About Us Advertise with us Be a Reporter E-Paper

ಅಂಕಣಗಳು

ನಮ್ಮವರು ಬೇರೆಯವರೆನಿಸುವುದು, ಬೇರೆಯವರು ನಮ್ಮವರಾಗುವುದು ಸಹಜ!

ಒಂದು ಹಳ್ಳಿಯಲ್ಲಿ ಒಬ್ಬ ರೈತನಿದ್ದ. ಅವನು ತನ್ನ ಜೀವನದಲ್ಲಿ ಬಹಳ ನೊಂದಿದ್ದ. ಅವನು ಅನುಭವಿಸುತ್ತಿರುವ ನೋವನ್ನು ನೋಡಿದ ಹಿರಿಯರೊಬ್ಬರು, ‘ನಿನ್ನ ಜೀವನದ ಸಮಸ್ಯೆಗಳ ಪರಿಹಾರಕ್ಕಾಗಿ ಶರಣು ಹೋಗು. ಅವರು ನಿನ್ನ ಎಲ್ಲಾ ನೋವುಗಳಿಗೆ ಪರಿಹಾರ ನೀಡುತ್ತಾರೆ’ ಎಂದು ಸಲಹೆ ನೀಡಿದರು. ಇದನ್ನು ಕೇಳಿದ ರೈತ ಕೂಡಲೇ ಬುದ್ಧ ಇದ್ದಲ್ಲಿಗೆ ಹೋದ. ತನ್ನ ಸಮಸ್ಯೆಗೆ ಬುದ್ಧನೇ ಪರಿಹಾರ ನೀಡುತ್ತಾನೆ ಎಂಬ ನಂಬಿಕೆ ಅವನಿಗಿತ್ತು. ಹೋದಕೂಡಲೇ ಬುದ್ಧನಿಗೆ ನಮಿಸಿ, ‘ಹೇ ಗುರುದೇವಾ, ನಾನುಬ್ಬ ರೈತ. ನನಗೆ ಕೃಷಿಯೆಂದರೆ ಪ್ರಾಣ. ಆದರೆ ಹವಾಮಾನ ನನ್ನ ಜತೆಗಿಲ್ಲ. ಕೆಲವೊಮ್ಮೆ ಬರುವ ಮಳೆ ನನ್ನ ಬೆಳೆಗೆ ಸಾಕಾಗುವುದಿಲ್ಲ. ಕಳೆದ ವರ್ಷ ಕೂಡಾ ಸಾಕಾಗದೇ, ಬೆಳೆಯೂ ಕಡಿಮೆಯಾಗಿ, ತಿನ್ನಲು ಏನೂ ಇಲ್ಲದಂತಾಗಿತ್ತು. ಈ ವರ್ಷವೂ ಅತೀ ಹೆಚ್ಚು ಮಳೆಬಂತು. ಹೀಗಾಗಿ ಇದ್ದ ಬೆಳೆಯೂ ಹಾಳಾಯಿತು. ಈಗಲೂ ನನ್ನ ಬಳಿ ತಿನ್ನಲು ಏನಿಲ್ಲ’ ಎನ್ನುತ್ತಾ ತನ್ನ ದುಃಖ ಹಂಚಿಕೊಳ್ಳುತ್ತಿರುವ ರೈತನ ಮಾತನ್ನು ಬುದ್ಧ ಬಹಳ ಶಾಂತ ಮನಸ್ಸಿನಿಂದ ಕೇಳುತ್ತಾನೆ.

