About Us Advertise with us Be a Reporter E-Paper

ಅಂಕಣಗಳು

ಉತ್ತರ ಕರ್ನಾಟಕದಲ್ಲೀಗ ಬರದ ಬೇಗುದಿ

ಅವಲೋಕನ: ಮಂಜುನಾಥ ಉಲುವತ್ತಿ ಶೆಟ್ಟರ್ ಉಪನ್ಯಾಸಕರು

ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಸುರಿದ ಮಳೆಗೆ ಕೊಡಗಿನ ಬೆಟ್ಟ-ಗುಡ್ಡಗಳೂ ಗುರುತು ಸಿಗದಷ್ಟು ಕೊಚ್ಚಿ ಹೋಗಿದ್ದರೆ, ಇತ್ತ ಉತ್ತರ ಕರ್ನಾಟಕದಲ್ಲಿ ಬಿತ್ತಿದ ಬೆಳೆಯೂ ಕೈಗೆ ಸಿಗದಂಥ ಬರ ಬಾಽಸುತ್ತಿದೆ. ಹೈದರಾಬಾದ್ ಕರ್ನಾಟಕ ಸೇರಿ ಉತ್ತರ ಕರ್ನಾಟಕದ ಬಹುತೇಕ ಕಡೆ ಮುಂಗಾರು ಆರಂಭದಲ್ಲಿ ಅಬ್ಬರ ತೋರಿ ಅನ್ನದಾತರಲ್ಲಿ ಆಸೆ ಹುಟ್ಟಿಸಿದ್ದ ಮಳೆರಾಯ ಮತ್ತೆ ಈ ಕಡೆ ಮುಖ ಮಾಡಿಯೇ ಇಲ್ಲ. ಜಲಾಶಯಗಳು ತುಂಬುವಷ್ಟು ಮಳೆ ಆದರೂ ರಾಜ್ಯಕ್ಕೆ ಸರಾಸರಿ ಶೇ.2ರಷ್ಟು ಮಳೆಯ ಕೊರತೆ ಉಂಟಾಗಿದೆ. ಇಲ್ಲಿಯವರೆಗೆ ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗಿ ಕೋಡಿ ಬಿದ್ದು ಪ್ರವಾಹದ ಭೀತಿ ಎದುರಾಗಿದ್ದರೂ ಕೆರೆಗಳಿಗೆ ನೀರು ಹರಿದಿಲ್ಲ. ಉತ್ತರದ ರಾಯಚೂರು, ವಿಜಯಪುರ, ಯಾದಗಿರಿ ಮತ್ತು ಹಾವೇರಿ ಜಿಲ್ಲೆಗಳ ಸ್ಥಿತಿ ಇನ್ನೂ ಗಂಭೀರವಾಗಿದೆ. ದಕ್ಷಿಣದ ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬಳ್ಳಾರಿ ಮತ್ತು ದಾವಣಗೆರೆಯಲ್ಲೂ ಬರದ ಕಾರ್ಮೋಡ ದಟ್ಟವಾಗಿದೆ. ಮುಂಗಾರು ಪೂರ್ವ ಮಳೆ ಸುರಿದು ಖುಷಿಯಾಗಿದ್ದ ರೈತರಿಗೆ ಈಗ ಭಾರೀ ಆತಂಕ ಕಾಡಲು ಪ್ರಾರಂಭಿಸಿದೆ.

