About Us Advertise with us Be a Reporter E-Paper

ಅಂಕಣಗಳು

ಕನ್ನಡಿಗನ ಹೋರಾಟದ ಕಿಚ್ಚು ಸಿನೆಮಾ ಮುಗಿವವರೆಗೆ!

ನಾಲ್ಕು ದಿನಗಳಿಂದ ಎಲ್ಲ ಕಡೆಗಳಲ್ಲೂ ಅದೇ ಮಾತು. ಸಕ್ಕತ್ ಉಂಟು, ಮಸ್‌ತ್ ಉಂಟು, ಆಹಾ ಡೈಲಾಗ್‌ಗಳು ಬಾಣಲೆಯಲ್ಲಿ ಹುರಿಯಲು ಹಾಕಿದ ಕಾಳುಗಳಂತೆ ಪಟಪಟ ಅಂತಾವೆ. ನಟನೆ ಸೂಪರ್. ದೃಶ್ಯವೈಭವ ಅದ್ಭುತ. ಐಟಮ್ ಸಾಂಗ್ ಇಲ್ಲದ, ಫೈಟ್ ಸೀನ್ ಇಲ್ಲದ, ಡಬಲ್ ಮೀನಿಂಗ್ ಸಂಭಾಷಣೆಗಳಿಲ್ಲದ, ಎಲ್ಲ ಬಿಡಿ, ಕ್ರೆûಮ್ ಥ್ರಿಲ್ಲರ್‌ಗಳಂತೆ ಏನಾಗುತ್ತೋ ಏನೋ ಎಂದು ಕೊನೆಯವರೆಗೂ ಕುತೂಹಲ  ನಿಗೂಢ ಕ್ಲೆ ûಮಾಕ್‌ಸ್ ಕೂಡ ಇಲ್ಲದ (ಯಾಕೆಂದರೆ ಕತೆ ಎಲ್ಲರಿಗೂ ಗೊತ್ತಿದೆ!) ಒಂದು ಸಿನೆಮಾ ಮಾಡಿಯೂ ಜನರ ಹೃದಯ ಗೆಲ್ಲಬಹುದು ಮತ್ತು ಬಾಕ್‌ಸ್ ಆಫೀಸ್‌ನಲ್ಲೂ ಗೆಲ್ಲಬಹುದು ಎಂದು ರಿಷಬ್ ಶೆಟ್ಟಿ ತೋರಿಸಿಕೊಟ್ಟಿದ್ದಾರೆ ಎನ್ನುವ ಮಾತುಗಳೇ ಎಲ್ಲೆಲ್ಲೂ ಕೇಳಿಬರುತ್ತಿವೆ. ನಾವು ನಮ್ಮ ಜೀವನದಲ್ಲಿ ‘ಸರಕಾರಿ ಹಿರಿಯ ಪ್ರಾಥಮಿಕ ಶಾಲೆ’ ಎಂಬ ಬೋರ್ಡನ್ನು, ಹೆಸರನ್ನು ಅದೆಷ್ಟು ಸಲ ನೋಡಿಲ್ಲ! ಬಹುಶಃ ನಾವು ಜೀವನದಲ್ಲಿ ನೋಡಿದ, ನೋಡಿದರೂ ಯಾವ ಉದ್ವೇಗದ ಭಾವನೆಯನ್ನೂ ಮನಸ್ಸಲ್ಲಿ  ಅತ್ಯಂತ ನೀರಸ ಪದಪುಂಜ ಯಾವುದು ಎಂದರೆ ನಮಗೆ ಈ ಸಹಿಪ್ರಾ ಶಾಲೆಯ ಕಿತ್ತುಹೋದ, ಮಸಿ ಹಿಡಿದ, ತುಕ್ಕೆದ್ದ ಬೋರ್ಡು ನೆನಪಾಗಬಹುದು. ಅಂಥ ಪರಮಬೋರು ಹೆಸರನ್ನು ಸಿನೆಮಾಗೆ ಇಟ್ಟು ರಿಸ್‌ಕ್ ತೆಗೆದುಕೊಂಡಿದ್ದಾರಲ್ಲ ಈ ನಿರ್ದೇಶಕರು ಎಂದು ಸಿನೆಮಾ ನೋಡುವ ಮುನ್ನ ನನಗೆ ಆತಂಕವಾದದ್ದು ನಿಜ.

