About Us Advertise with us Be a Reporter E-Paper

ಅಂಕಣಗಳು

ಅಮೆಜಾನ್‌ನಂತಹ ಅಭೂತಪೂರ್ವ ವಾಣಿಜ್ಯ ಸಾಮ್ರಾಜ್ಯ ಜೆಫ್‌ಬಿಜೋಸ್..!

- ಶಿಶಿರ ಹೆಗಡೆ, ಶಿಕಾಗೋ

ಅಮೆಜಾನ್. ಈ ಹೆಸರು ಮೊದಲು ಕೇಳಿದ್ದು ಪ್ರಾಥಮಿಕ ಶಾಲೆಯಲ್ಲಿ ಭೂಗೋಳವನ್ನು ಓದುವಾಗ. ದಕ್ಷಿಣ ಅಮೆರಿಕದ ‘ಅಮೆಜಾನ್’ ಕಾಡಿನ ಬಗ್ಗೆ ಮತ್ತು ಹರಿಯುವ ನದಿಯ ಬಗ್ಗೆ ಆಗ ಓದಿದ್ದೆವು. ಸರಿ ಸುಮಾರು 20 ವರ್ಷದ ನಂತರ ಇಂದು ಜಗತ್ತಿನ ಹೆಚ್ಚಿನವರನ್ನು ಅಮೆಜಾನ್ ಏನೆಂದು ಕೇಳಿದರೆ ಅವರೆಲ್ಲರಿಗೆ ‘ಅಮೆಜಾನ್.ಕಾಮ್’ ಮೊದಲಿಗೆ ಮನಸ್ಸಿಗೆ ಬರುತ್ತದೆ. ಇಂದು ಈ ಒಂದು ಕಂಪನಿ ಅದ್ಯಾವ ಪರಿ ಬೆಳೆದು ನಿಂತಿದೆಯೆಂದರೆ, ನದಿಗೆ, ಕಾಡಿಗೆ ಆ ಹೆಸರು ಬಂದಿತೇನೋ ಎನ್ನುವ ಮಟ್ಟಿಗೆ, ಎಲ್ಲ ಎಲ್ಲೆಗಳನ್ನು ಮೀರಿ. ಅಂದು ನಾವು ಕಲಿತಿದ್ದೆವು- ಅಮೆಜಾನ್ ಕಾಡಿನಲ್ಲಿ ಕಾಣಸಿಗದ ಜೀವ ಸಂಕುಲವಿಲ್ಲ, ಅಷ್ಟು ವೈವಿಧ್ಯ. ಇಂದು ಅಮೆಜಾನ್.ಕಾಮ್ ನಲ್ಲಿ ಸಿಗದ ವಸ್ತುವೇ ಜಗತ್ತಿನಲ್ಲಿ ಇಲ್ಲ ಎಂದರೆ ಅತಿಶಯವಲ್ಲ. ಇಂತಹ ಒಂದು ಬೃಹತ್ ಕಂಪನಿಯನ್ನು ಕಟ್ಟಿ ಬೆಳೆಸಿ ಇಂದಿಗೂ ಮುನ್ನಡೆಸುತ್ತಿರುವುದೇ ಅದರ ಸ್ಥಾಪಕ, ಅಧ್ಯಕ್ಷ, ಸಿಇಒ ಜೆಫ್ ಬೆಜೋಸ್. ಏನೇನೂ ಹಿನ್ನೆಲೆಯಿಲ್ಲದ- ಗಾಡ್ ಫಾದರ್ ಇಲ್ಲದ ಒಬ್ಬ ಅದೆಂಥ ಸಾಮ್ರಾಜ್ಯವನ್ನು ಕಟ್ಟಬಲ್ಲ ಎನ್ನುವುದಕ್ಕೆ ಜೆಫ್ ಗೆ ಸಾದೃಶ ಇನ್ನೊಬ್ಬರಿಲ್ಲ.

