About Us Advertise with us Be a Reporter E-Paper

ಅಂಕಣಗಳು

ಈ ಅಕ್ಷರಗಳ ಮೋಹದಲ್ಲಿ ಅದ್ಯಾವ ಮೋಡಿಯಿದೆಯೋ ?

ಇದು ಯಾವ ಬಂಧವೋ, ಸಂಬಂಧವೋ, ಅನುಬಂಧವೋ, ಋಣಾನುಬಂಧವೋ, ಗೊತ್ತಾಗುತ್ತಿಲ್ಲ. ಅಕ್ಷರಗಳ ಒಡನಾಟ ನನ್ನನ್ನು ಎಲ್ಲೆಲ್ಲಿಗೋ ಕರೆದುಕೊಂಡು ಹೋಗುತ್ತಿರುವುದು ಇದೇ ಮೊದಲಲ್ಲ. ಪ್ರತಿದಿನವೂ ಅವು ಹೊಸ ಹೊಸ ವಿಸ್ಮಯಗಳಿಗೆ ಮುಖಾಮುಖಿಯಾಗಿಸುತ್ತಿವೆ. ಈ ಅಕ್ಷರಗಳು ನನ್ನನ್ನು ಬದುಕಿನ  ಆಯಾಮಗಳಿಗೆ ಈಡು ಮಾಡಿ ಅನುಗಾಲವೂ ರಸವತ್ತಾಗಿರುವಂತೆ ಖಾತ್ರಿಪಡಿಸುತ್ತಿವೆ. ಅದರಲ್ಲೂ ನನ್ನ ಪಾಲಿಗೆ ಈ ಅಕ್ಷರಗಳು ಬೇರೆಯಲ್ಲ, ಬದುಕು ಬೇರೆಯಲ್ಲ. ಈ ಅಕ್ಷರಗಳ ಸಾಂಗತ್ಯಕ್ಕೆ ಬಿದ್ದ ನಂತರ ಬದುಕು ಎಲ್ಲೆಲ್ಲೋ ಕರೆದುಕೊಂಡು ಹೋಗಿ ಖಂಡದಿಂದ ಖಂಡಕ್ಕೆ ನೆಗೆಯುವಂತೆ ಮಾಡಿದೆ, ಅಷ್ಟೇ ಅಲ್ಲ ಅಸಂಖ್ಯ ಜನರ ಸ್ನೇಹವನ್ನು ದಯಪಾಲಿಸಿದೆ. ಕರ್ನಾಟಕದ ಯಾವುದೇ ಮೂಲೆಗೆ ಹೋದರೂ, ಜನರ ಪ್ರೀತಿಗೆ, ಆದರ ಮತ್ತು ಎರಡು ಹೊತ್ತು ಊಟಕ್ಕೆ ಸ್ವಲ್ಪವೂ ಕೊರತೆ ಇಲ್ಲ. ಅದು ಕನ್ನಡ  ಮಹಿಮೆ, ತಾಕತ್ತು!

ಇವೆಲ್ಲವನ್ನೂ ನಾನು ಯಾಕೆ ಹೇಳುತ್ತಿದ್ದೇನೆ ಅಂದರೆ, ಮೊನ್ನೆ ಓದುಗ ಅಭಿಮಾನಿ ರವಿಕುಮಾರ ಜಿ.ಬಿ. ಈ ಮಾತುಗಳಿಗೆ ಚೌಕಟ್ಟು ಹಾಕಿದಂತೆ ಮತ್ತೊಂದು ಅಚ್ಚರಿ ಕೊಟ್ಟು, ಈ ಮಾತುಗಳಲ್ಲಿ ಹುದುಗಿದ ಅರ್ಥವನ್ನು ಮತ್ತೊಮ್ಮೆ ನೆನಪಿಸಿ, ಮತ್ತಷ್ಟು ವಿಸ್ತರಿಸಿದರು.

ಇವೆಲ್ಲದರ ಹಿನ್ನೆಲೆಯನ್ನು ನಿಮಗೆ ಸ್ವಲ್ಪ ವಿವರಿಸಬೇಕು. ಎರಡು ವರ್ಷಗಳ ಹಿಂದೆ ನಾನು ‘ಸೆಲ್ಫಿ ವಿಥ್ ಲೈಫ್’ ಎಂಬ ಪುಸ್ತಕ ಬರೆದಿದ್ದೆ. ಅದನ್ನು ರವಿಕುಮಾರ ಅವರಿಂದ ಬಿಡುಗಡೆ ಮಾಡಿಸಿದ್ದೆ. ನಮ್ಮ ಪತ್ರಿಕೆಯ  ಪುಸ್ತಕ ಬಿಡುಗಡೆ ಮಾಡಬೇಕೆಂಬುದು ನನ್ನ ಉದ್ದೇಶವಾಗಿತ್ತು. ಜತೆಯಲ್ಲಿ ಪತ್ರಿಕೆಯ ಓದುಗರಾದ ವೀಣಾ ಭಟ್ ಮತ್ತು ಮಾಲಿನಿ ಹೆಗಡೆ ಅವರೂ ಇದ್ದರು. ನನ್ನ ಪುಸ್ತಕವನ್ನು ಅವರಿಂದ ಬಿಡುಗಡೆ ಮಾಡಿಸಿದ್ದು ರವಿಕುಮಾರ ಅವರಿಗೆ ಬಹಳ ಇಷ್ಟವಾಗಿತ್ತು. ಕಾರಣ ಅವರು ಅದನ್ನು ನಿರೀಕ್ಷಿಸಿರಲಿಲ್ಲ.

