About Us Advertise with us Be a Reporter E-Paper

ಅಂಕಣಗಳು

ಸುಪ್ರೀಂ ಆದೇಶ ಪಾಲಿಸದಿರುವುದು ಸಂಕಷ್ಟಕ್ಕೆ ಆಹ್ವಾನವಲ್ಲವೇ?

ಸಮಾನತೆ, ಸ್ವಾತಂತ್ರ್ಯ ಮತ್ತು ಸಾಮಾಜಿಕ ನ್ಯಾಯಗಳನ್ನು ಕಾಲಾನುಕಾಲದಲ್ಲಿ ಮರು ವ್ಯಾಖ್ಯಾನಿಸಲಾಗುತ್ತದೆ. ಸಮಾಜದಲ್ಲಿ ಬೇರು ಬಿಟ್ಟಿರುವ ಅಸಮತೋಲನವನ್ನು ನಿವಾರಿಸುವುದರ ಮೂಲಕ ಸಾಧ್ಯವಾದ ಮಟ್ಟಿಗೆ ಸಾಮಾಜಿಕ ಅಂತರ ಕಡಿತಗೊಳಿಸಿ  ಸಮೀಪಕ್ಕೆ ತೆರಳುವ ಪ್ರಯತ್ನ ಇದಾಗಿರುತ್ತದೆ. ಹೀಗೆ ಸಮಾನತೆ ಸಾಧಿಸುವ ನಿಟ್ಟಿನಲ್ಲಿ ಕೈಗೊಳ್ಳಲಾಗುವ ತೀರ್ಮಾನಗಳು ನೈಸರ್ಗಿಕ ನಿಯಮದೊಂದಿಗೆ ಸಂಘರ್ಷವನ್ನು ಒಡ್ಡಿಕೊಳ್ಳುತ್ತವೆ! ಬಲಿಷ್ಟವಾಗಿರುವ ಪ್ರಾಣಿ ತನಗಿಂತ ಸಣ್ಣದಾದ ಬೇರೆಯ ಪ್ರಾಣಿಗಳನ್ನು ಬೇಟೆಯಾಡುವುದು ಆಹಾರ ಪದ್ದತಿಯ ಅನುಕ್ರಮಣಿಕೆ. ಆದರೆ ಎರಡೂ ವರ್ಗಗಳ ದೃಷ್ಠಿಕೋನದಿಂದ ಅವಲೋಕಿಸಿದಾಗ ಚಿರತೆಯೊಂದು ಬೇಟೆಯಾಡುವುದು ತನ್ನ ಹಕ್ಕು ಎಂಬ ವಾದವನ್ನು ಮಂಡಿಸಿದರೆ, ತನಗೂ ಭಯವಿಲ್ಲದ ಬದುಕು ಸಾಗಿಸುವ ಹಕ್ಕಿಲ್ಲವೇ? ಎಂದು ಜಿಂಕೆ ಪ್ರಶ್ನೆಯನ್ನೊಡ್ಡಬಹುದು. ಹಾಗಾಗಿ ಸಾಮಾಜಿಕ ನ್ಯಾಯದ ಪರಿಕಲ್ಪನೆ ಎಲ್ಲರಿಗೂ  ಒದಗಿಸುವುದಕ್ಕೆ ಬದ್ಧವಾಗಿದ್ದರೆ ಪ್ರಾಕೃತಿಕ ನಿಯಮ ಬಲಾಢ್ಯಕ್ಕೆ ನೀಡುವಷ್ಟು ಒತ್ತು ಮರುಕಗಳಿಗೆ ನೀಡಲಾರದು.

