ತಿದ್ದ ದೆಹಲಿ ವಿದ್ಯಾರ್ಥಿನಿ ಕಳೆದ ವರ್ಷ ತಿಹಾರ್ ಜೈಲಿನಲ್ಲಿದ್ದ ರೇಪಿಸ್‌ಟ್ಗಳನ್ನು ಮಾತನಾಡಿಸುತ್ತಾಳೆ.ಅಲ್ಲಿ ಅವಳಿಗೆ ಅವರ ಅಭಿಪ್ರಾಯಗಳನ್ನು ಕೇಳಿ ಅಚ್ಚರಿಯೆನಿಸುತ್ತದೆ.  ಹೇಳುತ್ತಾಳೆ, ಅವರಿಗೆ ಅತ್ಯಾಚಾರ ಮಾಡುವುದು ಕೆಟ್ಟ ಕೃತ್ಯ ಎಂದು ಅನಿಸುವುದೇ ಇಲ್ಲ. ಕಾರಣ ಅವರ ಮನೆಯಲ್ಲಿ ಅವರನ್ನು ಹಾಗೆ ಬೆಳೆಸಿರುತ್ತಾರೆ. ಹೆಣ್ಣುಮಕ್ಕಳೆಂದರೆ ಬಳಸಿಕೊಳ್ಳಲೇ ಇರುವವರು, ಅವರನ್ನು ಹೇಗೆ ಬೇಕಾದರೂ ನಡೆಸಿಕೊಳ್ಳಬಹುದು, ಅವರು ಅಬಲೆಯರು, ಅವರಿರುವುದೇ ಪುರುಷರನ್ನು ಎಲ್ಲ ರೀತಿಯಲ್ಲೂ ತಣಿಸಲು ಎಂದು. ಮೇಲ್ಮಧ್ಯಮ ವರ್ಗದವರಿಗೆ, ಸುಶಿಕ್ಷಿತರಿಗೆ ಇದು ಅಚ್ಚರಿಯೆನಿಸಬಹುದು. ಆದರೆ ನಮ್ಮ ದೇಶದಲ್ಲಿನ್ನೂ ಮನೆಗಳಲ್ಲಿ ಇಂಥದೇ ವಾತಾವರಣವಿದೆ. ಬಿಹಾರ, ಉತ್ತರಪ್ರದೇಶಗಳಂಥ ರಾಜ್ಯಗಳ ಬಡವರ ಮನೆಗಳಲ್ಲಿ ಹೆಣ್ಣು ಮಕ್ಕಳನ್ನು ಚಿಕ್ಕಂದಿನಿಂದ  ತಾಯಂದಿರೇ ಕೀಳಾಗಿ ನಡೆಸಿಕೊಳ್ಳುತ್ತಾರೆ. ಆಕೆ ತನ್ನ ತಮ್ಮನನ್ನೂ ಸಂಭಾಳಿಸಬೇಕು, ಜತೆಗೆ ಮುಸುರೆಯನ್ನೂ ತಿಕ್ಕಬೇಕು. ತಮ್ಮನಿಗೋ ಅಣ್ಣನಿಗೋ ಸಿಗುವ ಹೊಸಬಟ್ಟೆ ಅವಳಿಗೆ ಸಿಗುವುದಿಲ್ಲ. ಅವರು ಬಳಸಿ ಬಿಟ್ಟಿದ್ದು ಅವಳಿಗೆ. ಸ್ವಂತ ತಾಯಿಯೇ ಹೀಗೆ ನಡೆಸಿಕೊಂಡಾಗ ಜತೆಯಲ್ಲಿ ಬೆಳೆಯುವ ಅಣ್ಣ ತಮ್ಮಂದಿರು ಇನ್ನೇನು ಕಲಿಯುತ್ತಾರೆ? ಇಲ್ಲಿ ಆ ತಾಯಿಯನ್ನೂ ದೂರುವ ಹಾಗಿಲ್ಲ. ಏಕೆಂದರೆ ಅವಳನ್ನು ಅವಳ ತಾಯಿಯೂ ಹಾಗೆಯೇ ನಡೆಸಿಕೊಂಡಿರುತ್ತಾಳೆ. ಇಂಥ ಪರಿಸ್ಥಿತಿ, ಮನೆಗಳಲ್ಲಿ ಬೆಳೆದ ಹೆಣ್ಣಿಗೆ ಸಹಜವಾಗೇ ಆತ್ಮಗೌರವ ಕಡಿಮೆಯಾಗುತ್ತದೆ,  ಅಧಿಕಾರ ಚಲಾಯಿಸುವ, ದಬ್ಬಾಳಿಕೆ ನಡೆಸುವ, ಆಕ್ರಮಣದ ಮನೋಭಾವ ಬೆಳೆಯುತ್ತದೆ. ಇಂತಲ್ಲೇ ಅಪರಾಧಿಗಳು, ಅತ್ಯಾಚಾರಿಗಳು ಹುಟ್ಟುವುದು.

