ಪತ್ರಕರ್ತ ಪ್ರಭುವಲ್ಲ ; ಪರಮ ಸೇವಕ!

Posted In : ಸಂಗಮ, ಸಂಪುಟ

-ಟಿ.ಗುರುರಾಜ್

ಒಮ್ಮೆ ಹೀಗಾಯ್ತು,  ಕೈಲಾಸದ ತನ್ನ ಮನೆಯಿಂದ ಬೆಳಿಗ್ಗೆಯೇ ಹೊರ ಬಂದ ಗಣಪತಿ, ಅಪರೂಪಕ್ಕೆ ವಾಕಿಂಗ್ ಹೊರಟ. ಸ್ವಲ್ಪ ದೂರ ನಡೆಯುವಷ್ಟರಲ್ಲಿ ಸರಸ್ವತಿ ಆಂಟಿ ರಂಗೋಲಿ ಹಾಕುತ್ತಿದ್ದುದನ್ನು ಕಂಡು ಅಲ್ಲಿಯೇ ನಿಂತು, ಗುಡ್ ಮಾರ್ನಿಂಗ್ ಎಂದ. ಅಷ್ಟು ಬೆಳಿಗ್ಗೆ ಗಣಪತಿಯನ್ನು ಕಂಡು ಅಚ್ಚರಿಗೊಂಡ ಸರಸ್ವತಿ, ಒಳಗೆ ಬಾ, ಕಾಫಿ ಕುಡಿದು ಹೋಗ್ತೀಯಂತೆ ಅಂತಾ ಬಲವಂತ ಮಾಡಿ ಒಳಗೆ ಕರೆದು ಕುಳ್ಳಿರಿಸಿದರು.

ತಲೆ ಬಾಗಿಲು ದಾಟಿ ವರಾಂಡಕ್ಕೆ ಬಂದ ಗಣೇಶನಿಗೆ ಅಚ್ಚರಿ ಕಾದಿತ್ತು. ನೂರಾರು ಗೊಂಬೆಗಳು ಸಿದ್ದವಾಗಿ ನಿಂತಿದ್ದುದನ್ನು ಅವನಿಗೆ ಅರ್ಥವಾಗಿಹೋಯಿತು. ಹೋ, ಇವೆಲ್ಲವೂ ಜೀವ ತುಂಬಲಿಕ್ಕೆ ಸಿದ್ದಗೊಂಡಿರುವ ಬೊಂಬೆಗಳು! ಆತ ತಡ ಮಾಡಲಿಲ್ಲ. ಎಲ್ಲ ಗೊಂಬೆಗಳಿಗೂ ಜೀವ ತುಂಬಿ ಕಳುಹಿಸಿಯೇ ಬಿಟ್ಟ. ಒಂದಷ್ಟು ಸಮಯದ ನಂತರ ಹೊರಬಂದ ಬ್ರಹ್ಮ , ಗಣೇಶನ ಕಡೆ ನೋಡುತ್ತಾ ಬಾಯಿ ತೆಗೆಯಬೇಕೆಂಬಷ್ಟರಲ್ಲಿ ತಾನು ಜೋಡಿಸಿಟ್ಟಿದ್ದ ಗೊಂಬೆಗಳು ಕಾಣೆಯಾಗಿರುವುದನ್ನು ಕಂಡು ಆತಂಕಗೊಂಡ.