ರೈತ ಮುಂದುವರಿಸುತ್ತಾ, ‘ನನಗೆ ಮದುವೆಯಾಗಿದೆ. ನನ್ನ ಹೆಂಡತಿ ಮನೆ ನೋಡಿಕೊಳ್ಳುತ್ತಾಳೆ. ನಾನವಳನ್ನು ನನ್ನ ಜೀವಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತೇನೆ. ಆದರೂ ಅವಳು ಕೆಲವೊಮ್ಮೆ ನನ್ನನ್ನು ಚಿಂತೆಗೀಡು ಆಗ ನಾನು ಅವಳಿಂದ ಬೇಸತ್ತಿದ್ದೇನೇನೋ ಎಂದೆನಿಸುತ್ತದೆ. ಮತ್ತೆ ಕೆಲವೊಮ್ಮೆ ಅವಳು ನನ್ನ ಜೀವನದಲ್ಲಿ ಇಲ್ಲದೇ ಹೋಗಿದ್ದರೆ ಚೆನ್ನಾಗಿತ್ತೇನೋ ಎನಿಸುತ್ತದೆ. ನನಗೆ ಮಕ್ಕಳೂ ಇದ್ದಾರೆ. ಅವರು ತುಂಬಾ ಮುಗ್ಧರು. ಕೆಲವೊಮ್ಮೆ ಅವರು ನನ್ನ ಮಾತನ್ನು ಕೇಳುವುದೇ ಇಲ್ಲ. ಆಗ ನನಗೆ ಅವರು ನನ್ನ ಮಕ್ಕಳೇ ಅಲ್ಲವೇನೋ ಎನಿಸುತ್ತದೆ’ ಎನ್ನುತ್ತಾ ರೈತ ತನ್ನ ನೋವು, ದ್ವಂದ್ವಗಳನ್ನೆಲ್ಲಾ ಬುದ್ಧನೆದುರು ಹೇಳಿಕೊಂಡ.

ಅವನ ಜೀವನದಲ್ಲಿ ಹಲವಾರು ಸಮಸ್ಯೆಗಳಿದ್ದವು. ಬುದ್ಧ ಒಂದೇ ಒಂದು ಮಾತೂ ಹೇಳದೆ ನೋವನ್ನೆಲ್ಲಾ ಕೇಳಿಸಿಕೊಂಡ. ರೈತ ತಡೆಯೇ ಇಲ್ಲದಂತೆ ತನ್ನ ಮನಸ್ಸಿನಲ್ಲಿರುವುದನ್ನೆಲ್ಲಾ ಹೇಳಿಕೊಂಡ. ನಂತರ ಹೇಳಲು ವಿಚಾರಗಳೇ ಇಲ್ಲದಾಗ ಅವನ ಮನಸ್ಸು ಹಗುರವಾಯಿತು. ಆಮೇಲೆ ಅವನು ಸುಮ್ಮನೆ ಕುಳಿತು ಬುದ್ಧನ ಉತ್ತರಕ್ಕಾಗಿ ಕಾಯತೊಡಗಿದ. ಆದರೆ ಬುದ್ಧ ಯಾವುದೇ ಪರಿಹಾರ ಸೂಚಿಸದೇ ಹಾಗೇ ಕುಳಿತಿದ್ದ. ಆಶ್ವರ್ಯಗೊಂಡ ರೈತ ಬುದ್ಧನಲ್ಲಿ, ‘ನಾನು ನಿಮ್ಮ ಬಳಿ ನನ್ನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಬಂದಿದ್ದೇನೆ. ನೀವು ಏನೂ ಪರಿಹಾರ ನೀಡುವುದೇ ಇಲ್ಲವೇ?’ ಎಂದು ಕೇಳಿದ. ಅದಕ್ಕೆ ‘ಇಲ್ಲ. ನಾನು ನಿನ್ನ ಯಾವುದೇ ಸಮಸ್ಯೆಗಳಿಗೆ ಪರಿಹಾರ ನೀಡಲಾರೆ’ ಎಂದು ಉತ್ತರಿಸುತ್ತಾನೆ. ಪಟ್ಟು ಬಿಡದ ರೈತ, ‘ನೀವು ಎಲ್ಲರ ಸಮಸ್ಯೆಗಳಿಗೂ ಪರಿಹಾರ ನೀಡುತ್ತೀರಿ ಎಂದು ಕೇಳಿದ್ದೆ. ಆದರೆ, ನನ್ನ ಸಮಸ್ಯೆಗಳಿಗೆ ಪರಿಹಾರ ನೀಡಲು ಮಾತ್ರ ಏಕೆ ತಿರಸ್ಕರಿಸುತ್ತಿದ್ದೀರಿ? ನಾನು ಬಡ ರೈತ ಎನ್ನುವ ಕಾರಣಕ್ಕೆ ನೀವು ಹೀಗೆ ಮಾಡುತ್ತಿದ್ದೀರಾ?’ ಎನ್ನುತ್ತಾ ತನ್ನ ಅಸಮಾಧಾನವನ್ನು ತೋರಿಸಿಕೊಂಡ.