ರಿಷಬ್ ಶೆಟ್ಟಿ ಈ ಸಿನೆಮಾದ ಮೂಲಕ ಗೆದ್ದಿದ್ದಾರೆ ಮತ್ತು ಸೋತಿದ್ದಾರೆ. ಗೆದ್ದಿದ್ದಾರೆ ಯಾಕೆಂದರೆ, ಸಿನೆಮಾ ನೋಡಿದ ಎಲ್ಲರಿಗೂ ಅವರವರ ಬಾಲ್ಯ ನೆನಪಾಗಿದೆ. ಆ ಬಾಲ್ಯದಲ್ಲಿ  ಮಂಗಾಟಗಳು, ಒಡೆದ ಹಂಚಿನಿಂದ ತೊಟ್ಟಿಕ್ಕಿಬಿದ್ದ ಹನಿಯೊಂದು ಸ್ಲೇಟಿನ ಮೇಲಿದ್ದ ಅಕ್ಷರಗಳನ್ನು ಅಳಿಸಿದ್ದ ಕ್ಷಣಗಳು, ಮಾಷ್ಟ್ರು ಕೊಟ್ಟಿದ್ದ ಶಿಕ್ಷೆಗಳು, ಬೆನ್ನ ಮೇಲೆ ಬೆತ್ತ ಮೂಡಿಸಿದ್ದ ಕೆಂಪು ಗೆರೆಗಳು, ಕ್ಲಾಸ್ ಮಾನಿಟರ್‌ಗಳ ಕೈಯಲ್ಲಿ ಜೋರು ಅತಿಜೋರು ಅನ್ನಿಸಿಕೊಂಡು ಆವಾಹಿಸಿಕೊಳ್ಳಲೇಬೇಕಿದ್ದ ಅಸಹನೀಯ ಮೌನಗಳು, ಗಣಿತ ಪರೀಕ್ಷೆಗೆ ಸಮಾಜ ಓದಿಕೊಂಡುಹೋಗಿ ಆಗುತ್ತಿದ್ದ ಫಜೀತಿಗಳು, ಈ ಎಲ್ಲ ಸೈಕಲ್ ಗ್ಯಾಪಿನಲ್ಲೂ ಇದ್ದೇ ಇರುತ್ತಿದ್ದ ಎರಡೋ ಮೂರೋ ಕ್ರಷ್ಷುಗಳು… ಬಾಲ್ಯವೆಂಬ ಕ್ಯಾನ್‌ವಾಸಿನ ಮೇಲೆ ಬಣ್ಣ ಬಣ್ಣದ ಬ್ರಶ್‌ಗಳು!  – ಯಾವುದೂ ಅತಿಯಾಗದಂತೆ ಯಾವುದೂ ಕಳೆದುಹೋಗದಂತೆ ತೆರೆಯ ಮೇಲೆ ತೋರಿಸುವ ನಿರ್ದೇಶಕನಿಗೆ ಕಲಾಪ್ರಜ್ಞೆ, ಹಾಸ್ಯಪ್ರಜ್ಞೆ, ಪ್ರಸಂಗಾವಧಾನ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಒಂದು ಒಳ್ಳೆಯ ಹೃದಯ ಬೇಕಾಗುತ್ತದೆ. ಜೋಕ್ ಎಂದರೆ ದ್ವಂದ್ವಾರ್ಥದ ಸಂಭಾಷಣೆ ಎಂದುಕೊಂಡ ಕೆಲ ನಿರ್ದೇಶಕರ ಕೈಯಲ್ಲಿ ಕೊಟ್ಟಿದ್ದರೆ ಇದೇ ಸಿನೆಮಾ ಅಡಲ್‌ಟ್ ಮೂವಿ ಆಗುತ್ತಿತ್ತೋ ಏನೋ. ಆದರೆ, ಅಂಥ ಅಗ್ಗದ ಕಳ್ಳು ಕುಡಿಸದೆ ಒಂದೊಳ್ಳೆಯ ಪಂಚಾಮೃತದಂಥ ಸಿನೆಮಾ ಮಾಡಿ ರಿಷಬ್ ನಮ್ಮ ಕೈಗೆ ಕೊಟ್ಟಿದ್ದಾರಲ್ಲ, ಆ ಮೂಲಕ  ನಮ್ಮ ನಮ್ಮ ಬಾಲ್ಯಗಳನ್ನು ಮರಳಿ ಕೊಟ್ಟಿದ್ದಾರಲ್ಲ, ಆ ಕಾರಣಕ್ಕೆ ಗೆದ್ದಿದ್ದಾರೆ. ಇನ್ನು ಸೋತದ್ದು ಹೇಗೆ? ಕೇಳಿ.

ನಿಮಗೆ ಬೆಂಗಳೂರು, ಮೈಸೂರು, ಮಂಡ್ಯ, ಕೊಡಗು ಗೊತ್ತಿವೆ. ಅಲ್ಲಿನ ಇತಿಹಾಸ, ವೈಶಿಷ್ಟ್ಯಗಳ ಬಗ್ಗೆ ಬರೆಯಿರಿ ಎಂದರೆ ಕನಿಷ್ಠ ಒಂದು ಪುಟದಷ್ಟಾದರೂ ಬರೆದೀರಿ. ಇನ್ನು ಧಾರವಾಡ, ಉತ್ತರ ಕನ್ನಡ, ವಿಜಯಪುರ? ಚಿತ್ರದುರ್ಗ, ಬೆಳಗಾವಿ, ಬೀದರ್? ಅವುಗಳ ಬಗ್ಗೆಯೂ ಪುಟ ತುಂಬಿಸಲು ಬೇಕಾದಷ್ಟು ವಿಷಯ ನಿಮಗೆ ಗೊತ್ತಿವೆ, ಅಲ್ಲವೆ? ಹಾಗಾದರೆ ಕಾಸರಗೋಡಿನ ಬಗ್ಗೆ ಬರೆಯಿರಿ  ಕಾಸರಗೋಡು ಕರ್ನಾಟಕದ ಭಾಗವಾಗಿತ್ತಂತೆ (ಅಂತೆ ಕಂತೆ. ನಾವು ಕಣ್ಣಾರೆ ನೋಡಿದವರಲ್ಲ). ಭಾಷಾವಾರು ಪ್ರಾಂತ್ಯಗಳಾಗುವ ಸಂದರ್ಭದಲ್ಲಿ ಅದು ನಮ್ಮ ಕೈತಪ್ಪಿ ಹೋಯಿತಂತೆ. ಅಂದಿನಿಂದ ಅಲ್ಲಿನ ಕೆಲವು ಕನ್ನಡಿಗರು ಕಾಸರಗೋಡು ಕರ್ನಾಟಕಕ್ಕೆ ಸೇರಬೇಕೆಂದು ವಿಫಲಹೋರಾಟ ಮಾಡಿಕೊಂಡು ಬರುತ್ತಿದ್ದಾರೆ. ಇಷ್ಟು ಬರೆದ ಮೇಲೆ ನಾಲ್ಕನೇ ವಾಕ್ಯದಲ್ಲಿ ಏನು ತುಂಬಿಸುವುದು ಯೋಚಿಸುವಂತಾಗುತ್ತದೆ. ಯಾಕೆಂದರೆ ಒಂದಾನೊಂದು ಕಾಲದಲ್ಲಿ ಈ ರಾಜ್ಯದ ಭಾಗವಾಗಿದ್ದ, ರಾತ್ರೋರಾತ್ರಿ ಕೈಜಾರಿದ ಕಾಸರಗೋಡಿನ ಬಗ್ಗೆ ನಮ್ಮ ತಿಳಿವಳಿಕೆ ದಿನದಿನಕ್ಕೆ ಇಳಿಯುತ್ತಿದೆ. ಹೋಗಲಿ ಬಿಡಿ  ಅದನ್ನೇನು ತೆಗೆದು ಯಾರಾದರೂ ಸಮುದ್ರಕ್ಕೆ ಎಸೆದಿದ್ದಾರಾ? ಕರ್ನಾಟಕ ಅಲ್ಲದಿದ್ದರೆ ಕೇರಳ. ಒಟ್ಟಾರೆ ಭಾರತದ ಒಳಗೇ ಉಂಟಲ್ಲ? ಮತ್ಯಾಕೆ ಇವರು ಇಷ್ಟು ಹೋರಾಟ ಮಾಡುವುದು? ಕನ್ನಡ ಅಲ್ಲವಾದರೆ ಮಲಯಾಳ, ಒಟ್ಟಲ್ಲಿ ಮಾತಾಡಲಿಕ್ಕೆ ಒಂದು ಭಾಷೆ. ಕೇರಳವನ್ನು ಒಪ್ಪಿಕೊಂಡರೆ ಆ ಸರಕಾರ ಇವರನ್ನು ಚೆನ್ನಾಗೇ ನೋಡಿಕೊಳ್ತದಲ್ಲ? ಮತ್ಯಾಕೆ ಇವರಿಗೆ ಮಂಡೆಬಿಸಿ? ಎಂದು ಹೇಳುವ ಆಧುನಿಕರು ಹೆಚ್ಚಾಗಿದ್ದಾರೆ. ಹಾಲುಣ್ಣಿಸಿ ಬೆಳೆಸಿದ ತಾಯಿಯನ್ನೇ ವೃದ್ಧಾಶ್ರಮದಲ್ಲಿಟ್ಟು ಮರೆತ ಕೃತಘ್ನ ಮಕ್ಕಳಂತೆ ನಾವು ಕಾಸರಗೋಡನ್ನು ಕೇರಳದ ಸುಪರ್ದಿಗೆ  ಬಿಮ್ಮನೆ ನಡೆದುಬಿಟ್ಟಿದ್ದೇವೆ.

