About Us Advertise with us Be a Reporter E-Paper

ಆಟೋಮೊಬೈಲ್

ಪತ್ರಕರ್ತರಿಗೆ ಮಾನವೀಯ ಕಳಕಳಿ, ಸಾಮಾಜಿಕ ಹೊಣೆಗಾರಿಕೆ ಬೇಕೇ….?

- ಜಿತೇಂದ್ರ ಕುಂದೇಶ್ವರ

ಮೂಲ್ಕಿ ಪುನರೂರು ಬಳಿ ಶಿವಪ್ರಸಾದ್ ರಾವ್ ಎಂಜಿನಿಯರಿಂಗ್ ಮುಗಿಸಿ ಬೆಂಗಳೂರಿಗೆ ದೊಡ್ಡ ಕಂಪನಿಯಲ್ಲಿ ಉದ್ಯೋಗಕ್ಕೆ ತೆರಳಿದ್ದರು. ಬಿಎಂಟಿಸಿ ಬಸ್ ಹತ್ತುವಾಗ ಅಟೋಮ್ಯಾಟಿಕ್ ಬಾಗಿಲಿಗೆ ಕಾಲು ಸಿಕ್ಕಿಹಾಕಿಕೊಂಡಿತ್ತು. ಬಸ್ ಚಲಿಸುತ್ತಿದ್ದಂತೆಯೇ ಇನ್ನೊಂದು ಕಾಲಿನ ಮೇಲೆ ಬಸ್ ಚಕ್ರ ಹರಿದಿತ್ತು. ಚಾಲಕನಿಗೆ ಗೊತ್ತೇ ಆಗಿಲ್ಲ. ಚಾಲಕ ಕೆಳಗೆ ಇಳಿದು ಬಂದು ನೋಡಿದಾಗ ಕಾಲಿನ ಮೇಲೆ ಚಕ್ರ ಇತ್ತು. ಮತ್ತೆ ರಿವರ್ಸ್ ತೆಗೆದರು. ಅಲ್ಲೇ ಆಸ್ಪತ್ರೆಗೆ ಸೇರಿಸಿದರು. ಬಿಎಂಟಿಸಿಯವರೂ ನೆರವು ನೀಡಿಲ್ಲ. ಸರಕಾರವೂ ಕರುಣೆ ತೋರಲಿಲ್ಲ. ಸ್ವಂತ ಕಾಲಿನ ಮೇಲೆ ನಿಲ್ಲಬೇಕು ಎಂದು ಬೆಂಗಳೂರಿಗೆ ಹೊರಟ ಬಡ ಯುವಕನ ಕಾಲನ್ನೇ ಈ ಕಾಲವು ಕಿತ್ತುಕೊಂಡಿತ್ತು.

