About Us Advertise with us Be a Reporter E-Paper

ವಿರಾಮ

ಜ್ಞಾನಭಾರತಿಯೊಳಗೊಂದು ಅನುಭಾವಿ ಮಂಟಪ

ಬಾಲಕೃಷ್ಣ. ಎನ್‌‌.

ಸಮಾಜದ ಏಳುಬೀಳುಗಳನ್ನ ಪ್ರಶ್ನಿಸಿ ಅದನ್ನ ಸುಭಿಕ್ಷವಾಗಿರಿಸಲು ಹಲವು ಸಮಾಜ ಸುಧಾರಕರು ಶ್ರಮಿಸಿದ್ದಾರೆ. ಅವರ ಚಿಂತನೆ ಬದುಕು, ಹೋರಾಟದ ಹಾದಿಯನ್ನ ಯುವಕರು ತಿಳಿಯಬೇಕಿದೆ. ಈ ನಿಟ್ಟಿನಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಶಿಲ್ಪವನ ತಲೆ ಎತ್ತಿದೆ. ಈ ಶಿಲ್ಪವನದ ಮಹನೀಯರನ್ನ ಕಣ್ತುಂಬಿಕೊಳ್ಳೋಣ..

ಸಾಮಾಜಿಕ ಸುಧಾರಣೆಗೆ ಕಾರಣರಾದ ತಮಿಳುನಾಡಿನ ಪೆರಿಯಾರ್, ಕೆಳವರ್ಗದವರಿಗೆ ದೇವಾಲಯ ನಿರ್ಮಿಸಿದ ಕೇರಳದ ನಾರಾಯಣಗುರು ಒಳಗೊಂಡಂತೆ ಹಲವು ಗಣ್ಯರ ಶಿಲ್ಪಗಳು ಬೆಂಗಳೂರು ವಿಶ್ವವಿದ್ಯಾಲಯದ ಸಂಶೋಧನಾ ಮತ್ತು ಅಧ್ಯಯನ ಕೇಂದ್ರದ ಆವರಣದಲ್ಲಿ ತಲೆ ಎತ್ತಿವೆ. ವಿದ್ಯಾರ್ಥಿಗಳ ಮನದಲ್ಲಿ ಸಾಮಾಜಿಕ ಪ್ರಜ್ಞೆ ಬಿತ್ತುವ ಹಾಗೂ ಬಡತನ, ಅಸಮಾನತೆ ಶೋಷಣೆ ಹೋರಾಡುವ ಸ್ಫೂರ್ತಿಯನ್ನು ಈ ಉದ್ಯಾನವನ ಬಿಂಬಿಸುತ್ತದೆ. ಸಮಾನತೆ ಪ್ರತಿಪಾದಿಸಿದ ಬುದ್ಧ, ಬಸವಣ್ಣ, ನಾಲ್ವಡಿ ಕೃಷ್ಣರಾಜ ಒಡೆಯರ್, ಕೊಲ್ಹಾಪುರದ ಛತ್ರಪತಿ ಶಾಹುಮಹಾರಾಜ್, ಡಾ.ಬಿ.ಆರ್. ಅಂಬೇಡ್ಕರ್, ಜ್ಯೋತಿ ಬಾಫುಲೆ, ಪ್ರೊ. ಬಿ. ಕೃಷ್ಣಪ್ಪ, ಬಿ. ಬಸವಲಿಂಗಪ್ಪ ಅವ್ರ ತತ್ವನಿಷ್ಠೆಗಳನ್ನ ಈ ಶಿಲ್ಪಗಳಲ್ಲಿ ಮೂಡಿಸಲಾಗಿದೆ. ಜತೆಗೆ ಅವರ ಜೀವನ ಸಾಧನೆಯ ಇಲ್ಲಿ ಬಿಂಬಿತವಾಗಿದೆ. ಐತಿಹಾಸಿಕ ಕೋರೆಗಾಂವ್ ವಿಜಯೋತ್ಸವ ಸ್ಮಾರಕ ಸ್ಥಂಭ, ದಲಿತರ ಬದುಕಿನ ಬಗ್ಗೆ, ಸಮಾನತೆ ಪ್ರತಿಪಾದಿಸಿದ ಚಳವಳಿಗಳತ್ತ ಬೆಳಕು ಚೆಲ್ಲುತ್ತವೆ.