ನಿಮಗೆ ಗೊತ್ತಿಲ್ಲದಿರಬಹುದು. ಕಾಸರಗೋಡು ಕೇರಳದಲ್ಲಿ ಈಗ ಒಂದು ಸ್ವತಂತ್ರ ಜಿಲ್ಲೆ. 1956ರ ನವೆಂಬರ್ 1ರಂದು ಭಾಷಾವಾರು ಮರುವಿಂಗಡಣೆ ನಡೆದಾಗ ಕೇರಳದ ತೆಕ್ಕೆಗೆ ಬಿದ್ದ ಕಾಸರಗೋಡು ಅದಕ್ಕೂ ಮೊದಲು ದಕ್ಷಿಣ ಕನ್ನಡ ಜಿಲ್ಲೆಯ ಒಂದು ತಾಲೂಕಾಗಿತ್ತು. 1895ರಲ್ಲಿ ದಕ್ಷಿಣ ಕನ್ನಡವನ್ನೇ ಅಧ್ಯಯನದ ವಸ್ತುವಾಗಿ ಆಯ್ದುಕೊಂಡು ನೂರಾರು ಮೈಲಿ ಉದ್ದಗಲ ಓಡಾಡಿ ವಿಷಯ ಸಂಗ್ರಹಿಸಿದ್ದ ಎಚ್.ಎ. ಸ್ಟುವರ್ಟ್ ಎಂಬ ಪಾಶ್ಚಾತ್ಯ ವಿದ್ವಾಂಸನ ಗ್ರಂಥದಲ್ಲಿ ಕಾಸರಗೋಡಿನ ವಿಷಯ ವಿಸ್ತಾರವಾಗಿ ಚರ್ಚಿತವಾಗಿದೆ.  ಕನ್ನಡ ಜಿಲ್ಲೆಯ ಆಗಿನ ತಾಲೂಕುಗಳಲ್ಲಿ ಕಾಸರಗೋಡು ಅತ್ಯಧಿಕ ಜನಸಂಖ್ಯೆ ಇದ್ದ ಪ್ರದೇಶವಾಗಿತ್ತು. ಎರಡು-ಮೂರನೇ ಸ್ಥಾನಗಳಲ್ಲಿ ಮಂಗಳೂರು, ಉಡುಪಿ ಇದ್ದವು. ಕನ್ನಡಿಗರು ಕಾಸರಗೋಡಿನಲ್ಲಿ ಅಧಿಕ ಸಂಖ್ಯೆಯಲ್ಲಿದ್ದರೆ, ಉಳಿದವರ ಪೈಕಿ 30% ಮಂದಿ (83,475) ತುಳುವರಾಗಿದ್ದರು. ಅಲ್ಲದೆ 13,000 ಮಂದಿ ಕೊಂಕಣಿ ಭಾಷಿಕರೂ 12,000 ಮಂದಿ ಮರಾಠಿಗರೂ ಕಾಸರಗೋಡನಲ್ಲಿದ್ದರು. ಸ್ಟುವರ್ಟ್ ಈ ವಿವರಗಳನ್ನು ಕೊಡುವುದಕ್ಕೆ ಪೂರ್ವದಲ್ಲಿ ಅಖಂಡ 800 ವರ್ಷಗಳ ಕಾಲ ಕಾಸರಗೋಡು ತುಳುವ ಮತ್ತು ಕನ್ನಡ ಅರಸರಿಂದ ಆಳಿಸಿಕೊಂಡಿತು. ಅದರ  ಚರಿತ್ರೆ 1178ರಷ್ಟು ಹಿಂದಕ್ಕೆ ಹೋಗುತ್ತದೆ. ಕ್ರಿಶ 1178ರಲ್ಲಿ ಬದ್ಧದಾಸ ಪಾಂಡ್ಯ ಎಂಬ ಅರಸ ತುಳುನಾಡಿನ ಎಲ್ಲ ಬಂಟರು ಮತ್ತು ನಾಡವರನ್ನು ಒಟ್ಟುಗೂಡಿಸಿ ಬಾರ್ಕೂರು ಮತ್ತು ವೇಣೂರು ರಾಜ್ಯಗಳನ್ನು ಗೆದ್ದು ಇಡೀ ತುಳು ಸೀಮೆಗೆ ರಾಜನಾದ. 11 ವರ್ಷಗಳ ಕಾಲ ನಿರಂಕುಶ ಅರಸನಾಗಿ ಆಡಳಿತ ನಡೆಸಿದ. ಅವನನ್ನು 1189ರಲ್ಲಿ ಕದಂಬ ವಂಶದ ಕಾಮದೇವನೆಂಬ ಹೆಸರಿನ ಅರಸ ಸೋಲಿಸಿ ಇಡೀ ರಾಜ್ಯವನ್ನು ತನ್ನ ಕೈಗೆ ತೆಗೆದುಕೊಂಡ. ಬದ್ಧದಾಸನ ರಾಜ್ಯದ ರಾಜಧಾನಿಯಾಗಿದ್ದ ಕುಂಬಳೆಯನ್ನು  ತನ್ನ ಮಗಳಾದ ಸುಶೀಲಾರಾಣಿಗೆ ಕೊಟ್ಟು, ಸೀಮೆಯ ಅಧಿಪತ್ಯವನ್ನು ಆಕೆಗೇ ವಹಿಸಿ ಕುಂಬಳೆ ಹೊಳೆಯ ದಡದಲ್ಲಿ ಕಂಚಿನಕಟ್ಟೆ ಎಂಬಲ್ಲಿ ಕೋಟೆ, ಅರಮನೆಗಳನ್ನು ಕಟ್ಟಿಸಿಕೊಟ್ಟು, ಮುನ್ನೂರು ಆನೆಗಳನ್ನೂ ಸಾವಿರ ಕುದುರೆಗಳನ್ನೂ ಆಕೆಯ ಲಾಯಕ್ಕೆ ಒಪ್ಪಿಸಿ ತಾನು ಬನವಾಸಿಗೆ ವಾಪಸಾದನಂತೆ. ಸುಶೀಲಾರಾಣಿ ಮತ್ತು ಆಕೆಯ ಪುತ್ರಪೌತ್ರರು ಕಾಸರಗೋಡು, ಕುಂಬಳೆಗಳನ್ನು ಮುಂದೆ ಹಲವು ಶತಮಾನಗಳ ಕಾಲ ಆಳಿದರು. ಕಾಸರಗೋಡಿನ ಇತಿಹಾಸದಲ್ಲಿ ಪ್ರಸಿದ್ಧನಾದ ಅರಸ ಜಯಸಿಂಹ, ಸುಶೀಲೆಯ ಮಗ.

