ವಿಶ್ವವಾಣಿ

ಹುಲಿಯ ಪ್ರಾಣ ಉಳಿಸಿದ್ದು ಪವಾಡವೋ, ಅಭ್ಯಾಸ ಬಲವೋ ?

ಕುತೂಹಲಕಾರಿಯಾದ ನಿಜಜೀವನದ ಘಟನೆಯೊಂದು ಇಲ್ಲಿದೆ. ಈ ಘಟನೆಯು ಹುಬ್ಬಳ್ಳಿಯ ಸಿದ್ಧಾರೂಢ ಮಿಷನ್‌ನವರು ಪ್ರಕಟಿಸಿರುವ ‘ಶ್ರೀ ಸಿದ್ಧಮಹಿಮಾಂಬುಧಿ’ ಪುಸ್ತಕದಲ್ಲಿ ನಿರೂಪಿತವಾಗಿದೆ.

ಹುಬ್ಬಳ್ಳಿಯಲ್ಲಿದ್ದ ಮಹಾಪುರುಷ ಶ್ರೀ ಸಿದ್ಧಾರೂಢರ ಭಕ್ತ ಕಾಶೀನಾಥ ಛತ್ರೆ ಎಂಬುವವರು ಸರ್ಕಸ್ ಕಂಪನಿ ಮಾಲೀಕರು. ಒಮ್ಮೆ ಅವರ ಸರ್ಕಸ್ ಕಂಪನಿಯು ಚೀನಾ ದೇಶದ ರಾಜಧಾನಿ ಬೀಜಿಂಗ್‌ನಲ್ಲಿ ಪ್ರದರ್ಶನಗಳನ್ನು ನೀಡುತ್ತಿತ್ತು. ಅಪಾರ ಜನಪ್ರಿಯತೆಯನ್ನೂ ಗಳಿಸಿತ್ತು. ಆಗಿನ ಕಾಲದಲ್ಲಿ  ಸರ್ಕಸ್ ಕಂಪನಿಗಳು ಚೀನಾ ಮುಂತಾದ ವಿದೇಶಗಳಲ್ಲೂ ಪ್ರದರ್ಶನ ನೀಡುವುದು ಸರ್ವೇ ಸಾಮಾನ್ಯವಾದ ವಿಷಯವಾಗಿತ್ತು.

ಒಮ್ಮೆ ಸರ್ಕಸ್ಸಿನಲ್ಲಿದ್ದ ಶಂಕರ ಎಂಬ ಹೆಸರಿನ ಹುಲಿ ಆಕಸ್ಮಿಕವಾಗಿ ಪಂಜರದಿಂದ ತಪ್ಪಿಸಿಕೊಂಡುಬಿಟ್ಟಿತು. ಊರಲ್ಲೆಲ್ಲ ಸುತ್ತಾಡತೊಡಗಿತು. ಊರಿನ ಜನ ಗಾಬರಿಗೊಂಡಿದ್ದರೂ ಗುಂಪುಗೂಡಿ ಹುಲಿಯನ್ನು ಹಿಂಬಾಲಿಸತೊಡಗಿದರು. ಜನರ ಗುಂಪನ್ನು ನೋಡಿ ಹುಲಿ ಗಾಬರಿಗೊಂಡು ಊರ ಮಧ್ಯದಲ್ಲಿದ್ದ ಗಿಡಗಳ ಪೊದೆಯಲ್ಲಿ ಅವಿತುಕೊಂಡು ಕುಳಿತುಬಿಟ್ಟಿತು.

ಹುಲಿ ಹೊರಬಂದರೆ ಏನಾಗುತ್ತದೋ ಎಂದು ಜನರಿಗೂ ಭಯ. ಸರಕಾರದವರು ಇಪ್ಪತ್ನಾಲ್ಕು ಗಂಟೆಯೊಳಗೆ ಹುಲಿಯನ್ನು ಹಿಡಿಯದಿದ್ದರೆ  ಗುಂಡಿಟ್ಟು ಸಾಯಿಸಲಾಗುವುದು ಎಂದು ಕಾಶೀನಾಥರಿಗೆ ಎಚ್ಚರಿಕೆ ಕೊಟ್ಟರು.

