ಮಡಕೆ ಒಡೆದರೇನು, ಒಡೆಯನ ಕಂಡೆ !

Posted In : ಕ್ಷಣಹೊತ್ತು ಅಣಿ ಮುತ್ತು

ಗಣೇಶಪುರಿಯ ಸ್ವಾಮಿ ಮುಕ್ತಾನಂದರು ತಮ್ಮ ಉಪನ್ಯಾಸವೊಂದರಲ್ಲಿ ಹೇಳಿದ್ದ ಕತೆಯೊಂದು ಇಲ್ಲಿದೆ. ಹರಿದ್ವಾರದಲ್ಲಿ, ದಡದಲ್ಲಿ, ಒಬ್ಬ ಅಜ್ಜ ಇರುತ್ತಿದ್ದರು. ತಮ್ಮೂರು ಬಿಟ್ಟು ಹಿಮಾಲಯಕ್ಕೆ ಬಂದಿದ್ದರು. ಸಣ್ಣದೊಂದು ಕುಟೀರ, ಒಂದು ಕಂಬಳಿ, ಎರಡು ಮಡಕೆ ಇಷ್ಟೇ ಅವರ ಆಸ್ತಿ. ಬದುಕಿನ ಕೊನೆಗಾಲದಲ್ಲಿ ಏಕಾಂತದಲ್ಲಿದ್ದು ದೇವರ ದರ್ಶನ ಪಡೆಯಬೇಕೆಂಬ ಹಂಬಲ. ಪ್ರತಿದಿನ ಗಂಗಾಸ್ನಾನ, ಒಂದಷ್ಟು ಅರ್ಚನ-ಧ್ಯಾನ-ಅಧ್ಯಯನ ಮಾಡುತ್ತಿದ್ದರು. ಕುಟೀರದ ಬಳಿಯಿದ್ದ ಒಂದು ದೊಡ್ಡ ಆಶ್ರಮದವರು ಸಾಧು-ಸನ್ಯಾಸಿಗಳಿಗೆ ಉಚಿತ ಊಟ ಕೊಡುತ್ತಿದ್ದುದರಿಂದ ಅಜ್ಜನವರಿಗೆ ಊಟಕ್ಕೆ ಪರದಾಟವಿರಲಿಲ್ಲ.  ಅಲ್ಲಿಗೆ ಬಂದು ಹಲವಾರು ವರ್ಷಗಳೇ ಕಳೆದಿದ್ದರೂ ಅವರಿಗೆ ದೇವರ ದರ್ಶನ ಒಂದು ಮಧ್ಯಾಹ್ನ ಅವರು ಎರಡೂ ಮಡಕೆಗಳಲ್ಲಿ ನೀರು ತುಂಬಿಸಿಕೊಂಡು ಎರಡೂ ಕೈಯಲ್ಲಿ ಹಿಡಿದು ಕುಟೀರದತ್ತ ಬರುತ್ತಿದ್ದರು.

ಆಕಾಶದಲ್ಲಿ ಪ್ರಜ್ವಲಿಸುತ್ತಿದ್ದ ಸೂರ್ಯನ ಸುಡುಬಿಸಿಲಿತ್ತು. ಅದು ಹಿಮಾಲಯದ ಚಳಿಯಲ್ಲಿ ಸಹನೀಯವಾಗಿತ್ತು. ಅಜ್ಜನವರು ಪ್ರಜ್ವಲಿಸುವ ಸೂರ್ಯನನ್ನು ಕಣ್ಣು ಕಿರಿದಾಗಿಸಿ ನೋಡುತ್ತ ಬರುತ್ತಿದ್ದರು. ಹಾದಿಯಲ್ಲಿದ್ದ ಕಲ್ಲು ತಾಗಿ ಎಡವಿದರು. ಕೆಳಕ್ಕೆ ಬಿದ್ದುಬಿಟ್ಟರು. ಬಿದ್ದಾಗ ಅವರ ಕೈಯ್ಯಲ್ಲಿದ್ದ ಎರಡೂ ಮಡಕೆಗಳು ಒಡೆದು ಹೋದವು. ನೀರೆಲ್ಲ ಚೆಲ್ಲಿಹೋಯಿತು. ಅವರ ಬಳಿ ಇದ್ದದ್ದೇ ಎರಡು ಮಡಕೆಗಳು. ಎರಡೂ ಒಡೆದು ಮಡಕೆಗಳು ಹತ್ತಾರು ಚೂರುಗಳಾಗಿದ್ದವು. ಪ್ರತಿಯೊಂದು ಚೂರಿನಲ್ಲೂ ಕೊಂಚ ಕೊಂಚ ನೀರಿತ್ತು.

