ಒಳ್ಳೆಯದನ್ನು ಒಪ್ಪಿಕೊಳ್ಳುವ ಬುದ್ಧಿ ನಮಗೇಕಿಲ್ಲ?

Posted In : ಸಂಗಮ, ಸಂಪುಟ

ದೀಪಾವಳಿ ಸಂದರ್ಭದಲ್ಲಿ ಆಗುವ ವಾಯು ಮಾಲಿನ್ಯವನ್ನು ತಡೆಗಟ್ಟಲು ಸುಪ್ರೀಂ ಕೋರ್ಟ್ ದೆಹಲಿಯಲ್ಲಿ ಪಟಾಕಿ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಎರಡು ವರ್ಷದ ಹಿಂದೆಯೇ ಪಟಾಕಿಗಳನ್ನು ನಿಷೇಧಿಸಬೇಕು ಎಂದು ಸರ್ವೋಚ್ಛ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಅಂದು ನ್ಯಾಯಾಲಯ’ ದೀಪಾವಳಿಗೂ ಪಟಾಕಿಗಳಿಗೂ ಅವಿನಾಭಾವ ಸಂಬಂಧವಿದೆ, ಪಟಾಕಿಯನ್ನು ನಿಷೇಧಿಸುವ ಬದಲು ಪಟಾಕಿಯಿಂದ ಏನೇನು ತೊಂದರೆಗಳಾಗುತ್ತವೆ, ವಾತಾವರಣ ಎಷ್ಟು ಕಲುಷಿತಗೊಳ್ಳುತ್ತಿದೆ ಎಂಬುದನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಿ ಕೊಡಬೇಕು’ ತೀರ್ಪು ನೀಡಿತ್ತು. ಆದರೀಗ ಅರ್ಜಿಯನ್ನು ವಿಚಾರಣೆ ನಡೆಸುತ್ತಿದ್ದ ನ್ಯಾಯಾಲಯ, ಪಟಾಕಿಗಳ ಮಾರಾಟವನ್ನು ನಿಷೇಧಿಸಿದೆ.

ನವೆಂಬರ್ ಒಂದರವರೆಗೆ ನಿಷೇಧ ಜಾರಿಯಲ್ಲಿರಲಿದೆ. ಇದನ್ನು ಮೀರಿ ಪಟಾಕಿಗಳನ್ನು ಮಾರಾಟ ಮಾಡಿದವರ ಪರವಾನಗಿ ರದ್ದುಗೊಳಿಸಿ, ದಂಡ ವಿಧಿಸಲಾಗುತ್ತದೆ. ಪಟಾಕಿಗಳಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್ 2016ರ ನವೆಂಬರ್‌ನಲ್ಲಿ ಪಟಾಕಿ ಹಾಗೂ ಸುಡುಮದ್ದುಗಳ ಮಾರಾಟ ನಿಷೇಧಿಸಿತ್ತು. ಆದರೆ ಈ ಆದೇಶವನ್ನು ಹಿಂಪಡೆಯುವಂತೆ ಸುಡುಮದ್ದು ಮಾರಾಟಗಾರರ ಸಂಘ ಅರ್ಜಿ ಸಲ್ಲಿಸಿತ್ತು. ಕಳೆದ ಸೆ.12ರಂದು ಸುಡುಮದ್ದು ಹಾಗೂ ಪಟಾಕಿ ಮೇಲಿನ ನಿಷೇಧವನ್ನು ಸುಪ್ರೀಂ ಕೋರ್ಟ್ ತಾತ್ಕಾಲಿಕವಾಗಿ ಸಡಿಲಿಸಿತ್ತು. 500 ಮಾರಾಟಗಾರರಿಗೆ ಮಾತ್ರ ಪರವಾನಗಿ ನೀಡುವಂತೆ ಆದೇಶ ಮಾಡಿತ್ತು.