ಇದಾದ ಬಳಿಕ ಯುವಕನ ಕುಟುಂಬದ ಬದುಕು ಬರ್ಬರ. ಪುನರೂರಲ್ಲಿ ತಗಡಿನ ಶೀಟಿನ ಡೇರೆ ಹೆತ್ತವರ ಜತೆ ಡೇರೆಯ ಒಳಗೆ ಬದುಕುತ್ತಿರುವ ಯುವಕನ ಎಂಜಿನಿಯರ್ ಕನಸು ನನಸು ಮಾಡಲು ಮುಂದೆ ಬಂದವರು ಒಬ್ಬ ಪತ್ರಕರ್ತ. ಎಲ್ಲ ಪತ್ರಕರ್ತರಿಗೆ ಅಪಘಾತ, ಕ್ಯಾನ್ಸರ್, ಗುಣವಾಗದ ಕಾಯಿಲೆಗಳ ಕುರಿತು ವರದಿ ಮಾಡಿ ಮಾಡಿ ಮನಸ್ಸುಗಳು ಕಲ್ಲಾಗಿ ಹೋಗುತ್ತವೆ. ಈ ರೀತಿಯ ವರದಿಗಳು ಹೆಚ್ಚುತ್ತಿದ್ದಂತೆಯೇ ಪತ್ರಿಕೆಗಳಲ್ಲಿಯೂ ಮುಖಪುಟಗಳಿಂದ ಕಾಣೆಯಾಗಿ ದೂರು ದುಮ್ಮಾನದಲ್ಲೋ, ಓದುಗರ ಓಣಿಯಲ್ಲಿಯೇ ಪ್ರಕಟವಾಗುತ್ತದೆ. ಪತ್ರಕರ್ತರೂ ಕೂಡಾ ಪ್ರತಿದಿನವೂ ಇಂಥ ಹಲವು ಸುದ್ದಿಗಳನ್ನು ನೋಡುತ್ತಾರೆ, ಮಾಡುತ್ತಾರೆ. ಹೀಗಾಗಿ ಸ್ಪಂದಿಸುವ ಇಳಿಮುಖವಾಗಿದೆ. ಆದರೆ ಪತ್ರಿಕಾ ಕ್ಷೇತ್ರದಲ್ಲಿ 32 ವರ್ಷಗಳಿಂದ ಕೆಲಸ ಮಾಡುತ್ತಿರುವ ಮುಂಬಯಿಯ ‘ಕರಾವಳಿ ಪಿಟಿಐ’ ಎಂದೇ ಪ್ರಸಿದ್ಧರಾದ ರೋನ್‌ಸ್ ಬಂಟ್ವಾಳ ಅವರಿಗೆ ವರದಿ ಮಾಡುವುದು ವೃತ್ತಿ, ಇದರ ಜತೆಯಲ್ಲಿ ಬಡವ, ಬಲ್ಲಿದರ ಸಂಕಷ್ಟಕ್ಕೆ ನೇರವಾಗಿ ಸ್ಪಂದಿಸುವುದು ಇವರ ಗುಣ.

ಮೂಲ್ಕಿ ಪುನರೂರು ಬಳಿ ಯುವಕನೊಬ್ಬ ಅಪಘಾತಕ್ಕೀಡಾಗಿ ದಾರುಣ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾನೆ. ಅವನ ಸಂಕಷ್ಟಕ್ಕೆ ನೆರವಾಗಿ ನಿಮ್ಮಿಂದ ಸಾಧ್ಯವಿದೆ ಎಂದು ರೋನ್‌ಸ್ ಬಂಟ್ವಾಳ ನನಗೆ ಕರೆ ಮಾಡಿದ್ದರು. ಮುಂಬಯಿಯಲ್ಲಿ ಕೆಲಸ ರೋನ್‌ಸ್ ಅವರಿಗೆ ಕರಾವಳಿಯಲ್ಲಿ ಇಂತಹ ವಿಚಾರಗಳು ನಮಗಿಂತ ಮೊದಲೇ ಗೊತ್ತಾಗುತ್ತದೆ. ಏಕೆಂದರೆ ಅವರು ಈಗಾಗಲೇ ನೂರಾರು ಮಂದಿ ಸಂತ್ರಸ್ತರ ನೋವಿಗೆ ಸ್ಪಂದಿಸಿದವರು. ಹಾಗೆಂದು ಸಿಕ್ಕ ಸಿಕ್ಕವರಿಗೆ ನೆರವು ನೀಡುವುದಿಲ್ಲ. ದುಃಶ್ಚಟ ಇದ್ದವರಿಗೆ, ಹಣ ಉಡಾಯಿಸುವ ಸ್ವಭಾವದವರಿಗೆ ನೆರವು ನೀಡುವುದಿಲ್ಲ. ನೆರವು ನೀಡುವ ಮುನ್ನ ಅವರಿದ್ದ ಜಾಗಕ್ಕೆ ತೆರಳಿ ಪರಿಶೀಲನೆ ನಡೆಸಿದ ಬಳಿಕ ಅರ್ಹರು ಎಂದಾದದಲ್ಲಿ ಮಾತ್ರ ಧನ ಸಹಾಯ ನೀಡುತ್ತಾರೆ.