ರಾಜ್ಯ ಹೈಕೋರ್ಟಿನ ಇತ್ತೀಚಿನ ಆದೇಶವು ಇಂತಹ ಗೊಂದಲದಲ್ಲಿ ಸರಕಾರವನ್ನು ಸಿಲುಕಿಸಿಬಿಟ್ಟದೆ ಎಂದು ಹೇಳಿದರೆ ತಪ್ಪಾಗಲಾರದು. ಕರ್ನಾಟಕ ಉಚ್ಛ ನ್ಯಾಯಾಲಯದ ಗೌರವ್ವಾನಿತ ನ್ಯಾಯಮೂರ್ತಿಗಳಾದ ಎನ್.ಕುಮಾರ ಮತ್ತು ಬಿ.ವೀರಪ್ಪ ಇವರನ್ನೊಳಗೊಂಡ ಪೀಠವು ಕೆಪಿಎಸ್‌ಸಿ ಆಯ್ಕೆಯ ಪ್ರಕ್ರಿಯೆಯಲ್ಲಿ ರೂಪಿಸಲಾದ ನಿಯಮಗಳ ಮರು ವ್ಯಾಖ್ಯಾನವನ್ನು ಹೊರಡಿಸಿ 1998, 1999 ಮತ್ತು 2004 ರ ಕೆಎಎಸ್ ಆಯ್ಕೆ ಪ್ರಕ್ರಿಯೆಯನ್ನು ಮರು ಪರಿಶೀಲನೆಯೊಂದಿಗೆ ಅಂತಿಮಗೊಳಿಸಲು  ನೀಡಿದೆ. ಇದರನ್ವಯ ಸುಮಾರು ಐವತ್ತರಷ್ಟು ಆಸುಪಾಸಿನ (ವಯಸ್ಸು) ಅಧಿಕಾರಿಗಳು ಕೆಲಸವನ್ನು ಕಳೆದುಕೊಂಡರೆ ಮತ್ತಷ್ಟು ಅಧಿಕಾರಿಗಳು ಹಿಂಬಡ್ತಿ ಪಡೆಯುವ ಸಾಧ್ಯತೆಗಳಿವೆ. ಮಾನ್ಯ ಉಚ್ಛ ನ್ಯಾಯಾಲಯದ ಆದೇಶವನ್ನು ಪಾಲಿಸಲು ಮೊದಲ ಹಂತದಲ್ಲಿ ನ್ಯಾಯಾಲಯದ ಅಭಿಪ್ರಾಯದಂತೆ ಅನರ್ಹರು ಎನ್ನಲಾದ ಅಧಿಕಾರಿಗಳ ಹೆಸರುಗಳನ್ನೊಳಗೊಂಡ ಪಟ್ಟಿಯನ್ನು ಕರ್ನಾಟಕ ಲೋಕಸೇವಾ ಆಯೋಗವು ಮುಚ್ಚಿದ ಲಕೋಟೆಯಲ್ಲಿ ಸರಕಾರಕ್ಕೆ ಸಲ್ಲಿಸಿದೆ. ಆದರೆ ಸರಕಾರವು ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಳ್ಳದೆ ಸದ್ಯದ ಮಟ್ಟಿಗೆ ಆತಂಕವನ್ನು ಕಾಯ್ದಿಟ್ಟಿದೆ. ಇದನ್ನು ಮತ್ತಷ್ಟು ಮುಂದಕ್ಕೆ ಹಾಕುವ  ಸರಕಾರ ಕಣ್ಮುಚ್ಚಿದ್ದರ ಫಲವಾಗಿ ನ್ಯಾಯಾಂಗ ನಿಂದನೆಗೂ ಗುರಿಯಾಗಬೇಕಾದ ಅನಿವಾರ್ಯತೆಯನ್ನು ತನ್ನ ಮೈಮೇಲೆ ಎಳೆದುಕೊಂಡಂತಾಗಿದೆ. ಈ ಪ್ರಕರಣದಿಂದ ಮುಂದೊದಗಬಹುದಾದ ಆತಂಕಗಳನ್ನು ಈಗಲೇ ಮನಗಂಡು ಸರಕಾರವು ಸೂಕ್ತ ತಿದ್ದುಪಡಿ, ನಿಯಮಗಳ ಮಾರ್ಪಾಡು ಹಾಗೂ ಅವಶ್ಯವಿದ್ದಲ್ಲಿ ಸೂಕ್ತ ಕಾನೂನನ್ನು ರೂಪಿಸಿಕೊಳ್ಳಲು ಮತ್ತಷ್ಟು ವಿಳಂಭ ಧೋರಣೆ ಅನುಸರಿಸಿದರೆ ಆತಂಕಕ್ಕಿಂತ ಅನಾಹುತಗಳೇ ಹೆಚ್ಚಾಗುವ ಸಾಧ್ಯತೆಗಳಿವೆ.