ಆ ನೀರಿನಲ್ಲಿ ಸೂರ್ಯನ ಬಿಂಬಗಳು ಕಾಣುತ್ತಿದ್ದವು. ಅರೆ! ಕೈಗೆಟುಕದಷ್ಟು ದೂರದಲ್ಲಿರುವ ಆಗಸದಲ್ಲಿ ಒಬ್ಬನೇ ಸೂರ್ಯ, ನೆಲದ ಮೇಲೆ ನೂರಾರು ಸೂರ್ಯರು ಎನಿಸಿತು. ಅವರಿಗೆ ಧಿಗ್ಗೆಂದು ಏನೋ ತೋಚಿದಂತಾಯಿತು. ತಮ್ಮಲ್ಲಿದ್ದ ಎರಡೇ ಮಡಕೆಗಳು ಒಡೆದು ಹೋದದ್ದನ್ನೂ ಅಜ್ಜ ಮರೆತರು. ಕುಟೀರವನ್ನು ಮರೆತರು. ಗಂಗಾನದಿಯನ್ನೂ ಮರೆತರು. ಎಲ್ಲವನ್ನೂ ಮರೆತರು. ಅವರ ಮನಸ್ಸಿನ ತುಂಬ ‘ಆಕಾಶದಲ್ಲಿರುವ ಒಬ್ಬನೇ ಸೂರ್ಯ ಕೆಳಗಿನ ನೆಲದ ಬಿದ್ದಿರುವ ಹತ್ತಾರು ಮಡಕೆ ಚೂರುಗಳಲ್ಲಿದ್ದಾನೆ. ಆ ಸೂರ್ಯನನ್ನು ಮುಟ್ಟಲೂ ಸಾಧ್ಯವಿಲ್ಲ. ಕೆಳಗೆ ಮಡಕೆಯ ಚೂರುಗಳಲ್ಲಿರುವ ನೀರಿನಲ್ಲಿ ಕಾಣಿಸುತ್ತಿರುವ ಸೂರ್ಯನನ್ನು ನೋಡುವುದಷ್ಟೇ ಅಲ್ಲ, ಬೇಕಾದರೆ ಮುಟ್ಟಲೂಬಹುದು’ ಎನಿಸಿತು. ಏನೋ ಆನಂದವಾಯಿತು. ಅಜ್ಜ ಎದ್ದು ಕುಟೀರಕ್ಕೆ ಹೋದರು.