ಹೊಸ್ಮಾರು ಬಳಿ ತೀರ ಬಡತನ ಬೇಗೆಯಿಂದ ಬಳಲುತ್ತಿದ್ದ ಪುಟ್ಟ ಪುಟ್ಟ ಇಬ್ಬರು ಮಕ್ಕಳು. ದುಡಿದು ಹೆಂಡತಿ ಮಕ್ಕಳನ್ನು ಸಾಕಬೇಕಿದ್ದ ಯಜಮಾನ ಕಿಡ್ನಿ ವೈಫಲ್ಯದಿಂದ ಹಾಸಿಗೆಯಲ್ಲಿ ಮಲಗಿದ್ದಾರೆ. ವಾರಕ್ಕೆ ಮೂರು ಡಯಾಲಿಸಿಸ್ ಮಾಡಬೇಕು. ಎರಡು ದಿನಗಳಾಗುತ್ತಿದ್ದಂತೆಯೇ ಮೈಯಲ್ಲಿ ನೀರು ತುಂಬಿಕೊಳ್ಳುತ್ತದೆ. ಹೆಂಡತಿಗೆ ಮಕ್ಕಳನ್ನು ನೋಡಿಕೊಳ್ಳಬೇಕು, ಇನ್ನೊಂದೆಡೆ ಗಂಡನ ಶುಶ್ರೂಷೆ ಮಾಡಬೇಕು. ಯಜಮಾನ ಇವತ್ತೋ ನಾಳೆಯೋ ಎಂದು ದಿನ ದೂಡುತ್ತಿದ್ದಾರೆ. ಈ ನಡುವೆ ಹೇಗೋ ಬಿಡುವು ಮಾಡಿಕೊಂಡು ಶಾಸಕರಿಗೆ ನೆರವಿಗಾಗಿ ಮನವಿ ಸಲ್ಲಿಸಿದ್ದರು. ಯಾವುದೇ ಪಕ್ಷದ ಶಿಫಾರಸು ಇಲ್ಲದ ಕಾರಣ ರೀತಿಯ ನೆರವೂ ಸಿಕ್ಕಿಲ್ಲ. ಯಾವ ಸಂಘಟನೆಗಳೂ ಮುಂದೆ ಬರಲಿಲ್ಲ. ಇವರ ಕಷ್ಟವನ್ನು ರೋನ್‌ಸ್ ಹೇಗೆ ತಿಳಿದುಕೊಂಡರೋ ಗೊತ್ತಿಲ್ಲ. ತಕ್ಷಣ ಮನೆಗೆ ತೆರಳಿ ಪರಿಶೀಲನೆ ನಡೆಸಿದರು. ದಾನಿಗಳಲ್ಲಿ ಇವರ ಕಷ್ಟ ಹೇಳಿ 80 ಸಾವಿರ ರು. ಕೊಟ್ಟರು. ಈ ಹಣವನ್ನು ತೆಗೆದುಕೊಂಡು ಹೋದ ಆಕೆ ತನ್ನ ಗಂಡನ ಚಿಕಿತ್ಸೆಗಾಗಿ ಈ ಹಿಂದೆ ಮಾಡಿದ ಸಾಲ ಎಲ್ಲ ತೀರಿಸಿದರು. ಬಳಿಕ ಉಳಿದ 5 ರೂಪಾಯಿಯಲ್ಲಿ ಒಂದು ಚಾ ಮಾಡಿಕೊಟ್ಟರು. ನನಗೆ ಆ ಕುಡಿದಾಗ ಅದೇನೋ ನೆಮ್ಮದಿ ಎನ್ನುತ್ತಾರೆ ರೋನ್‌ಸ್. ಮಕ್ಕಳಿಗೆ ಸಿಹಿತಿಂಡಿಯನ್ನು ಹಬ್ಬಕ್ಕೆಂದು ತಂದು ಕೊಟ್ಟಿದ್ದರು. ನನ್ನ ಮಕ್ಕಳು ದೀಪಾವಳಿ ಹಬ್ಬದ ಸಂಭ್ರಮ ಆಚರಿಸಿಲ್ಲ. ಇಷ್ಟೆಲ್ಲ ಸಿಹಿತಿಂಡಿ ನೋಡಿಲ್ಲ ಎಂದು ತಾಯಿ ನೋವು ಹೇಳಿಕೊಂಡಿದ್ದರು. ಇವರಿಗೂ ಒಟ್ಟು 1.12 ಲಕ್ಷ ರು. ದೇಣಿಗೆ ಸಂಗ್ರಹಿಸಿ ನೀಡಿದ್ದರು.