ಕನ್ನಡದ ಅತಿ ಪ್ರಾಚೀನ ಶಾಸನ ಹಲ್ಮಿಡಿಯ  ಎಂದು ಪಾಠಪುಸ್ತಕದಲ್ಲಿ ಓದಿದ್ದೇವೆ ತಾನೆ? ಕನ್ನಡದ ಮೊದಲ ಕಾವ್ಯಶಾಸನ ಯಾವುದು ಎಂಬುದು ಗೊತ್ತಿದೆಯೆ? ಈ ವಿಶಿಷ್ಟ ಶಾಸನ ಸಿಗುವುದು ಕಾಸರಗೋಡಿನ ತಳಂಗೆರೆಯಲ್ಲಿ. ಸುಶೀಲಾರಾಣಿಯ ಮಗ ಜಯಸಿಂಹ ಕುಂಬಳೆಯ ಮೋಚಬ್ಬರಸಿ ಎಂಬಾಕೆಗೆ ಭೂದಾನ ಮಾಡಿದ್ದನ್ನೂ ಅದನ್ನಾಕೆ ಭಯಭಕ್ತಿಪ್ರೀತಿಗಳಿಂದ ಸ್ವೀಕರಿಸಿದ್ದನ್ನೂ ವಿವರಿಸುವ ಈ ಶಾಸನದಲ್ಲಿ ಕಂದಪದ್ಯವೆಂಬ ಕನ್ನಡದ ಅತ್ಯಂತ ಜನಪ್ರಿಯ ಛಂದಸ್ಸಿನಲ್ಲಿಯೂ ಕನ್ನಡದ ವಿರಳಾತಿವಿರಳ ಛಂದಸ್ಸಾದ ಉತ್ಸಾಹವೃತ್ತದಲ್ಲಿಯೂ ಪದ್ಯಗಳಿವೆ. ಶಾಸನದಲ್ಲಿ ಪದ್ಯ ಬರೆಯುವುದಕ್ಕೆ ಕಾರಣವಿದೆ. ಕಾಸರಗೋಡು ಕವಿಗಳ ನಾಡು. ಇಲ್ಲಿ ಜನ  ಕ್ಷೇಮಸಮಾಚಾರಗಳನ್ನೂ ಪದ್ಯರೂಪದಲ್ಲೇ ಮಾತಾಡುತ್ತಿದ್ದರೋ ಎನ್ನುವಷ್ಟು ದೊಡ್ಡ ಸಂಖ್ಯೆಯಲ್ಲಿ ಕಾವ್ಯಗಳು ಸಿಕ್ಕಿವೆ. ಯಕ್ಷಗಾನವೆಂಬ ಕನ್ನಡದ ಅತಿವಿಶಿಷ್ಟ ಕಲಾಪ್ರಕಾರಕ್ಕೆ ಕಾಸರಗೋಡಿನ ಕೊಡುಗೆ ಏನು ಎಂಬುದನ್ನು ಬರೆಯಲು ಹೊರಟರೆ ಸಮುದ್ರವನ್ನು ಹಂಡೆ-ಕೊಡಗಳಲ್ಲಿ ತುಂಬಿಸಿದಂತಾಗಬಹುದು. ಯಕ್ಷಗಾನ ಪ್ರಪಂಚದ ಧ್ರುವತಾರೆ ಪಾರ್ತಿಸುಬ್ಬ ಕಾಸರಗೋಡಿನ ಕುಂಬಳೆಯವನು. ಆತನ ನಂತರ ಕಾಸರಗೋಡಿನಲ್ಲಿ ಕನಿಷ್ಠ 35 ಪ್ರತಿಭಾನ್ವಿತ ಯಕ್ಷಗಾನ ಕವಿಗಳು ಆಗಿಹೋಗಿದ್ದಾರೆ. ಕನಿಷ್ಠ ನೂರಾಮೂವತ್ತೈದು ಅತ್ಯುತ್ತಮ ಯಕ್ಷಗಾನ ಪ್ರಸಂಗಗಳು ಈ ಕವಿಗಳಿಂದ ನಮಗೆ ಸಿಕ್ಕಿವೆ. ಯಕ್ಷಗಾನದಿಂದ ಮಧುಪುರದ ವಿಘ್ನೇಶ್ವರನನ್ನು ಬೇರ್ಪಡಿಸುವುದು  ಅಸಾಧ್ಯವೋ ಹಾಗೆ ಯಕ್ಷಗಾನವನ್ನು ಕಾಸರಗೋಡಿಂದ ಕಳಚುವುದು ಸಾಧ್ಯವಿಲ್ಲದ ಮಾತು. ಯಕ್ಷಗಾನದ ಮೂಲಕ ಕಾಸರಗೋಡಿನಲ್ಲಿ ಮಾತ್ರವಲ್ಲ, ಇಡೀ ಕರಾವಳಿ ಭಾಗದಲ್ಲಿ ಕನ್ನಡ ಉಳಿಯಿತು, ಸಮೃದ್ಧವಾಗಿ ಬೆಳೆಯಿತು. ಒಟ್ಟು ವಚನ ಸಾಹಿತ್ಯದ ಹತ್ತು ಪಟ್ಟು ಪದ್ಯಗಳ – ಅಂದರೆ ಒಂದೂವರೆ ಲಕ್ಷದಷ್ಟು ಪದ್ಯಗಳ ಮಹಾಭಂಡಾರವಾಗಿರುವ ಯಕ್ಷಗಾನ ಸಾಹಿತ್ಯವೂ ಸಾಹಿತ್ಯವೇ ಎಂಬುದು ಇನ್ನೂ ನಮ್ಮ ಯಾವ ಕನ್ನಡ ಪಂಡಿತರಿಗೂ ಅರ್ಥವಾಗಿಲ್ಲ. ಯಕ್ಷಗಾನ ಪ್ರಸಂಗ ಪದ್ಯಗಳು ಕನ್ನಡ ಪಠ್ಯಪುಸ್ತಕಗಳಲ್ಲಿ ಇನ್ನೂ ಬಂದಿಲ್ಲ. ಕಾಸರಗೋಡನ್ನು ಹೇಗೋ,  ಆದರಿಸಿ ಪೋಷಿಸಿ ಬೆಳೆಸಿದ ಯಕ್ಷಗಾನವನ್ನೂ ನಾವು ಕನ್ನಡಿಗರು ದಣಪೆಯ ಆಚೆಯೇ ನಿಲ್ಲಿಸಿದ್ದೇವೆ.

