About Us Advertise with us Be a Reporter E-Paper

ಅಂಕಣಗಳು

ನಾನು ಸದನದಲ್ಲಿ ಕೂತ ಅಪೂರ್ವ ಗಳಿಗೆ

ಪ್ರಖ್ಯಾತ ಪತ್ರಕರ್ತ, ಮಾನವ ಹಕ್ಕುಗಳ ಪ್ರತಿಪಾದಕ ಮತ್ತು ಲಂಡನ್‌ನಲ್ಲಿ ಭಾರತದ ಹೈಕಮಿಷನರ್ ಆಗಿದ್ದ ಕುಲದೀಪ್ ನಯ್ಯರ್ (1923-2018) ನಿನ್ನೆ ನಿಧನರಾದರು. ತೊಂಬತ್ತೈದು ವರ್ಷಗಳ ತುಂಬು ಜೀವನ ನಡೆಸಿದ ಅವರ ಆತ್ಮಕಥೆ ‘ಬಿಯಾಂಡ್ ದಿ ಲೈನ್‌ಸ್’, ‘ಒಂದು ಜೀವನ ಸಾಲದು’ ಶೀರ್ಷಿಕೆಯಲ್ಲಿ ಕನ್ನಡಕ್ಕೆ ಅನುವಾದಗೊಂಡಿದೆ. ಪಂಜಾಬ್‌ನ ಸಿಯಾಲ್‌ಕೋಟ್‌ನಲ್ಲಿ ಜನಿಸಿದ್ದವರಾಗಿ ವಿಭಜನೆಯನ್ನು ತೀರ ಹತ್ತಿರದಿಂದ ನೋಡಿದ್ದ ಕುಲದೀಪ್ ನಯ್ಯರ್ ನಂತರ ಪತ್ರಕರ್ತರಾಗಿ ಬೆಳೆದಂತೆ ಚರಿತ್ರಕಾರರ ಪಾತ್ರವಹಿಸಿದರು. ಹೀಗಾಗಿ ನಯ್ಯರ್ ಜೀವನ ಕಥಾನಕದಲ್ಲಿ ‘ಸ್ವಾತಂತ್ರೊ್ಯೀತ್ತರ ಭಾರತದ ಕತೆ’ಯೂ ಹಾಸುಹೊಕ್ಕಾಗಿದೆ. ಸಮಾಜ ಪರಿವರ್ತನೆ ಬಯಸುವ ನಿಷ್ಠಾವಂತ ಪತ್ರಕರ್ತರೊಬ್ಬರಿಗೆ ರಾಜಕೀಯ ಅಧಿಕಾರ ಸಿಕ್ಕಾಗ ಏನೆಲ್ಲ ಸಾಧ್ಯ ಎಂದು ಹೇಳುವ, ಹಲ ಕೆಲ ಸ್ವಾರಸ್ಯಕರ ಚಿತ್ರಣವನ್ನೂ ಒಳಗೊಂಡ ಆಯ್ದ ಕೆಲ ಭಾಗಗಳ ಮೂಲಕ ಅವರಿಗೆ ನಮ್ಮ ನುಡಿನಮನ.

ನಾನು ರಾಜ್ಯಸಭೆಯನ್ನು ಪ್ರವೇಶ ಮಾಡಿದಾಗ, ಮನದ ತುಂಬಾ ಮಿಶ್ರ ಭಾವನೆಗಳು. ಮಿಶ್ರ ಭಾವನೆ ಏಕೆಂದರೆ, ನನಗೆ ಆ ಸದನದ ಇದ್ದ ಅಗಾಧ ಗೌರವ. ಅಲ್ಲಿ ಸಾರ್ವಜನಿಕ ಸೇವೆಗೆ ತಮ್ಮನ್ನು ಮುಡಿಪಾಗಿಟ್ಟಿದ್ದರೂ ಅದ್ಭುತ ಮಾತುಗಾರರೂ ಆಗಿದ್ದ ಭೂಪೇಂದ್ರ ಗುಪ್ತ, ಹಿರೇನ್ ಮುಖರ್ಜಿ ಮತ್ತು ಹೃದಯನಾಥ್ ಕುಂಜ್ರು ಮೊದಲಾದವರ ಭಾಷಣಗಳನ್ನು ಕೇಳಿದ್ದೆ. ಅವರೆಲ್ಲರ ಮುಂದೆ ನಾನು ತಿಳಿವಳಿಕೆ ಮತ್ತು ಮಾತುಗಾರಿಕೆಯಲ್ಲಿ ಅಪೂರ್ಣನಲ್ಲವೇ ಅನಿಸಿತು. ಇದಲ್ಲದೇ ನನ್ನ ಹಾಜರಿಗೆ ರಾಜಕೀಯ ಪಕ್ಷಗಳು ಹೇಗೆ ಪ್ರತಿಕ್ರಿಯಿಸಬಹುದು ಎಂಬ ಅಳುಕೂ ನನ್ನಲ್ಲಿತ್ತು. ಏಕೆಂದರೆ ಅವರನ್ನು ನನ್ನ ಬರಹಗಳಲ್ಲಿ ನಿರಂತರವಾಗಿ ಟೀಕಿಸಿ ಬರೆಯುತ್ತಿದ್ದೆ. ಸದನದ ಕಲಾಪ ಮತ್ತು ರಚನೆಗೆ ನಾನೇನಾದರೂ ಕಿಂಚಿತ್ ಸೇವೆ ಸಲ್ಲಿಸಲು ಸಾಧ್ಯವೇ ಎಂಬುದೇ ನನ್ನ ಮುಖ್ಯ ಆಲೋಚನೆ ಆಗಿತ್ತು.