ಭಾರತ ಸಂವಿಧಾನವು ತನ್ನ ಪರಿವಿಡಿಯಲ್ಲಿ ಸಮಾನತೆ, ಸ್ವಾತಂತ್ರ್ಯ, ನ್ಯಾಯ ಮತ್ತು ಪ್ರತಿಯೊಬ್ಬ ವ್ಯಕ್ತಿಯ ಆತ್ಮಗೌರವವನ್ನು ಎತ್ತಿ ಹಿಡಿಯುವ ಮಹದೀಚ್ಛೆ  ವ್ಯಕ್ತಪಡಿಸಿದೆ.  ಸಾಧಿಸುವುದಕ್ಕಾಗಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ವ್ಯವಸ್ಥೆಯನ್ನು ಸೃಜಿಸಿದೆ. ಸಂವಿಧಾನದ ಮೂಲ ಆಶೋತ್ತರಗಳಿಗೆ ಧಕ್ಕೆಯಾಗದಂತೆ ಈ ಅಂಗಗಳು ಸ್ವಾಯತ್ತವಾಗಿ ಕರ್ತವ್ಯ ನಿರ್ವಹಿಸುವ ಅವಕಾಶವ ಒದಗಿಸಿದೆ. ಶಾಸಕಾಂಗವು ಕಾನೂನು ಮತ್ತು ನಿಯಮಗಳನ್ನು ರೂಪಿಸುವ ಸಾರ್ವಭೌಮತ್ವವನ್ನು ಪಡೆದುಕೊಂಡಿದ್ದರೂ, ಸಂವಿಧಾನದ ಮೂಲ ಆಶೋತ್ತರಗಳಿಗೆ ಧಕ್ಕೆ ತರಬಲ್ಲದಂತಹ ಯಾವುದೇ ನಿಯಮಗಳನ್ನು ರೂಪಿಸುವ ಅವಕಾಶ ಹೊಂದಿರುವುದಿಲ್ಲ. ನ್ಯಾಯಾಂಗವು ಶಾಸಕಾಂಗದಿಂದ ರೂಪಿಸಲ್ಪಟ್ಟ ಕಾನೂನು ಮತ್ತು ನಿಯಮಗಳನ್ನು ಎರಡು ಆಯಾಮಗಳಲ್ಲಿ ಅವಲೋಕಿಸುತ್ತದೆ. ಶಾಸಕಾಂಗದಿಂದ ರೂಪಿಸಲ್ಪಟ್ಟ ಕಾನೂನು ಸಂವಿಧಾನದ ಸಿದ್ಧಾಂತಗಳಿಗೆ  ಎಂಬುದು ಮೂಲ ಮತ್ತು ಮೊದಲನೆಯ ಆಯಾಮ. ಅನುಮೋದಿಸಲ್ಪಟ್ಟ ಕಾನೂನು ಮತ್ತು ನಿಯಮಗಳು ಜಾರಿಯಲ್ಲಿರುವಂತೆ ನೋಡಿಕೊಳ್ಳುವ ಹಾಗೂ ಉಲ್ಲಂಘನೆಗೆ ಶಿಕ್ಷೆ ವಿಧಿಸುವ ಜವಾಬ್ದಾರಿಯು ಎರಡನೇ ಆಯಾಮ ಎನಿಸಿದೆ . ಶಾಸಕಾಂಗ ಮತ್ತು ನ್ಯಾಯಾಂಗದಿಂದ ಹೊರಡಿಸಲಾದ ಕಾನೂನು ಮತ್ತು ತೀರ್ಪುಗಳನ್ನು ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ಕಾರ್ಯಾಂಗ ನಿರ್ವಹಿಸುತ್ತದೆ. ಹಲವಾರು ಸಂದರ್ಭ ಗಳಲ್ಲಿ ಶಾಸಕಾಂಗದಿಂದ ರೂಪಿಸಲ್ಪಟ್ಟ ಕಾನೂನುಗಳು ಸಂವಿಧಾನದ ಆಶೋತ್ತರಗಳಿಗೆ ವಿರುದ್ಧವಾಗಿದೆ ಎಂದು ಅಂತಹ ಕಾನೂನುಗಳನ್ನೇ ನ್ಯಾಯಾಲಯಗಳು ಅನೂರ್ಜಿತಗೊಳಿಸಿದ ಸಾಕಷ್ಟು ಉದಾಹರಣೆಗಳಿವೆ. ನ್ಯಾಯಾಲಯಗಳು ಹೊರಡಿಸಿದ  ಕಾನೂನುಗಳನ್ನು ಅರ್ಥೈಸಿಕೊಳ್ಳುವಿಕೆಯಲ್ಲಿನ ಗೊಂದಲ ಮುಂತಾದ ಮರುವ್ಯಾಖ್ಯಾನಗಳಿಂದ ಸಂವಿಧಾನದ ಆಶಯಗಳನ್ನು ಈಡೇರಿಸಲು ಸಾಧ್ಯವಾಗುವುದಿಲ್ಲ ಎಂದು ನ್ಯಾಯಾಲಯದ ತೀರ್ಪುಗಳನ್ನೇ ನಿಷ್ಕ್ರಿಯಗೊಳಿಸಬಲ್ಲಂತಹ ಹೊಸ ಕಾನೂನುಗಳು ಸಮಾನತೆ ಎತ್ತಿ ಹಿಡಿಯುವ ಪೂರಕವಾಗಿ ಹಲವು ಬಾರಿ ರಾಷ್ಟ್ರಪತಿಗಳಿಂದ ಅಂಕಿತವನ್ನು ಪಡೆದುಕೊಂಡಿವೆ.

