About Us Advertise with us Be a Reporter E-Paper

ಗುರು

ಅಚ್ಚರಿಗಳ ಆಗರ ಕಾಲ ಕಾಲೇಶ್ವರ

ಜಯಶ್ರೀ.ಜೆ. ಬೆಳಗಾವಿ

ನೆಯ ಆಕಾರದ ಬೆಟ್ಟದ ತಪ್ಪಲಿನಲ್ಲಿರುವ ಗಜೇಂದ್ರಗಡ. ಈ ಪಟ್ಟಣದ ಉತ್ತರ ದಿಕ್ಕಿಗೆ ಹೊರಟರೆ ಹಚ್ಚ ಹಸುರಿನ ಸೀರೆಯುಟ್ಟ ಬೆಟ್ಟದ ಮುಗಿಲನ್ನೇ ಮುಟ್ಟುವಂತೆ ನಿಂತ ದೇವಸ್ಥಾನವೊಂದು ಕಣ್ಣು ಸೆಳೆಯುವುದು. ಅದುವೇ ಕಾಲ ಕಾಲೇಶ್ವರ ದೇವಸ್ಥಾನ. ದೊಡ್ಡದಾದ ಹಾಸುಗಲ್ಲಿನ ಸುಮಾರು 200 ಮೆಟ್ಟಿಲುಗಳನ್ನೇ ರಿದರೂ ದಣಿವೆನಿಸುವುದಿಲ್ಲ. ಬದಲಿಗೆ ನಮ್ಮನ್ನು ಗತಕಾಲದತ್ತ ಕೊಂಡೊಯ್ದು ಬೆರಗು ಮೂಡಿಸುತ್ತದೆ ಭಕ್ತಾದಿಗಳಿಗೆಲ್ಲ ಕಾಲ ಕಾಲೇಶ್ವರನ ಹೆಸರು ಕೇಳಿದಾಕ್ಷಣ ಮನಸ್ಸು ಅರಳಿದ ಛತ್ರಿಯಂತಾಗು ವುದು. ಈ ಭಾಗದ ಜನರಿಗೆಲ್ಲ ಕಳೀ ಮಲ್ಲಯ್ಯ ಎಂದು ಪರಿಚಿತನಾಗಿರುವ ಈ ದೇವನ ಚರಿತ್ರೆ ರೋಚಕವಾಗಿದೆ.

ಭಕ್ತರಿಗೆ ದಕ್ಷಿಣ ಕಾಶಿ

ದಕ್ಷಿಣ ಕಾಶಿ ಎಂದೇ ಈ ಐತಿಹಾಸಿಕ ಸ್ಥಳ ಗದಗನಿಂದ 54 ಕಿ.ಮೀ. ದೂರದಲ್ಲಿದೆ. ಇಲ್ಲಿ ಎಲ್ಲವೂ ಶಿಲಾಮಯ. ತನ್ನ ವಿಶಿಷ್ಟ ಅದ್ಭುತಗಳಿಂದ ಕೈ ಬೀಸಿ ಕರೆದು ಭಕ್ತಿ ಭಾವವನ್ನು ಉಕ್ಕಿಸುತ್ತದೆ. ಪ್ರಸ್ತುತ ಭವ್ಯ ಸ್ಮಾರಕವಾಗಿ ಗತಕಾಲದ ಇತಿಹಾಸ ವನ್ನು ಮೆಲುಕು ಹಾಕುವಂತೆ ಮಾಡುತ್ತಿದೆ. ಈ ಕಾರಣಕ್ಕಾಗಿಯೇ ಇಲ್ಲಿ ಹಲವು ಕನ್ನಡ ಚಿತ್ರ ಗಳೊಂದಿಗೆ ಕೆಲವು ತೆಲುಗು ಚಿತ್ರಗಳೂ ಚಿತ್ರೀ ಕರಣಗೊಂಡಿವೆ.

ಅತಿ ವಿರಳವಾಗಿ ಕಾಣಸಿಗುವ ಉದ್ಭವ ಲಿಂಗವನ್ನು ಇಲ್ಲಿ ವೀರಭದ್ರನೊಂದಿಗೆ ಕಣ್ತುಂಬಿಸಿ ಕೊಳ್ಳಬಹುದು. 1025 ವರ್ಷಗಳ ಹಿಂದೆಯೇ ಈ ಲಿಂಗ ಅಸ್ತಿತ್ವದಲ್ಲಿತ್ತೆಂಬ ವಕ್ಕಣಿಕೆ ಹೊಂದಿದೆ. ಇದರ ದರುಶನ ಮಾತ್ರದಿಂದ ಪುಣ್ಯ ವಲ್ಲದೇ ದುರ್ಲಭದಿಂದ ದೊರೆಯುವ ಮುಕ್ತಿಯೂ ದೊರೆಯುತ್ತದೆಂಬ ನಂಬಿಕೆ. ಬಹು ಹಿಂದಿನದು. ಪ್ರಾಣಿ ಪ್ರಿಯರು ಇಲ್ಲಿರುವ ತಪಸ್ಸಾಧನೆಯ ಗುಹೆಗಳು ಹಿಂಸ್ರ ಪಶುಗಳ ಸಂಸಾರಕ್ಕೆ ಗ್ರಹಗಳಾಗಿರುವುದನ್ನು ಕಂಡು ಸಂತಸ ವ್ಯಕ್ತ ಪಡಿಸುವುದು ಖಚಿತ.