ಬುದ್ಧ ಹಿಂದಿನ ಶಾಂತತೆಯಿಂದಲೇ ಉತ್ತರಿಸುತ್ತಾ, ‘ನೋಡು, ಮನುಷ್ಯನ ಜೀವನದಲ್ಲಿ ಕಷ್ಟಗಳು ಬರುವುದು ಸಹಜ. ಬೇರೆಯವರು ನಮ್ಮವರೆನಿಸಿದರೆ, ಮತ್ತೆ ಕೆಲವೊಮ್ಮೆ ನಮ್ಮವರೂ ಬೇರೆಯವರಂತೆ ಭಾಸವಾಗುತ್ತದೆ. ಇದೇ ಜೀವನ ಚಕ್ರ. ಇದರಿಂದ ತಪ್ಪಿಸಿಕೊಳ್ಳುವುದು ಯಾರಿಂದಲೂ ಸಾಧ್ಯವಿಲ್ಲ. ನನ್ನದೂ, ನಿನ್ನದೂ ಹಾಗೂ ಈ ಭೂಮಿಯ ಮೇಲಿರುವ ಪ್ರತಿಯೊಬ್ಬರ ಜೀವನದಲ್ಲಿಯೂ ಸಮಸ್ಯೆ ಎಂಬುದುದು ಸಹಜವೇ. ಇದಕ್ಕೆ ಪರಿಹಾರ ಯಾರೂ ಕಂಡುಹಿಡಿಯಲು ಸಾಧ್ಯವಿಲ್ಲ. ನನ್ನಿಂದಲೂ ಸಾಧ್ಯವಿಲ್ಲ. ನೀನು ಬದುಕಿನಲ್ಲಿ ಎಷ್ಟೇ ದೊಡ್ಡ ಸಮಸ್ಯೆಯನ್ನು ಎದುರಿಸು, ಅದಕ್ಕೆ ಪರಿಹಾರವನ್ನೇನೋ ಕಂಡುಕೊಳ್ಳಬಹುದು. ಆದರೆ ಅದು ಮುಗಿಯುತ್ತಿದ್ದಂತೆ ಅದೇ ಸ್ಥಾನದಲ್ಲಿ ಇನ್ನೊಂದು ಸಮಸ್ಯೆ ಉತ್ಪತ್ತಿಯಾಗುತ್ತದೆ. ಹೇಗಿರುತ್ತದೆ ಎಂದು ಹೇಳುವುದೇ ಅಸಾಧ್ಯ. ಯಾವತ್ತೋ ಂದು ದಿನ ನೀನು ಇಷ್ಟಪಟ್ಟವರೇ ನಿನ್ನನ್ನು ಬಿಟ್ಟು ಹೋಗಬಹುದು. ಇನ್ನೊಂದು ದಿನ ಈ ಜೀವನವೇ ನಿನ್ನ ಕೈಬಿಡಬಹುದು. ಮತ್ತೊಂದು ದಿನ ನಿನ್ನ ಪ್ರಿಯ ಜನರು ಮರಣ ಹೊಂದಿದರೆ, ಮುಂದೊಂದು ದಿನ ನೀನೆ ಸತ್ತು ಹೋಗುತ್ತೀಯಾ. ಸಮಸ್ಯೆಗಳು ಹಾಗೇ ಇರುತ್ತವೆ. ಇವತ್ತು ಕೂಡಾ ಅದೇ ಸಮಸ್ಯೆ ಇದೆ. 100 ವರ್ಷ ಹಿಂದೆ ನೋಡಿದರೂ ಸಮಸ್ಯೆಗಳು ಜೀವಂತವಾಗಿದ್ದವು. ಇನ್ನೂ 100 ವರ್ಷ ನಂತರ ನೋಡಿದರೂ ಯಥಾವತ್ತಾಗಿರುತ್ತವೆ’ ಎನ್ನುತ್ತಾನೆ.