ಅಂದೇ ಅವರು ನನ್ನ ಕುರಿತು ಒಂದು ಪುಸ್ತಕ ಸಂಪಾದಿಸಲು ನಿರ್ಧರಿಸಿದರು. ಒಂದು ರೀತಿಯಲ್ಲಿ ‘ಸ್ವೀಟ್ ರಿವೇಂಜ್’ ತೀರಿಸಿಕೊಳ್ಳಲು ತೀರ್ಮಾನಿಸಿದರು. ನನಗೆ ಪರಿಚಿತರಾದವರನ್ನೆಲ್ಲ ಸಂಪರ್ಕಿಸಿದರು. ನನಗೆ ಆತ್ಮೀಯರಾರು, ನನ್ನ ಒಡನಾಡಿಗಳಾರು,  ಬರೆಸಿದರೆ ಪುಸ್ತಕದ ವಜನು ಹೆಚ್ಚುತ್ತದೆ ಎಂಬುದನ್ನೆಲ್ಲ ಯೋಚಿಸಿ ಅವರನ್ನೆಲ್ಲ ಸಂಪರ್ಕಿಸಿದರು. ಕೆಲವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು. ಇನ್ನು ಕೆಲವರು ಇವರನ್ನು, ಇವರ ಆಶಯವನ್ನು ಗುಮಾನಿಯಿಂದ ನೋಡಿದರು. ಭಟ್ಟರ ಜತೆಗೆ ಎಂದೂ ನೋಡದ, ಅವರ ಜತೆಗೆ ಕೆಲಸವನ್ನೂ ಮಾಡದ, ಅಸಲಿಗೆ ಸಾಹಿತಿ, ಪತ್ರಕರ್ತ, ಬರಹಗಾರನೂ ಅಲ್ಲದ ವ್ಯಕ್ತಿಯೊಬ್ಬ ಈ ಸಾಹಸಕ್ಕೆ ಇಳಿದಿದ್ದು ಅನೇಕರಲ್ಲಿ ಸಂದೇಹ ಮೂಡಿಸಿದ್ದರೆ ಅಚ್ಚರಿ ಇಲ್ಲ.

ರವಿಕುಮಾರ ಯಾರನ್ನೇ ಸಂಪರ್ಕಿಸಿದರೂ, ನಾನು ಭಟ್ಟರ ಬಗ್ಗೆ ಸಂಪಾದಿಸುತ್ತಿರುವ ಈ ಕೃತಿ  ಅವರಿಗೇ ಗೊತ್ತಿಲ್ಲ. ಇದಕ್ಕಾಗಿ ಅವರ ಅನುಮತಿ ಪಡೆದಿಲ್ಲ. ಈ ಪುಸ್ತಕ ಮಾಡಿ ಅವರ ಕೈಗಿತ್ತು ಅಚ್ಚರಿ ಮೂಡಿಸುವುದು ಉದ್ದೇಶ. ಹೀಗಾಗಿ ಅವರಿಗೆ ತಿಳಿಸಬೇಡಿ ಎಂದು ಅವರು ಎಲ್ಲರನ್ನೂ ಕೋರಿದ್ದಾರೆ. ಇದನ್ನೇ ಕೆಲವರು ತಪ್ಪಾಗಿ ಭಾವಿಸಿದ್ದಾರೆ ಮತ್ತು ಇದೇ ಅನುಮಾನ ಅರಳಲು ಕಾರಣವಾಗಿದೆ. ಕೆಲವರು ಇದನ್ನೆಲ್ಲಾ ನಾನೇ ರವಿಕುಮಾರ ಮೂಲಕ ಮಾಡಿಸುತ್ತಿದ್ದೇನೆ ಎಂದು ಭಾವಿಸಿದರೆ, ಇನ್ನು ಕೆಲವರು ನನ್ನ ಹೆಸರು ಹೇಳಿಕೊಂಡು, ಪುಸ್ತಕ ಮಾಡುತ್ತೇನೆ ಎಂಬ ನೆಪದಲ್ಲಿ ಹಣ ಮಾಡಲು  ಯೋಚಿಸಿದ್ದಾರೆ.