ಶಿರ್ವ ಮಂಚಕಲ್ ಕೂಲಿ ಕಾರ್ಮಿಕರೊಬ್ಬರು ಅಪಘಾತದಲ್ಲಿ ತೀರಿ ಹೋಗಿದ್ದರು. ಮಕ್ಕಳಿಬ್ಬರು ಕಲಿಯುವುದರಲ್ಲಿ ಮುಂದೆ. ಶೇ.97 ಅಂಕ ಗಳಿಸುತ್ತಿದ್ದರು. ಇಬ್ಬರಿಗೂ ಆಳ್ವಾಸ್‌ನಲ್ಲಿ ಉಚಿತವಾಗಿ ಶಿಕ್ಷಣ ಪಡೆಯುತ್ತಿದ್ದಾರೆ. ರೋನ್‌ಸ್ ನೆರವಿನ ಹಸ್ತ ಚಾಚಿದ್ದಾರೆ. ಮಗುವಿಗೆ ಸ್ನಾನ ಮಾಡಿಸಲೆಂದು ರೆಡಿ ಮಾಡಿದ್ದ ಬಿಸಿನೀರು ಮಗುವಿನ ಮೇಲೆ ಬಿದ್ದು ಸಂಪೂರ್ಣ ಬೆಂದುಹೋಗಿತ್ತು. ಕಡು ಬಡವರಾದ ಅವರಿಗೂ ನೆರವಿನ ಹಸ್ತ ಚಾಚಿದ್ದರು. ಈಗ ಮಗು ಚೇತರಿಸಿಕೊಂಡು ಸಾಮಾನ್ಯರಂತೆ ಬದುಕಲು ಮುಂದಡಿ ಇಡುತ್ತಿದೆ. ಉಡುಪಿಯ ವೈದ್ಯರು ಲೋಕೇಶ್ ರಾವ್ ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದಾರೆ. ಇದರ ಔಷಧ ಖರ್ಚು ರೋನ್ಸ್ ನೋಡಿಕೊಳ್ಳುತ್ತಿದ್ದಾರೆ.

ಮೊಬೈಲ್‌ನಲ್ಲಿ ಯಾರ್ಯಾರ ಫೋಟೊ ಇಟ್ಟುಕೊಳ್ಳುವ ಸಾಮಾನ್ಯರಿಗಿಂತ ಮದರ್ ತೆರೇಸಾ ಅವರ ಫೋಟೊ ರೋನ್ಸ್ ಅವರನ್ನು ನೋಡಿದಾಗಲೇ ಅವರಲ್ಲಿರುವ ಸೇವಾ ಮನೋಭಾವ ಕೃತಕವಲ್ಲ ಎನ್ನುವುದು ಖಚಿತವಾಗುತ್ತದೆ. ಇವರು ಎಳವೆಯಲ್ಲಿ ಆರ್‌ಎಸ್‌ಎಸ್‌ನ ಸಂಪರ್ಕಕ್ಕೆ ಒಳಗಾದವರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಾಮಾಜಿಕ ಕೆಲಸಗಳಿಂದ ಪ್ರಭಾವಿತರಾದರು. ಆದರೆ ಜಾತಿ, ಧರ್ಮ ರಾಜಕೀಯ ಇಷ್ಟವಾಗುವುದಿಲ್ಲ. ಯಾರ್ಯಾರದೋ ಅಭಿಮಾನಿ ಸಂಘ ಕಟ್ಟುಕೊಂಡು ದೇಣಿಗೆ ಸಂಗ್ರಹಿಸುವುದಕ್ಕಿಂತ ಮೊದಲು ನಮಗೆ ಆತ್ಮಾಭಿಮಾನ ಇರಬೇಕು. ಬದುಕಿ ದೀನ ದಲಿತರ ಸೇವೆ ಮಾಡಬಹುದು ಇದು ರೋನ್‌ಸ್ ಅವರ ಅನುಭವದ ಮಾತು.

