ಯಡಿಯೂರಪ್ಪ ಬಿಟ್ಟು ಬೇರೆ ಅಪ್ಪಂದಿರಿಗಿದು ಕಾಲವಲ್ಲ

Posted In : ಅಂಕಣಗಳು, ಪ್ರಥಮ ಪೂಜೆ

ರೇಸಿಗೆಂದು ಕುದುರೆ ಬಿಟ್ಟು, ಕಾಲು ಕಟ್ಟಿ ಹಾಕಿದರೆ ಏನು ಫಲ? ರೇಸಿಗೆಂದು ಟ್ರ್ಯಾಕ್ ನಿರ್ಮಿಸಿದವರು ಹಂಪ್ ಹಾಕುತ್ತಾರೆಯೇ? ಓಡುವ ಸ್ಪರ್ಧೆಯಲ್ಲಿ ಫಸ್ಟ್ ಬರಬೇಕೆಂದು ಹೇಳಿ ಆತನ ಕಾಲಿಗೇ ತೊಡರು ಹಾಕುತ್ತಾರಾ? ಸದ್ಯ ಬಿಜೆಪಿ ಸ್ಥಿತಿ ಹೀಗೇ ಆಗಿದೆ. ಓಡುವ ಕುದುರೆಯನ್ನೇ ಕಟ್ಟಿಹಾಕಿ, ಮುಂದಿನ ಚುನಾವಣೆ ರೇಸ್‌ನಲ್ಲಿ ಗೆಲ್ಲುವ ಕನಸು ಕಾಣಲಾಗುತ್ತಿದೆ. ಕುದುರೆ ಓಡದೇ ರೇಸ್ ಗೆಲ್ಲಲು ಸಾಧ್ಯವಿಲ್ಲ. ಕುದುರೆಯನ್ನು ಓಡಲು ಬಿಡಲು ಕೆಲವರಿಗೆ ಮನಸ್ಸಿಲ್ಲ. ಇನ್ನು ಕೆಲವರಿಗೆ ಕುದುರೆ ನಾವು ಹೇಳಿದಂತೆ ಓಡಬೇಕು ಎಂಬ ಬಯಕೆ. ಕುದುರೆಗೋ ಹೇಗೆ ಓಡಿದರೇನು ಗೆಲ್ಲಿಸಿಕೊಟ್ಟ ರಾಯಿತಲ್ಲ ಎಂಬ ಧಾಟಿ. ಕುದುರೆ ಓಡಿ ಗೆದ್ದುಬಿಟ್ಟರೆ ಎಲ್ಲಿ ಕುದುರೆ ಜನಪ್ರಿಯತೆ ಹೆಚ್ಚಿ, ಕುದುರೆ ಕಾಲಡಿಗೆ ಸಿಕ್ಕಿ ನಾವೆಲ್ಲ ಗಾಯಾಳುಗಳಾಗಿ ಮೂಲೆಗುಂಪಾಗುತ್ತೇವೊ ಎಂಬ ಭಯ ಹಲವರಿಗೆ. ಇವೆಲ್ಲದರ ನಡುವೆ ಬಿಜೆಪಿ ಕಾರ್ಯಕರ್ತ ಏನು ಮಾಡಬೇಕೆಂದು ಗೊತ್ತಾಗದೇ ಮಂಕಾಗಿ ಕುಳಿತಿದ್ದಾನೆ! ಕೇಂದ್ರದಲ್ಲಿ ಬಿಜೆಪಿ ಸರಕಾರ ಒಳ್ಳೆಯ ಕೆಲಸಗಳ ಮೂಲಕ ಜನ ಮನ್ನಣೆಗಳಿಸುತ್ತಿದೆ. ಹೇಗಾದರೂ ಮಾಡಿ ಕೇಂದ್ರ ಸರಕಾರದ ಹೆಸರು ಹಾಳುಮಾಡಬೇಕು ಎಂದು ಕಾಂಗ್ರೆಸ್ ಪಾಳೆಯ ನಿದ್ರೆ ಕೆಡಿಸಿಕೊಂಡು, ಪ್ರಯತ್ನಿಸುತ್ತಿದೆ.

