About Us Advertise with us Be a Reporter E-Paper

ಅಂಕಣಗಳು

ಜೈಲೀಗ ಜೈಲಲ್ಲ…!

- ಉಮಾ ಮಹೇಶ ವೈದ್ಯ

ಜೈಲು ಎಲ್ಲರಿಗೂ ಏನೋ ಒಂದು ರೀತಿಯ ಭಯ. ಅಲ್ಲಿ ನೀಡುತ್ತಿದ್ದ ಕಠಿಣ ಹಾಗೂ ಯಾತನಾಮಯಿ ಶಿಕ್ಷೆ, ಪಶುಗಳೂ ಮೂಸಿ ನೋಡದ ಆಹಾರದ ವಿತರಣೆ, ನರಕವನ್ನು ಸದೃಶಗೊಳಿಸುವ ‘ಕಾಲಾಪಾನಿ’ಯಂಥ ಘನಘೋರ ಚಿತ್ರಹಿಂಸೆ ಕಲ್ಪನೆ ಮನದಲ್ಲಿ ಮೂಡಿ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ ಎಂದೊಡನೇ ಅಪರಾಧಿಗೆ ಭೂಮಿ ಬಾಯ್ದೆರೆದು ನುಂಗಬಾರದೇ ಎನಿಸುವಂತಾಗುತ್ತಿತ್ತು.

ಇದರ ಜೊತೆ ತುರಂಗ ವಾಸ ಪ್ರತಿಷ್ಠೆಗೆ ಕುಂದು, ಭವಿಷ್ಯದ ಅವನತಿ ಎಂದು ಭಾವಿಸುವವರು ನಾವೆಲ್ಲಾ. ಹಿಂದೆಲ್ಲಾ ಕಾರಾಗೃಹವಾಸಿಯಾಗಿ ಶಿಕ್ಷೆ ಅನುಭವಿಸಿ ನಾಗರಿಕ ಜಗತ್ತಿನಲ್ಲಿ ಯಾವುದೇ ರೀತಿಯ ಮಾನ-ಸಮ್ಮಾನಗಳು ದೊರೆಯದೇ ಒಂದು ಬಗೆಯ ಅಘೋಷಿತ ಬಹಿಷ್ಕಾರವಿರುತ್ತಿತ್ತು. ಇಂಥವರ ಪುನರ್ವಸತಿಗಾಗಿಯೇ ಹಿಂದೆ ಸರಕಾರ ಪ್ರತ್ಯೇಕ ಪ್ರದೇಶವನ್ನು ಗುರುತಿಸಿ ಅವರಿಗೆ ಅವಶ್ಯಕ ಕನಿಷ್ಠ ಸೌಲಭ್ಯಗಳನ್ನು ನೀಡುತ್ತಿತ್ತು. ಅಂಥವರು ತಾವು ಮಾಡಿದ ಅಪರಾಧ ಹಾಗೂ ಕಾರಾಗೃಹದಲ್ಲಿ ಅನುಭವಿಸಿದ ನರಕ ಯಾತನೆಯ ಶಿಕ್ಷೆಯ ಜೊತೆ ತಮ್ಮ ಉಳಿದ ಆಯಷ್ಯವನ್ನೂ ಪಶ್ಚಾತಾಪದ ಬೇಗುದಿಯಲ್ಲಿ ಕಳೆಯುತ್ತಿದ್ದನ್ನು ನಾವು ಕಂಡು, ಕೇಳಿದ್ದೇವೆ. ಯಾವುದೋ ಒಂದು ವಿಷ ಗಳಿಗೆಯಲ್ಲಿ ಮಾಡಿದ ಅಪರಾಧಕ್ಕೆ ಇಷ್ಟು ಶಿಕ್ಷೆ ಸರಿಯಲ್ಲ, ಅಪರಾಧಿಗಳೂ ಸಮಾಜದ ಒಂದು ಭಾಗ, ಅವರ ಸುಧಾರಣೆ ಹಾಗೂ ಅವರ ಮಾನವ ಹಕ್ಕುಗಳ ರಕ್ಷಣೆ ಸರಕಾರದ ಆದ್ಯ ಕರ್ತವ್ಯ ಎನ್ನುವ ತತ್ವ ಜಗತ್ತಿನಾದ್ಯಂತ ಹರಡಿದಂತೆ ಜೈಲು ಜೀವನ ಸುಧಾರಣೆ ಕಾಣ ತೊಡಗಿತು.