ಯಕ್ಷಗಾನ ಮತ್ತು ಕನ್ನಡ ಸಾಹಿತ್ಯದ ವಿಚಾರ ಆಯಿತಲ್ಲ? ಇನ್ನು ಸಂಸ್ಕೃತದತ್ತ ಬರೋಣ. ಕನ್ನಡದ ಮೊದಲ ಕಾವ್ಯ ಪಂಪನ ಆದಿಪುರಾಣ ಎಂದು ನಾವೆಲ್ಲ ಶಾಲೆಯಲ್ಲಿ ಉರುಹೊಡೆದಿದ್ದೇವೆ. ಆದರೆ ಕನ್ನಡದ ನೆಲದಲ್ಲಿ ರಚನೆಯಾದ ಮೊದಲ ಸಂಸ್ಕೃತ ಕಾವ್ಯ ಯಾವುದು ಹೇಳಿ! ಸುಶೀಲಾರಾಣಿಯ ಮಗ ಜಯಸಿಂಹ ಪ್ರಾಯಪ್ರಬುದ್ಧನಾಗಿ ಪಟ್ಟಕ್ಕೆ ಬಂದ ಮೇಲೆ ಹಲವು ದಶಕಗಳ ಕಾಲ ರಾಜ್ಯಭಾರ ಮಾಡಿದ. ಈತನ  ಒಬ್ಬರು ಮಹಾವಿದ್ವಾಂಸರು ತ್ರಿವಿಕ್ರಮ ಪಂಡಿತರು. ಮಧ್ವಾಚಾರ್ಯರು ಕಾಸರಗೋಡಿಗೆ ಬಂದಾಗ, ಅವರ ಜೊತೆ ತ್ರಿವಿಕ್ರಮ ಪಂಡಿತರ ವಾದ ಜಯಸಿಂಹನ ನೇತೃತ್ವದಲ್ಲಿ ನೆರವೇರಿತು. ವಾದದಲ್ಲಿ ತ್ರಿವಿಕ್ರಮರಿಗೆ ಸೋಲಾಯಿತು. ತಕ್ಷಣವೇ ಅವರು ಮಧ್ವಾಚಾರ್ಯರ ಕಾಲಿಗೆರಗಿ, ಶರಣಾಗಿ, ಅವರ ಶಿಷ್ಯತ್ವ ಬೇಡಿದರು. ಇದೇ ತ್ರಿವಿಕ್ರಮ ಪಂಡಿತರು ರಚಿಸಿದ ‘ಉಷಾಹರಣ’ ಎಂಬ ಕಾವ್ಯವೇ ಕನ್ನಡದ ನೆಲದಲ್ಲಿ ರಚಿಸಲ್ಪಟ್ಟ ಮೊದಲ ಸಂಸ್ಕೃತ ಕಾವ್ಯ ಎನ್ನಬಹುದು. ಕಾವ್ಯ ಮಾತ್ರವಲ್ಲದೆ ತತ್ತ್ವ-ವೇದಾಂತಗಳಲ್ಲೂ ಪ್ರಗಲ್ಭರಾಗಿದ್ದ ತ್ರಿವಿಕ್ರಮ ಪಂಡಿತರು ಮಧ್ವಾಚಾರ್ಯರ ಶಿಷ್ಯರಾದ ಮೇಲೆ  ವಿಷ್ಣುಸ್ತುತಿ ಬರೆದರು. ಮಧ್ವರ ಬ್ರಹ್ಮಸೂತ್ರಭಾಷ್ಯಕ್ಕೆ ‘ತತ್ತ್ವದೀಪಿಕಾ’ ಎಂಬ ಟೀಕೆ ಬರೆದರು. ತ್ರಿವಿಕ್ರಮರ ಮೂರನೇ ಮಗ ನಾರಾಯಣ ಪಂಡಿತರು ‘ಮಧ್ವವಿಜಯ ಮತ್ತು ಸಂಗ್ರಹ ರಾಮಾಯಣ’ ಎಂಬ ಸಂಸ್ಕೃತ ಕಾವ್ಯಗಳನ್ನು ಬರೆದರು. ಹೀಗೆ ಶುರುವಾದ ಮಾಧ್ವಪರಂಪರೆ ಕಾಸರಗೋಡಿನಲ್ಲಿ ಹಲವು ಪಂಡಿತರನ್ನು ಬೆಳೆಸಿತು, ಹಲವು ಕಾವ್ಯ-ಮೀಮಾಂಸೆಗಳನ್ನು ಬರೆಸಿತು. ಪಾಯಸಕ್ಕೆ ಏಲಕ್ಕಿಯ ಹಾಗೆ, ಈ ವಿಷಯಕ್ಕೆ ಇನ್ನಷ್ಟು ಸ್ವಾರಸ್ಯಕರ ಸಂಗತಿಯನ್ನು ಸೇರಿಸುವುದಿದೆ. ಅದೇನೆಂದರೆ ಕಾಸರಗೋಡಿನಲ್ಲಿ ಬರೆಯಲ್ಪಟ್ಟ ಅಷ್ಟೂ ಸಂಸ್ಕೃತ ಕಾವ್ಯಗಳು/ಗ್ರಂಗಳು ಬಳಸಿದ್ದು ದೇವನಾಗರಿ ಲಿಪಿಯನ್ನಲ್ಲ;  ತುಳು ಲಿಪಿಯನ್ನು! ಸಂಸ್ಕೃತದ ಕಾವ್ಯಗಳನ್ನು ಮಾತ್ರವಲ್ಲ, ಪುರೋಹಿತರು, ವೈದಿಕರು ತಮ್ಮ ಪೂಜೆ-ಯಜ್ಞಗಳಿಗೆ ಬೇಕಾದ ವೈದಿಕ ಮಂತ್ರಗಳನ್ನು ಮತ್ತು ಕ್ರಿಯಾವಿಚಾರಗಳನ್ನು ಬರೆದುಕೊಳ್ಳುತ್ತಿದ್ದುದು ಕೂಡ ತುಳುಲಿಪಿಯಲ್ಲೇ. ಈ ಲಿಪಿಯೇ ಮುಂದೆ ತುಳು-ಮಲಯಾಳಂ ಲಿಪಿ ಎಂದು ಕರೆಸಿಕೊಂಡು ಕೊನೆಗೆ ಮಲಯಾಳ ಲಿಪಿಗೆ ಜನ್ಮ ಕೊಟ್ಟಿತು. 19ನೇ ಶತಮಾನದಲ್ಲಿ ಮತಪ್ರಚಾರ ಕಾರ್ಯಕ್ಕೆಂದು ಬಂದ ಮಿಷನರಿಗಳು ತಮ್ಮ ಮುದ್ರಣಾಲಯಗಳಲ್ಲಿ ಕನ್ನಡ ಲಿಪಿಯ ಅಚ್ಚುಗಳನ್ನು ಸಿದ್ಧಪಡಿಸಿ ಕನ್ನಡದಲ್ಲಿ ಪುಸ್ತಕಗಳನ್ನು ಪ್ರಕಟಿಸತೊಡಗಿದ್ದರಿಂದ, ತುಳು ಪುಸ್ತಕಗಳನ್ನೂ ಕನ್ನಡ ಲಿಪಿಯಲ್ಲೇ ಪ್ರಕಟಿಸಿದ್ದರಿಂದ,  ಲಿಪಿ ವ್ಯಾಕವಾಗಿ ಪ್ರಚಾರವಾಗುವ ಅವಕಾಶವನ್ನು ಕಳೆದುಕೊಂಡಿತು. ತನ್ನ ಬೆಳವಣಿಗೆಯನ್ನು ಮೊಟಕುಗೊಳಿಸಿ ಕನ್ನಡದ ಬೆಳವಣಿಗೆಗೆ ಇಂಬು ಕೊಟ್ಟಿತು. ಕಾಸರಗೋಡನ್ನು ಉಪೇಕ್ಷಿಸಿದಂತೆಯೇ ಇಂದು ಕನ್ನಡಿಗ ತುಳುವಿನ ಈ ಉದಾರತೆಯನ್ನು ಕೂಡ ಮರೆತಿದ್ದಾನೆ.