ಬೆಂಗಳೂರು ವಿಶ್ವವಿದ್ಯಾಲಯ ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಈ ಉದ್ಯಾನ ನಿರ್ಮಿಸಿದೆ. ಈ 15 ಶಿಲ್ಪಗಳ ನಿರ್ಮಾಣಕ್ಕೆ 30 ಮಂದಿ ಕಲಾವಿದರು ಶ್ರಮಿಸಿದ್ದಾರೆ. ಸುಮಾರು ಐದು ಎಕರೆ ಪ್ರದೇಶದಲ್ಲಿ ಈ ಉದ್ಯಾನ ನಿರ್ಮಿಸಲಾಗಿದ್ದು, ಇಲ್ಲಿ ಸಿಸಿಟಿವಿ ಸಹ ಅಳವಡಿಸುವ ಚಿಂತನೆ ನಡೆದಿದೆ. ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ಹಾಗೂ ನವಿಲಿನ ಸಂಖ್ಯೆ ಹೆಚ್ಚಳವಾಗಿದೆ. ಇದು ಪಕ್ಷಿಪ್ರಿಯರಿಗೆ ಸಂತಸ ವಿಚಾರವಾದರೆ, ಪ್ರಕೃತಿ ಸಮತೋನ ಕಾಯ್ದುಕೊಳ್ಳುವ ವಿಚಾರದಲ್ಲೂ ಉತ್ತಮ ಬೆಳವಣಿಗೆ. ಚಳಿಗಾಲದಲ್ಲಿ ಪಕ್ಷಿಗಳ ವಲಸೆ ಆರಂಭಗೊಂಡಿರೋ ಈ ಹೊತ್ತಿನಲ್ಲಿ, ಬೆಂಗಳೂರು ವಿಶ್ವವಿದ್ಯಾಲಯದ ಬಯೋ ಪಾರ್ಕ್‌ನಲ್ಲಿ ಹಕ್ಕಿಗಳ ಕಲರವವೂ ಜೋರಾಗಿದೆ. ವಿವಿ 1100 ಎಕರೆ ಪ್ರದೇಶದ ವಿಶಾಲವಾದ ಕ್ಯಾಂಪಸ್ ಹೊಂದಿದೆ. ಅದರಲ್ಲಿ 840 ಎಕರೆ ಪ್ರದೇಶದಲ್ಲಿ ಜೀವ ವೈವಿಧ್ಯತೆಯ ಸಣ್ಣ ಕಾಡೊಂದು ತಲೆ ಎತ್ತಿರೋ ಕಾರಣ ಇದು ಹಕ್ಕಿಗಳ ಅವಾಸ ಸ್ಥಾನ ಜತೆಗೆ ನವಿಲುಗಳ ಸಂತಾನವೂ ಹೆಚ್ಚುತ್ತಿದೆ.

ಅಪಾಯದ ಅಂಚಿನಲ್ಲಿ ಪಕ್ಷಿವೈವಿಧ್ಯತೆ
ಜೀವವೈವಿಧ್ಯತೆಯ ಈ ಕಾಡಿನಲ್ಲಿ ನಿತ್ಯ ಹರಿದ್ವರ್ಣದ ಕಾಡಿನ ಮರಗಳಿವೆ. ಈ ಹಸಿರು ಬನದಲ್ಲಿ ಹಕ್ಕಿಗಳ ಕಲವರವ, ಚಿಟ್ಟೆಗಳ ಹಾರಾಟ ನೋಡೋದು ಕಣ್ಣಿಗೆ ಹಬ್ಬ. ಇವುಗಳಿಗೆ ಆಹಾರವನ್ನ ಒದಗಿಸಲು ಗಿಡಗಂಟೆಗಳ ನಡುವೆ ಕೀಟ ಪ್ರಪಂಚವಿದೆ. ಒಟ್ಟಾರೆ ಇಲ್ಲಿ 67 ಬಗೆಯ ಚಿಟ್ಟೆಗಳು, 74 ಬಗೆಯ ವಿಭಿನ್ನ ಪಕ್ಷಿ ಸಂಕುಲ, 4 ಲಕ್ಷಕ್ಕೂ ವೈವಿಧ್ಯಮಯ ಸಸ್ಯ ಸಂಕುಲ, ತೊರೆ ಇದೆ. ಈ ವಾತಾವರಣದಲ್ಲಿ ಕಳೆದ ಮೂರು ವರ್ಷದ ಹಿಂದೆ 3 ಇದ್ದ ನವಿಲು ತಮ್ಮ ಸಂಖ್ಯೆಯನ್ನು 200ಕ್ಕೆ ಹೆಚ್ಚಿಸಿಕೊಂಡಿವೆ.