ಬ್ರಹ್ಮನ ತಳಮಳವನ್ನು ಕಂಡ ಗಣಪತಿಯೇ ಉತ್ತರಿಸಿದ. ಬ್ರಹ್ಮ ಅಂಕಲ್, ಇಲ್ಲಿದ್ದ ಎಲ್ಲ ಗೊಂಬೆಗಳಿಗೂ ನಾನೇ ಜೀವ ತುಂಬಿ ಭೂಲೋಕಕ್ಕೆ ಕಳುಹಿಸಿಬಿಟ್ಟೆ. ನಖ-ಶಿಖಾಂತ ಕೋಪ ಬಂತು. ಆದರೂ ನಿಗ್ರಹಿಸಿಕೊಂಡು ಹೇಳಿದ- ಅಲ್ಲಯ್ಯಾ , ಆ ಗೊಂಬೆಗಳಿಗೆ ನಾನು ಮಿದುಳನ್ನೇ ಅಳವಡಿಸಿರಲಿಲ್ಲ. ಆಗಲೇ ಅವುಗಳಿಗೆ ಜೀವ ಕೊಟ್ಟು ಕಳುಹಿಸಿದ್ದೀಯಲ್ಲ , ಇದು ಸರಿಯೇ ಎಂದು ಬೇಸರದಿಂದಲೇ ಪ್ರಶ್ನಿಸಿದ. ಗಣೇಶನಿಗೂ ಸಹ ನಡೆದಿರುವ ಪ್ರಮಾದದ ಅರಿವಾಯಿತು. ತಲೆ ತಗ್ಗಿಸಿಕೊಂಡು ನಿಂತುಬಿಟ್ಟ. ತಕ್ಷಣವೇ ಸಾವರಿಸಿಕೊಂಡ ಬ್ರಹ್ಮ ಆದದ್ದು ಆಗಿಹೋಯಿತು, ಈ ಮಿದುಳಿಲ್ಲದವರೆಲ್ಲ ಭೂಲೋಕದಲ್ಲಿ ಏನು ಮಾಡುತ್ತಿದ್ದಾರೆಂದು ನೋಡೋಣ ಬಾ ಎಂದು ಬಗ್ಗಿ ನೋಡಿದ.

ಏನಾಶ್ಚರ್ಯ..! ಅವರೆಲ್ಲರೂ ಮಂತ್ರಿ-ಮಹೋದಯರಾಗಿ , ದೊಡ್ಡ-ದೊಡ್ಡ ರಾಜಕಾರಣಿಗಳಾಗಿ ಆಡಳಿತ ನಡೆಸುತ್ತಿದ್ದಾರೆ. ಬ್ರಹ್ಮ ತಲೆ ಮೇಲೆ ಕೈ ಹೊತ್ತು ಕುಳಿತುಕೊಂಡ. ಗಣೇಶನೂ ಸಹ ಪೆಚ್ಚು ಮೋರೆ ಹಾಕಿಕೊಂಡು ಸ್ವಲ್ಪ ಹೊತ್ತು ಅಲ್ಲಿಯೇ ಇದ್ದು, ಮೆಲ್ಲಗೆ ಕಾಲ್ತೆಗೆದ. ಈ ಘಟನೆ ನಡೆದು ಕೆಲವು ತಿಂಗಳುಗಳೇ ಕಳೆದುಹೋಗಿದ್ದವು. ಮತ್ತೊಮ್ಮೆ ಗಣೇಶ, ಬ್ರಹ್ಮ ಅಂಕಲ್ ಮನೆ ಕಡೆಗೆ ದೌಡಾಯಿಸಿದ. ಯಥಾ ಪ್ರಕಾರ ಮನೆಯಲ್ಲಿ ಬ್ರಹ್ಮ ಇರಲಿಲ್ಲ. ಸರಸ್ವತಿ ಆಂಟಿ ಅಡುಗೆ ಕೆಲಸದಲ್ಲಿ ಬ್ಯುಸಿಯಾಗಿದ್ದರು. ಗಣೇಶ ಬಂದುದನ್ನು ಕಂಡು, ದನಿಯಲ್ಲಿಯೇ ಹೇಳಿದಳು.