ಜೆಫ್ ಹುಟ್ಟಿದ್ದು ಅಮೆರಿಕದ ಅಲ್ಬುಕರ್ಕಿ ಯಲ್ಲಿ. ಕಲಿತದ್ದು ಮತ್ತು ಬೆಳೆದದ್ದೆಲ್ಲ ಹೂಸ್ಟನ್ ನಲ್ಲಿ. ನಂತರ ಪ್ರಿನ್ಸ್ಟನ್ ಯೂನಿವರ್ಸಿಟಿಯಲ್ಲಿ ಎಲೆಕ್ಟ್ರಿಕಲ್ ಮತ್ತು ಕಂಪ್ಯೂಟರ್ ಪದವಿ. ನಂತರ ಸುಮಾರು 9 ವರ್ಷಗಳ ಕಾಲ ನ್ಯೂ ಯಾರ್ಕಿನಲ್ಲಿ ನಾಲ್ಕಾರು ಕಂಪನಿಗಳಲ್ಲಿ ಕೆಲಸ. ತನ್ನ ಚತುರತೆಯಿಂದ ಕಲಿಕೆ ಮುಗಿದ ಕೇವಲ 8 ವರ್ಷಗಳಲ್ಲಿ ಕೆಲಸ ಮಾಡುತ್ತಿದ್ದ ಕಂಪನಿಯ ಉಪಾಧ್ಯಕ್ಷ ಸ್ಥಾನದವರೆಗೆ ಬೆಳೆದುಬಿಟ್ಟ. ಆಗ ನ ವಯಸ್ಸು ಕೇವಲ 30. ಅದಾಗಲೇ ಮದುವೆ ಕೂಡ ಆಗಿತ್ತು. ಅಂತಹ ಸಂದರ್ಭದಲ್ಲಿ ತನ್ನ ಕೆಲಸಕ್ಕೆ ಒಂದು ಬೆಳಗ್ಗೆ ರಾಜೀನಾಮೆ ಕೊಟ್ಟುಬಿಟ್ಟ. ಆತನ ಜಾಗದಲ್ಲಿ ಬೇರೆ ಯಾರೇ ಇದ್ದರೂ ಅಂತಹ ಉನ್ನತ ಹುದ್ದೆಯ ಕೆಲಸವನ್ನು ಬಿಡುವ ಮತ್ತು ಇನ್ನೊಂದು ಹೊಸ ಸಾಹಸಕ್ಕೆ ಕೈ ಹಾಕುವ ಯೋಚನೆಯನ್ನೂ ಮಾಡುತ್ತಿರಲಿಲ್ಲವೇನೋ. ಕೈ ತುಂಬಾ ಸಂಬಳ, ಉಪಾಧ್ಯಕ್ಷ ಸ್ಥಾನ ಮತ್ತು ಹೊಸ ಜೀವನ ಸಂಗಾತಿ ಎಲ್ಲವೂ ಅವನದಾಗಿದ್ದ ಸಮಯವದು.

ಆದರೆ ಮೊದಲಿನಿಂದಲೂ ಸುಮ್ಮನೆ ವ್ಯಕ್ತಿಯಾಗಿರದಿದ್ದ ಜೆಫ್, ತನ್ನ ಹೆಂಡತಿಯೊಂದಿಗೆ ಕೆಲಸಕ್ಕೆ ಕೈ ಮುಗಿದು ಕಾರ್‌ನಲ್ಲಿ ಅಮೆರಿಕದ ಪೂರ್ವದಲ್ಲಿರುವ ನ್ಯೂಯಾರ್ಕ್ ನಿಂದ ಪಶ್ಚಿಮದ ಕಡೆಗೆ ಹೊರಟ. ಆ ಕ್ಷಣದಲ್ಲಿ ಏನಾದರೂ ಮಾಡಬೇಕೆಂಬ ಉತ್ಕಟ ಹುಚ್ಚು ಮಾತ್ರ ಅವನ ಬಳಿ ಇತ್ತು. ಏನು ಮಾಡಬೇಕು, ಎಲ್ಲಿಗೆ ಹೋಗಬೇಕು ಎಂಬ ವಿಚಾರ ಕೂಡ ಕೆಲಸ ಬಿಡುವ ಸಮಯದಲ್ಲಿ ಮಾಡಿರಲಿಲ್ಲ. ಮನೆಯ ಸಾಮಾನುಗಳನ್ನು ಸಾಗಿಸಲು ಬಂದಿದ್ದ ಲಾರಿ ಡ್ರೈವರ್ ಬಳಿ, ಪಶ್ಚಿಮಕ್ಕೆ ತನ್ನ ಸಾಮಾನುಗಳನ್ನು ಸಾಗಿಸಿ, ಮಾರ್ಗಮಧ್ಯೆ ಯಾವ ಹೋಗಬೇಕೆಂದು ಹೇಳುತ್ತೇನೆ ಎಂದು ಹೇಳಿದ್ದನಂತೆ. ಈ ತರಹದ ನಿರ್ಣಯಗಳನ್ನು ಜೆಫ್‌ನಂಥವರು ಮಾತ್ರ ತೆಗೆದುಕೊಂಡಾರು.

1994. ಅಮೆರಿಕದ ಪಶ್ಚಿಮದಲ್ಲಿರುವ ಸಿಯಾಟಲ್ ಎಂಬ ಊರಿನಲ್ಲಿ ನೆಲೆಸಿದ್ದ ಮೈಕ್ರೋಸಾಫ್‌ಟ್ ನ ಬಿಲ್ ಗೇಟ್‌ಸ್ ಅದಾಗಲೇ ಹೆಸರುವಾಸಿ. ಅದಾಗಲೇ ಇಂಟರ್ನೆಟ್ ಕೂಡ ಹುಟ್ಟಿಯಾಗಿತ್ತು. ಆಗ ಇಂಟರ್ನೆಟ್ ಬಳಕೆ ಸರಿ ಸುಮಾರು 2300% ವೇಗದಲ್ಲಿ ಬೆಳೆಯುತ್ತಿತ್ತು. ಇದೇ ಕಾರಣಕ್ಕೆ ಮತ್ತು ಸಿಯಾಟಲ್ ಗೆ ಹೋದರೆ ತನ್ನಂತಹ ಕಂಪ್ಯೂಟರ್ ನುರಿತರು ಸಿಕ್ಕಿ ಏನಾದರೂ ಮಾಡಿಯೇನು ಎನ್ನುವ ಕಾರಣದಿಂದಲೇ ಡ್ರೈವರ್ ಗೆ ಸಾಮಾನನ್ನು ಅಲ್ಲಿಗೆ ಒಯ್ಯಲು ಹೇಳಿದ್ದ. ಆ ಊರಿನಲ್ಲೊಂದು ಎರಡು ಬೆಡ್‌ರೂಮಿನ ಮನೆ ಬಾಡಿಗೆಗೆ ಪಡೆದು ತನ್ನ ಕಾರ್ ಶೆಡ್ಡಿನಲ್ಲಿ ಅಮೆಜಾನ್.ಕಾಮ್ ನ ಮೊದಲ ನೀಲ ನಕ್ಷೆ ತಿಂಗಳೊಳಗೆ ಸಿದ್ದ ಪಡಿಸಿದ.

