About Us Advertise with us Be a Reporter E-Paper

ಅಂಕಣಗಳು

ನ್ಯಾಯಾಧೀಶರು ಶಾಸನ ರೂಪಿಸುವುದು ಬೇಕೆ?

- ಮಾರ್ಕಂಡೇಯ ಕಾಟ್ಜು, ನಿವೃತ್ತ ನ್ಯಾಯಮೂರ್ತಿ

ಇತ್ತೀಚಿನ ಅನೇಕ ಬೆಳವಣಿಗೆಗಳಲ್ಲಿ ಸರ್ವೋಚ್ಚ ನ್ಯಾಯಾಲಯ ಅನಪೇಕ್ಷಣೀಯವಾಗಿ ನ್ಯಾಯಾಂಗದ ಚಟುವಟಿಕೆಗಳನ್ನು ಅತಿಕ್ರಮಿಸಿದೆ. ಇನ್ನೂ ಹೇಳಬೇಕೆಂದರೆ, ಕಾನೂನು ಜಾರಿಗೊಳಿಸುತ್ತಿದೆ. ಹಾಗಾಗಿ ನ್ಯಾಯಾಧೀಶರು ಶಾಸನ ರೂಪಿಸಬಹುದೇ ಎಂದೀಗ ಅವಶ್ಯವಾಗಿ ಕೇಳಿಕೊಳ್ಳಬೇಕಾಗಿದೆ.

ಇಂತಹ ಪ್ರಶ್ನೆಗಳಿಗೆ ಈ ಸುಪ್ರೀಂಕೋರ್ಟ್ ಹಲವು ಬಾರಿ ಉತ್ತರ ನೀಡಿ ಸಂದಿಗ್ಧ ಬಗೆಹರಿಸಿದೆ ಎನ್ನುವುದು ಗಮನಿಸಬೇಕಾದ ವಿಷಯ. ‘ರಾಮ್ ಜವಾಯ ವರ್ಸಸ್ ಸ್ಟೇಟ್ ಆಫ್ ಪಂಜಾಬ್’ ಪ್ರಕರಣ ಕುರಿತು ಐವರು ನ್ಯಾಯಮೂರ್ತಿಗಳನ್ನೊಳಗೊಂಡ ಸಾಂವಿಧಾನಿಕ ಪೀಠ ನೀಡಿದ ತೀರ್ಪು ಕುರಿತು ಸವೋಚ್ಚ ನ್ಯಾಯಾಲಯ ಹೀಗೆ ಹೇಳಿತ್ತು: ‘ನಮ್ಮ ಸಂವಿಧಾನದ ಮೂರು ಘಟಕಗಳಾದ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳಲ್ಲಿ ಒಂದರ ಕೆಲಸವನ್ನು ಇನ್ನೊಂದು-ಭಾಗಶಃವಾದರೂ-ಮಾಡಬಹುದೆಂದು ಎಲ್ಲಿಯೂ ಸೂಚಿತವಾಗಿಲ್ಲ. ಮೂರು ಘಟಕಗಳ ಅಧಿಕಾರವನ್ನೂ ದೊಡ್ಡ ತಳಹದಿಯ ಮೇಲೆ ಹಂಚಲಾಗಿದ್ದು, ಇನ್ನೊಂದರ ಅಧಿಕಾರ ವ್ಯಾಪ್ತಿಗೆ ಅತಿಕ್ರಮಣ ಮಾಡುವುದು ಸಂವಿಧಾನದಲ್ಲಿರುವ ಒಂದು ಸೂಕ್ಷ್ಮ ಸಮತೋಲವನ್ನು ಹಾಳುಮಾಡಿ ಅವ್ಯವಸ್ಥೆಗೆ ಕಾರಣವಾಗುತ್ತದೆ’.

ಜಮ್ಮು ಮತ್ತು ಕಾಶ್ಮೀರದ ‘ಆಸಿಫ್ ಹಮೀದ್ ವರ್ಸಸ್ ಸ್ಟೇಟ್’ ಪ್ರಕರಣದಲ್ಲಿ ಮೂವರು ನ್ಯಾಯಮೂರ್ತಿಗಳ ಸುಪ್ರೀಂ ಪೀಠ ಹೀಗೆ ಹೇಳಿತ್ತು: ‘ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗ, ಸಂವಿಧಾನಕ್ಕೆ ಅನುಸಾರವಾಗಿ ತಮ್ಮದೇ ಪ್ರತ್ಯೇಕ ವಲಯಗಳಲ್ಲಿ ಕಾರ್ಯನಿರ್ವಹಿಸಬೇಕು. ಒಂದು ಅಂಗ ನಿರ್ವಹಿಸಬೇಕಾದುದನ್ನು ಇನ್ನೊಂದು ಅತಿಕ್ರಮಿಸಿ ಮಾಡುವುದು ಕೂಡದು’.