ಇಷ್ಟೆಲ್ಲ ಹೇಳಿದ ಮೇಲೂ ಕಾಸರಗೋಡಿನ ಅತ್ಯಂತ ಫಲಪ್ರದ ಕೊಡುಗೆಗಳ ಬಗ್ಗೆ ನಾವಿನ್ನೂ ಮಾತಾಡಿಯೇ ಇಲ್ಲ. ಕಾಸರಗೋಡಿಗೆ ಎರಡು ಕಣ್ಣುಗಳಿದ್ದರೆ ಅವನ್ನು ಪೈ ಮತ್ತು ರೈ ಎನ್ನಬಹುದೇನೋ. ಪೈ ಎಂದರೆ ಮಂಜೇಶ್ವರದ ಗೋವಿಂದ ಪೈ. ರೈ ಎಂದರೆ ಕಯ್ಯಾರದ ಕಿಞ್ಞಣ್ಣ  ಕಾಸರಗೋಡನ್ನು ನಾವು ಕಿತ್ತು ಕೇರಳಕ್ಕೆ ಕೊಟ್ಟಾಗ ಪೈಗಳಿಗೆ 73ರ ವಾರ್ಧಕ್ಯ, ರೈಗಳಿಗೆ 41ರ ನಡುವಯಸ್ಸು. ಅದುವರೆಗೆ ಕನ್ನಡ, ಕರ್ನಾಟಕ ಎಂದು ತನ್ನ ಹೋರಾಟದ ದಿಕ್ಕುದೆಸೆಗಳನ್ನು ಕಾಸರಗೋಡಿಂದ ಬೀದರಿನವರೆಗೆ ವಿಸ್ತರಿಸಿಕೊಂಡು ದುಡಿಯುತ್ತಿದ್ದ ಕಯ್ಯಾರರು, ಭಾಷಾವಾರು ವಿಂಗಡಣೆಯ ನೆಪದಲ್ಲಿ ಯಾವಾಗ ಕಾಸರಗೋಡು ಕೇರಳದ ತೆಕ್ಕೆಗೆ ಬಿತ್ತೋ ಆವಾಗ ತನ್ನ ಹೋರಾಟವನ್ನು ಕಾಸರಗೋಡಿಗೆ ಕೇಂದ್ರೀಕರಿಸಿದರು. ಬೆಂಕಿ ಬಿದ್ದಿದೆ ಮನೆಗೆ ಓ.. ಬೇಗ ಬನ್ನಿ! ಎಲ್ಲೆಲ್ಲೂ ಎದ್ದೆದ್ದು ಓಡಿ ಬನ್ನಿ! ಕನ್ನಡದ ಗಡಿ ಕಾಯೆ  ಕಾಯೆ ನುಡಿ ಕಾಯೆ, ಕಾಯಲಾರೆವೆ ಸಾವೆ, ಓ ಬನ್ನಿ ಬನ್ನಿ! ಎಂಬ ಅವರ ಕರುಳ ಕೂಗನ್ನು ಕೇಳದ ಕನ್ನಡಿಗನಿಲ್ಲ. 1947ರಲ್ಲಿ ಅಖಂಡ ಕರ್ನಾಟಕದ ಎಲ್ಲರನ್ನೂ ಕರೆಸಿ ಕಾಸರಗೋಡಿನಲ್ಲಿ ಅಖಿಲ ಕರ್ನಾಟಕ ಸಾಹಿತ್ಯ ಸಮ್ಮೇಳನವನ್ನು ಅದ್ದೂರಿಯಾಗಿ ನಡೆಸಿ ಸೈ ಎನ್ನಿಸಿಕೊಂಡಿದ್ದ ರೈಗಳು, ಕಾಸರಗೋಡು ಕೇರಳಕ್ಕೆ ಹೋದ ಮೇಲೂ ಛಲ ಬಿಡದೆ 1972, 79, 81, 90 – ಹೀಗೆ ನಾಲ್ಕು ಸಲ ಕನ್ನಡಿಗರ ಬೃಹತ್ ಸಮ್ಮೇಳನಗಳನ್ನು ಯಶಸ್ವಿಯಾಗಿ ಆಯೋಜಿಸಿದರು. ಒಂದು  ಕರ್ನಾಟಕದ ಆಗಿನ ಮುಖ್ಯಮಂತ್ರಿ ಗುಂಡೂರಾಯರ ಸಮ್ಮುಖದಲ್ಲಿ ರೈಗಳು ಭಾಷಣ ಮಾಡುತ್ತ,- ‘ಸ್ವಾಮೀ, ನಾವು ಇಲ್ಲಿ ಎರಡು ಲಕ್ಷ ಕನ್ನಡಿಗರು ಹೇಗೆ ಬದುಕುತ್ತಿದ್ದೇವೆ ಎಂದು ನಿಮಗೆಲ್ಲ ತಿಳಿದಿರಲಾರದು. ಕೇರಳ ಸರಕಾರಕ್ಕೆ ನಾವು ಇಲ್ಲಿ ಇಷ್ಟು ಮಂದಿ ಕನ್ನಡಿಗರಿದ್ದೇವೆಂದು ಇನ್ನೂ ಗೊತ್ತಿಲ್ಲ. ಇಲ್ಲಿ ನಮ್ಮ ಭಾಷೆ ಸಂಸ್ಕೃತಿಗಳು ದಿನೇ ದಿನೇ ಅಳಿಯುತ್ತಾ ಹೋಗುತ್ತಿವೆ. ನಾವು ಅನಾಥರಾಗಿದ್ದೇವೆ. ಇಲ್ಲಿ ಹರಿಯುತ್ತಿುವುದು ಪಯಸ್ವಿನೀ ನದಿಯಲ್ಲ ಸ್ವಾಮೀ, ನಮ್ಮ ಕಣ್ಣೀರು ಎಂದು ಗದ್ಗದಿರಾದಾಗ ಇಡೀ ಸಭೆ  ನಿಟ್ಟುಸಿರು, ಎದೆಬಡಿತಗಳ ಹೊರತು ಆ ಒಂದು ಕ್ಷಣ ಏನೂ ಕೇಳಿಸುವಂತಿರಲಿಲ್ಲ.