1994 ರಲ್ಲಿ ಹುಟ್ಟಿದ ಅಮೆಜಾನ್ ನ ಮೊದಲ ಉದ್ದೇಶ ಇಂಟರ್ನೆಟ್ಟಿನಲ್ಲಿ ಪುಸ್ತಕಗಳನ್ನು ಮಾರುವುದಕ್ಕಷ್ಟೇ ಸೀಮಿತವಾಗಿತ್ತು. ತನ್ನ ಜಾಲತಾಣದಲ್ಲಿ ಒಂದಿಷ್ಟು ಪುಸ್ತಕಗಳ ಚಿತ್ರಗಳನ್ನು ಹಾಕಿ ಅದನ್ನು ಪೋಸ್ಟ್ ಮೂಲಕ ಕಳಿಸಿ ಮಾರಾಟಮಾಡುವುದು ಮೊದಲ ಆಲೋಚನೆ. ಮೊದಲ ಜೆಫ್ ಅಮೆಜಾನ್ ಅನ್ನು ಪ್ರಾರಂಭಿಸಿದಾಗ ತನ್ನ ಕಂಪ್ಯೂಟರಿನಲ್ಲಿ ಒಂದೊಂದು ಆರ್ಡರ್ ಬಂದಾಗಲೂ ಒಂದು ಬೀಪ್ ಶಬ್ದ ಬರುವಂತೆ ವ್ಯವಸ್ಥೆ ಮಾಡಿಕೊಂಡಿದ್ದನಂತೆ- ಆ ಶಬ್ದ ಬಂದ ಕೂಡಲೇ ಎಲ್ಲಿಲ್ಲದ ಹರ್ಷ. ಕಂಪ್ಯೂಟರಿನತ್ತ ಓಡಿ, ಯಾವ ಪುಸ್ತಕಕ್ಕೆ ಆರ್ಡರ್ ಬಂದಿದೆಯೆಂದು ನೋಡಿ ಥಟ್ಟನೆ ಅದನ್ನು ಹುಡುಕಿ, ಅದನ್ನು ಪ್ಯಾಕ್ ಮಾಡಿ ಕಳುಹಿಸಿಕೊಡುತ್ತಿದ್ದನಂತೆ. ಇದು ಶುರುವಾದ ಒಂದೆರಡು ದಿನಗಳಲ್ಲೇ ಮಧ್ಯ ರಾತ್ರಿ ಎಲ್ಲ ಬೀಪ್ ಕೇಳಿಸುತ್ತಿತ್ತು- ರಾತ್ರಿ ಇಡೀ ಕೂತು ಪ್ಯಾಕ್ ಮಾಡಿ ಎಲ್ಲರಿಗಿಂತ ಮೊದಲು ಪೋಸ್ಟ್ ಆಫೀಸ್ ಗೆ ಹೋಗಿ ಬಾಗಿಲು ತೆಗೆಯುವುದನ್ನೇ ಕಾಯುತ್ತಿದ್ದನಂತೆ. ಅಮೆಜಾನ್ ಪ್ರಾರಂಭದ ದಿನಗಳಲ್ಲೇ ಅದೆಷ್ಟು ಬೇಗ ಖ್ಯಾತಿ ಪಡೆಯಿತೆಂದರೆ, ಕೇವಲ ಒಂದು ತಿಂಗಳಲ್ಲಿ ಕಂಪ್ಯೂಟರಿನ ಆನಂದ ಕೊಡುತ್ತಿದ್ದ ಬೀಪ್ ಶಬ್ದ ಕ್ರಮೇಣ ಕಿರಿ ಕಿರಿಯಾಗಲು ಶುರುವಾಗಿ ಬಂದ್ ಮಾಡಬೇಕಾಯಿತಂತೆ!