ಪ್ರತಿಯೊಂದು ಹಂತದಲ್ಲಿಯೂ ಸರಕಾರದ ಮೇಲೆ ಒತ್ತಡ ಹೇರುವ ಕೆಲಸ ಮಾಡುತ್ತಿದೆ. ಸಣ್ಣ ಸಣ್ಣ ವಿಷಯಗಳನ್ನೂ ದೊಡ್ಡ ವಿಷಯವೆಂಬಂತೆ ಬಿಂಬಿಸುವ ಪ್ರಯತ್ನ ಮಾಡುತ್ತಿದೆ. ವಿಷಯವೇ ಅಲ್ಲದಿರುವುದನ್ನು ವಿವಾದವಾಗಿ ಮಾಡಲು ಹವಣಿಸುತ್ತಿದೆ. ಒಬ್ಬನೇ ಒಬ್ಬ ಕೇಂದ್ರ ಸಚಿವ ಹಗರಣದಲ್ಲಿ ಸಿಲುಕಿಲ್ಲ. ಆದರೂ ಅದೊಂದು ಭ್ರಷ್ಟ ಸರಕಾರ ಎಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ನೋಟು ನಿಷೇಧವನ್ನೇ ದೊಡ್ಡ ಹಗರಣ ಎಂದು ಕರೆಯಲಾಗುತ್ತಿದೆ. ಕೇಂದ್ರ ಸರಕಾರದ ಬಗ್ಗೆ ಸಾರ್ವಜನಿಕರಲ್ಲಿ ತಪ್ಪು ಭಾವನೆ ಮೂಡಿಸಲು ಏನು ಮಾಡಲು ಸಾಧ್ಯವೋ ಅವೆಲ್ಲವನ್ನೂ ಮಾಡುತ್ತಿದೆ. ಅದೇ ನಮ್ಮ ರಾಜ್ಯದಲ್ಲಿ ಸ್ಥಿತಿ ಸಂಪೂರ್ಣ ಉಲ್ಟಾ. ಇಲ್ಲಿನ ಕಾಂಗ್ರೆಸ್ ಸರಕಾರ ಸಾಕಷ್ಟು ತಪ್ಪುಗಳನ್ನು ಮಾಡುತ್ತಿದೆ. ಸಚಿವರು ಹಗರಣಗಳಲ್ಲಿ ಸಿಲುಕಿದ್ದಾರೆ. ರಾಜೀನಾಮೆಯನ್ನೂ ನೀಡಿದ್ದಾರೆ. ಸಾರ್ವಜನಿಕರು ಕೆಲವು ಬಾರಿ ಸರಕಾರದ ನಿರ್ಧಾರದ ವಿರುದ್ಧ ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಬಿಜೆಪಿ ಮಾತ್ರ ಬಾಯ್ಬಿಡಲು ಹಿಂದೇಟು ಹಾಕುತ್ತಿದೆ. ಜನರೇ ಸರಕಾರದ ತಪ್ಪುಗಳನ್ನು ಅರ್ಥ ಮಾಡಿಕೊಂಡು, ಅದನ್ನು ವಿರೋಧಿಸಬೇಕೆ ಹೊರತು ಬಿಜೆಪಿ ಆ ಕೆಲಸ ಮಾಡುತ್ತಿಲ್ಲ.