ಸುಪ್ರೀಂ ಕೋರ್ಟ್‌ನ ತೀರ್ಪಿಗೆ ಎಷ್ಟು ಮಂದಿ ಸಹಮತ ನೀಡಿದ್ದಾರೋ ಅಷ್ಟೇ ಸಂಖ್ಯೆಯಲ್ಲಿ ವಿರೋಧಗಳೂ ವ್ಯಕ್ತವಾಗಿವೆ. ಯಾವ ಆದೇಶವಾದರೂ ಇರಲಿ ಪಟಾಕಿಯನ್ನು ಹೊಡೆಯದೇ ದೀಪಾವಳಿಯನ್ನು ಆಚರಿಸಲು ಸಾಧ್ಯವಿಲ್ಲ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿವೆ. ಈ ಚರ್ಚೆಯ ತೀವ್ರತೆ ಹೆಚ್ಚಾಗಲು ಮುಖ್ಯ ಕಾರಣ ಸುಪ್ರೀಂ ಕೋರ್ಟ್ ತೀರ್ಪಿಗೆ ಧರ್ಮದ ಬಣ್ಣ ಬಳಿಯುತ್ತಿರುವುದು. ಕೇವಲ ಹಿಂದೂ ಹಬ್ಬಗಳ ಮೇಲೇಕೆ ನಿಷೇಧ? ಎಂಬುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ವಾಯು ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲೇ ಈ ತೀರ್ಪನ್ನು ನೀಡಿದ್ದರೆ, ದೆಹಲಿಯಲ್ಲಿರುವ ವಾಹನ ದಟ್ಟಣೆ, ಅದರಿಂದಾಗುವ ಮಾಲಿನ್ಯವನ್ನೇಕೆ ಇವರು ತಡೆಗಟ್ಟುತ್ತಿಲ್ಲ? ಅಲ್ಲದೇ ದೆಹಲಿಯ ಎಷ್ಟೋ ಕಟ್ಟಡ, ಕಾರ್ಖಾನೆಗಳು ಹೊರ ಸೂಸುವ ಮಾಲಿನ್ಯಕಾರಕಗಳು ನಮ್ಮ ಆರೋಗ್ಯಕ್ಕೆ ಪೂರಕ ಎಂದು ಇವರೇನಾದರೂ ತಿಳಿದುಕೊಂಡಿದ್ದಾರೆಯೇ ಎಂಬ ಮಾತೂ ಕೇಳಿ ಬರುತ್ತಿದೆ.

‘ಸಂಭ್ರಮಾಚರಣೆಗೂ ಮಾಲಿನ್ಯಕ್ಕೂ ಸಂಬಂಧ ಕಲ್ಪಿಸಬೇಡಿ, ಬಕ್ರೀದ್ ದಿನದಂದು ಕುರಿಗಳನ್ನು ಕಡಿಯುವುದನ್ನು ಬ್ಯಾನ್ ಮಾಡುವ ಗಟ್ಟಿತನ ಸುಪ್ರೀಂ ತೋರಲಿದೆಯಾ?’, ‘1667ರಲ್ಲಿ ಔರಂಗಜೇಬ್ ಪಟಾಕಿಯನ್ನು ಬ್ಯಾನ್ ಮಾಡಿದ್ದ, 2017ರಲ್ಲಿ ಮತ್ತೆ ಔರಂಗಜೇಬ್ ಈಸ್ ಬ್ಯಾಕ್’ ಎಂಬ ಟ್ವೀಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಸಾಲದ್ದಕ್ಕೆ ಲೇಖಕ ಚೇತನ್ ಭಗತ್ ಕೂಡ ‘ಪಟಾಕಿಗಳನ್ನು ಬ್ಯಾನ್ ಮಾಡುವ ಅಗತ್ಯ ಏನಿತ್ತು? ಪಟಾಕಿಗಳಿಲ್ಲದ ದೀಪಾವಳಿಯನ್ನು ಸಂಭ್ರಮಿಸಲು ಸಾಧ್ಯವಿಲ್ಲ. ಮೊಹರಮ್‌ನಲ್ಲಿ ಕುರಿಗಳನ್ನು ಕಡಿಯುವುದಕ್ಕೇಕೆ ನಿಷೇಧವಿಲ್ಲ’ ಎಂದು ಪ್ರಶ್ನಿಸಿದ್ದಾರೆ. ಕ್ರಿಸ್‌ಮಸ್ ಟ್ರೀ ಇಲ್ಲದೇ ಕ್ರಿಸ್‌ಮಸ್ ಮಾಡಲಾದೀತೇ? ಪಟಾಕಿಗಳಿಲ್ಲದೇ ದೀಪಾವಳಿಯೂ ಹಾಗೆಯೇ ಎನ್ನುವ ಅಭಿಪ್ರಾಯಗಳು ಕೇಳಿ ಬರುತ್ತಿವೆ. ವರದಿಯೊಂದರ ಪ್ರಕಾರ ದೆಹಲಿಯಲ್ಲಿ ಒಂದು ಲಕ್ಷ ಕೆಜಿಗೂ ಹೆಚ್ಚು ಪಟಾಕಿ ದಾಸ್ತಾನು ಇದೆ.