ನಾನು ಪ್ರಮಾಣವಚನ ಸ್ವೀಕರಿಸಿದ ಸಂದರ್ಭದಲ್ಲಿ ಪ್ರೇಕ್ಷಕರ ಗ್ಯಾಲರಿಯಲ್ಲಿ ನನ್ನ ಇಡೀ ಸಂಸಾರ ಇದ್ದದ್ದು ತುಂಬಾ ಸಂತೋಷ ಕೊಟ್ಟಿತು. ನನ್ನ ಪತ್ನಿ ಭಾರತಿ, ನನ್ನ ಸಹೋದರಿ ರಾಜ್, ರಾಜೇಂದ್ರ ಸಾಚಾರ್, ಅವರ ಮಗಳು ಮಧು, ನನ್ನ ಇಬ್ಬರು ಸೊಸೆಯರು(ಇಬ್ಬರ ಹೆಸರೂ ಕವಿತಾ) ನನ್ನ ಗಂಡು ಮಕ್ಕಳು ಸುಧೀರ್ ಮತ್ತು ರಾಜೀವ್, ನನ್ನ ಮೊಮ್ಮಕ್ಕಳು ಮಂದಿರಾ, ಮತ್ತು ಕನಿಕಾ ಅವರಿಗೆ ಸದನದಲ್ಲಿ ನಾನು ಕುಳಿತಿದ್ದು ತುಂಬಾ ಖುಷಿ ತಂದಿತ್ತು.

ನಾನು ಪ್ರಮಾಣ ವಚನ ಸ್ವೀಕರಿಸಿದ ನಂತರ ಮಾಡಿದ ಮೊದಲ ಕೆಲಸವೇನೆಂದರೆ, ನನ್ನ ಮತ್ತು ನನ್ನ ಹೆಂಡತಿಯ ಆಸ್ತಿಯ ಮಾಹಿತಿಯನ್ನು ಅಧ್ಯಕ್ಷರಾಗಿದ್ದ ಕೃಷ್ಣಕಾಂತ್ ಅವರಿಗೆ ಕಳಿಸಿದ್ದು. ರಾಜ್ಯಸಭೆಯ ಕಾರ್ಯದರ್ಶಿ, ‘ಈ ಬಗೆಯ ಪರಿಪಾಠ ಇಲ್ಲಿಲ್ಲ, ಕಾರ್ಯಾಲಯಕ್ಕೆ ಈ ಆಸ್ತಿ ಘೋಷಣೆಯನ್ನು ಏನು ಮಾಡಬೇಕೆಂದು ಗೊತ್ತಿಲ್ಲ’ ಎಂದು ಹೇಳಿದರು. ನಾನು, ‘ಇದನ್ನು ಕಡತದಲ್ಲಿ ಎಲ್ಲಿ ಸೇರಿಸಬಹುದೋ ಅಲ್ಲಿ ಸೇರಿಸಬೇಕು. ನಾನು ನೀಡುವ ಲೆಕ್ಕದೊಂದಿಗೆ ಹೋಲಿಸಬೇಕು’ ಎಂದು ಹೇಳಿದೆ.