ಜೆಫ್ ಮತ್ತು ಅಮೆಜಾನ್ ಹಾದಿ ಯಾವತ್ತೂ ಸುಲಭದ್ದಾಗಿರಲಿಲ್ಲ. ಶುರುವಾದ ಕೇವಲ 3 ತಿಂಗಳಲ್ಲಿ ಜೆಫ್ ನ ಈ ಪುಸ್ತಕ ಖರೀದಿ ಮತ್ತು ಮಾರಾಟ ಅಮೆರಿಕದ ಪುಸ್ತಕ ಆತನತ್ತ ನೋಡುವಂತೆ ಮಾಡಿತು. ಸಹಜವಾಗಿಯೇ ಅವು ಕೂಡ ಇಂಟರ್ನೆಟ್ ನ ಮೂಲಕ ಪುಸ್ತಕಗಳನ್ನು ಮಾರಲು ತಮ್ಮದೇ ವೆಬ್ ಸೈಟ್‌ಅನ್ನು ಶುರು ಮಾಡಿಕೊಂಡವು. ಆದರೆ ಅದಾಗಲೇ ಅಮೆಜಾನ್ ಕೇವಲ ಪುಸ್ತಕಕ್ಕಷ್ಟೇ ಸೀಮಿತಗೊಳ್ಳದೆ ಅದರೊಂದಿಗೆ ಇನ್ನಿತರ ಕೆಲ ಆಟಿಕೆ ಸಾಮಾನುಗಳನ್ನು ಮಾರಾಟ ಮಾಡಲು ಶುರು ಮಾಡಿಯಾಗಿತ್ತು. ಯಥಾ ಪ್ರಕಾರ ಆಟಿಕೆ ಅಂಗಡಿಗಳು ವೆಬ್‌ಸೈಟ್ ಶುರುಮಾಡಿ ಪೈಪೋಟಿ ಕೊಡುವುದು ಅದನ್ನು ಹಿಂಬಾಲಿಸಿತು. ಕ್ರಮೇಣ ಎಲ್ಲ ವರ್ಗದ, ವೈವಿಧ್ಯದ ವ್ಯಾಪಾರಿಗಳೂ ಅಧಿಕೃತ ವೆಬ್ ಸೈಟ್ ಆ ಹಂತದಲ್ಲಿ ಕೆಲವರು ಕ್ರಮೇಣ ಅಮೆಜಾನ್ ದಿವಾಳಿಯಾಗುತ್ತದೆಯೆಂದೇ ಮಾತನಾಡಿಕೊಂಡರು. ಆದರೆ ಹಾಗಾಗಲಿಲ್ಲ.

ವಿಧವಿಧವಾದ ಸಾಮಗ್ರಿ ಮಾರುವ ಅಂಗಡಿಗಳ ವೆಬ್‌ಸೈಟ್‌ಗೆ ಅದರದೇ ಮಿತಿಯಿತ್ತು- ತನ್ನ ಅಂಗಡಿಯಲ್ಲಿ ಸಿಗುವ ಸಾಮಾನುಗಳನ್ನಷ್ಟೇ ಅವು ಮಾರುತ್ತಿದ್ದವು. ಒಂದೊಂದು ರೀತಿಯ ಸಾಮಾನನ್ನು ಖರೀದಿಸಿಲು ಗ್ರಾಹಕ ಒಂದೊಂದು ತಾಣದ ಕಡೆಗೆ ಹೋಗಬೇಕಿತ್ತು. ಆದರೆ ಅಮೆಜಾನ್ ಒಂದರಲ್ಲೇ ಅದೆಲ್ಲ ಸಾಮಾನುಗಳು ಸಿಗುತ್ತಿದ್ದುದರಿಂದ ಜನರೆಲ್ಲಾ ಅಮೆಜಾನ್ ಅನ್ನು ನೆಚ್ಚಿಕೊಂಡರು. ಹಾಗಾಗಿ ಮತ್ತು ಅಮೆಜಾನ್ ನ ಗ್ರಾಹಕ ಕೇಂದ್ರಿತ ವ್ಯವಸ್ಥೆಯಿಂದಾಗಿ ಹೆಚ್ಚೆಚ್ಚು ಅದಕ್ಕೆ ಪ್ರಥಮ ಆದ್ಯತೆ ನೀಡಿದರು. ಇದಕ್ಕೆ ಪುಟವಿಡುವಂತೆ ಜೆಫ್, ಸದಾ ತನ್ನ ಕಂಪನಿಯಲ್ಲಿ ಹೊಸತನ್ನು ತರುತ್ತ ಹೋದ- ಕಂಪನಿ ಬೆಳೆಯುತ್ತ ಹೋಯಿತು. ಕಂಪನಿ ಶುರುವಾದ ಕೇವಲ 3 ವರ್ಷದಲ್ಲಿ ಬಹಳಷ್ಟು ಬಿಲಿಯನೇರ್‌ಗಳು, ದೊಡ್ಡ ದೊಡ್ಡ ಕಂಪನಿಗಳು ಕೊಟ್ಟು ಕಂಪನಿಯನ್ನು ಖರೀದಿಸಲು ಮುಂದೆ ಬಂದರು. ಜೆಫ್ ಸುಮ್ಮನೆ ಮಾರಾಟ ಮಾಡಿ ಬಂದ ಹಣದಿಂದ ಅತ್ಯುತ್ತಮ ಐಷಾರಾಮೀ ನಿವೃತ್ತ ಜೀವನವನ್ನು ಸಾಗಿಸಬಹುದಿತ್ತು, ಆದರೆ ಅದು ಆತನ ಜಾಯಮಾನವಾಗಿರಲಿಲ್ಲ.