ಹೀಗಾಗಿ ರವಿಕುಮಾರ ಪರಿಪರಿಯಾಗಿ ಕೇಳಿಕೊಂಡರೂ ಲೇಖನ ಕೊಟ್ಟಿಲ್ಲ. ಇನ್ನು ಕೆಲವರು ಅವರ ಈ ಪ್ರಯತ್ನವನ್ನು ಪ್ರಶಂಸಿಸಿ, ಪ್ರೋತ್ಸಾಹಿಸಿ, ಅದಕ್ಕೆ ತಗಲುವ ಖರ್ಚನ್ನು ತಾವೇ ಭರಿಸುವ ಭರವಸೆಯನ್ನೂ ನೀಡಿದ್ದಾರೆ. ಆದರೆ ರವಿಕುಮಾರ ಯಾರಿಂದಲೂ ಒಂದು ಪೈಸೆಯನ್ನು ಸಹ ಇಸಗೊಂಡಿಲ್ಲ. ಕೆಲವರು ಅವರನ್ನು ಬಹಳ ಚೆನ್ನಾಗಿ ನೋಡಿಕೊಂಡಿದ್ದಾರೆ, ಇನ್ನು ಕೆಲವರು ಅವರನ್ನು ಮೆತ್ತಗೆ ಸಾಗಹಾಕಿದ್ದಾರೆ. ಕೆಲವರು ಲೇಖನವನ್ನು ಕೊಡುತ್ತೇನೆ, ಕೊಡುತ್ತೇನೆ ಅಂತ ಹೇಳಿ ಒಂದು ವರ್ಷವಾದರೂ ಕೊಟ್ಟಿಲ್ಲ. ಆದರೆ ರವಿಕುಮಾರ  ಬಿಟ್ಟಿಲ್ಲ. ಬೇತಾಳದಂತೆ ಗಂಟು ಬಿದ್ದಿದ್ದಾರೆ. ಹತ್ತಾರು ಸಲ ಅವರ ಹಿಂದೆ ಬಿದ್ದು ಬರೆಸಿದ್ದಾರೆ. ರವಿಕುಮಾರ ಅವರಲ್ಲದೆ ಬೇರೆ ಯಾರಾದರೂ ಆಗಿದ್ದಿದ್ದರೆ ಈ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿ ಕೈಮುಗಿದು ಬಿಡುತ್ತಿದ್ದರು.

ಬೇರೆಯವರಿಂದ ಲೇಖನ ಬರೆಸುವುದು ಎಷ್ಟು ಕಷ್ಟ ಎಂಬುದು ನನಗೆ ಗೊತ್ತಿರದ ಸಂಗತಿಯೇನಲ್ಲ. ಏನು ಬೇಕಾದರೂ ಮಾಡಬಹುದು. ಆದರೆ ಲೇಖನ ಬರೆಸುವುದು ಮಾತ್ರ ಕಷ್ಟ ಕಷ್ಟ. ಕೆಲವರಂತೂ ತಮ್ಮ ದೇಹದ ಯಾವುದೋ ಭಾಗವನ್ನು ಕಿತ್ತು ಕೊಟ್ಟವರಂತೆ ಮಾಡುತ್ತಾರೆ. ಕೆಲವರಿಗೆ ಬರೆಯಬೇಕೆಂದಿರುತ್ತದೆ  ಇಂಥ ಲೇಖನಗಳಿಗೆ ನಿರ್ದಿಷ್ಟ ಡೆಡ್ ಲೈನ್ ಇಲ್ಲದಿರುವುದರಿಂದ ನಾಳೆ ನಾಳೆ ಅಂತ ಮುಂದೂಡುತ್ತಲೇ ಇರುತ್ತಾರೆ.

ಪತ್ರಿಕೆಗಳಿಗೆ ಬರೆಯಬೇಕೆಂದರೆ ಡೆಡ್ ಲೈನ್ ದರ್ದು ಇರುತ್ತದೆ. ಆದರೂ ಕೆಲವರು ಬರೆದುಕೊಡುವುದಿಲ್ಲ. ನನ್ನ ಆತ್ಮೀಯರೆಲ್ಲ ಬರಹಗಾರರಲ್ಲ. ಸ್ವಾಭಾವಿಕವಾಗಿ ಅವರಿಗೆ ಬರೆಯುವುದು ಕಷ್ಟ. ಅಂಥವರು ಬೇರೆಯವರ ನೆರವು ಪಡೆಯುವುದು ಅನಿವಾರ್ಯ. ಆದರೆ ಬರೆಯುವುದನ್ನೇ ಕಸುಬು, ಹವ್ಯಾಸ ಮಾಡಿಕೊಂಡವರಿಂದಲೂ ಬರೆಸುವುದು ಸುಲಭವೇನಲ್ಲ. ಈ ಕಾರಣದಿಂದ ಅಭಿನಂದನಾ ಗ್ರಂಥದಂಥ ಕೃತಿಯನ್ನು ಹೊರತರಲು ವರ್ಷಗಟ್ಟಲೆ ಸಮಯ ಹಿಡಿಯುತ್ತದೆ. ಅದಕ್ಕಾಗಿ  ಗ್ರಂಥ ಸಂಪಾದನ ಸಮಿತಿಯಲ್ಲಿ ಖ್ಯಾತನಾಮರಿರುತ್ತಾರೆ. ಅವರ ಹೆಸರಿನಲ್ಲಿ ಮನವಿ ಪತ್ರ ಹೋದರೆ ಬೇಗನೆ ಬರೆದುಕೊಡುತ್ತಾರೆ ಎಂಬುದಕ್ಕಾಗಿ ಈ ವ್ಯವಸ್ಥೆ ಮಾಡಿಕೊಂಡಿರುತ್ತಾರೆ.