ಇದರ ನಂತರ, ಸಭೆಯ ಕಲಾಪ ಸಭಾತ್ಯಾಗಗಳು ಮತ್ತು ಮುಂದೂಡಿಕೆಗಳಿಂದ ನಿಂತುಹೋದ ಸಂದರ್ಭದಲ್ಲಿ, ನಾನು ಯಾವುದೇ ಭತ್ಯೆಗಳನ್ನು ತೆಗೆದುಕೊಳ್ಳಲು ಇಚ್ಛಿಸುವುದಿಲ್ಲ ಎಂದು ಅಧ್ಯಕ್ಷರಿಗೆ ಪತ್ರ ಬರೆದೆ. ಅಧ್ಯಕ್ಷರು ಯಾವುದೇ ಪ್ರತಿಕ್ರಿಯೆ ಇಲ್ಲದೆ, ಅದನ್ನು ಕಾನೂನು ಸಚಿವಾಲಯಕ್ಕೆ ಕಳಿಸಿಕೊಟ್ಟರು. ಆ ಸಚಿವಾಲಯ ನನ್ನ ಸೂಚನೆಗೆ ಒಪ್ಪಿಗೆ ಸೂಚಿಸಿದ್ದು ನನಗೆ ಸಂತೋಷವಾಯಿತು. ನಾನು ಕಲಾಪ ನಡೆಯದೇ ಹೋದಾಗ ಭತ್ಯೆಯನ್ನು ತೆಗೆದುಕೊಳ್ಳಲಿಲ್ಲ. ನಾನು ರಾಜ್ಯಸಭೆಯ ಸದಸ್ಯನಾಗಿದ್ದಕ್ಕೆ ತಣ್ಣನೆಯ ಸ್ವಾಗತ ಸಿಕ್ಕಿದ್ದು ಕಾಂಗ್ರೆಸ್ ಸದಸ್ಯರಿಂದ. ತುರ್ತು ಪರಿಸ್ಥಿತಿಯ ಕಾಲದಲ್ಲಿ ನಾನು ಇಂದಿರಾ ಗಾಂಧಿ ಅವರನ್ನು ತೀವ್ರವಾಗಿ ಟೀಕಿಸಿದ್ದರಿಂದ ಅವರಲ್ಲಿ ನನ್ನ ಬಗ್ಗೆ ಕಹಿ ಭಾವನೆ ಹುಟ್ಟಿಸಿತ್ತು. ವಿರೋಧ ಪಕ್ಷದ ನಾಯಕರಾಗಿದ್ದು, ನನ್ನನ್ನು ಹತ್ತಿರದಿಂದ ಬಲ್ಲವರಾಗಿದ್ದ ಮನಮೋಹನ್ ಸಿಂಗ್ ಕೂಡ ಉದ್ದೇಶಪೂರ್ವಕವಾಗಿ ನನ್ನನ್ನು ದೂರವಿಟ್ಟರು.

ಬಿಜೆಪಿಯ ಹಿಂದುತ್ವವನ್ನು ನಾನು ಟೀಕಿಸುತ್ತೇನೆಂದು ಅವರು ನನ್ನ ಬಗ್ಗೆ ಕೋಪಗೊಂಡಿದ್ದರೂ ಪಕ್ಷದ ಅನೇಕ ಸದಸ್ಯರು ಕಾಂಗ್ರೆಸ್‌ನವರಿಗಿಂತ ಹೆಚ್ಚು ಸ್ನೇಹಿತರಾಗಿದ್ದರು. ನನ್ನ ಆರು ವರ್ಷಗಳ(1997-2003) ಬಹುಪಾಲು ಎನ್‌ಡಿಎ ಸಮ್ಮಿಶ್ರ ಸರಕಾರದ ಅಟಲ್ ಬಿಹಾರಿ ವಾಜಪೇಯಿ ಅವರ ಕಾಲಕ್ಕೆ ಸೇರಿತ್ತು. ಅವರು ನನ್ನ ವಿಚಾರಕ್ಕೆ ಸೌಜನ್ಯಪೂರ್ವಕವಾಗಿ ನಡೆದುಕೊಳ್ಳುತ್ತಿದ್ದರು. ಒಂದು ಕಾಲಕ್ಕೆ ನಾವು ತುಂಬಾ ಹತ್ತಿರವಾದೆವು. ನಾನು, ಆರ್ಥಿಕ ತಜ್ಞ ಜೆ.ಡಿ. ಸೇಥಿ ಅವರೊಡಗೂಡಿ ಪ್ರತಿ ಸಂಜೆ ಅವರೊಂದಿಗೆ ಚಹಾ ಕುಡಿಯಲು ಒಟ್ಟಿಗೆ ಸೇರುತ್ತಿದ್ದೆವು. ವಾಜಪೇಯಿ ಅವರಿಗೆ ಜಿಲೇಬಿ ಮತ್ತು ಕಚೋರಿ ಎಂದರೆ ಬಹಳ ಇಷ್ಟ . ಅವುಗಳನ್ನು ವಿಶೇಷವಾಗಿ ಚಾಂದನೀ ಚೌಕ್‌ನಿಂದ ತರಿಸಲಾಗುತ್ತಿತ್ತು.