ಒಮ್ಮೆ ಸರಕಾರ ನಡೆಸಿ ಇಳಿದ ನಂತರ, ನೈತಿಕ ಮತ್ತು ಆಂತರ್ಯದ ಶಕ್ತಿಯನ್ನೆಲ್ಲ ಕಳೆದುಕೊಂಡು ಬಿಜೆಪಿ ಬಸವಳಿದಂತೆ ಭಾಸವಾಗುತ್ತಿದೆ. ಇವರ ವರ್ತನೆ ಗಮನಿಸಿದರೆ ಕಾಂಗ್ರೆಸ್‌ನವರೇ ತಪ್ಪುಗಳನ್ನು ಮಾಡಿ, ಅಧಿಕಾರವನ್ನು ಬಟ್ಟಲಿನಲ್ಲಿಟ್ಟು ಬಿಜೆಪಿಗೆ ನೀಡಲಿ ಎಂಬಂತಿದೆ. ಸದ್ಯದ ಸ್ಥಿತಿಯಲ್ಲಿ ಬಿಜೆಪಿ ಎಚ್ಚೆತ್ತುಕೊಳ್ಳುವ ಯಾವ ಲಕ್ಷಣವೂ ಕಾಣುತ್ತಿಲ್ಲ. ಕೆಲವು ನಾಯಕರ ವರ್ತನೆ ಗಮನಿಸಿದರೆ, ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಭಾವಿಸಿದಂತಿದೆ. ಅದಕ್ಕಾಗಿ ಈಗಿನಿಂದಲೇ ಅಧಿಕಾರಕ್ಕಾಗಿ ಕಚ್ಚಾಟ ಆರಂಭಿಸಿದ್ದಾರೆ. ಸಾಮಾನ್ಯವಾಗಿ ಅಧಿಕಾರದಲ್ಲಿದ್ದಾಗ ಒಳಜಗಳ, ಭಿನ್ನಮತ ಇದ್ದರೂ, ಪ್ರತಿಪಕ್ಷ ಸ್ಥಾನದಲ್ಲಿದ್ದಾಗ ಒಳಜಗಳಗಳು ನಡೆಯುವುದು ಕಡಿಮೆ.

ಈಗ ಬಿಜೆಪಿಯಲ್ಲಿ ನಡೆಯುತ್ತಿರುವ ಒಳಜಗಳಕ್ಕೆ ಮುಂದೆ ಅಧಿಕಾರಕ್ಕೆ ಬರುತ್ತೇವೆ ಎಂಬ ಭಂಡ ನಂಬಿಕೆಯೇ ಕಾರಣ ಎಂಬ ಅನುಮಾನ ಬಲವಾಗಿದೆ. ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಬೇಕು ಎಂಬ ಕಾರಣಕ್ಕೆ ಬಿ.ಎಸ್. ಯಡಿಯೂರಪ್ಪ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರಾಗಿ ಮಾಡಲಾಗಿದೆ. ಅದು ಬಿಟ್ಟು ಬೇರೆ ಆಯ್ಕೆಯೂ ಇರಲಿಲ್ಲ. ಆದರೆ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ ಕ್ಷಣದಿಂದ ಕೆಲವರು ಅವರನ್ನು ನಿಯಂತ್ರಿಸುವುದು ಹೇಗೆ ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳಲಾರಂಭಿಸಿದರು. ರಾಜ್ಯ ಬಿಜೆಪಿ ಅಧಿಕಾರಕ್ಕೇರಲು ಯಡಿಯೂರಪ್ಪ ಅನಿವಾರ್ಯ ಎಂಬುದು
ಬಿಜೆಪಿಯ ಎಲ್ಲರಿಗೂ ಗೊತ್ತು. ಹಾಗಾಗಿ ಅವರನ್ನು ಬಿಡಲು ಸಾಧ್ಯವಿಲ್ಲ. ಆದರೆ ಅವರಿಗೆ ಸಂಪೂರ್ಣ ಅಧಿಕಾರ ನೀಡಲೂ ಕಷ್ಟ ಎಂಬಂತಿದೆ ಬಿಜೆಪಿ ಸ್ಥಿತಿ. ಯಡಿಯೂರಪ್ಪ ಅವರನ್ನು ಬಿಜೆಪಿ ಅಧ್ಯಕ್ಷರನ್ನಾಗಿ ಮಾಡಿ ಸಂಪೂರ್ಣ ಅಧಿಕಾರ ನೀಡಲು ಕೆಲವರಿಗೆ ಮನಸ್ಸಿಲ್ಲ. ಅವರು ಅಧ್ಯಕ್ಷರಾಗುತ್ತಿದ್ದಂತೆ ಕೆಲವರ ‘ಸಂತೋಷ’ ಹಾಳಾಗಿರುವುದು ಅಷ್ಟೇ ಸತ್ಯ. ಯಡಿಯೂರಪ್ಪ ಅವರನ್ನು ಬದಲಿಸಲು ಸಾಧ್ಯವಿಲ್ಲ.