ಇಂದಿರಾ ಸಹಾನಿ ಪ್ರಕರಣದಲ್ಲಿ ನ್ಯಾಯಾಲಯವು ತೀರ್ಪನ್ನು ಪ್ರಕಟಿಸುತ್ತ ಸರಕಾರಿ ನೌಕರಿ ಮತ್ತು ನೇಮಕಾತಿ ಪ್ರಕ್ರಿಯೆಯಲ್ಲಿ ಮೀಸಲಾತಿಯು ಶೇ. 50 ರ ಗಡಿಯನ್ನು ದಾಟಬಾರದೆಂದು ಸೂಚನೆ ನೀಡಿದೆ. ಖಾಲಿ ಇರುವ ಮತ್ತು ಭರ್ತಿಮಾಡಿಕೊಳ್ಳಲಾಗುವ ಒಟ್ಟು ಹುದ್ದೆಗಳ  ಅರ್ಧದಷ್ಟು ಅಂದರೆ ಶೇ. 50 ರಷ್ಟು ಹುದ್ದೆಗಳನ್ನು ಸಾಮಾನ್ಯ ಹುದ್ದೆಗಳೆಂದು ಪರಿಗಣಿಸತಕ್ಕದ್ದು. ಇನ್ನುಳಿದ ಅರ್ಧದಷ್ಟು ಹುದ್ದೆಗಳನ್ನು ಆಯಾ ವರ್ಗದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗದವರಿಗಾಗಿ ಮೀಸಲಿಡತಕ್ಕದ್ದು ಎಂದು ಸರ್ವೋಚ್ಛ ನ್ಯಾಯಾಲಯವು ಆದೇಶವನ್ನು ಹೊರಡಿಸಿತ್ತು. ಕೆಲವೊಂದು ರಾಜ್ಯಗಳಲ್ಲಿ ಆದಿವಾಸಿ ಜನಾಂಗದವರು ಹೆಚ್ಚಾಗಿರುವುದುದರಿಂದ ಆಯಾ ರಾಜ್ಯಗಳು ವಿನಾಯಿತಿ ಪಡೆದದ್ದು ಹೊರತುಪಡಿಸಿದರೆ ಎಲ್ಲಾ ರಾಜ್ಯಗಳೂ ಸರ್ವೋಚ್ಛ ನ್ಯಾಯಾಲಯದ ತೀರ್ಪಿನ್ವಯ ನೇಮಕಾತಿ ಪ್ರಕ್ರಿಯೆ ಕೈಗೊಳ್ಳುತ್ತಿದ್ದವು. ಈ ಆದೇಶವನ್ನು ಪಾಲಿಸುವುದಕ್ಕಾಗಿ ಸರಕಾರಿ  ಸಂಖ್ಯೆ ಸಿಆಸುಇ 08 ಸೇ.ಹಿ.ಮ 1995 ರನ್ವಯ ಅನುಬಂಧ 2 ರಲ್ಲಿ ಆಯ್ಕೆ ವಿಧಾನವನ್ನು ಸ್ಪಷ್ಟಪಡಿಸಲಾಗಿತ್ತು. ಅದರನ್ವಯ ಆಯ್ಕೆ ಪ್ರಕ್ರಿಯೆಯಲ್ಲಿ ಜಾತಿ, ಪಂಗಡ ಹಾಗೂ ವರ್ಗಗಳನ್ನು ಪರಿಗಣಿಸದೆ ಕೇವಲ ಅರ್ಹತೆಯ ಆಧಾರದ ಮೇಲೆ ಮೊದಲನೆಯ ಯಾದಿಯನ್ನು ತಯಾರಿಸುವುದು. ನಂತರ ಮೊದಲನೆಯ ಯಾದಿಯಿಂದ ಮೀಸಲಿರುವ ಹುದ್ದೆಗಳ ಸಂಖ್ಯೆಯನ್ನು ಹೊರತುಪಡಿಸಿದ ಸಂಖ್ಯೆಗಳಷ್ಟು ಹುದ್ದೆಗಳಿಗೆ ಅರ್ಹತೆಯೊಂದಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳ ಹೆಸರುಗಳನ್ನು, ಜಾತಿ -ಪಂಗಡ ಹಾಗೂ ವರ್ಗಗಳನ್ನು ಪರಿಗಣಿಸದೆ ಎರಡನೆಯ ಯಾದಿಯನ್ನು ತಯಾರಿಸತಕ್ಕದ್ದು. ಅನಂತರದಲ್ಲಿ  ಮೀಸಲಾಗಿರುವ ರಿಕ್ತ ಸ್ಥಾನಗಳಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು  ಇತರೆ ಹಿಂದುಳಿದ ಗುಂಪುಗಳಿಗೆ ಸೇರಿದ ಅಭ್ಯರ್ಥಿಗಳ ಮೂರನೇ ಯಾದಿಯನ್ನು ತಯಾರಿಸುವುದು. ಎರಡನೆಯ ಯಾದಿ ಮತ್ತು ಮೂರನೆಯ ಯಾದಿ ಒಟ್ಟುಗೂಡಿಸುವುದರೊಂದಿಗೆ ಅಂತಿಮಗೊಳಿಸಲ್ಪಟ್ಟ ಮುಖ್ಯ ಯಾದಿಯನ್ನು ತಯಾರಿಸುವುದು ಎಂಬ ಮಾರ್ಗಸೂಚಿ ನೀಡಲಾಗಿತ್ತು.

ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಅರ್ಧದಷ್ಟು ಸ್ಥಾನಗಳಿಗೆ ಯಾವುದೇ ಜಾತಿ ಹಾಗೂ ವರ್ಗದ ಅಭ್ಯರ್ಥಿಗಳು ಸ್ಪರ್ಧೆ ಮಾಡಬಹುದಾಗಿತ್ತು. ಇದರಲ್ಲಿ ಪ.ಜಾತಿ-ಪ.ಪಂ, ಸಾಮಾನ್ಯ  ಹಾಗೂ ಹಿಂದುಳಿದ ವರ್ಗಗಳಾದ ಪ್ರವರ್ಗ-1, ಪ್ರವರ್ಗ  2ಬಿ ಹಾಗೂ ಪ್ರವರ್ಗ 3ಎ ಮತ್ತು ಪ್ರವರ್ಗ 3ಬಿ ಗೆ ಸೇರಿದ ಎಲ್ಲರೂ ಸಾಮಾನ್ಯ ಹುದ್ದೆಗೆ ಸ್ಪರ್ಧಿಸಬಹುದಾಗಿತ್ತು. ಇನ್ನು ಮುಂದೆ ಕರ್ನಾಟಕ ಉಚ್ಛ ನ್ಯಾಯಾಲಯದ ತೀರ್ಪಿನನ್ವಯ ನೇಮಕಾತಿ ಪ್ರಕ್ರಿಯೆಯಲ್ಲಿ ಮೌಖಿಕ ಪರೀಕ್ಷೆಯ ಅಂತಿಮ ಫಲಿತಾಂಶದವರೆಗೆ ಗುರುತಿಸಲಾದ ಜಾತಿ ಮತ್ತು ವರ್ಗದ ಅಭ್ಯರ್ಥಿಗಳು ಸಾಮಾನ್ಯವೆಂದು ಪರಿಗಣಿಸಲಾಗದ ಶೇ. 50 ರಷ್ಟು ಹುದ್ದೆಗಳಿಗೆ ಸ್ಪರ್ಧಿಸುವಂತಿಲ್ಲ! ಈ ತೀರ್ಪು ಸಧ್ಯದ ಮಟ್ಟಿಗೆ ಕೇವಲ ಐವತ್ತರಷ್ಟು ಅಧಿಕಾರಿಗಳಿಗೆ ತೊಂದರೆ ತಂದರೂ ಮುಂದಿನ ದಿನಗಳಲ್ಲಿ ಬಹಳಷ್ಟು  ಪ್ರಕ್ರಿಯೆಗಳಿಗೆ ಕಾನೂನಾತ್ಮಕ ಗೊಂದಲ ಉಂಟು ಮಾಡುವ ಸಾಧ್ಯತೆಗಳಿವೆ. ಹಾಗೆಯೇ ಅರ್ಧದಷ್ಟು ಸಾಮಾನ್ಯ ಹುದ್ದೆಗಳಿಗೆ ಸ್ಪರ್ಧಿಸಲು ಎಲ್ಲರಿಗೂ ಅವಕಾಶ ನೀಡಬೇಕಾದ ಮೂಲ ಚಿಂತನೆಗೆ ವಿರುದ್ಧವಾಗಿ ಅಷ್ಟೂ ಹುದ್ದೆಗಳು ಸಹ ಕೆಲವೊಬ್ಬರಿಗೆ ಮಾತ್ರ ಮೀಸಲೀರಿಸದಂತಾಗಿದೆ.