ನೋಡು, ಸುಮ್ಮನೆ ಕುಳಿತುಕೋ, ಅಲ್ಲಿ ಏನನ್ನೂ ಮುಟ್ಟಬೇಡ, ಯಾವುದೇ ಕಿತಾಪತಿ ಮಾಡಬೇಡ. ಅಂಕಲ್ ಬಂದರೆ ನನಗೆ ಬೈಯ್ಯುತ್ತಾರೆ .ಹೂಂ ಎಂದ ಗಣೇಶ ಒಂದಷ್ಟು ಹೊತ್ತು ಕುಳಿತುಕೊಂಡ. ಮೊದಲೇ ಚೇಷ್ಟೆ ಹುಡುಗ. ಮೆಲ್ಲಗೆ ಮೇಲೆದ್ದ, ಬ್ರಹ್ಮ ಅಂಕಲ್ ರೂಮಿನೆಡೆಗೆ ಹೆಜ್ಜೆ ಹಾಕಿದ. ಓಹೋ..ಅಲ್ಲಿ ನೂರಾರು ಗೊಂಬೆಗಳು ಜೀವಕ್ಕಾಗಿ ಕಾದು ನಿಂತಿದ್ದವು. ಇವ ಕೊಂಚವೂ ತಡ ಮಾಡಲೇ ಇಲ್ಲ. ಎಲ್ಲಕ್ಕೂ ಜೀವ ತುಂಬಿ , ಓಡಿ ಎಂದು ಕಳುಹಿಸಿಯೇಬಿಟ್ಟ.

ಮನೆಗೆ ಬಂದೊಡನೆ ಗಣೇಶನನ್ನು ಕಂಡು ಗಾಬರಿಗೊಂಡು , ಏನೊಂದೂ ಮಾತನ್ನಾಡದೆ ತನ್ನ ರೂಮಿನ ಕಡೆಗೆ ದೌಡಾಯಿಸಿದ. ಆತ ಅಂದುಕೊಂಡಿದ್ದೇ ನಿಜವಾಗಿತ್ತು. ಗಣೇಶ ಮತ್ತೆ ಅದೇ ಕಿತಾಪತಿ ಮಾಡಿ ಮುಗಿಸಿದ್ದ. ಕೋಪದಿಂದ ತಿರುಗಿದ ಬ್ರಹ್ಮನನ್ನು ಕಂಡ ಗಣೇಶ, ನಗುಮುಖದಿಂದಲೇ ಉತ್ತರಿಸಿದ, ಅಂಕಲ್ , ಗಾಬರಿಯಾಗಬೇಡಿ. ಕಳೆದ ಬಾರಿ ಮಾಡಿದ ತಪ್ಪನ್ನು ಈಗ ಮಾಡಿಲ್ಲ. ಅಲ್ಲಿದ್ದ ಎಲ್ಲ ಬೊಂಬೆಗಳಿಗೂ ಬ್ರೆûನ್ ಅಳವಡಿಸಿಯೇ ಕಳುಹಿಸಿದ್ದೇನೆ. ಹೀಗಾಗಿ ನೀವು ನನ್ನನ್ನು ಈ ಬಾರಿ ದೂಷಿಸುವಂತಿಲ್ಲ  ಬ್ರಹ್ಮನಿಗೆ ಕೋಪದಿಂದ ಮೈ-ಕೈ ಎಲ್ಲವೂ ಅದುರುತ್ತಿತ್ತು.

ಸರಸ್ವತಿಯನ್ನು ಕರೆದು ಕೂಗಾಡಿದ. ಈ ಎಲ್ಲ ಗೊಂಬೆಗಳಿಗೂ ನಾನು ಈಗಾಗಲೇ ಮಿದುಳು ಹಾಕಿದ್ದೆ. ಈ ಅವಿವೇಕಿ ಮತ್ತೆ ಮಿದುಳು ಹಾಕಿದ್ದಾನೆ. ಅವೆಲ್ಲವೂ ಈಗ ಡಬಲ್ ಬ್ರೈನ್ ಬೊಂಬೆಗಳಾಗಿವೆ. ಈ ಹುಡುಗನನ್ನು ಏಕೆ ಮನೆಯೊಳಗೆ ಸೇರಿಸುತ್ತೀಯ ಎಂದು ಕಿರುಚಿದ. ಆದರೇನು, ಎಲ್ಲವೂ ಮುಗಿದುಹೋಗಿತ್ತು.  ಶಾಂತಗೊಂಡ ನಂತರ ಮೆಲ್ಲಗೆ ಬಗ್ಗಿ ನೋಡಿದ. ಹಿಂದೆ ಕಳ್ಳನಂತೆ ಗಣೇಶನೂ ನಿಂತಿದ್ದ . ಡಬಲ್ ಬ್ರೆûನ್ ಪಡೆದುಕೊಂಡು ಭೂಮಿಗೆ ಇಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದುದನ್ನು ಕಂಡು ಬ್ರಹ್ಮ – ಗಣೇಶರಿಬ್ಬರೂ ಅಚ್ಚರಿಗೊಂಡು ಗರ ಬಡಿದಂತೆ ನಿಂತುಬಿಟ್ಟರು.!