ಇಲ್ಲಿನ ಹಕ್ಕಿಗಳಿಗೆ ಹಣ್ಣನ್ನ ಒದಗಿಸಲು ಹಲವು ಕಾಡು ಮರಗಳಿವೆ. ಜೊತೆಗೆ ವಾಸಿಸಲು ಯೋಗ್ಯವಾದ ಸ್ಥಳವಿದು. ಇಲ್ಲಿ ನಗರ ಪ್ರದೇಶದ ಗಲಾಟೆಯಿಲ್ಲ. ವಿಕಿರಣ ಸೂಸುವ ಮೊಬೈಲ್ ಟವರ್‌ಗಳಿಲ್ಲ. ಹಕ್ಕಿಗಳಿಗೆ ಸಿಗುವ ಹಣ್ಣು ಅಥವಾ ಬೀಜಗಳಿಗೆ ಯಾವುದೇ ರಾಸಾಯನಿಕದ ಸಿಂಪಡಣೆಯಿಲ್ಲದೆ. ಹಾಗಾಗಿ ಪಕ್ಷಿ ಸಂಕುಲ ಸುರಕ್ಷಿತ ಪ್ರದೇಶ ಅಂತ ಭಾವಿಸಿವೆ. ಈ ಕಾಡಿನಲ್ಲಿ ನಗರ ಶೇಕಡಾ 2 ಡಿಗ್ರಿಯಷ್ಟು ತಾಪಮಾನ ಕಡಿಮೆಯಿರುತ್ತದೆ. ಆದ್ರೆ, ಒಂದು ಕೊಳದಲ್ಲಿ ವಿವಿಯ ಕೊಳಚೆ ನೀರು ಸೇರುತ್ತಿದೆ. ಹಾಗಾಗಿ ಅಲ್ಲಿ ಪಕ್ಷಿಗಳು ಅಪಾಯದ ಸ್ಥಿತಿಯಲ್ಲಿವೆ.

ಇತಿಹಾಸ ಸೃಷ್ಟಿಸಿದೆ ಕೋರೆಗಾಂವ್ ವಿಜಯ ಸ್ಥಂಭ
ಅಂಬೇಡ್ಕರ್ ಅಧ್ಯಯನ ಕೇಂದ್ರದಲ್ಲಿರುವ ಕೋರೆಗಾಂವ್ ವಿಜಯೋತ್ಸವ ಸ್ಥಂಭ ಉದ್ಯಾನದ ಪ್ರಮುಖ ಆಕರ್ಷಣೆ. ಇದು ದಕ್ಷಿಣ ಭಾರತದಲ್ಲಿನ ಎರಡನೇ ವಿಜಯ ಸ್ಥಂಭ. 1818ರಲ್ಲಿ ಪೇಶ್ವೆಗಳು ಹಾಗೂ ಮಹಾರ್ ಸಮುದಾಯದ ನಡುವೆ ಜಾತೀಯತೆ ವಿರುದ್ಧ ನಡೆದ ಯುದ್ಧದ ಇದು ಹೇಳುತ್ತದೆ. ಕೋರೆಗಾಂವ್‌ನಲ್ಲಿರುವ ಮಾದರಿಯ ಸ್ಥಂಭವನ್ನು ಇಲ್ಲೂ ಸ್ಥಾಪಿಸಲಾಗಿದೆ. ದೇವನಾಂಪ್ರಿಯ ಸಾಮ್ರಾಟ್ ಅಶೋಕ ಚಕ್ರವರ್ತಿ ಬಯಲು ರಂಗ ಮಂದಿರ ಈ ಎಲ್ಲ ಶಿಲ್ಪಗಳು ಇಲ್ಲಿನ ಉದ್ಯಾನದಲ್ಲಿವೆ. ಹೊಸ ಇತಿಹಾಸ ಸೃಷ್ಟಿ ಮಾಡಲು ಈ ಕೇಂದ್ರ ಹೊರಟಿದೆ.