ಅವನ ಮಾತನ್ನು ಕೇಳಿದ ರೈತ ಕೋಪಗೊಂಡು, ‘ಎಲ್ಲರೂ ನಿಮ್ಮನ್ನು ಮಹಾನುಭಾವ ಎನ್ನುತ್ತಾರೆ. ನಾನು ಇಲ್ಲಿ ನನ್ನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಬಂದಿದ್ದೆ. ಆದರೆ ನೀವು, ಯಾವುದಕ್ಕೂ ಪರಿಹಾರ ನೀಡಿಲ್ಲ. ಜನ ನಿಮ್ಮ ಕುರಿತು ನನ್ನ ಬಳಿ ಸುಳ್ಳು ಹೇಳಿದರು. ಕೆಲವು ಸಮಯಗಳ ಹಿಂದೆ ಒಬ್ಬ ಮಹಾತ್ಮ ನನ್ನ ಮನೆಗೆ ಬಂದಿದ್ದರು. ಅವರು ನನ್ನಿಂದ ದಾನ ದಕ್ಷಿಣೆ ಪಡೆದು ನನ್ನ ಬಳಿ ಸೇವೆ ಮಾಡಿಸಿಕೊಂಡರು. ಅವರು ಹೋದಮೇಲೆ ನನಗೆ ಸ್ವಲ್ಪ ಶಾಂತಿಯೂ ದೊರಕಿತ್ತು. ನೀವು ನೋಡಿದರೆ ಹೀಗಾಡುತ್ತಿದ್ದೀರಾ’ ಎಂದು ದೂರಿದ. ಅದಕ್ಕೆ ಬುದ್ಧ ಮುಗುಳ್ನಕ್ಕು, ‘ನೀನು ಅಷ್ಟೆಲ್ಲಾ ಮಾಡಿದ ಮೇಲೆ ನಿನಗೆ ನೆಮ್ಮದಿ ದೊರಕಿದೆಯೇ? ಎಲ್ಲಾ ಸಮಸ್ಯೆಗಳು ಪರಿಹಾರವಾಗಿದ್ದಾವಾ? ನೀನೀಗ ಖುಷಿಯಾಗಿದ್ದೀಯಾ? ಇಲ್ಲವಲ್ಲಾ? ನಿನ್ನ ಈ ದುಃಖ ಎಂದಿಗೂ ಪರಿಹಾರವಾಗುವುದಿಲ್ಲ’ ಎಂದು ಖಡಾಖಂಡಿತವಾಗಿ ಹೇಳಿದ. ಬುದ್ಧನ ಮಾತಿನಿಂದ ರೈತನ ಮನಸ್ಸು ಇನ್ನಷ್ಟು ಕಿರಿಕಿರಿಗೊಂಡಿತು. ‘ಹಾಗಾದರೆ, ನೀವು ನನ್ನ ಸಮಸ್ಯೆಗಳಿಗೆ ಪರಿಹಾರ ನೀಡುವುದಿಲ್ಲವೆಂದು ತಿಳಿದುಕೊಳ್ಳಲಾ? ಇಷ್ಟು ಚಿಕ್ಕ ವಿಚಾರಗಳಿಗೆ ಪರಿಹಾರ ನೀಡುವುದು ನಿಮ್ಮಿಂದ ಅಸಾಧ್ಯವಾದರೆ, ನೀವು ಸನ್ಯಾಸಿಯಾಗಿ ಇರುವುದು ಯಾಕೆ?’ ಎಂದು ಬೈಯುತ್ತಾನೆ.

ಬಹು ತಾಳ್ಮೆಯಿಂದ ಉತ್ತರಿಸಿದ ಬುದ್ಧ, ‘ನಾನು ನಿನ್ನ ಔದ್ಯೋಗಿಕ ಸಮಸ್ಯೆಗೆ ನಾನು ಪರಿಹಾರ ನೀಡಲಾರೆ. ಆದರೆ, ಮಾನಸಿಕ ಸಮಸ್ಯೆಯನ್ನು ಖಂಡಿತಾ ದೂರ ಮಾಡಬಲ್ಲೆ’ ಎನ್ನುತ್ತಾನೆ. ಅವನು ಮುಂದುವರಿಸುತ್ತಾ, ‘ನೀನು ನಿನ್ನ ಜೀವನದಲ್ಲಿ ಯಾವುದೇ ಸಮಸ್ಯೆ ಇರಬಾರದು ಎಂದು ಹಠ ಹಿಡಿದು ಕುಳಿತಿದ್ದೀಯಾ. ಇದೇ ನಿನ್ನ ಮುಖ್ಯವಾದ ಸಮಸ್ಯೆ. ಜೀವನದಲ್ಲಿ ಸಮಸ್ಯೆಗಳು ಬಂದೇ ಬರುತ್ತವೆ. ಜೀವನದಲ್ಲೂ ಒಂದಲ್ಲಾ ಒಂದು ರೀತಿಯ ಕಷ್ಟಗಳು ಇರುತ್ತವೆ. ಈ ವಿಚಾರವನ್ನು ಮೊದಲು ಸ್ವೀಕರಿಸು. ಇಡೀ ಜಗತ್ತಿನಲ್ಲಿ ನೀನೊಬ್ಬನೇ ನೊಂದಿರುವುದೆಂದು ನೀನು ತಿಳಿದುಕೊಂಡಿದ್ದೀಯಾ. ನಿನ್ನಷ್ಟು ದುಃಖಿಗಳು ಯಾರೂ ಇರುವುದಿಲ್ಲವೆಂದು ಯೋಚಿಸಿದ್ದೀಯಾ.