ಪತ್ರಕರ್ತರ ಬಗ್ಗೆ ಹುಟ್ಟಿಕೊಂಡ ಈ ಕಥೆಯನ್ನು ಜೋಕ್ ಎಂದು ಅಷ್ಟು ಸುಲಭಕ್ಕೆ ತೆಗೆದುಹಾಕಲಾಗುವುದಿಲ್ಲ. ನಮ್ಮ ಮಾಧ್ಯಮಗಳು ಸಾಗುತ್ತಿರುವ ಹಾದಿಯೆಡೆಗೆ ನೋಡಿದಾಗ, ಇವರೆಲ್ಲರಿಗೂ ಅತಿ ಬುದ್ಧಿ ಇರುವುದು ಢಾಳಾಗಿಯೇ ಗೋಚರಿಸುತ್ತದೆ. ಪತ್ರಕರ್ತರ ಬಗೆಗಿದ್ದ ಸದಭಿಪ್ರಾಯಗಳು ಈಚೀಚೆಗೆ ಕಡಿಮೆಯಾಗುತ್ತಿವೆ. ಮಾಧ್ಯಮಗಳನ್ನು ಜನ ಸಂಶಯದಿಂದ ನೋಡುವಂತಹ ವಾತಾವರಣಗಳು ದಟ್ಟವಾಗಿ ನಿರ್ಮಾಣಗೊಳ್ಳುತ್ತಿವೆ.

ಸಮ ಸಮಾಜವನ್ನು ನಿರ್ಮಿಸುವ ಸ್ವಯಂಘೋಷಿತ ಹೆಗಲ ಮೇಲೇ ಹೊತ್ತು ನಿಂತವರಂತೆ ದಿನವಿಡೀ ಬೊಬ್ಬೆ ಹೊಡೆಯುತ್ತಿರುವ ಇಂದಿನ ಬಹುತೇಕ ಮಾಧ್ಯಮಗಳ ನಡೆ ಬೇಸರ ಹುಟ್ಟಿಸುತ್ತಿದೆ. ಕ್ಷಣ-ಕ್ಷಣಕ್ಕೂ ಹುಸಿಗನಸುಗಳನ್ನು ಕಟ್ಟಿ ಕೊಡುತ್ತಾ, ವಾಸ್ತವಗಳನ್ನು ಹುಡಿಗೂಡಿಸುತ್ತಾ ಜನರನ್ನು ತಪ್ಪುದಾರಿಗೆಳೆಯುವಲ್ಲಿ , ಭ್ರಾಮಕ ಜಗತ್ತಿನಲ್ಲಿ ತೇಲಾಡಿಸುವಲ್ಲಿ ಸಂಪೂರ್ಣ ಫಲಪ್ರದವಾಗುತ್ತಿವೆ.  ಭಾರತದ ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯಾನಂತರದ ಹಲವು ದಶಕಗಳಲ್ಲಿದ್ದ ಮಾಧ್ಯಮ ಧರ್ಮ ಮತ್ತು ಸ್ವಯಂ ನೀತಿ ಸಂಹಿತೆಗಳು , ದಿನ ಕಳೆದ ಹಾಗೆ ಮರೆಯಾಗುತ್ತಿವೆ.