ಈ ವರ್ಷ ರಾಜ್ಯದ 17 ಜಿಲ್ಲೆಗಳಲ್ಲಿ ಬರಗಾಲ ಆವರಿಸಿದೆ. ಅಂದರೆ ಕರ್ನಾಟಕದ ಅಂದಾಜು ಶೇ.80ರಷ್ಟು ಬರ ಮತ್ತು ನೆರೆ ಪೀಡಿತವಾಗಿದೆ. ನಮ್ಮ ನೆರೆಯ ರಾಜ್ಯವಾದ ಮಹಾರಾಷ್ಟ್ರದಲ್ಲಿ ಶೇ.58ರಷ್ಟು ಮಾತ್ರ ಭೂಮಿ ಬರಕ್ಕೆ ತುತ್ತಾಗಿದೆ. ಈ ಹಿನ್ನೆಲೆಯಲ್ಲಿ ಅವಲೋಕಿಸಿದರೆ ದೇಶದಲ್ಲಿಯೇ ಅತಿ ಹೆಚ್ಚು ಬರ ಮತ್ತು ನೆರೆ ಹಾವಳಿಗೆ ತುತ್ತಾದ ರಾಜ್ಯವೆಂದರೆ ಅದು ಕರ್ನಾಟಕವೇ. ಯಾವಾಗಲೂ ಇಲ್ಲಿ ವಿದ್ಯುತ್‌ನ್ನು ಉತ್ಪನ್ನ ಮತ್ತು ಉಳಿತಾಯ ಮಾಡಿಲಿಕ್ಕೆ ಸಾಧ್ಯವಾಗದಿದ್ದರೂ ಈಗ ರಾಜ್ಯದೆಲ್ಲಡೆ, ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ ಪ್ರದೇಶಗಳಲ್ಲಿ ವಿದ್ಯುತ್ ಉಳಿತಾಯ ಹೆಚ್ಚುತ್ತಿದೆ ಎಂಬ ವರದಿ ಇದೆ. ಕಾರಣ ವಿದ್ಯುತ್‌ನ್ನು ಬಳಸಿ ನೀರೆತ್ತಲು ಕೊಳವೆಬಾವಿಗಳಲ್ಲಿ ನೀರೇ ಇಲ್ಲ. ಕೆಲ ತೆರೆದ ಬಾವಿಗಳಲ್ಲಿ ಅಂತರ್ಜಲ ತಳ ಕಂಡ ಈ ಸಮಯದಲ್ಲಿ ಮಹಿಳೆಯರು ಮೈಲಿಗಟ್ಟಲೇ ದೂರದಿಂದ ನೀರನ್ನು ಹೊತ್ತು ತಂದು ದೈನಂದಿನ ಅವಶ್ಯಕತೆಯನ್ನು ಪೂರೈಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೊಂದೆಡೆ ಕೇರಳ ಮತ್ತು ಕೊಡಗಿನಲ್ಲಿ ವರುಣ ಸೃಷ್ಟಿಸಿದ ಅವಾಂತರಗಳನ್ನು ಗಮನಿಸಿದರೆ ಬರ ಮತ್ತು ತುರ್ತು ಪ್ರವಾಹದಿಂದಾಗಿ ಭೀಕರವಾಗಿ ನಮ್ಮ ಮೇಲೆ ಎರಗಿಬರಬಹುದಾದ ಭವಿಷ್ಯದ ವಿಪತ್ತುಗಳ ಬಗೆಗೆ ಇನ್ನೂ ಕಿಂಚಿತ್ ಕಾಳಜಿ ಇಲ್ಲ ಎಂಬುದು ಗತಿಸಿದ ಅನಾಹುತಗಳಿಂದ ಸ್ಪಷ್ಟವಾಗುತ್ತಿದೆ. ದೇಶದ ಜನಸಂಖ್ಯಾ ಹೆಚ್ಚಳ, ಮಾನವನ ಅನಿಯಮಿತವಾದ ಅವಶ್ಯಕತೆ ಮತ್ತು ಆಶೋತ್ತರಗಳು, ವಿವಿಧ ರೀತಿಯ ತಾಂತ್ರಿಕ ಆವಿಷ್ಕಾರಗಳು ಸದ್ಯದ ಬದುಕನ್ನು ಇನ್ನೂ ಒತ್ತಡಯುಕ್ತವಾಗಿಸಿವೆ. ಒಂದೆಡೆ ಪರರ ಮೇಲಿನ ಅವಲಂಬನೆಯನ್ನು ಹೆಚ್ಚಿಸುವುದರ ಮೂಲಕ ಜನರನ್ನು ಸೋಮಾರಿಗಳನ್ನಾಗಿಸಿದರೆ ಇನ್ನೊಂದೆಡೆ ನೀರು, ಆಹಾರ, ಗಾಳಿ, ಖನಿಜ ಮತ್ತು ಇಂಧನಗಳ ಬೇಡಿಕೆ ಗಣನೀಯ ಹೆಚ್ಚಳ ಕಂಡಿದೆ. ಆದರೆ ಇವುಗಳನ್ನು ನವೀಕರಿಸಬೇಕಾದ ಭೂಮಿ ಮಾತ್ರ ಅತಿ ಬಳಕೆಯಿಂದ ಸೊರಗಿದೆ. ನೈಸರ್ಗಿಕ ಸಂಪನ್ಮೂಲಗಳು ಕೊಳ್ಳುಬಾಕತನದೊಂದಿಗೆ ಸೂರೆಗೀಡಾಗುತ್ತಿವೆ. ಇದರಿಂದ ಜಾಗತಿಕ ತಾಪಮಾನದಲ್ಲಿ ಹಿಂದೆಂದೂ ಕಾಣದ ಹವಾಮಾನ ವೈಪರೀತ್ಯ ಉಂಟಾಗುತ್ತಿದ್ದು, ಜೀವ ಜಗತ್ತಿಗೆ ನೆರೆಯಿಂದ ಕುತ್ತುಂಟಾಗುವ ಭೀತಿ ಎಲ್ಲೆಡೆ ತಲೆದೋರಿದೆ. ಈ ಹಿಂದೆ ಹವಾಮಾನದ ಬದಲಾವಣೆಗಳಿಗೆ ಹೊಂದಿಕೊಳ್ಳಲಾಗದೆ ನಶಿಸಿಹೋದ ಡೈನೊಸಾರ್‌ಗಳ ಇತಿಹಾಸ ನಮ್ಮ ಮುಂದಿದೆ. ನೀರಿನ ಕೊರತೆಯಿಂದ 2050ರ ವೇಳೆಗೆ ಭೂಮಿ ಮೇಲಿನ ಕಾಲು ಭಾಗದಷ್ಟು ಜೀವ ಜಂತುಗಳು ಕಣ್ಮರೆಯ ದಾರಿ ಹಿಡಿಯಬಹುದೆಂಬ ಅಂದಾಜು ನಮ್ಮನ್ನು ಈಗ ಕಾಡತೊಡಗಿದೆ. ನೈಸರ್ಗಿಕ, ಯಾಂತ್ರಿಕ, ಮಾನವ ಜೀವಿಗಳ ಚಟುವಟಿಕೆಗಳಿಂದ ಹೊರ ಹಾಕಲ್ಪಡುವ ಇಂಗಾಲಾಮ್ಲ, ಮಿಥೇನ್ ಮೊದಲಾದ ಹಸಿರುಮನೆ ಅನಿಲಗಳ ಪರಿಣಾಮಗಳು ಭೂಮಿಯ ಹವಾಮಾನದಲ್ಲಿ ಉಂಟಾಗುವ ದೀರ್ಘಾವಽ ಮಾರ್ಪಾಡನ್ನು ಸ್ಥೂಲವಾಗಿ ಅಂದಾಜಿಸಿದರೂ ಅದರ ಭೀಕರತೆ ಗಮನಾರ್ಹವಾಗಿದೆ. ನಾವೀಗ 20ಕೋಟಿ ಟನ್ನುಗಳಷ್ಟು ಮಾನವತ್ಯಾಜ್ಯವನ್ನು ಪ್ರತಿದಿನ ನೀರು ವ್ಯವಸ್ಥೆಗೆ ಸುರಿದು ಕಲುಷಿತಗೊಳಿಸುತ್ತಿದ್ದೇವೆ.