ಆದರೆ, ನೀನು ಒಮ್ಮೆ ಕಣ್ಣು ಬಿಟ್ಟು ಜಗತ್ತನ್ನು ನೋಡು. ಆಗ ನಿನಗೆ ಜಗತ್ತಿನಲ್ಲಿ ನಿನ್ನಕ್ಕಿಂತ ಹೆಚ್ಚು ನೋವು ಅನುಭವಿಸುತ್ತಿಸುವವರು, ಸಂಕಟಕ್ಕೊಳಗಾದವರು ಇದ್ದಾರೆಂದು ತಿಳಿಯುತ್ತದೆ. ಅದರೆದುರು ನಿನ್ನ ಸಮಸ್ಯೆ ಏನೋ ಅಲ್ಲವೆಂದು ನಿನಗೆ ಅರ್ಥವಾಗುತ್ತದೆ. ಅಂದಹಾಗೆ, ನಿನಗೆ ನಿನ್ನ ದುಃಖವೇ ನಿನ್ನ ಆಸುಪಾಸಿನವರಿಗೆ ಅವರ ದುಃಖ ದೊಡ್ಡದೆನಿಸುತ್ತದೆ. ನಾವು ಯಾವತ್ತೂ ಬೇರೆಯವರ ಬಗ್ಗೆ ಯೋಚಿಸುವುದೇ ಇಲ್ಲ.

ನಮ್ಮ ಜೀವನದಲ್ಲಿ, ದುಃಖವೇ ಇಲ್ಲದಾಗಿನ್ನೊಬ್ಬರಿಗೆ, ಜೀವನದಲ್ಲಿ ದುಃಖಗಳು ಬಂದೇ ಬರುತ್ತವೆ. ಯಾವತ್ತೂ ಸುಖ ಹಾಗೂ ದುಃಖವನ್ನು ಸಮಾನಾಗಿ ಸ್ವೀಕರಿಸಬೇಕೆಂದು ಉಪದೇಶ ನೀಡುತ್ತೇವೆ. ಆದರೆ, ಅದಕ್ಕಿಂತಲೂ ಅರ್ಧ ಪ್ರಮಾಣದ ದುಃಖ ನಮಗೆ ಬಂದಾಗ ಕಂಗಾಲಾಗುತ್ತೇವೆ. ಹೀಗೆ, ನಾವು ನಮ್ಮ ಜೀವನದಲ್ಲಿ ದುಃಖ ಹಾಗೂ ಸುಖಗಳೆರಡೂ ಬರುತ್ತವೆ. ಅವುಗಳಲ್ಲಿ ಒಂದನ್ನೂ ನಾವು ಕೈ ಬಿಡುವಂತಿಲ್ಲ ಎಂದು ಮಾಡಿಕೊಂಡರೆ, ಜೀವನ ಸುಲಭವಾಗುತ್ತದೆ’ ಎಂದು ತಿಳಿಸುತ್ತಾನೆ.ಇದನ್ನೆಲ್ಲಾ ಕೇಳಿದ ರೈತ ಬುದ್ಧನ ಕಾಲಿಗೆ ನಮಸ್ಕರಿಸುತ್ತಾ, ‘ಹೇ ದೇವಾ, ಈ ವಿಚಾರವನ್ನು ಇಲ್ಲಿಯ ವರೆಗೂ ನಾನು ಅರ್ಥಮಾಡಿಕೊಂಡಿಲ್ಲ. ಇಂಥಹ ಕಷ್ಟಕರ ವಿಚಾರವನ್ನು ಬಹಳ ಸರಳವಾಗಿ ಅರ್ಥ ಮಾಡಿಸಿದಿರಿ. ನಿಮಗೆ ಧನ್ಯವಾದಗಳು ನೀವು ಕೊಟ್ಟ ವಿದ್ಯೆಯನ್ನು ನಾನೆಂದಿಗೂ ಮರೆಯುವುದಿಲ್ಲ’ ಎನ್ನುತ್ತಾ ಬಹಳ ಸಂತಸದಿಂದ ಆ ರೈತ ಮನೆಗೆ ಮರಳಿದ.