ಅಂದಿಗೂ, ಇಂದಿಗೂ ಅಮೆಜಾನ್ ಮುಖ್ಯ ಮಂತ್ರ ಮತ್ತು ಸರ್ವಸ್ವ ಅದರ ಗ್ರಾಹಕ. ಈ ಗ್ರಾಹಕ ಕೇಂದ್ರಿತ ಮನೋಭಾವ ಇಂದು ಅಮೆಜಾನ್ ಅನ್ನು ಈ ಹಂತಕ್ಕೆ ತಂದು ನಿಲ್ಲಿಸಿದೆ. ಗ್ರಾಹಕರನ್ನು ಖುಷಿಯಾಗಿಡಲು ಜೆಫ್ ಯಾವ ಹಂತಕ್ಕೂ ಹೋದದ್ದಿದೆ. ತಾನೇ ಸಾಮಾನನ್ನು ಹೋಗಿ ಕೈಯಾರೆ ಕೊಟ್ಟು ಬಂದದ್ದಿದೆ. ಹೆಚ್ಚಿಗೆ ದರದಲ್ಲಿ ಖರೀದಿಸಿದ್ದನ್ನು ಕಮ್ಮಿ ದರಕ್ಕೆ ಮಾರಿದ್ದಿದೆ. ಮೊದಲ ದಿನಗಳಲ್ಲಿ ಕೆಲವರು ಅಮೆಜಾನ್ ಕಳಿಸಿದ ಸಾಮಾನು ನಮಗೆ ತಲುಪಿಲ್ಲ ಎಂದು ಯಾಮಾರಿಸಲು ಫೋನ್ ಮಾಡುತ್ತಿದ್ದರಂತೆ. ಅದು ತಿಳಿದಿದ್ದರೂ ಸಾಮಾನನ್ನು ಇನ್ನೊಮ್ಮೆ ಪುಕ್ಕಟೆ ಕಳುಹಿಸಿ ಕೊಡುತ್ತಿದ್ದನಂತೆ. ಇಂದಿಗೂ ಗ್ರಾಹಕ ಕೇಂದ್ರಿತ ಮನೋಭಾವವಿಲ್ಲದವರಿಗೆ ಅಮೆಜಾನ್ ನಲ್ಲಿ ಕೆಲಸವಿಲ್ಲ, ಜಾಗವಿಲ್ಲ. ಇದೇ ಕಾರಣಕ್ಕೆ ಜಗತ್ತಿನಾದ್ಯಂತ ಏನಾದರೂ ಖರೀದಿಸಬೇಕೆಂದರೆ ಹೆಚ್ಚಿನವರಿಗೆ ಮೊದಲು ನೆನಪು ಬರುವುದು ಅಮೆಜಾನ್. ಅದು ಅಮೆಜಾನ್ ನ ಬ್ರಾಂಡ್ ಮೌಲ್ಯ.

ಹೊಸ ಹೊಸ ವಿಚಾರಗಳನ್ನು ಮತ್ತು ಟೆಕ್ನಾಲಜಿಯನ್ನು ಅಳವಡಿಸಿಕೊಳ್ಳುವ ಮತ್ತು ಅದನ್ನು ಕಾರ್ಯಗತಗೊಳಿಸುವ ಮನೋವೃತ್ತಿಯಿಂದ ಜೆಫ್ ಜಗತ್ತಿನ ಹೆಚ್ಚಿನ ವ್ಯಾಪಾರಿಗಳಿಗೆ ಹೊರತಾಗಿ ನಿಲ್ಲುತ್ತಾನೆ. ಇದೇ ಕಾರಣಕ್ಕೆ ಅಮೆರಿಕದಲ್ಲಿ ಕೂತು ಸಾವಿರಾರು ದೂರದಲ್ಲಿ ಅಜ್ಞಾತ ಸ್ಥಳದಲ್ಲಿರುವ ಚಿಕ್ಕ ಕಿರಾಣಿ ಅಂಗಡಿಗೆ ಪೈಪೋಟಿ ಕೊಡುತ್ತಾನೆ. ಇಂದು ಅಮೆಜಾನ್ ಕಂಪನಿ ಕೈ ಹಾಕದ ವ್ಯಾಪಾರ ವ್ಯವಹಾರವಿಲ್ಲ. ಅಮೆಜಾನ್ ನಲ್ಲಿ ಸಂಗೀತ, ವಿಡಿಯೋ, ಚಲನ ಚಿತ್ರ ಎಲ್ಲವೂ ಲಭ್ಯ. ಅಲ್ಲಿ ಪುಸ್ತಕದ ಧ್ವನಿಸುರಳಿಗಳು ಮಾರಾಟಕ್ಕಿವೆ, ಕಿಂಡಲ್ ನಲ್ಲಿ ಪುಸ್ತಕಗಳನ್ನು ಖರೀದಿಸಬಹುದು ಅಥವಾ ಎರವಲು ಪಡೆಯಬಹುದು.

ಸಾಮಾನ್ಯ ಜನರಷ್ಟೇ ಅಲ್ಲ, ದೊಡ್ಡ ದೊಡ್ಡ ಕಂಪನಿಗಳು ಕೂಡ ಅಮೆಜಾನ್‌ನ ಗ್ರಾಹಕರೇ. ಅದರ ನೆರವು ಪಡೆದು ನಿಮ್ಮದೇ ವೆಬ್ಸೈಟ್ ಸಿದ್ಧಮಾಡಬಹುದು. ಕಂಪನಿಯ ಕಡತಗಳನ್ನು ಭದ್ರವಾಗಿಡಬಹುದು. ನಿಮ್ಮ ಫೋಟೋಗಳನ್ನೂ ಅಮೆಜಾನ್‌ನ ಸರ್ವರ್‌ಗಳಲ್ಲಿ ಶೇಖರಿಸಿಡಬಹುದು ಮತ್ತು ಎಲ್ಲೆಂದರಲ್ಲಿ ಬೇಕಾದಾಗ ಪಡೆಯಬಹುದು. ಹೀಗೆ ಶೇಖರಿಸಿಟ್ಟ ಫೋಟೋಗಳನ್ನು ಒಂದು ಗುಂಡಿ ಒತ್ತುವುದರ ಮೂಲಕ ಫೋಟೋ ಆಲ್ಬಮ್ ಆರ್ಡರ್ ಮಾಡಿ ಮನೆಯಲ್ಲಿ ಕೂತೇ ಪಡೆಯಬಹುದು.