ಪಟಾಕಿಯನ್ನೇ ನಂಬಿಕೊಂಡು ದೀಪಾವಳಿಗಾಗಿ ಕಾಯುವ ಅಂಗಡಿಯವರು ಏನು ಮಾಡಬೇಕು ಎಂಬುದರ ಕುರಿತೂ ಆಲೋಚಿಸಬೇಕಾಗಿದೆ. ಹಿಂದೂಗಳಿಗೆ ದೀಪಾವಳಿ ಪ್ರಮುಖವಾದ ಹಬ್ಬಗಳಲ್ಲೊಂದಾಗಿದೆ. ಪಟಾಕಿ ಸಿಡಿಸುವುದನ್ನು ಕೇವಲ ಪಟಾಕಿ ಸಿಡಿಸುವುದು ಎಂದೂ ಯೋಚಿಸದೇ ಅದು ಖುಷಿಯ ಸಂಕೇತ ಎಂದು ಪರಿಗಣಿಸಲಾಗಿದೆ. ಚಿಕ್ಕ ಮಕ್ಕಳಿನಿಂದ ದೊಡ್ಡವರವರೆಗೂ ಹಬ್ಬಗಳಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ. ಸುಪ್ರೀಂ ಕೋರ್ಟ್ ಪಟಾಕಿಗಳ ಮಾರಾಟ ನಿಷೇಧಿಸಿ ತೀರ್ಪು ನೀಡಿದ್ದು ಒಪ್ಪುವಂಥದ್ದೇ. ಆದರೆ, ಎಲ್ಲಾ ಪಟಾಕಿಗಳೂ ಪರಿಸರಕ್ಕೆ ಹಾನಿಕಾರಕವಲ್ಲ. ಎಲ್ಲಾ ಪಟಾಕಿಗಳನ್ನೂ ನಿಷೇಧಿಸದೇ, ವಿಷಕಾರಕ ಅಂಶಗಳಿರುವ ಪಟಾಕಿಗಳನ್ನು ಮಾತ್ರ ನಿಷೇಧಿಸಬಹುದಿತ್ತು ಎಂದು ಪಟಾಕಿ ಪ್ರಿಯರಿಗೆ ಅನಿಸುವುದರಲ್ಲಿ ತಿರುಳಿದೆ. ಕೋರ್ಟ್ ಹೇಳಿದಂತೆ ಮಾರಾಟಕ್ಕೆ ನಿಷೇಧವಿದೆ, ಆದರೆ ಈಗ ಆನ್‌ಲೈನ್‌ನಲ್ಲಿ ಪಟಾಕಿಗಳನ್ನು ಖರೀದಿಸುತ್ತಿದ್ದಾರೆ. ಇದಕ್ಕೆ ಯಾವ ನಿಷೇಧವೂ ಇಲ್ಲವೇ?