ಪ್ರಸ್ತುತ, ಜೈಲಿಗೆ ಸೇರುವ ಪ್ರತಿಯೊಬ್ಬ ಕೈದಿಯ ಅಗತ್ಯ ಜೀವನೋಪಚಾರಗಳನ್ನು ಕಾಳಜಿಪೂರ್ವಕವಾಗಿ ನೋಡಿಕೊಳ್ಳುವ ಹಾಗೂ ಮೂಲ ಭೂತ ಸೌಕರ್ಯಗಳನ್ನು ಕೊಡಮಾಡುವ ಹೊಣೆ ಸರಕಾರದ್ದಾಗಿದೆ. ಈ ಜವಾಬ್ದಾರಿಯನ್ನು ನಿಭಾಯಿಸಲು ಸರಕಾರ ಪ್ರತ್ಯೇಕವಾಗಿ ಬಂದೀಖಾನೆ ಇಲಾಖೆಯನ್ನು ಹೊಂದಿದ್ದು ಒಬ್ಬ ಸಂಪುಟ ದರ್ಜೆಯ ಮಂತ್ರಿ, ಇಲಾಖೆಗೆ ಕಾರ್ಯದರ್ಶಿಗಳು, ಹಾಗೂ ಜೈಲು ಅಧಿಕಾರಿಗಳು ಸದಾ ಕಾಲ ಕರ್ತವ್ಯ ನಿರ್ವಹಣೆಯಲ್ಲಿ ತೊಡಗಿರುತ್ತಾರೆ. ಈ ಇಲಾಖೆಯ ಖರ್ಚು-ವೆಚ್ಚಕ್ಕಾಗಿ ಪ್ರತಿವರ್ಷ ಪ್ರತ್ಯೇಕ ಅನುದಾನವನ್ನು ಸರಕಾರ ನೀಡುತ್ತದೆ.

ಇಷ್ಟೆಲ್ಲಾ ಸುಧಾರಣೆಯಾದಂತೆ ಜೈಲು ಪರಿಸರದಲ್ಲೂ ಗಣನೀಯ ಬದಲಾವಣೆ ಕಾಣುವಂತಾಯಿತು. ಪ್ರತಿ ಕಾರಾಗೃಹದಲ್ಲಿ ದೂರದರ್ಶನ, ಆಕಾಶವಾಣಿ, ಹಾಗೂ ಗ್ರಂಥಾಲಯ ಸೌಲಭ್ಯಗಳಿದ್ದು, ತಮ್ಮ ಹವ್ಯಾಸಕ್ಕನುಗುಣವಾಗಿ ಕೆಲಸ ಮಾಡಲು ಅನುಕೂಲತೆಗಳನ್ನು ಹೊಂದುವ ಅವಕಾಶವಿದೆ, ಇದರ ಜೊತೆ ಶಿಕ್ಷಿತ ಅಪರಾಧಿಗಳು ಜೈಲಿನಲ್ಲಿ ಮಾಡುವ ಕೂಲಿ ಹಣ ದೊರೆಯುತ್ತದೆ. ಆ ಜೈಲಿನಲ್ಲಿ ಕ್ಯಾಟೀನ್ ಇದ್ದಲ್ಲಿ ನಿಮಗೆ ಬಯಸಿದ ವಸ್ತುಗಳನ್ನು ಖರೀದಿಸುವ ಅವಕಾಶ ಪ್ರತಿಯೊಬ್ಬ ಬಂದಿಗೆ ಇದೆ. ಸೆರೆವಾಸದಲ್ಲಿರುವಾಗ ಕೈದಿಗೆ ಅನಾರೋಗ್ಯ ಕಾಡಿ ಶಸ್ತ್ರ ಚಿಕಿತ್ಸೆ ಅವಶ್ಯವಾದರೆ ಸರಕಾರ ತನ್ನ ವೆಚ್ಚದಡಿ ಆ ಕೈದಿಗೆ ಚಿಕಿತ್ಸೆ ಮಾಡಿಸಬೇಕು, ಈ ವೆಚ್ಚವನ್ನು ಆತನಿಂದ ನಂತರ ಭರಿಸಿಕೊಳ್ಳುವ ಅವಕಾಶ ಕಾನೂನಿನಡಿ ಇರುವುದಿಲ್ಲ.

ಇವುಗಳ ಜೊತೆ ಒಂದು ವೇಳೆ ಅಧಿಕಾರಿಗಳೊಂದಿಗೆ ವಿಶ್ವಾಸ, ನಂಬಿಕೆ ಹಾಗೂ ಸಲಿಗೆ ದೊರೆತಲ್ಲಿ ಆ ಕೈದಿಗೆ ಜಗತ್ತಿನಲ್ಲಿದ್ದರೂ ಒಂದೇ, ಜೈಲಿನಲ್ಲಿದ್ದರೂ ಒಂದೇ.