ಭಾರತದಲ್ಲೀಗ ೩೬ಕೋಟಿ ಜನರು ಬೀಕರ ಬರಗಾಲದ ಕೆನ್ನಾಲಿಗೆ ಸಿಕ್ಕು ತೀವ್ರ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ನಮ್ಮ ನಿರ್ಲಕ್ಷ್ಯದ ಪರಮಾವಽ ಎಷ್ಟಿದೆ ಎಂದರೆ ಬಾಯಾರಿಕೆಯಾದಾಗ ಮಾತ್ರ ಬಾವಿ ತೋಡುವಂತೆ ಸರಕಾರದಿಂದ ಕೆಲವು ತುರ್ತು ಆದೇಶಗಳನ್ನು ಹೊರಡಿಸಲಾಗುತ್ತದೆ. ಬದಲಿಗೆ, ಅಕ್ಕಪಕ್ಕದ ರಾಜ್ಯಗಳು ಅನುಸರಿಸುವ ಕೆಲವು ಸಾರ್ವಜನಿಕ ನೀತಿಗಳನ್ನು ಈ ಬೇಗುದಿಯ ಕಾಲದಲ್ಲಿ ಜಾರಿಗೆ ತಂದರೆ ಒಳಿತಾಗುತ್ತದೆ. ಉದಾಹರಣೆಗೆ ಮಹಾರಾಷ್ಟ್ರದಲ್ಲಿಗ ಹೊಸ ಸಕ್ಕರೆ ಕಾರ್ಖಾನೆ ತೆರೆಯಲು ಅನುಮತಿಯಿಲ್ಲ. ಅಲ್ಲಿನ ಲಾತೂರಿನಲ್ಲಿ ಗೃಹ ಬಳಕೆಗಲ್ಲದೇ ಮತ್ತಾವುದಕ್ಕೂ ನೀರನ್ನು ಬೇಕಾಬಿಟ್ಟಿಯಾಗಿ ಬಳಸುವಂತಿಲ್ಲ ಹಾಗೂ ಮಳೆನೀರು ಕೊಯ್ಲು ಮಾತ್ರ ಆ ಭಾಗದಲ್ಲಿ ಕಡ್ಡಾಯ ಮಾಡಲಾಗಿದೆ.