ಪತ್ರಕರ್ತ ವರದಿ ಮಾಡಬೇಕು, ಆ್ಯಕ್ಟಿವಿಸ್ಟ್ ಎನ್ನುವುದು ಒಂದು ವಾದ. ಆದರೆ ಇಂಥ ಮಾನವೀಯ ಕಳಕಳಿ ವರದಿ ಮಾಡುವುದರ ಜತೆಗೆ ಅವರ ಕಷ್ಟಗಳಿಗೆ ಸ್ಪಂದಿಸುವದರೊಂದಿಗೆ ದಾನಿಗಳನ್ನು ಹುಡುಕಿ ಅವರಿಗೆ ಹಣವನ್ನು ಮುಟ್ಟಿಸುವುದು ಆ್ಯಕ್ಟಿವಿಸ್‌ಟ್ಗಳಿಗಿಂತ ದೊಡ್ಡ ಕೆಲಸ. ಕೆಲವೊಂದು ಸಂಘಟನೆಗಳು ಹೋರಾಟ ಮಾತ್ರ ಮಾಡುತ್ತವೆ. ನೆರವಾಗುವುದಕ್ಕೆ ಇನ್ನೊಂದು ಸಂಘಟನೆ ಬೇಕು. ಇತ್ತೀಚೆಗೆ ಅಕ್ರಮ ಗೋ ಸಾಗಣೆಯ ಗೋವುಗಳನ್ನು ಗೋ ಶಾಲೆಗೆ ನೀಡಲು ಹೋದಾಗ ಆಶ್ರಮದವರು ನಮ್ಮಿಂದ ಸಾಧ್ಯವಿಲ್ಲ ಎಂದು ಕೈ ಚೆಲ್ಲಿದರು. ಗೋವು ನಮ್ಮ ದೇವರು ಎಂದು ಅವರ ವಿರುದ್ಧ ಆಕ್ರೋಶವೂ ಮೂಡಿಬಂತು. ಆದರೆ ಗೋ ಶಾಲೆಯವರು ಗೋವುಗಳನ್ನು ಸಾಕಲು ದೇಣಿಗೆ ಕೊಡಿ ಎಂದಾಗ ಎಷ್ಟು ಮಂದಿ ಆಕ್ರೋಶಗೊಂಡವರು ದೇಣಿಗೆ ನೀಡಿದ್ದರು ಎನ್ನುವುದು ಗಮನಿಸಬೇಕು. ಅದು ಒತ್ತಟ್ಟಿಗಿರಲಿ.

ಪತ್ರಿಕೆಗಳಲ್ಲಿ ಮಾನವೀಯ ಕಳಕಳಿ ವರದಿಗಳನ್ನು ಬರೆದೂ ಅವರಿಗೆ ದೇಣಿಗೆ ಸಂಗ್ರಹಿಸಿ ನೀಡುವ ಪತ್ರಕರ್ತರು ಅಪರೂಪದಲ್ಲಿ ಅಪರೂಪ. ಪ್ರತಿ ವರ್ಷ 12ರಿಂದ 15 ಲಕ್ಷ ರು. ಈ ರೀತಿ ನೆರವಿಗೆ ವ್ಯವಸ್ಥೆ ಮಾಡುವ ರೋನ್ಸ್ ಬಂಟ್ವಾಳ, 37 ಮಾಧ್ಯಮಗಳಿಗೆ ಸುದ್ದಿಯನ್ನು ಅದರಲ್ಲಿ ಇಂಥ ಸುದ್ದಿಗಳು ಪ್ರಕಟವಾಗುತ್ತವೆ. ಆಗಲೂ ಸಹಾ ನೆರವು ಸಂತ್ರಸ್ತರಿಗೆ ಬರುತ್ತದೆ. ಅದರ ಲೆಕ್ಕ ಅವರು ಇಟ್ಟಿಲ್ಲ.

