ಕ್ಷಮೆ ಯಾಚಿಸಿದ ಕಾಗೋಡು

Posted In : ಸಂಪಾದಕೀಯ-1

ನಿರಂತರ ಬರದಿಂದ ಕಂಗೆಟ್ಟಿರುವ ರಾಜ್ಯದ ರೈತರಿಗೆ ಸಕಾಲದಲ್ಲಿ ಪರಿಹಾರ ಒದಗಿಸಲು ಸಾಧ್ಯವಾಗಿಲ್ಲ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಮತ್ತೊಮ್ಮೆ ಕ್ಷಮೆ ಯಾಚಿಸಿದ್ದಾರೆ. ಅದು ಕೂಡಾ ವಿಧಾನ ಮಂಡಲ ಅಧಿವೇಶನ ಸಂದರ್ಭದಲ್ಲಿ. ಅನ್ನದಾತರ ಕ್ಷಮೆ ಯಾಚಿಸುವ ಸಂದರ್ಭದಲ್ಲಿ ಅವರು ಅಧಿಕಾರಿಗಳ ಜಾಡ್ಯದ ಬಗ್ಗೆ ಮತ್ತೊಮ್ಮೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ರೈತರ ವಿಚಾರದಲ್ಲೂ ಅಧಿಕಾರಿಗಳು ಮತ್ತೆ ಮತ್ತೆ ತೋರುವ ನಿರ್ಲಕ್ಷ್ಯ ಖಂಡಿತ ಅಕ್ಷಮ್ಯ. ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ಪರಿಹಾರ ನೀಡುವುದು, ಬೆಳೆ ನಷ್ಟಕ್ಕೆ ಸ್ಪಂದಿಸುವುದು, ಕುಡಿಯುವ ನೀರು ಹಂಚಿಕೆ ವಿಳಂಬ ಇವೆಲ್ಲದರಲ್ಲೂ ಅಧಿಕಾರಿಗಳು ತೋರುತ್ತಿರುವ ಔದಾಸೀನ್ಯ ಪ್ರಜಾಪ್ರಭುತ್ವ ವ್ಯವಸ್ಥೆಯ ಅಣಕವೇ ಸರಿ. ಕಂದಾಯ ಇಲಾಖೆ ನಿರ್ವಹಿಸುತ್ತಿರುವ ಕಾಗೋಡು ತಿಮ್ಮಪ್ಪನವರಂಥ ಸಚಿವರಿಗೆ ಇವರ ವರ್ತನೆ ಬಗ್ಗೆ ಬೇಸರ ಮೂಡಿ ಕ್ಷಮೆ ಯಾಚಿಸುತ್ತಾರೆಂದರೆ ಪರಿಸ್ಥಿತಿ ಯಾವ ಹಂತಕ್ಕೆ ತಲುಪಿದೆ ಎಂಬ ಬಗ್ಗೆ ಶಾಸನಸಭೆಯಲ್ಲಿ ಚರ್ಚೆಯಾಗಿ ಕ್ರಮಕ್ಕೆ ಶಿಫಾರಸು ಮಾಡಲೇಬೇಕು.

ಕಂದಾಯ ಇಲಾಖೆ ಎಂದರೆ ಭ್ರಷ್ಟಾಚಾರದ ಆಗರ. ಹಳ್ಳಿಯ ರೈತರ ಮಾತು ಒತ್ತಟ್ಟಿಗಿರಲಿ, ವಿದ್ಯಾವಂತರು ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿದರೂ ಹಣಕ್ಕಾಗಿ ಬಾಯಿ ಬಿಡುವ ಸ್ಥಿತಿ ನಿರ್ಮಾಣವಾಗಿದೆ. ಕೆಳ ಹಂತದಲ್ಲಿ ನಡೆಯುವ ಭ್ರಷ್ಟಾಚಾರ ಹೇಗೆ ಜನಸಾಮಾನ್ಯರ ರಕ್ತವನ್ನು ಹನಿಹನಿಯಾಗಿ ಹೀರಿ ನಿತ್ರಾಣಗೊಳಿಸುತ್ತಿದೆ ಎಂಬುದರ ಪ್ರತ್ಯಕ್ಷ ದರ್ಶನವಾಗಬೇಕಾದರೆ ಕಂದಾಯ ಇಲಾಖೆ ಕಚೇರಿಗಳಿಗೆ ಭೇಟಿ ನೀಡಬೇಕು. ಆದರೆ ಶಾಸನ ಸಭೆಯಲ್ಲಿ ಈ ಬಗ್ಗೆ ಮಾತ್ರ ಚರ್ಚೆಯೇ ನಡೆಯುತ್ತಿಲ್ಲ. ತಮ್ಮ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿಲ್ಲ. ಶಾಸಕರನ್ನು ಕಡೆಗಣಿಸುವ ಮೂಲಕ ಶಿಷ್ಟಚಾರ ಉಲ್ಲಂಸಲಾಗಿದೆ ಎಂದು ವಿಧಾನಸಭೆ ಕಲಾಪದಲ್ಲಿ ಹಕ್ಕುಚ್ಯುತಿ ಮಂಡಿಸುವ ಶಾಸಕರಿದ್ದಾರೆ.