ಸದ್ಯ ದಿನವೊಂದಕ್ಕೆ ಆರು ಲೀಟರ್ ನೀರು ಮಹಾರಾಷ್ಟ್ರದಲ್ಲಿ ಸೇವನೆಗೆ ಸರಬರಾಜಾಗಬೇಕು. (ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಒಬ್ಬ ಮನುಷ್ಯನ ಎಲ್ಲಾ ಅವಶ್ಯಕತೆ ಪೂರೈಸಲು ಪ್ರತಿ ದಿನಕ್ಕೆ ಕನಿಷ್ಠ ೭೦ಲೀಟರ್ ನೀರು ಬೇಕು.) ಅದೇ ರೀತಿಯಾಗಿ ರಾಜ್ಯದೆಲ್ಲೆಡೆ ವೈಯಕ್ತಿಕ ಕೊಳವೆಬಾವಿ ತೋಡಿಸಿಕೊಳ್ಳಲು ಕಠಿಣ ಕಾನೂನಿನ ನಿಯಂತ್ರಣವಿದೆ. ಅಲ್ಲಿ ಒಂದು ಕೀಲೋಮೀಟರ್ ವ್ಯಾಪ್ತಿ ಪ್ರದೇಶದಲ್ಲಿ ೫ಕ್ಕಿಂತ ಹೆಚ್ಚಿನ ಕೊಳವೆಬಾವಿಗಳನ್ನು ತೋಡಿಸುವಂತಿಲ್ಲ. ಈ ಕಾಯಿದೆ ಜಾರಿಗೆ ಬರುವ ಮುನ್ನಾ ದಿನಗಳಲ್ಲಿ ಕೇವಲ ೫ ಇರಬೇಕಾದ ಜಾಗದಲ್ಲಿ ೧೨೫ ಕೊಳವೆಬಾವಿಗಳಿದ್ದವು. ದೇಶದಲ್ಲೀಗ ಒಟ್ಟು ಸುಮಾರು ೩ಕೋಟಿಗೂ ಮೀರಿ ಹೆಚ್ಚಿನ ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. ಇವುಗಳಲ್ಲಿ ಶೇ.೬೦ರಷ್ಟು ಕೊರೆಯಲ್ಪಟ್ಟಿದ್ದು ಜಾಗತೀಕರಣದ ಉತ್ತರ ಭಾಗದಲ್ಲಿ ಎಂಬುದೇ ಇಂದಿನ ವಿಪರ್ಯಾಸ. ಸಾವಿರಾರು ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದ ಈ ಜಲಮೂಲಗಳನ್ನು ಕೇವಲ ಎರಡೂವರೇ ದಶಕಗಳಲ್ಲಿ ಖಾಲಿ ಮಾಡಿಕೊಂಡಿರುವ ಕೀರ್ತಿ ನಮ್ಮದು. ದೇಶದಲ್ಲಿ ಕಠಿಣ ಕಾಯಿದೆಗಳಿದ್ದರೂ ಸಹ ಪ್ರತಿವರ್ಷ ನಾವು ೧೦ಲಕ್ಷಕ್ಕೂ ಹೆಚ್ಚು ಕೊಳವೆಬಾವಿಗಳನ್ನು ಕೊರೆಸುತ್ತಲೇ ಇದ್ದೇವೆ.