ಒಂದಾನೊಂದು ಕಾಲದಲ್ಲಿ ಒಂದು ದುಂಬಿ ಹಾಗೂ ಕೀಟ ಸ್ನೇಹಿತರಾದವು. ಒಂದು ಕೀಟ, ದುಂಬಿಯನ್ನು ತನ್ನ ಮನೆಗೆ ಊಟಕ್ಕೆ ಆಹ್ವಾನಿಸಿತು. ಆ ದುಂಬಿ ಬಹಳ ಸಂತಸದಿಂದ ತನ್ನ ಮಕ್ಕಳೊಂದಿಗೆ ಕೀಟದ ಮನೆಗೆ ಹೋಯಿತು. ತನ್ನ ಸ್ನೇಹಿತೆಯನ್ನು ಕಂಡ ಕೀಟ, ಎಲ್ಲರನ್ನೂ ಊಟಕ್ಕೆ ಆಹ್ವಾನಿಸಿ, ಸಗಣಿಯನ್ನು ಉಣಬಡಿಸಿತು. ನಂತರ, ‘ಎಲ್ಲರೂ ತಿನ್ನಿ. ಊಟ ಚೆನ್ನಾಗಿದೆ‘ ಎಂದಿತು. ಇದನ್ನು ಕಂಡ ದುಂಬಿ ಸ್ವಲ್ಪ ಕಸಿವಿಸಿಗೊಂಡಿತು. ಸ್ವಲ್ಪ ಹೊತ್ತಲ್ಲೇ, ‘ಕೀಟದ ಸಂಘ ಮಾಡಿದ ಮೇಲೆ ಸಗಣಿ ತಿನ್ನಲೇಬೇಕು’ ಎಂದುಕೊಂಡಿತು. ಕೀಟದ ಈ ಸತ್ಕಾರಕ್ಕೆ ಬದಲಾಗಿ ತಾನು ಸತ್ಕಾರ ನೀಡಬೇಕೆಂದು ನಿರ್ಧರಿಸಿದ ದುಂಬಿ, ‘ಕೀಟವೇ, ನಿನ್ನ ಸತ್ಕಾರಕ್ಕೆ ನಾನು ಧನ್ಯ. ನಾಳೆ ನೀನು ನಿನ್ನ ಪರಿವಾರದೊಂದಿಗೆ ನಮ್ಮ ಮನೆಗೆ ಊಟಕ್ಕೆ ಬಾ’ ಎಂದಿತು. ಬಹಳ ಸಂತಸದಿಂದ ಒಪ್ಪಿಕೊಂಡ ಕೀಟವು ಮರುದಿನ ಬೆಳಗ್ಗೆ ದುಂಬಿಯ ಮನೆಗೆ ಹೋಯಿತು. ಊಟಕ್ಕೆ ಬಂದಿರುವ ಕೀಟವನ್ನು ಎತ್ತಿ ಹೂವಿನ ಮೇಲೆ ಕೂರಿಸಿ, ಎಷ್ಟು ಬೇಕೋ ಅಷ್ಟು ಮಕರಂದ ಹೀರುವಂತೆ ಸೂಚಿಸಿತು. ಕೀಟ ಸಿಹಿಯಾದ ಮಕರಂದವನ್ನು ಹೀರಿ ಸಂತೃಪ್ತಗೊಂಡಿತು. ನಂತರ ತನ್ನ ಸ್ನೇಹಿತೆಗೆ ಧನ್ಯವಾದವನ್ನು ‘ಊಟ ಬಹಳ ಚೆನ್ನಾಗಿತ್ತು. ನೀನು ಎಷ್ಟು ಸುಂದರ ಪ್ರದೇಶದಲ್ಲಿ ಬದುಕುತ್ತಿದ್ದೀಯಾ, ರುಚಿಕರ ಭೋಜನ ಮಾಡುತ್ತೀಯಾ. ನೀನ್ನ ಜೀವನವೇ ತುಂಬ ನೆಮ್ಮದಿಯಿಂದಿದೆ’ ಎಂದು ಹೊಗಳುತ್ತಾ, ಅದಕ್ಕೆ ತಾನು ಕೂಡಾ ಇಲ್ಲೇ ಶಾಶ್ವತವಾಗಿ ನೆಲೆಸಿದರೆ ಹೇಗೆ? ಎಂಬ ಆಲೋಚನೆ ಬಂತು. ಈ ಆಲೋಚನೆ ಬಂದಿದ್ದೇ ತಡ, ಕೂಡಲೇ ಆ ಹೂವಿನ ಮೇಲೆಯೇ ಕೂತು ಬಿಟ್ಟಿತು.