ಪಟಾಕಿಗಳಲ್ಲಿ ವಿಷಕಾರಕ ಅಂಶಗಳು ವಾಯು ಮಾಲಿನ್ಯ ಸೃಷ್ಟಿಸಿ ವಾತಾವರಣವನ್ನಷ್ಟೇ ಹಾಳು ಮಾಡುತ್ತಿಲ್ಲ. ಅವುಗಳಿಂದ ಎಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆಂಬುದು ಗೊತ್ತೇ ಇದೆ. ಎಷ್ಟೋ ಮಕ್ಕಳು ಅಂಧರಾಗಿ ಕತ್ತಲೆಯಲ್ಲಿ ನರಳುತ್ತಿದ್ದಾರೆ. ಅಂಥವರು, ನಮ್ಮ ಊರಿನಲ್ಲಿ ಪಟಾಕಿ ಬ್ಯಾನ್ ಮಾಡಬಾರದಿತ್ತೇ, ಆಗ ಇಂಥ ಅವಘಡಗಳು ಸಂಭವಿಸುತ್ತಲೇ ಇರಲಿಲ್ಲ ಎಂದು ಯೋಚಿಸದೇ ಇದ್ದಾರೆಯೇ?
ಭಾನುವಾರ ಆಗ್ರಾದಲ್ಲಿ ಪಟಾಕಿ ಸಿಡಿದು ಇಬ್ಬರು ಯುವಕರು ಮೃತಪಟ್ಟಿದ್ದಾರೆ. ಕಾರಿನಲ್ಲಿ ಪಟಾಕಿಗಳನ್ನು ಸಾಗಿಸುತ್ತಿದ್ದವರಿಗೆ ಪಟಾಕಿಗಳಿಗೆ ಬೆಂಕಿ ಹತ್ತಿದ ಅರಿವೇ ಇಲ್ಲ. ಇಡೀ ಕಾರು, ದೇಹಗಳು ಛಿದ್ರ ಛಿದ್ರವಾಗಿವೆ. ಇದೇನು ಮೊದಲ ದುರಂತವಲ್ಲ. ದೀಪಾವಳಿ ಸಂದರ್ಭದಲ್ಲಿ ‘ಇವೆಲ್ಲಾ ಮಾಮೂಲು’ ಎನ್ನುವಷ್ಟು ಸಾಮಾನ್ಯವಾಗಿವೆ. ನಮ್ಮವರ ಜೀವಗಳಿಗಿಂತ, ಮುಂದಿನ ಪೀಳಿಗೆಗಳಿಗಿಂತ ಆಚರಣೆಗಳೇ ಹೆಚ್ಚಾದವೇ?

ರಾಜಧಾನಿಯಲ್ಲಿ ಕೆಲ ತಿಂಗಳಿನಿಂದ ವಾಯು ಮಾಲಿನ್ಯ ಪ್ರಮಾಣ ಹೆಚ್ಚಾಗಿದೆ. ಜನ ಮೂಗಿಗೆ ಮಾಸ್ಕ್‌ ಇಲ್ಲದೇ ಹೊರಗೆ ಕಾಲಿಡುವುದಕ್ಕೂ ಹೆದರುತ್ತಿದ್ದಾರೆ. ಮನೆಯಿಂದ ಹೊರಕ್ಕೆ ಕಾಲಿಟ್ಟರೆ ಮಂಜಿನಂತಾ ಹೊಗೆ ಸುತ್ತಲೂ ಆವರಿಸಿರುತ್ತದೆ. ಈ ಮಾಲಿನ್ಯದ ಜತೆಗೆ ದೀಪಾವಳಿಯಂದು ಸುಡುವ ಪಟಾಕಿಗಳ ವಿಷಕಾರಕ ಅನಿಲಗಳೂ ಸೇರಿದರೆ ಹೇಗೆ? ಇವರ್ಯಾರಿಗೂ ಬದುಕುವ ಆಸೆಯಿಲ್ಲವೆ ಎಂದೆನಿಸುತ್ತದೆ. ಈ ವರ್ಷ ದೆಹಲಿಯಲ್ಲಿ ಪಟಾಕಿಗಳ ಮೇಲೆ ನಿಷೇಧ ಹೇರಿರುವುದರಿಂದ ವಾಯು ಮಾಲಿನ್ಯದ ಪ್ರಮಾಣ ಕಡಿಮೆಯಾಗುತ್ತದೆಯೇ ಎಂದು ಕಾದುನೋಡಬೇಕಿದೆ. ಇದು ಒಂದು ಸ್ವಾಗತಾರ್ಹ ಬೆಳವಣಿಗೆಯಲ್ಲವೇ? ಒಂದು ದಿನ ಮನಬಂದಂತೆ ಪಟಾಕಿ ಸುಟ್ಟು ವರ್ಷವಿಡೀ ಉಸಿರುಗಟ್ಟಿ ಬದುಕುವ ಸ್ಥಿತಿಯನ್ನು ನಾವು ತಂದುಕೊಳ್ಳಬೇಕೆ? ಪ್ರಯತ್ನಗಳಿಗೆ, ಪ್ರಯೋಗಗಳಿಗೆ ನಮ್ಮ ದೇಶದಲ್ಲಿ ಮುಕ್ತ ಸ್ವಾತಂತ್ರ್ಯವಿದೆ. ಪಟಾಕಿಗಳ ನಿಷೇಧದಿಂದ ಮಾಲಿನ್ಯದ ಪ್ರಮಾಣ ಕಡಿಮೆಯಾಗುವುದೆ?