ರಾಜಕೀಯಕ್ಕೆ ಬಂದಾಗಿನಿಂದಲೂ ಅವರು ಇರುವುದೇ ಹಾಗೆ. ಈಗ ಅದು ಬದಲಾಗಲು ಸಾಧ್ಯವಿಲ್ಲ. ಪಕ್ಷವನ್ನು ಚುನಾವಣೆಯಲ್ಲಿ ಗೆಲ್ಲಿಸುವ ಸಂಪೂರ್ಣ ಹೊಣೆ ಅವರಿಗೆ ಅಂದ ಮೇಲೆ ಅದಕ್ಕೆ ಅಗತ್ಯವಿರುವ ಜನರನ್ನು ಜತೆಗಿಟ್ಟುಕೊಳ್ಳುವ ಅಧಿಕಾರವೂ ಅವರಿಗೆ ಇರಬೇಕು ಎಂಬುದು ಸಹಜ. ಅವರಿಗೆ ಸಂಪೂರ್ಣ ಅಧಿಕಾರ ಸಿಕ್ಕಿಬಿಟ್ಟರೆ ಎಲ್ಲಿ ತಮ್ಮನ್ನು ತುಳಿದುಬಿಡುತ್ತಾರೊ ಎಂಬ ಭಯ ಕೆಲವರಲ್ಲಿ. ಇನ್ನು ಕೆಲವರಿಗೆ ಕೇಂದ್ರದಲ್ಲಿದ್ದರೂ ರಾಜ್ಯದಲ್ಲಿ ತಮ್ಮ ಪ್ರಭಾವ ಕಡಿಮೆಯಾಗಬಾರದು ಎಂಬ ‘ಅನಂತ’ ಆಸೆ. ಯಡಿಯೂರಪ್ಪ ಅಧ್ಯಕ್ಷರಾಗಬೇಕು. ಪಕ್ಷವನ್ನೂ ಗೆಲ್ಲಿಸಬೇಕು. ಉಳಿದವರು ಅಧಿಕಾರ ಅನುಭವಿಸಬೇಕು. ಅದರ ಜತೆಗೆ ಯಡಿಯೂರಪ್ಪ ನಮ್ಮ ನಿಯಂತ್ರಣದಲ್ಲಿರಬೇಕು ಅಥವಾ ನಾವು ಹೇಳಿದಂತೆ ಕೇಳಬೇಕು ಎಂಬುದು ಕೆಲವರ ಅಭಿಲಾಷೆ. ಇವೆಲ್ಲ ಒಟ್ಟಿಗೆ ಸೇರಿ ಬಿಜೆಪಿ ಎಂಬುದು ಭಾರಿ ಜಗಳದ ಪಕ್ಷ (ಭಾಜಪ) ಎಂಬಂತಾಗಿದೆ.