ಕಿಞ್ಞಣ್ಣ ರೈಗಳು ತನ್ನ ಕೊಟ್ಟಕೊನೆಯುಸಿರಿವರೆಗೂ ಕರ್ನಾಟಕದಲ್ಲಿ ಕಾಸರಗೋಡು ವಿಲೀನವಾಗಬೇಕೆಂದು ಹೋರಾಡಿದರು. ಅದಕ್ಕಾಗಿ 1956ರ ನಂತರ ನಡೆದ ಪ್ರತಿಯೊಂದು ಸಾಹಿತ್ಯ ಸಮ್ಮೇಳನದಲ್ಲೂ ಭಾಗವಹಿಸಿ ಕಾಸರಗೋಡಿಗಾಗಿ ದನಿ ಎತ್ತಿದರು. ಉಡುಪಿಯಲ್ಲಿ ನಡೆದ ಒಂದು ಘಟನೆಯನ್ನು ಸಂಶೋಧಕ ದಿ. ವೆಂಕಟರಾಜ ಪುಣಿಂಚತ್ತಾಯರು ತಮ್ಮ ಕೃತಿಯಲ್ಲಿ ದಾಖಲಿಸಿದ್ದಾರೆ. ಉಡುಪಿಯಲ್ಲಿ ಸಾಹಿತ್ಯ ಸಮ್ಮೇಳನ ನೆದಾಗ, ಅದರ ಮೊದಲ ದಿನ ಕನ್ನಡಿಗರ ಬೃಹತ್ ಮೆರವಣಿಗೆ ಸಾಗುತ್ತಿತ್ತಂತೆ.  ಜಯಘೋಷದ ಸದ್ದು ಬಾನೆತ್ತರ ಕೇಳುತ್ತಿತ್ತು. ಈ ಮಧ್ಯೆ, ಆಗ ತಾನೇ ಬಸ್ಸಿಳಿದು ಬಂದ ರೈಯವರು ಮೆರವಣಿಗೆಯ ಸಾಲಿನೊಂದಿಗೆ ಸೇರಲು ಬಂದರು. ಅವರನ್ನು ಕಂಡದ್ದೇ ತಡ, ಜನಸ್ತೋಮ ಬೇರೆಲ್ಲವನ್ನೂ ಮರೆತು ಏಕಕಂಠದಿಂದ ಕಾಸರಗೋಡು ಕನ್ನಡನಾಡು ಎಂದು ಭಾವೋದ್ವೇಗದಿಂದ ಘೋಷಿಸಿತಂತೆ. ರೈಯವರು ಕಾಸರಗೋಡಿನ ಹೋರಾಟವನ್ನು ಜೀವಂತವಿಟ್ಟ ಪರಿ ಹಾಗಿತ್ತು. ಆದರೆ ಈಗ? ಕಾಸರಗೋಡಿನ 180ಕ್ಕೂ ಹೆಚ್ಚು ಕನ್ನಡ ಶಾಲೆಗಳಲ್ಲಿ ಕಲಿಯುತ್ತಿರುವ 40,000ದಷ್ಟು ಕನ್ನಡಿಗ ಮಕ್ಕಳು ಈಗ ಅತಂತ್ರರಾಗಿದ್ದಾರೆ. ಯಾಕೆಂದರೆ ಪ್ರಾಥಮಿಕ ಹಂತದಲ್ಲಿ  ಶಿಕ್ಷಣ ಕೊಡಬೇಕು ಎಂಬ ಸಂವಿಧಾನದ 350ನೇ ವಿಧಿಯನ್ನು ‘ಉಫ್’ ಎಂದು ಗಾಳಿಗೆ ತೂರಿ ಕೇರಳ ಸರಕಾರ ಈ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರುವಂತೆ ಮಲಯಾಳಂ ಕಲಿಕೆಯನ್ನು ಕಡ್ಡಾಯಗೊಳಿಸಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದಲೂ ಇಂಥದೊಂದು ಭೂತವನ್ನು ಕೇರಳ ಸರಕಾರ ಆಗಾಗ ಪೆಟ್ಟಿಗೆಯಿಂದ ಹೊರತೆಗೆದು ಕನ್ನಡಿಗರನ್ನು ಹೆದರಿಸುತ್ತಲೇ ಇತ್ತು. ಕನ್ನಡಿಗರು ಕನ್ನಡ ಹೋರಾಟ ಸಮಿತಿ ಕಟ್ಟಿಕೊಂಡು ಕೇರಳ ಸರಕಾರದ ಸರ್ವಾಧಿಕಾರಿ ನೀತಿಗಳ ವಿರುದ್ಧ ಬೀದಿ ಹೋರಾಟ, ಕಾನೂನು ಹೋರಾಟ ನಡೆಸುತ್ತ ಬಂದೇ  ಆದರೆ ಅವರ ಇಷ್ಟು ವರ್ಷಗಳ ಹೋರಾಟಕ್ಕೆ ಕ್ಯಾರೇ ಎನ್ನದೆ ಕೇರಳ ಈ ವರ್ಷ ಮಲಯಾಳದಲ್ಲೇ ಶಿಕ್ಷಣ ಪಡೆಯಬೇಕು ಎಂದು ಕನ್ನಡಿಗರಿಗೆ ತಾಕೀತು ಮಾಡಿದೆ. ಈ ಸಮಸ್ಯೆ ಕರ್ನಾಟಕದೊಳಗೆ – ಅದರಲ್ಲೂ ಬೆಂಳೂರೆಂಬ ರಾಜಧಾನಿಯಲ್ಲಿ ಒಂದೇ ಒಂದು ಸಣ್ಣ ಕಿಡಿಯನ್ನು ಕೂಡ ಹೊತ್ತಿಸಲಿಲ್ಲ ಎಂಬುದು ಎಂಥ ವಿಪರ್ಯಾಸ! ಕಯ್ಯಾರರು ಇದ್ದಿದ್ದರೆ… ಅನಿಸುತ್ತದೆ.