ಕಾನೂನು ರೂಪಿಸುವುದು ಶಾಸಕಾಂಗದ ಕಾರ್ಯವಾಗಿರುವುದರಿಂದ ಅದನ್ನು ಮಾಡುವ ನ್ಯಾಯಾಧೀಶರಿಗೆ ಇಲ್ಲ ಎಂಬುದು ‘ಯೂನಿಯನ್ ಆಫ್ ಇಂಡಿಯಾ ವರ್ಸಸ್ ದೇವಕಿನಂದನ್ ಅಗರ್‌ವಾಲ್’ ಪ್ರಕರಣದಲ್ಲಿ ಹೊರಬಿದ್ದಿರುವ ತೀರ್ಪು ಕೂಡ: ‘ನ್ಯಾಯಾಲಯಗಳಿಗೆ ಶಾಸನ ಮಾಡುವ ಅಧಿಕಾರ ನೀಡಲಾಗಿಲ್ಲ’ ಎಂದು ಮೂವರು ಸದಸ್ಯರ ಸುಪ್ರೀಂ ಪೀಠ ಈ ಸಂಬಂಧ ನಿರೀಕ್ಷಣೆ ಮಾಡಿತ್ತು. ‘ಸುರೇಶ್ ಸೇಠ್ ವರ್ಸಸ್ ಕಮಿಷನರ್, ಇಂದೋರ್ ಮುನಿಸಿಪಲ್ ಕಾರ್ಪೊರೇಶನ್’ ಪ್ರಕರಣದಲ್ಲಿ ‘ನಮ್ಮ ಸಾಂವಿಧಾನಿಕ ವ್ಯವಸ್ಥೆಯಲ್ಲಿ ಸಂಸತ್ತು ಹಾಗೂ ಶಾಸಕಾಂಗ ಸಭೆಗಳು ಕಾಯಿದೆ ಜಾರಿಗೊಳಿಸುವ ಸಾರ್ವಭೌಮ ಅಧಿಕಾರ ಹೊಂದಿವೆ’ ಎಂದು ಸುಪ್ರೀಂನ ಪೀಠ ತೀರ್ಪಿತ್ತಿತ್ತು.

‘ಕಾನೂನೊಂದು ಅದಾಗಲೇ ಅಸ್ತಿತ್ವದಲ್ಲಿದ್ದರೆ ನ್ಯಾಯಾಧೀಶರು ಅದನ್ನು ಖಂಡಿತ ಜಾರಿಗೊಳಿಸಬಹುದು, ಆದರೆ ಅವರೇ ಒಂದು ಕಾನೂನು ಸೃಷ್ಟಿಸಿ ಅದನ್ನು ಅನ್ವಯಿಸಲಾಗದು’ ಎಂದು ‘ಡಿವಿಷನಲ್ ಮ್ಯಾನೇಜರ್, ಅರಾವಳಿ ಗಾಲ್‌ಫ್ ಕೋರ್ಸ್ ವರ್ಸಸ್ ಚಂದ್ರಹಾಸ್’ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಹೇಳಿತ್ತು.

ಈ ತೀರ್ಮಾನಗಳನ್ನು ಕೆಳಗಿನ ಹಾಗೂ ಸಮಾನ ಅಧಿಕಾರದ ಪೀಠಗಳೂ (‘ಸಂತ್‌ಲಾಲ್ ಗುಪ್ತ ವರ್ಸಸ್ ಮಾಡರ್ನ್ ಕೋಆಪರೇಟಿವ್ ಹೌಸಿಂಗ್ ಸೊಸೈಟಿ’ ಪ್ರಕರಣಕ್ಕೆ ಅನ್ವಯಿಸುವ) ಪಾಲಿಸತಕ್ಕದ್ದು ಎಂಬುದು ನ್ಯಾಯಾಂಗೀಯ ಶಿಸ್ತು. ಆದರೆ ಪಾಲಿಸಲಾಗುತ್ತಿದೆಯೇ ಎಂಬುದೇ ಪ್ರಶ್ನೆ. ತತ್ಸಂಬಂಧ ಇತ್ತೀಚೆಗೆ ಸುಪ್ರೀಂಕೋರ್ಟ್ ತೆಗೆದುಕೊಂಡ ಕೆಲ ತೀರ್ಮಾನಗಳನ್ನು ಪರಿಶೀಲಿಸೋಣ:

* ‘ಅರುಣ್ ಗೋಪಾಲ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ’ ಪ್ರಕರಣದಲ್ಲಿ ಸುಪ್ರೀಂನ ದ್ವಿಸದಸ್ಯ ಪೀಠವೊಂದು ಪಟಾಕಿ ಸಿಡಿಸಲು ಗೊತ್ತಾದ ಸಮಯ ನಿಗದಿ ಪಡಿಸಿತಲ್ಲದೆ ಪರಿಸರ ಸ್ನೇಹಿಯಲ್ಲದವನ್ನು ನಿಷೇಧಿಸಿತು. ಹೀಗೆ ಮಾಡಲು ಯಾವುದೇ ಕಾನೂನು ಈ ತನಕ ಅಸ್ತಿತ್ವದಲ್ಲಿ ಇಲ್ಲ. ದೆಹಲಿಯಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯವನ್ನು ಗಮನದಲ್ಲಿಟ್ಟುಕೊಂಡು ಸುಪ್ರೀಂಕೋರ್ಟ್ ಹೀಗೆ ಮಾಡಿದೆ ಎಂದು ಅರ್ಥೈಸಬಹುದಾದರೂ, ಈ ರೀತಿಯ ಪೂರ್ವ ಪ್ರಕರಣಗಳು ಇಲ್ಲದಿರುವುದನ್ನು ಅವಗಣಿಸಿ ದ್ವಿ ಸದಸ್ಯ ಪೀಠಕ್ಕೆ ಹೀಗೆ ಮಾಡಬಹುದಿತ್ತೆ?

ಭವಿಷ್ಯದಲ್ಲಿ ವಿಕೋಪ ಉಂಟುಮಾಡಬಹುದೆಂದು ತಾನು ಪರಿಗಣಿಸುವುದನ್ನು ನ್ಯಾಯಾಲಯ, ಕಾರ್ಯಾಂಗ ಹಾಗೂ ಶಾಸಕಾಂಗಕ್ಕೆ ಎಚ್ಚರಿಕೆ ನೀಡುವ ಕೆಲಸ ಮಾಡಬಹುದೇ ಹೊರತು ಆ ಘಟಕಗಳ ಕೆಲಸವನ್ನು ತಾನೇ ಕೈಗೆತ್ತಿಕೊಳ್ಳಲು ಸಾಧ್ಯವೇ?

* ‘ಎಂಸಿ ಮೆಹ್ತಾ ವರ್ಸಸ್ ಯೂನಿಯನ್ ಆಫ್ ಇಂಡಿಯಾ’ ಪ್ರಕರಣದಲ್ಲಿಯಂತೂ ಸುಪ್ರೀಂಕೋರ್ಟ್ ಅಸ್ತಿತ್ವದಲ್ಲಿರುವ ಶಾಸನವೊಂದನ್ನು ಪ್ರಾಯೋಗಿಕವಾಗಿ ರದ್ದುಮಾಡಿತು. ಮೋಟಾರ್ ವೆಹಿಕಲ್ಸ್ ಕಾಯಿದೆಯ ನಿಯಮ 115(21)ರ ಅನ್ವಯ, 31.3.2020ರಲ್ಲಿ ಬಿಎಸ್-4 ವಾಹನಗಳನ್ನು 30.6.2020ರೊಳಗೆ ನೋಂದಣಿ ಮಾಡಲು ಅವಕಾಶವಿದೆ. ಆದರೆ ನ್ಯಾಯಾಲಯ, ಯಾವುದೇ ಬಿಎಸ್-4 ವಾಹನಗಳನ್ನು 30.3.2020 ನಂತರ ಮಾರಾಟಗೊಳಿಸಕೂಡದು. ಕೇವಲ ಬಿಎಸ್-6 ವಾಹನಗಳು ಮಾತ್ರ ಮಾರಾಟವಾಗತಕ್ಕದ್ದು ಎಂದು ಆದೇಶಿಸಿತು.

* ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಾಯಿದೆ ತಿದ್ದುಪಡಿ ಮಾಡುವ ಕೆಲಸ ‘ಸುಭಾಷ್ ಕಾಶಿನಾಥ್ ಮಹಾಜನ್ ವರ್ಸಸ್ ಸ್ಟೇಟ್ ಆಫ್ ಮಹಾರಾಷ್ಟ್ರ ಪ್ರಕರಣ’ದಲ್ಲಿ ಸುಪ್ರೀಂಕೋರ್ಟ್‌ನಿಂದ ಆಗಿದೆ. ಈ ಕಾಯಿದೆ ಉಲ್ಲಂಘನೆ ಮಾಡಿದವರಿಗೆ ನಿರೀಕ್ಷಣಾ ಜಾಮೀನು ನೀಡಕೂಡದು ಎಂದು ಸೆಕ್ಷನ್ 18ನ್ನು ರದ್ದುಗೊಳಿಸುವಿಕೆ ಇದರಿಂದ ಆಗಿದೆ. ‘ಅದಕ್ಕಾಗಿ ಒಂದು ಪ್ರಾಥಮಿಕ ತನಿಖೆ ನಡೆಯಬೇಕು ಹಾಗೂ ಕಾಯಿದೆ ಅನ್ವಯ ತಕ್ಷಣ ಆಪಾದಿತರನ್ನು ಬಂಧಿಸಬಾರದು, ಸರಕಾರಿ ನೌಕರರಾಗಿದ್ದ ಪಕ್ಷದಲ್ಲಿ ಅವರ ಮೇಲಧಿಕಾರಿಯಿಂದ ಲಿಖಿತ ಅನುಮತಿ ಪಡೆದು, ಹಾಗೂ ಇತರರಾಗಿದ್ದರೆ ಹಿರಿಯ ಪೊಲೀಸ್ ಅಧೀಕ್ಷಕರ ಅನುಮತಿ ಪಡೆದು ಬಂಧಿಸಲು ಮಾತ್ರ ಅವಕಾಶವಿದೆ’ ಎಂಬ ತಿದ್ದುಪಡಿಗಳು ಎಸ್‌ಸಿ/ಎಸ್‌ಟಿ ಆ್ಯಕ್‌ಟ್ ದುರುಪಯೋಗವಾಗಬಹುದು ಎಂಬ ಕುರಿತು ಸುಪ್ರೀಂ ತಳೆದ ಮುನ್ನೆಚ್ಚರಿಕೆಯ ನಿಲುವೇ ಆಗಿರಬಹುದು, ಆದರೆ ಈ ಎಲ್ಲವನ್ನೂ ಸಂಸತ್ತಿಗೆ ಶಿಫಾರಸು ಮಾಡಬಹುದೇ ಹೊರತು ತಾನೇ ಮುಂದುವರಿಯಬಾರದು.

* ಮತ್ತೊಂದು ಪ್ರಕರಣದಲ್ಲಿ (ರಾಜೇಶ್ ಶರ್ಮ ವರ್ಸಸ್ ಉತ್ತರ್ ಪ್ರದೇಶ್) ಸುಪ್ರೀಂಕೋರ್ಟ್‌ನ ದ್ವಿ ಸದಸ್ಯ ನ್ಯಾಯಪೀಠ ದಂಡಸಂಹಿತೆಯ ಸೆಕ್ಷನ್ 498ಅ ದುರುಪಯೋಗವಾಗುತ್ತಿದೆ ಎಂದು ಭಾವಿಸಿದ ಸುಪ್ರೀಂಕೋರ್ಟ್‌ನ ದ್ವಿ ಸದಸ್ಯ ನ್ಯಾಯಪೀಠ ಅದರಲ್ಲಿ ಕೆಲ ತಿದ್ದುಪಡಿ ತಂದಿತು. ಕಾನೂನಿನಲ್ಲಿ ಅಗತ್ಯ ಇಲ್ಲದಿದ್ದರೂ ಈ ಕುರಿತ ದೂರುಗಳನ್ನು ಪೊಲೀಸ್ ಅಥವಾ ಮ್ಯಾಜಿಸ್ಟ್ರೇಟ್, ಜಿಲ್ಲಾ ನ್ಯಾಯಾಂಗ ಸೇವೆ ಪ್ರಾಧಿಕಾರ ರಚಿಸಿರುವ ಕುಟುಂಬ ಕಲ್ಯಾಣ ಸಮಿತಿಗೆ ಎಂದು ಪೀಠ ಹೇಳಿತು.

ಇದನ್ನು ನಂತರ ಮೂವರು ನ್ಯಾಯಾಧೀಶರ ಪೀಠವೊಂದು ತಳ್ಳಿಹಾಕಿತು. ‘ನ್ಯಾಯಧರ್ ವರ್ಸಸ್ ಯೂನಿಯನ್ ಆಫ್ ಇಂಡಿಯ’ ಪ್ರಕರಣದಲ್ಲಿ ಹೀಗಾಯಿತು. ಆದರೆ ಹಳೆಯ ಪೀಠ ನೀಡಿದ್ದ ಉಳಿದ ಆದೇಶಗಳನ್ನು ಹಾಗೇ ಉಳಿಸಿಕೊಳ್ಳಲಾಗಿದೆ.

* ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ 15ವರ್ಷಕ್ಕಿಂತಲೂ ಹೆಚ್ಚು ಹಳೆಯದಾದ ಪೆಟ್ರೋಲ್‌ಚಾಲಿತ ವಾಹನಗಳು ಹಾಗೂ 10ವರ್ಷಕ್ಕಿಂತ ಹಳೆಯದಾದ ಡೀಸೆಲ್‌ಚಾಲಿತ ವಾಹನಗಳು ರಸ್ತೆಗಳಲ್ಲಿ ಸಂಚರಿಸಲು ಯೋಗ್ಯವಲ್ಲ ಎಂದು ಆದೇಶಿಸಿದಾಗ ಸುಪ್ರೀಂ ಕೋರ್ಟ್ ಅದನ್ನು ಅನುಮೋದಿಸಿತು. ಆದರೆ ಗ್ರೀನ್ ಆಗಲಿ, ನ್ಯಾಯಾಲಯವಾಗಲಿ ಶಾಸಕಾಂಗದ ಅಂಗಸಂಸ್ಥೆಗಳಲ್ಲ.

ಸುಪ್ರೀಂಕೋರ್ಟ್‌ನ ಕಡೆಯ ಪಕ್ಷ ಏಳು ನ್ಯಾಯಮೂರ್ತಿಗಳನ್ನೊಳಗೊಂಡ ನ್ಯಾಯಪೀಠವನ್ನು ಮುಖ್ಯ ನ್ಯಾಯಮೂರ್ತಿ ಈ ಸಂಬಂಧ ರಚಿಸಬೇಕು ಎಂದು ನಾನು ಬಯಸುತ್ತೇನೆ. ನ್ಯಾಯಾಧೀಶರು ಅವರು ಬಯಸಿದ ಕಾನೂನು ಮಾಡಲು ಮುಕ್ತರಾದರೆ ಮೂರು ಘಟಕಗಳಲ್ಲಿ ಅಧಿಕಾರವನ್ನು ಪ್ರತ್ಯೇಕಿಸು ಪ್ರಮೇಯ ಎಲ್ಲಿ? ಹಾಗೂ ಇದು ಕಾನೂನುಗಳಲ್ಲಿ ಖಚಿತತೆ ಇಲ್ಲದೆ ಗೊಂದಲದ ವಾತಾವರಣ ನಿರ್ಮಿಸಬಹುದು.

ಅಮೆರಿಕದ ಹೆಸರಾಂತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಹ್ಯೂಗೊ ಬ್ಲಾಕ್ ‘ಗ್ರಿಸ್‌ವಾಲ್ಡ್ ವರ್ಸಸ್ ಕನೆಕ್ಟಿಕಟ್ ಪ್ರಕರಣ’ದಲ್ಲಿ ನಿಯಂತ್ರಣಕ್ಕೊಳಪಡದೆ ನ್ಯಾಯಾಂಗದ ‘ಸೃಷ್ಟಿಶೀಲ’ ಚಟುವಟಿಕೆ, ಕೋರ್ಟ್ ಹಾಲ್‌ನಲ್ಲಿ ದಿನಕ್ಕೊಂದ ಸಾಂವಿಧಾನಿಕ ಸಂಪ್ರದಾಯ ರೂಪಿತವಾಗುವ ಪ್ರಸಂಗ ಉಂಟುಮಾಡಬಹುದು. ಮತ್ತೊಬ್ಬ ವಿಖ್ಯಾತ ನ್ಯಾಯಮೂರ್ತಿ ಜಸ್ಟೀಸ್ ಕಾರ್ಡೋಜ್ ತನ್ನ ‘ದಿ ನೇಚರ್ ಆಫ್ ದಿ ಜ್ಯುಡಿಷಿಯಲ್ ಪ್ರೋಸೆಸ್’ ಪುಸ್ತಕದಲ್ಲಿ ಹೀಗೆ ಬರೆಯುತ್ತಾರೆ: ‘ ನ್ಯಾಯಾಧೀಶನೆಂದರೆ ತನ್ನದೇ ಮಾನದಂಡಗಳನ್ನಾಧರಿಸಿದ ‘ಆದರ್ಶ ಸೌಂದರ್ಯ ಹಾಗೂ ಒಳಿತಿನ’ ಬೆಂಬತ್ತಿ ಹೋಗುವ ಸರದಾರನಲ್ಲ.

Tags

Related Articles

Leave a Reply

Your email address will not be published. Required fields are marked *

Language
Close