ವಿಶ್ವವಾಣಿ

ಜೆಟ್‌ ಏರ್‌ವೇಸ್‌ಗೆ ದೀವಾಳಿಯಾಗುವ ಭೀತಿ

ದೆಹಲಿ: ಆರ್ಥಿಕ ಮುಗ್ಗಟ್ಟಿನಲ್ಲಿರುವ ಕಾರಣ ತನ್ನ ಸೇವೆಯನ್ನು ಸ್ಥಗಿತಗೊಳಿಸಬೇಕಾಗಬಹುದು ಎಂದು ದೇಶದ ಅತಿ ದೊಡ್ಡ ವೈಮಾನಿಕ ಸೇವಾದಾರ ಜೆಟ್‌ ಏರ್‌ವೇಸ್‌ ತಿಳಿಸಿದೆ.

ಉದ್ಯೋಗಿಗಳ ವೇತನ ಕಡಿತ ಸೇರಿದಂತೆ ನಿರ್ವಹಣಾ ವೆಚ್ಚಗಳನ್ನು ತಗ್ಗಿಸದಿದ್ದಲ್ಲಿ, ಇನ್ನೆರಡು ತಿಂಗಳಲ್ಲಿ ತನ್ನ ವಿಮಾನಗಳು ಹಾರಾಟ ನಿಲ್ಲಿಸಬಹುದು ಎಂದು ಸಂಸ್ಥೆ ಹೇಳಿಕೊಂಡಿದೆ.

ಎರಡು ವರ್ಷಗಳ ಮಟ್ಟಿಗೆ ತಮ್ಮ ವೇತನಗಳಲ್ಲಿ ಶೇ 15ರಷ್ಟು ಕಡಿತಗೊಳಿಸಬೇಕಾಗುತ್ತದೆ ಎಂಬ ಸಂಸ್ಥೆಯ ಪ್ರಸ್ತಾವನೆಗೆ ತೀವ್ರ ವಿರೋಧ ವ್ಯಕ್ತವಾಗಿದೆ ಎಂದು ಜೆಟ್‌ ಏರ್‌ವೇಸ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಂಡವಾಳಕ್ಕಾಗಿ ಭಾರೀ ಪ್ರಮಾಣದಲ್ಲಿ ಸಾಲ ಕೇಳಲು ಜೆಟ್ ಏರ್‌ವೇಸ್ ಚಿಂತನೆ ನಡೆಸಿದೆ. ಆದರೆ ಬ್ಯಾಂಕುಗಳು ಈ ಬಾರಿ ಜಾಣನಡೆ ಅನುಸರಿಸಿದ್ದು, ಸೂಕ್ತ ಶ್ಯೂರಿಟಿಯಾಗಿ ಸಂಸ್ಥೆಯ ಆಯವ್ಯಯಗಳನ್ನು ಕೇಳಿದೆ.

ಇಂಧನ ಬೆಲೆ ಏರಿಕೆ ಹಾಗು ರುಪಾಯಿ ಕುಸಿತದ ಕಾರಣದ ಭಾರತೀಯ ವಿಮಾನಯಾನ ಸೇವಾದಾರ ಸಂಸ್ಥೆಗಳಿಗೆ  ಭಾರೀ ಪೆಟ್ಟು ಬೀಳುತ್ತಿದೆ. ಇಂಡಿಗೋ ಏರ್‌ವೇಸ್‌ ಕೂಡ ತನ್ನ ಆದಾಯದಲ್ಲಿ ಶೇ 97ರಷ್ಟು ಇಳಿಮುಖ ಕಂಡುಬಂದಿದೆ ಎಂದು ಹೇಳಿದೆ.

ಹೆಚ್ಚುತ್ತಿರುವ ಪ್ರಯಾಣಿಕ ದಟ್ಟಣೆ ಕಾರಣ ಬೋಯಿಂಗ್‌ನ 75 ದೊಡ್ಡ ವಿಮಾನಗಳನ್ನು ಖರೀದಿ ಮಾಡಲು ಜೆಟ್‌ ಏರ್‌ವೇಸ್‌ ಕಳೆದ ತಿಂಗಳು ನಿರ್ಧರಿಸಿತ್ತು.ಮಾರ್ಚ್ ಅಂತ್ಯಕ್ಕೆ ಸಂಸ್ಥೆಯು 8,150 ಕೋಟಿ ರುಗಳ ಸಾಲದ ಸುಳಿಯಲ್ಲಿ ಸಿಲುಕಿದೆ ಎಂದು ತಿಳಿದುಬಂದಿದೆ.