 ಕಳೆದ ನಾಲ್ಕು ದಶಕದಲ್ಲಿ ರೈತರ ಹಾಗೂ ಗ್ರಾಮೀಣ ಜನರ ಬದುಕಿನ ಎಲ್ಲಾ ರಂಗಗಳಲ್ಲಿ ಸರಕಾರ ಹೆಚ್ಚು ಹಸ್ತಕ್ಷೇಪ ಮಾಡುವುದರ ಮೂಲಕ ಆ ವಲಯದಲ್ಲಿರುವವರ ಅಭದ್ರತೆಯೊಂದಿಗಿನ ಅತಂತ್ರತೆ ಎಂದಿಗಿಂತ ಇಂದು ಹೆಚ್ಚಾಗಿದೆ. ಎಲ್ಲಾ ತಾನೇ ಮಾಡುವ ಉಮೇದಿನಲ್ಲಿ ಅನ್ನದಾತರ ಕೈಕಟ್ಟಿ ಹಾಕಿರುವ ಸರಕಾರ ಅದನ್ನು ಸರಿಯಾಗಿ ನಿರ್ವಹಿಸದೇ ದಿನಗಳೆದಿದೆ. ಕೃಷಿ ನಿರ್ವಹಣೆಯ ಮೂಲ ಪರಿಕರಗಳಾದ ಬೀಜ, ಗೊಬ್ಬರ, ಸಲಕರಣೆಗಳು, ತಂತ್ರಜ್ಞಾನ ಎಲ್ಲದರಲ್ಲೂ ಅವರನ್ನು ಪರಾವಲಂಬಿಗಳನ್ನಾಗಿಸಿದ ಸರಕಾರಿ ಮಾರುಕಟ್ಟೆಯ ಬೆಲೆಯ ಅಸ್ಥಿರತೆ ಹಾಗೆಯೇ ಮುಂದುವರಿದಿದೆ. ಇದರೊಂದಿಗೆ ಅಂತರ್ಜಲದ ಉಪಯೋಗ ಹೇಳಿಕೊಟ್ಟು ಅದರ ಮರುಪೂರಣಕ್ಕೆ ಕೈಹಾಕದೇ ಇರುವುದು ಅನ್ನದಾತನನ್ನು ಅಕ್ಷರಶಃ ನೀರಿಲ್ಲದ ಬಾವಿಗೆ ದೂಡಿದಂತಾಗಿದೆ. ಜಾಗತೀಕರಣದ ಮುನ್ನಾ ವರ್ಷಗಳಲ್ಲಿ ಜೀವನಾಡಿಗಳಂತೆ ಜಲಮೂಲಗಳ ಸಮತೋಲನಕ್ಕೆ ಕಾರಣವಾಗಿದ್ದ ಕೆರೆಗಳು ಗ್ರಾಮಸಮುದಾಯದ ಕೈ ಜಾರಿ, ಅತ್ತ ಸರಕಾರವೂ ಜವಾಬ್ದಾರಿಯಿಂದ ನಿರ್ವಹಿಸದೇಹೋಗಿದ್ದರಿಂದ ಈಗ ಅವೆಲ್ಲಾ ಒಂದೊಂದಾಗಿ ಮಾಯವಾಗಿ ಮೊದಲು ಗೋಮಾಳದ ಹೆಸರಿನಲ್ಲಿದ್ದು, ನಂತರದಲ್ಲಿ ರಿಯಲ್ ಎಸ್ಟೇಟ್‌ಗಳಾಗಿ ಬದಲಾಗುತ್ತಿರುವುದು ಗುಟ್ಟಾಗಿ ಉಳಿದಿಲ್ಲ.