ಅಮೆಜಾನ್ ಇಂದು ಒಂದು ಜಾಗತಿಕ ಅಂಗಡಿ. ಟಾಂಜೇನಿಯಾದಲ್ಲೊ ಅಥವಾ ದಕ್ಷಿಣ ಭಾರತದ ಮೂಲೆಯಲ್ಲಿ ಸಿದ್ಧವಾದ ಒಂದು ವಸ್ತುವನ್ನು ಅಮೆಜಾನ್ ನ ಮೂಲಕ ಇಂಗ್ಲೆಂಡ್ ಅಥವಾ ಅಮೆರಿಕದ ಗ್ರಾಹಕರಿಗೆ ಮಾರಾಟ ಮಾಡಬಹುದು. ಬಳಸಿದ ಹ್ಯಾಂಡ್ ವಸ್ತುಗಳನ್ನು ಮಾರಾಟ ಮಾಡಲೂ ಇಲ್ಲಿ ಅವಕಾಶವಿದೆ. ಯಾವುದೇ ಒಬ್ಬ ವ್ಯಕ್ತಿಗೆ ತನ್ನ ಜೀವನಕ್ಕೆ ಮತ್ತು ವ್ಯವಹಾರಕ್ಕೆ ಬೇಕಾಗುವ ಎಲ್ಲ ಸಾಮಾನುಗಳು ಇಲ್ಲಿ ಲಭ್ಯ; ಬೇಬಿ ಪೌಡರ್‌ನಿಂದ ಹಿಡಿದು ಅಪರ ಕಾರ್ಯಕ್ಕೆ ಬೇಕಾಗುವ ವಸ್ತುಗಳ ತನಕ ಎಲ್ಲವೂ ಬೆರಳಂಚಿನಲ್ಲಿ. ಇಂದು ಜಗತ್ತಿನ ಶೇ. 64ರಷ್ಟು ಜನ ಅಮೆಜಾನ್ ನ ಒಂದಿಲ್ಲೊಂದು ಸೇವೆ ಪಡೆದುಕೊಂಡಿದ್ದಾರೆ ಎನ್ನುವುದು ಒಂದು ಗಣನೆ.

ಇನ್ನು ಅಮೆಜಾನ್ ಒಂದು ವಸ್ತುವನ್ನು ಹೇಗೆ ಉತ್ಪಾದಕರಿಂದ, ಗ್ರಾಹಕರವರೆಗೆ ತಲುಪಿಸುತ್ತದೆ ಒಂದು ರೋಮಾಂಚಕಥೆ. ಅದನ್ನು ವಿವರಿಸಲು ಹೊರಟರೆ ಒಂದು ಪುಸ್ತಕವನ್ನೇ ಬರೆಯಬೇಕಾಗಬಹುದು. ಪ್ರತಿ ದಿನ ಕೋಟಿಗಟ್ಟಲೆ ವಸ್ತುಗಳನ್ನು 50ಕ್ಕೂ ಹೆಚ್ಚು ದೇಶಗಳಿಗೆ ಒಂದಿನಿತೂ ಆಚೀಚೆಯಾಗದೇ ಸಾಗಿಸುವ ಬೃಹತ್ ವ್ಯವಸ್ಥೆ ನಿಜ ಅರ್ಥದಲ್ಲಿ ‘ಅದ್ಭುತ’ವೇ ಸರಿ. ಅದರ ಮೂಲ ವಿನ್ಯಾಸ ಸ್ವತಃ ಜೆಫ್‌ನದೇ. ಇಂದು ಅಮೆರಿಕವೊಂದರಲ್ಲೇ ಹತ್ತಾರು ‘ಡಾರ್ಕ್ ವೇರ್‌ಹೌಸ್’ಗಳಿವೆ. ಈ ಗೋದಾಮುಗಳಿಗೆ ಕಿಟಕಿಗಳಿಲ್ಲ- ಬೆಳಕು ಬೇಕಾಗಿಲ್ಲ. ಇಲ್ಲಿ ಆರ್ಡರ್ ಬಂದಾಗ ರೋಬೋಟ್ ಗಳು ಆ ಸಾಮಾನುಗಳನ್ನು ಶೆಲ್ಫಿನಿಂದ ತಂದು, ಪ್ಯಾಕ್ ಅಡ್ರೆಸ್ ಹಚ್ಚಿ ಪೋಸ್‌ಟ್ ಗಾಡಿಯವರೆಗೆ ತಂದುಕೊಡುತ್ತವೆ. ಇವು ಮನುಷ್ಯರೇ ಇಲ್ಲದ ಗೋದಾಮು.