ಈಶ್ವರಪ್ಪ ಮತ್ತು ಯಡಿಯೂರಪ್ಪ ಯಾವಾಗ ಒಂದಾಗುತ್ತಾರೆ ಯಾವಾಗ ಬೇರಾಗುತ್ತಾರೆ ಒಂದೂ ಅರ್ಥವಾಗುವುದಿಲ್ಲ. ಈಗ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ವಿಷಯದಲ್ಲಿ ಇಬ್ಬರ ಮುನಿಸು ಬೀದಿ ಜಗಳದಂತೆ ಭಾಸವಾಗುತ್ತಿದೆ. ಈಶ್ವರಪ್ಪ ಅವರು ಬ್ರಿಗೇಡ್ ಮಾಡುತ್ತಿರುವುದೇ ಬಿಜೆಪಿಗೆ ಸಹಾಯ ಮಾಡಲು ಅನ್ನುತ್ತಾರೆ. ಬ್ರಿಗೇಡ್ ಮೂಲಕ ಹಿಂದುಳಿದವರನ್ನು ಸಂಘಟಿಸುತ್ತೇನೆ ಎನ್ನುತ್ತಿದ್ದಾರೆ. ಮಧ್ಯದಲ್ಲೊಮ್ಮೆ ಯಡಿಯೂರಪ್ಪ ಅವರ ಮನೆಯಲ್ಲಿ ಇಡ್ಲಿ ತಿಂದು, ಬ್ರಿಗೇಡ್ ಎಲ್ಲಿಡ್ಲಿ ಎಂದು ಹೊರಟಿದ್ದರು. ಅದಾಗಿ ಮೂರೇ ದಿನದಲ್ಲೇ ಮತ್ತೆ ಯಾರಿಗಿಡ್ಲಿ ಅಂತ ಬ್ರಿಗೇಡ್ ಸಭೆಯಲ್ಲಿ ಪ್ರತ್ಯಕ್ಷರಾದರು. ಹಾಗಿದ್ದರೂ ಬಿಜೆಪಿಯನ್ನು ಗೆಲ್ಲಿಸಿಕೊಂಡು ಬರುವ ತಾಕತ್ತು ಈಶ್ವರಪ್ಪ ಅವರಿಗಿಲ್ಲ. ಅದು ಇಷ್ಟು ವರ್ಷಗಳಲ್ಲಿ ಸಾಬೀತಾಗಿದೆ. ಇದೇ ಈಶ್ವರಪ್ಪ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾಗ, ಬಿಜೆಪಿಯ ಹಿರಿಯ ರಾಜಕಾರಿಣಿ ಬಿ.ಬಿ. ಶಿವಪ್ಪ ಅವರು ‘ಹಿರಿಯರ ವೇದಿಕೆ’ ರಚಿಸಿದ್ದರು. ಪುತ್ತೂರಿನ ಮಾಜಿ ಶಾಸಕ ರಾಮ ಭಟ್ ಸೇರಿದಂತೆ ಹಲವು ಹಿರಿಯರು ಇದರಲ್ಲಿದ್ದರು. ಪಕ್ಷದ ಹಿತದ ಬಗ್ಗೆ ಕಾಳಜಿ ಹೊಂದಿದ್ದ ಒಂದಷ್ಟು ಹಿರಿಯರು ಸೇರಿಯೇ ‘ಹಿರಿಯರ ವೇದಿಕೆ’ ಸ್ಥಾಪಿಸಿದ್ದರು.

ಪಕ್ಷದ ಹಿತ ಕಾಪಾಡುವುದೇ ನಮ್ಮ ಗುರಿ ಹೊರತು ಪಕ್ಷದ ವಿರುದ್ಧ ಅಲ್ಲ ಎಂದು ಅವರೂ ಹೇಳಿದ್ದರು. ಆದರೆ ಆಗ ಇದೇ ಈಶ್ವರಪ್ಪ ಹಿರಿಯರ ವೇದಿಕೆ ಸ್ಥಾಪಿಸಿದವರಿಗೆ ನೋಟಿಸ್ ನೀಡಿದ್ದರು. ಈಗ ಈಶ್ವರಪ್ಪ ಪಕ್ಷಕ್ಕಾಗಿ ಬ್ರಿಗೇಡ್ ಕಟ್ಟುತ್ತಿದ್ದೇನೆ. ಶಿಸ್ತು
ಕ್ರಮ ಯಾಕೆ? ಅನ್ನುತ್ತಿದ್ದಾರೆ. ಕಾಲ ಹೇಗೆ ಬದಲಾಗುತ್ತದೆ ನೋಡಿ. ಹೀಗೆ ಒಂದೊಂದು ಬ್ರಿಗೇಡ್‌ಗಳು ಸ್ಥಾಪನೆಯಾದರೆ ಪಕ್ಷದ ಕತೆ ಏನಾಗಬೇಕು? ಬ್ರಾಹ್ಮಣರ ಬ್ರಿಗೇಡ್, ಆಚಾರಿಗಳ ಬ್ರಿಗೇಡ್, ಒಕ್ಕಲಿಗರ ಬ್ರಿಗೇಡ್, ಲಿಂಗಾಯಿತರ ಬ್ರಿಗೇಡ್, ಅಡಕೆ ಬೆಳೆಗಾರರ ಬ್ರಿಗೇಡ್, ಕಾಫಿ ಬೆಳೆಗಾರರ ಬ್ರಿಗೇಡ್ ಹೀಗೆ ಸ್ಥಾಪಿಸಿಕೊಳ್ಳಲಾರಂಭಿಸಿದರೆ, ಪಕ್ಷ ದುರ್ಬಲವಾಗದೆ? ಇದಕ್ಕಿಂತ ಹೆಚ್ಚಾಗಿ ಬಿಜೆಪಿ ಒಂದು ಜಾತಿಯನ್ನು ಅವಲಂಬಿಸಿ ಬೆಳೆದ ಪಕ್ಷವಲ್ಲ. ಜಾತಿ ಆಧಾರಿತವಾಗಿ ಮತ ಕೇಳಿದ ಪಕ್ಷವೂ ಅಲ್ಲ. ಜಾತಿಯನ್ನು ಸಂಪೂರ್ಣ ದೂರ ಇಡಲು ಸಾಧ್ಯವಾಗದಿದ್ದರೂ ತಕ್ಕಮಟ್ಟಿಗೆ ಅದರಿಂದ ಅಂತರ ಕಾಯ್ದುಕೊಂಡಿದೆ. ಇತ್ತೀಚೆಗೆ ಅನಿವಾರ್ಯವಾಗಿ ಜಾತಿಯನ್ನು ಪಕ್ಷದೊಳಗೆ ಬಿಟ್ಟುಕೊಂಡಿದೆ.