ರಾಜ್ಯಸಭೆಯಲ್ಲಿ ನನ್ನ ಭಾಷಣ ಮೂವತ್ತು ನಿಮಿಷ ನಡೆಯಿತು. ಒಂದು ಜಾತ್ಯತೀತ ರಾಜಕೀಯವನ್ನು ತರುವುದರಲ್ಲಿ ದೇಶ ವಿಫಲವಾಗಿರುವ ಬಗ್ಗೆ ನಾನು ಮಾತನಾಡಿದೆ. ನಾವು ಎಲ್ಲಿ ತಪ್ಪಿದ್ದೇವೆ, ನಮ್ಮ ಶ್ರಮ ಏಕೆ ಫಲ ಕೊಟ್ಟಿಲ್ಲ ಎಂದು ನಾನು ಕಳವಳ ವ್ಯಕ್ತಪಡಿಸಿದ್ದೆ. ನಾನು ಯಾವ ಪಕ್ಷದ ಹೆಸರನ್ನೂ ಹೇಳದೆ, ಕೋಮುವಾದಿ ಶಕ್ತಿಗಳು ಇದಕ್ಕೆ ಕಾರಣವೆಂದು ಹೇಳಿದೆ. ಅಲ್ಲದೇ ಜಾತ್ಯತೀತ ಶಕ್ತಿಗಳು ಸಾಕಷ್ಟು ಪ್ರಬಲವಾಗಿಲ್ಲದಿದ್ದರೂ, ಹೊಂದಾಣಿಕೆಯ ಅಭಾವವೂ ಕಾರಣವೆಂದಿದ್ದೆ.

ನಾನು ಜಯಪ್ರಕಾಶ್ ನಾರಾಯಣ ಅವರು ದೇಶಕ್ಕೆ ನೀಡಿದ ಪ್ರಸ್ತಾಪಿಸುತ್ತಿದ್ದಾಗ, ಪ್ರಣಬ್ ಮುಖರ್ಜಿ ಸಭೆಯಿಂದ ನಿರ್ಗಮಿಸುತ್ತಿದ್ದುದನ್ನು ನೋಡಿದೆ. ಅವರು ನಾನು ರಾಜ್ಯಸಭೆಯಲ್ಲಿ ಇದ್ದಷ್ಟು ಕಾಲ ದೂರವೇ ಉಳಿದಿದ್ದರು. ಅವರು ಗೃಹ ವ್ಯವಹಾರಗಳ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ, ನಾನು ಅದರ ಸದಸ್ಯನಾಗಿದ್ದಾಗ ಕೂಡ, ಅವರು ಎಷ್ಟುಬೇಕೋ ಅಷ್ಟು ಸ್ನೇಹದಲ್ಲಿ ಇರುತ್ತಿದ್ದರು, ಆದರೆ ಆಪ್ತವಾಗಿ ಇರುತ್ತಿರಲಿಲ್ಲ.

ನಾನು ‘ಸ್ಟೇಟ್‌ಸ್ಮನ್’ ನ ಸ್ಥಾನಿಕ ಸಂಪಾದಕನಾಗಿದ್ದಾಗ, ಅರಿಂದ ನನಗೆ ಬಂದ ದೂರವಾಣಿ ಕರೆ ನೆನಪಿಸಿಕೊಂಡೆ. ಅವರ ಮನೆಯಲ್ಲಿ ಚಹಾ ಕುಡಿಯಲು ಆಹ್ವಾನಿಸಿದರು. ಆಗ ಅವರು ಸರಕಾರಿ ಹುದ್ದೆಯನ್ನು ಹೊಂದಿರಲಿಲ್ಲ. ನಾವಿಬ್ಬರು, ಅವರ ಶ್ರೀಮತಿ ಮೂವರೂ ನೆಲದ ಮೇಲೆ ಕುಳಿತು ಚಹಾ ಕುಡಿಯುತ್ತಿದ್ದೆವು. ಅವರ ಮನೆಯಲ್ಲಿ ಪೀಠೋಪಕರಣ ಹೆಚ್ಚಿರಲಿಲ್ಲ. ದೇಶದ ರಾಜಧಾನಿ ದೆಹಲಿಗೆ ಬಂದ ಸಾಮಾನ್ಯ ಬಂಗಾಳಿ ಮನುಷ್ಯನ ಸಾಧಾರಣ ಜೀವನ ಶೈಲಿ ಅವರಲ್ಲಿತ್ತು. ಅವರ ಪತ್ನಿ ಒಬ್ಬ ನೃತ್ಯಗಾರ್ತಿಯಾಗಿ ಸ್ಥಾನ ಕಂಡುಕೊಳ್ಳಲು ಒದ್ದಾಡುತ್ತಿದ್ದರು. ನನ್ನ ಪತ್ನಿಗೆ ಪ್ರಚಾರ ಮಾಡಿ ಎಂದು ಅವರು ನನ್ನನ್ನು ಕೋರಿದಾಗ, ಅವರು ತಮ್ಮ ಮನೆಗೆ ನನ್ನನ್ನು ಕರೆದದ್ದೇಕೆಂದು ತಿಳಿಯಿತು.ಇದೇ ಪ್ರಣಬ್ ಅವರನ್ನು ಕೆಲವು ವರ್ಷಗಳ ನಂತರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಕಂಡಾಗ ಎಲ್ಲವೂ ಬದಲಾಗಿತ್ತು. ಇವರ ಮನೆ ವೈಭವೋಪೇತವಾಗಿದ್ದು, ಅತ್ಯಾಧುನಿಕ ಪೀಠೋಪಕರಣಗಳಿಂದ, ಬೆಲೆಬಾಳುವ ಕಾರ್ಪೆಟ್‌ಗಳಿಂದ ಕಂಗೊಳಿಸುತ್ತಿತ್ತು. ಬೆಳ್ಳಿ ಪಾತ್ರೆಗಳು ಹೊಳೆಯುತ್ತಿದ್ದವು. ಆಗ ಅವರು ವಾಣಿಜ್ಯ ಮಂತ್ರಿಯಾಗಿದ್ದು, ಸಂಜಯ ಗಾಂಧಿಯವರ ನಂಬಿಕಸ್ಥನಾಗಿದ್ದರು.