ಜೆಫ್ ತನ್ನ ಅಮೆಜಾನ್ ಕಂಪನಿಯನ್ನು ಕೇವಲ ಅಮೆಜಾನ್.ಕಾಮ್ ನಲ್ಲಿ ಸಾಮಾನು ಮಾರಾಟಕ್ಕಷ್ಟೇ ಸೀಮಿತಗೊಳಿಸಲಿಲ್ಲ. ಸುಮ್ಮನೆ ಒಂದು ಮಾಡಿ ಕೂರುವ ಮನಸ್ಥಿತಿಯೇ ಅವನದು? ಆತ ಇದರೊಂದಿಗೆ ಸುಮಾರು ನಲ್ವತ್ತಕ್ಕೂ ಹೆಚ್ಚು ಕಂಪನಿಯನ್ನು ಖರೀದಿಸಿದ್ದಾನೆ. ಹೊಸ ಹೊಸ ಹಲವು ಕಂಪನಿಗಳನ್ನು ಹುಟ್ಟು ಹಾಕಿದ್ದಾನೆ. ಉದಾಹರಣೆಗೆ, ಆತನ ‘ಬ್ಲೂ ಒರಿಜಿನ್’ ಎನ್ನುವ ಕಂಪನಿ ಪ್ರಯಾಣಿಕರನ್ನು ರಾಕೆಟ್‌ನಲ್ಲಿ ಅಂತರಿಕ್ಷಕ್ಕೆ ಪ್ರವಾಸಕ್ಕೆ ತೆಗೆದುಕೊಂಡು ಈಗ ಸಿದ್ಧತೆ ನಡೆಸುತ್ತಿದೆ. ಈಗಾಗಲೇ ಪರೀಕ್ಷಾರ್ಥ ಮಾನವ ರಹಿತ ರಾಕೆಟ್ ಅಂತರಿಕ್ಷಕ್ಕೆ ಹೋಗಿ ಮರಳಿದೆ. ಅಮೆರಿಕದ ಸರಕಾರದ ಅನುಮತಿ ಸಿಕ್ಕರೆ ಸದ್ಯದಲ್ಲೇ ಸಾಮಾನ್ಯ ಜನರೂ ಅಂತರಿಕ್ಷದಲ್ಲೊಂದು ರೌಂಡ್ ಹಾಕಿ ಬರಬಹುದು.

ಅಮೆಜಾನ್ ನಲ್ಲಿ ದಿನಸಿ ಸಾಮಾನನ್ನು ಆರ್ಡರ್ ಮಾಡಿದ ಕೆಲವು ನಿಮಿಷಗಳಲ್ಲಿ ಡ್ರೋನ್ ಮೂಲಕಗ್ರಾಹಕರ ಬಾಲ್ಕನಿಗೆ ತಲುಪಿಸಿವುದು ಜೆಫ್ ನ ಮುಂದಿನ ಯೋಚನೆ. ಅದಕ್ಕಾಗಿಯೇ ಅಮೆರಿಕದ ಪ್ರಮುಖ ಕಿರಾಣಿ ಅಂಗಡಿ ಸರಣಿಯಾದ ಹೋಲ್ ಫುಡ್ ಅನ್ನು ಖರೀದಿಸಿದ್ದಾಗಿದೆ. ಅಮೆರಿಕದಲ್ಲಿ ಕ್ಯಾಶಿಯರ್ ಇಲ್ಲದ ಹಲವು ಅಂಗಡಿಗಳನ್ನು ತೆರೆದಿದೆ. ನೀವು ಅಲ್ಲಿ ಅಮೆಜಾನ್ ಕಾರ್ಡ್ ಕಿಸೆಯಲ್ಲಿ ಇಟ್ಟುಕೊಂಡು ಹೋಗಿ ಸಾಮಾನು ಎತ್ತಿಕೊಂಡು ಬಂದರಾಯ್ತು. ನಿಮ್ಮ ಕಿಸೆಯಲ್ಲಿನ ಕಾರ್ಡ್ ನಿಂದ ಮತ್ತು ಆ ಸಾಮಾನಿಗೆ ಅಂಟಿಕೊಂಡ ಒಂದು ಚಿಕ್ಕ ‘ಚಿಪ್’ನಿಂದ ಏನು ತೆಗೆದುಕೊಂಡು ಬಂದಿದ್ದೀರೋ ಅದರ ಮೌಲ್ಯವನ್ನು ನಿಮ್ಮ ಕ್ರೆಡಿಟ್ ಕಾರ್ಡ್ ಗೆ ಶುಲ್ಕ ಹಾಕಲಾಗುತ್ತದೆ.