ಆಸಕ್ತಿಕರ ವಿಷಯವೆಂದರೆ, ಜೈಲಿನಲ್ಲಿದ್ದುಕೊಂಡೇ ಶಿಕ್ಷಣವನ್ನು ಪೂರೈಸುವ ಅವಕಾಶವಿರುವುದು. ಅನೇಕ ಕೈದಿಗಳು ತಮ್ಮ ಶಿಕ್ಷೆ ಅವಧಿ ಪೂರೈಸಿ ಬಿಡುಗಡೆಯಾಗುವ ಸಮಯದಲ್ಲಿ ಪದವೀಧರರಾಗಿ, ಸ್ನಾತಕೋತ್ತರ ಪದವಿಧರರಾಗಿ, ಮೇಲಾಗಿ ಕಾನೂನು ಪದವಿ ಪೂರೈಸಿ ಹೊರ ಜಗತ್ತಿಗೆ ಬಂದು ನ್ಯಾಯವಾದಿಗಳಾಗಿ ಸೇವೆ ಸಲ್ಲಿಸುತ್ತಿರುವುದು ಕೇಳಿ ತಿಳಿದ ವಿಷಯ. ತದ್ವಿರುದ್ಧವಾಗಿ ಜೈಲು ಅತ್ಯಂತ ಸುರಕ್ಷಿತ ತಾಣವಾದ್ದರಿಂದ ಅಲ್ಲಿರುವ ಭೂ ಜಗತ್ತಿನ ದೊರೆಗಳ (ಅವರ ಜೀವರಕ್ಷಣೆಗೆ ಅದೊಳ್ಳೇ ಆಶ್ರಯ) ಸಂಪರ್ಕಕ್ಕೆ ಕೆಲ ಕೈದಿಗಳು ಬರುವುದುಂಟು!

ಈಗೀಗ ಸಮಾಜದ ಅತಿ ಗಣ್ಯರೆನಿಸಿಕೊಂಡವರೆಲ್ಲ ಜೈಲುವಾಸಿಗಳಾಗುತ್ತಿದ್ದಾರೆ. ಇದರ ಫಲವಾಗಿ ಜೈಲು ಜೀವನದ ಮಟ್ಟ ಇನ್ನಷ್ಟು ಸುಧಾರಣೆ ಕಾಣಬಹುದು. ಹೆಂಡಿರು, ಮಕ್ಕಳು ಹಾಗೂ ಸಂಬಂಧಿಗಳು ಜೊತೆಯಿಲ್ಲ ಎನ್ನುವುದನ್ನು ಹೊರತು ಪಡಿಸಿದರೆ ಮನೆಯ ಎಲ್ಲ ವಾತಾವರಣವನ್ನು ಜೈಲಿನಲ್ಲಿ ಹೊಂದುವದರ ಜೊತೆ ತಮ್ಮ ಚಟುವಟಿಕೆಗಳನ್ನು ನಿರ್ವಿಘ್ನವಾಗಿ ನಿರ್ವಹಿಸುವ ಅವಕಾಶ ದೊರೆಯುತ್ತಿರುವಾಗ ಇನ್ನೇನು ಬೇಕು ಎನ್ನುವಂತಾಗಿದೆ.

ನ್ಯಾಯಾಲಯ, ಪ್ರಮುಖ ಆರೋಪಿಯೊಬ್ಬನಿಗೆ ಸಾಕ್ಷಿ ಹಾಗೂ ಸಾಕ್ಷ್ಯಗಳನ್ನು ನಾಶಪಡಿಸಬಹುದೆಂದು ಭಾವಿಸಿ ಜಾಮೀನು ನೀಡದೇ ಜೈಲು ವಿಧಿಸಿತೆಂದರೆ ಅದು ಸರಕಾರಕ್ಕೆ ಹೊರೆಯೇ ಹೊರತು ಒಳ ಹೋಗುವ ವ್ಯಕ್ತಿಗೆ ವಿರಮಿಸಲು ಸಮಯಾವಕಾಶ ನೀಡಿದಂತೆ. ಒಂದು ವೇಳೆ ಆ ವ್ಯಕ್ತಿ ಪ್ರಬಲನಾದಲ್ಲಿ ಯಾವ ಅಡೆತಡೆಯೂ ಇಲ್ಲದೆ ತನ್ನೆಲ್ಲ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಬಲ್ಲ.

Tags

Related Articles

Leave a Reply

Your email address will not be published. Required fields are marked *

Language
Close