ಆದರೆ ರವಿಕುಮಾರ ಅಂತ ಕ್ಯಾಟಗರಿಗೆ ಸೇರಿದವರಲ್ಲ. ಪಾಪ, ಹೇಳಿ ಕೇಳಿ ಬೆಂಗಳೂರಿನ ಶೇಷಾದ್ರಿಪುರಂನಲ್ಲಿ ಪುಟ್ಟ ಟೀ ಅಂಗಡಿ ಮಾಲೀಕ. ನನ್ನ ಬರಹಗಳ ಅಭಿಮಾನಿ. ಹಾಗಂತ ನನ್ನ ಜತೆ ಒಡನಾಡಿದವರಲ್ಲ. ನಾನು ಭಾಗವಹಿಸುವ ಕಾರ್ಯಕ್ರಮದಲ್ಲಿ ದೂರ ನಿಂತು ನೋಡಿ, ನನ್ನನ್ನು ಒಮ್ಮೆಯೂ ಭೇಟಿ ಮಾಡದೇ ಹಾಗೆಯೇ ಹೋಗುವವರು. ಅವರಿಗೆ  ಸಂಕೋಚವೋ, ಮುಜುಗರವೋ, ಒಮ್ಮೆಯೂ ನನ್ನನ್ನು ಭೇಟಿ ಮಾಡಿದವರಲ್ಲ. ಆದರೆ ನನಗೆ ಆಗಾಗ ಮೆಸೇಜ್ ಮಾಡುತ್ತಿದ್ದರು. ಫೇಸ್ ಬುಕ್‌ನಲ್ಲಿ ನನ್ನ ಪರವಾಗಿ ಪ್ಟ್‌ೋ ಮಾಡುತ್ತಿದ್ದರು. ನಾನು ಅವರನ್ನು ಸಂಪರ್ಕಿಸಲು ಪಟ್ಟ ಪ್ರಯತ್ನ ಯಶಸ್ವಿಯಾಗಿರಲಿಲ್ಲ. ನಾನು ಬರೆದ ಲೇಖನಗಳನ್ನೆಲ್ಲ ಓದಿ ಪ್ರತಿಕ್ರಿಯಿಸುತ್ತಿದ್ದರು. ಓದಿದ್ದು ಮೂರನೇ ಕ್ಲಾಸು. ಮುಂದೆ ಓದಲಾಗದೇ ಟೀ ಅಂಗಡಿ ಇಟ್ಟುಕೊಂಡು ಹೆಂಡತಿ, ತಾಯಿ ಮತ್ತು ಇಬ್ಬರು ಮಕ್ಕಳ ಜತೆ ಜೀವನ ಮಾಡಿಕೊಂಡಿದ್ದವರು.

ಈಗ ಹೇಳಿ, ಇಂಥವರು ಮುಂದಾಗಿ ಅಭಿನಂದನ  ಲೇಖನ ಬರೆದುಕೊಡಿ ಅಂದರೆ ಯಾರಾದರೂ ಕೊಟ್ಟಾರಾ? ಸಾಧ್ಯವೇ ಇಲ್ಲ.

ಇಷ್ಟೇ ಅಲ್ಲ, ಕಳೆದ ಹತ್ತು ವರ್ಷಗಳಿಂದ ನನ್ನ ಜನ್ಮದಿನದಂದು ರವಿಕುಮಾರ ನೂರಾರು ಅನಾಥ ಮಕ್ಕಳಿಗೆ, ಅಂಧ ಮಕ್ಕಳಿಗೆ ಭೋಜನ ವ್ಯವಸ್ಥೆ ಮಾಡಿ, ಅವರಿಗೆ ನೋಟ್ ಬ್ಸ್‌ು ಕೊಡುತ್ತಿದ್ದಾರೆ. ಈ ವಿಷಯವನ್ನು ಒಮ್ಮೆ ಅನಾಥಾಲಯದ ಮುಖ್ಯಸ್ಥರು ನನ್ನ ಗಮನಕ್ಕೆ ತಂದಿದ್ದರು. ಆದರೆ ಇದನ್ನು ಏರ್ಪಡಿಸಿದವರು ರವಿಕುಮಾರ ಎಂಬುದು ಅವರಿಗೂ ಗೊತ್ತಿರಲಿಲ್ಲ. ಈ ಕಾರ್ಯಕ್ರಮ ಸಂಘಟಿಸಲು ಅವರಿಗೆ ಇಪ್ಪತ್ತು-ಮೂವತ್ತು ಸಾವಿರ ರುಪಾಯಿ  ಅದನ್ನು ಅವರೇ ಭರಿಸಿಕೊಂಡು ಮಾಡುತ್ತಿದ್ದರು.

ಈ ವಿಷಯ ಬೇರೆ ಯಾರಿಗೂ ತಿಳಿಸುತ್ತಿರಲಿಲ್ಲ. ಅಷ್ಟಕ್ಕೂ ಅವರು ಇವನ್ನೆಲ್ಲ ಪ್ರಚಾರಕ್ಕಾಗಿ ಮಾಡುತ್ತಿರಲಿಲ್ಲ. ಹಾಗೇನಾದರೂ ಮಾಡಿದ್ದಿದ್ದರೆ ನನಗೆ ಹೇಗಾದರೂ ಗೊತ್ತಾಗುವಂತೆ ಮಾಡುತ್ತಿದ್ದರು. ಆದರೆ ನನಗೆ ಗೊತ್ತಾಗಕೂಡದೆಂದು ಗುಟ್ಟಾಗಿ ಮಾಡುತ್ತಿದ್ದರು.

ಇವೆಲ್ಲ ಮಾಡುತ್ತಿದ್ದುದು ನನ್ನ ಮೇಲಿನ ಅಭಿಮಾನ ಮತ್ತು ಪ್ರೀತಿಗಾಗಿ. ಇಷ್ಟಾದರೂ ಅವರು ನನ್ನನ್ನು ಭೇಟಿಯೇ ಆಗಿರಲಿಲ್ಲ.