ರಿಷಬ್ ಶೆಟ್ಟಿ ಸೋತಿದ್ದಾರೆ ಅಂದೆನಲ್ಲ; ಇಂಥ ಜ್ವಲಂತ ಸಮಸ್ಯೆಯನ್ನು – ಈಗಲೂ ಕೇರಳದಲ್ಲಿ ನಡೆಯುತ್ತಿರುವ ಸತ್ಯ ಘಟನೆಗಳನ್ನೇ  ಸಿನೆಮಾದಲ್ಲಿ ತೋರಿಸಿಯೂ ಕನ್ನಡಿಗರ ಹೃದಯದಲ್ಲಿ ಹೋರಾಟದ ಕಿಚ್ಚನ್ನು ಒಂದಿಷ್ಟೂ ಹೆಚ್ಚಿಸದೆ ಹೋದರೆ ರಿಷಬ್ ಸೋತರು – ಇಷ್ಟೆಲ್ಲ ಪ್ರಯತ್ನ ಪಟ್ಟೂ ಸೋತರು ಎನ್ನಬೇಕಾಗುತ್ತದೆ. ಪಿಚ್ಚರ್ ಚಂ…ದ ಇತ್ತಲ್ಲ ಎಂದು ಕೇವಲ ಪಿಚ್ಚರನ್ನು ಹೊಗಳುತ್ತ ಥಿಯೇಟರಿಂದ ಹೊರಬಂದ ಕನ್ನಡಿಗ ಅಷ್ಟೇ ನಿಸೂರಾಗಿ ಮನೆಗೆ ಹೋಗಿ ನಿರುಮ್ಮಳನಾಗಿ ಮಲಗಿಬಿಟ್ಟರೆ, ಅದು ರಿಷಬ್ ಅವರ ಸೋಲು ಮಾತ್ರವಲ್ಲ, ಕನ್ನಡದ ಸೋಲು, ಕರ್ನಾಟಕದ ಸೋಲು, ಕಾಸರಗೋಡಿನ ಸೋಲು.

Tags

ರೋಹಿತ್ ಚಕ್ರತೀರ್ಥ

ಶಿಕ್ಷಣ ಕ್ಷೇತ್ರದಲ್ಲಿ ಕನ್ಸ್‌ಲ್ಟೆಂಟ್‌ ಆಗಿರುವ ಅಂಕಣಕಾರರು, ಕನ್ನಡದ ಕೆಲವೇ ಕೆಲವು ವಿಜ್ಞಾನ ಲೇಖಕರಲ್ಲಿ ಒಬ್ಬರು. ಇದುವರಗೆ ಪ್ರಕಟವಾಗಿರುವ ಗಣಿತ, ವಿಜ್ಞಾನ, ರಾಜಕೀಯ ವಿಷಯದ ಪುಸ್ತಕಗಳು ಎಲ್ಲ ವರ್ಗದ ಓದುಗರಿಗೂ ಉಪಯುಕ್ತವಾದುದು. ಇವರ ಅಂಕಣ ಚಕ್ರವ್ಯೂಹವನ್ನು ಪ್ರತೀ ಮಂಗಳವಾರ ಓದಬಹುದು.

Related Articles

Leave a Reply

Your email address will not be published. Required fields are marked *

Language
Close