ಕಡಿಮೆಯಾದಲ್ಲಿ ಎಷ್ಟು ಕಡಿಮೆಯಾಗಬಹುದು ಎಂಬುದನ್ನು ಇದರಿಂದ ತಿಳಿದುಕೊಳ್ಳುವುದರಲ್ಲಿ ತಪ್ಪೇನಿದೆ? ಹೇಗಿದ್ದರೂ ವಾತಾವರಣ ಕಲುಷಿತಗೊಂಡಿದೆ, ಅದು ಹಬ್ಬದ ಸಂಭ್ರಮದಲ್ಲಿ ಇನ್ನೂ ಮಲಿನವಾದರೆ ಏನೂ ಆಗುವುದಿಲ್ಲ, ಉಳಿದದ್ದನ್ನು ಮುಂದೆ ನೋಡಿಕೊಳ್ಳೋಣ ಎಂಬ ಮನಸ್ಥಿತಿ ಹೊಂದಿದರೆ ಹೇಗೆ? ಮುಖ್ಯವಾಗಿ ದೀಪಾವಳಿಯಲ್ಲಿ ಪಟಾಕಿಗಳಿಲ್ಲದೇ ಮಕ್ಕಳು ಹಬ್ಬ ಆಚರಿಸುವುದಿಲ್ಲ ಎಂದು ಹೇಳುವವರು, ಮುಂದಿನ ದಿನಗಳಲ್ಲಿ ದೀಪಾವಳಿ ಆಚರಿಸಲು ಮಕ್ಕಳು ಆರೋಗ್ಯವಾಗಿರುವುದು ಬೇಡವೇ? ಅಷ್ಟಕ್ಕೂ ಹಬ್ಬಗಳನ್ನು ಆಚರಿಸುವುದಾದರೂ ಏಕೆ? ಎಲ್ಲರೂ ಕೂಡಿ, ಖುಷಿಯಿಂದ ನಾಲ್ಕು ಮಾತನಾಡಿ ದೀಪಗಳನ್ನಿಟ್ಟು ಸಂಭ್ರಮಿಸಿದರೆ ಅದು ದೀಪಾವಳಿಯಾಗುವುದಿಲ್ಲವೇ? ಪಟಾಕಿಗಳನ್ನು ಸುಡುವುದೇ ದೀಪಾವಳಿಯಾ?