ಎರಡು ವರ್ಷಗಳ ಹಿಂದೆ ನನ್ನ ಜನ್ಮದಿನದಂದು ನಮ್ಮ ಮನೆಗೆ ಕರೆದಾಗಲೇ ಅವರ ಮುಖಾಮುಖಿ ಆದದ್ದು. ಅದೇ  ನಾನು ಅವರಿಂದ ನನ್ನ ಪುಸ್ತಕವನ್ನು ಬಿಡುಗಡೆ ಮಾಡಿಸಿದ್ದು. ಅದಾದ ನಂತರವೇ ಅವರು ಪುಸ್ತಕದ ಕೆಲಸಕ್ಕೆ ಮುಂದಾಗಿದ್ದು, ನನಗೆ ಗೊತ್ತಿಲ್ಲದಂತೆ. ಆನಂತರ ನನಗೆ ಅವರು ಭೇಟಿ ಆದುದು ಒಂದೋ ಎರಡೋ ಸಲ. ಅಂತಹ ಪರಮ ನಾಚಿಕೆ ಸ್ವಭಾವದ ಮನುಷ್ಯ. ಯಾಕೆ ಅವರಿಗೆ ತೊಂದರೆ ಕೊಡಬೇಕು ಎಂದು ದೂರವೇ ಉಳಿಯುವ ನಿರುಪದ್ರವಿ ಅಭಿಮಾನಿ. ಕೆಲವು ಉತ್ಕಟ ಅಭಿಮಾನಿಗಳು ತಮ್ಮ ಪ್ರೀತಿಯಿಂದಲೇ ಪರಚಿ, ತಲೆ ತಿಂದು, ಚೆನ್ನಾಗಿ ಕುಯ್ದು ಹೋಗಿಬಿಡುತ್ತಾರೆ. ರವಿಕುಮಾರ ಅಂಥವರಲ್ಲ.  ನಿಮ್ಮನ್ನು ಅನತಿ ದೂರದಿಂದಲೇ ನಿಂತು ಪ್ರೀತಿಸುತ್ತಾರೆ. ತಾವು ಪ್ರೀತಿಸುವುದನ್ನು ಅಪ್ಪಿತಪ್ಪಿಯೂ ನಿಮಗೆ ತಿಳಿಯಗೊಡುವುದಿಲ್ಲ. ಇದ್ಯಾವ ಪ್ರಕಾರದ ಪ್ರೀತಿಯೋ ನನಗಂತೂ ಗೊತ್ತಾಗಿಲ್ಲ.

ಸರಿ, ರವಿಕುಮಾರ ಬಡಪೆಟ್ಟಿಗೆ ಸೋತೆ ಅನ್ನಲಿಲ್ಲ. ಯಾರ್ಯಾರಿಂದ ಲೇಖನ ಬರೆಯಿಸಬೇಕು ಅಂದುಕೊಂಡಿದ್ದರೋ ಅವರೆಲ್ಲರ ಹಿಂದೆ ಬಿದ್ದು ಬರೆಯಿಸದೇ ಬಿಡಲಿಲ್ಲ. ಈ ಮಧ್ಯೆ ನನಗೆ ಅವರು ಪುಸ್ತಕ ಮಾಡುತ್ತಿರುವ ವಿಷಯ ತಿಳಿಯಿತು. ಅವರು ಯಾರಿಗೆ ಪುಸ್ತಕದ ವಿಷಯವನ್ನು ನನಗೆ ತಿಳಿಸಬಾರದೆಂದು ಹೇಳಿದ್ದರೋ, ಅವರಲ್ಲೊಬ್ಬರು ನನಗೆ ಹೇಳಿದರು. ರವಿಕುಮಾರ ಅವರನ್ನು  ತಮ್ಮ ‘ತಪ್ಪು’ ಒಪ್ಪಿಕೊಂಡರು. ‘ನಿಮಗೆ ಗೊತ್ತಿಲ್ಲದೇ ನಿಮ್ಮ ಜನ್ಮದಿನದಂದು ಸರ್ಪ್ರೈಸ್ ನೀಡಬೇಕೆಂದು ಈ ಕೆಲಸಕ್ಕೆ ಏಕಾಂಗಿಯಾಗಿ ಕೈಹಾಕಿದ್ದೇನೆ’ ಎಂದರು.

‘ನನ್ನ ಬಗ್ಗೆ ಪುಸ್ತಕ ಬೇಡ. ನೀವು ಏನೇ ಹೇಳಿ ಜನ ಬೇರೆ ರೀತಿಯಲ್ಲಿ ಯೋಚಿಸುತ್ತಾರೆ. ಭಟ್ಟರು ರವಿಕುಮಾರ ಅವರಿಗೆ ದುಡ್ಡು ಕೊಟ್ಟು ಹೀಗೆ ಮಾಡಿಸುತ್ತಿದ್ದಾರೆ ಎಂದು ಭಾವಿಸುತ್ತಾರೆ. ಅದೇನೇ ಇರಲಿ, ನನಗೆ ಈ ಕಿರೀಟ ಬೇಕಾಗಿಲ್ಲ. ನಾನು ಸಾಧಿಸುವುದು ಇನ್ನೂ ಸಾಕಷ್ಟಿದೆ. ಅಲ್ಲದೇ ಈ ಪುಸ್ತಕ ಯೋಜನೆ ಸ್ವೀಕರಿಸಲು  ಒಪ್ಪುತ್ತಿಲ್ಲ. ಬಹಳ ಮುಜುಗರವಾಗುತ್ತದೆ, ಇದನ್ನು ಇಲ್ಲಿಗೇ ಬಿಟ್ಟುಬಿಡಿ’  ಎಂದು ರವಿಕುಮಾರ ಅವರಿಗೆ ಹೇಳಿದೆ.