ಒಂದು ಹಂತದವರೆಗೂ ಜನ ಮುದ್ರಣ ಮೇಲಿಟ್ಟಿದ್ದ ನಂಬಿಕೆ ಒಂದಷ್ಟು ಮಟ್ಟಿಗೆ ಇನ್ನೂ ಸಹ ಉಳಿದುಕೊಂಡಿದೆಯಾದರೂ, ನಾವು ಸುಳ್ಳು ಹೇಳಲ್ಲ , ನಾವು ಮಾರಾಟಕ್ಕಿಲ್ಲ, ನೇರ-ದಿಟ್ಟ-ನಿರಂತರ, ಭರವಸೆಯ ಬೆಳಕು, ಇದು ಯಾರ ಆಸ್ತಿಯೂ ಅಲ್ಲ, ಉತ್ತಮ ಸಮಾಜ ನಿರ್ಮಾಣವೇ ನಮ್ಮ ಗುರಿ, ಅಂತೆಲ್ಲಾ ಟ್ಯಾಗ್‌ಲೈನ್‌ಗಳನ್ನು ಹಾಕಿಕೊಂಡು ಜನರ ಮನೆ-ಮನಗಳಲ್ಲಿ ದರ್ಬಾರು ಮಾಡುತ್ತಿರುವ ನ್ಯೂಸ್ ಚಾನೆಲ್ಲುಗಳಷ್ಟೇ ಅಲ್ಲ ; ಸಂಜೆಯಾದರೆ ಸಾಕು ಧಾರಾವಾಹಿಗಳ ದರ್ಶನ ಸಂಪ್ರಾಪ್ತಿ ಮಾಡಿಸುತ್ತಿರುವ ಬಹುತೇಕ ಎಲ್ಲ ಟಿವಿ ಚಾನಲ್ಲುಗಳೂ ಸಹ ಮನುಷ್ಯ-ಮನುಷ್ಯರ ನಡುವೆಯೇ ಕಟ್ಟುವ ಕೆಲಸ ಮಾಡುತ್ತಿವೆ.

ಈಗ ನಮ್ಮ ಮಾಧ್ಯಮಗಳ ಭರಾಟೆಯಲ್ಲಿ ದಾಸನಾಗುವ ಕನಿಷ್ಠ ಅರ್ಹತೆಗಳೂ ಇಲ್ಲದವರೆಲ್ಲ ನಮ್ಮನ್ನಾಳುವ ನಾಯಕರುಗಳಾಗುತ್ತಿದ್ದಾರೆ. ಜಾಹೀರಾತು ಮತ್ತಿತರೆ ಮರ್ಜಿಗಳಿಗೆ ಮಖಾಡೆ ಮಲಗಿ ಶರಣಾಗಿರುವ ಮಾಧ್ಯಮಗಳು, ತಮ್ಮ ಗುರುತರ ಜವಾಬುದಾರಿಕೆಯಿಂದ ನುಣುಚಿಕೊಳ್ಳುತ್ತಿವೆ. ಪ್ರಾಮಾಣಿಕತೆ, ನಿಷ್ಪಕ್ಷಪಾತ ನಡೆ, ನ್ಯಾಯ,ನೀತಿ,ಸತ್ಯ, ವೈಚಾರಿಕತೆಗಳು ಶೇಕಡಾ ತೊಂಬತ್ತರಷ್ಟು ಮಾಯವಾಗಿವೆ.

ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಹಿತಾಸಕ್ತಿಗಳ ರಕ್ಷಣೆ ನಡೆಯುತ್ತಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಜನರಲ್ ವಿ.ಕೆ.ಸಿಂಗ್ ಅಂಥವರು ಪತ್ರಕರ್ತರನ್ನು ಪ್ರಾಸ್ಟಿಟ್ಯೂಟ್ಸ್ ಎಂದು ಮಮತಾ ಬ್ಯಾನರ್ಜಿ ಜತೆಯಲ್ಲಿ ಹೋಗಿದ್ದ ಪತ್ರಕರ್ತರು ಬೆಳ್ಳಿತಟ್ಟೆ ಕದ್ದು ಸಿಕ್ಕಿಬಿದ್ದು , ತಾವೇ ದೊಡ್ಡ ಸುದ್ದಿಯಾಗುತ್ತಾರೆ. ಇದರ ನಡುವೆಯೂ ಪ್ರಭುತ್ವದ ವಿರುದ್ದ ಸತ್ಯವನ್ನು ಹೇಳುವುದಷ್ಟೇ ನಮ್ಮ ಪ್ರಮುಖ ಗುರಿ ಎಂದು ಅಂದುಕೊಂಡಿರುವ ಬೆರಳೆಣಿಕೆಯ ಪತ್ರಕರ್ತರು, ಸಮಾಜಕ್ಕೆ ವರವಾಗಿದ್ದಾರೆ. ಇಂಥ ಉಢಾಳ ಸಹೋದ್ಯೋಗಿಗಳ ನಡೆವಳಿಕೆಗಳಿಂದ ಘಾಸಿಗೊಳ್ಳುತ್ತಾರೆ, ಒಳಗೊಳಗೇ ಮರುಗುತ್ತಾರೆ.

ನಿರಂತರ ಓದು ಮತ್ತು ಸಮರ್ಥ ಅಭಿವ್ಯಕ್ತಿಯುಳ್ಳ ಪತ್ರಕರ್ತರ ಸಂಖ್ಯೆ ಕಡಿಮೆಯಾಗುತ್ತಿದೆ. ಪತ್ರಕರ್ತರೆಂದರೆ ಸ್ವಯಂ ಬ್ರಹ್ಮರೆಂಬ ಭ್ರಮೆ ಬಹುತೇಕ ಯುವ ಪೀಳಿಗೆಯ ಹೊಕ್ಕಿದೆ. ಪತ್ರಿಕೋದ್ಯಮವೆಂಬುದು ದಂಧೆಯ ಮಾರ್ಗವೆಂದೇ ಬಹುತೇಕರು ಅಂದುಕೊಳ್ಳುತ್ತಿದ್ದಾರೆ. ಇಂಥವರ ಪೀಳಿಗೆ ಹೆಚ್ಚುತ್ತಿದೆಯಾದರೂ, ವೃತ್ತಿ ಗೌರವವನ್ನು ಪ್ರಾಮಾಣಿಕತೆಯಿಂದ ಕಾಪಿಟ್ಟುಕೊಳ್ಳುತ್ತಿರುವ ಕೆಲವೇ ಪತ್ರಕರ್ತರಿಂದಾಗಿ ಈ ನೆಲದಲ್ಲಿನ್ನೂ ಪತ್ರಕರ್ತರನ್ನು ಅಭಿಮಾನದಿಂದ ಕಾಣಲಾಗುತ್ತಿದೆ. ಈ ಅಭಿಮಾನ ಮತ್ತು ಗೌರವ ಹೆಚ್ಚುವಂತೆ ಮಾಡಿಕೊಳ್ಳಬೇಕಾದ ಗುರುತರ ಜವಾಬುದಾರಿಕೆ ಹೊಸ ತಲೆಮಾರಿನ ಪತ್ರಕರ್ತರದ್ದಾಗಬೇಕಿದೆ.