ರಾಜ್ಯಸಭೆಯಲ್ಲಿ ನಾಮಕರಣಗೊಂಡ ಸದಸ್ಯರು ಒಟ್ಟಿಗೆ ಕೂರುತ್ತಿದ್ದರು. ಖ್ಯಾತ ವಿಜ್ಞಾನಿ ಡಾ.ರಾಜಾ ರಾಮಣ್ಣ ನನ್ನ ಎಡಭಾಗದಲ್ಲಿ ಕುಳಿತರೆ, ಖ್ಯಾತ ಸಿನಿಮಾ ನಿರ್ದೇಶಕ ಮೃಣಾಲ್ ಸೇನ್ ಬಲಭಾಗದಲ್ಲಿ ಇರುತ್ತಿದ್ದರು. ಶಬಾನಾ ಅಜ್ಮಿ ನಾನು ಸಾಲಿನ ಮೊದಲಲ್ಲಿ ಕೂರುತ್ತಿದ್ದೆವು. ಮೃಣಾಲ್ ಸೇನ್ ಅಪರೂಪಕ್ಕೆ ಬರುತ್ತಿದ್ದುದರಿಂದ ಶಬಾನಾ ಮತ್ತು ನಾನು ಬಹುಪಾಲು ಸಮಯ ಒಟ್ಟಿಗೆ ಕೂರುತ್ತಿದ್ದೆವು. ನಟಿಯಾದ ಅವರ ಬಗ್ಗೆ ನನಗೆ ತುಂಬಾ ಗೌರವ. ಅವರು ನನ್ನ ಪಕ್ಕ ಕೂರುವುದು ನನಗೆ ಸಂತಸ ಕೊಟ್ಟಿತು. ಆದರೆ ನಾನು ಆಕೆಯೊಂದಿಗೆ ಸಲುಗೆಯಿಂದ ಇರಲು ಆಗಲಿಲ್ಲ. ತೀರಾ ವ್ಯಾವಹಾರಿಕವಾಗಿ ಇರುತ್ತಿದ್ದರು. ಅವರ ಸ್ವಭಾವ ನಾನು ಸುಮ್ಮನಿರುವಂತೆ ಮಾಡಿತು. ಒಮ್ಮೆ ‘ನಾನೆಷ್ಟೇ ಪ್ರಯತ್ನ ಮಾಡಿದರೂ ನೀವೇಕೆ ಸ್ವಲ್ಪವೂ ಗಮನ ಎಂದು ಅವರನ್ನೇ ಕೇಳಿದೆ. ಆಗ ಅವರು ಅಂಥದ್ದೇನೂ ಇಲ್ಲ ಎಂದಷ್ಟೇ ಉತ್ತರಿಸಿದರು.