ಕಾಲಾನುಕ್ರಮದಲ್ಲಿ ಹೊರಬೀಳುವ ತೀರ್ಪುಗಳು ಮತ್ತು ಸರಕಾರಿ ಆದೇಶಗಳು ಕೆಲವೊಂದು ಸಂದರ್ಭಗಳಲ್ಲಿ ಮೂಲ ಆದ್ಯತೆ ಈಡೇರಿಸುವುದರ ಬದಲಾಗಿ ಮೂಲ ಆಶಯಗಳಿಗೆ ಧಕ್ಕೆ ತಂದಂತಾಗಿಬಿಡುತ್ತವೆ. ಆದ್ದರಿಂದ ಶೇ. ಐವತ್ತರಷ್ಟು ಸಾಮಾನ್ಯ ಹುದ್ದೆಗಳೆಂದು ಪರಿಗಣಿಸಲಾಗುವ ಹುದ್ದೆಗಳಿಗೆ ಯಾರೆಲ್ಲ ಸ್ಪರ್ಧಿಸಬಹುದಾಗಿದೆ ಎಂಬುದನ್ನು  ಮರುವ್ಯಾಖ್ಯಾನವೊಂದು ಪ್ರಕಟಣೆಯಾಗುವ ಅನಿವಾರ್ಯ ಸ್ಥಿತಿ ಭಾರತ ದೇಶದ ನೇಮಕಾತಿ ಪ್ರಕ್ರಿಯೆಯ ಮುಂದಿದೆ. ಇಷ್ಟೊರೊಳಗಾಗಿ ಕರ್ನಾಟಕ ಸರಕಾರವು ಈ ಸಂದಿಗ್ಧತೆಯಿಂದ ಪಾರಾಗಲು ರಾಜ್ಯದ ಅಡ್ವೋಕೇಟ್ ಜನರಲ್ ಅವರ ಅಭಿಪ್ರಾಯ ಪಡೆಯಬೇಕಾಗಿತ್ತು. ಕೆಲ ಆದೇಶಗಳು ಪೂರ್ವಾನ್ವಯವಾಗುವಂತೆ ಅಳವಡಿಸಿಕೊಳ್ಳಬಹುದಾದ ತೀರ್ಮಾನಗಳಿಗೆ ಸಚಿವ ಸಂಪುಟದ ಅನುಮೋದನೆ ಪಡೆದುಕೊಳ್ಳಬೇಕಾಗಿತ್ತು. ಕೆಲ ಕಾನೂನು ಮಾರ್ಪಾಡುಗಳಿಗೆ ವಿಧಾನ ಮಂಡಲದಿಂದ ಅನುಮೋದನೆಯನ್ನು ಪಡೆದು, ಸರ್ವೋಚ್ಛ ನ್ಯಾಯಾಯಲದ ಪ್ರಕರಣವಾಗಿರುವುದರಿಂದ ರಾಷ್ಟ್ರಪತಿಯವರ ಅಂಕಿತ ಪಡೆಯಲು ಮುಂದಾಗಬೇಕಾಗಿತ್ತು.