 ಭೂಮಿಯ ಮೇಲಿರುವ ಒಟ್ಟು ನೀರಿನಲ್ಲಿ ಶೇ.೨.೫ರಷ್ಟು ಮಾತ್ರ ಶುದ್ಧ ನೀರಿನ ಪ್ರಮಾಣವಿದೆ. ಇದನ್ನು ನಾವು ಹೇಗೋ ಹೆಚ್ಚಿಸಿಕೊಂಡರೆ ಸಾಕು, ಮನುಷ್ಯರ ಜೀವಿತಕ್ಕೆ ಬೇಕಾದಷ್ಟು. ಪ್ರಸಕ್ತ ವರ್ಷ ಉತ್ತಮ ಮುಂಗಾರು ಎಂದು ಹವಾಮಾನ ಇಲಾಖೆ ಸಾರಿ ಸಾರಿ ಹೇಳಿತ್ತು. ಈ ವರ್ಷದ ಮಳೆಯು ಚೆನ್ನಾಗಿ ಬೀಳುತ್ತದೆ, ಬೆಳೆಯ ಬೆಳವಣಿಗೆಗೆ ತಕ್ಕಂತೆ ಸಕಾಲಕ್ಕೆ ಆಗುತ್ತದೆ ಎಂಬ ನಂಬಿಕೆಯಲ್ಲಿಯೇ ರೈತರು ಮುಂಗಾರಿನ ಉಳುಮೆಯ ತಯಾರಿ ಮಾಡಿಕೊಂಡಿದ್ದರು. ಆದರೆ ಮಿಕ್ಕಿದ್ದೆಲ್ಲವನ್ನು ಪಡೆದುಕೊಳ್ಳಲು ಸರಕಾರವನ್ನು ಅವಲಂಬಿಸಬೇಕಾದ ಅನಿವಾರ್ಯವನ್ನು ತಂದಿಟ್ಟಿರುವ ವ್ಯವಸ್ಥೆಯೇ ನಿರ್ಣಾಯಕವಾಗಿದೆ. ರಾಜ್ಯದ ಒಂದೆಡೆ ಅತಿವೃಷ್ಟಿಯಾದರೆ ಅದೇ ವೇಳೆ ಮತ್ತೊಂದೆಡೆ ಅನಾವೃಷ್ಟಿ ಉಂಟಾಗಿರುವುದನ್ನು ಸರಕಾರ ಹೇಗೆ ನಿಭಾಯಿಸುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.

Tags

Related Articles

Leave a Reply

Your email address will not be published. Required fields are marked *

Language
Close