ಬಿಜೆಪಿ ಯಾವತ್ತೂ ಹಿಂದುತ್ವದ ಪರ ನಿಲುವುಗಳಿಂದಲೇ ಹೆಚ್ಚು ಜನಪ್ರಿಯವಾಗಿದೆ ಹೊರತು ಜಾತಿ ಆಧಾರಿತ ರಾಜಕಾರಣದಿಂದಲ್ಲ. ಹೀಗಿರುವಾಗ ಈಗ ‘ಬ್ರಿಗೇಡ್’ ಸಂಸ್ಕೃತಿಗೆ ಮಣೆ ಹಾಕಿದರೆ ಅದು ಪಕ್ಷದ ಆಂತರಿಕ ಶಿಸ್ತಿನ ಮೇಲೆ ಪರಿಣಾಮ ಬೀರುವ ಎಲ್ಲ ಸಾಧ್ಯತೆಗಳೂ ಇದೆ. ಉಳಿದ ಪಕ್ಷಗಳಂತೆ ಬಿಜೆಪಿ ಕೂಡ ಜಾತಿ ಆಧಾರಿತ ಪಕ್ಷವಾಗಿ ಪರಿವರ್ತನೆಯಾಗುವ ಸಾಧ್ಯತೆಯಿದೆ. 2014ರಲ್ಲಿ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ‘ನಮೋ ಬ್ರಿಗೇಡ್’ನಿಂದ ಪಕ್ಷಕ್ಕೆ ಸಾಕಷ್ಟು ಉಪಯೋಗವಾಗಿರಬಹುದು. ಆದರೆ ನಮೋ ಬ್ರಿಗೇಡ್ ಯಾವತ್ತೂ ಪಕ್ಷದ ಅಂಗವಾಗಿ ಕೆಲಸ ಮಾಡಿರಲಿಲ್ಲ. ಪಕ್ಷದ ನಾಯಕರೂ ಅದರಲ್ಲಿ ಇರಲಿಲ್ಲ. ಈಗ ‘ಯುವಾ ಬ್ರಿಗೇಡ್’ ಕೂಡ ಜನಪ್ರಿಯತೆ ಗಳಿಸಿರಬಹುದು. ಆದರೆ ರಾಜಕೀಯ ಉದ್ದೇಶದಿಂದ ಸ್ಥಾಪಿಸಹೊರಟ ಬ್ರಿಗೇಡ್ ಯಶಸ್ವಿಯಾಗಬಲ್ಲದೇ? ಅಕಸ್ಮಾತ್ ಯಶಸ್ವಿಯಾದರೂ ಈಗಾಗಲೇ ‘ಬ್ರಿಗೇಡ್’ ವಿವಾದಿಂದ ಬಿಜೆಪಿಗೆ ಲಾಭಕ್ಕಿಂತ ಹೆಚ್ಚು ನಷ್ಟವಾಗುತ್ತಿದೆ.