ಆದರೆ ಅವರು ‘ಈ ಯೋಜನೆಯನ್ನು ಕೈಬಿಟ್ಟರೆ ನನಗೆ ಅದಕ್ಕಿಂತ ಹೆಚ್ಚು ಮುಜುಗರವಾಗುತ್ತದೆ. ಈಗಾಗಲೇ ನೂರಾರು ಜನ ಲೇಖನ ಬರೆದಿದ್ದಾರೆ. ಅವರೆಲ್ಲರೂ ಬೇಸರ ಮಾಡಿಕೊಳ್ಳುತ್ತಾರೆ. ನನಗೆ ಅವರಿಗೆ ಉತ್ತರ ಹೇಳಲು ಆಗುವುದಿಲ್ಲ. ದಯವಿಟ್ಟು ಸಹಕರಿಸಿ’ ಎಂದರು.

ನಾನು ಒಲ್ಲದ ಮನಸ್ಸಿನಿಂದ ಒಪ್ಪಿದೆ. ಆದರೆ ರವಿಕುಮಾರ ಅವರನ್ನು ಆಡಿಸಿದೆ. ಪುಸ್ತಕ ಯೋಜನೆ ಮುಂದಕ್ಕೆ ಹೋಗುವಂತೆ ಇಲ್ಲದ ನೆಪ  ಆ ಕಾರಣದಿಂದಾದರೂ ಅವರು ಈ ಯೋಜನೆ ಕೈಬಿಡಲಿ ಎಂಬುದು ಉದ್ದೇಶವಾಗಿತ್ತು. ಸರಿಯಾಗಿ ಒಂದು ವರ್ಷ ಪುಸ್ತಕ ಬಿಡುಗಡೆ ಮುಂದಕ್ಕೆ ಹೋಗುವಂತೆ ಮಾಡಿದೆ. ಆದರೆ ಮನುಷ್ಯ ಈ ಬಗ್ಗೆ ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ಆಸಕ್ತಿ ತೋರಲಾರಂಭಿಸಿದರು. ಒಂದು ಸಲವಂತೂ ಪುಸ್ತಕ ಬಿಡುಗಡೆ ಹತ್ತಿರ ಹತ್ತಿರ ಒಂದು ವರ್ಷ ಮುಂದಕ್ಕೆ ಹೋಗುತ್ತಿದೆಯೆಂದೂ, ಪುಸ್ತಕ ಹೊರಬರುವ ಯಾವ ಸೂಚನೆಯೂ ಇಲ್ಲವೆಂದೂ ರವಿಕುಮಾರ ನನ್ನ ಮುಂದೆ ಅತ್ತುಬಿಟ್ಟಿದ್ದರು.

ಕೊನೆಗೆ ನಾನು ಶರಣಾಗಲೇ ಬೇಕಾಯಿತು.  ಪುಸ್ತಕ ಪ್ರಕಟಣೆಗೆ ಹಲವಾರು ವಿಘ್ನಗಳು ಎದುರಾಗುತ್ತಲೇ ಇದ್ದವು. ಈ ಮಧ್ಯೆ ಬರೆದ ಎಲ್ಲ ಲೇಖನಗಳನ್ನು ಸೇರಿಸಿದರೆ ನಾನೂರು ಪುಟಗಳನ್ನು ದಾಟಿ ಹೋದವು. ಪ್ರಕಾಶಕರು ಒಲ್ಲೆ ಎನ್ನಲಾರಂಭಿಸಿದರು. ಕೊನೆಗೆ ಪುಸ್ತಕವೇನೋ ಸಿದ್ಧವಾಯಿತು. ಅದು ಮೊನ್ನೆ ನನ್ನ ಬರ್ಥ್ ಡೇ ದಿನದಂದು ಬಿಡುಗಡೆ ಆಗಬೇಕಿತ್ತು. ಆದರೆ ನಾನು ಪ್ರಧಾನಿ ಅವರ ಜತೆ ರವಾಂಡ ಮತ್ತು ಉಗಾಂಡಕ್ಕೆ ಹೋಗಿದ್ದರಿಂದ ಮತ್ತೆ ಹದಿನೈದು ದಿನ ಮುಂದಕ್ಕೆ ಹೋಯಿತು.

ಈ ಮಧ್ಯೆ, ಮೊದಲೇ ಲೇಖನ ಕೊಟ್ಟವರೆಲ್ಲ  ಅವರನ್ನು ವಿಚಾರಿಸಿಕೊಳ್ಳಲಾರಂಭಿಸಿದ್ದರು. ಪುಸ್ತಕ ಬಿಡುಗಡೆಯಾಗುವ ಬಗ್ಗೆ ಅನುಮಾನ ವ್ಯಕ್ತಪಡಿಸಲಾರಂಭಿಸಿದ್ದರು. ಈ ಬಗ್ಗೆ ರವಿಕುಮಾರ ಅವರಿಗೆ ಆತಂಕವಿತ್ತು. ತಮ್ಮನ್ನು ಜನ ತಪ್ಪಾಗಿ ಭಾವಿಸುತ್ತಿದ್ದಾರೆಂಬ ದಿಗಿಲಿತ್ತು. ಭಟ್ಟರ ಹೆಸರಿಗೆ ಕಳಂಕ ತಂದುಬಿಡುವೆನಾ ಎಂಬ ಬಗ್ಗೆ ಅವರಲ್ಲಿ ಅತೀವ ದುಗುಡವಿತ್ತು.