ಆರೋಗ್ಯಕರವಾದ ಸಮಾಜ ನಿರ್ಮಾಣ ಮತ್ತು ಸಮತೋಲವನ್ನು ಕಾಯ್ದುಕೊಳ್ಳಬೇಕಾದ ಮಾಧ್ಯಮಗಳು ಇಂದು ಮರೆಯಾಗುತ್ತಿವೆ. ಅವರಿವರಿಂದ ಹೇಳಿಸಿಕೊಳ್ಳುವ ಬದಲು, ಸ್ವಯಂ ನಿಯಂತ್ರಣ ಹೇರಿಕೊಳ್ಳಬೇಕಾದ ದೊಡ್ಡ ಅಗತ್ಯ ಈಗ ಇದು ಕೇವಲ ಬಾಯಿ ಮಾತಿಗಷ್ಟೇ ಮೀಸಲಾಗಿದೆ. ಓದುಗರ ಮತ್ತು ನೋಡುಗರಿಗೆ ಮಾಧ್ಯಮಗಳೊಂದಿಗೆ ನೇರಾ- ನೇರ ಪಾಲ್ಗೊಳ್ಳಲು ಅವಕಾಶ ಕಲ್ಪಿಸುವ ಕೆಲಸ ಮತ್ತಷ್ಟು ಹೆಚ್ಚಿನ ಪ್ರಮಾಣದಲ್ಲಿ ನಡೆಯಬೇಕಾಗಿದೆ. ಸಾಮಾನ್ಯ ಜನರ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿಕೊಳ್ಳುವ ದಿಶೆಯಲ್ಲಿ ಮಾಧ್ಯಮಗಳು ಮತ್ತು ಪತ್ರಕರ್ತರು ಹೆಜ್ಜೆಗಳನ್ನು ಇಕ್ಕುವುದು ಅತ್ಯಂತ ಅನಿವಾರ್ಯವಾಗಿದೆ.

ಸಾಮಾಜಿಕವಾಗಿ ಸರಿದಾರಿ ತಪ್ಪಿದವರನ್ನು ನೇರಾ-ನೇರ ಖಂಡಿಸಿ, ದಂಡಿಸಬೇಕೆಂದು ಹೇಳುವ ಎದೆಗಾರಿಕೆ ಮತ್ತು ಉರಿವ ನಾಲಿಗೆ ಈಗಲೂ ತಮಗಿದೆಯೆಂದು ತೋರಿಸಿಕೊಳ್ಳುವ ಕೆಲವೊಂದು ಮಾಧ್ಯಮಗಳು ಮತ್ತು ಮಾಧ್ಯಮಿಗಳು, ಜನ ಮತ್ತು ಆಡಳಿತಗಾರರ ಸಂಬಂಧಗಳನ್ನು ಬೆಸೆಯಲು ಹುಟ್ಟಿಕೊಂಡಿರುವ ಸೇತುವೆಗಳೆಂಬುದನ್ನು ಮರೆತು, ತಾವೇ ನ್ಯಾಯಾಧೀಶರಂತೆ ವರ್ತಿಸುತ್ತಿರುವುದನ್ನು ನಿಲ್ಲಿಸಬೇಕಾಗಿದೆ.  ಅಜ್ಞಾನಿಗಳನ್ನು ತಿದ್ದುವುದು ಸುಲಭ. ನಾವು ಮೇಧಾವಿಗಳು ಎಂದು ಹಣೆಪಟ್ಟಿ ಅಂಟಿಸಿಕೊಂಡ ಈಗಿನ ಬಹುತೇಕ ಮಾಧ್ಯಮಗಳನ್ನು ತಿದ್ದುವುದು ಅಷ್ಟು ಸುಲಭವಲ್ಲ. ನಮಗೀಗ ನಾಗರಿಕತೆ ಸಿಕ್ಕಿದೆ, ಅನಾಗರಿಕರಾಗಿದ್ದೇವೆ.ವಿದ್ಯೆ ದೊರಕಿದೆ,ಅಜ್ಞಾನಿಗಳಾಗುತ್ತಿದ್ದೇವೆ. ಜಗತ್ತು ವಿಶಾಲವಾಗಿ ಕಿರುಬೆರಳ ತುದಿಗೆ ಬಂದು ಕುಳಿತಿದ್ದರೂ ನಾವು ಕುಬ್ಜರಾಗುತ್ತಿದ್ದೇವೆ. ತತ್ವ, ಸಿದ್ಧಾಂತ ಮತ್ತು ನಂಬಿಕೆಯ ನೆಲೆಗಳು ಮಾಯವಾಗುತ್ತಿವೆ.