ಕೇಂದ್ರ ನಾಯಕರು ಕೂಡ ಈ ವಿಷಯದಲ್ಲಿ ಈಶ್ವರಪ್ಪ ಅವರನ್ನು ತಡೆಯುವಲ್ಲಿ ವಿಫಲರಾಗಿದ್ದಾರೆ. ಯಡಿಯೂರಪ್ಪ ಅವರನ್ನು ಅಧ್ಯಕ್ಷರನ್ನಾಗಿ ಮಾಡಿ, ಅವರಿಗೆ ಅಡ್ಡಿ ಮಾಡುವ ಪ್ರಯತ್ನಗಳನ್ನು ನೋಡಿಯೂ ಅವರು ಸುಮ್ಮನಿದ್ದಾರೆ. ಇಷ್ಟರಲ್ಲಾಗಲೇ ಈಶ್ವರಪ್ಪ ಅವರನ್ನು ಸುಮ್ಮನಿರಿಸುವ ಕೆಲಸ ಆಗಬೇಕಿತ್ತು. ಈಶ್ವರಪ್ಪ ಪಕ್ಷ ಕಟ್ಟುತ್ತಿಲ್ಲ. ಯಡಿಯೂರಪ್ಪ ಅವರಿಗೆ ಕಟ್ಟಲೂ ಬಿಡುತ್ತಿಲ್ಲ. ರಾಜ್ಯದ ನಾಯಕರು ಹಾಗೂ ಕೇಂದ್ರದಲ್ಲಿರುವ ರಾಜ್ಯದ ನಾಯಕರಿಗೆ ಅರ್ಥವಾಗದ ಒಂದೇ ಒಂದು ಸಂಗತಿಯೆಂದರೆ ಇನ್ನೂ ಅವರಿಗೆ ಮುಖ್ಯಮಂತ್ರಿಯಾಗುವ ಕಾಲ ಕೂಡಿ ಬಂದಿಲ್ಲ. ಸದ್ಯ ಬಿಜೆಪಿಯಲ್ಲಿ ರಾಜ್ಯಾದ್ಯಂತ ಜನಪ್ರಿಯತೆ ಹೊಂದಿರುವ, ಜನಬೆಂಬಲ ಹೊಂದಿರುವ ಏಕೈಕ ನಾಯಕನೆಂದರೆ ಬಿ.ಎಸ್. ಯಡಿಯೂರಪ್ಪ. ಬೇರೆಯವರಿಗೆ ಇಷ್ಟವಿದೆಯೋ ಇಲ್ಲವೊ, ಆದರೆ ಅದೇ ವಾಸ್ತವ ಹಾಗೂ ಸತ್ಯ. ಅವರ ನೇತೃತ್ವದಲ್ಲಿ ಮಾತ್ರ ಬಿಜೆಪಿ ಗೆಲ್ಲಲು ಸಾಧ್ಯ. ಈ ಕಹಿ ಸತ್ಯ ಅರ್ಥ ಮಾಡಿಕೊಳ್ಳಲು ಉಳಿದ ನಾಯಕರು ಎಷ್ಟು ವಿಳಂಬ ಮಾಡುತ್ತಾರೊ ಅಷ್ಟು ಬಿಜೆಪಿಗೇ ನಷ್ಟ.

One thought on “ಯಡಿಯೂರಪ್ಪ ಬಿಟ್ಟು ಬೇರೆ ಅಪ್ಪಂದಿರಿಗಿದು ಕಾಲವಲ್ಲ

  1. ಪತ್ರಕರ್ತರ ಸೋಗಿನಲ್ಲಿ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರಂತೆ ಕೆಲಸ ಮಾಡುತ್ತಿರುವ ವಿಶ್ವ ವಾಣಿಯ ಮೋಸ್ಟ ಅಂಕಣಕಾರರನ್ನು ನೋಡೋದೇ ಒಳ್ಳೆ ಕಾಮಿಡಿ.. ಪ್ರತಾಪ್ ಸಿಂಹ ಥರ ರಾಜಕೀಯ ಭವಿಷ್ಯಕ್ಕೆ ಬೇಜಾನ್ ಹಾತೊರೆಯುತ್ತಿದ್ದಿರಿ.. ಪಾಪ..

Leave a Reply

Your email address will not be published. Required fields are marked *

eighteen − 9 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top