About Us Advertise with us Be a Reporter E-Paper

ಅಂಕಣಗಳು

ಸತೀಶ ವಿರುದ್ಧ ಪ್ರಚಾರ ಮಾಡಿದ್ದೇನೆಂಬುದು ಸುಳ್ಳು

ಬಾಪು ಗೌಡ

ಸಂದರ್ಶನ: ಎ.ಕೆ.ಉದಯಶಂಕರ

ಬೆಳಗಾವಿ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ಪಿಎಲ್‌ಡಿ) ಅಧ್ಯಕ್ಷರ ಚುನಾವಣೆ ಈ ಸಲ ರಾಜ್ಯ ರಾಜಕಾರಣವನ್ನು ಬೆಳಗಾವಿಯತ್ತ ತಂದು ನಿಲ್ಲಿಸಿತ್ತು. ಮೇಲ್ನೋಟಕ್ಕೆ ಈ ವಿವಾದದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಾರಕಿಹೊಳಿ, ಶಾಸಕರಾದ ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಹೆಸರು ಕೇಳಿ ಬಂದಿತ್ತು. ಈ ಕುರಿತು ನಾಯಕರ ಮನದಾಳ ಅರಿಯಲು ವಿಶ್ವವಾಣಿ , ಬಾಪು ಗೌಡ ಅವರನ್ನು ಮಾತಾಡಿಸಿದಾಗ ತಮ್ಮ ಅಭಿಪ್ರಾಯವನ್ನು ಅವರು ಇಲ್ಲಿ ಮುಕ್ತವಾಗಿ ಹಂಚಿಕೊಂಡಿದ್ದಾರೆ.

ಪಿಎಲ್‌ಡಿ ಬ್ಯಾಂಕ್ ಚುನಾವಣೆಯಲ್ಲಿ ನೀವು ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿ ಗುರುತಿಸಿಕೊಂಡಿದ್ದು ನಿಜವೇ ?

– 2002ರಿಂದ 2018ರ ವರೆಗೆ ಪಿಎಲ್‌ಡಿ ಬ್ಯಾಂಕ್ ನಿರ್ದೇಶಕನಾಗಿ ಕಾರ್ಯನಿರ್ವಹಿಸಿದ್ದೆ. 2002ರಿಂದ 2005ರ ಅವಧಿವರೆಗೆ ಸುಮಾರು ಎರಡೂವರೆ ವರ್ಷಗಳ ಕಾಲ ಅಧ್ಯಕ್ಷನಾಗಿದ್ದೆ. ಈ ನಡುವೆ 2005ರಿಂದ 2010ರವರೆಗೆ ಸ್ಟೇಟ್ ಲ್ಯಾಂಡ್ ಬ್ಯಾಂಕ್ ನಿರ್ದೇಶಕನಾಗಿ ಕಾರ್ಯನಿರ್ವಹಿಸಿದ್ದೆ. ಪಿಎಲ್‌ಡಿ ಬ್ಯಾಂಕ್‌ಗೆ ಸಂಬಂಧಿಸಿ ಹೇಳುವುದಾದರೆ ನಾನು ಈ ಸಲ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರಲಿಲ್ಲ. ನಮ್ಮಲ್ಲಿರುವ ಒಟ್ಟು 14 ನಿರ್ದೇಶಕರಲ್ಲಿ ಯಾರೊಬ್ಬರನ್ನಾದರು ಅಧ್ಯಕ್ಷರನ್ನಾಗಿ ಮಾಡಿ ಎಂದು ಮೊದಲೇ ಹೇಳಿದ್ದೆ. ಇದಕ್ಕೆ ಕಾರಣ ನಾನು ಈ ಮೊದಲು ಮತ್ತೊಮ್ಮೆ ಅಧ್ಯಕ್ಷನಾಗುವ ಬಯಕೆ ಹೊಂದಿರಲಿಲ್ಲ. ನಾನು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದೆ ಎನ್ನುವ ಮಾತು ನಿಜವಲ್ಲ. ಅಷ್ಟಕ್ಕೂ ಲಕ್ಷ್ಮೀ ಹೆಬ್ಬಾಳ್ಕರ್ ಅವರು ನನ್ನನ್ನು ಅಧ್ಯಕ್ಷನನ್ನಾಗಿ ಮಾಡಲು ಹೊರಟಿರುವ ವಿಚಾರ ನನಗೆ ಗೊತ್ತಿಲ್ಲ, ನನ್ನೊಂದಿಗೆ ಆ ಬಗ್ಗೆ ಚರ್ಚಿಸಿಯೂ ಇರಲಿಲ್ಲ.