ಸಾಮಾಜಿಕ,ನೈತಿಕ,ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ಜಾತ್ಯತೀತ ಪ್ರಜ್ಞೆಯನ್ನು ಜಾಗೃತಗೊಳಿಸುವಲ್ಲಿ , ರೂಢಿಗತ ಭ್ರಮೆಗಳಿಂದ ಹೊರ ಕರೆತರುವಲ್ಲಿ , ಅಸಮಾನತೆಯ ವಿರುದ್ಧ ಸೊಲ್ಲೆತ್ತುವ ದನಿಗಳಿಗೆ ಜೀವ ಕೊಡುವ ನಿಟ್ಟಿನಲ್ಲಿ ನಮ್ಮ ಬಹುತೇಕ ಮಾಧ್ಯಮಗಳು ಖುಲ್ಲಂ ಖುಲ್ಲಾ ವಿಫಲವಾಗಿವೆ. ನಮ್ಮ ನಡುವಿನಲ್ಲಿರುವ ಬಹುತೇಕ ಮಾಧ್ಯಮಗಳು ಒಂದೇ ಪರವಾದ, ಒಂದೇ ತೆರನಾದ ವಿಚಾರಧಾರೆಗಳನ್ನು ಬಿತ್ತುತ್ತಿವೆ. ಮಾಧ್ಯಮಗಳೇ ತಿದ್ದಿಕೊಳ್ಳದಿದ್ದರೆ , ಇಂದಲ್ಲ ನಾಳೆ, ಜನರೇ ತಿರುಗಿಬೀಳುವ ಅಪಾಯಕ್ಕೆ ಎದೆಯೊಡ್ಡಬೇಕಾದ ಸಾಧ್ಯತೆಗಳು ನಿಚ್ಚಳವಾಗಿವೆ.

ನೆನಪಿರಲಿ- ಸಂವಿಧಾನದಲ್ಲಿ ಮಾಧ್ಯಮಗಳಿಗಾಗಿಯೇ ವಿಶೇಷವಾದ ಸವಲತ್ತುಗಳನ್ನು ನೀಡಲಾಗಿಲ್ಲ. ಸ್ವಾತಂತ್ರ್ಯದ ಅಡಿಯಲ್ಲಿಯೇ ಕೆಲಸ ಮಾಡಬೇಕಾದ ಮಾಧ್ಯಮಗಳು, ತಮ್ಮ ಇತಿ-ಮಿತಿಗಳ ಅಳವಿನಲ್ಲಿ, ಅರಿವಿನಲ್ಲಿ ಹೆಜ್ಜೆಗಳನ್ನಿಕ್ಕಬೇಕು. ನಾವು ಇದ್ದರೆ ಮಾತ್ರವೇ ನೀವು ಎಂಬ ದಾಷ್ಟ್ರ್ಯದ ನಡೆಗಳನ್ನು ಬಿಟ್ಟು, ನೀವಿದ್ದರೆ ಮಾತ್ರವೇ ನಾವು ಎಂಬುದನ್ನು ಕಾರ್ಯಶಃ ಮಾಡಿ ತೋರಿಸಬೇಕು.  ಮಾಧ್ಯಮಗಳು ಮತ್ತು ಪತ್ರಕರ್ತರ ಬಗೆಗೆ ಜನ ಸಾಮಾನ್ಯರಲ್ಲಿ ಮೂಡುತ್ತಿರುವ ನಕಾರಾತ್ಮಕ ಅಂಶಗಳು ಬದಲಾಗುವಂತೆ ಮಾಡಬೇಕಾದ ಹೊಣೆಗಾರಿಕೆ ಪತ್ರಕರ್ತರ ಮೇಲೆ ಮಾತ್ರವೇ ಇದೆ. ಈ ಮಾತು ಅರ್ಥವಾಗುತ್ತದೆಂಬ ನಂಬಿಕೆಯೂ ಇದೆ.

Leave a Reply

Your email address will not be published. Required fields are marked *

18 − seventeen =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top