ಕಾಶೀನಾಥರು ಮಾನಸಿಕವಾಗಿ ಸಿದ್ಧಾರೂಢರನ್ನು ಪ್ರಾರ್ಥಿಸಿದರು, ಮೊರೆ ಹೋದರು. ರಾತ್ರಿ ಕನಸಿನಲ್ಲಿ ಸಿದ್ಧಾರೂಢರು ಕಾಣಿಸಿಕೊಂಡು ಹುಲಿ ಎಲ್ಲಿ ಅಡಗಿದೆಯೋ ಅಲ್ಲೇ ಅದನ್ನು ಹಿಡಿಯಬೇಕು ಎಂದಂತಾಯಿತು. ನಿದ್ದೆಯಿಂದೆದ್ದ ಕಾಶೀನಾಥರಿಗೆ ಏನೋ ಹೊಳೆಯಿತು.

ಅವರು ಮರುದಿನ ಮುಂಜಾನೆಯೇ ಸರ್ಕಸ್ಸಿನ ಬ್ಯಾಂಡ್ ಸೆಟ್ಟು, ಆನೆ-ಕುದುರೆಗಳನ್ನು, ಒಂದಷ್ಟು ಆಟಗಾರರನ್ನು ಕರೆದುಕೊಂಡು ಪೊದೆಯ ಬಳಿ ಹೋದರು. ಸಾವಿರಾರು ಕುತೂಹಲೀ ಜನ ಸೇರಿದ್ದರು.  ಕಾಶೀನಾಥರು ಗಟ್ಟಿಯಾಗಿ ಬ್ಯಾಂಡ್ ಬಾರಿಸುವಂತೆ ಬ್ಯಾಂಡ್  ಹೇಳಿದರು. ಆನೆ-ಕುದುರೆಗಳ ಆಟಗಳನ್ನು ಪ್ರದರ್ಶಿಸಿದರು. ನಂತರ ತಾವೇ ಗಟ್ಟಿಯಾಗಿ ಚಾಟಿ ಸದ್ದು ಮಾಡುತ್ತ ಶಂಕರಾ! ಈಗ ಬಂದು ನಿನ್ನ ಆಟ ತೋರಿಸು ಎಂದು ಸರ್ಕಸ್ಸಿನಲ್ಲಿ ಮಾಡುವಂತೆಯೇ ಅಬ್ಬರಿಸಿದರು. ಪೊದೆಯ ಒಳಗಿದ್ದ ಹುಲಿಗೆ ಚಾಟಿಯ ಛಟೀರ್ ಶಬ್ದ ಕೇಳಿದೊಡನೆ ಅನೇಕ ವರ್ಷಗಳ ಅಭ್ಯಾಸ ನೆನಪಾಗಿರಬೇಕು! ತಾನು ಪೊದೆಯಲ್ಲಿದ್ದೇನೆ ಎನ್ನುವುದೂ ಮರೆತುಹೋಗಿರಬೇಕು. ಸರ್ಕಸ್ಸಿನಲ್ಲಿಯೇ ಇದ್ದೇನೆಂದು ಭಾವಿಸಿ ಅದು ಪೊದೆಯೊಳಗಿನಿಂದ ಹೊರಗಡೆ ಬಂದಿತು. ತನ್ನ ಆಟವನ್ನು ತೋರಿಸಿತು. ಆನಂತರ ಅಲ್ಲಿ ತಂದಿಡಲಾಗಿದ್ದ ಪಂಜದೊಳಕ್ಕೆ  ಹೋಗಿ ಸೇರಿಕೊಂಡಿತು! ಆಗ ಎಲ್ಲರೂ ನಿಶ್ಚಿಂತೆಯಿಂದ ನಿಟ್ಟುಸಿರುಬಿಟ್ಟರು. ಚೀನಾ ದೇಶದ ಸರಕಾರದವರು ಕಾಶೀನಾಥರ ಚತುರತೆಯನ್ನು ಪ್ರಶಂಸಿಸಿ ಬಹುಮಾನವಿತ್ತು ಗೌರವಿಸಿದರು.