ಕೋರೆಗಾಂವ್ ವಿಜಯಸ್ಥಂಭದ ಇತಿಹಾಸದ ಹೆಜ್ಜೆ
ಭೀಮಾ ತೀರದಲ್ಲಿ ಹಸಿದ ಹೊಟ್ಟೆಗಳ ಆತ್ಮಾಭಿಮಾನದ ವಿಜಯ ಪತಾಕೆಅಂತಿಮವಾಗಿ ಯುದ್ಧ ಅನಿವಾರ್ಯವಾಯಿತು. ಕೇವಲ 500 ಸೈನಿಕರಿದ್ದ, ಸೈನ್ಯ ಸತತ 27 ಗಂಟೆಗಳ ಕಾಲ್ನಡಿಗೆಯಲ್ಲಿ ನದಿ ತೀರದಲ್ಲಿರುವ ಕೋರೆಗಾವಗೆ ಬಂದು ತಲುಪಿತು. ಈ 27ಗಂಟೆಯ ಅವಧಿಯಲ್ಲಿ ತಿನ್ನಲು ಸರಿಯಾದ ಅಹಾರ, ಕುಡಿಯಲು ಸಮರ್ಪಕ ನೀರಿಲ್ಲದೇ ಮಹಾರ ಸೈನ್ಯ ಬಸವಳಿದಿತ್ತು. ಆದರೂ, ಜಾತಿ ಹೆಸರಿನಲ್ಲಿ ನಡೆಯುತ್ತಿದ್ದ ತಾರತಮ್ಯ, ಶೋಷಣೆ, ಅಪಮಾನದ ಬೇಗುದಿ ಆ ಪುಟ್ಟ ಸೈನ್ಯದ ಸೈನಿಕರಲ್ಲಿ ಹಸಿವು, ನೀರಡಿಕೆಗಳನ್ನು ದೂರ ತಳ್ಳಿ ಸ್ವಾಭಿಮಾನದ ಕದನಕ್ಕೆ ಅವರನ್ನೆಲ್ಲ ಅಣಿಗೊಳಿಸಿತ್ತು. ಪರಿಣಾಮ ಯುದ್ಧ ಆರಂಭವಾದ 12 ಗಂಟೆಗಳಲ್ಲಿ ಚಿತ್ಪವನ ಬ್ರಾಹ್ಮಣರಾದ ಮರಾಠಾ ಪೇಶ್ವೆಗಳ 20,000 ಸಾವಿರ ಕುದುರೆ 8000 ಸೈನಿಕರ ದೊಡ್ಡ ಸೈನ್ಯವನ್ನು ಮರಾಠರ ಪುಟ್ಟ ಸೈನ್ಯ ಬಗ್ಗು ಬಡೆಯುವಲ್ಲಿ ಯಶಸ್ವಿಯಾಯಿತು. ಯುದ್ಧದಲ್ಲಿ ನೋಡನೋಡುತ್ತಿದ್ದಂತೆ 6000 ಪೇಶ್ವೆ ಸೈನಿಕರ ತಲೆಗಳು ನೆಲಕ್ಕುರುಳಿದವು. ಉಳಿದ ಸೈನಿಕರು ಮಹಾರರ ಹೊಡೆತಕ್ಕೆ ಹೆದರಿ ಜೀವ ಭಯದಿಂದ ಓಡಿ ಹೋದರು. ಈ ಧಿರೋದ್ಧಾತ ಹೋರಾಟದಲ್ಲಿ 22ಜನ ಮಹಾರರು, 16 ಜನ ಮರಾಠರು, ಎಂಟು ರಜಪೂತರು, ಮುಸ್ಲಿಂ, ಕ್ರೈಸ್ತರು ಹುತಾತ್ಮರಾದರು. ಪ್ರತಿವರ್ಷ ಜನವರಿ ಒಂದರಂದು ಕೊರೆಗಾಂವ ಹುತಾತ್ಮ ಸ್ಮಾರಕಕ್ಕೆ ಸಾವಿರಾರು ಜನ ಸಾಮಾಜಿಕ ಹೋರಾಟಗಾರರು ನೀಡುತ್ತಾರೆ. ಹೊಸ ಉತ್ಸಾಹ, ಸ್ಪೂರ್ತಿಯೊಂದಿಗೆ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ತೊಡಗುತ್ತಾರೆ.

ಅಧ್ಯಯನ ಕೇಂದ್ರದ ಹೊಸ ರುವಾರಿ ಸಂಜೀವ್‌ರಾಜ್
ಬೆಂಗಳೂರು ವಿಶ್ವವಿದ್ಯಾಲಯದ ಅಂಬೇಡ್ಕರ್ ಅಧ್ಯಯನ ಕೇಂದ್ರದ ನೂತನ ನಿರ್ದೇಶಕರಾಗಿ ಡಾ.ಸಂಜೀವ್ ರಾಜ್ ಅವರು ನೇಮಕಗೊಂಡಿದ್ದು, ವಿನೂತನ ಯೋಜನೆಗಳ ಮೂಲಕ ಕೇಂದ್ರವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಕನಸನ್ನು ಹೊತ್ತಿದ್ದಾರೆ. ಈ ಹಿಂದೆ ಇವರು ಇದೇ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದು, ಇದೀಗ ಮುಖ್ಯಸ್ಥರಾಗಿದ್ದಾರೆ. ಇತರೆ ಮಾದರಿಯಾಗುವಂತೆ ಈ ಕೇಂದ್ರವನ್ನು ಅಭಿವೃದ್ಧಿಪಡಿಸಲು ಮುಂದಾಗಿದ್ದಾರೆ. ಅಂಬೇಡ್ಕರ್ ಅವರ ಆಶಯಗಳನ್ನು ಮನದಲ್ಲಿರಿಸಿಕೊಂಡು ನೊಂದ ಜನರಿಗೆ ಸಹಾಯಹಸ್ತ ಚಾಚುತ್ತೇನೆ ಎಂದು ಅವರು ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close