ಸತೀಶ ಅವರ ಪರವಾಗಿ ನೀವು ವಿಧಾನಸಭಾ ಚುನಾವಣೆಯಲ್ಲಿ ಕೆಲಸ ಮಾಡಿರಲಿಲ್ಲ ಎಂಬ ಆರೋಪ ನಿಜವೇ?

ನನ್ನ ಕಾರ್ಯಕ್ಷೇತ್ರ ಯಮಕನಮರಡಿ ವಿಧಾನಸಭಾ ಮತಕ್ಷೇತ್ರದಲ್ಲಿ ಬರುತ್ತದೆ. ಆದರೆ, ಈ ಸಲದ ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಗೆಲ್ಲಿಸುವ ಏಕೈಕ ಉದ್ದೇಶದಿಂದ ಗ್ರಾಮೀಣಕ್ಕೆ ಬಂದು ಪ್ರಚಾರ ಮಾಡಿದ್ದೆ. ಅಷ್ಟಕ್ಕೂ ಸತೀಶ ಜಾರಕಿಹೊಳಿ ಅವರ ಪರ ನಾನು ಪ್ರಚಾರದಿಂದ ದೂರ ಉಳಿದಿರಲಿಲ್ಲ. ಪೂರ್ಣವಾಗಿ ಗ್ರಾಮೀಣ ಮತಕ್ಷೇತ್ರದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದೆ. ಹೆಬ್ಬಾಳ್ಕರ್ ಚುನಾವಣಾ ಪ್ರಚಾರದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರಿಂದ ಸತೀಶ ಪರವಾಗಿ ಹೆಚ್ಚಿಗೆ ಶ್ರಮಿಸಲಾಗಲಿಲ್ಲ. ಹಾಗಂತ ಇದು ಸತೀಶ ವಿರುದ್ಧವಾಗಿ ಪ್ರಚಾರ ಅಥವಾ ಪ್ರಚಾರದಿಂದ ದೂರು ಉಳಿದುಕೊಂಡಿದ್ದೇ ಅರ್ಥೈಸುವುದು ಸರಿಯಲ್ಲ.

ಸತೀಶ ಜಾರಕಿಹೊಳಿ ಹಾಗೂ ನಿಮ್ಮ ನಡುವೆ ಈ ಸಲ ವೈಮನಸ್ಸು ಉಂಟಾಗಿತ್ತೇ ?

ಸತೀಶ ಜಾರಕಿಹೊಳಿ ಹಾಗೂ ನನ್ನ ನಡುವೆ ಯಾವುದೇ ಭಿನ್ನಮತ ಹಾಗೂ ವೈಮನಸ್ಸು ಉಂಟಾಗಿರಲಿಲ್ಲ. ಸತೀಶ ಅವರು ಹಿರಿಯರು ಮಾತ್ರವಲ್ಲ. ನನ್ನ ರಾಜಕೀಯ ಗುರುಗಳಾಗಿದ್ದಾರೆ. ನನ್ನ ಹಾಗೂ ಅವರ ಸ್ನೇಹದ ಬಗ್ಗೆ ಯಾರಿಗೂ ಗೊತ್ತಿಲ್ಲ. ಅಷ್ಟೊಂದು ದೊಡ್ಡಮಟ್ಟದಲ್ಲಿ ನಾವು ಸ್ನೇಹಿತರಾಗಿದ್ದೇವೆ. ನಾನು ಅವರ ವಿರುದ್ಧ ಹೋಗುವ ಪ್ರಶ್ನೆಯೇ ಉದ್ಬವಿಸುವುದಿಲ್ಲ. ಪಿಎಲ್‌ಡಿ ಅಧ್ಯಕ್ಷರ ಚುನಾವಣೆ ಈಗ ಮುಗಿದ ಅಧ್ಯಾಯ. ಸುಮ್ಮನೆ ಅದನ್ನು ಬೆಳೆಸುವುದು ಬೇಡ. ಪಿಎಲ್‌ಡಿ ಬ್ಯಾಂಕ್ ಚುನಾವಣೆಗೆ ಸಂಬಂಧಿಸಿ ನಡೆದಿರುವ ಎಲ್ಲ ಬೆಳವಣಿಗೆ ಹಾಗೂ ಗೊಂದಲಗಳ ಬಗ್ಗೆ ಇಷ್ಟರಲ್ಲಿಯೇ ಸುದ್ದಿಗೋಷ್ಠಿ ಕರೆದು ಜನರಿಗೆ ನಡೆದಿರುವ ನೈಜ ಸಂಗತಿಯನ್ನು ಮನವರಿಕೆ ಮಾಡುತ್ತೇನೆ.