ಜೆಫ್ ನ ಈ ತೆರನಾದ ಆಕ್ರಮಣಕಾರೀ ಓಟದಲ್ಲಿ ಇಂದು ಹಲವು ಕಂಪನಿಗಳು ಪ್ರತಿ ಸ್ಪರ್ಧಿಸಲಾಗದೇ ಬಾಗಿಲು ನೂರಾರು ಕಂಪನಿಗಳು, ಚಿಕ್ಕ ಮತ್ತು ಮಧ್ಯಮ ವ್ಯಾಪಾರಿಗಳು ದಿವಾಳಿಯಾಗುವತ್ತ ಸಾಗುತ್ತಿದ್ದಾರೆ. ಇಂದು 50ಕ್ಕೂ ಹೆಚ್ಚಿನ ದೇಶಗಳಲ್ಲಿ ಆನ್‌ಲೈನ್ ವ್ಯಾಪಾರದಲ್ಲಿ ಅಮೆಜಾನ್‌ದೇ ಸಿಂಹ ಪಾಲು. ಅಮೆಜಾನ್ ಅದ್ಯಾವ ಪರಿಯ ಪೈಪೋಟಿ ನೀಡಬಲ್ಲದು ಎನ್ನುವುದಕ್ಕೆ ಭಾರತವೇ ಸಾಕ್ಷಿ. ಇಲ್ಲಿನ ಫ್ಲಿಪ್ ಕಾರ್ಟ್ ಮೊದಲಾದ ಹಲವು ಕಂಪನಿಗಳು ಅದಾಗಲೇ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಿ ಆದಮೇಲೆ ಅಮೆಜಾನ್ ಭಾರತಕ್ಕೆ ಬಂದರೂ ಈಗ ಅದಾಗಲೇ ಫ್ಲಿಪ್ ಕಾರ್ಟ್ ಗಿಂತ ಹೆಚ್ಚಿನ ಮೌಲ್ಯದ ಸಾಮಾನನ್ನು ಮಾರಾಟ ಮಾಡಿ ನಿರ್ಮಿಸಿದೆ. ಭಾರತದ ನಂಬರ್ ಒನ್ ಆನ್‌ಲೈನ್ ಅಂಗಡಿಯಾಗುವ ಸಮಯವೂ ದೂರವಿಲ್ಲ.

ಜೆಫ್ ಬಿಜೋಸ್ ಅಮೆರಿಕದ ಪ್ರಸಿದ್ಧ ಪತ್ರಿಕೆ ‘ವಾಷಿಂಗ್ಟನ್ ಪೋಸ್‌ಟ್’ ನ ಮಾಲೀಕ ಕೂಡ. ಈ ಪತ್ರಿಕೆ ಅದ್ಯಾರ ಹಂಗಿಗೂ ಬೀಳದೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನ ಹತ್ತು ಹಲವು ಯಡವಟ್ಟುಗಳನ್ನು ಪ್ರಕಟಿಸಿತು. ಇದರಿಂದ ಟ್ರಂಪ್ ನ ಕೆಂಗಣ್ಣಿಗೆ ಜೆಫ್ ಒಳಗಾಗಬೇಕಾಯಿತು. ಉಹ್ಞುಂ, ಅದ್ಯಾವುದಕ್ಕೂ ಜೆಫ್ ಬಗ್ಗಲಿಲ್ಲ. ಮೊನ್ನೆ ಜೆಫ್‌ನ ನಗ್ನ ಚಿತ್ರವೊಂದು ಒಂದು ಕಂಪನಿಯ ಬಳಿ ಇದೆ ಸುದ್ದಿ ಜೆಫ್ ಗೆ ಸಿಕ್ಕಿತು. ತನ್ನ ಪತ್ರಿಕೆಯ ತನಿಖಾ ತಂಡಕ್ಕೆ ಏನು ಮಾಡಬೇಕೆಂದು ಸೂಚಿಸಿದ. ತಕ್ಷಣ ಆ ಚಿತ್ರ ಇಟ್ಟುಕೊಂಡ ಕಂಪನಿ ಜೆಫ್‌ಗೆ ಒಂದು ಇಮೇಲ್ ಹಾಕಿತು. ನೀವು ಆ ತನಿಖೆಯನ್ನು ಕೂಡಲೇ ನಿಲ್ಲಿಸದಿದ್ದರೆ ನಿಮ್ಮ ನಗ್ನ ಚಿತ್ರವನ್ನು ಇಂಟರ್ನೆಟ್ ನಲ್ಲಿ ಹೊರಹಾಕಲಾಗುವುದು ಎಂದು. ಆದರೆ ಆ ಇಮೇಲ್ ಗೆ ಉತ್ತರವಾಗಿ ನನಗೆ ಈ ಇಮೇಲ್ ಸಿಕ್ಕಿದೆ, ಇಷ್ಟು ಸಾಕು. ಧನ್ಯವಾದ ಎಂದು ಆ ಪತ್ರವನ್ನೇ ತನ್ನ ಪತ್ರಿಕೆಯಲ್ಲಿ ಜೆಫ್! ಇಂತಹ ನೂರಾರು ಘಟನೆಗಳನ್ನು ತನ್ನ ವೃತ್ತಿ ಜೀವನದಲ್ಲಿ ದಿಟ್ಟತನದಲ್ಲೇ ಆತ ಎದುರಿಸಿದ್ದಾನೆ.

ಇಂದು ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಜೆಫ್, ಒಬ್ಬ ವ್ಯಕ್ತಿಯ ಪರಿಶ್ರಮ, ಪ್ರಾಮಾಣಿಕತೆ, ದಿಟ್ಟತನ ಮತ್ತು ಇತಿಹಾಸವೊಂದನ್ನು ನಿರ್ಮಾಣ ಮಾಡಬೇಕೆಂಬ ಛಲಕ್ಕೆ ಜೀವಂತ ನಿದರ್ಶನವಾಗಿ ಅಮೆಜಾನ್‌ನಂತಹ ಅಭೂತಪೂರ್ವ ಸಾಮ್ರಾಜ್ಯವನ್ನು ಕಟ್ಟಿ ತೋರಿಸಿದ್ದಾನೆ.

Tags

Related Articles

Leave a Reply

Your email address will not be published. Required fields are marked *

Language
Close