ನೂರು ಜನಕ್ಕೆ ಊಟ ಕೊಡಲಾಗದಿದ್ದರೆ ಮೂರು ಜನಕ್ಕೆ ಕೊಡಿ!

Posted In : ಕ್ಷಣಹೊತ್ತು ಅಣಿ ಮುತ್ತು

ಇಲ್ಲೊಂದು ಹೃದಯಸ್ಪರ್ಶಿ ಘಟನೆಯಿದೆ. ಯಶಸ್ವೀ ಉದ್ಯಮಿಯೊಬ್ಬರು ಯಾವುದೋ ಒಂದು ಹೇಳಿದ ಘಟನೆ. ಅವರಿಗೆ ಹದಿನೈದು ವರ್ಷ ವಯಸ್ಸಾಗಿದ್ದಾಗ ಕಾಶಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರಂತೆ. ಅಲ್ಲಿ ಉದ್ಯೋಗದಲ್ಲಿದ್ದ ಅವರ ತಂದೆಯವರು ಪ್ರತಿವರ್ಷ ತಾತನವರ ತಿಥಿಯನ್ನು ಶಾಸ್ತ್ರಾನುಸಾರವಾಗಿ ಮಾಡುತ್ತಿದ್ದರು. ಅಂದು ಅವರ ಆಫೀಸಿನಲ್ಲೇ ಕೆಲಸ ಮಾಡುತ್ತಿದ್ದ ಮೂವರು ಬ್ರಾಹ್ಮಣರನ್ನು ಕರೆದು ಅವರಿಗೆ ಭೋಜನವನ್ನು ನೀಡುತ್ತಿದ್ದರು. ಇದು ಅನೇಕ ವರ್ಷಗಳಿಂದ ಅವರ ಮನೆಯಲ್ಲಿ ನಡೆಯುತ್ತಿದ್ದ ಸಂಪ್ರದಾಯ.

ಅಂತಹದ್ದೇ ಒಂದು ದಿನ ತಂದೆಯವರು ಮಗನನ್ನು ಕರೆದು ನನ್ನ ತಂದೆಯವರು ಸಾಯುವ ಮುಂಚೆ ಅವರ ತಿಥಿಯ ದಿನ ಮೂವರಿಗೆ ಊಟ ಹಾಕಿಸಬೇಕೆಂದು ತಿಳಿಸಿದ್ದರು. ಅದನ್ನು ಹತ್ತಾರು ವರ್ಷಗಳಿಂದ ಪಾಲಿಸಿಕೊಂಡು ಬರುತ್ತಿದ್ದೇನೆ. ಆದರೆ ಪ್ರತಿವರ್ಷ ಬರುವ ಆ ಮೂವರು ಇಂದು ಊಟಕ್ಕೆ ಬರಲಾಗುವುದಿಲ್ಲವೆಂದು ಈಗಷ್ಟೆ ಸುದ್ದಿ ಕಳುಹಿಸಿದ್ದಾರೆ. ಈಗ ಹೊಸಬರನ್ನು ಹುಡುಕಿಕೊಂಡು ಬರುವುದು ಕಷ್ಟವಾಗುತ್ತದೆ. ನಾನು ಮೂವರಿಗಾಗುವಷ್ಟು ಊಟವನ್ನು ಡಬ್ಬಿಗೆ ಹಾಕಿ ಕೊಡುತ್ತೇನೆ. ನೀನದನ್ನು ತೆಗೆದುಕೊಂಡು ಗಂಗಾನದಿಯ ತೀರಕ್ಕೆ ಹೋಗು. ಅಲ್ಲಿ ಯಾರಾದರೂ ಮೂವರಿಗೆ ಊಟವನ್ನು ಬಡಿಸಿ ಬಾ ಎಂದು ಹೇಳಿ ಕಳುಹಿಸಿದರು.

ಆದರೆ ಮಗ ಗಂಗಾನದೀತೀರಕ್ಕೆ ಹೋದಾಗ ಒಬ್ಬಿಬ್ಬರಲ್ಲ, ನೂರಾರು ಜನ ಕುಳಿತಿದ್ದರು. ಎಲ್ಲರೂ ಹಸಿದವರಂತೆ ಕಾಣುತ್ತಿದ್ದರು. ಕೆಲವರಂತೂ ‘ನಾವು ಊಟ ಮಾಡಿ ಮೂರು-ನಾಲ್ಕು ದಿನಗಳಾದವು. ನಮಗೇ ಊಟ ಬಡಿಸಿ’ ಎಂದು ಗೋಗರೆದರು. ಅವರ ಬಳಿಯಿದ್ದದ್ದು ಮೂವರಿಗಾಗುವಷ್ಟು ಊಟ. ಅದನ್ನು ಅಷ್ಟೊಂದು ಜನರಿಗೆ ಹೇಗೆ ಬಡಿಸುವುದೆಂದು ಅವರಿಗೆ ಗೊತ್ತಾಗಲಿಲ್ಲ. ಅಷ್ಟೂ ಜನರಿಗೆ ಊಟ ಬಡಿಸುವಷ್ಟು ಭೋಜನ ಸಾಮಗ್ರಿ ಅವರ ಡಬ್ಬಿಗಳಲ್ಲಿರಲಿಲ್ಲ. ಊಟ ಬೇಡುವವರ ದುಃಸ್ಥಿತಿಯನ್ನೂ, ತಮ್ಮ ಅಸಹಾಯಕತೆಯನ್ನೂ ನೋಡಿ ತುಂಬ ದುಃಖವಾಯಿತು. ಅಲ್ಲಿ ಅಷ್ಟೊಂದು ಜನ ಹಸಿವಿನಿಂದ ಮೂವರಿಗೆ ಮಾತ್ರ ಊಟ ಬಡಿಸುವುದು, ಆನಂತರ ಮನೆಗೆ ಹೋಗಿ, ತಾವು ಚೆನ್ನಾಗಿ ಊಟ ಮಾಡುವುದು ಏಕೋ ಅವರಿಗೆ ಸರಿ ತೋರಲಿಲ್ಲ. ಅವರು ಅಲ್ಲಿಯೇ ಸುಮ್ಮನೆ ಕುಳಿತುಬಿಟ್ಟರು.