ಪಕ್ಕದಲ್ಲೊಂದು ದೇವಸ್ಥಾನವಿತ್ತು. ಅಲ್ಲಿನ ಅರ್ಚಕರು ಬಂದು ಆ ಹೂವನ್ನು ಕಿತ್ತುಕೊಂಡು ಹೋಗಿ ದೇವರ ಪಾದಕ್ಕೆ ಸಮರ್ಪಿಸಿದರು. ಮೂಲಕ ಆ ಕೀಟಕ್ಕೆ ದೇವರ ದರ್ಶನವೂ ಆದಂತಾಯಿತು. ದಿನವಿಡೀ ಆ ಕೀಟ ದೇವರ ಪಾದದಲ್ಲಿಯೇ ಇತ್ತು. ಸಂಜೆ ಮತ್ತೆ ಮರಳಿದ ಅರ್ಚಕರು ದೇವರಿಗೆ ಅರ್ಪಿಸಲಾಗಿದ್ದ ಎಲ್ಲಾ ಹೂವುಗಳನ್ನು ಒಟ್ಟು ಮಾಡಿ, ಅವುಗಳನ್ನು ಗಂಗೆಯಲ್ಲಿ ಹರಿಯಬಿಟ್ಟ. ಈಗ ಅದು ಪವಿತ್ರ ಗಂಗೆಯಲ್ಲಿ ಹರಿಯತೊಡಗಿತ್ತು. ಕೀಟಕ್ಕೆ ತನ್ನ ಹಣೆಬರಹದ ಮೇಲೆ ಬಹಳ ಹೆಮ್ಮೆ ಎನಿಸಿತ್ತು. ಅಷ್ಟರಲ್ಲಿಯೇ ದುಂಬಿ ಹಾರುತ್ತಾ ಬಂದು, ‘ಸಖಿ, ನಿನಗೀಗ ಹೇಗನಿಸುತ್ತಿದೆ?’ ಎಂದು ಕೇಳಿತು. ಅದಕ್ಕೆ ಕಿಟವು ಭಾವಪರವಶವಾಗಿ ‘ಇಂದು ನನ್ನ ಜನ್ಮ ಪಾವನವಾಯಿತು. ನನ್ನನ್ನು ಈ ಹೂವಿನೊಂದಿಗೆ ದೇವರಿಗೆ ಅರ್ಪಿಸಲಾಯಿತು.

ಯಾವ ಗಂಗೆಯಲ್ಲಿ ಜನರು ಸತ್ತಮೇಲೆ ಅವರ ಅಸ್ಥಿಯನ್ನು ಹರಿಬಿಡಲಾಗುತ್ತದೋ, ತನ್ಮೂಲಕ ಆತ್ಮಕ್ಕೆ ಶಾಂತಿ ದೊರಕಿಸಲಾಗುತ್ತದೋ, ಅದೇ ಗಂಗೆಯಲ್ಲಿ ಂದು ನಾನು ಜೀವಂತ ತೇಲುತ್ತಿದ್ದೇನೆ. ಇದಕ್ಕಿಂತ ದೊಡ್ಡ ಪುಣ್ಯ ಮತ್ತೊಂದಿದೆಯೇ? ನಿನಗೆ ತುಂಬಾ ಧನ್ಯವಾದಗಳು. ನಿನ್ನಿಂದಲೇ ಇಂದು ನಾನು ಈ ಅಭೂತಪೂರ್ವ ಘಟನೆಯನ್ನು ಅನುಭವಿಸಿದ್ದೇನೆ. ನಾನು ಇಲ್ಲಿಯವರೆಗೂ ಯಾವುದನ್ನು ಸ್ವರ್ಗವೆಂದೆಣಿಸಿಕೊಂಡಿದ್ದೆನೋ, ಅದು ನಿಜವಾದ ನರಕ. ಇದೇ ಸ್ವರ್ಗ. ಇದನ್ನು ಅನುಭವಿಸುತ್ತಿರುವುದು ನಿನ್ನ ಉತ್ತಮ ಸಂಘದ ಫಲವೇ.’ ಎಂದು ಕೇಳುತ್ತದೆ.