ಇಷ್ಟು ಹೊತ್ತಿಗೆ ಓಡಾಟ, ಡಿಟಿಪಿ ಮತ್ತು ಬೇರೆ ಬೇರೆ ಬಾಬತ್ತು ಅವರ ಕೈಯಿಂದ ಏನಿಲ್ಲವೆಂದರೂ ಒಂದು ಲಕ್ಷ ರುಪಾಯಿ ಕೈಬಿಟ್ಟು ಹೋಗಿರಬೇಕು. ಆದರೆ ಅವರು ಹಿಂದಕ್ಕೆ ಹೆಜ್ಜೆ ಇಡಲಿಲ್ಲ.

ಪುಸ್ತಕ ಬಿಡುಗಡೆಗೆ  ನಿಶ್ಚಿತವಾಯಿತು. ರವಿಕುಮಾರ ತಮ್ಮ ಆತ್ಮೀಯ ಸ್ನೇಹಿತರಾದ ಶಂಭುಲಿಂಗ ಕುಚನೂರು ಮತ್ತು ವೀಣಾ ಬಣಕಾರ ಅವರೊಡಗೂಡಿ ಈ ಬಿಡುಗಡೆ ಕಾರ್ಯಕ್ರಮದ ಸಂಪೂರ್ಣ ರೂಪು ರೇಷೆಗಳನ್ನು ನಿರ್ಧರಿಸಿದರು. ಪುಸ್ತಕ ಸಂಪಾದಿಸುವುದು ಒಂದು ಹೊರೆಯಾದರೆ, ಆ ಹೊರೆಯನ್ನು ಇಳಿಸಲು ಪುಸ್ತಕ ಬಿಡುಗಡೆ ಕಾರ್ಯಕ್ರಮ ಏರ್ಪಡಿಸುವುದು ಇನ್ನೊಂದು ಹೊರೆ.

ರವಿಕುಮಾರ ಮತ್ತು ಅವರ ಸ್ನೇಹಿತರ ಪರಿಶ್ರಮದ ಫಲವಾಗಿ ಎರಡು ವರ್ಷಗಳ ನಂತರ ‘ವಿಶ್ವಾಸವೇ ವಿಶ್ವ : ಆಪ್ತ ಭಾವ ಸಂಗಮ’ ಪುಸ್ತಕ ಮೊನ್ನೆ ‘ಸ್ನೇಹಿತರ  (ಊ್ಟಜಿಛ್ಞಿಜಿ ಈ) ಬಿಡುಗಡೆ ಆಯಿತು. ಆ ಕಾರ್ಯಕ್ರಮವನ್ನು ಅವರು ಅದೆಷ್ಟು ಚೆಂದವಾಗಿ ಸಂಘಟಿಸಿ ಅವಿಸ್ಮರಣೀಯವಾಗಿಸಿದ್ದರೆಂದರೆ, ನನ್ನೆಲ್ಲ ಓದುಗ ಮಿತ್ರರೊಂದಿಗೆ ಸುಮಾರು ನಾಲ್ಕು ತಾಸು ಕಳೆದಿದ್ದು ಗೊತ್ತೇ ಆಗಲಿಲ್ಲ.

ಈ ಕಾರ್ಯಕ್ರಮಕ್ಕೆ ದೂರದ ಕತಾರ್‌ನಿಂದ ದೀಪಕ ಶೆಟ್ಟಿ, ಶಿರಸಿಯಿಂದ ವೆಂಕಟೇಶ ಹೆಗಡೆ ಹೊಸಬಾಳೆ ಸೇರಿದಂತೆ ರಾಯಚೂರು, ಬೀದರ, ಕಾರಟಗಿ, ಬೆಳಗಾವಿ, ಹುಬ್ಬಳ್ಳಿ, ಕುಂದಗೋಳ, ಗೋಕರ್ಣ, ಗೋಕಾಕ ಮುಂತಾದ ಊರುಗಳಿಂದ ಅನೇಕ ಸ್ನೇಹಿತರು, ಓದುಗರು ಆಗಮಿಸಿದ್ದರು.

ಅಕ್ಷರಗಳು ನಮ್ಮನ್ನೆಲ್ಲ ಅಲ್ಲಿ ಒಂದುಗೂಡಿಸಿದ್ದವು.  ಹೋಟೆಲ್ ಮಾಲೀಕರೂ, ಆತ್ಮೀಯ ಮಿತ್ರರೂ ಆದ ಷಡಕ್ಷರಿ ಅವರು ಈ ಕಾರ್ಯಕ್ರಮಕ್ಕೆ ತಮ್ಮ ಕಾಲೇಜನ್ನು ಬಿಟ್ಟುಕೊಟ್ಟಿದ್ದಲ್ಲದೇ ಉಪಾಹಾರದ ವ್ಯವಸ್ಥೆಯನ್ನೂ ಮಾಡಿದ್ದರು. ಪ್ರಾಯಶಃ ರವಿಕುಮಾರ ಬೇರೆಯವರಿಂದ ಪಡೆದ ಸಹಾಯ ಅಂದ್ರೆ ಇದೊಂದೇ ಇರಬೇಕು.