ನಾವು ಅನೇಕ ವಿಷಯಗಳನ್ನು, ಅದರಲ್ಲೂ ಭಾರತದ ಬಡವರನ್ನು ಕುರಿತು ಚರ್ಚಿಸುತ್ತಿದ್ದೆವು. ಶಬಾನಾ, ಮುಂಬೈನ ಕೊಗೇರಿಗಳಲ್ಲಿ ಬದುಕುತ್ತಿರುವ ಜನರಿಗಾಗಿ ಅನೇಕ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದರು. ನಾವು ಒಂದೇ ದಿಕ್ಕಿನಲ್ಲಿ ಚಿಂತಿಸುವವರಾಗಿದ್ದು, ಜಾತ್ಯತೀತ ದೃಷ್ಟಿಕೋನ ಹೊಂದಿದ್ದೆವು. ತಾತ್ವಿಕವಾಗಿ ಎಡಪಂಥೀಯ ನಿಲುವು ಇತ್ತು. ನಮ್ಮ ಚರ್ಚೆಗಳ ಪೈಕಿ, ಮದುವೆ ಅನ್ನುವುದು ಈಗಿರುವ ಹಾಗಿರದೆ, ನಿರ್ದಿಷ್ಟ ವರ್ಷಗಳ ಒಪ್ಪಂದವಾಗಿರಬೇಕು, ಅವಧಿ ಮುಗಿದ ತಾನಾಗಿ ಮುಗಿಯಬೇಕು ಎಂಬ ವಿಚಾರಕ್ಕೆ ನಾವಿಬ್ಬರೂ ಅದೇ ಸರಿ ಎಂದು ಒಪ್ಪಿಕೊಂಡೆವು. ಕೆಲವು ಸಲ ಬಿಜೆಪಿಯ ಅರುಣ್ ಶೌರಿ ಮಾತನಾಡಿದ್ದಕ್ಕೆ ಉತ್ತರ ಕೊಡಿ ಎಂದು ಶಬಾನಾ ಒತ್ತಾಯಿಸುತ್ತಿದ್ದರು. ಏಕೆಂದರೆ ಅರುಣ್ ಶೌರಿ ಅವರ ಬಿಜೆಪಿ ಸಿದ್ಧಾಂತ ಮೂಲದ ಪ್ರತಿಗಾಮಿ ಧೋರಣೆ ಮಾತಿನಲ್ಲಿ ತುಂಬಿರುತ್ತಿತ್ತು.

ಡಾ. ರಾಜಾ ರಾಮಣ್ಣ ಅವರು ಮಾತನಾಡುವಾಗ, ಒಮ್ಮೆ ನನಗೆ ಹೇಳಿದರು; ಅವರು ಬಾಗ್ದಾದ್‌ಗೆ ಭೇಟಿ ಕೊಟ್ಟಾಗ ಸದ್ದಾಂ ಹುಸೇನ್ ಕರೆಸಿದರಂತೆ. ಒಂದು ಖಾಲಿ ಚೆಕ್ ಅಣ್ವಸ್ತ್ರ ತಯಾರಿಸುವುದನ್ನು ತಿಳಿಸಿಕೊಡಿ ಎಂದು ಕೇಳಿದರಂತೆ. ಇವರು ಯಾವುದೇ ವಿವರ ಬಿಟ್ಟು ಕೊಡಲು ನಿರಾಕರಿಸಿದಾಗ ಸದ್ದಾಂಗೆ ಆಶ್ಚರ್ಯವಾಯಿತಂತೆ. ಮುಂದೆಂದೂ ಡಾ. ರಾಜಾ ರಾಮಣ್ಣ ಅವರು ಇರಾಕ್‌ಗೆ ಹೋಗಲೇ ಇಲ್ಲ. ರಾಜ್ಯಸಭೆಯ ಸದಸ್ಯರಾಗುವುದಕ್ಕೆ ಮೊದಲು ನಾನು, ರಾಮಣ್ಣ ತಿರುಪತಿಯಲ್ಲಿ ಭೇಟಿಯಾಗಿದ್ದೆವು. ಅಲ್ಲಿ ನಮ್ಮ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಗಾಗಿ ನೀಡಿದ ಪ್ರಶಸ್ತಿ ಸ್ವೀಕರಿಸಿದ್ದೆವು. ಆಗ ಅವರು ಪಾಕಿಸ್ತಾನ ಮತ್ತು ಭಾರತ ಎರಡೂ ಅಣ್ವಸ್ತ್ರಗಳನ್ನು ಹೊಂದಿವೆ ಎಂದು ಹೇಳಿದರು. ಪಾಕಿಸ್ತಾನದ ಬಳಿ ಅದಿರುವುದು ಆಶ್ಚರ್ಯ ತಂದಿತ್ತು. ಏಕೆಂದರೆ ಆ ವಿಚಾರ ಬಹುಕಾಲದ ನಂತರ ಹೊರಗೆ ಬಂತು.