ಈವರೆಗೂ ಬೆರಳು ಮಾಡಿ ತೋರಿಸುವಂಥ ಯಾವುದೇ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡಿಲ್ಲ. ಅಂದಮೇಲೆ ಸುಪ್ರೀಂನ ತೀರ್ಪಿನ ಮೇಲೆ ನಂಬಿಕೆ ಇಲ್ಲವೇಕೆ? ಅಷ್ಟಕ್ಕೂ ಈ ತೀರ್ಪಿಗೆ ಧರ್ಮದ ಲೇಪನ ಮಾಡುತ್ತಿರುವುದೇಕೆ? ಮುಸ್ಲಿಮರು, ಕ್ರೈಸ್ತರ ಹಬ್ಬ, ಸಂಭ್ರಮಗಳನ್ನು ನಿಷೇಧಿಸದ ಸುಪ್ರೀಂ ಕೋರ್ಟ್ ಹಿಂದೂಗಳ ಹಬ್ಬಗಳ ಮೇಲೆ ಏಕೆ ನಿಷೇಧ ಹೇರುತ್ತದೆ ಎನ್ನುವವರು ಗಮನಿಸಬೇಕಾದ್ದೇನೆಂದರೆ, ಈ ರೀತಿ, ಇಷ್ಟೊಂದು ಪ್ರಮಾಣದಲ್ಲಿ ಪಟಾಕಿ ಹೊಡೆದು ಸಂಭ್ರಮಿಸುವ ಆಚರಣೆ ಯಾವ ಧರ್ಮದಲ್ಲಿದ್ದರೂ ಸಹ ಸುಪ್ರೀಂನ ತೀರ್ಪು ಇದೇ ಆಗಿರುತ್ತಿತ್ತು. ನ್ಯಾಯಕ್ಕಾಗಿಯೇ ಇರುವ ಸುಪ್ರೀಂ ಪ್ರತ್ಯೇಕ ಧರ್ಮವನ್ನು ಗುರಿಯಾಗಿಸಿಕೊಂಡು ತೀರ್ಪು ನೀಡಿಲ್ಲ. ಕೋರ್ಟ್ ಈ ಕೇಸ್‌ನ್ನು ‘ಹಬ್ಬ’ ಎಂದು ಪರಿಗಣಿಸಿತೇ ಹೊರತು, ‘ಹಿಂದೂಗಳ ಹಬ್ಬ’ ಎಂದು ಪರಿಗಣಿಸಿರುವುದಿಲ್ಲ. ಹಿಂದೂಗಳ ಹಬ್ಬ ಎಂದು ಪರಿಗಣಿಸಿದ್ದೇ ಆಗಿದ್ದರೆ ಕಳೆದ ವರ್ಷ ದೀಪಾವಳಿಗೂ ಪಟಾಕಿಗಳಿಗೂ ಅವಿನಾಭಾವ ಸಂಬಂಧ ಇದೆ. ಪಟಾಕಿಗಳ ಬ್ಯಾನ್‌ಗಿಂತ ಮಾಲಿನ್ಯದ ದುಷ್ಪರಿಣಾಮದ ಅರಿವು ಮೂಡಿಸಿ ಎಂದು ಸುಪ್ರೀಂ ತೀರ್ಪು ನೀಡುತ್ತಲೇ ಇರಲಿಲ್ಲ. ಅದು ಸುಧಾರಿಸಿಕೊಳ್ಳಲು ನೀಡಿದ ಸಮಯವೂ ಇದ್ದಿರಬಹುದು. ಆ ಸಮಯದಲ್ಲೇ ನಾವು ಸುಧಾರಿಸಿಕೊಳ್ಳಬೇಕಿತ್ತಲ್ಲವೇ?