ಪವಾಡದ ಸುಣ್ಣ ಸುರುಮ

ಯುಗಾದಿ ದಿನವಂತೂ ಇಲ್ಲಿ ವಿಶೇಷ ಸಂಭ್ರಮದ ದಿನ. ಚರಿತ್ರೆಯಲ್ಲಿ ದಾಖಲಾದಂತೆ ಈ ದಿನ ದೇವಸ್ಥಾನದಲ್ಲಿ ಗಂಟೆಯಿದ್ದ ಸುಣ್ಣ ಸುರುಮಗಳು ಅದೃಶ್ಯ ರೀತಿಯಿಂದ ಮಹಾಶಕ್ತಿಯಿಂದ ಸ್ಪರ್ಶವಾಗುತ್ತವೆ. ಇದರ ನಿಮಿತ್ತವಾಗಿ ಹಬ್ಬದ ಹಿಂದಿನ ದಿನ ಸುಣ್ಣ ಸುರುಮ ಹೊಸದಾಗಿ ಇಟ್ಟು ಪೂಜಿಸುವ ಸಂಪ್ರದಾಯವಿದೆ. ಬೆಳಗಾಗುವುದರಲ್ಲಿ ಹೊಸದಾದ ಕಲೆಗಳು ಗೋಚರಿಸುತ್ತವೆ ಇದು ಸೋಜಿಗವೆನಿಸಿದರೂ ಸತ್ಯ. ಈ ಮಹಿಮೆಯನ್ನು ಕಾಣಲೆಂದೇ ಅಂದು ಜನ ಸಾಗರ ಹರಿದು ಬರುತ್ತದೆ. ಸುಣ್ಣ ಹೆಚ್ಚಿದ್ದರೆ ಬಿಳಿ ಕಾಳು ಸುರುಮ ಹೆಚ್ಚಿದ್ದರೆ ಕೆಂಪು ಕಾಳಿನ ಇಳುವರಿ ಚೆನ್ನಾಗಿ ಬರುತ್ತದೆಂಬುದು ಪೂರ್ವದಿಂದಲೂ ನಂಬಿದ ಕುರುಹು.

ಬಿರು ಬೇಸಿಗೆಯಲ್ಲೂ ತೊಟ್ಟಿಕ್ಕುತ್ತದೆ ಗಂಗೆ

ಬ್ರಹ್ಮ ದೇವನ ಕಡೆಗೆ ಹೋಗುವ ಬಾಗಿಲದ ಮೇಲೆ ಗುಡ್ಡದಲ್ಲಿ ನಂದಿಯನ್ನು ಸ್ಥಾಪಿಸಿದ್ದು, ನಂದಿಯ ಮೇಲೆ ಸ್ವಲ್ಪ ಅಂತರದಲ್ಲಿ ವರ್ತುಲಾಕಾರದ ಒಂದು ಚಿಕ್ಕ ಮಾಡ ಇದೆ. ಯುಗಾದಿ ದಿನ ಬೆಳಿಗ್ಗೆ ಅಲ್ಲಿ ಗಂಗೆ ಹರಿದು ಬರುತ್ತಾಳೆ. ನೀರು ಜೋರಾಗಿ ಹರಿದು ಬಂದರೆ ಆ ವರ್ಷ ಸಮೃದ್ಧ ಮಳೆ.. ಸರಿಯಾಗಿ ಸುರಿಯದಿದ್ದರೆ ಆ ವರ್ಷ ಮಳೆ ಕಡಿಮೆ. ಇದು ಆಯಾ ವರ್ಷಕ್ಕೆ ನಡೆಯುವ ಸತ್ಯ ಘಟನೆಯನ್ನು ಪರಂಪರೆಯಾಗಿ ನೋಡುತ್ತ ನಂಬುತ್ತ ಇದೆ. ಬಿರು ಬೇಸಿಗೆಯಲ್ಲೂ ಅಂತರಗಂಗೆ ತೊಟ್ಟಿಕ್ಕುತ್ತದೆ ಎಂಬುದು ವಿಚಿತ್ರವೆನಿಸಿದರೂ ಸತ್ಯ.

ಹೀಗೆ ಹತ್ತು ಹಲವು ಅಚ್ಚರಿಗಳ ಆಗರವೆನಿಸಿರುವ ಕಾಲ ಕಾಲೇಶ್ವರನ ಜಾತ್ರೆ ದವಣದ ಹುಣ್ಣಿಮೆಯಂದು ನಡೆಯುತ್ತದೆ. ನೀವೂ ಒಮ್ಮೆ ಭೇಟಿ ನೀಡಿ. ಜಾತಿ ಮತ ಭೇದಗಳಿಲ್ಲದೇ ಆರಾಧಿಸುವ ಕಾಲ ಕಾಲೇಶ್ವರನ ದೇವಾಲಯ ಜನೋಪಯೋಗಿ ಧಾಮವಾಗಿ ರೂಪುಗಳ್ಳಬೇಕಾದರೆ ಸ್ಥಳೀಯರು ಆಸ್ತಿಕ ಆರಾಧಕರು ಮನಸ್ಸು ಮಾಡಬೇಕಾಗಿದೆ.

Tags

Related Articles

Leave a Reply

Your email address will not be published. Required fields are marked *

Language
Close