ಬಹಳ ಹೊತ್ತಿನ ನಂತರ ಅವರ ತಂದೆಯವರೇ ಅವರನ್ನು ಹುಡುಕಿಕೊಂಡು ಅಲ್ಲಿಗೆ ಬಂದರು. ಏನಾಯಿತೆಂದು ಕೇಳಿದರು. ಅವರು ತಂದೆಯವರಿಗೆ ಸಮಸ್ಯೆಯನ್ನು ಹೇಳಿಕೊಂಡು ಅತ್ತುಬಿಟ್ಟರು. ತಂದೆಯವರು ಅಳಬೇಡವೆಂದು ಸಮಾಧಾನ ಪಡಿಸಿದರು. ಅಲ್ಲಿದ್ದ ನೂರಾರು ಜನರ ಪೈಕಿ ಮೂವರು ವಯೋವೃದ್ಧರನ್ನು ಆಯ್ದು, ಅವರನ್ನು ಒಂದು ಮೂಲೆಗೆ ಹೋಗಿ ಕೂರಿಸಿದರು. ಅವರಿಗೆ ಊಟವನ್ನು ಬಡಿಸಿದರು. ಆ ಮೂವರೂ ಸಂತೃಪ್ತಿಯಿಂದ ಉಂಡರು. ತಂದೆ-ಮಕ್ಕಳನ್ನು ಆಶೀರ್ವದಿಸಿದರು.

ಇದೆಲ್ಲವನ್ನು ನೋಡುತ್ತ ನಿಂತಿದ್ದ ಮಗನಿಗೆ ತಂದೆಯವರು ಇಲ್ಲಿರುವ ನೂರಾರು ಜನಕ್ಕೆ ಊಟ ಕೊಡಲಾಗದಿದ್ದರೆ, ಮೂವರಿಗಾದರೂ ಕೊಡಬಹುದಲ್ಲವೇ? ಪ್ರಾಮಾಣಿಕ ಪ್ರಯತ್ನವಿದ್ದರೆ, ಅದು ಎಷ್ಟೇ ಚಿಕ್ಕದಾಗಿರಲಿ, ಕೈಗೆತ್ತಿಕೊಂಡ ಕಾರ್ಯದ ಫಲ ಸಿಕ್ಕೇ ಸಿಗುತ್ತದೆ! ಎಂದು ವಿವರಿಸಿದರು.  ಈ ಪ್ರಸಂಗ ನಡೆದು ದಶಕಗಳೇ ಕಳೆದಿದ್ದರೂ, ಆ ಉದ್ಯಮಿ ಅದನ್ನೂ, ತಂದೆಯವರ ಮಾತು ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನವಿದ್ದರೆ, ಎಷ್ಟೇ ಚಿಕ್ಕದಿರಲಿ, ಫಲ ಸಿಕ್ಕೇ ಸಿಗುತ್ತದೆ ಎಂಬುದನ್ನೂ ಮರೆತಿಲ್ಲ.

ನಾವು ನೀವು ಇರುವ ಜಗತ್ತಿನಲ್ಲಿ ಸಮಸ್ಯೆಗಳ ಕೊರತೆ ಇಲ್ಲ. ಆದರೆ ಎಲ್ಲಾ ಸಮಸ್ಯೆಗಳನ್ನು ಒಮ್ಮೆಲೇ ನಿವಾರಿಸಲಾಗುವುದಿಲ್ಲ. ಸಮಸ್ಯೆಗಳ ಬೃಹದಾಕಾರವನ್ನು ನೋಡಿ ಹೆದರಿ ಸುಮ್ಮನೆ ಕುಳಿತರೂ ಫಲ ಸಿಕ್ಕುವುದಿಲ್ಲ. ನಮಗೆಷ್ಟು ಸಾಧ್ಯವೋ ಅಷ್ಟನ್ನಾದರೂ ನಾವು ಪರಿಹರಿಸಲು ಪ್ರಯತ್ನಿಸಬೇಕಲ್ಲವೇ? ಎಲ್ಲರೂ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಾ ಹೋದರೆ, ಸಮಸ್ಯೆಗಳ ಗಾತ್ರ ಅಷ್ಟರ ಮಟ್ಟಿಗಾದರೂ ಕಿರಿದಾಗುತ್ತಾ ಹೋಗುತ್ತದಲ್ಲವೇ?

Leave a Reply

Your email address will not be published. Required fields are marked *

seventeen + fourteen =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top