ರಾಜ್ಯಸಭೆಗೆ ನಾನು ನಾಮಕರಣಗೊಂಡ ಕೆಲವೇ ದಿನಗಳಲ್ಲಿ, ಇನ್ನೊಬ್ಬ ಸದಸ್ಯರು ನನ್ನ ಭೇಟಿಯಾಗಿ, ಸದಸ್ಯರಿಗೆ ನೀಡುವ ಸ್ಥಳೀಯ ಅಭಿವೃದ್ಧಿ ನಿಧಿಯ ಒಂದು ಕೋಟಿ ರೂಪಾಯಿ ಹಣದಲ್ಲಿ ಏನು ಮಾಡಲು ಬಯಸಿದ್ದೀರಿ ಎಂದು ಕೇಳಿದರು. ನಾನು ಉತ್ತರಿಸುವುದಕ್ಕೆ ಮೊದಲೇ ಅವರು, ‘ನೀವು ಹಣ ತೆಗೆದುಕೊಳ್ಳುವ ಪತ್ರಗಳಿಗೆ ಸಹಿ ಮಾಡಿ ಬಿಟ್ಟರೆ ಸಾಕು. ಮಿಕ್ಕಿದ್ದೆಲ್ಲಾ ನಾನು ನೋಡಿಕೊಳ್ಳುತ್ತೇನೆ. ನಿಮಗೆ 50 ರುಪಾಯಿ ಕೊಟ್ಟು ಬಿಡುತ್ತೇನೆ’ ಎಂದು ಹೇಳಿದರು! ಅದನ್ನು ಕೇಳಿ ನಾನು ದಿಗ್ಭ್ರಾಂತನಾದೆ. ಇದನ್ನು ಹೇಗೆ ನಿಭಾಯಿಸುತ್ತೀರಿ ಎಂದು ಕೇಳಿದೆ. ಆಗ ಅವರು ‘ಒಂದು ಸೇತುವೆಯನ್ನೋ, ರಸ್ತೆಯನ್ನೋ ಬರೀ ಕಾಗದದ ಮೇಲೆ ನಿರ್ಮಿಸುವುದು. ಆಮೇಲೆ ಅದು ಮಳೆಯಲ್ಲಿ ಕೊಚ್ಚಿಹೋಯಿತೆಂದು ಹೇಳುವುದು’ ಎಂದು ಸಲೀಸಾಗಿ ಹೇಳಿದರು! ಹಣ ಮಂಜೂರು ಮಾಡುವ ಅಧಿಕಾರಿಗಳಿಗೂ ಇದರಲ್ಲಿ ಪಾಲು ಸಿಗುತ್ತದೆ ಎಂದೂ ಹೇಳಿದರು.

ರಾಜ್ಯಸಭೆಯ ನಿರಾಸಕ್ತ ವಾತಾವರಣ ನನಗೆ ನಿರಾಶೆಮಾಡಿತು. 45 ವರ್ಷಗಳ ಕಾಲ ರಾಜ್ಯಸಭೆ ವರದಿ ಮಾಡಿರುವ ನಾನು, ಈ ಹಿಂದೆ ಕೇಳಿದ ಭಾಷಣಗಳಿಗೆ ಹೋಲಿಸಿದರೆ, ಈಗಿನ ಭಾಷಣಗಳು ಅವುಗಳ ವಿಚಾರದಲ್ಲಾಗಲೀ, ಗುಣಮಟ್ಟದಲ್ಲಾಗಲೀ ಬಹಳ ಕಳಪೆ ಆಗಿರುತ್ತಿದ್ದವು. ಬಹುಪಾಲು ಸದಸ್ಯರು ಮಾತನಾಡುವ ಸರದಿ ಬಂದಾಗ, ಮಾಧ್ಯಮದ ಮೇಲೆ ಪರಿಣಾಮ ಬೀರಲೆಂದು ಮಾತಾಡುತ್ತಿದ್ದರು. ಕೆಲವರು ತಮ್ಮ ತಯಾರಿಸಿದ ಭಾಷಣದ ಪ್ರತಿಯನ್ನು ಮಾಧ್ಯಮದವರಿಗೆ ವಿತರಿಸುತ್ತಿದ್ದರು. ತುಂಬಾ ಚೆನ್ನಾಗಿ ಪ್ರತಿಪಾದಿಸಿದ ವಿಷಯಗಳ ಭಾಷಣಗಳು ಕೂಡ ಮಾಧ್ಯಮದಲ್ಲಿ ವರದಿಯಾಗದೇ ಹೋಗುವುದು, ಪತ್ರಕರ್ತರು ಅವುಗಳನ್ನು ಸುಮ್ಮನೆ ಆಡಿಕೊಂಡು ತಳ್ಳಿಹಾಕುವುದು ಕೂಡ ನನಗೆ ನಿರಾಶೆ ಮಾಡಿತು. ರಾಜ್ಯಸಭೆಯ ಕಲಾಪ, ಮಾಧ್ಯಮಗಳಲ್ಲಿ ಸರಿಯಾಗಿ ವರದಿಯಾಗಲು ಏನು ಮಾಡಬೇಕು ಎಂದು ಅಧ್ಯಕ್ಷರು ಒಮ್ಮೆ ನನ್ನ ಸಲಹೆ ಕೇಳಿದ್ದರು. ಇದು ಬಹುಪಾಲು ಸದನ ಕಲಾಪ ವರದಿ ಮಾಡುವ ವರದಿಗಾರರ ಸೂಕ್ಷ್ಮತೆಯನ್ನು, ಇಲ್ಲವೇ ಆ ದಿನ ಸಂಸತ್ ಕಲಾಪಕ್ಕೆ ಪತ್ರಿಕೆಯಲ್ಲಿ ಎಷ್ಟು ಜಾಗ ಸಿಗುತ್ತದೆ ಎಂಬುದನ್ನು ಅವಲಂಬಿಸಿರುತ್ತದೆ ಎಂದು ಹೇಳಿದೆ.