 ಆದರೆ ಇಲ್ಲಿಯವರೆಗೆ ಅಂತಹ ಯಾವ ಪ್ರಯತ್ನಗಳಿಗೂ  ಕೈ ಹಾಕದೇ ಮುಚ್ಚಿದ ಲಕೋಟೆಯನ್ನು ತೆರೆಯದಿರುವ ಕಾರಣ ನ್ಯಾಯಾಂಗ ನಿಂದನೆ ಆರೋಪವನ್ನು ಎದುರಿಸಬೇಕಾದ ಆತಂಕವನ್ನು ತಂದುಕೊಂಡು ಕೈಕಟ್ಟಿ ಕುಳಿತಂತಿದೆ. ಭವಿಷ್ಯದ ಆಯ್ಕೆ ಪರೀಕ್ಷೆಗಳಲ್ಲಿ ಇದರ ಪರಿಣಾಮವು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಮೇಲೆ ಕರಿನೆರಳನ್ನು ಬೀರಲಿದ್ದು ಇದುವರೆಗೂ ಯಾವ ಸಂಘಟನೆಗಳೂ ಸರಕಾರವನ್ನು ಎಚ್ಚರಿಸುವ ಪ್ರಯತ್ನಕ್ಕೆ ಮುಂದಾಗದಿರುವುದು ಮತ್ತಷ್ಟು ಅಚ್ಚರಿಗೆ ಕಾರಣವಾಗಿದೆ.

Tags

Related Articles

Leave a Reply

Your email address will not be published. Required fields are marked *

Language
Close