ಪತ್ರಕರ್ತ ಕೇವಲ ವರದಿಗಾರಿಕೆ ಕರ್ತವ್ಯ ಮಾಡಬೇಕೋ ಅಥವಾ ಇದರೊಂದಿಗೆ ಮಾನವೀಯ ಕಳಕಳಿಯವನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕಬೇಕು ಎನ್ನುವುದು ಈಗಲೂ ಆಗಾಗ ಚರ್ಚೆಗೆ ಒಳಗಾಗುತ್ತದೆ. ಹಿಂದೊಮ್ಮೆ ದಕ್ಷಿಣ ಆಫ್ರಿಕಾದ ಫೋಟೊ ಜರ್ನಲಿಸ್‌ಟ್ ಕೆವಿನ್ ಕಾರ್ಟರ್ ಬಂಡುಕೋರರ ಹಿಂಸಾಚಾರ ಮತ್ತು ಬರಲಗಾಲದಿಂದ ನಲುಗಿಹೋಗಿದ್ದ ಸೂಡಾನ್‌ಗೆ ವರದಿಗಾರಿಕೆಗೆ ಹೋಗಿದ್ದ. ಅಲ್ಲಿ ಮೂಳೆ ಮತ್ತು ತಲೆ ಕಾಣುತ್ತಿದ್ದ ಮಗುವೊಂದ ಸಂತ್ರಸ್ತರ ಗಂಜಿ ಕೇಂದ್ರದ ಕಡೆ ತೆವಳಿಕೊಂಡು ಹೋಗಲು ಪ್ರಯತ್ನಿಸುತ್ತಿತ್ತು. ಇದೇ ವೇಳೆಗೆ ಮಗುವಿನ ಮೇಲೆ ಇನ್ನೇನು ರಣ ಹದ್ದು ಎರಗಲು ಕಾಯುತ್ತಿತ್ತು. ಆದರೆ ರಣ ಹದ್ದು ಹತ್ತಿರ ಬರುವವರೆಗೆ ಕಾದ ಕಾರ್ಟರ್ ಸದ್ದು ಮಾಡದೆ ತೆವಳುತ್ತಾ ಹೋಗಿ ಫೋಟೊ ತೆಗೆದಿದ್ದ. ರಣಹದ್ದು ರೆಕ್ಕೆ ಬಿಚ್ಚಿದರೆ ಫೋಟೊ ಸುಡಾನ್‌ನಲ್ಲಿ ಬರಗಾಲ ಮತ್ತು ಹಿಂಸಾಚಾರವನ್ನು ಸಮರ್ಥವಾಗಿ ಚಿತ್ರದಲ್ಲಿ ತೋರಿಸಬಹುದು ಎಂದು ಭಾವಿಸಿದ್ದ.