ಆ ದಿನದ ಕೇಂದ್ರ ಬಿಂದು ರವಿಕುಮಾರ ಅವರೇ ಆಗಿದ್ದರು. ಅಲ್ಲದೇ ಎಲ್ಲರ ಕಣ್ಣಲ್ಲಿ ದೊಡ್ಡವರಾಗಿ ಕಂಡವರೂ ಅವರೇ. ಎರಡು ಮೂರು ಸಂದರ್ಭಗಳಲ್ಲಿ ನಾನು ಉಮ್ಮಳಿಸಿ ಬಂದ ದುಃಖಕ್ಕೆ ಅಣೆಕಟ್ಟೆ ಹಾಕಿ ಅಡ್ಡಗಟ್ಟಿದ್ದೆ. ಒಂದು ವೇಳೆ ನಾನೇ  ಆಗಿದ್ದಿದ್ದರೆ, ಸಂಪಾದಕ ವಿಶ್ವೇಶ್ವರ ಭಟ್ ಬರಹಗಳನ್ನು ಓದಿ ಇಷ್ಟೆಲ್ಲಾ ಮಾಡುತ್ತಿದ್ದೆನಾ ?

ಬಹುಶಃ ಇಲ್ಲ !

ನಾವು ನಮ್ಮ ಪಾಡಿಗೆ ಬರೆಯುತ್ತಿದ್ದರೆ, ನಮಗೆ ಗೊತ್ತಿಲ್ಲದೇ ಇನ್ಯಾರೋ ಸ್ಫೂರ್ತಿ ಪಡೆಯುತ್ತಿರುತ್ತಾರೆ. ಬದುಕು ಬದಲಿಸಿಕೊಳ್ಳುತ್ತಿರುತ್ತಾರೆ. ಈ ಅಕ್ಷರಗಳ ಸೆಳೆತದಲ್ಲಿ, ಮೋಹದಲ್ಲಿ ಅದ್ಯಾವ ಮೋಡಿಯಿದೆಯೋ ?

ವಿಶ್ವೇಶ್ವರ್ ಭಟ್

ಇವರ ಊರು ಉತ್ತರ ಕನ್ನಡದ ಕುಮಟಾದ ಮೂರೂರು. ಓದಿದ್ದು ಎಂ.ಎಸ್ಸಿ ಹಾಗೂ ಎಮ್.ಎ. ನಾಲ್ಕು ಚಿನ್ನದ ಪದಕ ವಿಜೇತ. ಇಂಗ್ಲೆಂಡಿನಲ್ಲಿ ಪತ್ರಿಕೋದ್ಯಮದಲ್ಲಿ ಉನ್ನತ ವ್ಯಾಸಂಗ. ವೃತ್ತಿಯ ಆರಂಭದಲ್ಲಿ ಸಂಯುಕ್ತ ಕರ್ನಾಟಕ, ಕನ್ನಡಪ್ರಭದಲ್ಲಿ ಉಪಸಂಪಾದಕ. ಆನಂತರ ಏಷ್ಯನ್ ಕಾಲೇಜ್ ಆಫ್ ಜರ್ನಲಿಸಮ್‌ನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್. ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಖಾತೆ ಸಚಿವರಿಗೆ ವಿಶೇಷ ಕರ್ತವ್ಯ ಅಧಿಕಾರಿ. ಕನ್ನಡದ ಜನಪ್ರಿಯ ದೈನಿಕ ‘ವಿಜಯ ಕರ್ನಾಟಕ’ ದ ಮಾಜಿ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇಲ್ಲಿ ತನಕ ಬರೆದಿದ್ದು 65 ಪುಸ್ತಕಗಳು. ವಿಜಯ ಕರ್ನಾಟಕದಲ್ಲಿದ್ದಾಗ ಬರೆದಿದ್ದು ‘ನೂರೆಂಟು ಮಾತು, ಜನಗಳ ಮನ ಹಾಗೂ ಸುದ್ದಿಮನೆ ಕತೆ’ ಜನಪ್ರಿಯ ಅಂಕಣಗಳು. ಐವತ್ತಕ್ಕೂ ಹೆಚ್ಚು ದೇಶ ಸುತ್ತಿದ ಅನುಭವ. 2005 ಸುವರ್ಣ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳಿಗೆ ಪಾತ್ರ. ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಜತೆ ಹದಿನೈದು ದಿನ ನಾಲ್ಕು ದೇಶಗಳಲ್ಲಿ ಪಯಣ. ಪ್ರಸ್ತುತ ವಿಶ್ವವಾಣಿಯ ಪ್ರಧಾನ ಸಂಪಾದಕ. ಇವರ ಅಂಕಣಗಳು ‘ನೂರೆಂಟು ವಿಶ್ವ’ ಮತ್ತು ’ಇದೇ ಅಂತರಂಗ ಸುದ್ದಿ’ ಗುರುವಾರ ಮತ್ತು ಭಾನುವಾರ ಓದಬಹುದು.

Related Articles

Leave a Reply

Your email address will not be published. Required fields are marked *

Language
Close