ಮಲಿನ್ಯದ ಪ್ರಮಾಣ ಕಡಿಮೆಯಾಗಿದ್ದರೆ ಸುಪ್ರೀಂ ಏಕೆ ಈ ತೀರ್ಮಾನಕ್ಕೆ ಬರುತ್ತಿತ್ತು? ಬೇರೆ ಬೇರೆ ಪ್ರದೇಶಗಳಲ್ಲಿ ಏಕೆ ಪಟಾಕಿಗಳನ್ನು ಬ್ಯಾನ್ ಮಾಡಿಲ್ಲ? ದೆಹಲಿಯಲ್ಲಿರುವ ಮಾಲಿನ್ಯ ಪ್ರಮಾಣದಷ್ಟು ಬೇರೆ ಪ್ರದೇಶಗಳಲ್ಲಿ ಇಲ್ಲ ಎಂದು ಅರ್ಥವಲ್ಲವೇ? ದೆಹಲಿ ಇಷ್ಟು ಮಲಿನಗೊಳ್ಳಲು ಕಾರಣ ನಾವೇ, ನಮ್ಮ ಪರವಾಗಿ ನಿಂತೇ ಸುಪ್ರೀಂ ಈ ತೀರ್ಪನ್ನು ನೀಡಿದೆ ಎಂದು ಅಂದುಕೊಳ್ಳಬೇಕಲ್ಲವೇ? ದೆಹಲಿಯಲ್ಲಿ ಪಟಾಕಿಗಳನ್ನು ನಿಷೇಧಿಸಿದರೇನಂತೆ ನಾವು ಬೇರೆ ಪ್ರದೇಶಗಳಿಗೆ ಹೋಗಿ ಪಟಾಕಿ ಹೊಡೆದು ಸಂಭ್ರಮಿಸುತ್ತೇವೆ ಎಂದು ಮೊಂಡುತನ ಪ್ರದರ್ಶಿಸುವವರು ಯಾರ ಮೇಲೆ ಈ ಹಠ ಸಾಧಿಸುತ್ತಿದ್ದಾರೆ? ನಿಷೇಧದ ನಡುವೆಯೂ ನಾವು ಪಟಾಕಿ ಹೊಡೆಯುತ್ತೇವೆ ಎಂದು ಶೌರ್ಯ ಪ್ರದರ್ಶಿಸುವವರ ಭಂಡತನಕ್ಕೇನು ಹೇಳೋಣ?

ಈಗಾಗಲೇ ಓಜೋನ್ ಪದರ ಹರಿಯುತ್ತಿದೆ, ನೀರು ಕಲುಷಿತಗೊಳ್ಳುತ್ತಿದೆ, ಉಸಿರಾಡುವ ಗಾಳಿಯಲ್ಲಿ ವಿಷ ತುಂಬಿದೆ, ತಿನ್ನುವ ಅನ್ನ ಸತ್ವ ಕಳೆದುಕೊಂಡಿದೆ. ಇಂಥ ಸಂದರ್ಭವನ್ನು ತಂದುಕೊಂಡವರೂ ನಾವೇ, ಈಗ ಅದನ್ನು ಸಂಪೂರ್ಣವಾಗಿ ಸರಿಪಡಿಸಿಕೊಳ್ಳಲಾಗದಿದ್ದರೂ, ಪರಿಸರವನ್ನು ಉಳಿಸಿಕೊಳ್ಳಲು ಮಾಡುತ್ತಿರುವ ನೂತನ ಪ್ರಯೋಗಕ್ಕೆ ಅಳಿಲು ಸೇವೆಯನ್ನು ಮಾಡಲು ನಾವ್ಯಾಕೆ ಒಪ್ಪುತ್ತಿಲ್ಲ?

-ಮೇಘನಾ ಶೆಟ್ಟಿ

2 thoughts on “ಒಳ್ಳೆಯದನ್ನು ಒಪ್ಪಿಕೊಳ್ಳುವ ಬುದ್ಧಿ ನಮಗೇಕಿಲ್ಲ?

Leave a Reply

Your email address will not be published. Required fields are marked *

3 + 6 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Wednesday, 21.03.2018

ಉತ್ತರಾಯಣ, ವಸಂತಋತು, ಚೈತ್ರಮಾಸ, ಶುಕ್ಲಪಕ್ಷ, ಚತುರ್ಥಿ, ಬುಧವಾರ, ನಿತ್ಯ ನಕ್ಷತ್ರ -ಭರಣಿ, ಯೋಗ-ವೈಧೃತಿ, ಕರಣ-ಭದ್ರೆ.

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.30

Read More

 

Wednesday, 21.03.2018

ಉತ್ತರಾಯಣ, ವಸಂತಋತು, ಚೈತ್ರಮಾಸ, ಶುಕ್ಲಪಕ್ಷ, ಚತುರ್ಥಿ, ಬುಧವಾರ, ನಿತ್ಯ ನಕ್ಷತ್ರ -ಭರಣಿ, ಯೋಗ-ವೈಧೃತಿ, ಕರಣ-ಭದ್ರೆ.

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.30

Read More

Back To Top