ಈ ಫೋಟೊ ‘ದಿ ನೂಯಾರ್ಕ್ ಟೈಮ್ಸ್ ‘ಗಾರ್ಡಿಯನ್’ ಮೊದಲಾದ ಪತ್ರಿಕೆಗಳಲ್ಲಿ ಮುಖ ಪುಟಗಳಲ್ಲಿ ಪ್ರಕಟವಾಯಿತು. ಫೋಟೊ ಪರಿಣಾಮ ಸುಡಾನ್ ಸರಕಾರಕ್ಕೆ ವಿಶ್ವದ ಎಲ್ಲಡೆಗಳಿಂದ ನೆರವಿನ ಮಹಾಪೂರವೇ ಬಂದಿತ್ತು. ಇದರ ಜತೆಯಲ್ಲಿ ಫೋಟೊ ಗ್ರಾಫರ್ ಮಾನವೀಯ ಕಳಕಳಿ ಇಲ್ಲದ ಭಾವನೆಯೇ ಇಲ್ಲದ ವ್ಯಕ್ತಿ. ಫೋಟೊ ಮಾತ್ರ ತೆಗೆಯದೆ ರಣ ಹದ್ದು ಓಡಿಸಿ ಮಗುವನ್ನು ರಕ್ಷಿಸುವ ಕೆಲಸ ಮಾಡಬೇಕಿತ್ತು ಎಂದು ಜನರು ಜರೆದಿದ್ದರು.

ಇಲ್ಲಿ ಎರಡು ವಿಚಾರ ಇದೆ. ಫೋಟೊ ತೆಗೆಯುವದರ ಜತೆ ಮಗುವನ್ನು ಕೂಡಾ ರಕ್ಷಿಸುವಲ್ಲಿ ಪ್ರಾಮುಖ್ಯ ಎಂಬುದು. ಈ ಫೋಟೊದಿಂದ ಸುಡಾನ್‌ನಲ್ಲಿ ಇದೇ ರೀತಿ ಹಸಿವೆಯಿಂದ ಬಳಲುತ್ತಿದ್ದ ಅದೆಷ್ಟೋ ಮಕ್ಕಳಿಗೆ ಅನ್ನಾಹಾರ ಸಿಗುವಂತೆ ಕೆವಿನ್ ಮಾಡಿದ್ದ. ಇದರಷ್ಟು ಮಹತ್ಕಾರ್ಯ ಬೇರೆ ಯಾವುದೂ ಇಲ್ಲ. ಆದರೆ ಎಲ್ಲರ ಕಣ್ಣಿಗೆ ಬಿದ್ದದ್ದು ಆ ಫೋಟೊ ಜರ್ನಲಿಸ್‌ಟ್ಗೆ ಸಂವೇದನೆಯೇ ಇಲ್ಲ ಎನ್ನುವುದು. ಪಾಪ ಕಾರ್ಟರ್ ಫೋಟೊ ತೆಗೆದ ಕೂಡಲೇ ಹದ್ದನ್ನು ಅಲ್ಲಿಂದ ಓಡಿಸಿದ್ದ ಆದರೆ ಮಗುವನ್ನು ಗಂಜಿ ಕೇಂದ್ರಕ್ಕೆ ತಂದು ಬಿಡುವ ಪ್ರಯತ್ನ ಮಾಡಿರಲಿಲ್ಲ. ಎರಡೂ ಕಾರ್ಯವನ್ನು ಮಾಡುವ ಪತ್ರಕರ್ತರು ಅಪರೂಪ. ಆದರೆ ರೋನ್‌ಸ್ಬಂಟ್ವಾಳ ಅವರಲ್ಲಿ ಈ ಎರಡೂ ಗುಣಗಳು ಇರುವುದು ವಿಶೇಷ.

ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರು ಕೂಡಾ ಸಾಮಾಜಿಕ ಹೊಣೆಗಾರಿಕೆ ಅಡಿ ನಾರಾವಿಯ ಕುತ್ಲೂರಿನ ಹಿಂದುಳಿದ ಗ್ರಾಮವನ್ನು ಗುರುತಿಸಿ ಅಲ್ಲಿಸ ಸಮಸ್ಯೆಗಳ ಪರಿಹಾರಕ್ಕೆ ಗ್ರಾಮ ವಾಸ್ತವ್ಯ ಡಿ.23ರಂದು ಮಾಡಲಿದ್ದಾರೆ. ಜಿಲ್ಲಾಡಳಿತ ನೇತೃತ್ವ ವಹಿಸಿಕೊಂಡಿರುವುದರಿಂದ ಇದಕ್ಕೆ ಬಲ ಬಂದಿದೆ. ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ಇದಕ್ಕೇ ಇತ್ತೀಚೆಗೆ ಸಮಾರಂಭದಲ್ಲಿ ಚಾಲನೆ ನೀಡಿದ್ದರು.