ನಮ್ಮ ಜೀವನದಲ್ಲಿಯೂ ಹಾಗೆ, ‘ಸಜ್ಜನರ ಸಂಘ ಹೆಜ್ಜೇನು ಸವಿದಂತೆ’ ಎಂಬ ಗಾದೆಯಂತೆ, ನಾವು ಯಾರ ಗೆಳೆತನ ಮಾಡುತ್ತೇವೋ ಅವರಂತೆಯೇ ಆಗುತ್ತೇವೆ. ಕುಡುಕರ ಸಂಘ ಮಾಡಿದರೆ ಕುಡುಕರೂ, ಕೊಲೆಗಾರರ ಸಂಘ ಮಾಡಿದರೆ ಕೊಲೆಗಾರರೂ, ಸ್ವಾರ್ಥಿಗಳ ಸಂಘ ಮಾಡಿದರೆ ಸ್ವಾರ್ಥಿಯೂ, ಸಂತರ ಸಂಘ ಮಾಡಿದರೆ ಸಂತರೂ, ಜ್ಞಾನಿಗಳ ಸಂಘ ಮಾಡಿದರೆ ಜ್ಞಾನಿಯೂ ಆಗುತ್ತೇವೆ. ಹೀಗಾಗಿ ನಾವು ಯಾರದ್ದೇ ಸ್ನೇಹ ಮಾಡುವ ಚೆನ್ನಾಗಿ ಯೋಚಿಸಿ, ಅದನ್ನು ಬೆಳೆಸಬೇಕು.

ಯಾರು ನಿಮಗೆ ಸಕಾರಾತ್ಮಕ ಚಿಂತನೆಯನ್ನು ಒದಗಿಸುತ್ತಾರೋ, ನೀವು ತಪ್ಪು ದಾರಿ ತುಳಿದಾಗ, ನಿಮ್ಮಲ್ಲಿರುವ ಒಬ್ಬ ಉತ್ತಮ ವ್ಯಕ್ತಿಯನ್ನು ಹೊರ ತರುವಲ್ಲಿ ತನ್ನ ಹಗಲು-ರಾತ್ರಿ ಒಂದು ಮಾಡುತ್ತಾರೋ, ಅವರ ಸಂಘ ಬೆಳೆಸಬೇಕು. ಅದೇ ರೀತಿ ಯಾರಾದರೂ ನಿಮ್ಮಲ್ಲಿ ನಕಾರಾತ್ಮಕತೆಯನ್ನು ತುಂಬುತ್ತಿದ್ದಾರೆ, ಅವರು ನಿಮ್ಮನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದರೆ, ಅಂಥವರನ್ನು ಎಷ್ಟು ಸಾಧ್ಯವೋ, ಅಷ್ಟು ದೂರದಲ್ಲಿ ಇಡುವುದು ಉತ್ತಮ. ಹೀಗೆ, ಒಬ್ಬರ ಸ್ನೇಹಿತರ ಗುಂಪನ್ನು ಅವರ ವ್ಯಕ್ತಿತ್ವ ಏನೆಂದು ತಿಳಿಯುತ್ತದೆ. ಹೀಗಾಗಿ ನಾವು ಯಾರದ್ದೇ ಸ್ನೇಹ ಬೆಳೆಸುವ ಮುನ್ನ ಚೆನ್ನಾಗಿ ಯೋಚಿಸಬೇಕು.

Tags

Related Articles

Leave a Reply

Your email address will not be published. Required fields are marked *

Language
Close