ಹಾಗಾದರೆ ಹೈ ಪ್ರೊಫೈಲ್ ರೇಪ್‌ಕೇಸ್‌ಗಳಿಗೆ ಇದು ಅನ್ವಯಿಸುವುದಾ? ಬಹುಶಃ ಇಲ್ಲ. ಆದರೆ ಮನುಷ್ಯನೊಳಗಿನ ಮೃಗವಂತೂ ಎರಡೂ ವರ್ಗಗಳಲ್ಲೂ ಒಂದೇ ಆಗಿರುತ್ತದೆ. ಹೆಣ್ಣುಮಕ್ಕಳೇನೋ ಮೈ ಕಾಣುವ ಬಟ್ಟೆ ತೊಟ್ಟು ಪುರುಷರನ್ನು ಪ್ರೇರೇಪಿಸುತ್ತಾರೆ ಎನ್ನಬಹುದು. ಆದರೆ ಬಡಪಾಯಿ ತುಂಬು ಗರ್ಭಿಣಿ ಮೇಕೆಯೂ ಪ್ರೇರೇಪಿಸುತ್ತದಾ? ಅದು ಬಟ್ಟೆ ತೊಡದಿರುವುದೇ ತಪ್ಪಾ? ಹಾಗಾದರೆ ಅರೆಬರೆ ಬಟ್ಟೆ ತೊಡುವ ಲಂಡನ್,  ದೇಶಗಳಲ್ಲೇಕೆ ಇಷ್ಟೊಂದು ಅತ್ಯಾಚಾರಗಳು ನಡೆಯುವುದಿಲ್ಲ? ಅವರ ತೊಡೆ ಅಲ್ಲಿನ ಪುರುಷರನ್ನು ಸೆಳೆಯುವುದಿಲ್ಲವೆ? ಮೂಲತಃ ಭಾರತೀಯ ಸಮಾಜದ ಯೋಚನೆ ಹಾಗೂ ನಡೆದುಕೊಳ್ಳುವ ರೀತಿಯಲ್ಲೇ ದೋಷವಿದೆ. ಸೀೆಯಿಂದ ಚೂಡಿದಾರ್‌ಗೆ ಶಿಪ್‌ಟ್ ಆಗುವಾಗ ಹೆಣ್ಣುಮಕ್ಕಳನ್ನು ಇನ್ನಿಲ್ಲದಂತೆ ಆಡಿಕೊಳ್ಳಲಾಯಿತು. ಜೀನ್‌ಸ್ ತೊಟ್ಟಾಗಲಂತೂ ಹೆಣ್ಣು ಹೆಣ್ಣಂತೆ ಇದ್ದರೇ ಚಂದ, ಮೈಸೂರು ಸಿಲ್‌ಕ್ ಉಟ್ಟು ಮೊಲ್ಲೆ ಮುಡಿದವಳು ಮಾತ್ರ ಪತಿವ್ರತೆ ಎಂಬಂತೆ ಬಿಂಬಿಸಲಾಯಿತು. ಆಧುನಿಕತೆಯನ್ನು ಒಪ್ಪಿಕೊಂಡ ಹೆಣ್ಣನ್ನು ಜರಿಯುವುದರಲ್ಲಿ ಹೆಂಗಸರೂ ಹಿಂದೆ ಬಿದ್ದಿಲ್ಲ. ಹಾಗೆಯೇ ಹೆಣ್ಣನ್ನು ಕೀಳಾಗಿ  ಮನೆಯ ಗಂಡುಮಕ್ಕಳಿಗೆ ಕಲಿಸಿದ್ದರಲ್ಲೂ ಹೆಣ್ಣಿನ ಪಾತ್ರವಿದೆ.  ಆದರೆ ಎಲ್ಲೋ ಒರಟಾಗಿ ಬೆಳೆಸಿದ, ಬೆಳೆದ ಗಂಡು ಮಕ್ಕಳಿಂದಾಗಿ ಇಂದು ಹೆಣ್ಣು ಹೆತ್ತ ಅಮ್ಮಂದಿರು ಆತಂಕದಲ್ಲೇ ಬದುಕುವಂತಾಗಿದೆ, ಪುರುಷರನ್ನು ಮಂಗಳ ಗ್ರಹಕ್ಕೆ ಕಳಿಸಿಬಿಡಬೇಕು ಎಂದು ಆಕ್ರೋಶ ವ್ಯಕ್ತಪಡಿಸುವಂತಾಗಿದೆ.

ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯಾಗಬೇಕು, ಮುಸ್ಲಿಂ ರಾಷ್ಟ್ರಗಳಂತೆಯೇ ಸಾರ್ವಜನಿಕವಾಗಿ ಗುಂಡಿಕ್ಕಿ ಕೊಲ್ಲಬೇಕು, ಅಲ್ಲಿನಂತೆಯೇ ಅಮಾನವೀಯ ಕಾನೂನು ತರಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಜನರ ಹತಾಶೆ ಹೀಗೆ ಮಾತನಾಡಿಸುತ್ತಿದೆ. ಸರಕಾರ ಇದಕ್ಕಾಗಿ ನಿಜವಾಗಿಯೂ ಏನಾದರೂ ಶಾಶ್ವತವಾದ  ಕೈಗೊಳ್ಳಬಹುದಿತ್ತು ಎನಿಸುತ್ತದೆ. ಆದರೆ ಬದಲಾವಣೆಗಳು ಮನೆಗಳಿಂದ, ಕುಟುಂಬಗಳಿಂದ, ತಾಯಂದಿರಿಂದ ಆರಂಭವಾಗಬೇಕಿದೆ. ಒರಟು ನಡೆವಳಿಕೆ, ಅನಾಗರಿಕವಾಗಿ ಹೊಡೆದು ಬಡಿದು ಮಕ್ಕಳನ್ನು ಬೆಳೆಸುವುದು, ಹೆಣ್ಣು ಗಂಡೆಂಬ ಭೇದವನ್ನು ತೋರಿಸುವುದು, ತಾರತಮ್ಯ ಮಾಡುವುದು ಇವನ್ನೆಲ್ಲ ತುರ್ತಾಗಿ ನಿಲ್ಲಿಸುವ ಅಗತ್ಯವಿದೆ. ಕಾರಣ ಇವೆಲ್ಲ ಬೆಳೆಯುವ ಮಕ್ಕಳಲ್ಲಿ ರಾಕ್ಷಸತ್ವ ತುಂಬುತ್ತದೆ. ಆದರೆ ಅದಷ್ಟು ಸುಲಭವೆ? ತನ್ನೊಳಗೆ ಆನಂದ ತುಂಬಿಕೊಂಡಿದ್ದಾಗ ಮಾತ್ರ ಇನ್ನೊಬ್ಬರಿಗೆ ಹಂಚಲು ಸಾಧ್ಯವಲ್ಲವೆ? ಹಾಗೆಯೇ ತಾನು ಸಬಲಳು, ಪುರುಷನಿಗೆ ಸಮಾನಳು, ತನಗೂ ಅಷ್ಟೇ ಹಕ್ಕು  ಗೌರವವಿದೆ ಎಂದು ಹೆಣ್ಣು ಅರಿಯಬೇಕಾಗಿದೆ. ಆಕೆ ತಾನಾಗೇ ಅರಿಯುವಳೋ ಇಲ್ಲ ಅರಿವು ಮೂಡಿಸಬಹುದೋ ಎಂಬುದು ಮುಂದಿರುವ ಪ್ರಶ್ನೆ. ಆದರೆ ಸಹವಾಸಕ್ಕೆ ಬಿದ್ದು ಮಗ ಹಾಳಾದ ಎಂದು ಜಾರಿಕೊಳ್ಳುವ ಮುನ್ನ ಪ್ರತೀ ತಾಯಂದಿರೂ ತನ್ನ ಮಗನೊಂದಿಗೆ ತಾನೆಷ್ಟು ಜವಾಬ್ದಾರಿಯುತವಾಗಿ ನಡೆದುಕೊಂಡೆ ಹಾಗೂ ನಡೆಸಿಕೊಂಡೆ ಎಂಬುದನ್ನು ಕೇಳಿಕೊಳ್ಳಬೇಕಿದೆ. ಇದರಲ್ಲಿ ತಂದೆಯ ಪಾಲೂ ಇದೆ. ಇದರಾಚೆ ಇಂಟರ್‌ನೆಟ್, ಲೈಂಗಿಕ ಶಿಕ್ಷಣದ ಕೊರತೆ, ಸಾಮಾಜಿಕ ಕೌಶಲಗಳ ಕೊರತೆ ಇಂಥ ಹಲವಾರು ಸೂಕ್ಷ್ಮಗಳಿವೆ. ಏನೇ ಆದರೂ  ಪುರುಷರ ಮೇಲಾಟದಲ್ಲಿ ಮೇಕೆಯೂ ಅತ್ಯಾಚಾರಕ್ಕೆ ಬಲಿಯಾಗಿದ್ದು ಮಾತ್ರ ಹೇಯ ಕೃತ್ಯವೇ ಸರಿ. ಈಗ ನೀವೇ ಯೋಚಿಸಿ ಮಂಗಳ ಗ್ರಹಕ್ಕೆ ಹೋಗಬೇಕಾಗಿದ್ದು ಯಾರು?