ಆಡದೇ ಮಾಡುವವರು ರೂಢಿಯೊಳು ಉತ್ತಮರು. ಆಡಿ ಮಾಡುವವರು ಮಧ್ಯಮರು. ಮಾಡದವರು ಅಧಮರು ಎಂಬ ಮಾತಿದೆ. ಆದ್ದರಿಂದ ಒಳ್ಳೆಯಕೆಲಸ ಮಾಡುವಾಗ ಗೊತ್ತಾಗಲೇ ಬಾರದು ಎನ್ನುವುದು ರೋನ್‌ಸ್ ಬಂಟ್ವಾಳ ಅವರ ನೀತಿ. ಅದಕ್ಕಾಗಿ ಅವರು ಈ ವಿಚಾರಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸುವುದು ಬೇಡ ಒಂದು ಸಂತ್ರಸ್ತ ಕುಟುಂಬದವರಿಗೆ ಬೇಸರ ಆಗಬಹುದು, ಪ್ರಚಾರ ಪಡೆಯುವುದು ನನಗೂ ಇಷ್ಟ ಇಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಅವರು ಮಾಡುವ ಸೇವಾ ಸತ್ಕಾರ್ಯಗಳು ಪ್ರಚಾರ ಪಡೆದುಕೊಂಡಿಲ್ಲ.

ಆದರೆ ಒಳ್ಳೆಯ ಕೆಲಸಗಳಿಗೆ ಅಷ್ಟೇ ಒಳ್ಳೆಯ ರೀತಿಯ ಪ್ರಚಾರ ಬೇಕು ಎನ್ನುವುದು ವೈಯಕ್ತಿಕ ಅಭಿಪ್ರಾಯ. ನಮ್ಮದೇ ಪತ್ರಕರ್ತರ ಸಂಘದವರು ಒಳ್ಳೆಯ ಕೆಲಸಕ್ಕೆ ಇಳಿದಿದ್ದಾರೆ. ಕೆಟ್ಟ ಕೆಲಸ ಮಾಡುವುದಕ್ಕಿಂತ ಒಳ್ಳೆಯ ಕೆಲಸಕ್ಕೆ ಮುಂದಾಗುವುದು ಒಳ್ಳೆಯ ವಿಚಾರವೇ. ಆದರೆ ಕೆಲವು ಸಂಸದರ ಆದರ್ಶ ಗ್ರಾಮ ಘೋಷಣೆ ಬಳಿಕ ಸರಿಯಾಗಿ ಭೇಟಿಯನ್ನೇ ಮಾಡದ ನಿರ್ಲಕ್ಷ್ಯ ತೋರಿದ್ದಾರೆ ಎಂದು ಪತ್ರಕರ್ತರೇ ಆಗಾಗ ಬರೆಯುತ್ತಾರೆ. ಹೀಗಾಗಿ ಗ್ರಾಮವಾಸ್ತವ್ಯ ನಿರೀಕ್ಷಿತ ಪರಿಣಾಮ ಬೀರದೇ ಇದ್ದರೆ ಕೇವಲ ಪ್ರಚಾರಕ್ಕಾಗಿ ಮಾಡಿದರು ಎಂದು ಆರೋಪಿಸುವರು ಬೆನ್ನ ಹಿಂದೆಯೇ ಇರುತ್ತಾರೆ. ಆದ್ದರಿಂದ ಪ್ರಯತ್ನ ಮಾಡಬೇಕು. ಪ್ರಯತ್ನ ಆದರೂ ಮಾಡಿದ ಕುರಿತು ಒಂದು ಸಮಾಧಾನ ಸಿಗಬಹುದು.

Tags

Related Articles

Leave a Reply

Your email address will not be published. Required fields are marked *

Language
Close