ಸಂಸದೀಯ ಸ್ಥಾಯಿ ಸಮಿತಿಗಳ ಸಭೆಗಳಿಗೂ ಮಾಧ್ಯಮಗಳಿಗೆ ಪ್ರವೇಶ ಕೊಟ್ಟರೆ, ಅವರು ಹೆಚ್ಚು ವರದಿಮಾಡಲು ಉತ್ತೇಜಿಸಿದಂತಾಗುತ್ತದೆ ಎಂದು ನಾನು ಕೊಟ್ಟೆ. ಲೋಕಸಭೆಯ ಸ್ಪೀಕರ್ ಮತ್ತು ರಾಜ್ಯಸಭೆಯ ಅಧ್ಯಕ್ಷರು ಇಬ್ಬರೂ ಈ ಸಲಹೆಯನ್ನು ವಿರೋಧಿಸಿದರು. ಅವರ ಈ ವಿರೋಧದ ಹಿಂದಿನ ತರ್ಕ ನನಗೆ ಅರ್ಥವಾಗಲಿಲ್ಲ. ಅಧಿಕಾರಿಗಳು ನೀಡುವ ಸಾಕ್ಷ್ಯಾಧಾರಗಳು, ತಜ್ಞರು ಮತ್ತಿತರ ಹೊರಗಿನವರ ಹೇಳಿಕೆಗಳು ಎಲ್ಲವೂ ಇದ್ದು ವರದಿಯ ಸಮೇತ ಸದನದಲ್ಲಿ ಮಂಡಿತವಾಗುತ್ತದೆ. ಅದರಿಂದ ಗೌಪ್ಯತೆಯ ವಾದಕ್ಕೆ ಇಲ್ಲಿ ಅವಕಾಶವಿರುವುದಿಲ್ಲ.

ನನ್ನ ಅವಧಿಯಲ್ಲಿ ಸ್ಪೀಕರ್ ಆಗಿದ್ದ ಸೋಮನಾಥ ಚಟರ್ಜಿ ಅವರು ಸಾರ್ವಜನಿಕ ಸಂಪರ್ಕದ ವಿಚಾರದಲ್ಲಿ ಒಂದು ಪ್ರಯತ್ನ ಮಾಡಿದರು. ತಮ್ಮ ಅವರು ಪತ್ರಿಕೆಗಳ ಸಂಪಾದಕರು ಮತ್ತು ಹಿರಿಯ ಪತ್ರಕರ್ತರನ್ನು ತಂಡ ತಂಡದಲ್ಲಿ ಆಹ್ವಾನಿಸಿ, ಸದನದ ಕಲಾಪಗಳನ್ನು ವರದಿ ಮಾಡುವಂತೆ ಅವರ ಮನವೊಲಿಸುವ ಕೆಲಸ ಮಾಡಿದರು. ಈ ಕಾರ್ಯದಿಂದ ಹೆಚ್ಚೇನೂ ಸಾಧಿತವಾಗಲಿಲ್ಲ. ಗಲಾಟೆಯಿಂದ ಗಬ್ಬೆದ್ದ ಸದನದ ವಾತಾವರಣವೇ ಒಬ್ಬ ಸದಸ್ಯನ ಉತ್ತಮ ಸಂಶೋಧನಾತ್ಮಕ ಭಾಷಣಕ್ಕಿಂತ ಹೆಚ್ಚು ರಂಜನೀಯವಾಗಿ ಇರುತ್ತದೆಮಾಧ್ಯಮದ ಪಾಲಿಗೆ!’

Tags

Related Articles

Leave a Reply

Your email address will not be published. Required fields are marked *

Language
Close