ಅಂದು ಮಧ್ಯಾಹ್ನ ದೊಡ್ಡ ಆಶ್ರಮಕ್ಕೆ ಉಚಿತ ಊಟಕ್ಕಾಗಿ ಹೋದಾಗಲೂ ಅದೇ ಗುಂಗಿನಲ್ಲಿ ಆನಂದವಾಗಿದ್ದರು. ಯಾವುದೋ ಹಾಡನ್ನು ತಮ್ಮದೇ ರಾಗದಲ್ಲಿ ಗುನುಗುನಿಸುತ್ತಿದ್ದರು. ಅವರ ಆನಂದವನ್ನು ಕಂಡು ಆಶ್ಚರ್ಯಗೊಂಡ ಸಾಧುವೊಬ್ಬರು ಏನಜ್ಜಾ ಇಷ್ಟೊಂದು ಆನಂದವಾಗಿದ್ದೀರಲ್ಲ? ಎಂದು ಅಜ್ಜ ನನ್ನಲ್ಲಿದ್ದ ಎರಡು ಮಡಕೆಗಳು ಒಡೆದು ಹೋದವು ಎಂದು ಜೋರಾಗಿ ನಕ್ಕರು. ಸಾಧು ನಿಮ್ಮಲ್ಲಿದ್ದ ಮಡಕೆಗಳು ಒಡೆದು ಹೋಗಿದ್ದರೆ ಕೊರಗುವ ಬದಲು ಜೋರಾಗಿ ನಗುತ್ತಿದ್ದೀರಲ್ಲ? ಎಂದು ಕೇಳಿದರು. ಅಜ್ಜ ಮಡಕೆ ಒಡೆದು ಹೋಯಿತು. ಆದರೆ ಒಡೆಯನ ದರ್ಶನವಾಯಿತು ಎಂದು ಮತ್ತೂ ಜೋರಾಗಿ ನಕ್ಕರು. ಮಡಕೆ ಒಡೆಯುವುದಕ್ಕೂ, ಒಡೆಯನ ಅಂದರೆ ದೇವರ ದರ್ಶನವಾಗುವುದಕ್ಕೂ ಇರುವ ಸಂಬಂಧ ಮತ್ತೊಬ್ಬ ಸಾಧುವಿಗೆ ಅರ್ಥವಾಗಲಿಲ್ಲ!

ಮರುದಿನ ಅಜ್ಜನನ್ನು ಮತ್ತೊಬ್ಬ ಸಾಧಕರು ಭೇಟಿಯಾದರು. ಆ ಸಾಧಕರೂ ಕಾಣುವುದಕ್ಕಾಗಿ ಹಿಮಾಲಯಕ್ಕೆ ಬಂದಿದ್ದರಂತೆ. ಅಜ್ಜನವರು ತಕ್ಷಣ ತಮ್ಮ ಕುಟೀರವನ್ನು ಉಚಿತವಾಗಿ ಆ ಸಾಧಕರಿಗೆ ಕೊಟ್ಟುಬಿಟ್ಟರು. ಅದೇ ದಿನ ಅಜ್ಜನವರು ತಮ್ಮೂರಿಗೆ ಹಿಂತಿರುಗಿದರಂತೆ. ಊರಿನಲ್ಲಿ ಯಾರಾದರೂ ಹಿಮಾಲಯದಲ್ಲಿ ದೇವರನ್ನು ಕಂಡಿರಾ ಎಂದು ಕೇಳಿದರೆ, ಹಿಮಾಲಯದಲ್ಲಿ ಇರುವ ದೇವರು, ನಮ್ಮೂರಿನಲ್ಲೂ ಇದ್ದಾನೆ ಕಣ್ರಯ್ಯಾ ಎನ್ನುತ್ತಿದ್ದರಂತೆ.  ಸ್ವಾಮೀಜಿಯವರ ಪ್ರಕಾರ ನಮ್ಮ ಕೈಗೆಟುಕುವಷ್ಟು ಅಥವಾ ಕೈಗೆಟುಕದಷ್ಟು ಎತ್ತರದಲ್ಲಿ, ಪರ್ವತಗಳಲ್ಲೋ, ಆಕಾಶದಲ್ಲೋ, ಎಲ್ಲೋ ಇದ್ದಾನೆಂದು ಭಾವಿಸಿ ದೇವರನ್ನು ಹುಡುಕುವ ಬದಲು, ಆ ದೇವರು ನಮ್ಮ ಸುತ್ತಮುತ್ತಲೇ ಅರಿತುಕೊಳ್ಳುವುದೇ ದೈವ ಸಾಕ್ಷಾತ್ಕಾರ! ನೀವೇನೆನ್ನುತ್ತೀರಿ?

Leave a Reply

Your email address will not be published. Required fields are marked *

five + 1 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top