ಆದರೆ ನ್ಯಾಯಯುತವಾಗಿ ಜನಸೇವೆ ಮಾಡುವುದು ಹಕ್ಕುಚ್ಯುತಿಯಲ್ಲವೇ? ಈ ಬಗ್ಗೆ ಯಾರೂ ಸದನದಲ್ಲಿ ಪ್ರಸ್ತಾಪ ಮಾಡುತ್ತಿಲ್ಲ? ಶಾಸಕರ ಮರ್ಯಾದೆಗೆ ಕುಂದುಂಟಾದಾಗ ಮಾತ್ರ ಹಕ್ಕು ಬಾಧ್ಯತಾ ಸಮಿತಿಯ ನೆನಪು ಮಾಡಿಕೊಳ್ಳಬೇಕೆ? ಆದರೆ ಜನಸಾಮಾನ್ಯರ ಬಗ್ಗೆ ಉಸಿರೆತ್ತುವುದಕ್ಕೆ ಜನಪ್ರತಿನಿಧಿಗಳಿಗೆ ವ್ಯವಧಾನವಿಲ್ಲ. ಈ ನಿಟ್ಟಿನಲ್ಲಿ ಶಾಸನಸಭೆಯಲ್ಲಿ ಜನತೆಯ ಕ್ಷಮೆ ಯಾಚಿಸಿದ ಕಾಗೋಡು ತಿಮ್ಮಪ್ಪ ನಿಜಕ್ಕೂ ಶ್ಲಾಘನೆಗೆ ಅರ್ಹರು. ಈ ಭ್ರಷ್ಟ ಅಧಿಕಾರಿಗಳ ಮೂಲಕ ಜನರ ಸೇವೆ ಮಾಡಿಸಲು ಸಾಧ್ಯವಾಗಲಿಲ್ಲ ಎಂಬ ಸಣ್ಣ ಕಳವಳವಾದರೂ ಅವರಲ್ಲಿ ಮೂಡಿದೆ. ಹಾಗಂಥ ಇದು ಇಷ್ಟಕ್ಕೆ ಕೊನೆಯಾಗದೇ ಜನರಿಗೆ ನ್ಯಾಯಬದ್ದವಾಗಿ ಸಿಗಬೇಕಾದ ಸೇವೆ ತಲುಪುವಂತಾಗಬೇಕು.

ನಾಯಕತ್ವದ ಕೊರತೆ

ಜಯಲಲಿತಾ ನಿಧನದ ಬಳಿಕ ಎಐಎಡಿಎಂಕೆ ಹಲವು ಸಂಕಷ್ಟಗಳನ್ನು ಎದುರಿಸುತ್ತಿದೆ. ಉತ್ತಮವಾಗಿ ಸರಕಾರ ನಡೆಸಿಕೊಂಡು ಹೋಗುತ್ತಿದ್ದ ಪನ್ನೀರ್ ಸೆಲ್ವಂ ಅವರನ್ನು ಪದಚ್ಯುತಗೊಳಿಸಿ ಶಶಿಕಲಾ ನಟರಾಜನ್ ಅಧಿಕಾರದ ಗದ್ದುಗೆ ಏರಲು ನಡೆಸಿದ ಸಂಚಿನ ಪ್ರತಿಫಲವನ್ನು ಈಗ ಪಕ್ಷ ಅನುಭವಿಸಬೇಕಾಗಿದೆ. ಎರಡೆಲೆ ಚಿಹ್ನೆ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಚುನಾವಣಾ ಆಯೋಗಕ್ಕೇ ಲಂಚ ನೀಡಲು ಹೋಗಿ ಟಿ.ಟಿ.ವಿ. ದಿನಕರನ್ ಬಂಧನಕ್ಕೆ ಒಳಗಾದರು.

ಈಗ ಜಯಲಲಿತಾ ಪ್ರತಿನಿಧಿಸುತ್ತಿದ್ದ ಆರ್.ಕೆ.ನಗರ ಉಪಚುನಾವಣೆಯಲ್ಲಿ ಮತದಾರರಿಗೆ ಹಣ ಹಂಚಿದ ಆರೋಪದಲ್ಲಿ ಮುಖ್ಯಮಂತ್ರಿ ಪಳಿನಿಸ್ವಾಮಿ ಹಾಗೂ ಅವರ ಸಂಪುಟದ ಬಹುತೇಕ ಸಚಿವರ ವಿರುದ್ಧ ಎಫ್‌ಆರ್ ದಾಖಲಿಸಲು ಚುನಾವಣಾ ಆಯೋಗ ಆದೇಶಿಸಿದೆ. ಪಕ್ಷ ದಿನಕ್ಕೊಂದರಂತೆ ಈ ರೀತಿ ಸಂಕಷ್ಟಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿರುವುದಕ್ಕೆ ಕಾರಣ ಎಂದರೆ ಅನುಭವಿ ಮತ್ತು ಪ್ರಬುದ್ಧ ನಾಯಕತ್ವದ ಕೊರತೆ. ಅದರ ಪರಿಣಾಮ ಮುಂದಿನ ವಿಧಾನಸಭಾ ಚುನಾವಣೆಯಲ್ಲಿಯೂ ಆಗುವುದು ನಿಶ್ಚಿತ.

Leave a Reply

Your email address will not be published. Required fields are marked *

1 × one =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top