ಚೀನಾ ದೇಶದ ಕ್ಯಾಂಪು ಮುಗಿಸಿ ಭಾರತಕ್ಕೆ ಹಿಂತಿರುಗಿದ ಕಾಶೀನಾಥರು ನೇರ ಹುಬ್ಬಳ್ಳಿಗೆ ಬಂದು ಪೂಜ್ಯ ಸಿದ್ಧಾರೂಡರ ಪಾದ್ಕೆರಗಿ ನಿಮ್ಮ ಪವಾಡದಿಂದ ಹುಲಿಯ ಪ್ರಾಣ ಉಳಿಯಿತು ಎಂರಂತೆ. ತಾವು ಪವಾಡಗಳನ್ನು ಮಾಡುತ್ತೇವೆಂದು ಎಂದೂ ಹೇಳಿಕೊಳ್ಳದ ಸಿದ್ಧಾರೂಢರು ಅಲ್ಲಿ ನಡೆದದ್ದು ನನ್ನ ಪವಾಡವಲ್ಲ, ಅದು ಅಭ್ಯಾಸ ಬಲದ ಪವಾಡ ಎಂದರಂತೆ!

ಆನಂತರ  ಘಟನೆಯ ಅರ್ಥವನ್ನು ವೇದಾಂತೀಕರಣಗೊಳಿಸುತ್ತ ಮನಸ್ಸೆಂಬ ವ್ಯಾಘ್ರ ಅನೇಕ ಬಾರಿ ಸಾಧನಾಪಥದಿಂದ ತಪ್ಪಿಸಿಕೊಂಡು ವಿಷಯವೆಂಬ ಪೊದೆಗಳಲ್ಲಿ ಅಡಗಿಕೊಳ್ಳುತ್ತದೆ. ಸಾಧನೆಯ, ನಾಮಸ್ಮರಣೆಯ ಅಭ್ಯಾಸವಿದ್ದರೆ ಅದರ ಬಲದಿಂದ ಮನಸ್ಸನ್ನು ವಿಷಯಗಳ ಪೊದೆಯಿಂದ ಹೊರತಂದು ಮತ್ತೆ ಸಾಧನಾಪಥದಲ್ಲಿ ಮುನ್ನಡೆಸಬಹುದು ಎಂದರಂತೆ.

ನಾವು ಒಳ್ಳೆಯ ಅಭ್ಯಾಸಗಳನ್ನು ಮೊದಲಿನಿಂದಲೂ ಬೆಳೆಸಿಕೊಂಡಿದ್ದರೆ, ಅವು ನಮ್ಮನ್ನು ಆಪತ್ಕಾರಿ ಸನ್ನಿವೇಶಗಳಲ್ಲಿ ಪಾರುಮಾಡುತ್ತವೆಂಬುದನ್ನು ಮೇಲ್ಕಂಡ ಘಟನೆ ತೋರಿಸುತ್ತದಲ್ಲವೇ? ಈಗ ಪೂಜ್ಯ ಸಿದ್ಧಾರೂಢರ ಪುಣ್ಯಸ್ಮರಣೆಗೆ ಪ್ರಣಾಮಗಳನ್ನು ಸಲ್ಲಿಸೋಣ. ಹುಲಿಯು ಪ್ರಾಣಾಪಾಯದಿಂದ ಪಾರಾದದ್ದು ಪವಾಡದಿಂದಲೋ, ಅಭ್ಯಾಸ  ಎಂಬ ಪ್ರಶ್ನೆಗೆ ಉತ್ತರ ಹುಡುಕೋಣವೇನು?