ಪಿಎಲ್‌ಡಿ ಬ್ಯಾಂಕ್ ಚುನಾವಣೆ ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದಾದರು ಏಕೆ?

ಅಧ್ಯಕ್ಷ ಸ್ಥಾನಕ್ಕೆ ಈ ಸಲ ನನ್ನ ಹೆಸರು ಹೇಗೆ ಬಂತೋ ಗೊತ್ತಿಲ್ಲ. ನಾನು ಅಧ್ಯಕ್ಷ ಸ್ಥಾನಕ್ಕೆ ಹಾಕಿರಲಿಲ್ಲ. ಜತೆಗೆ ಯಾರ ಮನೆಯ ಬಾಗಿಲು ಬಡಿದಿರಲಿಲ್ಲ. ಈ ಮೊದಲೇ ಅಧ್ಯಕ್ಷನಾಗಿದ್ದರಿಂದ ಈ ಸಲ ನಾನು ಮತ್ತೊಮ್ಮೆ ಅಧ್ಯಕ್ಷ ಆಗಲಾರೆ ಎಂದು ಸ್ಪಷ್ಟವಾಗಿ ತಿಳಿಸಿದ್ದೆ. ಸಹಕಾರಿ ರಂಗದಲ್ಲಿ ರಾಜಕೀಯ ಬೆರಸುವುದು ಬೇಡ ಎಂದು ಹೇಳಿದ್ದೆ. ಆದರೆ ವಿನಾಕಾರಣ ಈ ಸಲದ ಚುನಾವಣೆಯನ್ನು ರಾಜಕೀಯಕ್ಕೆ ತಂದು ಹಚ್ಚಿದರು. ಇದಕ್ಕೆ ಏನು ಮಾಡಲು ಆಗುತ್ತದೆ. ಸದ್ಯದ ಬೆಳವಣಿಗೆಯ ಬಗ್ಗೆ ಮಾತನಾಡಲಾರೆ. ಎಲ್ಲವು ಸುಖಾಂತ್ಯಗೊಂಡಿದೆ. ಈ ವಿಚಾರವಾಗಿ ನಾನು ಹೆಚ್ಚಿಗೆ ಮಾತನಾಡಲು ಬಯಸಲಾರೆ. ಸಹೋದರರು ನನ್ನ ವಿರೋಧಿಗಳಲ್ಲ, ಮಿತ್ರರು. ಈ ಬಗ್ಗೆ ಯಾವುದೇ ಸಂದೇಹ ಬೇಡ. ನನ್ನ ಹಾಗೂ ಜಾರಕಿಹೊಳಿ ಸಹೋದರರ ಮಿತ್ರತ್ವ ಬಣ್ಣಿಸಲಾಗದು. ಇದಕ್ಕೆ ರಾಜಕೀಯ ಲೇಪನ ಮಾಡುವ ಅಗತ್ಯವಿಲ್ಲ. ಈ ವಿಚಾರವನ್ನು ಎಲ್ಲರೂ ಇಲ್ಲಿಗೇ ಬಿಡುವುದು ಒಳಿತು.

Tags

Related Articles

Leave a Reply

Your email address will not be published. Required fields are marked *

Language
Close